ರಂಗ ಮಾಲಿಕೆ -೬೭ ಮುಟ್ಟೆಸೂಗೂರು ವೆಂಕಟರೆಡ್ಡಿ
ಸಿರಿನಾಡಿನ ಬಹುಮುಖ ಪ್ರತಿಭೆ ‘ಮಿಟ್ಟೆಸೂಗೂರು ವೆಂಕಟರೆಡ್ಡಿ’.
ಪ್ರತಿಯೊAದು ನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಎಂದರೆ ಅದು ಹಳ್ಳಿಗರು. ಅವರ ರಂಗಭೂಮಿಯ ಹೆಜ್ಜೆಗಳೇ ಅವರ ನಿಜವಾದ ಶ್ರೀಮಂತಿಕೆ ಎಂದು ನಂಬಿದವರು, ಅದರಂತೆ ನಡೆದವರು ಕೂಡ. ಈ ಮನೋಮಾರ್ಗದಲ್ಲಿ ನುಡಿದು ನಡೆದ ರಂಗಕರ್ಮಿಯ ಪರಿಚಯ ಇಲ್ಲಿ ಮಾಡಲೊರಟ್ಟಿದ್ದೇನೆ. ಅವರ ಹೆಸರು ಮಿಟ್ಟೆಸೂಗೂರು ವೆಂಕಟರೆಡ್ಡಿ.
ಇವರು ಸಿರುಗುಪ್ಪ ಮತ್ತು ಆದೋನಿ ಗಡಿಭಾಗದ ಶ್ರೇಷ್ಠ ಗಮಕಿಗಳು, ಪುರಾಣ ಪ್ರವಚಕರು, ಮುತ್ಸದ್ಧಿ ಮುಖಂಡರು, ಸಾಹಿತಿಗಳು ಹಾಗೂ ರಂಗಕರ್ಮಿಗಳು ಕೂಡ ಆಗಿದ್ದಾರೆ. ಹೀಗೆ ತಮ್ಮ ಬಹುಮುಖ ಪ್ರತಿಭೆಯ ಮೂಲಕವೇ ಈ ಭಾಗದಲ್ಲಿ ಹೆಸರಾಗಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮಿಟ್ಟೆಸೂಗೂರು ಗ್ರಾಮದವರಾದ ಹನುಮಂತರೆಡ್ಡಿ ಮತ್ತು ಲಿಂಗಮ್ಮ ಎಂಬ ಉಳ್ಳವರ ಕುಟುಂಬದಲ್ಲಿ ಏಕೈಕ ಮಗನಾಗಿ ಕ್ರಿ.ಶ.೧೯೪೬ರಲ್ಲಿ ಜನಿಸಿದರು. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಆಗೀನ ‘ಅಯ್ಯನವರ ಶಾಲೆ’ಯಲ್ಲಿ ಗುರುಗಳಾಗಿದ್ದ ‘ಸಾಲಿ ಭೀಮಯ್ಯ’ರ ಬಳಿ ಮತ್ತು ಈಗಿನ ಆಂಧ್ರದ ಹೆಬ್ಬುಟ ಗ್ರಾಮದಲ್ಲಿ ಅಂದಿನ ಕಾಲಕ್ಕೆ ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತಾನಾಡುತ್ತಿದ್ದ ‘ಬಸರಳ್ಳಿ ಸಿದ್ರಾಮಯ್ಯ’ರ ಬಳಿ ಪಡೆಯುತ್ತಾರೆ. ಆದರೆ ಇವರು ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರಿAದ ಇವರ ಉಪಟಳವನ್ನು ನೋಡಲಾಗದೆ ತಂದೆಯವರ ಆಧ್ಯಾತ್ಮಿಕ ಗುರುವಾಗಿದ್ದ ‘ಹರಿವಾಣದ ಭದ್ರಯ್ಯ ಸ್ವಾಮಿ’ಗಳ ಮಾತಿನಂತೆ ಆದೋನಿಯ ‘ವೈ.ಎಂ.ಕೆ ಶಾಲೆ (ಎಲೆ ಮಲ್ಲೇಶಪ್ಪ ಕನ್ನಡ ಹೈಸ್ಕೂಲ್)ಗೆ ನೇರವಾಗಿ ೬ನೇ ತರಗತಿಗೆ ಸೇರಿಸಿದರು.
ಇನ್ನು ಇವರಲ್ಲಿ ರಂಗಾಸಕ್ತಿ ಉಂಟಾಗಲು ಮೂಲ ಕಾರಣವೆಂದರೆ ಆಗ ಊರುಗಳಲ್ಲಿ ಉಳ್ಳವರು ಯಾರಾದರೂ ಇದ್ದರೆ, ಅವರು ಒಂದು ನಾಟಕ ಮಾಡಬೇಕಿತ್ತು, ಇಲ್ಲವಾದರೆ ನಾಟಕದ ಉಸ್ತುವಾರಿ ವಹಿಸಬೇಕಿತ್ತು. ಆ ನಿಟ್ಟಿನಲ್ಲಿ ಇವರ ತಾತ ‘ಬುಡ್ಡಾರೆಡ್ಡಿ’ಯವರು ಮತ್ತು ತಂದೆಯವರು ಸಹ ಸುಮಾರು ೩-೪ ಬಯಲಾಟಗಳಲ್ಲಿ ಅಭಿನಯಿಸಿ ಸುತ್ತಮುತ್ತಲಿನ ಜನರಲ್ಲಿ ಉತ್ತಮ ಕಲಾವಂತರೆAಬ ಹೆಸರು ಗಳಿಸಿದ್ದರು. ಇದೇ ಕಲಾವಂತಿಕೆ ವೆಂಕಟರೆಡ್ಡಿಯವರಲ್ಲೂ ರಕ್ತಗತವಾಗಿ ಹರಿದು ಬಂದಿದ್ದ ಕಾರಣ, ಇವರು ಹೈಸ್ಕೂಲ್ ಓದುವಾಗ ಶಾಲೆಯಲ್ಲಿ ವಾರ್ಷಿಕೋತ್ಸವದ ದಿನ ಮೊದಲ ಬಾರಿಗೆ ತಮ್ಮ ೧೮ನೇ ವಯಸ್ಸಿನಲ್ಲಿ ತಮ್ಮ ಗೆಳೆಯ ಮತ್ತು ಅಳಿಯ ಬೀರಹಳ್ಳಿ ರಾಮರೆಡ್ಡಿಯವರೊಡಗೂಡಿ ಶಿಕ್ಷಕ ನರಸಿಂಹಮೂರ್ತಿಯವರ ನಿದೇರ್ಶನದ ‘ಅಧ್ಯಕ್ಷತೆ’ ನಾಟಕದಲ್ಲಿ ‘ನಾರಾಯಣರಾವ್’ ಎಂಬ ಹಾಸ್ಯಪಾತ್ರಕ್ಕೆ ಬಣ್ಣ ಹಚ್ಚಿದರು. ಇದೇ ಯಶಸ್ಸಿನ ಮೂಲಕ ಮರುವರ್ಷವೂ ಸಹ ರನ್ನನ ಗದಾಯುದ್ಧದ ಪಠ್ಯವನ್ನು ಏಕಾಂಕಗೊಳಿಸಿದ ‘ಉತ್ತನೂರು ಪಂಪಾಪತಿರಾವ್’ರ ‘ರಣಭೂಮಿ’ ನಾಟಕದಲ್ಲಿ ‘ಸಂಜಯ’ನ ಪಾತ್ರವನ್ನು ಮಾಡಿ ಜನರ ಪ್ರೀತಿ ಗಳಿಸಿದರು. ತಮ್ಮ ತಾಯಿಯ ತವರೂರಾದ ಹೆಬ್ಬುಟ ಗ್ರಾಮದಲ್ಲಿ ಹೆಚ್.ಎಸ್.ಬಾಬುರಾವ್ ರಚನೆಯ ಮತ್ತು ಕುಂಟನಹಾಳ್ ಸಿದ್ದನಗೌಡರ ನಿರ್ದೇಶನದ ‘ಚಲನ ಪ್ರಪಂಚ’ ನಾಟಕದಲ್ಲಿ ಪೋಲಿಸ್ ಇನ್ಸಪೆಕ್ಟರ್ ಮತ್ತು ಪುರೋಹಿತ ಪಾತ್ರವನ್ನು ಮಾಡಿದರು.
ರೆಡ್ಡಿಯವರು ತಮ್ಮ ತಂದೆಗೆ ಒಬ್ಬನೇ ಮಗನಾಗಿದ್ದರಿಂದ ಮತ್ತು ಇದ್ದ ೧೦೦ ಎಕರೆ ಆಸ್ತಿಯ ಜವಬ್ದಾರಿಯನ್ನು ಹೊರುವ ಸಲುವಾಗಿ ೧೦ನೇ ತರಗತಿ ಮುಗಿಸಿದ ನಂತರ ಅಪ್ಪನ ಅಣತಿಯಂತೆ ಮನೆಗೆ ಬಂದು, ತಂದೆಯ ಜೊತೆಗೆ ಕೃಷಿ ಮತ್ತು ವ್ಯವಹಾರದ ಚಟುವಟಿಕೆಗಳಿಗೆ ಮುಂದಾದರು. ಈಗಿರುವಾಗ ಒಮ್ಮೆ ತಮ್ಮೂರಿನ ಹತ್ತಿರದ ಬಂಡ್ರಾಳ್ ಗ್ರಾಮದಲ್ಲಿ ರೈತರು ಬೆಳೆದ ಹತ್ತಿ ಖರೀದಿಸಲು ಹೋದಾಗ ಅಲ್ಲಿನ ಯುವಕರಿಗೆ ‘ರಾವಿಹಾಳ್ ಸಿದ್ದಪ್ಪ’ರ ನಿದೇರ್ಶನದಲ್ಲಿ ‘ವೀರ ಅಭಿಮನ್ಯು’ ನಾಟಕದ ತಾಲೀಮು ಮಾಡಲು ಇವರಿದ್ದ ಬಾಡಿಗೆ ಮನೆಯಲ್ಲಿ ಅವಕಾಶ ಮಾಡಿದ್ದಲ್ಲದೇ, ಅವರಿಗೆ ಆಗಾಗ ಸಹ ನಿರ್ದೇಶನ ಮಾಡುತ್ತಾರೆ. ಇದನ್ನರಿತ ನಿರ್ದೇಶಕರು ಮತ್ತು ಅಲ್ಲಿನ ಯುವಕರು ಅನಿವರ‍್ಯ ಕಾರಣದಿಂದ ಇವರಿಗೆ ‘ದ್ರೋಣ’ನ ಪಾತ್ರವನ್ನು ಮಾಡಿಸಲು ಮುಂದಾಗುತ್ತಾರೆ. ಆದರೆ ಅಲ್ಲಿನ ಕಲಾವಿದರೊಡನೆ ಕಲಹಗಳು ಉಂಟಾದ ಕಾರಣ ಇವರ ತಂದೆ ಊರಿಗೆ ಕರೆಸಿ ೧೯೬೬ರಲ್ಲಿ ೨೦ನೇ ವಯಸ್ಸಿನಲ್ಲಿ ಇವರಿಗೆ ‘ಕೃಷ್ಣಮ್ಮ’ ಎಂಬುವವರೊAದಿಗೆ ವಿವಾಹ ಮಾಡಿದರು. ಆದರೆ ಮದುವೆಯಾದ ಕೆಲ ದಿನಗಳಲ್ಲಿ ಬಂಡ್ರಾಳಿನಲ್ಲಿ ಎಲ್ಲವೂ ಸುಧಾರಿಸಿ ದ್ರೋಣನ ಪಾತ್ರ ಮಾಡುವಂತೆ ಅಲ್ಲಿನ ಉತ್ತಮಸ್ಥರಿಂದ ಇವರಿಗೆ ಒತ್ತಾಯದ ಕಾಗದ ಬರುತ್ತದೆ. ಇತ್ತ ನಾಟಕಕ್ಕೆ ಹೋಗದಿರಲು ಮನೆಯ ಸದಸ್ಯರ ಒತ್ತಡ. ಈ ಎರಡರ ಸಂಕಟದಿAದ ಕೊನೆಗೆ ಮನೆಯವರನ್ನೇ ಓಲೈಸಿ ನಾಟಕಕ್ಕೆ ಹೋಗಿ ಜನಮನ್ನಣೆ ಪಡೆದು ಬರುತ್ತಾರೆ.
ವೆಂಕಟರೆಡ್ಡಿಯವರದು ತುಂಬಾ ಆಕರ್ಷಕ ಮೈಕಟ್ಟು ಮತ್ತು ಪ್ರೇಕ್ಷಕರ ಮೈಮನ ಸೆಳೆಯುವ ಧ್ವನಿಯಾಗಿತ್ತು. ಅಲ್ಲದೇ ಕಲೆಯ ಬಗೆಗಿನ ಅತೀವ ಆಸಕ್ತಿಯಿಂದಾಗಿ ರಾವಿಹಾಳ್ ಸಿದ್ದಪ್ಪರ ನಿರ್ದೇಶನಕ್ಕೆ ಮಾರುಹೋದ ವೆಂಕಟರೆಡ್ಡಿಯವರು ಕೆಲವರ್ಷಗಳ ನಂತರ, ತಮ್ಮೂರಿನ ಯುವಕರೊಂದಿಗೆ ಸೇರಿ ‘ಭಕ್ತ ಸುದನ್ವ’ ನಾಟಕದಲ್ಲಿ ಎಲ್ಲರೂ ಆಯ್ದು ಕೊನೆಗೆ ಬಿಟ್ಟ ‘ವಿರಾಮ’ ಎಂಬ ಚಿಕ್ಕ ಹಾಸ್ಯಪಾತ್ರವನ್ನು ಮಾಡಿದರು. ಇದು ಇವರ ಸೌಮ್ಯ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ಮತ್ತೆ ಸಿದ್ದಪ್ಪರ ನಿರ್ದೇಶನದಲ್ಲಿ ಮರುವರ್ಷ ಮಾಡಿದ ‘ಉತ್ತರ ಭೂಪ’ ನಾಟಕದಲ್ಲಿ ‘ಭೀಮ’ನ ಪಾತ್ರಕ್ಕೆ ಮರೆಗು ತಂದಿದ್ದರು. ನಾಟಕಗಳಿಂದಾಗಿ ಬಹುಬೇಗ ಜನರ ಪ್ರೀತಿ ಗಳಿಸಿ ಅವರ ನೋವುಗಳಿಗೆ ಕಿವಿಯಾದರು. ಅಂತೆಯೇ ಕೇವಲ ಆಂಜಿನೇಯ್ಯ ಗುಡಿಯಲ್ಲಿ ವಿದ್ಯೆ ಕಲಿಯುತಿದ್ದ ತಮ್ಮ ಊರಿನ ಮಕ್ಕಳ ಶಿಕ್ಷಣಕ್ಕಾಗಿ ಶಾಲಾ ಕಟ್ಟಡ ನಿರ್ಮಾಣ ಮಾಡುವಂತೆ, ಆಗಿನ ರಾವಿಹಾಳ್ ಪಂಚಾಯಿತಿಯ ಅಧ್ಯಕ್ಷ ನಾರಾಯಪ್ಪಾಚಾರಿಯವರಲ್ಲಿ ಮನವಿ ಮಾಡುತ್ತಾರೆ. ಆದರೆ ಇವರ ವಉiÁತಿಗೆ ಸೊಪ್ಪು ಹಾಕದ್ದನ್ನು ನೋಡಿ ಮುಂದಿನ ಪಂಚಾಯಿತಿ ಚುನಾವಣೆಯಲ್ಲಿ ಅವರ ಎದುರಾಳಿಯಾಗಿ ನಿಂತು, ಗೆದ್ದು ಮಿಟ್ಟೆಸೂಗೂರಿನಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲೆಯನ್ನು ತೆರೆಯುತ್ತಾರೆ. ಇದರ ಬೆನ್ನಲ್ಲೇ ಅದೇ ರಾವಿಹಾಳಿನಲ್ಲಿ ‘ಮದಿರೆ ಮರಿಸ್ವಾಮಿ ಮತ್ತು ಕುಂಟನಹಾಳ್ ಸಿದ್ದನಗೌಡ’ರ ನಿರ್ದೇಶನದಲ್ಲಿ ‘ರಕ್ತರಾತ್ರಿ’ಯಲ್ಲಿ ‘ಕರ್ಣ’ನಾಗಿ ಹಾಗೂ ‘ಗೌಡ್ರ ಗದ್ಲ’ದಲ್ಲಿ ‘ಬಸವರಾಜಗೌಡ’ನ ಪಾತ್ರದಲ್ಲಿ ಮಿಂಚಿ ಜನರ ಅಭಿಮಾನ ಗಳಿಸಿದರು. ಈ ಮೂಲಕವೇ ಪಂಚಾಯಿತಿಗಳು ಮಂಡಲ ಪಂಚಾಯಿತಿ ಆದಾಗ ಪುನಃ ಗೆದ್ದು ಮಂಡಲ ಪಂಚಾಯಿತಿ ಸದಸ್ಯರಾದರು.
ಇವರಲ್ಲಿ ಕಲಾಸಕ್ತಿ ಎಷ್ಟಿತ್ತೆಂದರೆ ನಾಟಕದಲ್ಲಿ ಪಾತ್ರ ಸಿಕ್ಕರೆ ಸಾಕು ಮನೆಯಲ್ಲಿ ಸತತ ಅಭ್ಯಾಸಗಳ ಮೂಲಕ ಸಂಭಾಷಣೆಗಳನ್ನು ಕಂಠಪಾಠದ ಮೂಲಕ ಕಲಿಯುತ್ತಿದ್ದರು. ನಿರ್ದೇಶಕರ ಬಿಡುವಿನ ವೇಳೆಯಲ್ಲಿ ಅವರ ಪ್ರೀತಿ ಗಳಿಸಿ ಹಾಡುಗಾರಿಕೆ ಮತ್ತು ಅಭಿನಯದ ಸೂಕ್ಷö್ಮತೆಗಳನ್ನು ಕಲಿಯುತ್ತಿದ್ದರು. ಇವರಲ್ಲಿನ ಕಲೆಗೆ ಪ್ರಮುಖವಾಗಿ ಸಾಣೆ ಹಿಡಿದ ನಿರ್ದೇಶಕರಲ್ಲಿ ಕುಂಟನಹಾಳ್ ಸಿದ್ದನಗೌಡ ಮತ್ತು ರಾವಿಹಾಳ್ ಸಿದ್ದಪ್ಪನವರೇ ಪ್ರಮುಖರು. ಅಲ್ಲದೇ ಇವರು ಎಲ್ಲೇ ಅಭಿನಯ ಮಾಡಿದರು, ಯಾರಿಂದಲೂ ಸಂಭಾವನೆ ಪಡೆಯುತ್ತಿದ್ದಿಲ್ಲ. ಬದಲಾಗಿ ನಾಟಕಕ್ಕೆ ಅಗತ್ಯವಾದ ಧನಸಹಾಯವನ್ನು ಸಹ ಇವರೇ ಮಾಡಿದ ಅನೇಕ ಉದಾಹರಣೆಗಳಿವೆ. ಇವರ ಈ ರಂಗಬದ್ದತೆಯನ್ನು ಮೆಚ್ಚಿ ಹೆಬ್ಬುಟದಲ್ಲಿನ ಕಲಾಭಿಮಾನಿಗಳು ಇವರನ್ನು ಕರೆಸಿ ‘ಭರಮಲಿಂಗಪ್ಪ’ ವಿರಚಿತ ‘ಮನೆಮುರುಕರು’ ನಾಟಕದಲ್ಲಿ ಹಾಸ್ಯಪಾತ್ರವನ್ನು ಮಾಡಿಸುತ್ತಾರೆ. ಇವರ ರಂಗಚಾತರ‍್ಯವನ್ನು ನೋಡಿದ ಇವರ ಅಳಿಯ ರಂಗಕರ್ಮಿ ಬೀರಹಳ್ಳಿ ರಾಮರೆಡ್ಡಿಯವರು ‘ಗುಳ್ಯಂ ವಿಶ್ವನಾಥ ಸ್ವಾಮಿ’ ಸಹಾಯಾರ್ಥ ರಕ್ತರಾತ್ರಿ ನಾಟಕದಲ್ಲಿ ‘ಕೃಷ್ಣ’ನ ಪಾತ್ರವನ್ನು ಮಾಡಿಸುತ್ತಾರೆ. ನಂತರ ಕೊತ್ತಲಚಿಂತದಲ್ಲಿ ‘ಹಚ್ಚೊಳ್ಳಿ ರಾಮಲಿಂಗಪ್ಪ’ ಬರೆದ ‘ಜ್ಞಾನಯೋಗಿ ಶ್ರೀ ಹನುಮಂತಾವಧೂತರ ಮಹಿಮೆ’ ನಾಟಕದಲ್ಲಿ ‘ಗದ್ವಾಲ್ ವೆಂಕಪ್ಪ’ರ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಾರೆ. ಹೀಗೆ ಸಿರುಗುಪ್ಪ, ಆದೋನಿ, ಆಲೂರು, ಮಂತ್ರಾಲಯ, ರಾಯಚೂರು ಜಿಲ್ಲೆಯಲ್ಲೆಲ್ಲಾ ಸಂಚರಿಸಿ ನಾಟಕಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ಸಂಪಾದಿಸಿದ್ದಾರೆ.
ನಟನೆಯ ಜೊತೆ ಜೊತೆಗೆ ಅತಿಯಾಗಿ ಸಿನಿಮಾ ನೋಡುವ ಮತ್ತು ಗಂಟಸಾಲರ ಸಿನಿಹಾಡುಗಳನ್ನು ಕೇಳುವ ಹವ್ಯಾಸ ಇದ್ದುದರಿಂದ ಕೈಗೆ ಸಿಗುತ್ತಿದ್ದ ಪದ್ಯ-ಗದ್ಯ ಸಾಹಿತ್ಯಗಳನ್ನು ರಾಗವಾಗಿ ಓದುತ್ತಿದ್ದರು. ಇದರ ಜೊತೆಗೆ ಊರಿನಲ್ಲಿ ಸ್ವಂತ ಹಣದಿಂದ ತಮ್ಮದೇ ಜಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ೧೦೦೦ ಜನರ ಸಾಮರ್ಥ್ಯವುಳ್ಳ ಸಮುದಾಯ ಭವನ ನಿರ್ಮಾಣ ಮಾಡಿ ಪ್ರತಿವರ್ಷ ಪುರಾಣ ಪ್ರವಚನ ಮಾಡುತ್ತಿದ್ದರು. ಹೀಗೆ ಒಮ್ಮೆ ಆಕಸ್ಮಿಕವಾಗಿ ಪುರಾಣ ಪ್ರವಚಕರು ಬರದ ಕಾರಣ ತಾವೇ ‘ದೇವಿ ಪುರಾಣ’ ಪ್ರವಚನ ನೀಡಿದ್ದರು. ಇದು ಜನರಿಗೆ ಇಷ್ಟವಾದ ಕಾರಣ ಆಗಾಗ ಇವರಿಂದಲೇ ಪುರಾಣವನ್ನು ಓದಿಸಿದ್ದುಂಟು. ಇದಲ್ಲದೇ ಸಿರುಗುಪ್ಪದ ಅಭಯಾಂಜಿನೇಯ್ಯ ದೇವಸ್ಥಾನದಲ್ಲಿ ನವರಾತ್ರಿ ದಿನ ನಡೆಯುವ ಸತ್ಸಂಗದಲ್ಲಿ ಹಲವಾರು ಆಧ್ಯಾತ್ಮಿಕ ವಿಚಾರಗಳನ್ನು ಹೇಳಿದ್ದಾರೆ. ಅಲ್ಲದೇ ನಾಟಕ ನಿರ್ದೇಶಕರ ಕಲಿಕೆಯಿಂದಾಗಿ ಮತ್ತು ಪುರಾಣ ಪ್ರವಚನಗಳಿಂದಾಗಿ ಮುಂದೆ ಇದೇ ಅವರಿಗೆ ‘ಗಮಕ ಕಲೆ’ಯಾಗಿ ಸಿದ್ದಿಸಿತು. ಈ ಕಲೆಗಳ ಜೊತೆಗೆ ಇತ್ತೀಚಿಗೆ ಆಧ್ಯಾತ್ಮಿಕ ಅಂಶಗಳುಳ್ಳ ಹಲವು ಕವಿತೆಗಳನ್ನು ಬರೆದಿದ್ದಾರೆ.
ಇಂತಹ ಬಹುಮುಖ ಪ್ರತಿಭೆ ಎಲೆಮರೆಯ ಕಾಯಿಯಂತೆ ಸರ್ಕಾರದ ಮತ್ತು ಯಾವುದೇ ಸಂಘಸAಸ್ಥೆಗಳ ಪ್ರಶಸ್ತಿ-ಪುರಸ್ಕಾರಗಳಿಗೆ ಆಸೆ ಪಡೆದೆ ನಿಸ್ವಾರ್ಥ ಕಲಾಪ್ರೇಮಿಯಾಗಿ ಬದುಕುತ್ತಿದ್ದಾರೆ. ಕಲಾಸಕ್ತ ಮನಸ್ಸುಗಳನ್ನು ಮತ್ತು ಕಲಾವಿದರನ್ನು ಅತೀವವಾಗಿ ಇಷ್ಟಪಡುವ ಇವರು ಇಂದಿಗೂ ರಂಗಭೂಮಿ ಉಳಿವಿಗೆ ಮತ್ತು ಏಳ್ಗೆಗೆ ಸಂಬAಧಿಸಿದ ಕರ‍್ಯಗಳಲ್ಲಿ ಕೈ ಜೋಡಿಸಲು ಸದಾ ಮುಂದೆ ಇದ್ದಾರೆ. ಆಧುನಿಕ ಜಗತ್ತಿನ ಭರಾಟೆಯಲ್ಲಿ ಹತ್ತು ಹಲವು ಚಟಗಳಿಗೆ ಬಲಿಯಾಗಿ ಆರೋಗ್ಯವನ್ನೆಲ್ಲಾ ಹಾಳು ಮಾಡಿಕೊಂಡು, ಅತಿ ಚಿಕ್ಕವಯಸ್ಸಿನಲ್ಲಿ ಹತರಾಗುವ ಕಲಾವಿದರ ನಡುವೆ ೭೮ರ ಪ್ರಾಯದಲ್ಲೂ ಅತ್ಯುತ್ತಮವಾದ ಚೈತನ್ಯಭರಿತ ಶರೀರ ಮತ್ತು ಶಾರೀರ ಎರಡನ್ನು ಹೊಂದಿರುವ ಅಪರೂಪದ ಹಿರಿಯ ರಂಗ ನೇತಾರರಿಗೆ ಮುಂಬರುವ ದಿನಗಳಲ್ಲಾದರೂ ಸೂಕ್ತ ಗೌರವ ಮತ್ತು ಮನ್ನಣೆ ಸಿಗಲಿ ಎಂದು ನಾವು ಶುಭ ಹಾರೈಸೋಣ.
Comments
Post a Comment