ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.


 ಬಣ್ಣದ ಬದುಕು

ರಂಗ ಮಾಲಿಕೆ - ೨೭


ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.


ನಾವ್ಯಾರೂ ದ್ರೋಣ - ಏಕಲವ್ಯರನ್ನು ಕಾಣದಿರಬಹುದು.ಆದರೆ ಆ ಮಾದರಿಯ ಗುರು ಶಿಷ್ಯ ಪರಂಪರೆ ಇಂದಿಗೂ ಜೀವಂತ.ಈ ಪರಂಪರೆ ರಂಗಭೂಮಿಯಲ್ಲಂತೂ ಆಳವಾಗಿ ಬೇರೂರಿದೆ. ಏಕಲವ್ಯರಂತೆ ಬೆಳೆದು ನಾಡಿಗೆ ಹೆಸರಾದ ಅನೇಕ ಮಹನೀಯರಿದ್ದಾರೆ ಅಂತವರಲ್ಲಿ  ಹೂವಿನ ಹಡಗಲಿಯ ಸೋಗಿ ನಾಗರತ್ನಮನವರು ಒಬ್ಬರೆಂದರೆ ತಪ್ಪಾಗಲಾರದು.

      ಇವರು 1960 ರಲ್ಲಿ ಹೂವಿನ ಹಡಗಲಿ ತಾಲ್ಲೂಕಿನ ಸೋಗಿ ಗ್ರಾಮದಲ್ಲಿ ತುಮ್ನೆಪ್ಪ ಮತ್ತು ಕಾಳಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರು ಹುಟ್ಟಿನಿಂದಲೇ ತೀವ್ರ ಬಡತನದ ಬೇಗೆಯಲ್ಲಿ ಬೆಂದರು. ತಂದೆ-ತಾಯಿ ಪರರ ಜಮೀನಿನಲ್ಲಿ ಕೂಲಿಯನ್ನು ಮಾಡುತ್ತಾ ಇಬ್ಬರು ಮಕ್ಕಳನ್ನು ಸಾಕುತ್ತಿದ್ದರು.ಇದ್ದ ಒಬ್ಬ ತಂಗಿಯನ್ನು ನೋಡಿಕೊಳ್ಳುವ ಸಲುವಾಗಿ 2ನೇ ತರಗತಿಗೆ ವಿದ್ಯೆ ನೈವೇದ್ಯವಾಗಿ ಕಲಾಭಿರುಚಿಯೇ ಮೈಗೂಡಿಸಿಕೊಂಡಿತು.

  ಬಾಲ್ಯದ ದಿನಗಳಲ್ಲಿ ಇವರ ಹಳ್ಳಿಗೆ ನಾಟಕ ಪ್ರದರ್ಶನಕ್ಕೆ ಬರುತ್ತಿದ್ದ ನಾಡೋಜ ಸುಭದ್ರಮ್ಮ ಮನ್ಸೂರ್ ಮತ್ತು ನಾಡೋಜ ಮರಿಯಮ್ಮನಹಳ್ಳಿ ಕೆ.ನಾಗರತ್ನಮ್ಮನವರೇ ರಂಗಭೂಮಿಯ ದ್ರೋಣಾಚಾರ್ಯರಾಗಿ ರಂಗದೊಲವು ಮೈಮನಸ್ಸಿಗಂಟಿತು.ಅಂತೆಯೇ ಪ್ರತಿಸಾರಿ ಅವರ ಹಳ್ಳಿಗೆ ಬಂದಾಗಲಲ್ಲೇ ಅವರೊಡನೆ ಇದ್ದು ಬ್ಯಾಗ್ ಹಿಡಿದು, ತಾಲೀಮು ಕೋಣೆಯನ್ನು ಸ್ವಚ್ಛ ಮಾಡುತ್ತಾ ಅವರ ಅಭಿನಯವನ್ನೇ ಅನುಕರಿಸಿದರು.

     ಇತ್ತ ಇವರ ರಂಗಾಸಕ್ತಿಯನ್ನು ಗಮನಿಸಿದ ಊರಿನ ಪುರಜನರು ತಮ್ಮೂರಿನಲ್ಲೇ ತಾವೇ ಏರ್ಪಡಿಸಿದ 'ದಕ್ಷ ಬ್ರಹ್ಮ' ಬಯಲಾಟದಲ್ಲಿ ಲಕ್ಷ್ಮೀ ಪಾತ್ರಕ್ಕೆ ರಂಗ ಗುರು ಗಡ್ಡಿ ಪತ್ರೆಪ್ಪರ ಮಾರ್ಗದರ್ಶನದಲ್ಲಿ ಬಣ್ಣ ಹಚ್ಚಿಸಿದರು.ಕೇವಲ 10ನೇ ವಯಸ್ಸಿನ ಇವರು ಯಾವ ಹಿಮ್ಮೇಳವಿಲ್ಲದೇ ಅದ್ಬುತವಾಗಿ ಹಾಡಿ ಇಡೀ ಸುತ್ತಮುತ್ತಲೆಲ್ಲಾ ಹೆಸರಾದರು.

   ಇನ್ನೂ ರಂಗ ಬದುಕಿನುದ್ದಕ್ಕೂ ತಂಗಿ ರೇಣುಕ ಉಮಾಪತಿಯವರೇ ಅಕ್ಷರದಾಸರೆಯಾದರು.

  ನಂತರ ನಂದಿಹಳ್ಳಿ ಹಾಲಪ್ಪರ ನಿರ್ದೇಶನದಲ್ಲಿ ಚಂದ್ರಶೇಖರ ಕಂಬಾರರ ಕರೋಕರ್ ನಾಟಕ,ಮಲಮಗಳು,ರಕ್ತ ರಾತ್ರಿ ಹತ್ತಾರು ನಾಟಕಗಳು ಮಾಡುತ್ತಾ ರಂಗ ಶಿಖರದ ಮೆಟ್ಟಿಲು ಏರುತ್ತಿರುವಾಗ ತಂದೆಯ ಅಕಾಲಿಕ ಮರಣ ಮತ್ತು ಸಂಬಂಧಿಕರ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ತಾಯಿ ತಂಗಿಯೊಂದಿಗೆ ಬೀದಿಗೆ ಬಂದರು.

   ಸಂಸಾರದ ಹೊರೆ ಹೊತ್ತ ತಾಯಿಗೆ ನೇರವಾಗಲೋಸುಗವೇ ಸಾಂಪ್ರದಾಯಿಕ ಕುಟುಂಬದ ಕಟ್ಟುಪಾಡುಗಳನ್ನು ಮೂಲೆಗಿಟ್ಟು ರಂಗ ಕಾಯಕಕ್ಕೆ ಮುಂದಾದರು.ಇತ್ತ ತಾಯಿಯವರು ಒಬ್ಬಂಟಿಯಾಗಿ ತಲೆ ಮೇಲೆ ಹುಣಸೆ ಹಣ್ಣು ಹೊತ್ತು ಊರೂರು ಸುತ್ತಿ ಮಾರಿ ಬಂದ ಹಣದಲ್ಲಿ ಮನೆಕಟ್ಟಿ ಮಕ್ಕಳಿಗೆ ಆಸರೆಯಾದರು.

  ಅದೇ ಕಾಲಕ್ಕೆ ಸುಯೋಗದಂತೆ ಬಂದ ಬೆಳವಗಿಯ ತುಳಸಿದಾಸ್ ನಾಟಕ ಕಂಪನಿಗೆ ಸೇರಿ ನಿರೋತ್ತು,ಕಸ ಗುಡಿಸಿ,ರೊಟ್ಟಿ ಸುಟ್ಟು, ಗುರುಗಳ ಬಟ್ಟೆ ತೊಳೆಯುತ್ತ ರಂಗ ಗುರು ದಿವಾಕರ ಗವಾಯಿಗಳ ನೇತೃತ್ವದಲ್ಲಿ 4 ತಿಂಗಳು ಕಾಲ ಹೇಮರೆಡ್ಡಿ ಮಲ್ಲಮ್ಮನ ನಾಟಕಕ್ಕೆ ಸುಧೀರ್ಘ ತಾಲೀಮು ನೆಡೆಸಿ ನಂತರ 3 ತಿಂಗಳು ಬಳ್ಳಾರಿಯ ಸುತ್ತಮುತ್ತ ಪ್ರದರ್ಶನ ಮಾಡಿದರು.

ಇದರ ನಡುವೇ ಕಂಪನಿ ನಷ್ಟದಿಂದ ನಿಂತು ಇವರು ಊರಿಗೆ ಮರಳುವಂತಾಯಿತು.

  ಅಲ್ಲದೇ ಇದೇ ಸಮಯಕ್ಕೆ ರಂಗಾಸಕ್ತ ಜಾತಪ್ಪರೊಂದಿಗೆ ವಿವಾಹವಾದರು.ಆದರೆ ಬಾಯಾರದ ಕಲಾಸಕ್ತಿ ಮತ್ತೆ ರಂಗದೆಡೆಗೆ ಮರಳುವಂತೆ ಮಾಡಿತು. ಅಂತೆಯೇ ಮಲಪನಗುಡಿ,ಮರಬ್ಬಿಹಾಳ್ ಹೀಗೇ ಸುತ್ತಮುತ್ತಲಿನ ಜನ ಅಭಿನಯಕ್ಕೆ ಆಹ್ವಾನವಿತ್ತರೇ ಓಡಿ ಹೋಗಿ ನಾಟಕ ಮಾಡುತ್ತಿದ್ದರು.ಕಾಲಕ್ರಮೇಣ ಈ ಭಾಗದಲ್ಲಿ ಹೆಸರಾದ ಸೋಗಿಯವರು ಮುಂದೆ 13 ವರ್ಷಗಳ ಕಾಲ ಹುಬ್ಬಳ್ಳಿ ಕಡಪಟ್ಟಿ ಪ್ರಕಾಶ, ಸೂಡಿ ಶೇಖರಯ್ಯ ಹಂಚಿನಹಾಳ್ ಕರಿಯಪ್ಪ ,ಶ್ರೀ ಕುಮಾರೇಶ್ವರ , ಸೊರಬ ಸರ್ವೀಸ್ ನಾಟಕ ಕಂಪನಿಗಳಲ್ಲಿ ಪಳಗಿದರು.

   ಆದರೆ ನಾಲ್ಕು ಮಕ್ಕಳ ಹಾರೈಕೆ ಮತ್ತು ರಂಗ ಸೇವೆ ಇವೆರಡನ್ನೂ ನಿಭಾಯಿಸುವ ಸಲುವಾಗಿ ಹುಟ್ಟೂರಲ್ಲೇ ಉಳಿದು ಅಭಿನಯ,ನಿರ್ದೇಶನಕ್ಕೆ ಕೈ ಹಾಕಿದರು. ಅಂತೆಯೇ ಇವರ ಕುಂಚದಲ್ಲೂ ಜ್ಯೋತಿ ಕೂಡ್ಲಿಗಿ, ದಿವ್ಯಾ,ಡ್ಯಾನ್ಸರ್ ಮೌನೇಶ್ ಮುಂತಾದ ಶಿಷ್ಯರು ಅರಳಿದರು.

   ಹೀಗೆ ಬಣ್ಣ ಹಚ್ಚಿದ ದಿನದಿಂದ ಇವತ್ತಿನವರೆಗೂ ಚನ್ನಪ್ಪ ಚನ್ನಗೌಡ,ಭಲೇ ಮಗಳು, ಸರ್ವ ಮಂಗಳ, ಮಲ ಮಗಳು, ಚಿನ್ನದ ಬೊಂಬೆ, ಸತಿ ಸಂಸಾರದ ಜ್ಯೋತಿ,ಧರ್ಮ ದೇವತೆ,ಅಣ್ಣ ತಂಗಿ,ಕೆಟ್ಟ ಮೇಲೆ ಬುದ್ಧಿ ಬಂತು,ರೈತ ನಗಲಿಲ್ಲ ಸರ್ಕಾರ ಉಳಿಲಿಲ್ಲ, ಬದುಕು ಬಂಗಾರವಾಯಿತು,ದಾರಿದೀಪ,ತಾಯಿಗೆ ತಕ್ಕ ಮಗ, ರತ್ನ ಮಾಂಗಲ್ಯ, ಸಹೋದರರ ಸವಾಲ್,ವೀರ ಅಭಿಮನ್ಯು,ಕುರುಕ್ಷೇತ್ರ, ಉತ್ತರ ಭೂಪ, ಸತ್ಯ ಹರಿಶ್ಚಂದ್ರ, ಪಾಶು ಪತಾಸ್ತ್ರ, ರಕ್ತ ರಾತ್ರಿ, ವೀರ ಗೋಣಿ ಬಸವೇಶ್ವರ,ಹೇಮರೆಡ್ಡಿ ಮಲ್ಲಮ್ಮ ಮುಂತಾದ ಪೌರಾಣಿಕ, ಐತಿಹಾಸಿಕ,ಸಾಮಾಜಿಕ ನಾಟಕಗಳನ್ನು ಮಾಡಿ ಕಲಾ ರಸಿಕರ ಕನಸಿನ ಬಾಲೆಯಾದರು.

  ಇವರ ಕಲಾ ಪ್ರೌಢಿಮೆಗೆ ತಕ್ಕಂತೆ ಕಿರುತೆರೆಯಲ್ಲಿ ಸ್ಥಾನ ಪಡೆದು ಆರುಂಧತಿ, ಕಲ್ಯಾಣಿ,ರಂಗೋಲಿ,ಮಾಂಗಲ್ಯ,ಆವೂರು ಈವೂರು, ಇದ್ದರೆ ಇರಬೇಕು ನಿನಹಂಗ ಧಾರವಾಹಿಗಳಲ್ಲಿ ತಮ್ಮ ರಂಗ ಹೆಜ್ಜೆ ಮೂಡಿಸಿದರು.ಅಲ್ಲದೇ ಇವರ ರಂಗ ಸೇವೆಯನ್ನು ಗುರುತಿಸಿ ಅನೇಕ ಸಂಸ್ಥೆಗಳು ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚಿರಂತನಶ್ರೀ ಪ್ರಶಸ್ತಿ, ಹಂಪಿ ಉತ್ಸವ ,ಧಾರವಾಡ ಉತ್ಸವ,ಮೈಸೂರು ಉತ್ಸವ,ರಂಗಾಯಣ ಪ್ರಶಸ್ತಿ,ಉಡುಪಿ ಶ್ರೇಷ್ಠ ನಟಿ ಪ್ರಶಸ್ತಿ ಹಾಗೂ 2013-14 ರ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಸಹ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

  ಇದರ ನಡುವೆ ಬಿ.ಮಂಜುಳಾ, ಬಿ.ಬಸವರಾಜ್, ಬಿ.ರಾಘವೇಂದ್ರ , ಬಿ.ನೇತ್ರಾವತಿ ಎಂಬ ನಾಲ್ಕು ಮಕ್ಕಳನ್ನು ಕ್ರಮವಾಗಿ ಪೋಲಿಸ್,ಕೋರ್ಟ್ ಗುಮಾಸ್ತ,ಕೆ.ಇ.ಬಿ ನೌಕರ ಹಾಗೂ ಆಸ್ಪತ್ರೆ ದಾದಿಯಾನ್ನಾಗಿಸಿ ನೆಮ್ಮದಿಯಿಂದ ಇಂದಿಗೂ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದಾರೆ. 

 ಇಂತಹ ಅದಮ್ಯ ಚೇತನದ ರಂಗ ಮಣಿಯ ಕುರಿತಾದ ಯಶೋಗಾಥೆಯನ್ನು ಸರ್ವ ಕಲಾ ರಸಿಕರಿಗೂ ಉಣ ಬಡಿಸುವ ಮೂಲಕ ಅವರಿಗೊಂದು ಸಲಾಂ ಹೇಳುವ ಚಿಕ್ಕ ಪ್ರಯತ್ನವೇ ನನ್ನೀ ಲೇಖನದ ನಿಜ ಆಶಯ.


ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ಸಾಹಿತಿ / ರಂಗ ಸಂಶೋಧಕರು.

9379857775

manjuamazing7@gmail.com

Comments

Popular posts from this blog

ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'