ರಂಗ ಮಾಲಿಕೆ -೫೯ ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'.
ಬಣ್ಣದ ಬದುಕು
ರಂಗ ಮಾಲಿಕೆ -೫೯
ಬಹುಮುಖ ಪ್ರತಿಭೆಯ ರಂಗ ಸರದಾರ 'ಡಾ.ಅಣ್ಣಾಜಿ ಕೃಷ್ಣಾರೆಡ್ಡಿ'.
ಬಳ್ಳಾರಿ ಕೇವಲ ಕಬ್ಬಿಣದ ಅದಿರಿನ ಗಣಿಯಲ್ಲ, ಬದಲಾಗಿ ಅದು ಕಲಾವಿದರ ಗಣಿಯೂ ಹೌದು. ಅಂತೆಯೇ ಇಲ್ಲಿ ಕಲಾವಿದರ ಗುರು-ಶಿಷ್ಯ ಪರಂಪರೆಯಿದೆ. ಅದಕ್ಕೆ ಒಂದು ಉದಾಹರಣೆಯೆಂದರೆ ಅಪ್ಪ-ಅಮ್ಮನ ಹಾರೈಕೆಯಲ್ಲಿ ಬೆಳೆದು ಗುರುಗಳ ನೆರವಿನಿಂದ ಕಲಾಪ್ರಪಂಚದಲ್ಲಿ ಬಹುಬೇಗನೆ ಗುರುವನ್ನು ಮೀರಿಸುವ ಮಟ್ಟಿಗೆ ಬೆಳೆದುನಿಂತ ಶಿಷ್ಯರಲ್ಲಿ ಒಬ್ಬರೆಂದರೆ ಅದು ಅಣ್ಣಾಜಿ ಕೃಷ್ಣಾರೆಡ್ಡಿ. ಇವರು ತಮ್ಮ ಗುರುಗಳ ಮಾರ್ಗದಲ್ಲೇ ರಂಗ ಮಾರ್ಗವನ್ನು ಹಿಡಿದು ತಮ್ಮ ಶಿಷ್ಯರಿಗೂ ಅದೇ ಮಾರ್ಗವನ್ನು ತೋರಿಸಿ ಗುರುವಿನಂತೆ ಶಿಷ್ಯ ಎಂಬ ಮಾತನ್ನು ನಿಜವಾಗಿ ಸಿದರು. ರಂಗಭೂಮಿಯನ್ನು ಮೆಚ್ಚಿಕೊಂಡು ಬರುವ ಶಿಷ್ಯರು ಭವಿಷ್ಯತ್ತಿನಲ್ಲಿ ಯಾವುದೇ ತೊಂದರೆ ಅನುಭವಿಸದೆ ಇರಲಿ ಎಂಬ ಅಗಾಧ ಚಿಂತನೆಯೊಂದಿಗೆ ರಂಗಭೂಮಿಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಹೊರಟವರು. ಇಂಥ ಮಹಾನ್ ಕಲಾವಿದರ ಪರಿಚಯದ ಪ್ರಯತ್ನ ಇಲ್ಲಿ ಅಕ್ಷರಶಃ ಅರ್ಥಪೂರ್ಣವೆನಿಸುತ್ತದೆ.
ಅಣ್ಣಾಜಿಯವರು ಬಳ್ಳಾರಿಯ ಡಿ.ಕಗ್ಗಲ್ ಗ್ರಾಮದ ರಾಮನಗೌಡ ಮತ್ತು ವೆಂಕಮ್ಮನವರ ಸುಪುತ್ರನಾಗಿ 01 ಜೂನ್ 1980ರಲ್ಲಿ ಜನಿಸಿದರು. ಬಾಲ್ಯದಲ್ಲಿ ಯಾವುದೇ ರಂಗಾಸಕ್ತಿ ಇಲ್ಲದ ಇವರಿಗೆ ತಮ್ಮದೇ ಊರಿನ ಕಲಾವಿದ ದೊಡ್ಡಬಸವ ಗವಾಯಿಗಳಿಂದ ಪ್ರಭಾವಿತರಾಗಿ ಅವರ ಬಳಿಯಲ್ಲಿ ಸುಗಮ ಸಂಗೀತದ ಅಭ್ಯಾಸ ಮಾಡಿದರು. ಕ್ರಮೇಣ ಅವರ ಸಹಾಯದಿಂದಲೇ ನಾಲ್ಕನೇ ತರಗತಿ ಇದ್ದಾಗಲೇ 'ಅತ್ತೆ ಗಂಟು ಅಳಿಯನ ನಂಟು' ಎಂಬ ಹಾಸ್ಯ ನಾಟಕದ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಈ ಮೂಲಕ ಇವರ ರಂಗ ಪಯಣದ ಮೊದಲ ಮಾರ್ಗದರ್ಶಕರೆಂದರೆ ದೊಡ್ಡಬಸವ ಗವಾಯಿಗಳು ಎಂದು ಹೇಳಬಹುದು.
ಇವರು ಶಾಲಾ ಹಂತದಿಂದಲೇ ರಂಗ ಶಕ್ತಿಯನ್ನು ಬೆಳೆಸಿಕೊಂಡು ಬೆಳವಣಿಗೆಗೆ ಪೂರಕವಾದ ಅವಕಾಶಕ್ಕಾಗಿ ಕಾಯುತ್ತಿದ್ದರು ಅಂತೆಯೇ ಅವಕಾಶಗಳು ಸಾಲುಸಾಲಾಗಿ ಬಂದಿದ್ದು ಮಾತ್ರ ಪದವಿ ಹಂತದಲ್ಲಿ ಸರಳಾದೇವಿ ಕಾಲೇಜಿನಲ್ಲಿ ಪದವಿ ಓದುತ್ತಿರುವಾಗ ಯುವಜನೋತ್ಸವ ನಾಟಕ ಸ್ಪರ್ಧೆಯಲ್ಲಿ ರಂಗಕರ್ಮಿ ಶಂಕರ ನಾಯ್ಡು ನಿರ್ದೇಶನದ ನೀರಿಗಾಗಿ ಎಂಬ ನಾಟಕಕ್ಕೆ ಬಂಗಾರದ ಪದಕ ದೊರೆಯಿತು ಅಲ್ಲಿಂದ ಇವರ ಅಭಿನಯ ಮತ್ತು ವಿಧೇಯತೆಗೆ ಮನಸೋತ ನಾಯ್ಡುರವರು ತಮ್ಮ ಗರಡಿಗೆ ಕರೆದೊಯ್ದರು.ಇದಲ್ಲದೇ ಬಳ್ಳಾರಿಯ ರಾಘವ ರಂಗ ತಂಡ ಎನ್ಎಸ್ಡಿ ರಂಗ ಪದವೀಧರ ಸಿ.ಬಸವಲಿಂಗಯ್ಯನವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 40 ದಿನಗಳ ರಂಗ ತರಬೇತಿ ಶಿಬಿರದಲ್ಲಿ ತಯಾರಾದ 'ಅಂಧ ಯುಗ' ನಾಟಕದಲ್ಲಿ ಯುಯುತ್ಸು ಆಗಿ ಅಭಿನಯಿಸುವುದಕ್ಕೆ ಅವಕಾಶ ನೀಡಿದ್ದರು. ನಂತರ ಜಮುರಾ ಕಲಾಲೋಕ ,ಎಸ್.ಜೆ.ಎಂ ಸಂಗೀತ ನೃತ್ಯ ನಾಟಕ ಶಾಲೆಯಲ್ಲಿ ಸಾಂಬಶಿವ ದಳವಾಯಿ, ಕೆ.ಪಿ.ಎಂ ಗಣೇಶಯ್ಯ, ಮಹಾಂತೇಶ್ ದೇಗಾವಿ ಅವರ ಹತ್ತಿರ ನಾಟಕದ ಅಭ್ಯಾಸ ಮಾಡಿದರು. ಇದರ ಜೊತೆಯಲ್ಲಿ ಗಿರಿಜಾ ಹಿರೇಮಠ್ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಜೂನಿಯರ್ ಅಭ್ಯಾಸಮಾಡಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಹೈದರಾಬಾದ್ ನಲ್ಲಿ ನಡೆದ ಅಖಿಲ ಭಾರತೀಯ ನಾಟಕೋತ್ಸವದಲ್ಲಿ ಗುರು ಶಂಕರ್ ನಾಯ್ಡುರವರೊಂದಿಗೆ ಭಾಗವಹಿಸಿ ಜನ ಮನ್ನಣೆ ಪಡೆದರು.
ರಂಗಭೂಮಿಯನ್ನು ಪ್ರವೃತ್ತಿಯಾಗಿ ಹವ್ಯಾಸಿಯಾಗಿ ಮಾಡಿಕೊಂಡ ಅನೇಕ ಕಲಾವಿದರು ಬಳ್ಳಾರಿಯಲ್ಲಿ ಕಾಣಸಿಗುತ್ತಾರೆ ಆದರೆ ರಂಗಭೂಮಿ ವಿಷಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆದವರು ಯಾರಾದರೂ ಇದ್ದಾರೆಯೇ ಎಂದು ಬಳ್ಳಾರಿಯಲ್ಲಿ ಹುಡುಕಿದಾಗ ಸಿಗುವ ರಂಗ ರತ್ನ ಎಂದರೆ ಅದು ಅಣ್ಣಾಜಿ ಕೃಷ್ಣಾರೆಡ್ಡಿ ಅವರೊಬ್ಬರೇ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಸ್ನಾತಕೋತ್ತರ ಪದವಿ ಓದುವಾಗ ಪ್ರೊ.ನಾಗೇಶ್ ವಿ ಬೆಟ್ಟಕೋಟೆ, ಪ್ರೊ.ಸುಧೀಂದ್ರ ಶರ್ಮ,ಆರ್.ಟಿ .ರಮಾ ಮತ್ತು ಡಾ.ಕೆ.ರಾಮಕೃಷ್ಣಯ್ಯನವರ ನಿರ್ದೇಶನದಲ್ಲಿ ಶರೀಫ, ಜೇಡರ ದಾಸಿಮಯ್ಯ, ಅಂಧಯುಗ, ಮಂಟೇಸ್ವಾಮಿ ಕಥಾಪ್ರಸಂಗ, ದಾರಾಶಿಕೋ, ಮೃಚ್ಛಕಟಿಕ ಇನ್ನೂ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಪರೀಕ್ಷಾರ್ಥವಾಗಿ ಸ್ವರಚಿತ ನಾಟಕ ಮತ್ತು ನಿರ್ದೇಶನ ನಿಯಮದ ಪ್ರತಿಫಲವಾಗಿ ಪಂಡಿತ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಆಧಾರಿತ 'ನಾದಬ್ರಹ್ಮ' ನಾಟಕವನ್ನು ರಚಿಸಿ ನಿರ್ದೇಶಿಸಿ ಅಭಿನಯಿಸಿದ್ದರು. ಇದರ ಜೊತೆಯಲ್ಲಿಯೇ ಕಾಶಿನಾಥ್ ಪತ್ತಾರ್ ರವರಿಂದ ಹಿಂದೂಸ್ತಾನಿ ಸೀನಿಯರ್ ಸಂಗೀತಾಭ್ಯಾಸವನ್ನು ಮಾಡಿದರು. ಇದಾದ ನಂತರ ಡಾ.ಕೆ.ರಾಮಕೃಷ್ಣಯ್ಯನವರ ಮಾರ್ಗದರ್ಶನದಲ್ಲಿ 'ಕನ್ನಡ ರಂಗಭೂಮಿಯ ರಂಗ ಸಂಗೀತಕ್ಕೆ ಆರ್.ಪರಮಶಿವನ್ ರ ಕೊಡುಗೆ' ಎಂಬ ವಿಷಯದಲ್ಲಿ ಪಿ.ಎಚ್ಡಿ ಪದವಿಯನ್ನು ಪಡೆದರು.
ಪದವಿಯೊಂದಿಗೆ ಬಳ್ಳಾರಿಗೆ ಬಂದು ರಂಗಾಸಕ್ತರ ನೆರವಿಗಾಗಿ 'ರಂಗ ಜಂಗಮ' ಎನ್ನುವ ರಂಗ ಸಂಸ್ಥೆಯನ್ನು ಕಟ್ಟಿ ನನ್ನಂತಹ ಅನೇಕ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ನಾಟಕ ಮಾಡಿಸಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಜಯ ಸಾಧಿಸಿದರು. ಅಲ್ಲದೆ ಮಕ್ಕಳ ರಂಗಭೂಮಿಗೆ ಒತ್ತು ನೀಡಿ ಮಕ್ಕಳಿಗೆ ಉಚಿತ ರಂಗ ತರಬೇತಿ ಶಿಬಿರ ಏರ್ಪಡಿಸಿ ಮಕ್ಕಳಿಗೆ ನಾಟಕಗಳನ್ನು ಕಲಿಸಿ ಮಕ್ಕಳ ನಾಟಕೋತ್ಸವನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಇದರಲ್ಲಿ ತಮ್ಮ ಶಿಷ್ಯರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬಳಸುತ್ತಿರುವುದು ಮತ್ತು ತಮ್ಮ ಗುರು ಶಿವಶಂಕರ ನಾಯ್ಡುರವರ ನಾಟಕಗಳಿಗೆ ನಿರ್ದೇಶನ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಸಂಸ್ಥೆಯ ಮೂಲಕ ಹಲವಾರು ಜಾಗೃತಿ ಬೀದಿನಾಟಕಗಳನ್ನು ಮಾಡುತ್ತಲೆ ಬಂದಿದ್ದಾರೆ. ಅಲ್ಲದೆ ನಾಟಕಗಳಿಗೆ ತಮ್ಮ ಶಿಷ್ಯರನ್ನು ರಜಾ ದಿನಗಳಲ್ಲಿ ಬಳಸಿಕೊಂಡು ಅವರ ಶಿಕ್ಷಣಕ್ಕೆ ಉಪಯೋಗವಾಗುವಂತೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಈ ಮೂಲಕ ರಂಗಭೂಮಿಯನ್ನು ಪಾರ್ಟ್ ಟೈಮ್ ಉದ್ಯೋಗವನ್ನಾಗಿ ಮಾಡಿಕೊಂಡಿರುವುದು ಇವರ ಸಾಧನೆಯ ಮತ್ತೊಂದು ಗರಿ.
ರಂಗಭೂಮಿಯ ಅನೇಕ ಹಿಂಬಾಲಕರು ರಂಗಭೂಮಿ ಬಗೆಗೆ ಹೇಳುವ ಸಾಮಾನ್ಯ ನುಡಿಯೆಂದರೆ "ರಂಗಭೂಮಿ ಕೇವಲ ಹೆಸರು ಕೊಡುತ್ತೆ, ಆದರೆ ಹೊಟ್ಟೆ ತುಂಬಿಸುವುದಿಲ್ಲ" ಎನ್ನುವ ನುಡಿಗಳನ್ನು ಕೇಳಿ ಎಷ್ಟೋ ಜನ ಕಲಾವಿದರು ಇತರ ವಿಷಯಗಳಿಗೆ ಆಕರ್ಷಿತರಾದರು. ಆದರೆ ಅಣ್ಣಾಜಿಯವರು ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಬಳ್ಳಾರಿಗೆ ಬಂದು ಅತೀವವಾಗಿ ನಂಬಿದ್ದ ರಂಗಭೂಮಿಯಲ್ಲಿ ಏನಾದರೂ ಸಾಧಿಸಿಯೇ ತೀರಬೇಕೆಂಬ ಹಂಬಲದೊಂದಿಗೆ ಬಳ್ಳಾರಿಯ ಪ್ರತಿಷ್ಠಿತ ಶಾಲೆಗಳಾದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಮತ್ತು ಪಿಪ್ಯೂಲ್ ಟ್ರೀ ಶಾಲೆಗಳಲ್ಲಿ ರಂಗ ಶಿಕ್ಷಕ ಹುದ್ದೆಯನ್ನು ಸೃಷ್ಟಿಸಿಕೊಂಡು ಜೀವನಕ್ಕೆ ರಂಗಭೂಮಿಯನ್ನು ಆಧಾರವಾಗಿಸಿಕೊಂಡರು.ಇಡೀ ಕನ್ನಡ ರಂಗಭೂಮಿಯೇ ಬಳ್ಳಾರಿ ರಂಗಭೂಮಿಯತ್ತ ಮತ್ತೊಮ್ಮೆ ತಿರುಗಿ ನೋಡುವಂತೆ ಮಾಡುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ಪದವಿ ಹಂತದ ರಂಗಶಿಕ್ಷಣ ಕೋರ್ಸನ್ನು ಆರಂಭಿಸಿ ಅಲ್ಲಿಯೇ ಅತಿಥಿ ಉಪನ್ಯಾಸಕ ಹುದ್ದೆಯನ್ನು ಸೃಷ್ಟಿಸಿಕೊಂಡರು.ನಂತರ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿಯೂ ಪಿಜಿಯಲ್ಲಿ ರಂಗಶಿಕ್ಷಣವನ್ನು ಅಳವಡಿಸಿ ಅತಿಥಿ ಉಪನ್ಯಾಸಕರಾಗಿ ಸೇರಿ ಈ ಮೂಲಕ ಮಕ್ಕಳಿಗೆ ರಂಗ ಆಸಕ್ತಿಯನ್ನು ಶಿಕ್ಷಣದ ಜೊತೆಗೆ ನೀಡುವ ಮೂಲಕ ಪರಿಣಾಮಕಾರಿ ರಂಗಭೂಮಿ ಕಟ್ಟುವ ಪ್ರಯತ್ನಕ್ಕೆ ಹೊಸ ಭಾಷ್ಯವನ್ನು ಬರೆದರು.
ಇವರು ಅಭಿನಯದ ಜೊತೆಜೊತೆಗೆ ನಿರ್ದೇಶನ ಮತ್ತು ನಾಟಕ ರಚನೆಯ ಖನಿಯನ್ನು ಕೈಗೆತ್ತಿಕೊಂಡರು. ಅಂತೆಯೇ ಇವರ ಕುಂಚದಲ್ಲಿ ನಾದಬ್ರಹ್ಮ, ಯುವ ಧರ್ಮ, ನಮ್ಮೂರ ಭಾರತಿ, ಯೋಗಿವೇಮನ, ಪರಿಸರ, ಸಾಕ್ಷರತೆ, ಕಿಸಾ ಗೌತಮಿ, ಜಲಿಯನ್ ವಾಲ್ ಬಾಗ್, ಕತ್ತಲೆ ರಾಜ್ಯದ ಮೂರ್ಖ ರಾಜ, ಮೊಹರಂ ಕಡೆ ದಿನ ಎಂಬ ಇತ್ಯಾದಿ ನಾಟಕಗಳನ್ನು ರಚಿಸಿದ್ದಾರೆ. ಅಲ್ಲದೆ ನಾದಬ್ರಹ್ಮ, ಹುಡುಕಾಟ, ಕೆರೆಗೆಹಾರ, ಬೂಟು ಬಂದೂಕುಗಳ ನಡುವೆ, ಅಂಧಯುಗ, ಒಂದು ಸೈನಿಕ ವೃತ್ತಾಂತ, ಕರಿಬಂಟ, ಟಿಪ್ಪು ಸುಲ್ತಾನ್, ಕ್ರಾಂತಿಪುರುಷ ಬಸವಣ್ಣ, ಸಮನ್ವಯದೆಡೆಗೆ, ಕಳಚಿದ ಕೊಂಡಿಗಳು, ಯುವ ಧರ್ಮ, ಸಾಕ್ರೆಟಿಸ್, ಈಡಿಪಸ್ ಎಂಬಿತ್ಯಾದಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇದಲ್ಲದೆ ಸ್ವಾಭಿಮಾನ, ಶೌಚಾಲಯ, ಸಾಕ್ಷರ ಭಾರತ ಯಾತ್ರೆ, ಎಚ್ಚರಿಕೆ ಕಳ್ಳರಿದ್ದಾರೆ, ಮತದಾನ ನಮ್ಮ ಹಕ್ಕು, ವಿಶ್ವ ಕನ್ನಡ ಸಮ್ಮೇಳನ ವಿಷಯಾಧಾರಿತ ಬೀದಿನಾಟಕಗಳನ್ನು ರಚಿಸಿ-ನಿರ್ದೇಶಿಸಿ ಅಭಿನಯಿಸಿದ್ದಾರೆ.
ಬಳ್ಳಾರಿಯ ಇಂತಹ ಮೇರು ಪ್ರತಿಭೆಯ ಕಲೆಯನ್ನು ಮೆಚ್ಚಿ ಸಿರುಗುಪ್ಪದ ಜೀವನ ಜಾಗೃತಿ ಪ್ರಶಸ್ತಿ, ರಂಗ ಚಿಗುರು ಪ್ರಶಸ್ತಿ, ಜಿಲ್ಲಾ ಯುವ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದ ನಾಟಕದ ಬಂಗಾರ ಪದಕ, ರಂಗತೋರಣ ಪ್ರಶಸ್ತಿ, ಜಾಗೃತಿ ನಾಟಕ ಶ್ರೀ ಪ್ರಶಸ್ತಿ, ಜಿಲ್ಲಾ ರಾಘವ ಪ್ರಶಸ್ತಿ ಇನ್ನು ಹತ್ತು ಹಲವು ರಂಗ ಪುರಸ್ಕಾರಗಳು ಇವರ ಕಲಾ ಹಿರಿಮೆಯ ಗರಿಗಳಾಗಿವೆ. ಅಣ್ಣಾಜಿಯವರು ಆಕಸ್ಮಿಕವಾಗಿ ರಂಗಭೂಮಿಗೆ ಬಂದು ಇಂದು ರಂಗಭೂಮಿಯನ್ನು ಅತಿಯಾಗಿ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ರಂಗಭೂಮಿಯ ಕುರಿತಾಗಿ ಕೀಳಾಗಿ ಮಾತನಾಡುವವರ ಬಾಯಿಯನ್ನು ತಮ್ಮದೇ ನಿದರ್ಶನಗಳ ಮೂಲಕ ಮುಚ್ಚಿದ್ದಾರೆ. ಅಲ್ಲದೆ ತಮ್ಮೊಂದಿಗೆ ಹಲವು ರಂಗಾಸಕ್ತರ ಬೆಳವಣಿಗೆಗೆ ರಂಗಭೂಮಿಯನ್ನೇ ಕಾರಣವನ್ನಾಗಿಸಿದ್ದಾರೆ. " ರಂಗಭೂಮಿಯಷ್ಟು ಶ್ರೀಮಂತವಾದ ಕ್ಷೇತ್ರ ಮತ್ತೊಂದಿಲ್ಲ. ಆದರೆ ಅದನ್ನು ಅಲ್ಲಗಳೆಯುತ್ತಲೇ ಅದರಲ್ಲಿನ ಸಂಪತ್ತನ್ನು ಕಲಾವಿದರು ಕಳೆದುಕೊಳ್ಳುತ್ತಿದ್ದಾರೆ. ಬದಲಾಗಿ ಅದರಲ್ಲಿ ಸಂಪತ್ತನ್ನು ಸಂಪೂರ್ಣ ಮನಸ್ಸಿನಿಂದ ಅಗೆದಾಗ ಮಾತ್ರ ಕೈ ತುಂಬಾ ಸಿಗುತ್ತದೆ. ಈ ಮೂಲಕ ನಮ್ಮ ಜೊತೆಯಲ್ಲಿ ನಾವು ನಂಬಿದ ಕ್ಷೇತ್ರವನ್ನು ಸಹ ಅಭಿವೃದ್ಧಿಗೊಳಿಸಬಹುದು. ಅದರಿಂದ ನನ್ನ ದೊಡ್ಡ ವಿಶ್ವಾಸವೇ ನನ್ನ ರಂಗ ಸಾಧನೆಯ ಮೆಟ್ಟಿಲು" ಎಂಬುದು ಪ್ರಸ್ತುತ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಾಟಕ ವಿಭಾಗದ ಅತಿಥಿ ಉಪನ್ಯಾಸಕರಾಗಿರುವ ಅಣ್ಣಾಜಿ ಕೃಷ್ಣಾರೆಡ್ಡಿಯವರ ಅಭಿಮತವಾಗಿದೆ.
ಲೇಖನ
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ರಂಗ ಸಂಶೋಧನಾರ್ಥಿ.

Comments
Post a Comment