ರಂಗ ಮಾಲಿಕೆ -೬೩ ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.
ಬಣ್ಣದ ಬದುಕು
ರಂಗ ಮಾಲಿಕೆ -೬೩
ಕನ್ನಡ ಚಲನಚಿತ್ರರಂಗದ ಗಡಿನಾಡಿನ ರಂಗತಾರೆ 'ಬಳ್ಳಾರಿ ರತ್ನಮಾಲಾ'.
ಭಾರತೀಯ ಚಲನಚಿತ್ರರಂಗದಲ್ಲಿ ಇಂದು ಸ್ಯಾಂಟಲ್ ವುಡ್ ನದ್ದೇ ಅರ್ಭಟ. ಬಾಕ್ಸ್ ಆಫೀಸ್ ನ ಎಲ್ಲಾ ದಾಖಲೆಗಳನ್ನು ಮುರಿದು ಕಟ್ಟುವಷ್ಟರ ಮಟ್ಟಿಗೆ ಬೆಳೆಯುತ್ತಿದೆ.ಅದರ ನಿದರ್ಶನಗಳು ಈಗ ನಮ್ಮ ಕಣ್ಮುಂದೆ ಇರೋ ಕೆ.ಜಿ.ಎಫ್ ನಂತಹ ಅನೇಕ ಸಿನಿಮಾಗಳು. ಆದರೆ ಇಷ್ಟೇಲ್ಲಾ ವೈಭವಪೇತವಾಗಿ ಮೆರೆಯುತ್ತಿರುವ ಸ್ಯಾಂಡಲ್ ವುಡ್ ನೋಣ ಹೊಡೆಯುತ್ತ, ರೋಗಿಯಂತೆ ತೆವಳುತ್ತಾ ಇತ್ತು. ಹಾಗಾದರೆ ಮತ್ತೆ ಪುನಶ್ಚೇತನ ದೊರೆತಿದ್ದು ಯಾವಾಗ? ಆ ಯಶಸ್ಸಿನ ಧೃವತಾರೆಗಳು ಯಾರ್ಯಾರು ? ಅಂತಾ ನೋಡಿದಾಗ ಕಾಣುವ ಹಲವು ಚೇತನಮಣಿಗಳಲ್ಲಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುವಂತೆ ಮಾಡಿದ ಹೆಸರೇ ' ಬಳ್ಳಾರಿ ವನಮಾಲಾ'.
ಇವರು ೦೩ನೇ ಮಾರ್ಚ್ ೧೯೨೮ ರಂದು ಬಳ್ಳಾರಿಯ ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದ ತಿಮ್ಮಪ್ಪ ಹಾಗೂ ವೀರಮ್ಮರ ೬ನೇ ಮಗಳಾಗಿ ಜನಿಸಿದರು. ರತ್ನಮಾಲಾರು ನಿಜಕ್ಕೂ ಸುಂದರ ಹೂಗಳಿಂದ ಕಟ್ಟಿದ ಹೂ ಮಾಲೆಯಷ್ಟೇ ಸೌಂದರ್ಯವತಿ ಮತ್ತು ಸ್ಪೂರದ್ರೂಪಿಯಾಗಿದ್ದರು.ನೋಡಿದಾಕ್ಷಣ ಎಂತಹ ರಸಿಕನಾದರೂ ಮನಸೋತು ಶರಣಾಗತಿಯಾಗಿಸುವಷ್ಟು ಚೆಲುವು ಅವರಲ್ಲಿ ಅಡಗಿತ್ತು. ಅಲ್ಲದೇ ಮೂಲತಃ ಕಲೆಯನ್ನಾಶ್ರಯಿಸಿದ ಕುಟುಂಬದಲ್ಲಿ ಬೆಳೆದಿದ್ದರಿಂದ ಕಲೆಯನ್ನು ಒಲಿಸಿಕೊಳ್ಳಲು ತಡವಾಗಲಿಲ್ಲ. ಬಾಲ್ಯದಿಂದಲೂ ತಮ್ಮ ಸಹೋದರಿಯಾದ ಬಳ್ಳಾರಿ ಲಲಿತಮ್ಮ,ಅಮಿದ್ಯಾಲ ವೆಂಕಮ್ಮರನ್ನು ಅನುಕರಿಸುತ್ತಲೇ ನಟಿಯಾದವರು. ಇವರ ಕಲಾ ನೈಪುಣ್ಯತೆಯ ಪೈಪೋಟಿಯನ್ನು ಕಂಡವರೆಲ್ಲಾ "ಅಕ್ಕ ಸೇರಾದರೆ ತಂಗಿ ಸವಾಸೇರು" ಎಂದು ನಿಬ್ಬೆರಗಾಗಿ ನೋಡುವಂತೆ ಮಾಡಿದ ಅಭಿನೇತ್ರಿಗಳಾಗಿದ್ದರು.
ಹಿರಿಯ ಅಕ್ಕ ಅಮಿದ್ಯಾಲ ವೆಂಕಮ್ಮರ ಒಲುಮೆಯಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಹಾಡುಗಾರಿಕೆಯನ್ನು ಕಲಿತರೆ, ಕಿರಿ ಅಕ್ಕ ಲಲಿತಮ್ಮರ ಸಖ್ಯದಿಂದಾಗಿ ಅಭಿನಯ ಮಟ್ಟುಗಳನ್ನು ಕಲಿತು ಗಗನಕ್ಕೆ ಹಾರುವುದನ್ನು ಕಲಿತರು.ಆ ಮೂಲಕ ಇವರ ಅಕ್ಕಂದರೇ ಇವರ ಕಲಾ ಗುರುಗಳಾದರು. ಲಲಿತಮ್ಮರ ಬಣ್ಣದ ಬದುಕಿನೊಂದಿಗೆ ಇವರ ಪೂರ್ಣ ಬದುಕು ತಳಕು ಹಾಕಿಕೊಂಡಿದೆ. ಅಂತೆಯೇ ಅಕ್ಕನ ಸಾಧನೆಯ ಕೈಗನ್ನಡಿಯೇ ರತ್ನಮಾಲಾ ಎಂದರೆ ತಪ್ಪಾಗಲಾರದು.
ಇತ್ತ ಇವರು ತಮ್ಮ ಅಕ್ಕನೊಂದಿಗೆ ಕೆ.ಹಿರಣ್ಣಯ್ಯನವರ 'ಮಿತ್ರ ಮಂಡಳಿ' ಸೇರಿ ಮಕ್ಮಲ್ ಟೋಪಿ, ಅಕ್ಕ ತಂಗಿ,ರಾಮಾಯಣ, ದೇವದಾಸಿ,ಸಂಸಾರ ನೌಕೆ,ಕಾಳಿದಾಸ, ಸುಭದ್ರಾ ಕಲ್ಯಾಣ, ಗುಲೆಡಬು ಕಾವಲಿ, ಎಚ್ಚಮ ನಾಯಕ,ಬಸವೇಶ್ವರ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ರಸಿಕರ ರಾಣಿಯೆನಿಸಿದ್ದರು.
ಇದೇ ಸಮಯಕ್ಕೆ ಆಗ ತಾನೆ ಉದಯವಾದ ಕನ್ನಡ ಚಲನಚಿತ್ರ ರಂಗ ಅವಸಾನದ ಅಂಚಿಗೆ ಸರಿಯುತ್ತಿದ್ದ.ಇದಕ್ಕೆ ಪ್ರಮುಖ ಕನ್ನಡ ಚಿತ್ರರಂಗದ ಉಗಮದ ವೇಳೆಗೆ ಚಾರ್ಲಿ ಚಾಪ್ಲಿನ್ ನಂತಹ ಕಲಾವಿದರು ಮೇರು ಶಿಖರಕ್ಕೇರಿದ್ದರು.ಅಲ್ಲದೇ ನೆರೆಯ ರಾಜ್ಯದ ಹಿಂದಿ,ತೆಲುಗು, ತಮಿಳು ಉಗಮಗೊಂಡು ಆಗಲೇ ೩-೪ ವರ್ಷಗಳಾಗಿತ್ತಲ್ಲದೇ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೇಬ್ಬಿಸಿದ್ದವು. ಈಗಿರುವಾಗ ಅವುಗಳ ಆರ್ಭಟದ ನಡುವೆ ವರ್ಷಕ್ಕೆ ಒಂದು ಮಾಡುತ್ತಿದ್ದ ಸ್ಯಾಂಡಲ್ ವುಡ್ ಬಿರುಗಾಳಿಗೆ ಸಿಕ್ಕ ತರಗಲೆಯಾಗಿತ್ತು. ಇತರೆ ಭಾಷೆಯ ಸಿನಿಮಾಗಳಿಗೆ ಲಕ್ಷ ಲಕ್ಷ ಬಡ್ಜೆಟ್ ಹಾಕುತ್ತಿದ್ದ ನಿರ್ಮಾಪಕರು ಕನ್ನಡದ ಸಿನಿಮಾಗಳಿಗೆ ಕೇವಲ ೬೦-೭೦ ಸಾವಿರ ಹೂಡಲು ಹಿಂದೆಟಾಕುತ್ತಿದ್ದರು. ಇದಕ್ಕೆ ಪ್ರಮುಖ ಕಾರಣಗಳೆರೆಡು ಒಂದು ಕನ್ನಡ ಸಿನಿಮಾಗಳು ಕರ್ನಾಟಕದಲ್ಲೇ ಮುಗ್ಗರಿಸಿ ಬೀಳುತ್ತಿದ್ದವು.ಮತ್ತೊಂದು ಉತ್ತರ ಕರ್ನಾಟಕ ಭಾಷೆಯಲ್ಲಿ ಸಿನಿಮಾ ಮಾಡಿದರೆ ಮೈಸೂರು ಭಾಷಿಕರಿಗೆ ಹಿಡಿಸುತ್ತಿದ್ದಿಲ್ಲ,ಹಾಗೇ ಮೈಸೂರು ಭಾಷಿಕರ ಸಿನಿಮಾ ಉತ್ತರ ಕರ್ನಾಟಕದವರಿಗೆ ಅರ್ಥವಾಗುತ್ತಿರಲಿಲ್ಲ ಹಾಗಾಗಿ ಆಗೊಂದು ಈಗೊಂದು ಸಿನಿಮಾಗಳಿರುತ್ತಿದ್ದವು. ಇದೇ ಸಮಯಕ್ಕೆ ಕೆಲ ನಾಟಕ ಮಂಡಳಿಗಳು ನಪಾಸಾದ ಸಿನಿಮಾಗಳನ್ನು ಅರ್ಧಬೆಲೆಗೆ ತಂದು ಟೆಂಟ್ ಸಿನಿಮಾಗಳಲ್ಲಿ ತೋರಿಸಿ ಹೊಟ್ಟೆ ಪೋರೆಯುತ್ತಿದ್ದರು. ಇನ್ನು ಮೇರು ನಟರ ಮಂಡಳಿಗಳು ಸಿನಿಮಾ ನಿರ್ಮಾಣದ ಸಾಹಸಕ್ಕೂ ಕೈ ಹಾಕಿದ್ದವು.
ಆ ನಿಟ್ಟಿನಲ್ಲಿ ಹಿರಣ್ಣಯ್ಯ ಮಿತ್ರ ಮಂಡಳಿಯು ೧೯೪೩ರಲ್ಲಿ ಕೊಯಮತ್ತೂರಿನಲ್ಲಿ ೧೧ ತಿಂಗಳುಗಳ ಕಾಲ ಪಿಟೀಲು ಚೌಡಯ್ಯ ಕಥಾಧರಿತ 'ವಾಣಿ' ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು.ಆ ಮೂಲಕ ರಂಗದ ಗಂಧ ಅರಿತ ಕಲಾಮಣಿಗಳೇ ಸಿನಿರಂಗದ ಸವಿಯುನ್ನುಂಡರು.ಇದರಲ್ಲಿ ಕಲಾತಾರೆಯರಾದ ಬಳ್ಲಾರಿ ಲಲಿತಮ್ಮ , ಬಳ್ಳಾರಿ ರತ್ನಮಾಲಾ,ಪಂಡರೀಬಾಯಿ, ಮುಸುರಿ ಕೃಷ್ಣಮೂರ್ತಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದರು. ಅಲ್ಲದೇ ಇದರ ಬೆನ್ನಲ್ಲೇ ಮಹಾತ್ಮ ಪಿಕ್ಚರ್ ಲಾಂಛನದ ಪಾಲುದಾರಿಕೆಯಡಿಯಲ್ಲಿ ೧೯೪೭ರಲ್ಲಿ 'ಶ್ರೀ ಕೃಷ್ಣಾ ಲೀಲಾ' ಹಾಗೂ ದೇವರಾಜು ಅರಸುರವರ ತಮ್ಮ ಕೆಂಪುರಾಜ ಅರಸು ನಟಿಸಿ ನಿರ್ಮಾಣ ಮಾಡಿದ 'ಭಕ್ತ ರಾಮದಾಸು' ಸಿನಿಮಾಗಳು ವೈಫಲ್ಯ ಕಂಡವು.ಈ ಎಲ್ಲ ಸಿನಿಮಾಗಳ ಸೋಲುಂಡಿದ್ದರೂ ಪಾಲುದಾರ ಸಂಸ್ಥೆಗಳು ಮತ್ತೊಂದು ಹೊಸದಾಗಿ 'ನಾಗ ಕನ್ನಿಕಾ' ಸಿನಿಮಾ ಮಾಡಲು ಕೈ ಮುಂದಾಗಿ ಇದೇ ರಂಗನಟ ನಟಿಯರನ್ನು ಬಳಸಿಕೊಂಡು ೧೯೪೯ ರಲ್ಲಿ ಜನರ ಮುಂದೆ ತಂದರು.ಆದರೆ ಈ ಸಿನಿಮಾ ನಿರೀಕ್ಷೆಗೂ ಮೀರಿ ಯಶಸ್ಸು ತಂದಿದ್ದಲ್ಲದೇ ೧೯೫೨ರಲ್ಲಿ ಶ್ರೀನಿವಾಸ ಕಲ್ಯಾಣದಂತಹ ಅದ್ಭುತ ಸಿನಿ ನಿರ್ಮಾಣಕ್ಕೆ ಕಾರಣವಾಯಿತು. ಇಲ್ಲಿಂದಲೇ ಕನ್ನಡ ಸಿನಿರಂಗದ ಚೇತರಿಕೆಯನ್ನು ಕಾಣಬಹುದಾಗಿದೆ
ಉಚ್ಛ್ರಾಯ ಸ್ಥಿತಿಯಲ್ಲಿ ಸಿನಿಮಾ ಮತ್ತು ರಂಗಭೂಮಿಗೆ ೧೯೫೩ರಲ್ಲಿ ಕೆ.ಹಿರಣ್ಣಯ್ಯರ ಸಾವಿನಿಂದಾಗಿ ಭಾರಿ ಹೊಡೆತ ಬಿತ್ತು. ಅಲ್ಲಿಂದ ಸಿನಿಮಾಗೆ ವಿದಾಯ ಹೇಳಿದ ಅವರ ೨ನೇ ಮಡದಿಯಾದ ಮತ್ತು ರತ್ನಮಾಲಾರ ಅಕ್ಕ ಲಲಿತಮ್ಮರು ಮಿತ್ರ ಮಂಡಳಿಯ ಎಲ್ಲ ಜವಾಬ್ದಾರಿಗಳನ್ನು ವಹಿಸಿಕೊಂಡರು.ಅಲ್ಲದೇ ಪುತ್ರ ಸ್ವರೂಪಿ ಮಾಸ್ಟರ್ ಹಿರಣ್ಣಯ್ಯರ ಸಂಪೂರ್ಣ ಬೆಳವಣಿಗೆಗೆ ಪಾತ್ರರಾದರು.ನಂತರ ಇದ್ದ ಉಸ್ತುವಾರಿಯನ್ನು ಪ್ರಾಯಕ್ಕೆ ಬಂದ ಹಿರಣ್ಣಯ್ಯರಿಗೆ ಒಪ್ಪಿಸಿ ಬಳ್ಳಾರಿಗೆ ಬಂದು ೧೯೬೦ರಲ್ಲಿ ಲಲಿತಾ ಕಲಾ ನಾಟ್ಯ ಮಂಡಳಿ ಸ್ಥಾಪಿಸಿ ರಂಗನಿರತರಾದರು.ಇತ್ತ ತಂಗಿ ರತ್ನಮಾಲಾ ಬಂದ ಸದಾವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಅನೇಕ ಸಿನಿಮಾಗಳಲ್ಲಿ ದೊಡ್ಡ ದೊಡ್ಡ ನಟ ನಟಿಯರೊಡನೆ ಅಭಿನಯಿಸಿದರು.ಆದರೆ ಲಲಿತಮ್ಮರ ಮರಣದ ನಂತರ ಲಲಿತ ನಾಟ್ಯ ಕಲಾ ಮಂಡಳಿಯ ಜವಾಬ್ದಾರಿ ಹೊತ್ತು ಮಂಡೋದರಿ,ಪಂಗನಾಮ, ಗುಲಾಮ ಗಂಡ,ತಾಯಿ ಕರುಳು ಎಂಬಿತ್ಯಾದಿ ನಾಟಕಗಳನ್ನು ಮಾಡಿಸುತ್ತಲೇ ೨೦೧೦ರಲ್ಲಿ ಇಹಲೋಕ ತ್ಯಜಿಸಿದರು.
ರಂಗಭೂಮಿಯಲ್ಲೇ ಹುಟ್ಟು ಮತ್ತು ಸಾವು ಕಂಡ ಇಂತಹ ಅತಿರತ ಮಹಾರಥರನ್ನು ಮರೆತು ಕಣ್ಣಳತೆಯಲ್ಲಿ ಕಂಡವರನ್ನು ವೈಭವೀಕರಿಸುತ್ತಾ ಸಾಗಿದ್ದೇವೆ. ಇನ್ನಾದರೂ ಇಂತಹ ಮಹನೀಯರಿಗೂ ಇತಿಹಾಸದ ಪುಟಗಳಲ್ಲಿ ಮತ್ತು ಕಲಾ ರಸಿಕರ, ರಂಗಾಸಕ್ತರ ಮನಗಳಲ್ಲಿ ಮನೆ ಮಾಡುವಂತಾಗಲಿ ಎಂಬುದೇ ನನ್ನೀ ಲೇಖನದ ಆಶಯ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

Comments
Post a Comment