ಕಥೆಯೇ ಕಥೆಯಾದಾಗ..
ಮೂಲ ಕಥೆಯ ನಾಯಕಿ
ಸಾಂದರ್ಭಿಕ ಚಿತ್ರ
ಕಥೆಯೇ ಮತ್ತೊಂದು ಕಥೆಯಾದಾಗ...
ಇವತ್ತು ಸ್ವಲ್ಪ ಬೇಗನೇ ಲೈಬ್ರರಿ ಓದಿಗೆ ತಿಲಾಂಜಲಿ ಹೇಳಿ ಹೆಗಲಿಗೆ ಬ್ಯಾಗ್ ಹಾಕೊಂಡು ಹೊರಬಂದೆ. ಬರುವಾಗ ಏನೋ, ಇವತ್ತು ಹೋಗುವ ದಾರಿಯನ್ನು ಬದಲಾಯಿಸೋಣ ಎಂದೇನಿಸಿ ನವರಂಗದ ಕಡೆಯಿಂದ ಬರಲು ನಿರ್ಧರಿಸಿ ಹಾದಿ ಬದಲಿದೆ. ಕೊನೆಗೆ ಅಲ್ಲಿಗೂ ಬಂದು ನವರಂಗ ಮಂಟಪದ ಮೇಲೆ ಸಂಶೋಧನಾ ಬುದ್ಧಿ ತೋರಿಸಲು ಆರಂಭಿಸಿದೆ.
ಉಸಿರು ಗಟ್ಟುವ ಸ್ಥಳ, ಬಡ್ದಾಕಿದ್ರು ಕೇಳೋಕೆ ಅಲ್ಲಿ ಒಂದು ನರಪಿಳ್ಳೆನು ಇರಲಿಲ್ಲ. ಆದರೂ ಧೈರ್ಯ ಮಾಡಿಕೊಂಡು ತುಂಬಾ ಗಾಢವಾಗಿ, ತದೇಕ ಚಿತ್ತದಿಂದ ಅಲ್ಲಿನ ಕೆಳ ಮಂಟಪ ನೋಡಲೆಂದು ಅಲ್ಲಿನ ಎರಡು ಕೋಣೆಯ ತೆರದ ಕಿಟಿಕಿಯ ಅಂಚಿಗೆ ಕಣ್ಣಾರಳಿಸಿದೆ. ಅದೇನೋ ಇದ್ದಕ್ಕಿದ್ದಂತೆ ಹಕ್ಕಿ ಪಿಕ್ಕಿಗಳ ಧ್ವನಿಯ ನಡುವಿಂದ ಯಾರೋ ಗದರಿದ ಹಾಗೆ, ವಿಸಿಲ್ ಹೊಡೆದ ಹಾಗೆ ಭಾಸವಾಯಿತು. ಮನಸ್ಸು ಆ ಕ್ಷಣ ಜಲ್ಲೆಂದು ಅರೆಕ್ಷಣದಲ್ಲೇ ಬಲಗೈ ತಾನಾಗಿಯೇ ಉಗಳಚ್ಚಿಕೊಂಡು ಬೆನ್ನು ಮುಟ್ಟಿ ಧೈರ್ಯ ಹೇಳಿತು. ಆದರೂ ಮತ್ತದೇ ಗತ್ತಲ್ಲಿ ಕೆಳಗಿನಿಂದ ಮೇಲಿನ ವೇದಿಕೆಗೆ ಬಂದು ಅತ್ತ ಇತ್ತ ಕತ್ತಾಡಿಸಿದೆ.
ಅಚ್ಚರಿಯಂಬಂತೆ ನನ್ನ ಕಣ್ಣೆದುರೆ ಒಂದು ಮುಗ್ಧ ಮೊಗದ ಅಂದದ ಚಲುವೆ,ಕೆದರಿದ ಕೂದಲು, ಹಳೆಯ ಜೀನ್ಸ್ ಪ್ಯಾಂಟ್, ಹಳೆಯದಾದ ತುಂಬು ತೋಳಿನ ಟೀ ಶರ್ಟ್ ಧರಿಸಿ, ಹೆಗಲ ಮೇಲೆ ಹಳೆಯ ಟವೆಲ್ ಹಾಕಿ ಕೈಲೊಂದು ಕೋಲು ಹಿಡಿದು ಗದರುತ್ತಾ ,ವಿಸಿಲ್ ಹಾಕುತ್ತ ನನ್ನ ಕಡೆಗೆ ಬಂದಳು. ನೋಡಲು ಥೇಟ್ ಮನಸಿಜನ ಪರೀಕ್ಷಿಸಲೆಂದೇ ಬಂದ ಪುಟ್ಟ ದೇವತೆಯ ಹಾಗೆ ಕಾಣುತ್ತಿದ್ದಳು. ಧೃತಿಗೆಡದೆ ಹಾಗೆ ಹಿಂದೆ ತಿರುಗಿ ನೋಡಿದಾಗ, ತನ್ನ ೨೦ -೨೫ ಕುರಿಗಳ ಹಿಂಡಿನ ನಾಯಕಿ ಇವಳಕ್ಕ ಈಕೆಯನ್ನು ಕರೆಯಲಾರಂಭಿಸಿದಳು. ಅರೆ ಇಂಥ ಚೆಂದದ ಹುಡುಗಿ ಯಾಕೆ ಈ ಕೆಲಸಕ್ಕೆ ಬಂದಿದಾದಳೆ? ಶಾಲೆಗೆ ಯಾಕೆ ಹೋಗಿಲ್ಲ? ಹೀಗೆ ಅನೇಕ ಪ್ರಶ್ನೆಗಳು ಮೆದುಳಿಗೆ ಕೈ ಹಾಕಿ ಪ್ರಶ್ನಿಸಲಾರಂಭಿಸಿದವು. ಅವುಗಳ ಕಾಟಕ್ಕೆ ತಾಳಲಾರದೆ ಅವರನ್ನು ಮಾತಾಡಿಸಲು ಮುಂದಾದೆ. ಆದರೆ ನನಗಿಂತ ವೇಗದಲ್ಲಿ ಆ ಹುಡುಗಿಯ ಅಕ್ಕ " ಏನಪ್ಪಾ ಓದಾಕ ಬಂದಿಯಾ " ಅಂತ ಕೇಳಿದಳು. ಕೊರಳೊಗಿನ ಎರಡು ಪಾದಗಳಾಕೃತಿಯ ತಾಳಿ ಸರಗಳನ್ನು ಧರಿಸಿದ ಆಕೆ, ನೋಡಲು ಬಹುಶಃ ಹತ್ತಿರದ ಹೆಣ್ಣು ದೇವರಿಗೆ ಬಿಟ್ಟ ದೇವದಾಸಿಯ ರೀತಿಯಲ್ಲಿ ಕಾಣುತ್ತಿದ್ದಳು. ಅಷ್ಟು ನೀಳವಲ್ಲದ, ಸಣಕಲು ದೇಹದ, ಸೊರಗಿದ ಮುಖದ ಮುಗ್ಧ ನೀರೆಯ ಮಾತಿಗೆ "ಹುಂ" ಎಂಬ ಪ್ರತ್ಯುತ್ತರ ಕೊಟ್ಟೆ.
ಆದರೆ ಅಲ್ಲಿಗೆ ತೃಪ್ತಳಾಗದ ಅಕ್ಕ ಯಾವ ಜನ? ಯಾವುರು? ಅದು ಇದು ಅಂತಾ ಎರಡ್ಮೂರು ಪ್ರಶ್ನೆ ಕೇಳುತ್ತಿದ್ದರು. ಆದರೆ ಮಾತಿನ ಕೆರೆಗಿಳಿದ ನಮ್ಮಿಬ್ಬರ ಪರಿವೆ ಇಲ್ಲದ ರೀತಿಯಲ್ಲಿ ಕುರಿ ಕಾಯುತ್ತಿದ್ದ ಆ ಪುಟ್ಟ ದೇವತೆಯ ಕಡೆಗೆ ನನ್ನ ಕಣ್ಣು ಸೆಳೆಲಾರಂಭಿಸಿದವು. ಅಲ್ಲಿಗೆ ತಡಿಯಲಾಗದೇ, ಅಕ್ಕನ ಮಾತಿದೆ ಪುಲ್ ಸ್ಟಾಪ್ ಹೇಳಿ " ಏನಮ್ಮಾ! ಎಷ್ಟನೇ ಕ್ಲಾಸ್ ಓದ್ತಾ ಇದೀಯಾ?" ಎಂದೆ ಅದಕ್ಕವಳು ನನ್ಕಡೆ ನೋಡಿ 'ಟೆನ್ತ್' ಅಂತ ಇಂಗ್ಲೀಷಲ್ಲಿ ನುಡಿದಳು. ನಾನು ಒಂದು ಕ್ಷಣ ಶಾಕಾಗಿ 'ಹ! ಟೆನ್ತ್ ಓದಿ ಮತ್ತೆ ಇಲ್ಲಿಗೆ ಯಾಕೆ ಬಂದೆ, ಮುಂದೆ ಓದಬಾರ್ದಿತ್ತಾ' ಅಂದೆ ಅದಕ್ಕಾಕೆ ' ಇಲ್ಲ ಈ ಕುರಿಗಳು ಮೇಸೋರು ಯಾರಿಲ್ಲ ರೀ' ಅಂತ ಖಡಕ್ ಉತ್ತರ ಕೊಟ್ಟಳು. ಪ್ರತ್ಯುತ್ತರವಾಗಿ ' ಕುರಿ ಮೇಸೋ ಭರದಲ್ಲಿ ನೀನು ಕುರಿಯಾಗಿದೀಯಾ' ಎಂದು ಮನಸ್ಸಿನ ಬೇಗುದಿಯನ್ನು ಉಸಿರಿಯೇ ಬಿಟ್ಟೆ. ಆಗ ಆಕೆಯ ಅಕ್ಕ 'ಏನ್ಮಾಡೋದಪ್ಪಾ ಅಪ್ಪ ಸತ್ತೋದ ಮನ್ಯಾಗ ಏಳು ಮಂದಿ ಹೆಣ್ಮಕ್ಕಳೇ ಆದ್ವಿ, ಮನ್ಯಾಗ ಒಬ್ಬ ಗಣ್ಮಗ ದಿಕಿಲ್ದಂಗಾದ.ಅದ್ಕ ಈಕಿನೇ ಬಂದಾಳ.ಓದ್ವರ್ಷ ಸೆಕಂಡಿಯರ್ ಕಟ್ಟು ಅಂದೆ,ಆದ್ರೆ ಆಕೀನೆ ಒಲ್ಲೆ ಅಂದ್ಲು,ನಾನದ್ರೂ ಏನ್ಮಾಡ್ಲೀ' ಅಂತಾ ನೀರ್ಕಡೆ ಹೋದ ಕುರಿಯನ್ನು ಈ ಕಡೆ ಒಡ್ಕಂಡ ಬರಲು ಹೋದಳು. ಅಷ್ಟಕ್ಕೇ ಸುಮ್ಮನಾಗದ ಮನಸ್ಸು 'ಅಲ್ಲ, ಏನು ಓದದ ನಿಮ್ಮಕ್ಕನಿಗೆ ನಿನ್ನ ಓದ್ಸಬೇಕಂತ ಇದೆ, ಟೆನ್ತ್ ಓದಿದ ನಿನಗ್ಯಾಕಿಲ್ಲ.ಏನ್ ನಿನ್ಹೆಸರು ?' ಎಂದೆ ಅದಕ್ಕವಳು ಮಂದಹಾಸದಲ್ಲೇ 'ಕಲ್ಯಾಣಿ' ಎಂದು ಅಕ್ಕ ಹೋದ ಕಡೆ ಹೋಗಲು ಮುಂದಾದಳು. ' ಹ್ಹ ಹ್ಹ ದಣಿದ ಬಂದ ಎಲ್ಲರಿಗೂ ನೀರುಣಿಸುವ ನಿನ್ಹೆಸರೇ, ನಿನಗೇನೇ ವಿದ್ಯೆಯ ನೀರುಣಿಸುತ್ತಿಲ್ವಲ್ಲಾ' ಅಂತಾ ಅವಳ ಕಡೆಗೆ ನೆಡೆದೆನು.
ಸ್ವಲ್ಪ ಮೌನದ ನಂತರ ಆಕೆ ಟೆನ್ತನ್ನು ಶೇಕಡ ೫೦ ಮಾಡಿದ್ದಾಳೆ, ಶಾಲೆ ಬಿಟ್ಟು ೩ ವರ್ಷವಾಗಿದೆ ಹಾಗೂ ವಾಲ್ಮೀಕಿ ಜಾತಿಗೆ ಸೇರಿದವಳೆಂಬ ವಿಚಾರಗಳು ಕ್ರಮೇಣ ಅವಳಿಂದಲೇ ತಿಳಿದು, ಅಲ್ಲ ನಿಂಗೆ ಎಷ್ಟೆಲ್ಲಾ ಅವಕಾಶಗಳಿದ್ದಾವೆ ಗೊತ್ತಾ ಅವುಗಳ ಬಳಕೆಯಿಂದಾದ್ರೂ ಮೇಲಕ್ಕೆ ಬಾ ನಿನಗೆ ಇನ್ನು ಕಾಲ ಮಿಂಚಿಲ್ಲ. ಎಂದೇಳಿ ತಕ್ಷಣ ಏನೋ ಹೊಳೆದವನ ರೀತಿಯಲ್ಲಿ ನಿನ್ನ ಹೈಟೆಷ್ಟು? ನಿಲ್ಲು! ಅಂತೇಳಿ ಕೆಳ ಮಂಟಪಕ್ಕೋಗಿ ಆಕೆಯ ಹೈಟ್ ನೋಡಲು ನಿಂತಲ್ಲೇ ಮುಂದಾದೆ. ನನ್ನ ಭುಜದೆತ್ತರಕ್ಕೂ ನಿಲುಕದ ಅವಳನ್ನು ಉದ್ದೇಶಿಸಿ 'ಯಾಕ್ನೊಡಿದೆ ಅಂದ್ರೆ, ಹೈಟಾದ್ರೂ ಇದ್ರೆ ಪಿ.ಸಿನೋ, ಡಿ.ಆರ್ ಗೋ ಅರ್ಜಿ ಹಾಕ್ಬೋದಿತ್ತು' ಎಂದು ಮುಂದುವರೆದೆ. ಆಕೆಯು ಕೂಡ ತಿರಸ್ಕಾರದ ನಗುವಿನಿಂದಲೇ 'ಬಡವರ ಲೈಫ್ ಇಷ್ಟೇನೆ' ಅಂದ್ಲು.
ಯಾರ್ಹೇಳಿದ್ದು! ನಮ್ಮ ಪಕ್ಕದ ಊರಿನ ಬಡ ಅಗಸರ ಯಲ್ಲಪ್ಪ ಮಾಡಿದ ಸಾಲ ತೀರಿಸಲಾಗದೇ ಹೈದ್ರಾಬಾದ್ ಗೆ ದುಡಿಯಲೋದ. ಅಪ್ಪನ ಜೊತೆಯಲ್ಲಿಯೇ ಬಂದ ಮಗಳು ನಂದಿನಿ ಅಗಸರ. ನಿನ್ನ ಹಾಗೆ ಶಾಲೆ ಬಿಟ್ಟು ಅಂಗಳದಲ್ಲಿ ಆಟ ಆಡ್ತಾ ಇದ್ಲು. ಯಾವುದೋ ಘಳಿಗೆಯಲ್ಲಿ ಸಿಕ್ಕ ಸುವರ್ಣಾವಕಾಶ ಬಳಸಿಕೊಂಡು ಹಂತ ಹಂತವಾಗಿ ತಾನು ಆಡುತ್ತಿದ್ದ ಆಟದಲ್ಲೇ ತನ್ನ ಪರಿಶ್ರಮ ತೋರಿ ಕೊನೆಗೆ ಮೊನ್ನೆ ಚೀನಾದ ಹಾಂಗ್ ಝೌನಲ್ಲಿ ನಡೆದ ಏಳು ಆಟಗಳಲ್ಲಿ ಉತ್ತಮ ಪ್ರದರ್ಶನ ತೋರಿ ಕಂಚಿನ ಪದಕ ಗೆದ್ದು ಇಡೀ ದೇಶಕ್ಕೆ ಕೀರ್ತಿ ತಂದಾಳ. ಅದೇ ರೀತಿ ನಿನಗೂ ಅನೇಕ ಅವಕಾಶಗಳಿವೆ. ಇದೇ ಲೈಬ್ರರಿಯಲ್ಲಿ ಏನು ವಿದ್ಯಾರ್ಹತೆಯಿಲ್ಲದೆ ದಿನವಿಡಿ ಮೊಬೈಲ್ ಹಿಡಿದು ಕೂತ್ಹೊಗೋರಿಗೆ, ಮೈ ಬಗ್ಗಸದೆ ಕಸ ಗುಡಿಸೋರ್ಗೆ, ಕಿವಿಯಲ್ಲಿ ಪೆನ್ ಹಾಕಿ ಆಕಳಿಸೋ ಅಟೆಂಡರ್, ಅಧಿಕಾರಿಗಳಿಗೆ ಸಾವಿರಾರು ರೂಪಾಯಿ ಸಂಬಳ ಇರುವಾಗ, ನಿನ್ನಂತ ವಿದ್ಯಾವಂತೆಗೆ ಕೆಲ್ಸ ಕೊಡಲ್ವಾ? ಅದ್ಕೆ ಹೇಗಾದರೂ ಮಾಡಿ ಒಂದೊಳ್ಳೆ ಮಟ್ಟಕ್ಕೆ ಬೆಳೆದು ನಿನ್ನ ಕುಟುಂಬವನ್ನು ಕಾಪಾಡು. ಇಲ್ದೆ ಇದ್ರೆ ಇವತ್ತು ನಿಮ್ಮಕ್ಕನ ಜೊತೆ ನೀನು ಕುರಿ ಕಾದಂತೆ ನಾಳೆ ನಿನ್ನ ಮಕ್ಕಳು ಸಹ ಇವೇ ಕುರಿ ಕಾಯ್ಬೇಕಾಗುತ್ತೆ. ಅಂತೇಳಿ ಕ್ಷಣಕಾಲ ಸುಮ್ನಾದೆ. ಆದರೆ ಅವಳ ಮೌನ ನನ್ನನ್ನು ಇನ್ನು ಮಾತಾಡಲು ಪ್ರೇರೆಪಿಸಿತು. ಅಂತೆಯೇ ಮುಂದುವರೆದು 'ಪ್ರವಾಸಿ ತಾಣವಾದ ಈ ನಾಡಲ್ಲಿ ಓದು ಬರಹ ಬಾರದವರು ಸಹ ಇಂಗ್ಲೀಷಿಲ್ಲಿ ಇಂಗ್ಲೀಷಿನವರಿಗೆ ಸ್ಥಳದ ಬಗ್ಗೆ ಗೈಡ್ ಮಾಡ್ತಾರೆ,ಅಂತದ್ರಾಗ ಓದಿರೋ ನೀನು ಯಾವುದಾದರೂ ಸ್ಟಾರ್ ಹೋಟ್ಲಾಗ, 'ನಮಸ್ತೆ ಸಾರ್ ಪ್ಲೀಸ್ ಕಂ,ವಾಟ್ ಕ್ಯಾನ್ ಡು ಫಾರ್ ಯು' ಅಂತ ಹೇಳೋ ರಿಸ್ಪಷನಿಸ್ಟ್ ಕೆಲ್ಸಕ್ಕಾದ್ರೂ ಸೇರ್ಕೋ ಎಂದೇಳಿ ಮಾತು ಮುಗಿಸಿ ಇನ್ನೇನು ದಾರಿ ಬದಲಿಸಬೇಕೆನ್ನುವಷ್ಟರಲ್ಲಿ ' ಹ ನಿನಗೇನಾದ್ರೂ ಹೆಲ್ಪ್ ಬೇಕಾದ್ರೆ ಈ ನಂಬರ್ಗೆ ಮೇಸೆಜ್ ಮಾಡು' ಅಂತೇಳಿ ನನ್ನ ಪೋನ್ ನಂಬರ್ ಕೊಟ್ಟು ನನ್ನ ರೂಂನ ದಾರಿಯಿಡಿದು ಬಂದೆ. ಆದರೆ ಯಾಕೋ ಅಲ್ಲಿಗೆ ತೃಪ್ತವಾಗದ ಮನಸ್ಸಿನ ಚಡಪಡಿಕೆಯ ತಣಿಸಲೋಸುಗ ಸ್ವಲ್ಪ ದೂರ ಬಂದು ಹಿಂದಿರುಗಿ ನೋಡಿದೆ. ಆದರೆ ಅವಳು ನಾನು ಅಲ್ಲಿಂದ ಬಂದಾಗಲಿಂದ ನನ್ನನ್ನೇ ದಿಟ್ಟಿಸುತ್ತಾ ಕುರಿಗಳಿಂದ ಆಚೆ ನಿಂತು ನೋಡುತ್ತಲೇ ನಿಂತಿದ್ದಳು.
- ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ರಂಗ ಸಂಶೋಧಕರು, ಬರಹಗಾರರು
ಬಳ್ಳಾರಿ.


Comments
Post a Comment