ರಂಗ ಮಾಲಿಕೆ - ೬೦ ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ".
ಬಣ್ಣದ ಬದುಕು
ರಂಗ ಮಾಲಿಕೆ - ೬೦
ಗಡಿನಾಡಿನ ರಂಗ ಚೇತನ " ಕೊತ್ತಲಚಿಂತ ವಿ. ರಾಮಲಿಂಗಪ್ಪ ".
ಇವರು ೦೧-೦೬-೧೯೭೧ರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಗಡಿನಾಡಾದ ಹಚ್ಚೊಳ್ಳಿ ಗ್ರಾಮದ ವಿ.ರಾಮಪ್ಪ ಮತ್ತು ಸಣ್ಣಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು. ತಮ್ಮ ಶಿಕ್ಷಣವನ್ನು ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ಪೂರ್ಣಗೊಳಿಸಿದರು. ಮನೆಯಲ್ಲಿ ತುಂಬಾ ಬಡತನ ಇದ್ದುದರಿಂದ ಕೂಲಿ ನಾಲಿ ಮಾಡಿ ಸಾಕಿ ಬೆಳೆಸಿದ ತಂದೆ ತಾಯಿಗೆ ಆಸರೆಯಾಗುವ ದೃಷ್ಟಿಯಿಂದ ಓದುವ ಕಾಲದಲ್ಲೇ ಕ್ಯಾಲೆಂಡರ್ ಮಾರುತ್ತಿದ್ದರು. ಬಿ.ಕಾಂ ಓದಿದ್ದರಿಂದ ಕೆಲ ವರ್ಷಗಳ ಕಾಲ ಬ್ಯಾಂಕಿಂಗ್ ಪರೀಕ್ಷೆಗೆ ತಯಾರಿ ನಡೆಸಿ ವಿಫಲರಾದರು. ಆಗ ಹೊಳೆದದ್ದೇ ಅರೆ ವೈದ್ಯ ವೃತ್ತಿ ಮಾಡುವ ಯೋಚನೆ. ಹಾಗಾಗಿ ಹಚ್ಚೊಳ್ಳಿಯಲ್ಲಿ ವಾಸವಾಗಿದ್ದ ಕರ್ನೂಲ್ ಡಾ.ಶ್ರೀನಿವಾಸರ ಬಳಿ ಸಹಾಯಕರಾಗಿ ಸೇರಿ ಸುಮಾರು ವರ್ಷಗಳ ಕಾಲ ತರಬೇತಿ ಪಡೆದರು. ನಂತರ ತಮ್ಮ ತಾಯಿ ತವರಾದ ಕೊತ್ತಲಚಿಂತ ಕ್ಕೆ ಬಂದು ೧೯೯೫ರಲ್ಲಿ ವಿ.ಸುಧಾ ಎಂಬುವರನ್ನು ವಿವಾಹವಾಗಿ ಅಲ್ಲಿಯೇ ಉಳಿದು ೧೯೯೮ ರಲ್ಲಿ ಅರೆ ವೈದ್ಯರಾಗಿ (ಆರ್.ಎಂ.ಪಿ) ಸೇವೆ ಸಲ್ಲಿಸಲು ಮುಂದಾದರು.
ಈಗಾಗಲೇ ಹಚ್ಚೊಳ್ಳಿ ಮತ್ತು ಸಿರುಗುಪ್ಪದಲ್ಲಿ ನಡೆಯುತ್ತಿದ್ದ ರಂಗ ಚಟುವಟಿಕೆಗಳ ಪ್ರೇರಣೆಯಿಂದ ಕಾಲೇಜು ದಿನಗಳಲ್ಲಿ ಇವರಲ್ಲಿ ಚಿಗರೊಡೆದಿದ್ದ ನಾಟಕ ಮತ್ತು ಸಾಹಿತ್ಯದ ಸಸಿಗೆ ಆಸರೆಯಾಗಿ ಕೊತ್ತಲಚಿಂತ ವಿರೂಪಾಕ್ಷ ರೆಡ್ಡಿಯವರು ದೊರೆತರು. ರೆಡ್ಡಿಯವರ ನಿರ್ದೇಶನದಲ್ಲಿ ೧೯೯೬ ರಲ್ಲಿ ಮೊದಲ ಬಾರಿಗೆ 'ನರ ನಾಗರ' ನಾಟಕದಲ್ಲಿ ನಾಯಕ ಪಾತ್ರಕ್ಕೆ ಬಣ್ಣ ಹಚ್ಚಿದರು. ಮನೆಯಿಂದ ಯಾವುದೇ ಪ್ರೇರಣೆಯಿಲ್ಲದಿದ್ದರೂ ವೃತ್ತಿ,ಪ್ರವೃತ್ತಿ ಮತ್ತು ಕುಟುಂಬವನ್ನು ನಿಭಾಯಿಸಲು ಹೆಣಗಾಡಿದರು.
ಆಗ 'ಜ್ಞಾನಯೋಗಿ ಶ್ರೀ ಹನುಮಂತಾವಧೂತರ ಮಹಿಮೆ ' ನಾಟಕ ರಚಿಸಿ,ನಿರ್ದೇಶಿಸಿ,ನಟಿಸಿ ಮನೆಮಾತಾದರು.ಆ ನಾಟಕದ ಹಲವು ಪ್ರದರ್ಶನಗಳ ತರುವಾಯ ಕಳೆಗುಂದಿದ್ದ ರಂಗ ಚೈತನ್ಯ ಮತ್ತೆ ಇಮ್ಮಡಿಯಾಯಿತು. ಮತ್ತೆ ರತ್ನ ಮಾಂಗಲ್ಯ, ಕೆಟ್ಟ ಮೇಲೆ ಬುದ್ದಿ ಬಂತು,ಸಮಾಜಕ್ಕೆ ಶಿಕ್ಷೆ ಇನ್ನು ಮುಂತಾದ ನಾಟಕಗಳಲ್ಲಿ ನಿರ್ದೇಶಿಸಿ, ನಟಿಸಿ ಹೆಸರಾದರು. ಈ ಯಶಸ್ವಿಯಿಂದಾಗಿ ತಾವೇ ಸ್ವತಃ ತಂಡ ಕಟ್ಟಿಕೊಂಡು ಒಪ್ಪಂದ ಹಿಡಿದು ನಾಟಕ ಮಾಡಿಸಲು ಮುಂದಾದರು. ಈಗಿರುವಾಗ ಒಮ್ಮೆ ಗಂಗಾವತಿಯ ಉಳಿಕಿಹಾಳ್ ನಲ್ಲಿ ರತ್ನ ಮಾಂಗಲ್ಯ ನಾಟಕವನ್ನು ಮಾಡಿಸಲು ಹೋದಾಗ ಮಳೆ ಬಂದು ನಾಟಕ ತಡವಾಗಿ ಆರಂಭವಾದ ಕಾರಣ ನಾಟಕದ ಕಲೆಕ್ಷನ್ ಕೇವಲ ೭೦೦೦ ಆಗಿತ್ತು. ಆಗ ಬೆಳಿಗ್ಗೆ ಕಲಾವಿದರಿಗೆ ಸಂಭಾವನೆ ನೀಡಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಾಗ ಅದೇ ಊರಿನ ಜನ ಇವರ ಅಭಿಮಾನಕ್ಕೆ ಸೋತು ಧನಸಹಾಯ ಮಾಡಿದ್ದರು. ಅಂದಿನಿಂದ ಇಡೀ ನಾಟಕದ ಉಸ್ತುವಾರಿ ಹೊರುವ ಹಳ್ಳಿಗಳಲ್ಲಿ ತಮ್ಮ ರಚನೆಯ ನಾಟಕಗಳ ಪ್ರದರ್ಶನಕ್ಕೆ ಮುಂದಾದರು.ಆ ಮೂಲಕ ನಟನೆಯಿಂದ ನಾಟಕ ರಚನೆ ಮತ್ತು ನಿರ್ದೇಶನದ ಕಡೆ ಗಮನ ಹರಿಸಿದರು.ಅಂತೆಯೇ ಇವರ ಲೇಖನಿಯಿಂದ ಬಾ ತಂಗಿ ಬನ್ನಿ ಹಬ್ಬಕ್ಕೆ, ಸತಿಗೆ ಸೋತ ಸೂಳೆ, ಮನೆಗೊಬ್ಬ ಮುಖ್ಯಮಂತ್ರಿ, ಮತ್ತೊಂದು ರಕ್ತರಾತ್ರಿ, ಅಕ್ಕನ ಮಗಳು,ಮಡದಿ ಮಾಡಿದ ಮದುವೆ ಹಾಗೂ ಡಾ.ಶಿವಕುಮಾರ್ ಸ್ವಾಮೀಜಿ ಜೀವನಾಧರಿತ ನಾಟಕ ಜಗ ಮೆಚ್ಚಿದ ಜಂಗಮ ರಚಿಸಿ ನಿರ್ದೇಶಿಸಿ ಹತ್ತಾರು ಪ್ರದರ್ಶನಗಳ ಮೂಲಕ ರಂಗರಸಿಕರ ಒಲವಿನ ಕುಡಿಯಾದರು.
ಆದರೂ ಕೆಲವು ಬಾರಿ ನಾಟಕ ಪ್ರದರ್ಶನದ ದಿನ ಕೈಕೊಟ್ಟರೆ ಅವರ ಪಾತ್ರಗಳನ್ನೂ ಸಹ ಸಮರ್ಥವಾಗಿ ನಿರ್ವಹಿಸುವ ಜಾಣ್ಮೆ ಸಹ ರೂಢಿಸಿಕೊಂಡರು.ಈಗಿರುವಾಗ ತಮ್ಮದೇ ಹನುಮಂತಾವಧೂತರ ಮಹಿಮೆ ನಾಟಕದ ದಿನದಂದು ಗರ್ಜಪ್ಪ ಎಂಬುವವರ ಅನಿವಾರ್ಯವಾಗಿ ಬರದ ಕಾರಣ ಅಂದು ತಾವೇ ತುರ್ತಾಗಿ ಅಭಿನಯಿಸಿ ಅಂದು ನಾಟಕವನ್ನು ತೂಗಿಸಿದ್ದರು. ಹೀಗೆ ಇವರ ನಾಟಕಗಳು ಕರ್ನಾಟಕಾಂಧ್ರದ ಅನೇಕ ಹಳ್ಳಿಗಳಲ್ಲಿ ಪ್ರದರ್ಶನ ಕಂಡಿದ್ದಲ್ಲದೇ ತುಂಬಾ ಯಶಸ್ಸು ತಂದು ಕೊಟ್ಟವು. ಆ ಮೂಲಕ ಇವರ ನಾಟಕಗಳಲ್ಲಿ ಅನೇಕ ಹಿರಿಯ ಕಲಾವಿದರು ಅಭಿನಯಿಸಲು ಮುಂದಾಗಿ ಪ್ರಖ್ಯಾತಗೊಳಿಸಿದರು.
ನಾಟಕ ರಚನೆ ,ನಟನೆ ,ನಿರ್ದೇಶನದ ಜೊತೆಗೆ ಕಥೆ, ಕವಿತೆಯನ್ನೂ ಬರೆಯುವ ಹವ್ಯಾಸ ಹೊಂದಿದ್ದಾರೆ.ಅಲ್ಲದೇ ಇವರ ಕೆಲವು ಕವಿತೆಗಳು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಅದಲ್ಲದೇ ಹಲವು ಕವಿಗೋಷ್ಠಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.
ಇಂತಹ ರಂಗ ಚೇತನರ ಪ್ರತಿಭೆಗೆ ಸದಾವಕಾಶವೆಂಬಂತೆ ಹಂಪಿ ಉತ್ಸವದಲ್ಲಿ ತಮ್ಮ ಜ್ಞಾನಯೋಗಿ ನಾಟಕ ಪ್ರದರ್ಶಿಸುವ ಮೂಲಕ ಹಂಪಿ ಉತ್ಸವ ಪ್ರಶಸ್ತಿ, ಕಾರಂತ ರಂಗಲೋಕ (ರಿ) ಬೈರಗಾಮದಿನ್ನೆಯವರಿಂದ ಕಾರಂತ ರತ್ನ ಪ್ರಶಸ್ತಿ-೨೦೨೧ ಹಾಗೂ ಕರ್ನಾಟಕಾಂಧ್ರದ ಅನೇಕ ಹಳ್ಳಿಯ ಕಲಾ ರಸಿಕರಿಂದಲೂ ತುಂಬಾ ಅಭಿಮಾನದ ಸನ್ಮಾನಗಳ ಸುಖವು ದೊರೆತಿದೆ.
ಕೆಲವೇ ಗಂಟೆಗಳಲ್ಲಿ ವಿಷಯವೊಂದಕ್ಕೆ ನಾಟಕ ಬರೆಯುವ ಜಾಣ್ಮೆ ಹೊಂದಿದ್ದಾರೆ. ಅಲ್ಲದೇ ಇವರ ನಾಟಕಗಳಲ್ಲಿ ಅಶ್ಲೀಲ ಸಂಭಾಷಣೆ ಮತ್ತು ದೃಶ್ಯಗಳಿಗೆ ಅವಕಾಶವಿಲ್ಲ. ಮೇಲಾಗಿ ತಿಳಿಯಾದ ಪ್ರಬುದ್ಧ ಹಾಸ್ಯ ಮಿಶ್ರಿತ ಕಥೆಯ ಹಂದರದ ಮೂಲಕ ನೋಡುಗರನ್ನು ಭರ ಸೆಳೆಯುವಂತೆ ಮಾಡುತ್ತವೆ.ಸರಳ ಸಜ್ಜನಿಕೆಯ ಸ್ವಭಾವದ ರಾಮಲಿಂಗಪ್ಪರಿಗೆ ಕಿರುತೆರೆಯ ಮೇಲೆ ಮಿಂಚುವ ಮತ್ತು ಮಕ್ಕಳಾದ ದೇವಿ, ಜ್ಯೋತಿ ಮತ್ತು ರಾಜೇಶ್ ಎಂಬ ಮಕ್ಕಳನ್ನು ಉನ್ನತ ಸ್ಥಾನದಲ್ಲಿ ಕಾಣುವ ಆಗಾಧ ಕನಸು ಹೊಂದಿರುವುದಲ್ಲದೇ ಪೂರಕ ಪ್ರಯತ್ನಿಸುತ್ತಲೇ ಇದ್ದಾರೆ.ಮುಂಬರುವ ದಿನಗಳಲ್ಲಾದರೂ ಇವರ ಕನಸು ನನಸಾಗಲಿ ಹಾರೈಸುವ.
ಲೇಖನ
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.
ರಂಗ ಸಂಶೋಧನಾರ್ಥಿ.

Comments
Post a Comment