"ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ"


 "ಕಾರಂತ ರಂಗಲೋಕ (ರಿ) ಕಲಾತ್ಮಕ ಮನಸ್ಸುಗಳ ತಾಣಕ್ಕೀಗ ದಶಕ ಸಂಭ್ರಮ"


ಬಳ್ಳಾರಿಯ ಸರಳಾದೇವಿ ಡಿಗ್ರಿ ಕಾಲೇಜಿನಲ್ಲಿ ಓದುತ್ತಿರುವಾಗ  ಒಟ್ಟು ೨೦-೨೫ ಕಲಾಸಕ್ತ ಮನಸ್ಸುಗಳು ಸೇರಿಕೊಂಡು ಮೊದಲ ಬಾರಿಗೆ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದುಕೊಟ್ಟೆವು ಎಂದು ನಮ್ಮನ್ನು ಕೀಳಾಗಿ ಕಂಡವರ ಮುಂದೆ ಕಾಲರ್ ಎತ್ಕೊಂಡು ಅಲೆದಾಡಿದೆವು. ಆದಾದ ನಂತರ  ಒಂದರ ಹಿಂದೆ ಮತ್ತೊಂದು ಎಂಬಂತೆ  ಹತ್ತಾರು ಬಹುಮಾನಗಳ ಸುರಿಮಳೆಯೇ ಸುರಿಯ ತೊಡಗಿತು.ಅದಕ್ಕೆಲ್ಲಾ ಕಾರಣ ನಮ್ಮಲ್ಲಿದ್ದ ಟೀಮ್ ಸ್ಪೀರಿಟ್. ಹೀಗೆ ಸತತ ೨೦೧೦ ರಿಂದ ೨೦೧೩ ರವರಗೆ ಕಾಲೇಜಿನಲ್ಲಿ ಸಾಂಸ್ಕೃತಿಕವಾಗಿ ನಮ್ಮ ಹೆಸರು ಅಚ್ಚ ಹಸಿರಾಗಿತ್ತು. ಈಗಿರುವಾಗ ಕಾಲೇಜಿನಿಂದ ನಾವೆಲ್ಲಾ ಬೀಳ್ಕೊಟ್ಟ ನಂತರ ನಮ್ಮಲ್ಲಿನ ಕಲೆಗೆ ಅನಾಥ ಭಾವ ಕಾಡ ತೊಡಗಿತು‌. ಅಲ್ಲಿಯವರೆಗೆ ನಮ್ಮಲ್ಲಿನ ಕಲೆಗೆ ಕಾಲೇಜು ತಾಯಿಯಾಗಿತ್ತೆಂಬುದು ಕಾಲಕ್ರಮೇಣ ಅರಿವಾಗತೊಡಗಿತು. ಅಂತೆಯೇ ರಂಗ ಗುರು ಅಣ್ಣಾಜಿ ಕೃಷ್ಣಾರೆಡ್ಡಿಯವರ ಮಾರ್ಗದರ್ಶನದಲ್ಲಿ  ಕೊನೆಗೂ ಒಂದು ತಂಡ ಕಟ್ಟುವ ನಿರ್ಧಾರ ಮಾಡಿ ಒಟ್ಟು ಹತ್ತು  ಕಲಾತ್ಮಕ ಮನಸ್ಸುಗಳನ್ನು ಸೇರಿಸಿ  ರಂಗ ದಿಗ್ಗಜ ಬಿ.ವಿ.ಕಾರಂತ, ಜಾನಪದ ಗಾರುಡಿಗ ಶಿವರಾಮ ಕಾರಂತ ಹಾಗೂ ನನ್ನ ರಂಗಕಲೆಗೆ ಜೀವ ತುಂಬಿದ ಸಿನಿಮಾ ನಟ,ನಿರ್ದೇಶಕ ರಾಜೇಂದ್ರ ಕಾರಂತರ ಹೆಸರಲ್ಲಿ  "ಕಾರಂತ ರಂಗಲೋಕ - ಕಲಾತ್ಮಕ ಮನಸ್ಸುಗಳ ತಾಣ" ಬೈರಗಾಮದಿನ್ನೆ ಎಂಬ ಸಂಸ್ಥೆಯನ್ನು ದಿನಾಂಕ ೧೦.೧೦.೨೦೧೩ ರಂದು ನಗರದ ಮುಂಡ್ಲೂರು ಸಭಾಂಗಣದಲ್ಲಿ 'ನಾಡೋಜ ಸುಭದ್ರಮ್ಮ ಮನ್ಸೂರ್ 'ರ ರಂಗಗೀತೆಗಳ ಪ್ರಾಯೋಜಿತ ಮೊದಲ ಕಾರ್ಯಕ್ರಮದ ಮೂಲಕ ಉದ್ಘಾಟನೆ ಮಾಡಲಾಯಿತು.

 ಈ ಸಂಸ್ಥೆಯ ಹುಟ್ಟೂರು ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಬೈರಗಾಮದಿನ್ನೆ ಎಂಬ ಆಂಧ್ರಪ್ರದೇಶದದ ಗಡಿಗೆ ಅಂಟಿಕೊಂಡಿರುವ ಹಳ್ಳಿಯಾಗಿದೆ.  ಸಂಸ್ಥೆಯ ಅಧ್ಯಕ್ಷರಾಗಿ  ಕೆ.ಮಹೇಂದ್ರ, ಉಪಾಧ್ಯಕ್ಷನಾಗಿ ಹೆಚ್.ಲೋಕರಾಜ, ಕಾರ್ಯದರ್ಶಿಯಾಗಿ ನಾನು ಆರ್.ಪಿ.ಮಂಜುನಾಥ್ , ಖಜಾಂಚಿಯಾಗಿ ಹೆಚ್.ಹುಲುಗಪ್ಪ, ಸದಸ್ಯರಾಗಿ ಆರ್.ಚನ್ನನಗೌಡ, ಹೆಚ್.ಶಶಿಧರ್,ಆರ್.ಪಿ.ಈಶಪ್ಪ, ಎಂ.ಲಕ್ಷ್ಮೀ, ಹೆಚ್.ಕೀರ್ತಿ ಹಾಗೂ ಡಿ.ಎಂ.ಯಲ್ಲಪ್ಪ ಪದಾಧಿಕಾರಿಗಳಾಗಿ ಆಯ್ಕೆಯಾದರು. ರಿಜಿಸ್ಟರ್ ಕಚೇರಿ ಅಧಿಕಾರಿ ಮಂಜುನಾಥರಿಗೆ  ಅಕ್ಟೋಬರ್‌ ೧೦ ರಂದೇ ಸಂಸ್ಥೆಯ ನೋಂದಣಿ ಮಾಡಿಕೊಡುವಂತೆ ಒತ್ತಾಯ ಮಾಡಲಾಗಿತ್ತು.ಯಾಕೆಂದರೆ ಅವತ್ತು ಡಾ.ಶಿವರಾಮ ಕಾರಂತರ ಜನ್ಮದಿನವಾಗಿತ್ತು.  ನಮ್ಮ ತಂಡ ಜಾನಪದ ನೃತ್ಯ ಮತ್ತು ನಾಟಕಕ್ಕೆ ಆ ಸಂದರ್ಭದಲ್ಲಿ ಹೆಸರಾಗಿತ್ತು.ನಾವು ಇದ್ದಲ್ಲಿ ಉಳಿದವರಿಗೆ ಬಹುಮಾನ ನಿರಾಸೆಯುಂಟಾಗುತ್ತಿತ್ತು. ಹಾಗಾಗಿ ಕಾರಂತರ ಹೆಸರಲ್ಲಿ ಸಂಸ್ಥೆಯ ಸ್ಥಾಪನೆ ಉಚಿತವಾಗಿತ್ತು.

    ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಜವಾಬ್ದಾರಿಯಿಂದಾಗಿ ಸಂಸ್ಥೆ ಕಟ್ಟಿದ ಒಂದು ವರ್ಷದ ಹುಮ್ಮಸ್ಸಿನಲ್ಲಿ ಮೊದ ಮೊದಲು ಹಂಪಿ ಉತ್ಸವ ,ಗಿರಿಜನ ಉತ್ಸವ,ಕನ್ನಡ ರಾಜ್ಯೋತ್ಸವ, ಕನಕ ಸಂಸ್ಕೃತಿ ಉತ್ಸವದಂತಹ ಅನೇಕ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಬಳ್ಳಾರಿ,ಹೊಸಪೇಟೆ, ಧಾರವಾಡ,ರಾಯಚೂರು, ಬೆಂಗಳೂರು,ಬೆಳಗಾವಿ ಮತ್ತಿತರೆ ಸುತ್ತಾಡಿ ಹುಟ್ಟೂರಿನಲ್ಲಿ ಮೊದಲ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಅಚರಿಸಿದೆವು.ಕೆಲವು ದಿನಗಳ ನಂತರ ವಿದ್ಯಾಭ್ಯಾಸದ ನಿಮಿತ್ತ ಎಲ್ಲರೂ ಬೇರೆ ಬೇರೆಯಾದೆವು.ಆಗ ಸಂಸ್ಥೆಯ ಉಸ್ತುವಾರಿಯೆಲ್ಲ ಸಂಸ್ಥಾಪಕನಾದ ನನ್ನ ಮೇಲೆ ಬಿತ್ತು.‌ ಆಗ ಬಿ.ಎಡ್ ವ್ಯಾಸಂಗ ಮಾಡುತ್ತಲೇ ವಿನೂತನ ಬಗೆ ಬಗೆಯ ಕಾರ್ಯಕ್ರಮ ಅಯೋಜಿಸುವ ಆಲೋಚನೆ ಬಂತು.ಅಂತೆಯೇ ಪ್ರತಿವಾರ ಒಬ್ಬೊಬ್ಬ ರಂಗಕರ್ಮಿಯ ಯಶೋಗಾಥೆಯನ್ನು ಶಾಲಾ ಕಾಲೇಜು ಮಕ್ಕಳೊಂದಿಗೆ ಹಂಚುವ ಮೂಲಕ ರಂಗದೊಲವು ಮೂಡಿಸುವ ಸಲುವಾಗಿ 'ರಂಗ ಬೆಸುಗೆ - ರಂಗ ದಿಗ್ಗಜರೊಂದಿಗೆ ಸಂವಾದ ' ಎಂಬ ಕಾರ್ಯಕ್ರಮವನ್ನು ದಿನಾಂಕ ೧೪.೦೬.೨೦೧೪ ರಂದು  ನಗರದ ಕೊಟ್ಟೂರುಸ್ವಾಮಿ ಬಿ.ಎಡ್ ಕಾಲೇಜಿನಲ್ಲಿ ರಾಜೇಂದ್ರ ಕಾರಂತರ ಮೊದಲ ಆತಿಥ್ಯದಲ್ಲಿ ಚಾಲನೆ ನೀಡುವ ಮೂಲಕ ಅನೇಕ ಗಣ್ಯರ ಮನದಾಳದ ಮಾತುಗಳಿಗೆ ವೇದಿಕೆಯಾಯಿತು.ಇದಲ್ಲದೇ ಪ್ರತಿವರ್ಷ ಜನವರಿ -೩೧ ರಂದು ದ.ರಾ.ಬೇಂದ್ರೆಯವರ ಜನ್ಮದಿನದ ಪ್ರಯುಕ್ತ ಶಾಲಾ ಕಾಲೇಜಿನಲ್ಲಿ 'ಕವಿ ದಿನಾಚರಣೆ' ಆಚರಿಸಲಾಯಿತು. ಇದರ ಬೆನ್ನಲ್ಲೇ ಶಾಲಾ ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸಿ ಅವರಲ್ಲಿನ ಕಲೆಗೆ ಹೊಳಪು ನೀಡುವ ಸಲುವಾಗಿ ಪ್ಯೂಪಿಲ್ ಟ್ರೀ ಶಾಲೆಯಲ್ಲಿ ದಿನಾಂಕ ೦೮.೦೨.೨೦೧೬ ರಂದು ಶಾಲಾ ಮುಖ್ಯಸ್ಥ ಪ್ರಭು ಜಾಗೀರ್ದಾರ್ ರ ಮೂಲಕ ಲೋಕಾರ್ಪಣೆಗೊಂಡಿತು. ಅಲ್ಲದೇ ಮಾರ್ಚ್ - ೨೭ ಕ್ಕೆ ' ವಿಶ್ವ ರಂಗಭೂಮಿ ದಿನಾಚರಣೆ', ಜೂನ್- ೦೫ ಕ್ಕೆ ಪರಿಸರ ದಿನಾಚರಣೆ,ಹಾಗೂ ಡಿಸೆಂಬರ್-೦೧ ಕ್ಕೆ ವಿಶ್ವ ಎಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಬೀದಿ ನಾಟಕಗಳನ್ನು ಮಾಡುತ್ತಲೇ ಬಂದಿದೆ.ಇದಲ್ಲದೇ ಗ್ರಾಮೀಣ ಭಾಗದ ಯುವಕರಿಗೆ ಸೈಕಲ್ ರೇಸ್,ಕಬ್ಬಡಿ,ಕ್ರಿಕೇಟ್‌,  ಯುವತಿಯರಿಗೆ ರಂಗೋಲಿ, ಲೆಮನ್ ಸ್ಫೂನ್ ಮತ್ತಿತ್ಯಾದಿ ಆಟೋಟಗಳನ್ನು ಹಾಗೂ ಶಾಲಾ ಮಕ್ಕಳಿಗೆ ಜ್ಞಾನ ಚಿಲುಮೆ - ವಾರಕ್ಕೊಮ್ಮೆ ಸ್ಫರ್ಧಾ ಪರೀಕ್ಷೆ , ಅಂಬೆಗಾಲು ಸಾಪ್ತಾಹಿಕ ಹಸ್ತಪತ್ರಿಕೆ , ಮಕ್ಕಳಿಗೆ ಚಲನಚಿತ್ರ ಪ್ರದರ್ಶನ, ಉಚಿತ ಲೇಖನ ಸಾಮಾಗ್ರಿ ವಿತರಣೆ ಕಾರ್ಯಕ್ರಮಗಳನ್ನು  ಮಾಡಿ ಪ್ರೋತ್ಸಾಹಿಸುತ್ತಿದೆ. ಮಕ್ಕಳ ರಜೆಯನ್ನು ವಿಕಾಸತ್ಮಕ ಕಲಿಕೆಗೆ ಮೀಸಲಿರಿಸುವ ಸಲುವಾಗಿ ಬೇಸಿಗೆ ಶಿಬಿರಗಳನ್ನು ಪ್ರತಿವರ್ಷ ಏರ್ಪಡಿಸುತ್ತಲೇ ಮುನ್ನಡೆದಿದೆ‌.

   ಸಂಸ್ಥೆಯ ಇನ್ನೊಂದು ಅವಿಸ್ಮರಣೀಯ ಕಾರ್ಯವೆಂದರೆ ಎಲೆಮರೆಯ ಕಾಯಿಯ ಹಾಗೆ ಹಿನ್ನಲೆಗೆ ಸರಿದಿರುವ ಹಿರಿಯ ರಂಗ ಚೇತನರನ್ನು ಗುರುತಿಸಿ ಅವರ ಮಡಿಗೆ ನೀಡುವ ಪ್ರಶಸ್ತಿಯೇ 'ಕಾರಂತ ರತ್ನ'. ಆ ನಿಟ್ಟಿನಲ್ಲಿ ಮೊದಲ ಪ್ರಶಸ್ತಿಯನ್ನು  ಚಿಕ್ಕಜೋಗಿಹಳ್ಳಿಯಲ್ಲಿ ಎನ್.ಎಸ್.ಡಿ ಪದವೀಧರ ಸಾಂಬಶಿವ ದಳವಾಯಿಯವರಿಗೆ ದಿನಾಂಕ ೨೦.೦೫.೨೦೧೬ ರಂದು ನೀಡಲಾಯಿತು. ಈ ಮೂಲಕ ಇಲ್ಲಿಯವರೆಗೆ ,  ಶಿವ ಶಂಕರ್ ನಾಯ್ಡು, ಗುಬ್ಬಿಹಾಳ್ ಗೋಪಾಲರೆಡ್ಡಿ, ಬಯಲಾಟ ಉಷಾರಾಣಿ,ಮದಿರೆ ಮರಿಸ್ವಾಮಿ, ಡಾ.ಶಿವಕುಮಾರ್ ತಾತ ಕುಡುದರಹಾಳ್, ಮುದ್ದಟನೂರು ಜೆ.ವೀರನಗೌಡ, ಬದಿನೇಹಾಳ್ ಭೀಮಣ್ಣ, ಕೊತ್ತಲಚಿಂತ ವಿ.ರಾಮಲಿಂಗಪ್ಪ ರವರಿಗೆ ನೀಡಿದೆ.ಅಲ್ಲದೇ ಥಿಯೇಟರ್ ಸಮುರಾಯ್‌, ನೀನಾಸಂ ತಿರುಗಾಟ, ಧಾತ್ರಿ ತಿರುಗಾಟದ ವತಿಯಿಂದ ಅತ್ಯುತ್ತಮ ನಾಟಕಗಳ ಪ್ರದರ್ಶನಕ್ಕೆ   ಅವಕಾಶ ನೀಡಿ ಜನರ ಮನೋರಂಜನೆಗೆ ಒತ್ತು ನೀಡಿದೆ‌.

      ಇದುವರೆಗೆ ಸಂಸ್ಥೆ ವತಿಯಿಂದ ಪ್ರದರ್ಶನಗೊಂಡ ನಾಟಕಗಳೆಂದರೆ ಧ್ಯಾನಸಿದ್ದ, ಕತ್ತಲೆ ರಾಜ್ಯದ ಮೂರ್ಖರಾಜ, ಮಾಡಿದ್ದುಣ್ಣೋ ಮಹಾರಾಯ,ಅಂತಿಗೊನೆ, ಸಮನ್ವಯದೆಡೆಗೆ, ಹಳಿಯ ಮೇಲಿನ ಸದ್ದು, ಇದು ಕಾರಣ, ನಿಮ್ಗೂ ಇರಬಹುದು, ಆಗೋದೆಲ್ಲಾ ಒಳ್ಳೆಯದಕ್ಕೆ, ಮದುವೆ ಹೆಣ್ಣು, ಶಿವಾಜಿ,ಅವೈಜ್ಞಾನಿಕ, ಸ್ನೇಹವೆಂಬುದು ಎರಡಕ್ಷರವಲ್ಲ, ನನ್ಗಿಗ್ಲೇ ಮದ್ವೆ ಬೇಡ,ಕಟ್ಟೋಣ ಮನೆಗೊಂದು ಶೌಚಾಲಯ, ಪಾಂಡು ವಿಜಯ,ನಹೀ ಜ್ಞಾನೇನ ಸದೃಶ್ಯಂ, ಮಹಾಭಾರತ ಪದ್ಮವ್ಯೂಹ, ಸುಮಾರು ವರ್ಷಗಳಿಂದ ನೂರಾರು ರಂಗ ಚಟುವಟಿಕೆಗಳ ಮೂಲಕ ಇಡೀ ನಾಡಿನೆಲ್ಲಡೆ ಹೆಸರಾಗಿರುವ ನಮ್ಮ ಸಂಸ್ಥೆ ಈಗ ಹತ್ತು ವಸಂತಗಳನ್ನು ಪೂರೈಸುತ್ತಿದೆ.ಈ ಸಂದರ್ಭದಲ್ಲಿಯೇ ರಂಗ ದಶಮಾನೋತ್ಸವ -೨೦೨೨ ಎಂಬ ಅದ್ಭುತ ಕಾರ್ಯಕ್ರಮವನ್ನು ಭವ್ಯ ವೇದಿಕೆಯಲ್ಲಿ ಆಯೋಜಿಸಿ ಮುದ್ದಣ್ಣನ ಪ್ರಮೋಷನ್ ಪ್ರಸಂಗ, ಬಾಹುಬಲಿ ವಿಜಯಂ, ನಮಗ್ಯಾಕೆ ಕೋಟಿಯಾಸೆ ಹಾಗೂ ರತ ಕಲ್ಯಾಣ ಎಂಬ ಬಯಲಾಟ , ಸೋಬಾನೆ ಪದಗಳ ,ರಂಗ ಗೀತೆಗಳ ಗಾಯನ, ಸಾಮೂಹಿಕ ನೃತ್ಯ ಕಾರ್ಯಕ್ರಮಗಳನ್ನು ಹಾಗೂ ಪ್ರಶಸ್ತಿ ಪುರಸ್ಕಾರವನ್ನು ನೀಡಲಾಯಿತು.ಅಲ್ಲದೇ ಮತ್ತೊಂದು ಹೆಗ್ಗಳಿಕೆ ಎಂಬಂತೆ  ನಾಡಿನ ಉತ್ತಮ ಪುಸ್ತಕಗಳನ್ನು ಗುರುತಿಸಿ  ' ಕಾರಂತ ಸಾಹಿತ್ಯ ರತ್ನ' ಪ್ರಶಸ್ತಿಯನ್ನು ನೀಡಲು ಮುಂದಾಗಿದ್ದರಿಂದ ಈಗಾಗಲೇ ೫೩ ಪುಸ್ತಕಗಳ ಸ್ಪರ್ಧೆಯಲ್ಲಿ ಭಾಗವಹಿಸಿವೆ.ಶೀಘ್ರದಲ್ಲೇ ಬಳ್ಳಾರಿ ನಗರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಮಹದಾಸೆ ಹೊಂದಿದೆ.

  ಇದಲ್ಲದೇ ಮಕ್ಕಳಲ್ಲಿ ವಿಲಾಸದ ಜೊತೆಗೆ ಅವರ ವಿಕಾಸಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನಗಳನ್ನು ಸಂಸ್ಥೆ ಮಾಡುತ್ತಲೇ ಬಂದಿದೆ‌. ಈ ಮೂಲಕ ಮಕ್ಕಳ ರಂಗಭೂಮಿ - ಗ್ರಾಮೀಣ ರಂಗಭೂಮಿಯ ಏಳ್ಗೆಗೆ ಪ್ರಾಶಸ್ತ್ಯ ನೀಡುತ್ತಿರುವ ನಮ್ಮ ಸಂಸ್ಥೆ ಮುಂಬರುವ ದಿನಗಳಲ್ಲಿ ಹುಟ್ಟೂರಿನಲ್ಲಿ ರಂಗಮಂದಿರ ಮತ್ತು ರಂಗಶಾಲೆ ತೆರೆಯುವ ಕನಸನ್ನು ಹೊತ್ತಿದೆ. ಕನಸು ನನಸಾಗಲೆಂದು ಮನದುಂಬಿ ಹಾರೈಸಿ.


ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.



Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.