ಗುಪ್ತಕಾಯಕದ ಹಿರಿಜೀವ 'ಗುಬ್ಬಿಹಾಳ್ ಅಂಬ್ರಮ್ಮವ್ವ'.

 


 ಗುಪ್ತ ಕಾಯಕದ ಹಿರಿಜೀವ 'ಗುಬ್ಬಿಹಾಳ್ ಅಂಬ್ರಮವ್ವ'.  


  ನಮ್ಮೂರು ಶಾಲೆ ಮೇಷ್ಟ್ರು ಸುಮಾರು  ದಿನಗಳಿಂದ ಕಣ್ಣು ಒತ್ತುತ್ತಾ ಇವೆ, ಬಹಳಷ್ಟು ನೋವು, ತಡಿಯಲಾಗುತ್ತಿಲ್ಲ ಎನ್ನುತ್ತಾ ಇಂದಿಗೆ ಒಂದು ತಿಂಗಳು ದೂಡಿದ್ದಾರೆ. ಅಲ್ಲದೇ  ನಾನೂ ಸಹ " ಹಾಗೇನಿಲ್ಲ ಬಿಡಿ ಸಾರ್, ಮನೇಲಿ ಚಿಕ್ಕ ಮಕ್ಳು ಇದವಲ್ಲಾ ರಾತ್ರಿ ನಿದ್ದೆ ಸರಿಯಾಗಿ ಆಗಿರುವುದಿಲ್ಲ. ಹಾಗಾಗಿ ನಿಮ್ಗೆ ಕಣ್ಬೇನೆ ಕಾಣ್ಸ್ಕೋತಾ ಇರಬಹುದು. ಅದ್ಕೆ  ನೀವು ಸ್ವಲ್ಪ ಹೊತ್ತು  ಕಣ್ತುಂಬಾ ನಿದ್ದೆ ಮಾಡಿ ಹೋಗಿ ಸಾರ್ " ಎಂದು ಸಲಹೆ ಕೊಟ್ಟಿದ್ದೆ. ಆದರೆ ಇವತ್ತು ಕೂಡ ಶಾಲೆಗೆ ಬಂದ್ಕೂಡಲೇ ಎಂದಿನಂತೆ ಕಣ್ಕಥೆ ಹೇಳ್ತಾ ಇದ್ರು.ಇವತ್ತೇನೋ ಕಥೆಯ ಜೊತೆ ರಸಾನುಭವ ಇದ್ದುದ್ದರಿಂದ ನಾನೂ ಸ್ವಲ್ಪ ಖೇಧ ಪಟ್ಟೆನು. ಅದಕ್ಕಿರುವ ರಹದಾರಿಗಳ ಕುರಿತಾಗಿ ಮತ್ತೆ ಭೂತ, ವರ್ತಮಾನ,ಭವಿಷ್ಯದ ವಿಚಾರಗಳು ನಾಲಗೆ ಮೇಲಾಡ ತೊಡಗಿದವು. ಆ ಹಾದಿಯಲ್ಲಿಯೇ ದೊರೆತದ್ದು ಇಂದಿನ ಈ ಕಥೆಯ ನಾಯಕಿ ಗುಬ್ಬಿಹಾಳ್ ಅಂಬ್ರಮ್ಮವ್ವ.

  ನೋಡಲು ಮುಪ್ಪಾಗಿ ಸುಕ್ಕುಗಟ್ಟಿದ ಎಳೆ ಸಣಕಲು ದೇಹ, ಇಂದಿಗೂ ಅಲುಗಾಡದ ಗಟ್ಟಿಮುಟ್ಟಾದ ಹಲ್ಲುಗಳು, ಸರಳ ಸಜ್ಜನಿಕೆಯ ಅವಿರತ ಶ್ರಮದ ಮುಗ್ಧ ಜೀವಿ.ಅಲ್ಲದೇ ಯಾವುದೇ ಫಲಾಪೇಕ್ಷವಿಲ್ಲದೇ ಗುಪ್ತ ಸೇವೆ ಮಾಡುತ್ತಿರುವ ಒಂಟಿ ಬಡಜೀವ.

    ಅಂಬ್ರಮ್ಮವ್ವ ನಮ್ಮ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಆಂಧ್ರದ ಗಡಿಭಾಗದಲ್ಲಿರುವ ನವ ಗುಬ್ಬಿಹಾಳ್ ಗ್ರಾಮದವರು. ಪತಿರಾಯ ತಿಮ್ಮಣ್ಣನ ಮರಣ ನಂತರ ಇರುವ ಓರ್ವ ಮಗಳೊಂದಿಗೆ ಬರುವ  ಮಾಸಿಕ ಅಲ್ಪ ವೃದ್ಯಾಪ ವೇತನದೊಂದಿಗೆ ಜೀವನ ಸಾಗಿಸುತ್ತಿದ್ದಾಳೆ.

  ಇವರ ಮಾಡುತ್ತಿರುವ ಗುಪ್ತ ಕಾಯಕವೇನೆಂದರೆ ಕಣ್ಣಲ್ಲಿ ಬಿದ್ದ ಕಲ್ಲಿನ ಚೂರು, ಕಸ, ದೂಳು ತೆಗೆಯುವುದು.ಯಾವುದೇ ಉಪಕರಣಗಳ ಸಹಾಯವಿಲ್ಲದೇ ಕೇವಲ ತಮ್ಮ ನಾಲಗೆಯಿಂದ ಕ್ಷಣರ್ಧಾದಲ್ಲಿ ತುಂಬಾ ಸರಳವಾಗಿ ತೆಗೆಯುವ ಜಾಣ್ಮೆಯನ್ನು ಹೊಂದಿದ್ದಾರೆ. ಅವರ ಕಾರ್ಯದ ವೈಖರಿಯನ್ನು ಕಂಡುಂಡವರು , ಅನುಭವಿಸಿದವರಲ್ಲಿ ಒಬ್ಬರಾದ ಭೈರಗಾಮದಿನ್ನೆ ಶಾಲೆಯ ಮುಖ್ಯೋಪಾಧ್ಯಾಯ ಕೆ.ಸಣ್ಣ ಕರಿಯಪ್ಪ " ನಿಜಕ್ಕೂ ಯಾವ ವೈದ್ಯರು ಇಷ್ಟು ಸುಲಭವಾಗಿ ಮತ್ತು ಸರಳವಾಗಿ ಕಣ್ಣಲ್ಲಿ ಬಿದ್ದ ಕಲ್ಲಿನ ಹರಳನ್ನಾಗಲಿ , ಕಸವನ್ನಾಗಲಿ ತೆಗೆಯಲು ಸಾಧ್ಯವಿಲ್ಲ. ನಾನೂ ಸಹ ಸುಮಾರು ಒಂದುವರೆ ತಿಂಗಳಿನಿಂದ ಅನುಭವಿಸುತ್ತಿದ್ದ ಕಣ್ಭೆನೆಯನ್ನು ಸ್ಥಳೀಯರ ಮೂಲಕ ಇವರ ಕೈಚಳಕ ಅರಿತು ನಾನೂ ಸಹ ಗುಣಮುಖನಾಗಿದ್ದೇನೆ" ಎಂದರು.

   ಕಣ್ಣಿನ ಕಸವನ್ನು ತೆಗೆಯಲೆಂದು ಮಾತ್ರೆ,ಡ್ರಾಪ್ಸ್  ಮತ್ತಿತರೆ ಅಂತೇಳಿ ಸಾವಿರಾರು  ರೂಪಾಯಿ ವಸೂಲಿ ಮಾಡುವ ಆಸ್ಪತ್ರೆಗಳ ನಡುವೆ ಒಂದು ರೂಪಾಯಿ ಅಪೇಕ್ಷಸದ ಅಂಬ್ರಮ್ಮವ್ವನಂತವರು ಸಿಗುವುದು ತುಂಬಾ ಅಪರೂಪ. 

  ಇವರು ಕಣ್ಣನ್ನು ಪರೀಕ್ಷಸುವ ಮುನ್ನ ಊಟ ಮಾಡುವುದಿಲ್ಲ. ಕಣ್ಣಲ್ಲಿ ತಮ್ಮ ನಾಲಗೆ ಇಟ್ಟು ಕಸ ತೆಗೆಯುವುದರಿಂದ ಊಟದ ನಂತರ ನಾಲಗಡಯಲ್ಲಿ ಉಳಿದ ಕಾರ ಕಣ್ಣಿಗೆ ಉರಿಗೆ ಕಾರಣವಾಗುತ್ತದೆ. ಒಂದು ವೇಳೆ ಊಟವೇನಾದರೂ ಮಾಡಿದ್ದರೆ ಒಂದೆರಡು ಗಂಟೆ ಬಿಟ್ಟು ಬರಲು ತಿಳಿಸುತ್ತಾಳೆ. 

 ಈ ವಿದ್ಯೆ ನಿಮಗೆ ಸಿದ್ದಿಸಿದ್ದು ಹೇಗೆ ಎಂದು ಕೇಳಿದ ಪ್ರಶ್ನೆಗೆ ಅವ್ವ " ನಮ್ಮಮ್ಮ ಅಂಬಾಕೆ ನಂಗೆ ಈ ಇದ್ಯೆನಾ ಹೇಳ್ಕೊಟ್ಟು ಸತ್ತೋದ್ಲು.ಅವಾಂಗಿಂದ ನಾನೇ ತೆಕ್ಕಂತಾ ಬಂದೀನಿ.ಈಗ ಈ ಸಣ್ಣ ವಿಷ್ಯನ ಪ್ರಪಂಚಕ ಗೊತ್ತಾಗೊತರ ಮಾಡಕತ್ತಿರಿ, ಇವೆಲ್ಲಾ ನಂಗ್ಯಾಕಪ್ಪ" ಅಂತಾ ಮುಗ್ಧವಾಗಿ ಹೇಳುತ್ತಾರೆ.

  ನಾನು ತುಂಬಾ ಕೌತುಕದಿಂದಲೇ ಅವರ ಕಾರ್ಯ ಚಮತ್ಕಾರಿಕೆ ನೋಡಲೆಂದೇ ಮೇಷ್ಟ್ರು ಗಳೊಂದಿಗೆ  ಹೋಗಿದ್ದೆ. ತುಂಬಾ ಹಿರಿಯ ಜೀವ ನಡೆಯಲು ಆಗದ ಕಾರಣ ಅವರು ಕೂತಲ್ಲಿಗೆ ಹೋದೆವು. ಬಾಯನ್ನು ಸ್ವಚ್ಛ ನೀರಿನ ಮೂಲಕ ಸ್ವಚ್ಚಗೊಳಿಸಿ ಕಸ ಬಿದ್ದ ಕಣ್ಣಿನ ರೆಪ್ಪಯನ್ನು  ಕೈಬೆರಳಲ್ಲಿ ಹಿಡಿದು ಕ್ಷಣಾರ್ಧದಲ್ಲಿ ನಾಲಗೆಯೊಳಗೆ ತಮ್ಮ ನಾಲಗೆಯನ್ನಾಡಸಿ ಮೂರು ಚಿಕ್ಕ ಕಲ್ಲಿನ ಚೂರುಗಳು ನಾಲಗೆ ಮೂಲಕ ಹೊರತಂದು ಮೇಷ್ಟ್ರು ಕೈಗಿತ್ತರು. ನಾನು ನೋಡಿ ಇಷ್ಟು ಗಾತ್ರದ ಕಲ್ಲಿನ ಚೂರುಗಳು ಕಣ್ಣಿಲ್ಲಿ ಇದ್ದುದಾದರೂ ಹೇಗೆ ಎಂದು ಒಮ್ಮೆಗೆ ಆಶ್ಚರ್ಯವಾದೆ.

 ಅಲ್ಲವ್ವ ನೀನು ಹೋದ ಮೇಲೆ ಈ ಕೆಲಸ ಮಾಡ್ತಾರೆ ಎಂದು ತಮಾಷೆಯಾಗಿ ಕೇಳಿದ್ದಕ್ಕೆ " ಯಾರ್ ಮಾಡ್ತಾರಪ್ಪ ಇವೆಲ್ಲಾ. ಈಗ ಮುಳ್ಳು ಚುಚ್ಚಿದ್ರೂ ಆಸ್ಪತ್ರೆಗೋಗು ಜನರ್ತಕ ಇವೆಲ್ಲಾ ಕೆಲ್ಸ ಮಾಡಲ್ಲಾ.ನನ್ಮಗಳಿಗೆ ಇದರ ಬಗ್ಗೆ ಆಸೆಯಿಲ್ಲ ಇಂಗಿದ್ದಾಗ ಇದು ಸಹ ನನ್ಜೊತೆನೆ ಕುಣಿಗೆ ಬರ್ತೈತೇ" ಅಂತಾ  ಹೇಳುವ ಜೀವಕ್ಕೆ ಕೊನೆಯಲ್ಲಿ ಎಲೆಡಿಕೆ ದಕ್ಷಿಣೆ ಅಂತಾ ಐವತ್ರೂಪಾಯಿ ಕೊಟ್ಟರೆ ಎಲೆಡಿಕೆ ತಗೆದುಕೊಂಡು ಹಣ ಬೇಡ ಎನ್ನುವ ಇಂತಹ ನಿಷ್ಕಲ್ಮಷ ಹಿರಿಯ ಮನಸ್ಸಿಗೊಂದು ನಮ್ಮೆಲ್ಲರ ಸಲಾಂ ಇರಲಿ.

       - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ

        ಸಾಹಿತಿ ಮತ್ತು ರಂಗ ಸಂಶೋಧಕರು

               ಸಿರುಗುಪ್ಪ - 9379857775




Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.