ರಂಗ ಮಾಲಿಕೆ -೬೧ ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"
ಬಣ್ಣದ ಬದುಕು
ರಂಗ ಮಾಲಿಕೆ -೬೧
ಕಲಾ ಚತುರ "ಹಂದ್ಯಾಳ್ ಪುರುಷೋತ್ತಮ"
ಇವರು ಬಳ್ಳಾರಿ ತಾಲ್ಲೂಕಿನ ಹಂದ್ಯಾಳು ಗ್ರಾಮದ ಜಿ.ಹನುಮಂತಪ್ಪ ಮತ್ತು ಲಕ್ಷ್ಮೀದೇವಿಯವರ ಮಗನಾಗಿ ೦೧.೦೬.೧೯೬೬ ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಛಾಯಾಗ್ರಾಹಕರು ಪ್ರವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಸುಮಾರು 23 ವರ್ಷಗಳ ಕಾಲ ವೃತ್ತಿ ಕಂಪನಿಗಳಲ್ಲಿ ಅಭಿನಯಿಸುವ ಮೂಲಕ ನಟನೆಗೆ ಮಹತ್ವ ತಂದುಕೊಟ್ಟರು. ಇದು ಗ್ರಾಮೀಣ ಪ್ರತಿಭೆಗೆ ಸಿಕ್ಕ ಮನ್ನಣೆ ಎಂದರೆ ತಪ್ಪಾಗಲಾರದು. ಇವರು ತಮ್ಮ ಶಿಕ್ಷಣವನ್ನು ಹಂದ್ಯಾಳ್ ಕೊರ್ಲಗುಂದಿ ಬಳ್ಳಾರಿಯಲ್ಲಿ ಮುಗಿಸಿದರು. ತಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಂಗದೊಲವುಗೆ ಸೆರೆಯಾದರು.ಆ ಮೂಲಕ ಗ್ರಾಮದ ಜಾತ್ರೆ ಉತ್ಸವಗಳಲ್ಲಿ ತಮ್ಮ ಅಭಿನಯದ ಚಾಕಚಕ್ಯತೆಯನ್ನು ತೋರ್ಪಡಿಸಿದರು. ತಮ್ಮ ತಂದೆಯ ಪೂರ್ಣಪ್ರಮಾಣದ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು.
ಇಡೀ ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕವಾಗಿ ಸಮೃದ್ಧವಾದ ನಾಡು ಅಂತೆಯೇ ಇಲ್ಲಿ ಜಾನಪದ ಹವ್ಯಾಸಿ ಹೀಗೆ ನಾನಾ ವಿಧವಾಗಿ ಸಾಂಸ್ಕೃತಿಕ ವಾತಾವರಣ ಹಚ್ಚಹಸಿರಾಗಿದೆ ಈ ಮೂಲಕ ಶ್ರೀಯುತರ ಹುಟ್ಟೂರಿನಲ್ಲಿ ಬಾಲ್ಯ ಕಲಿಯುವಾಗ ಊರಿನಲ್ಲಿ ಕಾಣಸಿಗುತ್ತಿದ್ದ ನಾಡೋಜ ಬುರ್ರಕಥಾ ಈರಮ್ಮನವರ ಅಭಿನಯ ಪೂರಿತ ಮತ್ತು ವಾಚೀಕ ಸಂಪನ್ನವಾದ ಕಥೆಗಳು, ಬಯಲಾಟದ ಜಂಬಣ್ಣನವರ ಹಾಸ್ಯ ಸದೃಶ್ಯ ದೃಶ್ಯಾವಳಿಗಳು,ಗದ್ಯ ಪದ್ಯ ಮಿಶ್ರಿತ ಪುರಾಣ ಪ್ರವಚನ ಹಾಗೂ ಭಜನಾ ಹಾಡುಗಳು ಈ ಎಲ್ಲವೂ ಹಂದ್ಯಾಳ್ ರನ್ನು ರಂಗಾಸಕ್ತ ರನ್ನಾಗಿ ಪರಿವರ್ತಿಸಿದವು.
ಹಂದ್ಯಾಳರ ಮನದಲ್ಲಿ ಮನೆಮಾಡಿದ್ದ ನಟ ಭಯಂಕರನಿಗೆ ಬೆಳಕು ದೊರೆತದ್ದು ಕ್ರಿ.ಶ.೧೯೯೧ರಲ್ಲಿ.ಅದು ಬಿ.ವಿ.ಈಶರ 'ಅಶರತ್'ನಾಟಕದಲ್ಲಿ 'ಛಾಯಾಗ್ರಾಹಕ'ನಾಗಿ ಅದ್ಭುತವಾಗಿ ಅಭಿನಯಿಸುವ ಮೂಲಕ. ಇವರ ಅಭಿನಯಕ್ಕೆ ಮಾರುಹೋದ ಪುರ ಜನರು ಇವರ ೨-೩ ನಾಟಕಗಳಿಗೆ ಅಭಿಮಾನಿಗಳಾಗಿ ರಂಗಪಲ್ಲಕ್ಕಿಯ ಸರದಾರರನ್ನಾಗಿಸಿದರು.ಆ ಸಮಯಕ್ಕೆ ನಿರಾಕರವಾಗಿದ್ದ ಶಿಲ್ಪಕ್ಕೆ ಕಾಯಕಲ್ಪ ಸಿಗುವ ಸಮಯ ಸನ್ನದ್ಧವಾಯ್ತು. ಯಾಕೆಂದರೆ ರಂಗತಾರೆ ಎಲಿವಾಳ ಸಿದ್ದಯ್ಯ ಸ್ವಾಮಿ ಮತ್ತು ತಂದೆ ಹನುಮಂತಪ್ಪರ ಬೋಧನೆಯೇ ಇವರ ರಂಗ ಕಾಯಕಕ್ಕೆ ವರದಾನವಾಗಿ ಪರಿವರ್ತನೆಗೊಂಡಿತು.ಪ್ರಬುದ್ಧ ಕಲೆಯ ಪರಿಚಯವಾಗಿ ಮುಂದೆ ಮತ್ತೊಂದು ಕುರುಕ್ಷೇತ್ರ,ಧನಿಕರ ದೌರ್ಜನ್ಯ, ಕರ್ತವ್ಯದ ಕಾಣಿಕೆ, ದನ ಕಾಯೋರ ದೊಡ್ಡಾಟ, ಕುಂಕುಮ ತಂದ ಕೈಲಾಸ, ವಿಲನ್ ಪತ್ರ, ಧರಿತ್ರಿ ಹಾಗೂ ಮಹಿಮಾಪುರ, ರಕ್ತರಾತ್ರಿ,ಸತ್ಯ ಹರಿಶ್ಚಂದ್ರ, ಮೋಹಿನಿ ಬಸ್ಮಾಸುರ ಇನ್ನು ಮುಂತಾದ ಸಾಮಾಜಿಕ, ಪೌರಾಣಿಕ, ಹವ್ಯಾಸಿ ನಾಟಕಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ಇಡೀ ನಾಡಿನಾದ್ಯಂತ ಹೆಸರಾದರು.
ಹಂದ್ಯಾಳರು ಪ್ರವರ್ಧಮಾನಕ್ಕೆ ಬಂದಂತೆ ಇವರ ಕಲೆಗೆ ಆಸರೆಯಾಗಿ ಬಳ್ಳಾರಿಯ ಆಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪರು ನಿಂತಿದ್ದಲ್ಲದೇ ಅವರ ಮಾರ್ಗದರ್ಶನದಲ್ಲಿ 'ಶ್ರೀ ಮಹಾದೇವ ತಾತ ಕಲಾ ಸಂಘ' ಸ್ಥಾಪನೆ ಮಾಡಿ ಸಂಸ್ಥೆಯ ಆಶ್ರಯದಲ್ಲಿ ನೂರಾರು ಕಾರ್ಯಕ್ರಮಗಳ ಆಯೋಜನೆಉ ಮೂಲಕ. ಇನ್ನಷ್ಟು ಮುನ್ನೆಲೆಗೆ ಬಂದರು.ಅಲ್ಲದೇ ಸಂಸ್ಥೆಯ ವತಿಯಿಂದ ಪ್ರತ್ಯೇಕ ರಂಗತಂಡ ಕಟ್ಟಿ ಇಡೀ ರಾಜ್ಯದಾದ್ಯಂತ ಸಂಚರಿಸಿ ಹಂಪಿ, ದಸರಾ, ಕಾರಾವಾರ,ಆನೆಗುಂದಿ,ಬಿಜಾಪುರ, ಬಾದಾಮಿ, ಸಿದ್ಧಗಂಗಾ,ಧಾರವಾಡ, ಗಡಿನಾಡು,ಉಡುಪಿ,ರಂಗಮಲ್ಲಿಗೆ, ಉತ್ಸವ ಮತ್ತು ನಾಟಕೋತ್ಸವಗಳಲ್ಲಿ ತಮ್ಮ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೈಯಕ್ತಿಕ ಮತ್ತು ಸಾಮೂಹಿಕವಾಗಿ ಗುರುತಿಸಲ್ಪಟ್ಟರು.
ರಂಗಭೂಮಿಯ ಜೊತೆ ಜೊತೆಗೆ ತಮ್ಮ ವೃತ್ತಿಯಾದ ಛಾಯಾಗ್ರಹಣ ಕಾಯಕಕ್ಕೂ ಎಳ್ಳಷ್ಟು ಕಳಂಕ ಬರದ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಅದರಲ್ಲೂ ತಮ್ಮ ಪ್ರತಿಭೆಯ ಅನಾವರಣ ಮಾಡಿದ್ದಾರೆ. ಅದರಲ್ಲೂ ನಗರದಲ್ಲಿ ಎಲ್ಲೆ ರಂಗ ಚಟುವಟಿಕೆಗಳು ನಡೆದರೂ ಆಯೋಜಕರು ಕರೆದರೂ, ಕರೆಯದಿದ್ದರೂ ಹೋಗಿ ನಾಟಕಕ್ಕೆ ಸಂಬಂಧಿಸಿದ ಪೋಟೋಗಳನ್ನು ತೆಗೆದು ತಮ್ಮ ಪರಿಚಿತ ಮಾಧ್ಯಮ ವರ್ಗದವರಿಗೆ ನೀಡಿ ಕಲಾವಿದರ ದಾಖಲಾತಿಗೆ ಸಹಕರಿಸುವ ರಂಗ ಮನಸ್ಸನ್ನು ಹೊಂದಿದ್ದಾರೆ. ವೃತ್ತಿ ಕಾಯಕದ ಜೊತೆಗೆ ರಂಗ ಬದ್ಧತೆಗೂ ಪ್ರಥಮ ಆದ್ಯತೆ ನೀಡುವ ಇವರ ಅತೀತವಾದ ರಂಗಾಸಕ್ತಿ ಮತ್ತೊಬ್ಬರಿಗೆ ಸ್ಫೂರ್ತಿ ಎನಿಸಿದೆ.
ಇಂತಹ ಮೇರು ನಟರ ಕಲೆ ಮೇರಗು ಎಂಬಂತೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ.ಅವುಗಳಲ್ಲಿ ಪ್ರಮುಖವು ಎಂದರೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಗಾನ ಗಂಧರ್ವ ಕಲಾ ಟ್ರಸ್ಟ್, ಗದಗ ಇವರ ವತಿಯಿಂದ ಅಭಿನಯ ಸಿರಿ, ಕನ್ನಡ ಸಾಹಿತ್ಯ ಪರಿಷತ್,ಬೆಂಗಳೂರು ಇವರ ವತಿಯಿಂದ ಕನ್ನಡ ಶ್ರೀ,ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯಿಂದ ಭರಣಿ ಚೇತನ, ಶ್ರೀ ಕೊತ್ತಲಾಂಜಿನೆಯ್ಯ ಕಲಾ ಸಂಘ ಕೂಡ್ಲಿಗಿಯಿಂದ ಕಲಾ ಚತುರ, ಕರ್ನಾಟಕ ರಂಗ ಸಂಗೀತ ಪರಿಷತ್, ಬೆಂಗಳೂರು ಇವರಿಂದ ರಂಗ ಕೌಸ್ತುಭ ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಿಂದ ಶ್ರೀಯುತರನ್ನು ಸನ್ಮಾನಿಸಿ ಶ್ರೀಮಂತವಾಗಿವೆ.ಇಂತಹ ಮಹನೀಯರು ತಮ್ಮ ತಂದೆ ಮತ್ತು ಗುರುಗಳ ಆಸೆಯಂತೆ ನಟರಾಗಬೇಕೆಂಬ ಕನಸು ಹೊತ್ತು ಬೆಳ್ಳಿ ತೆರೆಯಲ್ಲಿ ಮಿಂಚುವ ಮೊದಲೇ ಇಬ್ಬರನ್ನೂ ಕಳೆದುಕೊಂಡರು.ಆದರೂ ಎದೆಗುಂದದೆ ಮುಂದೆ ಬೆಳ್ಳಿತೆರೆಯಲ್ಲೂ ಬಯಲಾಟದಲ್ಲೂ ಮಿಂಚುವ ಮೂಲಕ ಇಬ್ಬರ ಕನಸನ್ನು ನನಸಾಗಿಸಿದರು. ಇಂತಹ ಪ್ರತಿಭಾನ್ವಿತರ ರಂಗ ಕಾಯಕ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ ಎಂಬುದೇ ನನ್ನೀ ಲೇಖನದ ಆಶಯ.
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.

Comments
Post a Comment