ರಂಗ ಮಾಲಿಕೆ -೬೫ ಬಳ್ಳಾರಿ ನೆಲದ ಮಹಾ ಚೇತನ ವೈ.ನಾಗೇಶಶಾಸ್ತ್ರಿಗಳು.
ಬಳ್ಳಾರಿ ನೆಲದ ಮಹಾನ್ ಚೇತನ 'ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸ್ತ್ರಿಗಳು'.
ವ್ಯಕ್ತಿಯೊಬ್ಬ ಒಂದು ನಾಡಿನ ಗಡಿರೇಖೆಯನ್ನು ಗುರುತಿಸುವಲ್ಲಿ ಸಹಾಯವಾಗುತ್ತಾನೆ ಎಂದರೆ, ಬಹುತೇಕ ನಂಬಿಕೆಗೆ ದೂರವಾದ ಮಾತು ಎಂದು ಮೂಗು ಮುರಿಯುವ ಜನರಿದ್ದಾರೆ. ಆದರೆ ಹಲವು ದಶಕಗಳ ಹಿಂದೆ ಅಂತಹದ್ದೊಂದು ನಿದರ್ಶನ ಕಣ್ಮುಂದೆ ನಡೆದುದನ್ನು ನಾವೂ ಈಗಲೂ ಅರಿಯಬಹುದು. ಬಳ್ಳಾರಿಯಂಥ ದ್ವಿಭಾಷಾ ವಾತಾವರಣದ ಜಿಲ್ಲೆಯಲ್ಲಿ ಹುಟ್ಟಿ, ಶೈಕ್ಷಣಿಕ ಪ್ರತಿಕೂಲ ವಾತಾವರಣದಲ್ಲಿ ಬೆಳೆದು, ತಮ್ಮ ಬದುಕಿನ ಬಹುಕಾಲವನ್ನು ಅಲ್ಲಿಯೇ ಕಳೆದು ಸರ್ವದರ್ಶನತೀರ್ಥ, ಸಾಂಖ್ಯತೀರ್ಥಗಳಂಥ ವಿದ್ವತ್ಪದವಿಗಳನ್ನು ಸಂಪಾದಿಸಿ, ಕನ್ನಡದ ಎರಡು ಅರಸು ಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಸಂಸ್ಕೃತ ಕಾವ್ಯಗಳನ್ನು ಕನ್ನಡಕ್ಕೆ ಅನುವಾದ ಮಾಡಿ, ಕನ್ನಡ ಕಲಿಯುವವರಿಗೆ ಕಲಿಸುವವರಾಗಿ, ಕಲಿತವರಿಗೆ ಸಂಘಟಕರಾಗಿ, ಸಂಘಟಕರಿಗೆ ಮಾರ್ಗದರ್ಶಕರಾಗಿ ತಮ್ಮ ನಲವತ್ತನೇ ವಯಸ್ಸಿನಲ್ಲಿಯೇ ಒಂದು ನಾಡಿನ ಸಂಸ್ಕೃತಿಯ ಪ್ರಮುಖ ವಿದ್ಯಮಾನವಾದ ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವನ್ನು ಪಡೆದವರೇ 'ಪಂಡಿತ ವೈ.ನಾಗೇಶ ಶಾಸ್ತ್ರಿಗಳು'.
ಇವರು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಏಳುಬೆಂಚಿ ಗ್ರಾಮದಲ್ಲಿ ನೀಲಮ್ಮ ಮತ್ತು ನಯನಯ್ಯ ಎಂಬ ಬಡಜಂಗಮ ದಂಪತಿಗಳ ಏಳನೇ ಮಗನಾಗಿ ೧೮೯೩ರಲ್ಲಿ ಜನಸಿದರು. ಶಾಸ್ತ್ರಿಗಳ ಮೊದಲ ಹೆಸರು ನಾಗಯ್ಯ. ಇವರ ಕುಟುಂಬ ಬಹುತೇಕ ಜೋಳಿಗೆಯ ಮೇಲೆಯೇ ಅವಲಂಬಿತವಾಗಿತ್ತು. ನಾಗಯ್ಯನವರು ಹುಟ್ಟೂರಿನಲ್ಲಿಯೇ ಮಠದಯ್ಯಗಳ ಹತ್ತಿರ ೪ನೇ ತರಗತಿಯವರೆಗೆ ಅನೌಪಚಾರಿಕ ಶಿಕ್ಷಣ ಪಡೆದರು.
ಬಾಲ್ಯದಲ್ಲಿ ತುಂಬಾ ಚುಟಿಯಾಗಿದ್ದರಿಂದ ಬಹುಬೇಗ ಓದು, ಬರಹದ ಜ್ಞಾನವನ್ನು ಅರಿಗಿಸಿಕೊಂಡಿದ್ದರು.ಅಲ್ಲದೇ ತನ್ನ ಓರಿಗೆಯ ಗೆಳೆಯರೊಂದಿಗೆ ಸೇರಿಕೊಂಡು ನಾಟಕ, ಭಜನೆ, ಬಯಲಾಟ, ಕೋಲಾಟಗಳಲ್ಲಿ ಕ್ರೀಯಾಶೀಲವಾಗಿ ಬೆರೆಯುತ್ತಿದ್ದರು. ಕ್ರಮೇಣ ತನ್ನೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಡೆಯುತ್ತಿದ್ದ ಕೋಲಾಟ - ಬಯಲಾಟಗಳಿಗೆ ೨-೩ ಪದ್ಯಗಳನ್ನು ಗತಿ, ಲಯ ಮತ್ತು ಛಂದಸ್ಸಿಗೆ ತಕ್ಕಂತೆ ಬರೆದುಕೊಡುವುದರ ಮೂಲಕ ಕವಿ ಎಂತಲೇ ಜನಖ್ಯಾತಿಯನ್ನು ಸಹ ಗಳಿಸಿದ್ದರು. ತೊಗಲು ಗೊಂಬೆಯಾಟದ ಮಾದರಿಯಲ್ಲಿ ಕಾಗದದ ಗೊಂಬೆಗಳನ್ನು ಬಟ್ಟೆಯ ಮೇಲೆ ಕುಣಿಸುವ ಆಟವನ್ನು ತೋರಿಸಿ ಕಲೆಯು ಸಿದ್ಧಿಸಿತ್ತು. ತಾನು ಕಲಿತ ವಿಷಯಗಳನ್ನು ತನ್ನೂರಿನ ಮಕ್ಕಳಿಗೆ ಪಾಠ ಹೇಳಿಕೊಡುವ ಮೂಲಕ ನಾಗಯ್ಯವರು 'ಓಚಯ್ಯ'ನೆನಿಸಿದ್ದರು.
ಕಳೆದ ಹತ್ತೊಂಭತ್ತನೆಯ ಶತಮಾನದ ವೀರಶೈವ-ಲಿಂಗಾಯತರ ವಿಧಿವಿಧಾನಗಳೆಲ್ಲಾ ಬ್ರಾಹ್ಮಣರ ಪೌರೋಹಿತ್ಯದಲ್ಲಿಯೇ ನಡೆಯುತ್ತಿ ದ್ದವು. ಆದರೆ ನಾಗಯ್ಯನ ಪ್ರತಿಭೆಯಾದರೂ ಪದ್ಯ ರಚನೆ, ಪಾಠಬೋಧನೆ, ವಿಚಾರ ಪ್ರವಚನಕ್ಕೆ ಮಾತ್ರ ಸೀಮಿತವಾಗಿತ್ತು. ಜ್ಯೋತಿಷ್ಯ, ಗಿಡಮೂಲಿಕೆಯ ವೈದ್ಯವಿಜ್ಞಾನದ ತಿಳುವಳಿಕೆ, ಲೆಕ್ಕಚಾರ, ವ್ಯವಹಾರದ ಕಾಗದಪತ್ರಗಳನ್ನು ಓದಿ ಹೇಳುವುದು. ಇಂಥ ವಿದ್ಯೆಯು ನಾಗಯ್ಯನಿಗೆ ಆಗ ಇನ್ನೂ ಸಲ್ಲವು. ಇದನ್ನು ಅರಿತ ನಾಗಯ್ಯ ಬಳ್ಳಾರಿ ತಾಲೂಕಿನ ಕಪ್ಪಗಲ್ಲಿನಲ್ಲಿದ್ದ ಬ್ರಾಹ್ಮಣರಲ್ಲಿಗೆ ಹೋಗಿ ಜ್ಯೋತಿಷ್ಯ ಕಲಿಯಲು ಅಪೇಕ್ಷಿಸಿದರೂ ಒಂದೇ ಒಂದು ಶ್ಲೋಕವನ್ನು ಕಲಿಸದೆ ನಿರಾಸೆ ಗೊಳಿಸಿದರು. ಇದೇ ನಿರಾಸೆಯಲ್ಲಿ ಎರಡ್ಮೂರು ವರ್ಷ ತನ್ನೂರಿನ ಸಾಲಿ ಅಯ್ಯನಾಗಿ ಮನಗೆ ಮತ್ತು ಊರಿಗೆ ನೆರವಾದರು. ಆದರೆ ಕಲಿಕೆಯ ಉತ್ಕಟಾಂಕ್ಷೆ ಅವರನ್ನು ಕಂಪ್ಲಿಯಲ್ಲಿ ಬೊಚ್ಚಯ್ಯಸ್ವಾಮಿಗಳಿಂದ ಸ್ಥಾಪನೆಯಾಗಿದ್ದ 'ಶ್ರೀ ಗುರು ಸಿದ್ಧ ಮರಿದೇವರ ಸಾಂಗತ್ರಯ ಪಾಠಶಾಲೆ' ಯನ್ನು ಸೇರುವಂತೆ ಮಾಡಿತು. ಆದರೆ ಇಲ್ಲಿ ಕೆಲವರ್ಷಗಳ ಕಾಲ ವಿದ್ಯಾಗುರು ಪಗಡದಿನ್ನೆ ಚನ್ನಬಸವ ಶಾಸ್ತ್ರಿಗಳಿಂದ ಜ್ಯೋತಿಷ್ಯ, ವೇದ, ಸಂಸ್ಕೃತ (ಸಾಂಗತ್ರಯ)ವನ್ನು ಕಲೆತರು. ಆದರೆ ವಿದ್ಯಾರ್ಥಿಗಳ ಕೊರತೆಯಿಂದ ಪಾಠಶಾಲೆ ಮುಚ್ಚಿದ ನಂತರ ಕೊಪ್ಪಳದ ಗವಿಮಠದ ಶ್ರೀ ಶಿವಶಾಂತವೀರ ಸ್ವಾಮಿಗಳ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿನ ಸಂಸ್ಕೃತ ಬೋಧಕರಾಗಿದ್ದ 'ಕೊಂಗವಾಡದ ವೀರಭದ್ರಶಾಸ್ತ್ರಿ'ಗಳು, ಖ್ಯಾತ ಜ್ಯೋತಿಷ್ಯಿಯಾಗಬೇಕೆಂದು ಬಂದಿದ್ದ ನಾಗಯ್ಯರ ಕನಸನ್ನು ಪ್ರಖ್ಯಾತ ಸಾಹಿತಿ, ಕನ್ನಡ ಪ್ರಾಧ್ಯಾಪಕನನ್ನಾಗುವಂತೆ ಬದಲಾಯಿಸಿದರು.
ವೀರಭದ್ರಶಾಸ್ತ್ರಿಗಳ ಪ್ರೀತಿಯ ಶಿಷ್ಯನಾಗಿ ಅವರಿಂದ ನಾಗಯ್ಯನವರು ಯಾವುದೇ ಜಟಿಲವಾದ ವಿಷಯಗಳನ್ನು ಸರಳವಾಗಿ ಅರಿಯುವ, ಸಂಸ್ಕೃತ ಕಾವ್ಯಗಳನ್ನು ಗ್ರಹಿಸುವ ಮತ್ತು ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಕಲೆಯನ್ನು ಸಿದ್ಧಿಸಿಕೊಂಡರು. ಜೊತೆಗೆ ಮಠದ ಶ್ರೀ ಶಿವಶಾಂತವೀರಯ್ಯ ಸ್ವಾಮಿಗಳ ಒಲುಮೆಯನ್ನು ಗಳಸಿಕೊಂಡು ನಾಗಯ್ಯ ಮುಂದೆ ನಾಗೇಶನಾಗುತ್ತಾ ಸಾಗಿದರು. ಇದೇ ಅವಧಿಯಲ್ಲಿ ನಾಗೇಶರ ತಾಯಿ ಕಾಲರಾ ರೋಗದಿಂದ ಹತರಾದ ಮೇಲೆ ಇವರನ್ನು ದಡ ಸೇರಿಸುವ ಜವಬ್ದಾರಿ ಶಿವಶಾಂತ ವೀರಯ್ಯನವರಿಗೆ ದಕ್ಕಿತ್ತು. ಹಾಗಾಗಿ ಬಳ್ಳಾರಿಯ ಸದ್ಗುಣ ಸಂಪನ್ನ ಹೀರದ ಕರಿಬಸಪ್ಪನವರಿಗೆ ಹೇಳಿ ಅವರ ಸಮ್ಮುಖದಲ್ಲಿ ಕೇವಲ ತೆಲುಗು ಮತ್ತು ಇಂಗ್ಲೀಷ್ ಭಾಷೆ ಪ್ರಾಬಲ್ಯವಿದ್ದ ಆಗಿನ ಪ್ರತಿಷ್ಠಿತ 'ವಾರ್ಡ್ಲಾ ಹೈಸ್ಕೂಲ್'ಗೆ ೧೯೧೪ರಲ್ಲಿ ಕನ್ನಡ ಬೋದಕರನ್ನಾಗಿ ಸೇರಿಸಿದರು.
ಆರಂಭದಲ್ಲಿ ಎದುರಾದ ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡು ತಮ್ಮ ಸ್ವಪ್ರತಿಭೆ ಮತ್ತು ಪ್ರಯತ್ನಗಳ ಫಲವಾಗಿ ಮನೆಮನೆಗೆ ತೆರಳಿ ಕನ್ನಡ ವಿಷಯಕ್ಕೆ ಮಕ್ಕಳನ್ನು ಸೇರಿಸಲು ಪೋಷಕರ ಮನವೊಲಿಸಿದರು. ಅಂತೆಯೇ ಬದಲಾದ ವಿದ್ಯಮಾನಗಳಿಗೆ ಬೆರಗಾಗಿ ಅಂದಿನ ಹೈಸ್ಕೂಲ್ ಹೆಡ್ಮಾಷ್ಟ್ರಾಗಿದ್ದ 'ಕೋಟಿಲಿಂಗಂ' ಇವರಿಗೆ ತುಂಬು ಬೆಂಬಲ ನೀಡಿದ್ದರು. ಕಾಲಕ್ರಮೇಣ ಇವರ ಬೋಧನಾ ಶೈಲಿ ಮತ್ತು ಕನ್ನಡ ಭಾಷಾ ಪ್ರೀತಿಗೆ ತೆಲುಗು ಭಾಷೆಯ ಮಕ್ಕಳು ಸಹ ಕನ್ನಡವನ್ನು ಕಲಿಯಲು ಮುಂದಾಗಿ ಇವರ ಪ್ರೀತಿಯ ಶಿಷ್ಯರಾದರು. ಆ ನಿಟ್ಟಿನಲ್ಲಿ ಬಂದ ಶಿಷ್ಯರೇ ವೈ.ಮಹಾಬಲೇಶ್ವರಪ್ಪ, ಬದಿನೇಹಾಳ್ ರಂಗನಗೌಡ, ಅಲ್ಲಂ ಕರಿಬಸಪ್ಪ ಮುಂತಾದವರು. ಮುಂದೆ ಈ ಶಿಷ್ಯರುಗಳ ಸಮ್ಮುಖದಲ್ಲಿ ಬಳ್ಳಾರಿಯಾದ್ಯಂತ ಕನ್ನಡ ಶಾಲೆಗಳು ನಿರ್ಮಾಣವಾದವು. ಅಲ್ಲದೇ ಕನ್ನಡ ಏಕೀಕರಣದ ಮೂಲಕ ಬಳ್ಳಾರಿ ಮೈಸೂರಿನಲ್ಲಿ ವಿಲೀನವಾಗುವಲ್ಲಿ ಕಾರಣವಾದರು ಎಂದರೆ ತಪ್ಪಾಗಲಾರದು. ಈ ಮಧ್ಯ ಇವರ ಸರಳ ವ್ಯಕ್ತಿತ್ವಕ್ಕೆ ಮಾರುಹೋದ ಹೀರದ ಕರಿಬಸಪ್ಪನವರು ತಮ್ಮ ಗುಮಾಸ್ತರಾಗಿದ್ದ ಶಾಂತವೀರಯ್ಯನವರ ತಂಗಿ 'ಮರೆಮ್ಮ'ರೊಂದಿಗೆ ವಿವಾಹ ಮಾಡಿದರು. ಮುಂದೆ ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಂಬಂಧಿಕರಾದ ಕುಡುತಿನಿಯ ಕಟ್ಟೆಯ್ಯನವರ ಮಗ ವೀರಬಸಯ್ಯನವರೊಡನೆ ಸೇರಿ ಪುರಾಣ ಪ್ರವಚನ ಹೇಳಲು ಆರಂಭಿಸಿದರು.
ಆದರೆ ಅಷ್ಟೇನೂ ರುಚಿಸದ ಪ್ರವಚನ ಕ್ಷೇತ್ರದಿಂದ ನಾಗೇಶರು ಆ ಕಾಲಕ್ಕಾಗಲೇ ವಕೀಲತ್ರಯರಿಂದ ಪ್ರಸಿದ್ಧ ಪಡೆದ ರಂಗಭೂಮಿ ಕಡೆಗೆ ಮನಸ್ಸು ಮಾಡಲಾರಂಭಿಸಿದ್ದರು. ಅದೇ ಸಮಯಕ್ಕೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ, ಅದರಲ್ಲೂ ಬಳ್ಳಾರಿ ಸಮೀಪದ ಹಿರೇಹಾಳಿನಲ್ಲಿನ ಹವ್ಯಾಸಿಗಳು ೧೮೩೫ರಲ್ಲಿ 'ಶ್ರೀ ಬಾಲಲೀಲಾ ವಿನೋದ ಸಂಗೀತ ನಾಟಕ ಮಂಡಳಿ'ಯನ್ನು ತೆರೆದು ಹೊಸ ಹೊಸ ನಟ ಮತ್ತು ನಾಟಕಕಾರರ ಅನ್ವೇಷಣೆಯಲ್ಲಿದ್ದರು. ಈಗಾಗಲೇ ನಾಗೇಶರ ಬಗ್ಗೆ ಅರಿತಿದ್ದ ಸುತ್ತಮುತ್ತಲಿನ ಹಳ್ಳಿಗಳ ಜನರು ಅವರನ್ನು ರಜಾದಿನಗಳಲ್ಲಿ ಕರೆದೊಯ್ದು ನಾಟಕಗಳನ್ನು ಹಾಗೂ ನಾಟಕಗಳಿಗೆ ಬೇಕಾದ ಹಾಡುಗಳನ್ನು ಬರೆಯಿಸಿಕೊಳ್ಳುತ್ತಿದ್ದರು. ಕೊಟ್ಟೂರಿನ 'ಜಾಟಗೇರಿ ವೀರಪ್ಪಯ್ಯನವರು' ಒತ್ತಾಯಕ್ಕೆ ಮಣಿದು ಕೊಟ್ಟೂರೇಶ್ವರನ ಕುರಿತಾಗಿ ಚಾರಿತ್ರಿಕ ಅಂಶಗಳನ್ನಾಧರಿಸಿ 'ಶ್ರೀ ಗುರು ಕೊಟ್ಟೂರು ಬಸವೇಶ್ವರ' ಎಂಬ ಮೊದಲ ನಾಟಕವನ್ನು ಬರೆದರು. ನಾಗೇಶರ ಅಪ್ಪಣೆಯಂತೆ ವೀರಪ್ಪಯ್ಯನವರು ರಂಗಕ್ಕೇರಿಸಿ ರಥೋತ್ಸವದ ದಿನ ಪ್ರಯೋಗಿಸಿ ಸಾವಿರಾರು ಜನರ ಪ್ರೀತಿ ಗಳಿಸಿ ಯಶಸ್ವಿಯಾದರು. ಇದರ ಬೆನ್ನಲ್ಲೇ ಆಂಜನೇಯನಿಗೆ ಲಿಂಗಧಾರಣ ಮಾಡುವ ಶಾಸ್ತ್ರಾಧರ ಅಂಶವನ್ನಿಟ್ಟುಕೊಂಡು 'ಆಂಜನೇಯ ಲಿಂಗಧಾರಣ' ನಾಟಕ ಬರೆದು ಕೀರ್ತಿಯನ್ನು ಗಳಿಸಿದರು. ಆದರೆ ಈ ನಾಟಕವು ರಾಮಭಕ್ತ ವೈಷ್ಣವರ ಕೆಂಗಣ್ಣಿಗೆ ಗುರಿಯಾಗಿ ನಾಟಕ ಪ್ರದರ್ಶನಕ್ಕೆ ಮಾಲೀಕರು ಕೋರ್ಟ್ ಸಮ್ಮತಿ ಪಡೆಯಬೇಕಾಯಿತು. ಈ ಮೂಲಕ ಕಂಪನಿ ಮಾಲೀಕರಿಗೆ ಶ್ರೇಷ್ಠತೆ ಮತ್ತು ನಾಗೇಶರಿಗೆ ಪಾಂಡಿತ್ಯದ ಹುಮ್ಮಸ್ಸನ್ನು ತಂದುಕೊಟ್ಟಿತ್ತು.
ನಾಗೇಶರಿಗೆ ನಾಟಕ ರಚನೆ ಎಷ್ಟು ಸರಳವಾಗಿತ್ತೆಂದರೆ ಹಳ್ಳಿಯ ಜನತೆಗೆ, ಕಂಪನಿಯ ಮಾಲೀಕರು ಒಂದು ನಿರ್ದಿಷ್ಟ ವಿಷಯವನ್ನು ತಂದು ನೀಡಿದ ಒಂದೆರಡು ದಿನಗಳಲ್ಲಿ ಹಸ್ತ ಪ್ರತಿ ಸಿದ್ಧವಾಗುತ್ತಿತ್ತು. (ದುರಾದೃಷ್ಟವೆಂದರೆ, ಅವರು ಬರೆದ ಒಂದೇ ಒಂದು ನಾಟಕವು ಈಗ ಲಭ್ಯವಾಗುತ್ತಿಲ್ಲ. ಇದಕ್ಕೆ ಕಾರಣ, ನಾಟಕದ ಹಸ್ತಪ್ರತಿಯನ್ನು ಅಪೇಕ್ಷಿಸಿದವರ ಕಡೆಗೆ ಕೊಟ್ಟು, ಅದನ್ನು ಹಿಂಪಡೆಯದೇ ಇದ್ದುದು ಮತ್ತು ಅದನ್ನು ಮರುಪ್ರತಿ ಮಾಡದೇ ಇದ್ದುದು) ಅವರು ಬರೆದ ಶ್ರೀ ಕೊಟ್ಟೂರ ಬಸವೇಶ್ವರ, ಆಂಜನೇಯ ಲಿಂಗಧಾರಣ, ವಜ್ರಾಂಗಳೀಕ, ವಿಜಯ ನಗರಾಭ್ಯುದಯ, ಮಲ್ಹಣ, ಪಂಪಾಂಬಿಕಾ ಪರಿಣಯ, ಮೈರಾವಣ ಚರಿತ್ರೆ ಒಟ್ಟು ಏಳು ನಾಟಕಗಳನ್ನು ರಚಿಸಿದ್ದಾರೆ. ಇನ್ನು ಈ ನಾಟಕ ರಚನೆ ನಾಗೇಶರಿಗೆ ಎಂಥ ಹುಮ್ಮಸ್ಸು, ಜನಪ್ರಿಯತೆಯನ್ನು ತಂದಿತ್ತೆಂದರೆ ಅವರ ಉಪಾಧ್ಯಾಯ ವೃತ್ತಿಗೆ ಇದರಿಂದ ಧಕ್ಕೆಯಾಗಬಹುದೆಂದು ಬಗೆದು ಪ್ರವೃತ್ತಿಯನ್ನು ತೊರೆದು ತಮ್ಮ ವೃತ್ತಿಯ ಕಡೆಗೆ ಗಮನ ವಹಿಸಲಾರಂಭಿಸಿದರು.
ಆದರೂ ಬಿಡದೇ ಮುಂದೆ ೧೯೨೫ರಲ್ಲಿ ಹೊರತಂದ 'ಕರ್ನಾಟಕ ಬಂಧು' ನಿಯತಕಾಲಿಕೆಯ ಮುಖಾಂತರ ಪತ್ರಿಕೆಯಲ್ಲಿ 'ನೀತಿ ಚಿಂತಾಮಣಿ' ಶೀರ್ಷಿಕೆಯಡಿಯಲ್ಲಿ ಸ್ವರಚಿತ ನೀತಿಬೋಧಕ ಪದ್ಯಗಳನ್ನು ಹಾಗೂ ನಾಟಕಗಳನ್ನು ಮತ್ತು 'ಅಭಿನವ ಸೀತೆ' ಎಂಬ ಕಾದಂಬರಿಯನ್ನು ಹಲವು ಧಾರವಾಹಿ ಸಂಚಿಕೆಗಳ ಮೂಲಕ ಪ್ರಕಟಿಸಿದರು. ಈ ಪತ್ರಿಕೆಗಳನ್ನು ಅಭಿಮಾನಿ ಶಿಷ್ಯರಾಗಿದ್ದ ಶಾಂತರುದ್ರಪ್ಪ ಮತ್ತು ವೀರಭದ್ರಪ್ಪರನವರೊಡನೆ ಸೇರಿ "ಕರ್ನಾಟಕ ಬಂಧು,ಒಂದಾಣೆಗೆ ಒಂದು, ಕೊಂಡೋದಿರಿ ಇಂದು" ಎಂದು ಕೈಯಲ್ಲಿಡಿದು ಓಡಾಡಿ ಮಾರುತ್ತಿದ್ದರು.
ಗುರು ವೀರಭದ್ರಶಾಸ್ತ್ರಿಗಳಿಂದ ನ್ಯಾಯ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿ 'ಸಾಂಖ್ಯತೀರ್ಥ' ಹಾಗೂ ಹಿಂದಿ, ಮರಾಠಿ, ಬಂಗಾಲಿ, ಇಂಗ್ಲೀಷ್, ತೆಲುಗು, ಕನ್ನಡ ಭಾಷೆಗಳನ್ನು ಕಲಿತು ಸೂಕ್ಷ್ಮಗ್ರಾಹ್ಯ ಗುಣ ಸಂಪಾದಿಸಿದ್ದರಿಂದ 'ಸರ್ವ ದರ್ಶನ ತೀರ್ಥ' ಎಂಬೆರೆಡು ಪದವಿಗಳನ್ನು '೧೯೨೭ರಲ್ಲಿ ಕಲ್ಕತ್ತಾದ ಸಂಸ್ಕೃತ ಅಸೋಸಿಯೇಷನ್' ಪಡೆದು 'ದಕ್ಷಿಣ ಭಾರತದ ಮೊದಲ ಪುರಸ್ಕೃತ'ರೆನಿಸಿದರು.
ಇವರ ಬೋಧನಾ ಪಾಂಡಿತ್ಯಕ್ಕೆ ಪ್ರತಿಯಾಗಿ ಬಂದ ಕರೆಗೆ ಓಗೊಟ್ಟು ೧೯೨೭ರಲ್ಲಿ ಬೆಳಗಾವಿಯ ಲಿಂಗರಾಜ ಕಾಲೇಜಿಗೆ ಕನ್ನಡ ಪ್ರಾಧ್ಯಾಪಕರಾಗಿ ಮತ್ತು ೧೯೨೮ರಲ್ಲಿ ಮದನಪಲ್ಲಿಯ ಥಿಯೋಸಾಫಿಕಲ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾಗಿ ಏಕಕಾಲದಲ್ಲಿ ೩ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸಿದರು. ಆದರೆ ಶಿಷ್ಯ ಮಹಾಬಲೇಶ್ವರಪ್ಪರಿಂದ ೧೯೪೫ರಲ್ಲಿ ಸ್ಥಾಪನೆಯಾದ ವೀರಶೈವ ಕಾಲೇಜಿನಲ್ಲಿ ೧೯೫೫ರವರಗೆ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಇವರ ವಿದ್ವತ್ತನ್ನು ಮೆಚ್ಚಿದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರರ ಮನವಿಗೆ ೧೯೩೦ರಲ್ಲಿ ಮೈಸೂರು ಆಸ್ಥಾನದ ಪಂಡಿತರಾದರು. ಈ ಆಸ್ಥಾನದಲ್ಲಿರುವಾಗಲೇ ಸಂಸ್ಕೃತ ಕಾವ್ಯಗಳನ್ನು 'ಕರ್ನಾಟಕ ರಘುವಂಶ, ಕರ್ನಾಟಕ ಭಗವದ್ಗೀತೆ, ಕರ್ನಾಟಕ ಕುಮಾರ ಸಂಭವ, ಕರ್ನಾಟಕ ಚಂದ್ರಲೋಕಂ' ಎಂದು ಕನ್ನಡದಲ್ಲಿ ಅನುವಾದಿಸಿದರು. ಮುಂದೆ ೧೯೩೦ರಲ್ಲಿ ಯಶವಂತರಾವ್ ಘೋರ್ಪಡೆಯವರು ಸಂಡೂರಿನ ಅರಸರಾದ ನಂತರ ನಾಗೇಶ ಶಾಸ್ತ್ರಿಗಳ ವಿದ್ವತ್ತನ್ನು ಅರಿತು ಅವರನ್ನು ಆಸ್ಥಾನ ಪಂಡಿತರನ್ನಾಗಿಸಿದರು. ಇಲ್ಲಿರುವಾಗ ಹತ್ತಾರು ಪುರಾಣಗಳನ್ನು, ಕಾವ್ಯಗಳನ್ನು ಬರೆದು ಪ್ರಸಿದ್ಧರಾದರು.
ಹೀಗೆ ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯದೇ, ಶಿಕ್ಷಕರಾಗಿ, ಅಧ್ಯಾಪಕರಾಗಿ, ಉನ್ನತ ಪದವೀಧರರಾಗಿ, ಎರಡು ರಾಜಮನೆತನಗಳ ಆಸ್ಥಾನ ವಿದ್ವಾಂಸರಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಬಳ್ಳಾರಿಯಂಥ ಭಾಷಿಕ ಗೊಂದಲ ಉದ್ವಿಗ್ನಗಳ ಸ್ಥಳದಲ್ಲಿದ್ದೂ ಕನ್ನಡ ಪ್ರಜ್ಞೆಯ ಸಾಂಕೇತಿಕ ಮಾನದಂಡವಾಗಿ ಮೆರೆದ ಪಂಡಿತ ವೈ.ನಾಗೇಶ ಶಾಸ್ತ್ರಿಗಳು ಕೊನೆಗೂ ಯಾವೊಬ್ಬ ವಾರಸುದಾರರಿಲ್ಲದೆ ತಮ್ಮ ಮನೆ 'ಶ್ರೀ ಮೃತ್ಯುಂಜಯ ಶಿವಾನುಭವ ಕುಟೀರ'ವನ್ನು ೧೯೭೪ ಮಾರ್ಚ್ ೧೮ರಲ್ಲಿ ತಾವು ಅತಿಯಾಗಿ ಇಷ್ಟಪಟ್ಟ ಧಾರವಾಡದ ಶ್ರೀ ಮುರುಘಾ ಮಠಕ್ಕೆ ಉಯಿಲು ಬರೆದು ೧೪ನೇ ಮೇ ೧೯೭೫ರಲ್ಲಿ ಇಹಲೋಕ ತ್ಯಜಿಸಿದರು.
ಇಂತಹ ಮಹಾನ್ ಚೇತನವೊಂದು ಬಳ್ಳಾರಿಯ ಮಣ್ಣಲ್ಲಿ ಆಗಿಹೋಗಿರುವುದನ್ನು ಇಂದಿನ ಬಹುತೇಕ ಜನರು ಮರೆತು ಹೋಗಿದ್ದಾರೆ. ಇನ್ನು ಮುಂದೆಯಾದರೂ ಇಂತಹ ಚೇತನರ ಚರಿತ್ರೆಗಳನ್ನು ನೆನಪಿಸುವ ಕಾರ್ಯಗಳು ಈ ನೆಲದಲ್ಲಾಗಲಿ ಎಂದು ಆಶಿಸೋಣ.
ಲೇಖನ :ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ / ರಂಗ ಸಂಶೋಧಕರು
ಕವಿ ಸದನ, ಭೈರಗಾಮದಿನ್ನೆ.
Comments
Post a Comment