ರಂಗ ಮಾಲಿಕೆ -೫೭. ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್'
ಬಣ್ಣದ ಬದುಕು
ರಂಗ ಮಾಲಿಕೆ -೫೭
ಬಿಸಿಲುನಾಡಿನ ರಂಗ ಚೇತನ ' ಮರಿಯಮ್ಮನಹಳ್ಳಿ ಜಹಾಂಗೀರ್'
ನಟನೆಗೆ ಇರುವ ಶಕ್ತಿ ಅತಿಯಾದದ್ದು.ಅದನ್ನು ನಂಬಿ ಬಂದ ಎಂತವರನ್ನೂ ಉನ್ನತ್ತಕೇರಿಸುವ ಅದಮ್ಯ ಶಕ್ತಿಯಿದೆ. ಅಂತೆಯೇ ಬಾಲ್ಯದಲ್ಲಿ ನಟನೆಯ ಅತೀವ ಆಸಕ್ತಿಯಿಂದ ಹುಟ್ಟೂರು ತೊರೆದು ಕಲಾಕ್ಷೇತ್ರ ಸೇರಿ, ನಿಂದಿಸಿದವರ ಮುಂದೆ ಮೇಲಕ್ಕೆ ಬೆಳೆದು ಅವರಿಂದಲೇ ಶಹಬ್ಬಾಷ್ ಗಿರಿಯನ್ನು ಪಡೆದವರು ಅನೇಕರು.ಅಂತವರಲ್ಲಿ ಕುಟುಂಬದಿಂದಲೇ ನಿಂದನೆಗೆ ಒಳಗಾಗಿ ರಂಗದಿಂದಲೇ ಕಿರುತೆರೆ ,ಹಿರಿತೆರೆಯನ್ನು ಕಂಡು ಮಿಂಚಿ ಕೊನೆಗೆ ಮನೆಯವರಿಂದಲೇ ಪ್ರಶಂಸೆ ಪಡೆದವರಲ್ಲಿ ಒಬ್ಬರು ಮರಿಯಮ್ಮನಹಳ್ಳಿಯ ಜಂಹಾಗೀರ್ ಒಬ್ಬರು.
ಜಹಂಗೀರರು ಮೂಲತಃ ಇಂದಿನ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯವರು. ಇವರ ತಂದೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದರಿಂದ ವಿದ್ಯಾಭ್ಯಾಸದಲ್ಲಿ ಇವರು ಚುರುಕಾಗಿದ್ದರು.ಆದ್ರೆ ಇವರಿಗೆ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ಚೆನ್ನಾಗಿ ಓದಿದರೆ ತಮ್ಮನ್ನು ಶಿಕ್ಷಕನಾಗಿ ಮಾಡುತ್ತಾರೆ ಎಂದು ಹೆದರಿ ಪಿಯುಸಿಯಲ್ಲಿ ಬೇಕಂತಲೇ ಫೇಲಾದರು.ಬೇರೇನಾದರೂ ಮಾಡಬೇಕು ಎಂದು ಆಲೋಚಿಸುವ ಹೊತ್ತಲ್ಲಿ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸ್ಸಾಯಿತು. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅತ್ತ ಗಮನ ಹರಿಸಿದರು.ಮೊದ ಮೊದಲು ಸಿನಿ ನಟರ ಅನುಕರಣೆ ಮಾಡುತ್ತಾ ಹೆಸರಾಗಿದ್ದರು.ನಂತರ ೧೯೯೪ರಲ್ಲಿ 'ಸಾಕ್ಷರತಾ ಕಲಾ ಜಾಥಾ' ದಲ್ಲಿ ಭಾಗವಹಿಸಿದರು.ನಂತರ ಮ.ಬ.ಸೋಮಣ್ಣರಿಂದ ರಂಗಾಸಕ್ತಿಗೆ ಪ್ರೇರಣೆ ದೊರೆತು ಮುನ್ನುಗ್ಗಲು ಅಣಿಯಾದರು.ನಂತರ 'ಮರಿಯಮ್ಮನಹಳ್ಳಿಯ ಲಲಿತಾ ಕಲಾ ರಂಗ' ಸೇರಿ ಮೊದಲ ಬಾರಿ ಬೆಳ್ಳಕ್ಕಿ ಹಿಂಡು ಬೆದರ್ಯಾವ ,ಶೀಲಾವತಿ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆಗೆ ಒಳಗಾದರು.
ಅದು 1995-96 ಸಮಯ. ಒಂದು ವರ್ಷದ ನಟನೆಯ ಡಿಪ್ಲೋಮ ತರಗತಿ ಸೇರಲು ನೀನಾಸಂ ಹೋದರು. ಆದರೆ ಒಂದು ದಶಕದಲ್ಲೇ ಉಳಿದು ಬಿಡುತ್ತೇರೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಒಂದು ವರ್ಷದ ನಟನೆಯ ಕೋರ್ಸ್ ಮುಗಿದ ಬಳಿಕ ಅಲ್ಲಿಯೇ ರೆಪೆಟ್ರಿಯಲ್ಲಿ ನಾಟಕಕಾರನಾಗಿ ಸೇರಿಕೊಂಡರು. ಅಷ್ಟರ ಮಟ್ಟಿಗೆ ಅಲ್ಲಿನ ವಾತಾವರಣ ಇವರ ಮೇಲೆ ಪ್ರಭಾವ ಬೀರಿತ್ತು. ಸುಬ್ಬಣ್ಣನವರ ಆಲೋಚನೆಗಳು, ಒಡನಾಟ, ಅವರ ವ್ಯಕ್ತಿತ್ವ ಇವರನ್ನು ತುಂಬಾ ಆಕರ್ಷಿಸಿತು.ಇವರಿಗೆ ನಾಟಕದ ಆಸಕ್ತಿ ಮನದಲ್ಲಿ ಮೊಳಕೆಯೊಡೆದ ಮೇಲೆ ಮುಂದೇನು ಎಂದು ಯೋಚಿಸುತ್ತಿದ್ದಾಗ. ಆಗ ಇವರ ನೆನಪಿಗೆ ಬಂದವರೇ ಇವರ ಊರಿನ ವೈದ್ಯರಾದ ಡಾ.ಅಂಬಣ್ಣ. ಅವರಿಗೆ ರಂಗಭೂಮಿ, ನಟನೆ ಇದರಲ್ಲೆಲ್ಲಾ ಆಸಕ್ತಿ ಇತ್ತು. ಹಾಗಾಗಿ ಸೀದಾ ಅವರ ಬಳಿ ಬಂದು. "ನನಗೆ ನಾಟಕಗಳಲ್ಲಿ ಪಾತ್ರ ಮಾಡಲು ಆಸಕ್ತಿ ಇದೆ. ಆದ್ರೆ ಮನೆಯಲ್ಲಿ ಇದಕ್ಕೆ ಒಪ್ಪಿಗೆಯಿಲ್ಲ" ಎಂದು ತನ್ನ ಸಮಸ್ಯೆ ಹೇಳಿಕೊಂಡರು. ಆಗ ಅವರು ನೀನಾಸಂ ಕಡೆ ದಾರಿ ತೋರಿಸಿದ್ರು. ಸ್ವಲ್ಪ ದಿನದ ಮಟ್ಟಿಗೆ ಮನೆ ಬಿಟ್ಟು ಹೋಗು ಎಂದೂ ಹೇಳಿದ್ರು. ಆಗ ಇವರ ಬಳಿ ದುಡ್ಡು ಇರಲಿಲ್ಲ. ಮನೆಯಲ್ಲೂ ವಿರೋಧ ಇದ್ದಿದ್ದರಿಂದ ಹಣ ಸಿಗುತ್ತೆ ಎಂಬ ಗ್ಯಾರಂಟಿ ಇರಲಿಲ್ಲ. ಆಗ ಅವರೇ ಹಣ ಕೊಟ್ಟು ನೀನಾಸಂಗೆ ನಟನೆಯಲ್ಲಿ ಡಿಪ್ಲೋಮ ಮಾಡಲು ಕಳಿಸಿದ್ರು. ಸುಮಾರು ಎರಡು ವರ್ಷ ಮನೆ ಬಿಟ್ಟು ದೂರ ಇದ್ದಿದ್ದರಿಂದ ಹಣಕಾಸಿನ ಸಹಾಯವನ್ನು ಮಾಡಿದ್ರು. ನಾನು ಕಲಾವಿದನಾಗಲು ರೆಕ್ಕೆ ಪುಕ್ಕ ಕಟ್ಟಿ ಹಾರಲು ಬಿಟ್ಟವರು ಡಾ. ಅಂಬಣ್ಣ ಎಂದು ಹೇಳಿದ್ರೆ ತಪ್ಪಾಗೋದಿಲ್ಲ ಎಂದು ಜಹಾಂಗೀರರು ಹೇಳುತ್ತಾರೆ.
ಇವರು ನೀನಾಸಂನಲ್ಲಿದ್ದಾಗ ಅಮೆರಿಕಾದ ವರ್ಮೌಂಟ್‍ನ ಖ್ಯಾತ ರಂಗಕರ್ಮಿ ಹಾಗೂ ಬ್ರೆಡ್ ಅಂಡ್ ಪೊಪೆಟ್ ರಂಗಭೂಮಿ ಸಂಸ್ಥಾಪಕ ಪೀಟರ್ ಶ್ಯೂಮನ್ ನೀನಾಸಂಗೆ ಭೇಟಿ ನೀಡಿದ್ರು. ಅವರ ಯೋಚನೆ ಆಲೋಚನೆ, ರಂಗಭೂಮಿ ಶೈಲಿ ಬಹಳ ಭಿನ್ನ. ನೀನಾಸಂಗೆ ಅವರು ಭೇಟಿ ನೀಡಿದಾಗ ಅವರ ಪ್ರಭಾವಕ್ಕೆ ಒಳಗಾಗಿ ಅವರಿಗೆ ಆತ್ಮೀಯನಾಗಿ ಅವರೊಂದಿಗೆ ಅಮೆರಿಕಾಕ್ಕೆ ಹೋದ್ರು. ಅಲ್ಲಿ ಸುಮಾರು ಎರಡು ತಿಂಗಳ ಕಾಲ ಬ್ರೆಡ್ ಅಂಡ್ ಪೊಪೆಟ್‍ನಲ್ಲಿ ಕೆಲಸ ಮಾಡಿದೆ. ಈ ಹಂತದಲ್ಲೇ ರಂಗಭೂಮಿ ಕಡೆಗಿನ ಇವರ ನೋಟ, ಪರಿಕಲ್ಪನೆ ಬದಲಾಯಿತು. ಇವರ ವೈಯಕ್ತಿಕ ಬೆಳವಣಿಗೆಗೂ ಇದು ಸಹಕಾರಿಯಾಯ್ತು.
ನಟನೆ ಹಂಬಲದಿಂದ ಎರಡು ವರ್ಷಗಳ ಕಾಲ ಮನೆಯಿಂದ ದೂರವಿದ್ದ ಇವರಿಗೆ, ಯಾವಾಗ ಪಾಪಾ ಪಾಂಡು ಮೂಲಕ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತೋ ಆಗ ಮನೆಯವರು ಇವರ ಬಗ್ಗೆ ಖುಷಿ ಪಟ್ರು. ಮಗ ದಾರಿ ತಪ್ಪಿಲ್ಲ ಏನೋ ಸಾಧಿಸಿದ್ದಾನೆ ಎಂದು ಹೆಮ್ಮೆ ಪಟ್ರು. ನಟನೆಯನ್ನು ಪ್ರೊಫೆಶನ್ ಆಗಿ ತಗೋತಾರೆ ಎಂದು ಯಾರು ಆಲೋಚನೆ ಮಾಡಿರಲಿಲ್ಲ. ರಂಗಭೂಮಿಯಲ್ಲೇ ಮುಂದುವರಿಯಬೇಕು ಊರೂರು ಅಲೆಯಬೇಕೆಂದು ಇದ್ದಲ್ಲಿಯೇ ಬದುಕು ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ ಸಿಹಿಕಹಿ ಚಂದ್ರು ಅವರಿಗೆ ಇವರ ಬಗ್ಗೆ ತಿಳಿದು ಸಂಪರ್ಕಿಸಿ ಪಾಪಾ ಪಾಂಡು ಕಾಮಿಡಿ ಸೀರಿಯಲ್ ಬಗ್ಗೆ ತಿಳಿಸಿದ್ರು. ಅಷ್ಟೊತ್ತಿಗಾಗಲೇ ಪಾಪಾ ಪಾಂಡು 500 ಎಪಿಸೋಡ್ ಪೂರ್ಣಗೊಳಿಸಿತ್ತು. ಮುಂದುವರಿದ ಭಾಗದಲ್ಲಿ ಪಾಂಡುವಿನ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅವರ ತಂಡದಲ್ಲಿ ನಟನೆಗೆ ಮುಕ್ತ ಅವಕಾಶವಿತ್ತು. ಇದು ಇವರಿಗೆ ಬಹಳ ಇಷ್ಟವಾಯ್ತು ಮುಂದೆ ಅವರ ತಂಡದಲ್ಲೇ ಹಲವು ವರ್ಷಗಳ ಕಾಲ ಗುರುತಿಸಿಕೊಂಡರು. ಪಾಪಾ ಪಾಂಡು, ಪಾಂಡುರಂಗ ವಿಠಲ, ಪಾತು ಸಾತು ಹೀಗೆ ಬ್ಯಾಕ್ ಟು ಬ್ಯಾಕ್ ಕಾಮಿಡಿ ಸೀರಿಯಲ್‍ನಲ್ಲಿ ನಟಿಸಿದರು.
ಮುರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ ನಂತರ ಇವರಿಗೆ ಎಕಾತನತೆ ಕಾಡ ತೊಡಗಿತು. ಯಾಕೋ ಇದೆಲ್ಲ ಸಾಕು ಎಂದೆನಿಸಿ ಊರ ಕಡೆ ಬಂದು ವೈವಾಹಿಕ ಜೀವನಕ್ಕೂ ಕಾಲಿಟ್ಟರು. ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದ್ದರು, ಆದರೆ ಆ ಕನಸು ಈಗಲೂ ನನಸಾಗಿಲ್ಲ. ನಟನೆಯಿಂದ ದೂರ ಉಳಿದು ಆರೇಳು ವರ್ಷಗಳೇ ಆಯಿತು. ಹಾಗಂತ ಸಂಪೂರ್ಣವಾಗಿಯೂ ದೂರವಾಗಿಲ್ಲ. ಆಗೊಂದು ಈಗೊಂದು ಪಾತ್ರ ಮಾಡುತ್ತಾರೆ. ಇಷ್ಟು ವರ್ಷದಲ್ಲಿ ಬಿಡುಗಡೆಯಾದ ವಜ್ರಕಾಯ, ಯಜಮಾನ ಹಾಗೂ ಮಂಗಳವಾರ ರಜಾ ದಿನ ಸಿನಿಮಾದಲ್ಲಿ ಹಾಗೂ ಈಗ ರಾಮಾಚಾರಿ ಧಾರವಾಹಿಯಲ್ಲಿ ಮ್ಯಾನೇಜರ್ ಆಗಿ ನಟಿಸುತ್ತಿದ್ದಾರೆ.
ಪ್ರಸ್ತುತ ಹುಬ್ಬಳ್ಳಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ.ಅಲ್ಲದೇ ಹುಬ್ಬಳ್ಳಿಯ ಹಳ್ಳಿಯೊಂದರಲ್ಲಿ ಇವರ ಪತ್ನಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ತಮ್ಮ ಕಲಾಕ್ಷೇತ್ರ ಮತ್ತು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದಾರೆ. ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಯಾವುದೇ ಆಲೋಚನೆ ಇಲ್ಲ. ಇಂತಹ ರಂಗಚೇತನದ ಅದಮ್ಯ ಕಲಾಸಕ್ತಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಲಿ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
Comments
Post a Comment