ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

 


ಬಣ್ಣದ ಬದುಕು

ರಂಗ ಮಾಲಿಕೆ - ೨೧


'ಆಂಧ್ರ ನಾಟಕ ಕವಿತಾ ಪಿತಾಮಹ' ಧರ್ಮಾವರಂ ರಾಮಕೃಷ್ಣಾಮಾಚಾರ್ಯರು.


ಬಳ್ಳಾರಿ ರಂಗಭೂಮಿ ಚರಿತ್ರೆಯಲ್ಲಿ ಮೊದಲ ನಾಟಕ ಕಂಪನಿಯನ್ನು ತೆರೆದು ಕಲಾಸಕ್ತರನ್ನೆಲ್ಲ ಒಂದೆಡೆ ಸೇರಿಸಿ, ನಟರನ್ನಾಗಿಸಿ ನಾಟಕಗಳನ್ನು ಮಾಡಿ ಇಡೀ ಕನ್ನಡ ರಂಗಭೂಮಿ ಇತಿಹಾಸದಲ್ಲಿ ಹೊಸ ಭಾಷ್ಯವನ್ನು ಬರೆದ ಮೊದಲಿಗರೆಂದರೆ ಅದು ಧರ್ಮಾವರಂ ರಾಮಕೃಷ್ಣಾಮಾರ್ಚಾರು. ಇವರು ವೃತ್ತಿಯಲ್ಲಿ ವಕೀಲರಾಗಿ,ಬರಹಗಾರರಾಗಿ,ಸಂಘಟಕರಾಗಿ ಮತ್ತು ನಟರಾಗಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.ಪರನಾಡಿನಿಂದ ಬಂದು ಕನ್ನಡನಾಡಿನ ಘನತೆಯನ್ನು ಎತ್ತಿ ತೋರಿದವರಲ್ಲಿ ಒಬ್ಬರು.ಇಂತಹ ಮಹನೀಯರ ರಂಗ ಚರಿತ್ರೆಯ ಅರಹುವಿಕೆಯೇ ಈ ಲೇಖನದ ಆಶಯ.

   ಇವರು ಕ್ರಿ.ಶ.1853 ಜನವರಿ 12 ರಂದು ಅನಂತಪುರ ಜಿಲ್ಲೆಯ  ಧರ್ಮಾವರಂ ಎಂಬಲ್ಲಿ ಕೋಮಂದೂರ್ ಕೃಷ್ಟಾಮಾರ್ಚಾರ್ಯ ಮತ್ತು ಲಕ್ಷ್ಮೀದೇವಮ್ಮ ಎಂಬುವವರ ಮಗನಾಗಿ ಜನಿಸಿದರು.

  ತಂದೆ ಬಳ್ಳಾರಿ ವಾರ್ಡ್ಲಾ ಕಾಲೇಜಿನಲ್ಲಿ ತೆಲುಗು ವಿಭಾಗದ ಮುಖ್ಯಸ್ಥರಾಗಿದ್ದರು.ಅಲ್ಲದೆ ತೆಲುಗು ಭಾಷಾ ಪಂಡಿತರಾಗಿದ್ದರಿಂದ ಕೃಷ್ಣಾಮಾರ್ಚಾಯರು ಬಾಲ್ಯದಲ್ಲಿ ತಂದೆಯಿಂದಲೇ ತೆಲುಗು ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತರು.ಅಲ್ಲದೇ ತಮ್ಮ ತಾತರಿಂದ ರಘವಂಶಮು, ಚಂಪೂ ರಾಮಾಯಣಮು, ಪ್ರತಾಪರುದ್ರಿಯಮು ಎಂಬ ಮಹಾಗ್ರಂಥಗಳನ್ನು ಓದಿದರು.ನಂತರ ಮಹಾ ಮೇಧಾವಿಯಾದ ಆಚಾರ್ಯರು 1870ರಲ್ಲಿ ಮೆಟ್ರಿಕ್ಯುಲೇಷನ್ ಪ್ರಥಮ ದರ್ಜೆಯಲ್ಲಿ ಪಾಸಾದರು.ಅದಲ್ಲದೇ 1874 ರಲ್ಲಿ  ಎಫ್.ಎ ಪರೀಕ್ಷೆ  ಹಾಗೂ  ಸೆಕೆಂಡರಿ ಗ್ರೇಡ್ ಫ್ಲಿಡರ್ಶಿಪ್ ಪರೀಕ್ಷೆ(ವಕೀಲ ವೃತ್ತಿ ಸಂಬಂಧಿ ಪರೀಕ್ಷೆ)ಗಳಲ್ಲಿ ಸಹ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು.ತಮ್ಮ ಸ್ವಂತ ಮೇಧಾಶಕ್ತಿಯಿಂದ ಅನೇಕ ಗ್ರಂಥಗಳನ್ನು ಪರಾಮರ್ಶೆ ಮಾಡುವ ಮೂಲಕ ಸಾಹಿತ್ಯ ಲೋಕದಲ್ಲಿ ಅತೀವ ಸಾಮರ್ಥ್ಯವನ್ನು ಗಳಿಸಿದರು.ಅಲ್ಲದೆ ಇವರ ಅಷ್ಟ ಶತಾವಧಾನ ಪ್ರದರ್ಶನ ಶಕ್ತಿಯಿಂದ ಪ್ರಸಿದ್ಧ ಪಂಡಿತ ಕೊಕ್ಕೊಂಡ ವೆಂಕಟರತ್ನ ರಿಂದಲೇ ಶಹಬ್ಬಾಶಗಿರಿಯನ್ನು ಪಡೆದಿದ್ದರು.ಕನ್ನಡ, ತೆಲುಗು ಅಲ್ಲದೇ ಇಂಗ್ಲಿಷಿನಲ್ಲೂ ಪಾಂಡಿತ್ಯ ಗಳಿಸಿ ವಕೀಲ ವೃತ್ತಿ ಸಂಬಂಧಿ ಎಫ್.ಎ ಪರೀಕ್ಷೆಯನ್ನು ಪಾಸ್ ಮಾಡಿದ್ದರಿಂದ ಅದವಾನಿ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತರಾಗಿ, ಗೋನಾಳು ಗ್ರಾಮದ ಲೆಕ್ಕಾಧಿಕಾರಿಯಾಗಿ ನೇಮಕಗೊಂಡರು.

  ತುಂಬಾ ಬಡ ಕುಟುಂಬವಾಗಿದ್ದರಿಂದ ಅದವಾನಿಯಲ್ಲಿ ಬರುತ್ತಿದ್ದ ಸಂಬಳ ಸಾಲದೇ ಸಂಸಾರ ಸಮೇತರಾಗಿ ಬಳ್ಳಾರಿಗೆ ಬಂದು ಕಂಟೋನ್ಮೆಂಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಖಾಸಗಿ ವಕೀಲರಾಗಿ ಸೇರಿಕೊಂಡರು.ಈ ಮೂಲಕ ಅವರಿಗಂಟಿದ್ದ ದಾರಿದ್ರ್ಯವೆಲ್ಲ ದೂರವಾಯಿತೆಂದರು ತಪ್ಪಾಗಲಾರದು.ಇದರಿಂದ ಉತ್ತೇಜನಗೊಂಡ ಆಚಾರ್ಯರು ಫಸ್ಟ್ ಗ್ರೇಡ್ ಪ್ಲೀಡರಶಿಪ್ ಪರೀಕ್ಷೆಯನ್ನೂ ಬರೆದು ಉತ್ತೀರ್ಣರಾದರು.ತದನಂತರ ಇವರ ಬೇಡಿಕೆ ಹೆಚ್ಚಾಗಿ ಉತ್ತಮ ವಕೀಲರೆನಿಸಿದರು.

ಇದಲ್ಲದೇ ರಂಗಭೂಮಿಯಲ್ಲೂ ತಮ್ಮದೇ ಸಾಧನೆ ಮಾಡಿದ ನಿದರ್ಶನಗಳನ್ನು ಕಾಣಬಹುದು. ನಾಟಕವನ್ನು ಎಲ್ಲ ವರ್ಗದ ಜನರಿಗೆ ಮೆಚ್ಚುಗೆಯಾಗುವಂತೆ ಕಥೆಯನ್ನು ರಚಿಸುತ್ತಿದ್ದರು.ಅಲ್ಲದೆ ಅಲ್ಲಿಯವರೆಗೆ ಇದ್ದ ದೃಶ್ಯಗಳಾಧರಿತ ನಾಟಕಕ್ಕಿಂತ ಭಿನ್ನವಾಗಿ ತಾವು ಬರೆದ  ಕಥೆಯನ್ನು ಅಂಕಗಳಾಗಿ ವಿಂಗಡಿಸಿ ನಾಟಕಗಳನ್ನು ಬರೆಯುವ ಹೊಸ ವಿಧಾನಕ್ಕೆ ನಾಂದಿಯಾಡಿದರು.ಅಲ್ಲದೇ ಯಾವತ್ತೂ ದುಃಖಾಂತ ನಾಟಕಗಳನ್ನು ಇಷ್ಟಪಡುತ್ತಿದ್ದಿಲ್ಲ.ಇಷ್ಟವಾದ ನಾಟಕಗಳು ದುಃಖಾಂತವಾಗಿದ್ದರೂ,ಅವುಗಳನ್ನು ಪರಿಷ್ಕರಿಸಿ ಸುಖಾಂತ ನಾಟಕಗಳನ್ನಾಗಿ ರಚಿಸಿ,ನಿರ್ದೇಶಿಸುತ್ತಿದ್ದರು.ಆ ರೀತಿಯಲ್ಲಿ ಬರೆದ ಹಲವು ನಾಟಕಗಳು ಯಶಸ್ವಿ ಪ್ರದರ್ಶನ ಕಂಡಿವೆ.ನಿದರ್ಶನವೆಂದರೆ ಯಾವುದೋ ಪ್ರಕರಣಕ್ಕೆ ಸಿಲುಕಿ ಕೈ ಕಾಲುಗಳನ್ನು ಕಳೆದುಕೊಂಡು ನಾಟಕದ ಅಂತ್ಯದಲ್ಲಿ ಸಾಯುವ ಸಾರಂಗಧರ ನಾಟಕದ ದೃಶ್ಯವನ್ನು ,ಅಚಾರ್ಯರು  ಸಾರಂಗಧರ ದೋಷಾರೋಪಣೆ ಮಾಡಿದ ಚಿತ್ರಾಂಗಿನಿಯನ್ನು ರಾಜ ನರೇಂದನ ನ್ಯಾಯಾಲಯದಲ್ಲಿ ಕೂಲಂಕುಷವಾಗಿ ಚರ್ಚಿಸಿ ಆಚಾರ್ಯರೇ ಸ್ವತಃ ದೂಷಿತನ ಪರ ವಾದಿಸಿ ನ್ಯಾಯ ದಕ್ಕಿಸುವ ಅದ್ಭುತ ಸನ್ನಿವೇಶದೊಂದಿಗೆ ಪರಿಷ್ಕರಿಸಿ ಸುಖಾಂತಗೊಳಿಸಿದ್ದಾರೆ.

   ಇದಲ್ಲದೆ ಆಚಾರ್ಯರು ರಂಗಾಸಕ್ತಿಯನ್ನು ಹೊಂದಿದ್ದರಿಂದ 1886 ರಲ್ಲಿ ಬಳ್ಳಾರಿಯಲ್ಲಿ ಮೊದಲ ಬಾರಿಗೆ ಪರ್ಷಿಯನ್ ನಾಟಕ ಕಂಪನಿ ಶೈಲಿಯಲ್ಲಿ "ಸರಸ ವಿನೋದಿನಿ ಸಭಾ" ಎಂಬ ನಾಟಕ ತಂಡವನ್ನು ಸ್ಥಾಪಿಸಿದರು. ಈ ಮೂಲಕ ರಂಗಭೂಮಿಯಲ್ಲಿ ಹೊಸ ಹೊಸ ಆವಿಷ್ಕಾರವನ್ನು ಕಂಡುಕೊಂಡು ಪ್ರಯೋಗ ಮಾಡಿದರು. ಅಂತೆಯೇ 1887 ರಲ್ಲಿ ಸ್ನೇಹಾನಿರುದ್ಧ ಎಂಬ ನಾಟಕವನ್ನು ರಚಿಸಿ ನಿರ್ದೇಶಿಸಿ ಪ್ರದರ್ಶನ ಮಾಡಿದರು. ಅಲ್ಲದೆ ಈ ನಾಟಕಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿದರು ಅಂತೆಯೇ ಆಚಾರ್ಯರು ಒಬ್ಬ ನಟ, ನಿರ್ದೇಶಕ, ನಾಟಕಕಾರ, ಸಂಗೀತಗಾರ ಎಂದು ಗುರುತಿಸಿಕೊಂಡರು. ಚಿತ್ರನಳಿಯ ನಾಟಕದಲ್ಲಿ ಬಾಹುಕ,ವಿಷಾದ ಸಾರಂಗಧರ ನಾಟಕದಲ್ಲಿ ರಾಜನರೇಂದ್ರ,ಪಾದುಕ ಪಟ್ಟಾಭಿಷೇಕ ದಲ್ಲಿ ದಶರಥ ಹಾಗೂ ಅಭಿಜ್ಞಾನ ಮಣಿಮಂತದಲ್ಲಿ ದುಷ್ಟ ಬುದ್ಧಿಯ ಪಾತ್ರಗಳಲ್ಲಿ ಮಿಂಚುವ ಮೂಲಕ ಪ್ರೇಕ್ಷಕರ ಮನದಾಳದಲ್ಲಿ ನಟರಾಗಿಯೂ ಹೆಸರಾಗಿದ್ದಾರೆ.

  ಇಷ್ಟಲ್ಲದೆ ಜನರಲ್ಲಿ ನಾಟಕದ ಬಗ್ಗೆ ಇದ್ದ ಕೀಳಿರಮೆಯನ್ನು ಹೋಗಾಡಿಸುವ ಸಲುವಾಗಿ ಆಂದ್ರ  ಕನ್ನಡ ಕವಿ ಪಂಡಿತ ಸಂಘ ಸಮ್ಮೇಳನವನ್ನು ತುಂಬಾ ವಿಜೃಂನಣೆಯಿಂದ ನೆರವೇರಿಸಿದರು. ಇದರ ನಂತರ ಒಂಟಿ ಮಿಟ್ಟಿ ಗ್ರಾಮದ ವಾವಿಲಿಕೊಲನ ಸುಬ್ಬರಾವ್ ರ ಆಂಧ್ರ ವಾಲ್ಮೀಕಿ ರಾಮಾಯಣ ಗ್ರಂಥ ಸಮರ್ಪಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಂದಿನ ರಾತ್ರಿ ಅಲ್ಲಿಯೇ ಶ್ರೀರಾಮ ಪಾದುಕ ಪಟ್ಟಾಭಿಷೇಕ ನಾಟಕವನ್ನು ಪ್ರದರ್ಶಿಸಿ ಬಂದ 1500 ರೂ ಹಣವನ್ನು ಶ್ರೀರಾಮನ ಗುಡಿಯೋದ್ಧಾರಕ್ಕೆ ನೀಡಿದ್ದರು.

    ಇವರಿಗಿಂತ ಪೂರ್ವದಲ್ಲಿ ತೆಲುಗಿನಲ್ಲಿ  ಸಂಸ್ಕೃತದ ನಾಟಕಗಳ ಅನುವಾದಿತ ತೆಲುಗು ನಾಟಕಗಳಿದ್ದವು.ಆದರೆ ಇವರ ಸಾಹಿತ್ಯ ಮತ್ತು ರಂಗ ಕೃಷಿಯಿಂದಾಗಿಯೇ ತೆಲುಗಿನಲ್ಲಿ ಸ್ವತಂತ್ರ ಕತೆಯಾಧಾರಿತ ನಾಟಕಗಳು ಜನ್ಮತಳೆದವೆಂದರೆ ತಪ್ಪಾಗಲಾರದು.ಹೀಗೆ ಕನ್ನಡ ಮತ್ತು ತೆಲುಗಿನಲ್ಲಿ ಬಹಳಷ್ಟು ನಾಟಕಗಳನ್ನು ಬರೆದಿದ್ದಾರೆ. ಅವುಗಳೆಂದರೆ ಸ್ನೇಹಾನಿರುದ್ಧ(ಕ), ಚಿತ್ರನಳಿಯಂ,ಉಪೇಂದ್ರ ವಿಜಯ (ಕ),ಮದನ ವಿಲಾಸಮು,ಪಾದುಕಾ ಪಟ್ಟಾಭಿಷೇಕಮು,ಮೋಹಿನಿ ರುಕ್ಮಾಂಗದ,ಭಕ್ತ ಪ್ರಹ್ಲಾದ,ರೋಷನಾರಾ ಶಿವಾಜಿ,ಸಾವಿತ್ರಿ ಚಿತ್ರಾಶ್ವಮು, ವಿಷಾದ ಸಾರಂಗಧರ,ಬೃಹನ್ನಳೆ,ಪಾಂಚಾಲಿ ಸ್ವಯಂವರ,ಪ್ರಮೀಳಾರ್ಜುನಿಯಮು,ಸೀತಾ ಸ್ವಯಂವರ,ಚಿರಕಾರಿ,ಉಷಾ ಪರಿಣಯಮು,ಹರಿಶ್ಚಂದ್ರ, ಗಿರಾಜ ಕಲ್ಯಾಣಮು,ಅಭಿಜ್ಞಾನ ಮಣಿಮಂತಮು ಹೀಗೆ ಒಟ್ಟು 30 ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ.ಇಷ್ಟೇ ಅಲ್ಲದೇ ಬಳ್ಳಾರಿ ರಾಘವ, ಧರ್ಮಾವರಂ ಗೋಪಾಲಾಚಾರ್ಯರಂತಹ ಅನೇಕ ಶಿಷ್ಯರನ್ನು ರಂಗ ಸಂಪನ್ನರನ್ನಾಗಿಸಿದ್ದಾರೆ.

 ಇವರ ಈ ಅಮೋಘ ಸಾಹಿತ್ಯ ರಂಗಸೇವೆಯನ್ನು ಗುರುತಿಸಿ 1891ರಲ್ಲಿ  ಮದ್ರಾಸ್ ಸಂಸ್ಕೃತ ಪಂಡಿತ ಓಪರ್ಟ್ ಇವರ  ನಾಟಕವನ್ನು ಮೆಚ್ಚಿ ಇವರಿಗೆ ರತ್ನಖಚಿತ ಬಂಗಾರದ ಪದಕ ನೀಡಿ ಗೌರವಿಸಿದ್ಧು. ಅಲ್ಲದೆ ಅಂದಿನ ಗದ್ವಾಲ ಮಹಾರಾಜರು ಕ್ರಿ.ಶ.1910 ರಂದು  ರತ್ನಖಚಿತ ಉಡುಗೊರೆಯೊಡನೆ "ಆಂಧ್ರ ನಾಟಕ ಕವಿತಾ ಪಿತಾಮಹ" ಎಂಬ ಬಿರುದು ನೀಡಿ ಸನ್ಮಾನಿಸಿದ್ದರು.ಬಳ್ಳಾರಿಯ ಪ್ರಮುಖರೆಲ್ಲಾ ಸೇರಿ ಇವರಿಗೆ ಮುತ್ತು ರತ್ನದ ಕಿರೀಟ ತೋಡಿಸಿ ಸನ್ಮಾನಿಸಿದ್ದರು.

 ರಂಗದ ಮೇಲೆ ಮಡಿಯಬೇಕೆಂಬ ಅತೀವ ಆಸೆ ಹೊಂದಿದ ಈ ಮಹಾನ್ ಚೇತನ ಕ್ರಿ.ಶ 1912ರಂದು ಆಲೂರಿನ ಕೋರ್ಟಿನಲ್ಲಿ ವಿಚಾರಣೆಗೆಂದು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ನಿಧನರಾದರು. ನಂತರ ಅಲ್ಲಿಂದ ಅವರ ಪಾರ್ಥಿವ ಶರೀರವನ್ನು ಬಳ್ಳಾರಿಗೆ ತಂದು ಇಂದಿನ ರಾಘವೇಂದ್ರ ಟಾಕೀಸ್ ಎದುರುಗಡೆ ಇದ್ದ ಹಳೆ ಶಾಲಾ ಮೈದಾನದಲ್ಲಿ ಇಡಲಾಯಿತು. ಇಂದಿಗೂ ಅವರ ಮೊಮ್ಮಗ ಪ್ರಸಿದ್ಧ ವಕೀಲರಾದ ಮಹೇಂದ್ರನಾಥರವರು ಅವರ ಅಳೆತ್ತರದ ಪ್ರತಿಮೆ ನಿಲ್ಲಿಸಿ ಪ್ರತಿವರ್ಷ ತಾತರ ಹೆಸರಲ್ಲಿ ರಂಗೋತ್ಸವ ಮತ್ತು ರಂಗ ಪದವೀಧರರ ಶಿಕ್ಷಣಕ್ಕೆ ಧನಸಹಾಯ ಮಾಡುತ್ತಿದ್ದಾರೆ.ಅಲ್ಲದೆ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಹೆಸರಲ್ಲಿ ಸ್ವಂತ ಖರ್ಚಿನಲ್ಲಿ ಕಿರು ರಂಗ ಮಂದಿರವನ್ನು ಮತ್ತು ರಂಗಸಂಸ್ಥೆಯನ್ನು ಗೆಳೆಯ ರಂಗಕರ್ಮಿ ದಿ.ಶಂಕರ್ ನಾಯ್ಡು ಮತ್ತು ರಂಗ ಉಪಾನ್ಯಾಸಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಯೋಜನೆಯಂತೆ ನಿರ್ಮಿಸಿ ಅನೇಕ ರಂಗ ಚಟುವಟಿಕೆಯ ತಾಣವಾಗಿಸಿದ್ದಾರೆ.



ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಸಾಹಿತಿ / ಬರಹಗಾರರು

9379857775

manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.