ರಂಗ ಮಾಲಿಕೆ -೬೬ ಅಗಸನೂರು ದತ್ತಪ್ಪ

ಬಣ್ಣದ ಲೋಕದಿಂದ ಮರೆಯಾದ ಕಲಾರತ್ನ ‘ಅಗಸನೂರು ದತ್ತಪ್ಪ' ಸಮಾಜದಲ್ಲಿ ಯಾವುದೇ ಒಂದು ವಸ್ತು, ವ್ಯಕ್ತಿ, ವಿಷಯದ ಕುರಿತಾದ ಅಲ್ಪಸ್ವಲ್ಪ ಅವಶೇಷ ಅಥವಾ ಇತಿಹಾಸದ ಕುರುಹುಗಳು ಇಲ್ಲದೇ ಹೋದರೆ, ಹಿಂದೆ ಆ ವಿಚಾರ ಎಷ್ಟೇ ಪ್ರಸಿದ್ಧಿಯಾಗಿದ್ದರೂ ಅದನ್ನು ಕಾಲಕ್ರಮೇಣ ಮರೆತುಬಿಡುತ್ತಾರೆ. ಅದರ ಪುನರುಚ್ಛಾರವಾಗದ ಹೊರತು ಅದು ಅಸ್ತಿತ್ವದಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ನಾಡು ನುಡಿ ಕಂಡ ಶ್ರೇಷ್ಠ ಕಲಾ ದಿಗ್ಗಜ ‘ಅಗಸನೂರು ದತ್ತಪ್ಪ' ಒಂದು ನೈಜ ನಿದರ್ಶನ. ದತ್ತಪ್ಪನವರು ೨೦ನೇ ಶತಮಾನದ ಆದಿಯಲ್ಲಿ ಕರ್ನಾಟಕಾಂಧ್ರದ ಗಡಿಭಾಗದ ಸಾಂಸ್ಕೃತಿಕ ಪರಂಪರೆಯಲ್ಲಿ ಅದ್ಭುತ ಕಲಾಕರನಾಗಿ ಬಾಳಿ ಬದುಕಿದ ಮಹಾ ಮೇಧಾವಿ. ಆದರೆ ಅವರು ಹತರಾದ ನಂತರ ಕಾಲಕ್ರಮೇಣ ಅವರ ಅವಶೇಷಗಳು ಕಲಾ ಲೋಕದಿಂದ ಕಣ್ಮರೆಯಾದದ್ದು ನೆನೆದರೆ ತುಂಬಾ ವಿಷಾಧನೀಯವೆನಿಸುತ್ತದೆ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗಡಿನಾಡಿನ ಹಳ್ಳಿ ಅಗಸನೂರಿನವರು. ತಂದೆ ಗಡ್ಡೆ ತಿಮ್ಮಣ್ಣನಾಯಕ ತಾಯಿ ಮಾರೆಮ್ಮ. ಬಡ ಕೃಷಿಕ ಕುಟುಂಬದಲ್ಲಿ ೦೬.೦೨.೧೯೩೨ರಲ್ಲಿ ಜನಸಿದ ಇವರಿಗೆ ತಾಯಿಯೇ ಮೂಲ ಪ್ರೇರಣೆ. ಮಾರೆಪ್ಪ ಇವರ ಮೊದಲ ಹೆಸರು. ಮಾರೆಪ್ಪನಿಂದ ದತ್ತಪ್ಪ, ದತ್ತಾತ್ರೇಯ ಆದ ಸಂಗತಿಗಳು ತುಂಬಾ ರೋಚನೀಯವಾಗಿವೆ. ರೈತಾಪಿ ಕೆಲಸಗಳಲ್ಲಿ ಜನಪದ ಗೀತೆಗಳನ್ನು ಹಾಡುತ್ತಾ ಮೈಮನಸ್ಸಿನ ಭಾರ ಇಳಿಸಿಕೊಳ್ಳುತ್ತಿದ್ದ ಮಾರೆಮ್ಮರಿಗೆ ಮಗನದೇ ದೊಡ್ಡ ಚಿಂತೆ. ಆತನನ್ನು ವಿದ್ಯಾವಂತನನ್ನಾಗಿ ಮತ್ತು ಸಂಗೀತಗಾರರನ್ನಾಗಿಸುವ ಅತೀವ ಹಂಬಲವಿತ್ತು. ಅಂತೆಯೇ ಮಗನಲ್ಲಿ ವಿದ್ಯೆಯನ್ನು ತುಂಬುವ ಸಲುವಾಗಿ ಊರಿನ ಶಾಲೆಗೆ ಸೇರಿಸಿದರೆ, ಮಾರೆಪ್ಪ ಹೋಗಲು ನಿರಾಕರಿಸುತ್ತಿದ್ದರು. ಆದರೂ ಬಿಡದೆ ಅಮ್ಮನ ಹೊಡೆತೆದ ಬಲವಂತಕ್ಕೆ ೭ನೇ ತರಗತಿಯವರೆಗೂ ಓದಿದರು. ಆದರೆ ಅಲ್ಲಿಗೂ ಬಗ್ಗದ ಮಾರೆಪ್ಪ ಊರಲ್ಲಿ ನಡೆಯುತ್ತಿದ್ದ ಬಯಲಾಟಗಳಲ್ಲಿ ಸ್ತಿçà ಪಾತ್ರಗಳನ್ನು ಮತ್ತು ಮೇಳಗಾರನಾಗಿ ಭಾಗವಹಿಸುತ್ತಿದ್ದರು. ಇದಲ್ಲದೇ ಕೆಲಕಾಲ ಪುರಾಣ ಪ್ರವಚನಗಳಲ್ಲಿ ಭಾಗವಹಿಸಲಾರಂಭಿಸಿದರು. ಕಲಾ ಸಾಗರದಲ್ಲಿ ಮೈಮರೆತು ಅಲೆಯಾಗಿ ಅಲೆಯುವಾಗ ತಂದೆ ತಾಯಿಯ ಬಲವಂತಕ್ಕೆ ೨೦ರ ಅಸುಪಾಸಿನಲ್ಲಿಯೇ ಇವರಿಗೆ ‘ಯಲ್ಲಮ್ಮ' ಎಂಬುವರೊಡನೆ ವಿವಾಹವಾಗುತ್ತದೆ. ಅಲ್ಲದೆ ಮೂರು ಮಕ್ಕಳ ತಂದೆಯಾಗುತ್ತಾರೆ. ಜವಾಬ್ದಾರಿ ತಂದೆಯಾಗಿ ಕಲಾಗುರುವಾಗಿ ತಮ್ಮ ಮಕ್ಕಳಲ್ಲೂ ಸಂಗೀತದ ಅಭಿರುಚಿಯನ್ನು ತುಂಬುತ್ತಾರೆ. ಆದರೆ ಕುಟುಂಬದ ಜವಾಬ್ದಾರಿ ಹೊರದ ಮಗನನ್ನು ಕಂಡ ಪೋಷಕರು ಮಗನಿಗೆ ಆತ ನಂಬಿರುವ ಕಲೆಯಾದರೂ ಕೈಹಿಡಿಯಲೆಂಬ ಉದ್ದೇಶದಿಂದ ಸಂಗೀತದ ಸಂಸ್ಕಾರ ನೀಡಲು ಮುಂದಾದರು. ಆಗ ಗಡಿಭಾಗದ ಆಂಧ್ರದ ಭದ್ರಾಚಲಂನಲ್ಲಿ ನೆಲೆಸಿದ್ದ ಕನ್ನಡದ ಕೋಗಿಲೆ ಪಿ.ಕಾಳಿಂಗರಾಯರ ಸಂಗೀತ ಪ್ರೌಢಿಮೆ ಇಡೀ ನಾಡಿಗೆ ಅವರಿಸಿತ್ತು. ಇದನ್ನರಿತ ಮಾರೆಮ್ಮನವರು ಆದೋನಿಯ ಶ್ರೀಮಂತ ರೆಡ್ಡಿಗಳ ಸಹಾಯದಿಂದ ಮಾರೆಪ್ಪನವರನ್ನು ಕಾಳಿಂಗರಾಯರ ಬಳಿಗೆ ಸೇರಿಸುತ್ತಾರೆ. ಅಲ್ಲಿಂದಲೇ ಇವರ ಬಣ್ಣದ ಬದುಕಿನ ಬಾಗಿಲು ತೆರೆದುಕೊಳ್ಳುತ್ತದೆ. ಒಂದೆರೆಡು ವರ್ಷಗಳ ಕಾಲ ಕಾಳಿಂಗರಾಯರ ಬಳಿಯಲ್ಲಿ ಸಂಗೀತದ ರಾಗಗಳನ್ನು, ಬಗೆಬಗೆಯ ಸಂಗೀತ ವಾದ್ಯಗಳ ನುಡಿಸುವ ಜ್ಞಾನವನ್ನು, ನೃತ್ಯ ಮತ್ತು ನಾಟಕದಲ್ಲಿನ ಅಭಿನಯದ ಮಟ್ಟುಗಳ ಜಾಣ್ಮೆಯನ್ನು ತುಂಬು ಮನಸ್ಸಿನಿಂದಲೇ ಅವಿರ್ಭವಿಸಿಕೊಳ್ಳುತ್ತಾರೆ. ಅಲ್ಲದೆ ಬಾಲ್ಯದಿಂದಲೇ ಗಡಿಭಾಗದ ತಮ್ಮೂರಿನ ಸುತ್ತಮುತ್ತ ನಡೆಯುತ್ತಿದ್ದ ನಾಟಕ ಮತ್ತು ಬಯಲಾಟಗಳಿಂದ ಪ್ರೇರಿತರಾಗಿದ್ದ ಮಾರೆಪ್ಪರಿಗೆ ಗುರುಗಳು ಹೇಳಿಕೊಡುತ್ತಿದ್ದ ಪಾಠಗಳೆಲ್ಲವೂ ಸರಳವೆನಿಸ ತೊಡಗಿದವು. ಆ ಮೂಲಕ ಇವರ ಮನಸ್ಸು ಚೌಪಚಾರಿಕ ಶಿಕ್ಷಣಕ್ಕಿಂತ ಅನೌಪಚಾರಿಕ ಶಿಕ್ಷಣದ ಕಡೆ ತುಂಬಾ ಅಕರ್ಷಣೆಗೆ ಒಳಗಾಗಿತ್ತೆಂಬುವುದನ್ನು ಇಲ್ಲಿ ಅರಿಯಬಹುದು. ಪಿಟೀಲು, ಹಾರ್ಮೋನಿಯಂ, ತಬಲ, ಭರತನಾಟ್ಯ ಮತ್ತು ಅಭಿನಯದ ಸೂಕ್ಷ್ಮಗಳನ್ನು ಕಲಿತು ಸಕಲವಿದ್ಯಾ ಪರಾಂಗತರಾದ ಮೇಲೆ ಮಾರೆಪ್ಪರಿಗೆ ಕಾಳಿಂಗರಾಯರು ಹೊಸದಾಗಿ ‘ದತ್ತಾತ್ರೇಯ' ಎಂಬ ನಾಮದಿಂದ ಕರೆಯಲಾರಂಭಿಸಿದರು. ಅಂತೆಯೇ ಮಾರೆಪ್ಪ ಮುಂದೆ ದತ್ತಾತ್ರೇಯ, ದತ್ತಪ್ಪ, ಅಗಸನೂರು ದತ್ತಪ್ಪ ಎಂಬ ಹೆಸರುಗಳಿಂದಲೇ ಲೋಕಪ್ರಸಿದ್ಧರಾದರು. ಸಕಲವಿದ್ಯೆಯನ್ನು ಪಡೆದು ಹುಟ್ಟೂರಿಗೆ ಬಂದ ಸಮಯದಲ್ಲಿ ಹಲವು ಕಡೆ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಲೇ ಬಹುಬೇಗ ಜನಮನ್ನಣೆಯನ್ನು ಗಳಿಸಿದರು. ಬಯಲಾಟಗಳಿಗೆ, ನಾಟಕಗಳಿಗೆ ಅಲ್ಲದೇ ಹಳ್ಳಿ - ದಿಲ್ಲಿ ಎನ್ನದೇ ಬೆಂಗಳೂರು, ರಾಯಚೂರು, ಹೈದ್ರಾಬಾದ್, ಮೈಸೂರು, ಮದ್ರಾಸ್ ಹೀಗೆ ನಾನಾ ಕಡೆ ತಮ್ಮ ಇಷ್ಟದ ಪಿಟೀಲು ಸಂಗೀತ ಕರ‍್ಯಕ್ರಮಗಳನ್ನು ನೀಡಿದರು. ಜೊತೆಗೆ ಇವರ ರಂಗ ಕಾಯಕ ಆಂಧ್ರದ ಕೋಗಿಲೆತೋಟ ಎಂಬ ಗ್ರಾಮದಲ್ಲಿ ಬಯಲಾಟವೊಂದನ್ನು ನಿರ್ದೇಶನ ಮಾಡುವ ಮೂಲಕ ಶುರುವಾಯಿತು. ಇದರ ಯಶಸ್ಸಿನ ಬೆನ್ನಲ್ಲೇ ಭಕ್ತ ಸುಧನ್ವ, ಉತ್ತರಭೂಪ, ಕುರುಕ್ಷೇತ್ರ, ಪಾಂಡು ವಿಜಯ, ರಕ್ತ ರಾತ್ರಿ, ಚಿತ್ರಾಂಗದ, ರೇಣುಕಾ ಯಲ್ಲಮ್ಮ, ಅಶ್ವಮೇಧ, ದೀಪಾವಳಿ, ನಮಸ್ಕಾರ ನಾಟಕ, ರತ್ನ ಮಾಂಗಲ್ಯ ಹೀಗೆ ಸಾಲು ಸಾಲು ಹವ್ಯಾಸಿ, ಪೌರಾಣಿಕ ನಾಟಕ, ಬಯಲಾಟಗಳ ನಿರ್ದೇಶನಕ್ಕೂ ಕೈ ಹಾಕಿದರು. ಕಲಾ ಬದುಕಿನ ಮೊದಲ ದಿನಗಳನ್ನು ರಂಗಭೂಮಿಯಲ್ಲಿ ಸಂಗೀತ ನಿರ್ದೇಶನ ಮಾಡುವ ಸಲುವಾಗಿ ಕೂಕನೂರು ಬಾಬಣ್ಣ, ಕೊತ್ತಲಚಿಂತ ವಿರುಪಾಕ್ಷಿರೆಡ್ಡಿ, ಡಾ.ಶಿವಕುಮಾರ ತಾತನಂತಹ ಹಲವು ಮೇರು ನಟರ ಸಹಕಾರದೊಂದಿಗೆ ರಾತ್ರಿಯಿಡೀ ಹಾಡುಗಳ ರಚನೆ ಮತ್ತು ರಾಗ ಸಂಯೋಜನೆಯಲ್ಲಿ ಕಳೆಯುತ್ತಿದ್ದರು. ಅಲ್ಲದೆ ಮರುದಿನ ಬೆಳಿಗ್ಗೆ ಅಕ್ಷರಸ್ಥ ಕಲಾವಿದರಿಗೆ ತುಂಬಾ ಅಚ್ಚುಕಟ್ಟಾಗಿ ಸಾಹಿತ್ಯ ಬರೆದುಕೊಟ್ಟು ಸೂಕ್ತ ರೀತಿಯಲ್ಲಿ ಕಂಠಪಾಠ ಮಾಡಿಸುತ್ತಿದ್ದರು. ಇನ್ನೂ ಅನಕ್ಷರಸ್ಥರಿಗೆ ಅಲ್ಲಿಯೇ ತಿದ್ಧಿ ತೀಡಿ ತಾಳ್ಮೆಯಿಂದಲೇ ಕಲಿಸುತ್ತಿದ್ದರು. ಅವರ ಬೋಧನಾ ಶೈಲಿಯ ಕುರಿತು ಅವರ ಶಿಷ್ಯರ ಬಳಗ ಇಂದಿಗೂ ನೆನೆಯುತ್ತದೆ. ದತ್ತಪ್ಪನವರು ಕಲೆಯನ್ನು ಜೀವಾಳವಾಗಿದ್ದರಿಂದಲೂ ಮತ್ತು ಬಡತನ ಇವರ ಹೆಗಲಿಗೆ ಬಿದ್ದ ಕಾರಣ ಹಗಲಿರುಳು ಕಲಾಕಾಯಕ ಮಾಡಲೇಬೇಕಾಗಿತ್ತು. ನಾಟಕ / ಬಯಲಾಟಗಳು ಇದ್ದಾಗ ಅವುಗಳ ಆಸರೆ, ಇಲ್ಲವಾದಲ್ಲಿ ಪುರಾಣಗಳಿಗೆ ಒಡನಾಡಿ ಪ್ರವಾಚಕ ನಾಗಪ್ಪರೊಂದಿಗೆ ಪಿಟೀಲು, ಹಾರ್ಮೋನಿಯಂ ನುಡಿಸಲು ಹೋಗಿ ಬಂದ ದಕ್ಷಿಣೆಯಲ್ಲಿ ಅರ್ಧ ತಗೊಂಡು ಹಿಂದಿರುಗುತ್ತಿದ್ದರು. ಆ ಮೂಲಕ ಇವರ ಕಲಾ ಪ್ರೌಢಿಮೆಗೆ ತಕ್ಕಂತೆ ಹಣ ದೊರೆಯುತ್ತಿದ್ದಿಲ್ಲವೆಂಬುದನ್ನು ಸ್ಮರಿಸಬಹುದು. ಅಲ್ಲದೇ ಇವರ ಜೀವನ ನಿಕೃಷ್ಟವಾಗಿದ್ದರೂ ಇವರಲ್ಲಿನ ಕಲೆ ಇವರನ್ನು ಮೇಲ್ಪಂಕ್ತಿಯಲ್ಲಿರಿಸಿತ್ತು. ಇವರ ಕಲಾ ನೈಪುಣ್ಯತೆಗೆ ನಿದರ್ಶವೆಂಬAತೆ ಒಮ್ಮೆ ಅವರು ಮಾನ್ವಿಯ ಪ್ರಸಿದ್ಧ ಹೋಟೆಲ್ ಶ್ರೀ ಗುರುಕೃಪಾದಲ್ಲಿ ಪಂಡಿತ ಭೀಮಸೇನ ಜೋಷಿಯವರೊಂದಿಗೆ ಸಂಗೀತ ಜುಗಲ್ಬಂದಿಯಲ್ಲಿ ಭಾಗವಹಿಸಿ, ಅವರನ್ನು ಸೋಲಿಸಿ ಅವರಿಂದಲೇ ಶಹಬ್ಬಾಶ್‌ಗಿರಿಯನ್ನು ಪಡೆದರು. ಆದರೂ ಯಾವುದೇ ಆಹಂ ಇಲ್ಲದೇ ಗಡಿನಾಡಿನ ಹಳ್ಳಿ ಹಳ್ಳಿಗೂ ತೆರಳಿ ಸಾಮಾಜಿಕ, ಪೌರಣಿಕ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದರು. ಉಭಯಭಾಷಾ ಕಲಾವಿದರಾದ ಇವರು ಆಂಧ್ರ ಮತ್ತು ಕರ್ನಾಟಕದ ಎರಡು ನಾಡಿನಲ್ಲೂ ಸುಭದ್ರಮ್ಮ ಮನ್ಸೂರು, ಆದವಾನಿ ಲಕ್ಷ್ಮೀದೇವಿ, ಪಂಡರಿಭಾಯಿ, ರಮಾದೇವಿ, ಗೋರ್ಕಲ್ ರಾಜೇಶ್ವರಿ, ಹುಸೇನ್ ಸಾಬ್, ಡಿ.ವೆಂಕೋಬ, ಎಸ್.ವೆಂಕೋಬ, ಭಗವಂತಪ್ಪ ಇನ್ನೂ ಹಲವಾರು ಶಿಷ್ಯರಿಗೆ ಸಂಗೀತ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಅದಲ್ಲದೆ ಇತ್ತೀಚಿನ ಸಿನಿ ಪ್ರಪಂಚದಲ್ಲಿ ಹೆಸರು ಮಾಡಿದ ಎಂ.ಎA.ಕೀರವಾಣಿಯು ಮಾನ್ವಿಯ ಅಡವಿ ರಾಮೇಶ್ವರ ಕ್ಯಾಂಪಿನಲ್ಲಿ ವಾಸ ಮಾಡುವಾಗ ಇವರ ಸಂಗೀತ ಶಕ್ತಿಯ ಕುರಿತು ತಿಳಿದು ಸ್ವತಃ ದತ್ತಪ್ಪರಲ್ಲಿಗೆ ಬಂದು ನಮಸ್ಕರಿಸಿ ಕಾರಲ್ಲಿಯೇ ಪ್ರತಿನಿತ್ಯ ತಮ್ಮ ಮನೆಗೆ ಕರೆದೊಯ್ದು ಶಾಸ್ತ್ರೀಯ ಸಂಗೀತವನ್ನು ಹೇಳಿಸಿಕೊಳ್ಳುತ್ತಿದ್ದರು. ಅಲ್ಲದೇ ತಾವು ಸಿನಿರಂಗಕ್ಕೆ ತೆರಳುವಾಗ ದತ್ತಪ್ಪರನ್ನೂ ಸಹ ಕರೆದರೂ, ಅವರು ಮಡದಿ-ಮನೆ-ಮಕ್ಕಳು ಇತ್ಯಾದಿ ಕಾರಣಗಳನ್ನು ಹೇಳಿ ಬಂದ ಸುವರ್ಣಾವಕಾಶವನ್ನು ತಿರಸ್ಕರಿಸಿಬಿಟ್ಟರು. ಇದಲ್ಲದೇ ನಾಡಿನ ಹಿರಿತೆರೆ-ಕಿರುತೆರೆಯ ಅಪೂರ್ವ ಅವಕಾಶಗಳು ಬಂದಾಗಲೂ ಅವರೇಳಿದ್ದು "ಕ್ರಿಯಾಶೀಲ ಬದುಕಿನ ಆಸ್ತಿಯಾಗಿರುವ ಕಲೆಯೆಂಬುದು ಕೃತಕವಾಗಿ, ಮಾರಾಟದ ಸರಕಾಗಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವುದಕ್ಕಿಂತ, ನೊಂದವರ ಮತ್ತು ಕಲಾಸಕ್ತರ ಪಾಲಿನ ಬೆಳಕಾಗಿ, ಅವರ ಬದುಕಿನ ಹಾಡಿಗೆ ದನಿಯಾಗಿ ನಿಲ್ಲುವುದೇ ಲೇಸು" ಎಂದು ಭಾವಿಸಿ ಮಾನ್ವಿಯಲ್ಲೇ ಕೊನೆಯವರೆಗೂ ಉಳಿದುಕೊಂಡು ಕಲಾ ಸೇವೆ ಮಾಡಿದರು. ದತ್ತಪ್ಪನವರು ಕೊನೆಯವರೆಗೂ ಯಾವುದೇ ಪ್ರಶಸ್ತಿ ಪುರಸ್ಕಾರಗಳನ್ನು ಬಯಸಲಿಲ್ಲ. ಆದರೆ ಕೆಲವೊಂದು ಪ್ರಶಸ್ತಿಗಳು ಅವರು ಇದ್ದಲ್ಲಿಗೆ ಧಾವಿಸಿದವು ಎಂಬುದಕ್ಕೆ ನಡೆದ ಒಂದು ಘಟನೆಯನ್ನು ಇಲ್ಲಿ ಉದಾಹರಿಸಬಹುದು. ಅದು ೧೯೯೧-೯೨ರ ಕಾಲಘಟ್ಟ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪನವರು ಅನ್ಯಕರ‍್ಯದ ನಿಮಿತ್ತ ಮಾನ್ವಿಗೆ ಬಂದು ಕರ‍್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಂದು ದತ್ತನವರ ಸಂಗೀತದೊAದಿಗೆ ಕರ‍್ಯಕ್ರಮ ಆರಂಭವಾಯಿತು. ಅವರ ಸಂಗೀತದ ಮೋಡಿಗೆ ಬೆರಗಾದ ಬಂಗಾರಪ್ಪನವರು ಸ್ಥಳದಲ್ಲಿಯೇ ಇವರಿಗೆ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರಕಟಿದ್ದನ್ನು ಇಂದಿಗೂ ಹಲವರು ನೆನೆಯುತ್ತಾರೆ. ಇಂತಹ ಮೇರು ಕಲಾವಿದರು ದೈವವನ್ನು ಅತಿಯಾಗಿ ನಂಬಿದವರು. ಅಂತೆಯೇ ಬಸವಣ್ಣ, ಅಕ್ಕಮಹಾದೇವಿಯವರ ವಚನಗಳನ್ನು, ದಾಸರ ಕೀರ್ತನೆಗಳನ್ನು ತುಂಬಾ ಮಾರ್ಮಿಕವಾಗಿ ಹಾಡುತ್ತಿದ್ದರು. ಹೀಗೆ ಸಂಗೀತ ಮತ್ತು ರಂಗಭೂಮಿಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾಚೇತನ ೦೬ನೇ ಆಗಸ್ಟ್ ೧೯೯೫ರಲ್ಲಿ ಕಲಾಭೂಮಿಯನ್ನು ಬಿಟ್ಟು ತೆರಳಿದರು. ಗಡಿನಾಡಿನ ರಂಗಭೂಮಿಯನ್ನು ಮೇಲ್ಪಂಕ್ತಿಗೆ ತಂದ ದತ್ತಪ್ಪರ ಕೀರ್ತಿಯನ್ನು ಇನ್ನಾದರೂ ನೆನೆಯುವ ಕರ‍್ಯಗಳಾಗಲಿ. ಅವರ ಕಲಾಕಾಯಕ ಇಂದಿನ ಕಲಾವಿದರಿಗೆ ಮಾದರಿಯಾಗಲಿ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.