ರಂಗ ಮಾಲಿಕೆ -೬೨ ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'..


 ಬಣ್ಣದ ಬದುಕು

ರಂಗ ಮಾಲಿಕೆ -೬೨


ಗಡಿನಾಡಿನ ರಂಗಧ್ವನಿ 'ಬ್ರಮ್ಮಯ್ಯಾಚಾರಿ ನದಿಚಾಗಿ'.


    ಗಿಡದಲ್ಲಿ ಅರಳಿದ ಅನೇಕ ಹೂಗಳಲ್ಲಿ ಕೆಲವು ದೇವರ ಪಾದ,ಮುಡಿ ಸೇರಿ ಸಾರ್ಥಕತೆ ಪಡೆದರೆ, ಅನೇಕ ಹೂಗಳು ಕಸದ ಪಾಲಾಗಿ ತಿಪ್ಪೆ ಸೇರುತ್ತವೆ. ಆದರೆ ಅವುಗಳಲ್ಲೂ ಕೆಲವೇ ಕೆಲವು ಹೂಗಳು ನೋಡುಗರ ಕಣ್ಮನ ಸೆಳೆದು ರಸಿಕರ ಅಂತರಾಳ ಸೇರುತ್ತವೆ.  ಮೂರನೇ ಸಾಲಿನಲ್ಲಿ ನಿಲ್ಲಬಲ್ಲ ರಂಗಪುಷ್ಪವೊಂದು ಕರ್ನಾಟಕಾಂಧ್ರದ ಗಡಿಭಾಗದಲ್ಲಿ ಅರಳಿ ಕರುನಾಡ ತುಂಬಾ ಬೀರುತ್ತದೆ. ಆ ಕಲಾಕುಸುಮವೇ 'ಬ್ರಮ್ಮಯ್ಯ ನದಿಚಾಗಿ'.

   ಇವರು ಕ್ರಿ.ಶ.೧೯೭೪ರಲ್ಲಿ ದೇವೇಂದ್ರಪ್ಪಾಚಾರಿ ಮತ್ತು ಚಾಮುಂಡೇಶ್ವರಿ ದಂಪತಿಗಳ ಮಗನಾಗಿ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ನದಿಚಾಗಿಯಲ್ಲಿ ಜನಿಸಿದರು. ಹುಟ್ಟಿದ್ದು ಕರ್ನಾಟಕಾಂಧ್ರದ ಗಡಿಭಾಗವಾದರೂ ೫ ನೇ ತರಗತಿಯವರೆಗೆ ಕನ್ನಡದಲ್ಲೇ ವಿದ್ಯಾಭ್ಯಾಸ ಮಾಡಿದರು. ಬಾಲ್ಯದಲ್ಲಿ ತುಂಬಾ ತುಂಟರಾಗಿದ್ದರು.ಓರಗೆಯವರನ್ನು ಅಲಾಯಿ ಕುಣಿಗೆ ನೂಕಿ , ಹೊಡೆದು ಬಡಿದು ಪ್ರತಿನಿತ್ಯ ಮನೆಗೆ ಜಗಳ ತರುತ್ತಿದ್ದರು.ಅಲ್ಲದೇ ಇವರ ಬೇಜವಾಬ್ದಾರಿತನ ಮತ್ತು ಅತಿರೇಕದ ತುಂಟತನಕ್ಕೆ ಬೇಸತ್ತ ದೇವೆಂದ್ರಪ್ಪರು ಇವರನ್ನು ತಮ್ಮದೇ ಕುಲವೃತ್ತಿ ಬಡಿಗೆತನದ ಜೊತೆಗೆ ಕಮ್ಮಾರಿಕೆಯ ಕಲಿಕೆಗೆ ಸಹಾಯಕರಾಗಿ ನೇಮಿಸಿಕೊಂಡರು. ಅಲ್ಲದೇ ಕೇವಲ ೧೮ ನೇ ವಯಸ್ಸಿಗೆ ಇವರನ್ನು ಸಾವಿತ್ರಿ ಎಂಬುವುದರೊಂದಿಗೆ ವಿವಾಹ ಮಾಡಿ ಇವರ ಬದುಕಿನ ಪೂರ್ಣ ಚೌಕಟ್ಟಿನ ನಿರ್ಮಾಣಕ್ಕಾಗಿ ತುಂಬಾ ನಿಗಾವಹಿಸಿ ಹಗಲಿರುಳು ಶ್ರಮಿಸಿದರು.ಅಲ್ಲದೇ ಇವರ ತಂದೆ ಪ್ರವೃತ್ತಿಯಲ್ಲಿ ಬಯಲಾಟದ ಮೇಷ್ಟ್ರಾಗಿದ್ದರಿಂದ ಇವರ ಮನೇಲಿ ಪೇಟಿಯೊಂದು (ಹಾರ್ಮೋನಿಯಂ) ಸದಾಕಾಲ ಇರುತ್ತಿತ್ತು. ಅಚಾನಕಕ್ಕಾಗಿ ಅವರ ಮನೆಗೆ ಹೊಸ ಪೇಟಿಯ ಮೇಲೆ ತುಂಟ ಬ್ರಮ್ಮಯ್ಯರ ಕಣ್ಣು ಬಿದ್ದು ಯಾರಿಲ್ಲದ ಸಮಯದಲ್ಲಿ ಅಪ್ಪನಂತೆ ಒಂಟಿ ಅಭ್ಯಾಸ ಮಾಡಲು ಮುಂದಾದರು. ಇದನ್ನು ಕಂಡ ಇವರ ತಂದೆ ಇವನಿಗೆ ಇದೇ ಮೂಗುದಾರವೆಂದು ಬಗೆದು ಮುಂದೆ ಯಾವುದೇ ಬಯಲಾಟ ನಿರ್ದೇಶನಕ್ಕೆ ಹೋದಾಗಲೆಲ್ಲಾ ಇವರನ್ನು ಜೊತೆಯಲ್ಲಿ ಕರೆದೊಯ್ಯವುದನ್ನು ರೂಢಿಯಾಗಿಸಿಕೊಂಡರು. 

    ಈ ಮೂಲಕ ಇವರ ತಂದೆಯೇ ಇವರ ಕಲಾ ಕಾಯಕದ ಅ ಆ ಇ ಈ ಹೇಳಿಕೊಟ್ಟ ಪ್ರಥಮ ಗುರುವಾದರು. ಕೆಲವೊಮ್ಮೆ ನಡೆಸಿದ ಕಲಾ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ ಅಪ್ಪನ ಒಲುಮೆ ಸಾಧಿಸಲು ಮುಂದಾದರು. ಅಲ್ಲದೇ ತಂದೆಯೇ ಇಚ್ಛೆಯ ಮೇರೆಗೆ ತಮ್ಮ ೨೩ರ ಆಸುಪಾಸಿನಲ್ಲಿ 'ನರ್ತಕಿ ನಾಯಕಿ' ಸಾಮಾಜಿಕ ನಾಟಕವನ್ನು ಹಾರ್ಮೋನಿಯಂ ಗೋಪಾಲಪ್ಪ ನದಿಚಾಗಿ ನಿರ್ದೇಶನದಲ್ಲಿ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದರು. ಮಗನ ನಟನೆಯ ಸುಧಾರಣೆಗಾಗಿ ಮರುವರ್ಷ 'ಕರ್ತವ್ಯದ ಕಾಣಿಕೆ' ಎಂಬ ಸಾಮಾಜಿಕ ನಾಟಕವನ್ನು  ಸೀತಾರಾಮಪ್ಪ ನಿರ್ದೇಶನ ದಲ್ಲಿ  ಬಣ್ಣ ಹಚ್ಚಿ ಅವರಿಂದ ಅಭಿನಯ ಮತ್ತು ರಂಗ ಸಂಗೀತಾಗಿ ಜ್ಞಾನ ಪಡೆದರು. ಆದರೆ  ಇವರ ನಟನೆಗಿಂತ  ಇವರ ಸಂಗೀತ ಜ್ಞಾನ ಎಲ್ಲರನ್ನೂ ಅಪ್ಪಿಕೊಂಡಿತು. ಅಂತೆಯೇ ಕೆಲ ವರ್ಷಗಳ ಕಾಲ ಅಪ್ಪನ ಪ್ರೀತಿಯಲ್ಲಿ ಕಲಿತು ನಂತರ ಕುಟುಂಬದ ಒಡನಾಡಿಯಾಗಿದ್ದ ಹಚ್ಚೊಳ್ಳಿಯ ಅಳ್ಳಪ್ಪಾಚಾರಿಯವರಲ್ಲಿ ಅಭಿನಯದ ಮಟ್ಟುಗಳನ್ನು ಹಾಗೂ ಮುದ್ದಟನೂರು ವೀರನಗೌಡರಿಂದ ರಾಗ ತಾಳದ ಜ್ಞಾನವನ್ನು ಸಂಪಾದಿಸಿದರು. ಹೀಗೆ ಸುಮಾರು ಹತ್ತಾರು ವರ್ಷಗಳ ಕಾಲ ಮೂಲ ಬಯಲಾಟದ ಆಳ ಅಗಲದ ಅರಿವು ಗಳಿಸಿಕೊಂಡರು.

    ಕಾಲಕ್ರಮೇಣ ಸ್ವತಂತ್ರವಾಗಿ ಬಯಲಾಟದ ನಿರ್ದೇಶನಕ್ಕೆ ಕೈ ಹಾಕಿದರು. ಮೊದಲ ಬಾರಿಗೆ ಅಪ್ಪನೊಂದಿಗೆ ಸಿಂಧನೂರಿನ ಪುಲದಿನ್ನೆಗೆ ನಾಟಕ ಕಲಿಸಲು ಹೋದಾಗ ೬ ತಿಂಗಳುಗಳ ಕಾಲ ಅಲ್ಲಿಯೇ ಇದ್ದು ಅಪ್ಪನೊಂದಿಗೆ ಸಹಾಯಕ ನಿರ್ದೇಶಕರಾಗಿ ಜಗಜ್ಯೋತಿ ಬಸವೇಶ್ವರ, ಕರ್ಣಾರ್ಜುನರ ಕಾಳಗ,ಪಾಂಡು ವಿಜಯ ಹಾಗೂ ಸ್ವತಂತ್ರ ನಿರ್ದೇಶನದಲ್ಲಿ 'ಪ್ರೇಮ ಪಂಜರ' ಎಂಬ ಸಾಮಾಜಿಕ ನಾಟಕವನ್ನು ಮಾಡಿಸಿದರು.ಅಲ್ಲಿನ ಯಶಸ್ಸಿನಿಂದ ಹಚ್ಚೊಳ್ಳಿಯಲ್ಲಿ 'ದುಶ್ಯಾಸನ ಕಥೆ' ಬಯಲಾಟಕ್ಕೆ ಸಂಗೀತ ನಿರ್ದೇಶನ ಮಾಡಿ ಮೊದಲ ಪ್ರಯತ್ನದಲ್ಲಿ ಬೆಳೆಯುವ ಸುಳಿವು ನೀಡಿದರು.ಇದರ ಬೆನ್ನಲ್ಲೇ ಸಿಂಗಪುರದಲ್ಲಿ ದೇವಿ ಮಹಾತ್ಮೆ,ಚಿಕ್ಕಬಳ್ಳಾರಿಯಲ್ಲಿ ಸುಂದೋಪ ಸುಂದರ, ರೇಣುಕಾ ದೇವಿ ಮಹಾತ್ಮೆ ,ಅಹಿರಾವಣ ಮಹಿರಾವಣ ಹೀಗೆ ಸಾಲು ಸಾಲು ಬಯಲಾಟಗಳನ್ನು ನಿರ್ದೇಶನ ಮಾಡಿದರು. ಮೊದಲ ನಿರ್ದೇಶನದಲ್ಲಿ ಕೇವಲ ೨೫೦೦ ರೂ ಸಂಭಾವನೆ ಪಡೆದ ಶ್ರೀಯುತರ ತಮ್ಮ ಕಲಾ ನೈಪುಣ್ಯತೆಯಿಂದ ಇಂದು ಒಂದು ಬಯಲಾಟದ ನಿರ್ದೇಶನಕ್ಕೆ ೩೦೦೦೦ ರೂ ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದಿದ್ದಾರೆ.

    ತಮ್ಮ ಈ ರಂಗ ಕಾಯಕದಲ್ಲಿ ಕಲಾಸಕ್ತರಿಗೆ ನಾಂದಿ ಪದದೊಂದಿಗೆ ತರಬೇತಿ ಆರಂಭಿಸಿ ಮೊದಲು ಕುಣಿತ ನಂತರ ಈಗಾಗಲೇ ಕಂಠಸ್ಥವಾದ ಸಂಭಾಷಣೆಗಳಿಗೆ ಹಾವಭಾವ,ಏರಿಳಿತ ತುಂಬುತ್ತಾ ಸಾಗುತ್ತಾರೆ.ಅಕ್ಷರ ಜ್ಞಾನವಿಲ್ಲದ ನಟರಿಗೆ ತಿಂಗಳು ಪೂರ್ತಿ ಅಲ್ಲಿಯೇ ಇದ್ದು ಹಗಲಿರುಳು ಇದೇ ಪ್ರಕ್ರಿಯೆಯಲ್ಲಿ ಕಲಿಸುತ್ತಾರೆ.ಕೆಲವೊಮ್ಮೆ  ಕತ್ತಿ ಹಿಡಿಯಲು,ಕುಣಿಯಲು ಬಾರದ ಕಾಡು ಕಗ್ಗಲ್ಲಿನ ಮನಸ್ಕರಿಗೆ ಕೋಲಿನಿಂದಲೂ ಕಲಿಸಿದ ಉದಾಹರಣೆಗಳು ಇವರಲ್ಲಿವೆ. ಇದೇ ನಿರ್ದೇಶನವನ್ನು ಸ್ವತಃ ಇವರ ತಂದೆ ನೋಡಿ ಗಟ್ಟಿಯಾಗಿ ಅಪ್ಪಿ ಮುತ್ತಿಕ್ಕಿದ್ದರು.ಅಲ್ಲದೇ ಇವರಲ್ಲಿ ಬಯಲಾಟಗಳಿಗೆ ಸ್ವತಃ ಸಾಹಿತ್ಯ ಮತ್ತು ರಾಗ ಸಂಯೋಜನೆ ಮಾಡುವ ಕಲೆಯನ್ನು ಹೊಂದಿದ್ದಾರೆ.

     ಇವರಲ್ಲಿ ರಂಗ ಬದ್ಧತೆ ಎಲ್ಲರೂ ಮೆಚ್ಚುವಂತಹದ್ದು. ಹೀಗೆ ಸಿಂಧನೂರಿನ ಲಿಂಗಲದಿನ್ನೆಯಲ್ಲಿ ಕನಕಾಂಗಿ ಕಲ್ಯಾಣ ಬಯಲಾಟದ ನಿರ್ದೇಶನಕ್ಕೆ ಹೋದಾಗ ಇವರ ತಂದೆಯ ಆರೋಗ್ಯದಲ್ಲಿ ಏರುಪೇರಾಗಿ ಹತರಾಗುತ್ತಾರೆ.ಆಗ ತಂದೆಗೆ ಋಣ ಕೊಡುವ ದಿನವೇ ರಂಗ ತಾಲೀಮು ಇದ್ದಿದ್ದರಿಂದ ಪಿತೃಕಾರ್ಯವನ್ನು ತಮ್ಮನಿಗೆ ಒಪ್ಪಿಸಿ ರಂಗ ತಾಲೀಮಿಗೆ ಬಂದಿದ್ದರು. ಈ ರೀತಿಯ ರಂಗಸೇವೆಯಿಂದ ಎಲ್ಲರ ಮೆಚ್ಚಿನ ಬಯಲಾಟ ಮೇಷ್ಟ್ರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಕೇವಲ ಬಯಲಾಟವೊಂದೇ ಅಲ್ಲದೇ ಸಾಮಾಜಿಕ ನಾಟಕಗಳಿಗೂ ನಿರ್ದೇಶನ ಮಾಡಿದ್ದಾರೆ. ಇಲ್ಲಿಯವರೆಗೆ ಇವರ ನಿರ್ದೇಶನದಲ್ಲಿ ಅರಳಿದ  ಬಯಲಾಟಗಳೆಂದರೇ ದುಶ್ಯಾಸನ ಕಥೆ, ದೇವಿ ಮಹಾತ್ಮೆ,ರೇಣುಕಾದೇವಿ ಮಹಾತ್ಮೆ, ಪಾರ್ಥ ವಿಜಯ, ರತಿ ಕಲ್ಯಾಣ, ರಾಮಾಯಣ, ಅಹಿರಾವಣ ಮಹಿರಾವಣ, ಸುಂದೋಪ ಸುಂದರ,ಕರ್ಣಾರ್ಜುನರ ಕಾಳಗ, ಕನಕಾಂಗಿ ಕಲ್ಯಾಣ ಹಾಗೂ ಪ್ರೇಮ ಪಂಜರ,ನರ ನಾಗರ, ಕರ್ತವ್ಯದ ಕಾಣಿಕೆ,ಕುಡುಕ ಕಟ್ಟಿದ ತಾಳಿ, ವಚನ ಪಾಲಿಸಿದ ಒಕ್ಕಲಿಗ, ಸೇಡಿಗಾಗಿ ಸಿಡಿದೆದ್ದ ಶಿವನಾಗ,ಆಶಾಲತಾ, ಕೆರಳಿದ ಗಂಡುಹುಲಿ ಇನ್ನಿತರೆ ಸಾಮಾಜಿಕ ನಾಟಕಗಳನ್ನು ನಿರ್ದೇಶನ ಮಾಡುವ ಮೂಲಕ ತಮ್ಮ ರಂಗ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ.

    ಇಂತಹ ಮಹನೀಯರ ಕಲಾ ಚತುರತೆಗೆ ಮೆಚ್ಚಿದ ಸಂಘ ಸಂಸ್ಥೆಗಳು ಇವರಿಗೆ ಸನ್ಮಾನ ಗೌರವ ನೀಡಿದ್ದಾರೆ.ಅಲ್ಲದೇ ಅನೇಕ ಶಿಷ್ಯ ಮಣಿಗಳು ಬೆಳ್ಳಿ ಕಡಗ ,ಉಂಗುರ ನೀಡಿ ಗೌರವಿಸಿದ್ದಾರೆ.ಆದರೆ ಗಡಿನಾಡಿನ ಈ ರಂಗ ಮಣಿಗೆ ಆಂಧ್ರ ಸರ್ಕಾರವಾಗಲಿ ಕರ್ನಾಟಕ ಸರ್ಕಾರವಾಗಲಿ ಇದುವರೆಗೂ ಗುರುತಿಸಿಲ್ಲ.ಕೇವಲ ೫ನೇ ತರಗತಿ ಓದಿದ್ದರೂ ಇಂದು ಎಷ್ಟೋ ಕಲಾವಿದರಿಗೆ ಹಳಗನ್ನಡದ ಪದಗಳನ್ನು ಅಚ್ಚುಕಟ್ಟಾಗಿ ಹೇಳಿಕೊಡುವ  ಜಾಣ್ಮೆ, ತಾಣ್ಮೆ,ಚಾಕಚಕ್ಯತೆಯನ್ನು ಹೊಂದಿದ್ದಾರೆ. ಇಂತಹ ಕಲಾಮಣಿಗಳ ಬಣ್ಣದ ಬದುಕು ಇಂದಿನ ಯುವ ಕಲಾವಿದರಿಗೆ ಮಾದರಿಯಾಗಲಿ ಎಂಬುದೇ ನನ್ನೀ ಲೇಖನ ಆಶಯ.


ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

   

    

   

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.