ರಂಗ ಮಾಲಿಕೆ - ೬೪ ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.
ಬಣ್ಣದ ಬದುಕು
ರಂಗ ಮಾಲಿಕೆ - ೬೪
ನೇಪಥ್ಯಕ್ಕೆ ಸರಿದ ಬಣ್ಣದ ಮೋಡಿಗಾರ 'ಎಂ.ಮುತ್ಯಾಲ ಶ್ರೀರಾಮುಲು'.
ನಾಟಕ ಎಂದ ಕೂಡಲೇ ಅಲ್ಲಿ ನಟ,ನಟಯರಲ್ಲದೇ, ನೇಪಥ್ಯದಲ್ಲಿದ್ದಕೊಂಡು ತಮ್ಮ ಭಾವಲಹರಿಯನ್ನು ಅಭಿನೇತೃಗಳ ಮೂಲಕವೇ ಅಭಿವ್ಯಕ್ತಿ ಪಡಿಸುವ ವ್ಯಕ್ತಿಗಳಲ್ಲಿ 'ಪ್ರಸಾಧನಕಾರ ಅಥವಾ ಮೇಕಪ್ ಮ್ಯಾನ್' ಒಬ್ಬರು. ಈಗಿನ ಜಮಾನದಲ್ಲಿ ನಿಜವಾಗಿಯೂ ನಾಟಕವೊಂದಕ್ಕೆ ರಂಗು ಬರುವುದೇ ನೇಪಥ್ಯಗಾರರಿಂದ.ಅದರಲ್ಲೂ ಪ್ರಸಾಧನಕಾರ ತನ್ನ ಕುಂಚದಿಂದ ಅಭಿನೇತ್ರಿಯ ಪಾತ್ರಕ್ಕೆ ಜೀವತುಂಬುತ್ತಾನೆ. ಅವರು ನಾಟಕದ ಕಥಾವಸ್ತುವಿಗೆ ಬಣ್ಣ ತುಂಬುತ್ತಾರೆ. ೮೦ ರ ದಶಕದಲ್ಲಿ ಬಳ್ಳಾರಿಯ ರಂಗಭೂಮಿ ಇತಿಹಾಸದಲ್ಲಿ ಉತ್ತುಂಗದ ಪ್ರಸಿದ್ಧತೆಯನ್ನು ಗಳಿಸಿದ ಒಬ್ಬ ಶ್ರೇಷ್ಠ ಪ್ರಸಾಧನಕಾರ ಇಂದು ನಮ್ಮ ನಿಮ್ಮೊಡನೆ ಇದ್ದು ಇಲ್ಲದಂತಾಗಿದ್ದಾನೆ.ಆ ವ್ಯಕ್ತಿಯೇ ಬಳ್ಳಾರಿಯ 'ಎಂ.ಮುತ್ಯಾಲ ಶ್ರೀರಾಮುಲು'.
ಸಣ್ಣದಾದ ಸಣಕಲು ದೇಹ, ಆ ದೇಹಕ್ಕೆ ಅಷ್ಟೇನು ವರ್ಚಸ್ಸಲ್ಲದ ಉಡುಪು, ಒಡೆದ ಸೋಡಾಗ್ಲಾಸು, ಕೈಲೊಂದು ಮೋಟು ಬೀಡಿ ಮತ್ತು ಬಾಯಲ್ಲಿ ಗುಟ್ಕಾ ಜಗಿಯುತ್ತಾ ಆಗಾಗ ಬಳ್ಳಾರಿ ಹೃದಯ ಭಾಗದ ರಾಘವ ಕಲಾ ಮಂದಿರದಲ್ಲಿ ಕಾಣಸಿಗುವ ಈ ಗುರುತಿರುವ ವ್ಯಕ್ತಿಯೇ ಎಂ.ಶ್ರೀರಾಮುಲು. ನಿಜಕ್ಕೂ ಬಹಿರಂಗದಲ್ಲಿ ಸರಳ ಸಜ್ಜನಿಕೆಯ ತೀರಾ ಬಡವರಾದರೂ, ಅಂತರಂಗದಲ್ಲಿ ಎಲ್ಲರನ್ನೂ ಅತಿಯಾಗಿ ಪ್ರೀತಿಸುವ ಹೃದಯವಂತಿಕೆಯ ಶ್ರೀಮಂತರೆನಿಸಿದ್ದಾರೆ. ಇವರು ಸಾ.ಶ.೦೮.೦೮.೧೯೫೭ ರಲ್ಲಿ ಬಳ್ಳಾರಿಯಲ್ಲಿ ಎಂ.ಅಂಜಿನಪ್ಪ ಮತ್ತು ಎಂ.ವೆಂಕಟಲಕ್ಷ್ಮೀ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಅಪ್ಪ ಸಿಂಡಿಕೇಟ್ ಬ್ಯಾಂಕ್ ನೌಕರರಾಗಿದ್ದರು.ಅವರಂತೆ ತಾವು ಸಹ ಆಗಬೇಕೆಂಬ ಒಲವಿದ್ದರು, ಅವರಲ್ಲಿದ್ದ ಅಂತಃಸೂಪ್ತ ಕಲೆಗಳಾದ ಚಿತ್ರಕಲೆ,ಬ್ಯಾನರ್,ಬೋರ್ಡ್ ಬರವಣಿಗೆ, ನಟನೆ, ಪ್ರಸಾಧನ ಕಲೆಗಳು ಇವರನ್ನು ಹೊರಜಗತ್ತಿಗೆ ತೋರ್ಪಡಿಸಲು ಆತೊರೆಯುತ್ತಿದ್ದವು.ಅದಕ್ಕೆ ಇಂಬು ದೊರೆತದ್ದು ಇವರ ಶಿಕ್ಷಣ ಹಂತದಲ್ಲಿ.
ಇವರು ತಮ್ಮ ಶಿಕ್ಷಣವನ್ನು ಬಳ್ಳಾರಿಯ ವಾರ್ಡ್ಲಾ ಕಾಲೇಜು ಮತ್ತು ವೀರಶೈವ ಕಾಲೇಜಿನಲ್ಲಿ ಓದುತ್ತಾ ಬಿ.ಎಸ್ಸಿ (ಕೆಮಸ್ಟ್ರಿ) ಪದವಿ ಮುಗಿಸಿದರು. ಅಲ್ಲದೇ ವಾರ್ಡ್ಲಾ ಕಾಲೇಜಿನಲ್ಲಿ ಪಿ.ಯು.ಸಿ ಓದುವಾಗಲೇ ಎ.ಲಕ್ಷ್ಮೀ ನಾರಾಯಣರ ನಿರ್ದೇಶನದ 'ಗುಂಡೆಲ್ಲೋ ಮಾರ್ಚಾಬಡನು' ಎಂಬ ತೆಲುಗು ನಾಟಕದ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಈ ನಾಟಕದಲ್ಲಿ ಕೇವಲ ಅಭಿನಯವೊಂದೆ ಅಲ್ಲದೇ ಈ ನಾಟಕದ ಎಲ್ಲ ಪಾತ್ರಧಾರಿಗಳಿಗೂ ಬಣ್ಣ ಹಚ್ಚಿ ಸಿಂಗರಿಸುವ ಮೂಲಕವೇ ಪ್ರಸಾಧನಕಾರನ ಅರ್ವಾರ್ಡ್ ತಗೆದುಕೊಂಡರು. ಅಲ್ಲದೇ ಅವರು ಮೊದಲ ಮೇಕಪ್ ಮಾಡಿದ್ದು ಅವರ ಗೆಳೆಯ,ಬಾಳಿನ ಪ್ರೇರಕರಾಗಿದ್ದ ಬಳ್ಳಾರಿ ರಂಗಭೂಮಿಯ ಮಹಾ ಕಲಾವಿದ ಶಿವಶಂಕರ್ ನಾಯ್ಡುರವರಿಗೆ.ಮೊದಲ ಪ್ರಯತ್ನದಲ್ಲಿಯೇ ಯಶಸ್ಸಿನ ಹಾದಿಯನ್ನು ತೋರ್ಪಡಿಸಿದ ಕೀರ್ತಿ ಶ್ರೀರಾಮುಲುರವರಿಗೆ ಸಂದಿತು.ಅಂತೆಯೇ ಅಂದಿನಿಂದ ೨೦೧೬ರವರಗೆ ಎಡಬಿಡದೆ ಸುಮಾರು ೧೬೦೦೦ ಕಾರ್ಯಕ್ರಮಗಳಿಗೆ ಪ್ರಸಾಧನ ಮಾಡಿದ್ದಾರೆ. ಎಲ್ಲಿಯೂ ನಿಲ್ಲದೇ ಸತತ ೨೫-೩೦ ವರ್ಷಗಳ ಕಾಲ ಬಾಲ್ಯದಿಂದ ಇಲ್ಲಿಯವರೆಗೆ ರಂಗಭೂಮಿಯಲ್ಲಿ ಜೀವಂತರಾಗಿದ್ದಾರೆ. ಯಾವುದೇ ಕೋರ್ಸ್ ಕಲಿಕೆಯಿಲ್ಲದೇ ಪ್ರಸಾಧನದ ವಿಧಗಳಾದ ನೇರ ಪ್ರಸಾಧನ, ಪಾತ್ರ ಪ್ರಸಾಧನ, ಮೊಸಾಯಿಕ್ ಪ್ರಸಾಧನ ಮತ್ತು ಸ್ಕಲ್ಪ್ಚರ್ ಪ್ರಸಾಧನಗಳನ್ನು ಸೊಗಸಾಗಿ ಮಾಡುವ ಜಾಣ್ಮೆ ಹೊಂದಿದ್ದರು ಎಂದು ಅವರ ಬಣ್ಣದ ಸವಿಯುಂಡವರಲ್ಲಿ ಒಬ್ಬರಾದ ರಂಗ ನಿರ್ದೇಶಕ ಜಗದೀಶರು ಹೇಳುತ್ತಾರೆ.
ಇವರ ನವಿರಾದ , ಉತ್ಪ್ರೇಕ್ಷೆ ಎನಿಸದ ಸರಳ ಕುಂಚದ ಪ್ರಸಾಧನ ಇವರ ವೃತ್ತಿಯಾಗಿದ್ದರೂ, ಇನ್ನಿತರೆ ಅಂತಃಸುಪ್ತ ಕಲೆಗಳು ಇವರ ಪ್ರವೃತ್ತಿಯಾಗಿದ್ದವು. ಇವರಲ್ಲಿನ ಪ್ರತಿಭೆಗೆ ಸೂಕ್ತ ಪ್ರೇರಣೆ ದೊರೆತದ್ದು ವಾರ್ಡ್ಲಾ ಕಾಲೇಜಿನಲ್ಲಿ ರಾಮಮೂರ್ತಿಯವರ ಮೂಲಕ ಚಿತ್ರಕಲೆ ಮತ್ತು ಸ್ವಪ್ರೇರಣೆಯಿಂದ ಪ್ರಸಾಧನ ಕಲೆ ಸಿದ್ಧಿಯಾದವು. ಇದಲ್ಲದೇ ಇವರ ಮೇಕಪ್ ಕಲೆಯನ್ನು ಕಂಡು ಹಿರಿಯರಾದ ಸಿ.ಎ.ಎನ್ ನಾಯ್ಡುರವರ ಮೂಲಕ ಹೈದ್ರಾಬಾದ್ ಗೆ ಹೋಗಿ ಅಲ್ಲಿ ಹೆಚ್ಚಿನ ಪ್ರಸಾಧನ ಕಲಾವಿದ್ಯೆಯನ್ನು ಗಳಿಸಿದರು.ಅಲ್ಲಿಂದ ಬಂದ ನಂತರ 'ಗೌಡ್ರ ಗದ್ಲ,ಮೀರೈತೆ ಏಂ ಚೇಸ್ತಾರು' ಸೂರಿಡು,ಅಶಾಲತಾ ಮುಂತಾದ ೫೦ಕ್ಕೂ ಹೆಚ್ಚು ನಾಟಕಗಳಲ್ಲಿನ ಸ್ತ್ರೀ ಪುರುಷ ಪಾತ್ರಗಳ ಅಭಿನಯದಿಂದ ಹೆಸರಾಗಿದ್ದರು.ಅಲ್ಲದೇ ಗೌಡ್ರಗದ್ಲ ನಾಟಕಕ್ಕೆ ಹಚ್ಚಿದ ಮೇಕಪ್ ಎಲ್ಲರ ಮನಸೊರೆಗೊಂಡು ಇವರನ್ನು ನಟನೆಯಿಂದ ಮೇಕಪ್ ಕಾರ್ಯಕ್ಕೆ ಹೊರಳುವಂತೆ ಮಾಡಿತು. ಅಂತೆಯೇ ಕೆಲವು ಸಿನಿಮಾ, ಕಿರುಚಿತ್ರ ಮತ್ತು ಧಾರಾವಾಹಿಗಳಿಗೆ ಪ್ರಸಾಧನ ಮಾಡಿದ ಹೆಗ್ಗಳಿಕೆ ಇವರ ಬಣ್ಣದ ಬದುಕಿನಲ್ಲಿದೆ.
ಒಮ್ಮೆ ಕುಂಚವಿಡಿದರೆ ಸಾಕು ನಾಟಕದ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ಹೆಚ್ಚು ಗಮನವಹಿಸಿ ಪ್ರಸಾಧನ ಮಾಡಿತ್ತಿದ್ದರು.ಆ ನಿಟ್ಟಿನಲ್ಲಿ ರಕ್ತರಾತ್ರಿ ನಾಟಕದ ಶಕುನಿ ಪಾತ್ರಕ್ಕೆ ತುಂಬಾ ಪ್ರಬುದ್ಧ ಪ್ರಸಾಧನ ಮಾಡುತ್ತಿದ್ದರು. ಇವರಲ್ಲಿ ಯಾವುದೇ ಸಾಂಪ್ರದಾಯಿಕ ಕಲಾ ನೈಪುಣ್ಯತೆ ಇಲ್ಲದಿದ್ದರೂ ಗೆಲ್ಲಬೇಕು,ಸಾಧಿಸಬೇಕೆಂಬ ಇವರಲ್ಲಿನ ಛಲ ಇವರನ್ನು ಉತ್ತುಂಗಕ್ಕೇರಿಸಿತು.ಬೆಳಗಲ್ ವೀರಣ್ಣ, ಸುಭದ್ರಮ ಮನ್ಸೂರ್,ರಮೇಶ್ ಗೌಡ ಪಾಟೀಲ್, ಶಿವಶಂಕರ್ ನಾಯ್ಡುರಂತಹ ಮೇರು ನಟರು ಇವರ ಪ್ರಸಾಧನವನ್ನು ಮೆಚ್ಚಿದ್ದರು.
ಈಗಿರುವಾಗ ಒಮ್ಮೆ ಬೋರ್ಡ್ ಬ್ಯಾನರ್ ಬರೆಯಲು ಹೋದಾಗ ಮೇಲಿಂದ ಬಿದ್ದು ತೀವ್ರ ಬೆನ್ನು ನೋವಿನಿಂದ ಹಾಸಿಗೆ ಹಿಡಿದವರು ಮತ್ತೆ ಮೇಲೆದ್ದು ಕುಂಚವಿಡಿಯಲು ಆಗಲೇ ಇಲ್ಲ.ಹೊಟ್ಟೆಪಾಡಿಗಾಗಿ ಕುಂಚವಿಡಿದರೂ ನಟರ ಮುಖದ ಮೇಲಿನ ಶೇಡ್ಗಳನ್ನು ತೀಡಲು ಹೆಣಗಾಡುತ್ತಿದ್ದರು.ಈಗಿದ್ದಾಗ ಕಾಲಕ್ರಮೇಣ ಎಲ್ಲ ನಾಟಕಗಳಿಗೆ ಪ್ರಸಾಧನಕಾರನಾಗಿರಬೇಕಿದ್ದ ಇವರು ಅದೇ ನಾಟಕಗಳಿಗೆ ಪ್ರೇಕ್ಷಕನಾಗಿ ಬಂದಿದ್ದು ಮಾತ್ರ ಎಂತಹವರ ಮನದಲ್ಲಾದರೂ ಕ್ಲೇಷವನ್ನು ಮೂಡಿಸದಿರದು. ಅಲ್ಲದೇ ಇವರು ಪ್ರಸಾಧನಕ್ಕೆಂದು ಮೊದಲೆಲ್ಲ ಬಾಂಬೆ, ಬೆಂಗಳೂರಿನಂತ ನಗರಗಳಿಂದ ಪ್ರಸಾಧನ ಸಾಮಗ್ರಿಗಳನ್ನು ತರುತ್ತಿದ್ದರು. ಅಲ್ಲದೇ ಹಳ್ಳಿ,ನಗರ ಎಂಬದೇ ಬಳ್ಳಾರಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಮೂಲೆಮೂಲೆಗಳಲ್ಲಿ ಸಂಚರಿಸಿ ಬಣ್ಣತುಂಬಿದ್ದ ಕುಂಚವೇ ಕೊನೆಗೊಮ್ಮೆ ಅವರನ್ನು ಮೂಲೆಗುಂಪಾಗಿಸಿ ತೆರೆಯ ಹಿಂದಕ್ಕೆ ಸರಿಯುವಂತೆ ಮಾಡಿತು.
ಅಲ್ಲಿಗೆ ಇವರ ಬದುಕು ನಿಂತೇ ಹೋಯಿತು ಎಂಬ ಘಳಿಗೆಯಲ್ಲಿ ಇವರ ಕೈಹಿಡಿದ ಶ್ರೀಮತಿ ವಿಜಯರವರು ಇವರ ಬದುಕಿನ ದೀವಿಗೆಯನ್ನು ಹಿಡಿದು ಬೆಳಗತೊಡಗಿದರು. ಗಂಡನಂತೆ ತಾವು ಸಹ ನಾಟಕಗಳಿಗೆ ಅಗತ್ಯವಾದ ವೇಷಭೂಷಣಗಳನ್ನು ಹೊಲಿದು ಬಾಡಿಗೆ ಕೊಡುವ ಮತ್ತು ಮಕ್ಕಳ ನಾಟಕ, ನೃತ್ಯಗಳಿಗೆ ಪ್ರಸಾಧನ ಮಾಡುವ ಕಾಯಕಕ್ಕೆ ಮುಂದಾಗಿ ಬದುಕಿನ ಜಟಕಾ ಬಂಡಿಗೆ ನೊಗವಾದರು. ಅಲ್ಲದೆ ಶ್ರೀರಾಮುಲರ ವಯಸ್ಸು ಎಪ್ಪತ್ತಾದರೂ ಇಂದಿಗೂ ಈ ಹಿರಿಯ ಉಭಯ ಭಾಷಾ ಕಲಾವಿದನ ಜೀವನಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳಿಲ್ಲ.ಕೇವಲ ಹೆಂಡತಿಯ ದುಡಿಮೆಯಿಂದ ಇದ್ದ ಒಬ್ಬ ಮಗಳ ಮದುವೆಯನ್ನು ಮಾಡಿ ಅದರ ಸಾಲವನ್ನು ಮೈಮೇಲೆ ಹೊತ್ತು ಜೋಡೆತ್ತಿನಂತೆ ಸಾಗುತ್ತಿದ್ದಾರೆ. ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದನ ಬದುಕಿಗೆ ಯಾರು ಕೈಹಿಡಿಯದಿದ್ದರೂ ಕಲೆಯೇ ಕೈ ಹಿಡಿದು ಮೇಲಕ್ಕೆ ತಂದಿತು ಎಂಬಾಂತಾಗಲಿ. ಆ ನಿಟ್ಟಿನಲ್ಲಿ ಬಳ್ಳಾರಿಯ ರಾಘವ ಮೆಮೋರಿಯಲ್ ಅಸೋಸಿಯೇಷನ್, ರಂಗ ಜಂಗಮದಂತಹ ಕೆಲವು ಸಂಘ ಸಂಸ್ಥೆಗಳು ನಗದು ಪ್ರಶಸ್ತಿ ಪುರಸ್ಕಾರ ನೀಡಿ ಸತ್ಕರಿಸಿ ಜೀವನದ ಭಾರವನ್ನು ಹಗುರಾಗಿಸಿದ್ದಾರೆ. ಇನ್ನಾದರೂ ಮನಸ್ಸಿರುವ ಮಹನೀಯರು ಇಂತವರ ಬದುಕಿಗೆ ಆಸರೆಯಾಗಲಿ ಎಂಬುದೇ ನನ್ನೀ ಲೇಖನದ ಆಶಯ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

Comments
Post a Comment