ರಂಗ ಮಾಲಿಕೆ -೫೩ ಪೋಲಿಸ್ ಇಲಾಖೆಯಲ್ಲೊಬ್ಬ ರಂಗ ಚತುರ " ಟಿ.ಎ.ಕುಬೇರ".


 

ಬಣ್ಣದ ಬದುಕು

ರಂಗ ಮಾಲಿಕೆ -೫೩


ಪೋಲಿಸ್ ಇಲಾಖೆಯಲ್ಲೊಬ್ಬ ರಂಗ ಚತುರ " ಟಿ.ಎ.ಕುಬೇರ".


" ಎಲ್ಲ ಕ್ಷೇತ್ರದಲ್ಲೂ ಅತಿರತಮಹಾರತರನ್ನು ಮೀರಿಸುವ ಕಲಾ ನೈಪುಣ್ಯತೆ ಉಳ್ಳ ಅಭಿನೇತ್ರಿಗಳಿದ್ದಾರೆ,ಆದರೆ ಕಾರ್ಯ ಬಾಹುಳ್ಯದ ನಡುವೆ ಉತ್ತಮ ಅವಕಾಶ ಮತ್ತು ಪ್ರೋತ್ಸಾಹ ತಾನಾಗಿಯೇ ದೊರೆತಾಗ  ಮಾತ್ರ ಪ್ರಜ್ವಲಿಸಿ ರಂಗಪ್ರಭೆ ತೋರುವಲ್ಲಿ ಅನುಮಾನವಿಲ್ಲ" ಈ ಮಾತಿಗೆ ನಿದರ್ಶನವೆಂದರೆ ಠಾಣೆಯಲ್ಲಿ ಆರಕ್ಷರಾಗಿದ್ದರೂ,ಕಲಾ ಪ್ರಪಂಚದಲ್ಲಿ ಅತಿರಥರಾದ 'ಟಿ.ಎ.ಕುಬೇರರು.

ಇವರು ಸಂಡೂರು ತಾಲೂಕಿನ ಎಂ.ತುಂಬರಗುದ್ದಿಯಲ್ಲಿ ತಿಪ್ಪೇಸ್ವಾಮಿ ಮತ್ತು ತಿಪ್ಪಮ್ಮ ದಂಪತಿಗಳ ಕೊನೆಯ ಮಗನಾಗಿ ೦೧.೦೪.೧೯೬೪ರಲ್ಲಿ ಜನಿಸಿದರು. ಇವರ ತಂದೆ ತಾಯಿಗೆ ಯಾವುದೇ ಸಾಂಸ್ಕೃತಿಕ ವಾತಾವರಣದ ಪ್ರಭಾವವಿಲ್ಲದಿದ್ದರೂ ತಮ್ಮ ಚಿಕ್ಕಪ್ಪ ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಭಾವದಿಂದಾಗಿ ಬಾಲ್ಯದಲ್ಲೇ ಕಲಾಸಕ್ತರಾಗುವಂತೆ ಮಾಡಿತು.ಅಂತೆಯೇ ತಮ್ಮ ಪ್ರಾಥಮಿಕ ವಿಧ್ಯಾಭ್ಯಾಸದ ಸಮಯದಲ್ಲಿ ಅಂದರೆ ತಮ್ಮ ೮ನೇ ವಯಸ್ಸಿಗೆ 'ರತ್ನ ಮಾಂಗಲ್ಯ' ಎಂಬ ನಾಟಕದಲ್ಲಿ ಹಾರ್ಮೋನಿಯಂ ಮೇಷ್ಟ್ರಾದ ಶಂಕ್ರಪ್ಪ ಮತ್ತು ನಾಗಪ್ಪ ಹೂಗಾರರ ಮೂಲಕ ೧೯೮೯ರಲ್ಲಿ  'ಬಾಬು' ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅದೇ ಹುಮ್ಮಸ್ಸಿನಲ್ಲಿ ಅದೇ ನಾಟಕದ ಮೂರ್ನಾಲ್ಕು ಪಾತ್ರಗಳನ್ನು ನಿರ್ವಹಿಸಿದರು.ನಂತರ  ಕಲಿತ ಕಳ್ಳ ನಾಟಕದಲ್ಲಿ ಕ್ಯಾಬರೆ ಡ್ಯಾನ್ಸರಾಗಿ ಲೇಡಿ ಗೆಟಪ್ ಗೆ ಬಣ್ಣ ಹಚ್ಚಿ ಕುಣಿಯುವ ಮೂಲಕ  ನೆರೆದಿದ್ದ ಹೆಂಗಳೆಯರೇ ನಾಚುವಂತೆ ಅಭಿನಯಿಸಿ ಮನಗೆದ್ದರು.

   ಬಾಲ್ಯದಿಂದಲೂ ತಮ್ಮಲ್ಲಿ ರಕ್ತಗತವಾಗಿ ಬಂದ ಅನನ್ಯವಾದ ಕಲೆಯ ಮೂಲಕ ಮುಂದೆ ಗಳಿಸಿದ ಹಣದಲ್ಲಿ  ತಮ್ಮ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಾ ತೊಡಗಿದರು. ಆ ಮೂಲಕ ಮುಂದೆ ಓದಿನ ಜೊತೆಗೆ ಪ್ರೇಮ ಪಂಜರ,ಗೌಡ್ರ ಗದ್ಲ, ಅಕ್ಷಯಾಂಭರ,ತಾಳಿಯಿಲ್ಲದೆ ತಾಯಿಯಾದೆ ,ಮಲಮಗಳು,ಗಂಡನ ಮನೆ ತಾಯಿಯ ಮನೆ, ಅಣ್ಣ ತಂಗಿ, ಕ್ರಾಂತಿಪುರುಷ ಬಸವಣ್ಣ,ದೀಪಾ, ಮಲತಾಯಿ ಮಗ,ಮನೆ ಬೆಳಗಿದ ಮಂಗಳ,ಸುನೀತ ಸೂಳೆಯಲ್ಲ, ಹೇಮರೆಡ್ಡಿ ಮಲ್ಲಮ್ಮ, ಧನಿಕರ ದೌರ್ಜನ್ಯ,  ಖಾಸಿಂ,ಗೌಡ, ನರ್ತಕಿ, ಮುದುಕಿ, ಮುದುಕ,ಸೇಟು,ಕರೀಂ,ಶಿವ,ಶರತ್ ಹೀಗೆ 64 ಕ್ಕೂ ಅಧಿಕ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳ ನಿರ್ವಹಿಸುವ ಮೂಲಕ ಇಡೀ ನಾಡಿನ ಸುತ್ತಮುತ್ತಾ ಹೆಸರುವಾಸಿಯಾಗಿದ್ದರು.

  ಯಾವುದೇ ನಾಟಕದ ಪಾತ್ರಗಳನ್ನಾಗಲಿ ಕೆಲಕಾಲ  ನೋಡಿ ಅವಿಭರ್ವಿಸಿಕೊಳ್ಳುವ ಮೂಲಕ ಪಾತ್ರ ತಲ್ಲಿನರಾಗಿ ನಟಿಸುವ ಜಾಣ್ಮೆಯನ್ನು ಹೊಂದಿದ್ದರು. ಇವರ ಬಣ್ಣದ ಬದುಕಿನಲ್ಲಿ ಅದೆಷ್ಟೋ ಪರೀಕ್ಷೆಗಳು ಬಂದರೂ ಎಲ್ಲಿಯೂ ಕಲೆಯನ್ನು ಧಿಕ್ಕರಿಸದೆ ಬಂದ ಕಷ್ಟಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿ ನಟರೆನಿಸಿದ್ದಾರೆ. ಹೀಗೆ ಒಮ್ಮೆ ನಾಟಕಕ್ಕೆ ತಮ್ಮ ತಂದೆಯವರ ಉಸಿರಾಟದ ಅಂತಿಮ ಕ್ಷಣಗಳನೆಯನ್ನು ಅನ್ಯರ ಮೂಲಕ ಆಲಿಸಿದರೂ ನಾಟಕದ ರಸಭಂಗಕ್ಕೆ ಕಾರಣರಾಗದೆ ಆ ರಾತ್ರಿಯಲ್ಲಾ ಹಾಸ್ಯನಟರಾಗಿ ಅಭಿನಯಿಸಿ ನೆರೆದ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿ ಬಂದು ತಮ್ಮ ನೋವಿನಡುಗೆಯನ್ನು ತಾವೇ ಉಂಡಿದ್ದರು.ಇದಲ್ಲದೇ ಸ್ತ್ರೀ ಪಾತ್ರಧಾರಿಯಾಗಿ ಅಭಿನಯಿಸಿದಾಗಲೆಲ್ಲಾ ಸಹನಟ-ನಟಿ ಹಾಗೂ ಕಲಾ ರಸಿಕರಿಂದ ಅಗ್ರಗಣ್ಯ ಪ್ರಶಂಸೆಯನ್ನು ಪಡೆದ ಉದಾಹರಣೆಗಳು ಅನೇಕಾನೇಕ.

    ಇದೇ ಸಮಯದಲ್ಲಿ ಮನೆಯ ಬಡತನ ಮತ್ತು ಜವಾಬ್ದಾರಿ ಇವರಲ್ಲಿ ಓದಬೇಕು, ಸ್ಥಿತಿವಂತರಾಗಬೇಕೆಂಬ ಉತ್ಕುಟಕಾಂಕ್ಷೆಯಿಂದ ಶ್ರದ್ಧೆಪಟ್ಟು ಓದುವ ಮುಲಕ ಕೂಡ್ಲಿಗಿಯಲ್ಲಿ ಡಿಗ್ರಿ ೨ನೇ ವರ್ಷದಲ್ಲಿ ಓದಬೇಕಾದರೆ ಸರ್ಕಾರಿ ಪೋಲಿಸ್ ಕೆಲಸ ಇವರಿರುವಲ್ಲಿಗೆ ಅರಸಿ ಬಂದಿತು.ಅಂತೆಯೇ ೧೯೯೩ರಲ್ಲಿ ಕೆಲಸಕ್ಕೆ ಸೇರಿದರು. ಸಂಸಾರಕ್ಕೆ ಆಧಾರವಾದ ಸರ್ಕಾರಿ ಉದ್ಯೋಗವೇ ಇವರ ಕಲೆಯ ಬದುಕಿಗೆ ಮುಳುವಾಯಿತು‌. ಅಲ್ಲಿಯವರೆಗೆ ಎಗ್ಗಿಲ್ಲದೆ ಸಾಗಿದ ಕಲಾ ಪಯಣ ತಮ್ಮ ವೃತ್ತಿಯಿಂದಾಗಿ ತೊಡಕುಂಟಾಯಿತು.ಯಾವುದೇ ನಾಟಕಕ್ಕೆ ಹೋಗಬೇಕಾದರೆ ಉದಾರವಾಗಿ ರಜೆಗಳು ಸಿಗದಾದವು. ಅಲ್ಲದೇ ಇವರ ಅಭಿನಯಕ್ಕೆ ಸಾಣೆಯೆಂಬಂತೆ ಇದ್ದಲ್ಲಿಗೆ ಬಂದ ಕಿನ್ನರಿ,ಮೂಡಲಮನೆ, ಮನೆಯೊಂದು ಮೂರು ಬಾಗಿಲು ಕಿರುತೆರೆಯ ಅವಕಾಶಗಳು ಕೈ ಬಂದ ತುತ್ತು ಬಾಯಿಗೆ ಬಾರದಾದವು.ಇವರ  ಅನುಪಸ್ಥಿತಿಯಿಂದಾಗಿ ಕಾಲ್ಶೀಟ್ಗಳು ಸಹ ಕ್ರಮೇಣ ವಿರಳವಾಗತೊಡಗಿದವು. ಆದರೆ ಕಲೆಯೇ ಆಧಾರ ನಾಟಕವೇ ಜೀವಾಳವಾಗಿಸಿಕೊಂಡಿದ್ದ ಕುಬೇರರಿಗೆ ನಾಟಕ ವಿಹಿನ ಬದುಕುವುದು ಅಸಾಧ್ಯವಾಗ ತೊಡಗಿದಾಗ ಪುನಃ ಎಲ್ಲವನ್ನೂ ಧಿಕ್ಕರಿಸಿ ಸುಭದ್ರಮ್ಮ ಮನ್ಸೂರ್, ಚಿತ್ರನಟ ದೊಡ್ಡಣ್ಣ, ಡಿಂಗ್ರಿ ನಾಗರಾಜ್, ಶಿವಶಂಕರ್ ನಾಯ್ಡುರಂತಹ ಅಗ್ರಗಣ್ಯರೊಡನೆ ಅಭಿನಯಿಸುವ ಮೂಲಕ ಮತ್ತೆ ರಂಗ ಜೀವನವನ್ನು ರಂಗಾಗಿಸಿಕೊಂಡರು.

  ಪ್ರವೃತ್ತಿಯಲ್ಲಿ ಮಾತ್ರ ಮಿಂಚುವುದಲ್ಲದೇ  ಅನೇಕ ಸಂದರ್ಭಗಳಲ್ಲಿ ಕಳ್ಳ ಕಾಕರನ್ನು ಸದೆಬಡಿಯುವ ಮೂಲಕ ,ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸಿದ ಸಾಹಸಕ್ಕಾಗಿ ಬಂಗಾರದ ಪದಕ ಪಡೆದು ಉನ್ನತ್ತ ಸ್ಥಾನಕ್ಕೆ ಏರಿದ್ದರು. ಇದರ ನಡುವೆಯೂ ಇಂದಿಗೂ ವೃತ್ತಿ -ಪ್ರವೃತ್ತಿಯನ್ನು ಏರುಪೇರಿಲ್ಲದೇ ಸಮರ್ಥವಾಗಿ ನಿಭಾಯಿಸುವ ಕುಬೇರರು ೫೮ ರ ಪ್ರಾಯದಲ್ಲಿದ್ದರೂ ಅದ್ಭುತವಾಗಿ ಅಭಿನಯಿಸುತ್ತೇನೆ ಎಂಬ ಎದೆಗಾರಿಕೆ ಉಳಿಸಿಕೊಂಡಿರುವುದು ಅಚ್ಚರಿಯೇ ಸರಿ. ಇದಲ್ಲದೇ ಎಲ್ಲ ಸಂದರ್ಭದಲ್ಲೂ ಮಡದಿ ನಾಗರತ್ನ ಮತ್ತು ಮಗಳು ಪೂಜಾಳ ಸಹಕಾರವನ್ನು ಉಳಿಸಿಕೊಂಡಿದ್ದಾರೆ.

   ಇಂತಹ ಮಹನೀಯರ ಕಲಾ ಸಾಧನೆಯನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಆಹ್ವಾನಿಸಿ, ಸತ್ಕರಿಸಿ, ಸನ್ಮಾನಿಸಿವೆ.ಅಲ್ಲದೇ ಇಲಾಖೆಯಿಂದಲೂ ಅದೆಷ್ಟೋ ಬಾರಿ ಸನ್ಮಾಸಿ, ಗೌವರಿಸುವ ಮೂಲಕ ತನ್ನ ಘನತೆಯನ್ನು ತಾನೇ ಉಳಿಸಿಕೊಂಡಿದೆ.ಎಲ್ಲ ಕ್ಷೇತ್ರಗಳಲ್ಲಿ ಇರುವ ಸಮರ್ಥ ಅಭಿನೇತೃಗಳಿಗೆ ಈ ಲೇಖನದಿಂದಾಗಲಿ ಸಮರ್ಥ ಕಲಾಮಣಿಗಳಿಗೆ ಸದಾವಕಾಶ ದೊರೆಯುವಂತಾಗಲಿ, ರಂಗಭೂಮಿ ಸದಾಹಸಿರಾಗಿ ಉಳಿಯಲಿ.


ಲೇಖನ

ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.

ರಂಗ ಸಂಶೋಧನಾರ್ಥಿ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.