ರಂಗ ಮಾಲಿಕೆ - ೫೮ ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.


 ಬಣ್ಣದ ಬದುಕು

ರಂಗ ಮಾಲಿಕೆ - ೫೮


ಕನ್ನಡದ ಕಲಾ ಕುಂಜ ' ಜೋಯಿಸ ಗೋವಿಂದಾಚಾರ್ '.


      ನಮ್ಮ ನಡುವೆಯೇ ಎಲೆ ಮರೆಯ ಕಾಯಿಯಂತೆ ಇದ್ದು , ಇದ್ದ ಅಲ್ಪಾವಧಿಯಲ್ಲೇ ಅಗಾಧವಾದ ಪ್ರತಿಭೆಯನ್ನು ಪ್ರದರ್ಶಿಸಿ ಅರೆಗಳಿಗೆಯಲ್ಲೇ ಅಗಲಿದ ಹಲವರಲ್ಲಿ ಒಬ್ಬರು ಬಳ್ಳಾರಿಯ ರಂಗ ದಿಗ್ಗಜ 'ಜೋಯಿಸ ಗೋವಿಂದಾಚಾರ್'.

  ಇವರು ೯ ಸೆಪ್ಟೆಂಬರ್  ೧೯೫೩ರಲ್ಲಿ  ಜೋಯಿಸ ಕೃಷ್ಣಾಚಾರ್ ಮತ್ತು ಸುಮಿತ್ರಾ ಬಾಯಿಯವರ ಮಗನಾಗಿ ಬಳ್ಳಾರಿಯಲ್ಲಿ ಜನಿಸಿದರು. ಇವರ ಶಿಕ್ಷಣ ಬಳ್ಳಾರಿಯ ಹಳೆಯ ಶಾಲೆಗಳಲ್ಲಿ ಒಂದಾದ ವಾರ್ಡ್ಲಾ ಶಾಲೆಯಲ್ಲಿ ಆರಂಭವಾಗಿ ಇದೇ ನಗರದ ಕೊಟ್ಟೂರು ಸ್ವಾಮಿ ಬಿ.ಎಡ್ ಕಾಲೇಜಿನಲ್ಲಿ ಬಿ.ಎಡ್ ವಿಧ್ಯಾಭ್ಯಾಸದ ಹಾದಿಯಲ್ಲಿರುವಾಗಲೇ ಎಸ್.ಬಿ.ಐ ಬ್ಯಾಂಕ್ ನೌಕರಿಯನ್ನು ಗಿಟ್ಟಿಸಿಕೊಂಡರು. 

   ಮೊದಲಿನಿಂದಲೂ ಕಲೆ,ಸಾಹಿತ್ಯದಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರು. ಅಂತೆಯೇ ಶಾಲೆಯ ವಾರ್ಷಿಕೋತ್ಸವ, ಗಣೇಶ ಉತ್ಸವಗಳಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವೇಷಭೂಷಣ, ಕಿರು ನಾಟಕ ಹಾಗೂ ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನ ಮನ್ನಣೆ ಪಡೆದ ಉದಾಹರಣೆಗಳು ಅಧಿಕವಾಗಿವೆ.ಆ ಮೂಲಕವೇ ರಂಗಾಸಕ್ತಿಯನ್ನೂ ಮೈಗೂಡಿಸಿಕೊಂಡ ಜೋಯಿಸರು ಮುಂದೆ 

  1968ರಲ್ಲಿ ಬಳ್ಳಾರಿಯ ಘೋಷ್ ಆಸ್ಪತ್ರೆಯಲ್ಲಿ ನಡೆದ ಕೇಂದ್ರ ಸರ್ಕಾರದ ಸಾಮೂಹಿಕ ಮಿತ ಸಂತಾನ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಒಂಬತ್ತು ದಿನಗಳ   ಹರಿದ್ರ ಕುಂಕುಮ, ಶಾಸ್ತ್ರ ಸುಳ್ಳೆ, ಅಳಿಯ ಅಪರಾಧಾವತಾರ , ಏಕೋಧರರು,ಚಾಮಣ್ಣನ ಚಿರೋಟಿ, ಒಂದು ಬೇಕು ಎರಡು ಸಾಕು ಮುಂತಾದ ನಾಟಕಗಳನ್ನು ಪ್ರದರ್ಶನ ನೀಡಿದರು.ಇದಲ್ಲದೇ ಯಶಸ್ಸಿನ ಹಾದಿಯಲ್ಲಿ ಡಾ.ಜೋಳದರಾಶಿ ದೊಡ್ಡನಗೌಡರ ಮಾರ್ಗದರ್ಶನದಲ್ಲಿ ಅವರ ರಚನೆಯ 'ಭಕ್ತ ಕನಕದಾಸ' ನಾಟಕದಲ್ಲಿ ಅಭಿನಯಸಿದರು.

  ನಂತರ ೧೯೭೦ರಲ್ಲಿ 'ಕರ್ನಾಟಕ ಕಲಾಕುಂಜ' ಎಂಬ ಕಲಾ ಸಂಘವನ್ನು ಸ್ಥಾಪಿಸಿ, ಆ ಮೂಲಕ ದಾವಣಗೆರೆ,ಉಡುಪಿ, ಬೆಂಗಳೂರು,ಗುಲ್ಬರ್ಗಾ,ಕೊಪ್ಪಳ,ಬಳ್ಳಾರಿಯ ನಾನಾ ಕಡೆ ಸಂಚರಿಸಿ ಅನೇಕ ನಾಟಕಗಳಲ್ಲಿ  ಶಾಸ್ತ್ರ ಸುಳ್ಳೆದಲ್ಲಿ ಶಾಸ್ತ್ರಿ, ಅಳಿಯನ ಅಪರಾಧವತಾರದಲ್ಲಿ ಮಾವ, ಧರ್ಮ ದಿಗ್ವಿಜಯದಲ್ಲಿ ಶಂಕರಾಚಾರ್ಯ,ಚಾಮಣ್ಣನ ಚಿರೋಟಿಯಲ್ಲಿ ಚಾಮಣ್ಣ,ಸ್ವರ್ಗಕ್ಕೆ ಮೂರೇ ಬಾಗಿಲುದಲ್ಲಿ ಅರ್ಚಕ,ಬಾಕಿ ಇತಿಹಾಸದಲ್ಲಿ ಪ್ರೊಫೆಸರ್, ಬಹದ್ದೂರ್ ಗಂಡುದಲ್ಲಿ ಶಾಸ್ತ್ರಿ, ಅಲೆಗಳು ಮತ್ತು ನೆರಳು ನಾಟಕದಲ್ಲಿ ಮೇಷ್ಟ್ರು,ರಾಜಕುಮಾರ, ಸಾಮ್ರಾಟ ಅಶೋಕದಲ್ಲಿ ಮಂತ್ರಿ,ರಕ್ತಾಕ್ಷಿಯಲ್ಲಿ ಶಿವಯ್ಯ, ಮೃಗಜಲದಲ್ಲಿ ಭಿಕ್ಷುಕ ಹಾಗೂ ದಾರಿ ಯಾವುದಯ್ಯ ಮುಂದೆ ನಾಟಕದಲ್ಲಿ ನಾಟಕ ನಿರ್ದೇಶಕ ಪಾತ್ರ  ಮಾಡುವ ಮೂಲಕ ಸುಮಾರು ೩೦೦ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರ ಮುಡಿಗೆ ಸೇರುತ್ತದೆ.

  ಇದಲ್ಲದೇ ನಾಡಿನ ಖ್ಯಾತ ರಂಗ ನಿರ್ದೇಶಕರಲ್ಲಿ ಒಬ್ಬರಾದ ಸಿ.ಬಸವಲಿಂಗಯ್ಯನವರು ರಂಗಾಯಣದ ಅಡಿಯಲ್ಲಿ ಬಳ್ಳಾರಿಯ ರಾಘವ ಕಲಾ ಮಂದಿರದಲ್ಲಿ ಕೆಲ ದಿನಗಳ ರಂಗ ತರಬೇತಿ ಮತ್ತು ನಾಟಕ ಪ್ರದರ್ಶನ ಹಮ್ಮಿಕೊಂಡಾಗ ಆ ತರಬೇತಿಯನ್ನು ಪಡೆದು 'ಅಂಧಯುಗ' ಎಂಬ ನಾಟಕದಲ್ಲಿ ಧೃತರಾಷ್ಟ್ರನ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. 

  ಇವರ ದಾರಿ ಯಾವುದಯ್ಯ ಮುಂದೆ ಮತ್ತು ಅಲೆಗಳು ನಾಟಕಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಉತ್ತಮ ನಾಟಕ,ಉತ್ತಮ ನಿರ್ದೇಶನ,ಉತ್ತಮ ನಟನೆ ಪ್ರಶಸ್ತಿಯನ್ನು ಪಡೆದಿದ್ದರು.ಇದಲ್ಲದೇ ಇವರಲ್ಲಿ ಕೇವಲ ರಂಗಕಲೆಯೊಂದೇ ಅಲ್ಲದೇ ಕವನ, ನಾಟಕಗಳನ್ನು ಬರೆಯುವ ಗೀಳು ಸಹ ಇತ್ತು. ಅಂತೆಯೇ ಇವರ ಕಲಾಕುಂಚದಲ್ಲಿ ಒಡಮೂಡಿದ ನಾಟಕಗಳೆಂದರೆ ಅಳಿಯ ಅಪರಾವತಾರ, ಅಲೆಗಳು, ನೆರಳು, ಮೃಗಜಲ ಇನ್ನು ಮುಂತಾದವು. ಇದಲ್ಲದೇ ಇವರ ಕವನಗಳಲ್ಲಿ ವಾಸದೇಶಗಳ ಸುತ್ತಿ, ಯಲ್ಲಮ್ಮ ಬರುತಾಳೆ, ಮೇಷ್ಟ್ರು ಕನಸು ಪ್ರಮುಖವಾಗಿವೆ. ಇದಲ್ಲದೇ ಇವರಿಗೆ ತೆಲುಗಿನಲ್ಲಿ ಬರೆಯುವ ಜ್ಞಾನವೂ ಸಹ ಕರಗತವಾಗಿತ್ತು. ಇವರ ಗರಡಿಯಲ್ಲಿ ಅನೇಕ ಕಲಾ ಮನಸ್ಸುಗಳ ಬೆಳವಣಿಗೆ ಆದದ್ದನ್ನೂ ಅರಿಯಬಹುದು. ಇವರ ತಮ್ಮ ಜೋಯಿಸ ವೆಂಕೋಬಾಚಾರ್ ಸಹ ರಂಗಕಲೆಯಲ್ಲಿ  ಇವರಷ್ಟೇ ಪ್ರಾವೀಣ್ಯತೆ ಹೊಂದಿದ್ದಾರೆ. ಜೋಯಿಸರು ತಮ್ಮ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುವಾಗಲೂ 'ಅವಸಾನ' ಎಂಬ ಕುರುಕ್ಷೇತ್ರದ ಕೊನೆಯ ದಿನಗಳ ಕಥೆಯನ್ನಾಧರಿಸಿ ನಾಟಕವನ್ನು ಬರೆದು ಪೂರ್ಣಗೊಳಿಸುತ್ತಾರೆ.

  ಇಂದಿನ ಯುವ ಕಲಾವಿದರಿಗೆ ಇಂತಹ ಮಹಾನ್ ರಂಗ ಚೇತನರ ಪರಿಚಯ ಇಲ್ಲದಿರುವುದು ವಿಷಾಧನೀಯ.ಈ ನಿಟ್ಟಿನಲ್ಲಿ ಎಲೆಯ ಹಿಂದೆ ಮರೆಯಾಗಿಯೇ ಉಳಿದು ಅಳಿದ ಇಂತಹ ಕಲಾವಿದರ  ಕುರಿತು ರಂಗ ಇತಿಹಾಸವನ್ನು ಜಗತ್ತಿಗೆ ಅರಹುವುದರ ಸಣ್ಣ ಪ್ರಯತ್ನವೇ ನನ್ನಿ ಲೇಖನ.



ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.