ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'
ಬಣ್ಣದ ಬದುಕು
ರಂಗ ಮಾಲಿಕೆ -೩೭
ನಡೆದಾಡುವ ರಕ್ತರಾತ್ರಿ 'ನಾಡಂಗ ಬಸವರಾಜ'
ಬಾನಲ್ಲಿ ಹಾರುವ ಬಣ್ಣದ ಗಾಳಿಪಟ ಎಲ್ಲರಿಗೂ ಕಾಣುತ್ತದೆ ಮತ್ತು ಅಷ್ಟೇ ಕ್ಷಿಪ್ರವಾಗಿ ಅಕರ್ಷಣಗೊಳಪಡುತ್ತದೆ.ಆದರೆ ಅದು ಹಾರಲಿಕ್ಕೆ ಸಹಾಯಕವಾದ ಅದರ ಬಾಲಂಗೋಚಿ ದಾರ ಬಹುತೇಕರ ಕಣ್ಣಿಂದ ಮರೆಯಾಗಿ ಹೋಗುತ್ತದೆ.ಈ ಸ್ಥಿತಿ ರಂಗಭೂಮಿಗೆ ಅನ್ವಯಿಸಿದರೆ ವೇದಿಕೆ ಮೇಲಿನ ನಟರು ಬಹುಬೇಗ ಎಲ್ಲರಿಗೂ ಪರಿಚಿತರಾಗುತ್ತಾರೆ.ಆದರೆ ಅವರ ನಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿದ ಅನೇಕ ಹಿನ್ನಲೆ ನಟರು ಪ್ರೇಕ್ಷಕರಿಂದ ದೂರ ಉಳಿಯುತ್ತಾರೆ.ಬಳ್ಳಾರಿ ರಂಗಭೂಮಿ ಇತಿಹಾಸದಲ್ಲೂ ಹಾಗೆ ಮರೀಚಿಕೆಯಾಗಿ ಉಳಿದ ಅನೇಕರಲ್ಲಿ 'ನಾಡಂಗ ಬಸವರಾಜ' ಒಬ್ಬರು. ಇವರು ರಂಗದ ಹಿಂದೆ ಪರದೆ ಎಳೆಯಲಲಿಳಿಸಲು,ಕಥಾ ಸಂಚಾಲಕರಾಗಿ ಮತ್ತು ಅವಸರಕ್ಕೆ ಒದುಗುವ ದೀಢಿರ್ ನಟರಾಗಿ ಅನೇಕ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ರಂಗನಟರಾಗಿದ್ದರು.
ಇವರು ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ವಿರುಪಾಪುರದಲ್ಲಿ ಕ್ರಿ.ಶ.೧೯೪೨ ರಲ್ಲಿ ಹೆಚ್.ಚೆನ್ನಬಸವನಗೌಡ ಮತ್ತು ಹೆಚ್.ಬಸವಲಿಂಗಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಮೂಲತಃ ಇವರು ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ವಿದ್ಯಾಭ್ಯಾಸಕ್ಕಾಗಲಿ ಮತ್ತು ಕಲಾಭ್ಯಾಸಕ್ಕಾಗಲಿ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ.ಆದ್ದರಿಂದ ಇವರ ಸೋದರ ಮಾವನ ಸಹಾಯದಿಂದ ಎಸ್.ಎಸ್.ಎಲ್.ಸಿಯವರೆಗೂ ಓದಿದರು. ಊರಲ್ಲಿ ಆಗಾಗ ನಡೆಯುತ್ತಿದ್ದ ರಂಗ ಚಟುವಟಿಕೆಗಳು ಇವರನ್ನು ರಂಗಭೂಮಿಯ ಕಡೆಗೆ ಧಾವಿಸುವಂತೆ ಪ್ರೇರೇಪಿಸಿದವು. ಚಿಕ್ಕ ವಯಸ್ಸಿನಿಂದಲೇ ನಟಿಸಬೇಕೆಂಬ ಉತ್ಕಟಾಂಕ್ಷೆ ಅತೀವವಾಗಿತ್ತು.ಆದರೆ ಎಲ್ಲೂ ಅವಕಾಶಗಳು ಸಿಗಲಿಲ್ಲ.ಆದರೆ 'ಕಾಯ್ದವರಿಗೆ ಕರಿಗಡಬು' ಎಂಬಂತೆ ಅನೇಕ ವರ್ಷಗಳ ಕಾಲ ಕಾಯ್ದಿದ್ದಕ್ಕೆ ತಮ್ಮ ೨೧ನೇ ವಯಸ್ಸಿಗೆ ಮೋಹನ್ ಕುಮಾರ್ ವಿರಚಿತ 'ಅಣ್ಣ ತಂಗಿ' ನಾಟಕದಲ್ಲಿ ಕಥಾನಾಯಕರಾಗಿ ಅಭಿನಯಿಸುವ ಸುವರ್ಣಾವಕಾಶ ಸಿಕ್ಕಿತು.ಅಂತೆಯೇ ನಾಟಕದಲ್ಲಿ ಅದ್ಭುತವಾಗಿ ಅಭಿನಯಿಸಿ ನೆರೆದ ಜನರ ಮನಸೂರೆಗೊಂಡರು.ಅಲ್ಲಿಂದ ಆರಂಭವಾದ ಬಸವರಾಜರ ರಂಗ ಪಯಣ ಎಲ್ಲಿಯೂ ನಿಲ್ಲದೆ ವಿರುಪಾಪುರದಿಂದ ಬಳ್ಳಾರಿಯವರೆಗೆ ಅವರನ್ನು ಕರೆತಂದು ಇಡೀ ಬಳ್ಳಾರಿ ರಂಗಭೂಮಿಗೆ ಪರಿಚಯಿಸಿತು.
ಇವರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಹಿನ್ನಲೆಯಲ್ಲಿ ರಂಗ ಪರಿಕರ,ರಂಗಸಜ್ಜಿಕೆ,ಧ್ವನಿ ಮತ್ತು ಬೆಳಕು ವಿಭಾಗಗಳಲ್ಲಿ ಅತಿಯಾಗಿ ಕಾಣಸಿಗುತ್ತಿದ್ದ ನಿಗರ್ವಿ ರಂಗಕರ್ಮಿಗಳಾಗಿದ್ದರು.ಅಲ್ಲದೇ ಎಂದು ಯಾರ ಮಾತಿಗೂ ಕೋಪಿಸಿಕೊಳ್ಳದೆ ಹಿರಿಯರಿಂದ ಕಿರಿಯ ನಟರವರೆಗೂ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುತ್ತಿದ್ದ ಆದರ್ಶ ರೂಪದ ಕಲೆಗಾರ.ಇಡೀ ನಾಟಕದ ಪ್ರೇರಕ ಮತ್ತು ಪ್ರಮುಖ ಶಕ್ತಿಯೆಂದೇ ಬಹುಜನರ ಬಾಯಲ್ಲಿ ಹೊಗಳಿಕೆಗೆ ಸಿಗುವ ಅಪರೂಪದ ನಟರು.
ಯಾವುದೇ ನಾಟಕವಿರಲಿ, ಆರಂಭದ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಅವರೇ ಮನೆಯಿಂದ ತರುತ್ತಿದ್ದರು. ನಾಡಂಗ ಬಸವರಾಜ ಇದ್ದಾರೆ ಎಂದರೆ ಒಂದು ನಾಟಕಕ್ಕೆ ಏನು ಬೇಕೋ ಅವೆಲ್ಲವೂ ಅವರೊಂದಿಗೇ ಬರುತ್ತಿದ್ದವು. ನಾಟಕವನ್ನು ಆ ಪರಿಯಲ್ಲಿ ಮೈಗೆ ಹಚ್ಚಿಕೊಂಡವರು ಇನ್ನೊಬ್ಬರಿಲ್ಲ’ ಎಂಬುದು ಬಹುತೇಕ ರಂಗಕಲಾವಿದರ ನುಡಿಯಾಗಿತ್ತು.
ಬಿಸಿಲನಾಡಿನ ರಂಗಭೂಮಿ ಕ್ಷೇತ್ರದಲ್ಲಿ ಬಸವರಾಜ ಏನಾಗಿದ್ದರು ಎಂಬುದಕ್ಕಿಂತ, ಏನಾಗಿರಲಿಲ್ಲ ಎಂದು ಕೇಳಿಕೊಳ್ಳುವುದೇ ಉಚಿತ. ಅವರೊಬ್ಬ ನೇಪಥ್ಯ ರಂಗಕಲಾವಿದ. ರಂಗಮಂಚದ ಹಿಂದೆ ಅವರಿಗಾಗಿ ಇರುವ ಕೆಲಸಗಳು ಕಮ್ಮಿಯೇನಲ್ಲ. ಆದರೆ ಬಸವರಾಜ ತೆರೆ ಎಳೆಯುವುದಷ್ಟೇ ಅಲ್ಲ, ಪಾತ್ರಗಳ ಕೊರತೆ ಬಿದ್ದರೆ ದಿಢೀರ್ ಕಲಾವಿದರಾಗಿ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು.
ಅಷ್ಟೆಯಲ್ಲದೇ ರಂಗ ಸಜ್ಜಿಕೆಯನ್ನು ರೂಪಿಸುತ್ತಲೇ, ಹೊಸ ಕಲಾವಿದರು ನಾಟಕದ ನಡುವೆ ಮರೆತ ಮಾತುಗಳನ್ನು ಸೂಕ್ಷ್ಮವಾಗಿ ಎತ್ತಿಕೊಡುತ್ತಿದ್ದರು. ಯಾವ ನಾಟಕದ, ಯಾವ ಪಾತ್ರದ ಸಂಭಾಷಣೆ ಬೇಕೋ ಅವೆಲ್ಲವೂ ಅವರ ಬಾಯಲ್ಲಿತ್ತು. ಅವರಿಗೆ ಯಾವುದೇ ನಾಟಕದ ಪುಸ್ತಕ ಬೇಕಿರಲಿಲ್ಲ. ಪೌರಾಣಿಕ ನಾಟಕಗಳಾದ ‘ರಕ್ತರಾತ್ರಿ’, ‘ಕುರುಕ್ಷೇತ್ರ’, ಜನಪ್ರಿಯ ಸಾಮಾಜಿಕ ನಾಟಕಗಳಾದ ‘ರತ್ನಮಾಂಗಲ್ಯ’, ‘ಅಣ್ಣ–ತಂಗಿ’, ‘ಕಲಿತ ಕಳ್ಳ’, ‘ಆಶಾ ಲತಾ’, ‘ಗೌರಿ ಗೆದ್ದಳು’ ಮೊದಲಾದವು ಅವರಿಗೆ ಬಾಯಿಪಾಠವಾಗಿ ಬಿಟ್ಟಿದ್ದವು. ಬಸವರಾಜ ಅವರೊಬ್ಬ ನಡೆದಾಡುವ ರಕ್ತರಾತ್ರಿ’ ಎಂದೇ ಅನೇಕರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಈ ನಾಟಕದ ನವಲಿಪಕ್ಕ, ಕಲಿ, ಶಿವ, ಗಂಧರ್ವ, ಸೈನಿಕನ ಪಾತ್ರಗಳಿಗೆ ಈ ಕಲಾವಿದ ಜೀವ ತುಂಬುತ್ತಿದ್ದರು. ಅದರಾಚೆಗೆ ಎಲ್ಲರಿಗೂ ಅನಧಿಕೃತ ಸಹನಿರ್ದೇಶಕರೂ ಆಗಿಬಿಡುತ್ತಿದ್ದರು.
ಬದುಕಿನ ಕಷ್ಟ ಕಾರ್ಪಣ್ಯಗಳ ನಡುವೆಯೂ ಅವರು ನಾಟಕದ ಮಾತುಗಳನ್ನು ಒಂದಿನಿತೂ ಮರೆತಿರಲಿಲ್ಲ. ನಾಟಕದ ಚರ್ಚೆ ಬಂತೆಂದರೆ ಎಲ್ಲವನ್ನೂ ಮರೆಯುತ್ತಿದ್ದರು. ತುರ್ತು ಸಂದರ್ಭಗಳಲ್ಲಿ ಯಾರೇ ನಟರು ಕೈಕೊಟ್ಟರೂ, ನಾಡಂಗ ಅವರೇ ದಿಢೀರ್ ಕಲಾವಿದರಾಗಿ ಬಣ್ಣ ಹಚ್ಚುತ್ತಿದ್ದರು!
ಇದಲ್ಲದೇ ನಾಟಕ ಅಕಾಡೆಮಿಯು ನೇಪಥ್ಯ ಕಲಾವಿದರಿಗಾಗಿ ನೀಡುತ್ತಿದ್ದ ಪದ್ದಣ್ಣ ಪ್ರಶಸ್ತಿಯನ್ನು ಪಡೆದ ಬಳಿಕವೂ ಇವರ ಬದುಕೇನೂ ಬದಲಾಗಲಿಲ್ಲ. ನಾಟಕದ ಕೆಲಸಕ್ಕೆ ಯಾರೇ ಕರೆದರೂ ಅವರು ಮೊದಲು ಕೇಳುತ್ತಿದ್ದುದು ಟೀ ಮತ್ತು ಗಣೇಶ ಬೀಡಿ ಅಷ್ಟೇ. ದೇಹದಲ್ಲಿ ಕಸುವಿರುವವರೆಗೂ ಅವುಗಳು ಅವರ ಸಂಗಾತಿಯಾಗಿದ್ದವು.
ಇವರ ಕಲಾ ಧೀಮಂತಿಕೆಗೆ ಅನುಗುಣವಾಗಿ ಇವರ ಬದ್ಧತೆಯ ರಂಗ ಕಾಯಕ ನೋಡಿ ಅಂದಿನ ಅನೇಕ ಪ್ರಸಿದ್ಧ ವೃತ್ತಿ ನಾಟಕ ಕಂಪನಿಗಳು ಇವರಿಗೆ ಅಹ್ವಾನ ನೀಡಿದ್ದವು.ಅಂತೆಯೇ ಹಿರಣ್ಣಯ್ಯ ಮಿತ್ರ ಮಂಡಳಿ,ಕುಕನೂರಿನ ಶ್ರೀ ವಿಜಯಲಕ್ಷ್ಮಿ ನಾಟಕ ಮಂಡಳಿ, ಬಾಗಲವಾಡದ ಶ್ರೀ ಅಮರೇಶ್ವರ ನಾಟಕ ಮಂಡಳಿ,ಸೂಡಿಯ ಶ್ರೀ ಮಲ್ಲಿಕಾರ್ಜುನ ನಾಟಕ ಸಂಘ,ಗುಡುಗೇರಿಯ ಶ್ರೀ ಸಂಗಮೇಶ್ವರ ನಾಟ್ಯ ಸಂಘ,ಕಮತಗಿಯ ಶ್ರೀ ಹುಚ್ಚೇಶ್ವರ ನಾಟ್ಯ ಸಂಘ ಹೀಗೆ ಅನೇಕ ನಾಟಕ ಕಂಪನಿಗಳಲ್ಲಿ ಯಾವುದೇ ಬೇಧಭಾವವಿಲ್ಲದೇ ರಂಗಸೇವೆ ಸಲ್ಲಿಸಿದ್ದಾರೆ.
ಇವರ ಈ ಅನುಪಮ ರಂಗಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.ಅಲ್ಲದೇ ಕರ್ನಾಟಕ ಸರ್ಕಾರದ ಕರ್ನಾಟಕ ನಾಟಕ ಅಕಾಡೆಮಿಯ ವತಿಯಿಂದ ರಂಗಸಜ್ಜಿಕೆಯಲ್ಲಿನ ಸ್ಮರಣೀಯ ಕಾರ್ಯಕ್ಕಾಗಿ ನೀಡಲಾಗುವ ೨೦೦೧ ರ 'ಪದ್ದಣ್ಣ ಸೇವಾ' ರಾಜ್ಯ ಪ್ರಶಸ್ತಿ ,ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ರಾಘವ ಮೆಮೋರಿಯಲ್ ಅಸೊಶಿಯೇಶನ್ ಸಹ ಬಳ್ಳಾರಿ ರಾಘವ ಪ್ರಶಸ್ತಿ ನೀಡ ತಮ್ಮನ್ನು ತಾವು ಗೌರವಿಸಿಕೊಂಡಿವು.
ನೇಪಥ್ಯದಲ್ಲಿ ಇದ್ದುಕೊಂಡೇ ರಂಗಮಂಚವನ್ನು ಶ್ರೀಮಂತಗೊಳಿಸಿದ ಇಂಥ ಅಪರೂಪದ ಕಲಾವಿದರೇಕೆ ಇದ್ದೂ ಇಲ್ಲದಂತೆ ಸರಿದುಹೋದರು ಎಂಬ ಪ್ರಶ್ನೆಗೆ ರಂಗಭೂಮಿ ಕ್ಷೇತ್ರದ ಯಾರಲ್ಲೂ ಉತ್ತರವಿಲ್ಲ.‘ಆಪತ್ತಿಗಾದವನೇ ನೆಂಟ’ ಎಂಬ ಗಾದೆ ಮಾತನ್ನೇ ಬದುಕಿದವರು ಬಸವರಾಜ. ಅವರಿಗೆ ರಂಗನೇಪಥ್ಯ ಮತ್ತು ಅದರಾಚೆಗಿನ ರಂಗಿನ ಲೋಕ ಬೇರೆ ಬೇರೆ ಆಗಿರಲಿಲ್ಲ ಎಂಬುದೇ ವಿಶೇಷ.
ಬಸವರಾಜರ ಕೊನೆಯ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ವೈದ್ಯಕೀಯ ಚಿಕಿತ್ಸೆಗೂ ಹಣವಿಲ್ಲದೆ ಪರದಾಡುವಂತಾಗಿದ್ದರು.ಅಲ್ಲದೇ ದಿನಾಂಕ ೨೮.೦೮.೨೦೨೦ರಂದು ಬಳ್ಳಾರಿಯ ಮುನ್ಸಿಪಲ್ ಕಾಲೇಜು ಆವರಣದಲ್ಲಿ ವಾಯು ವಿಹಾರಕ್ಕೆಂದು ಹೋದಾಗ ಕಡಿಮೆ ರಕ್ತದೊತ್ತಡ ಮತ್ತು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.
ಇನ್ನಾದರೂ ರಂಗಕರ್ಮಿಗಳ ಬದುಕಿಗೆ ಪೂರಕವಾದ ರಕ್ಷಣೆ ಮತ್ತು ಪೋಷಣೆಯುತವಾದ ಯೋಜನೆಗಳನ್ನು ಸರ್ಕಾರಗಳು ರೂಪಿಸಿ ಕಲಾವಿದರ ಬದುಕನ್ನೂ ಸಹ ರಂಗಾಗಿಸಲಿ ಎಂಬುದೇ ಈ ಲೇಖನದ ಆಶಯ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ / ರಂಗ ಸಂಶೋಧಕರು
manjuamazing7@gmail.com
9379857775

Comments
Post a Comment