ರಂಗ ಮಾಲಿಕೆ -೫೫ ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'

 


ಬಣ್ಣದ ಬದುಕು

ರಂಗ ಮಾಲಿಕೆ -೫೫


 ಬಳ್ಳಾರಿ ರಂಗಭೂಮಿಯ ಹಾಸ್ಯ ಕಿರೀಟಿ 'ಗೆಣಕಿಹಾಳ್ ಎಂ.ಪಾರ್ವತೀಶ್'

      'ಕಲಾಸೇವೆಯೇ ಕಲಾ ಮಾತೆಯ ಸೇವೆ' ಎಂಬ ಭಾವದಲ್ಲಿ ಕಲಾ ಕಾಯಕ ಮಾಡುವ ಮನಸ್ಸುಗಳ ಸಂಖ್ಯೆ ದಿನೇದಿನೇ ಇಳಿಮುಖವಾಗುತ್ತಿರುವಾಗ, ಇಲ್ಲೊಬ್ಬ ರಂಗಕರ್ಮಿ ಯಾವುದೇ ಫಲಾಪೇಕ್ಷೆಯಿಲ್ಲದೆ ಉಚಿತವಾಗಿ,ಯಾವುದೇ ಸಂಭಾವನೆ ಪಡೆಯದೇ ತನ್ನ ನಟನಾ ಸಾಮರ್ಥ್ಯದ ಮೂಲಕ ಹಾಸ್ಯರಸವನ್ನು ಇಡೀ ನಾಡಿಗೆ ಉಣಬಡಿಸಿ ಎಲ್ಲರನ್ನೂ ನಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರೇ ಕುರುಗೋಡು ತಾಲ್ಲೂಕಿನ ಗೆಣಕಿಹಾಳ್ ಗ್ರಾಮದ ಎಂ.ಪಾರ್ವತೀಶ್'.

   ಇವರು ೨೩.೧೧.೧೯೭೪ರಲ್ಲಿ ಗೆಣಕಿಹಾಳ್ ಗ್ರಾಮದಲ್ಲಿ ರುದ್ರಯ್ಯ ಸ್ವಾಮಿ ಮತ್ತು ಪಾರ್ವತಮ್ಮರ ಮಗನಾಗಿ ಜನಿಸಿದರು.ಮಧ್ಯಮ ಕುಟುಂಬದಲ್ಲಿ ಜನಿಸಿದ್ದರಿಂದ ಪದವಿಯವರೆ ವಿದ್ಯಾಭ್ಯಾಸ ಪಡೆದಿದ್ದಲ್ಲದೇ ಖಾಸಗಿ ಬಯೋಕೆಮಿಕಲ್ ಕಂಪನಿಯ ಮ್ಯಾನೇಜರ್ ನೌಕರಿಯನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ಮತ್ತು ಪ್ರವೃತ್ತಿಯಲ್ಲಿ ಯಶಸ್ವಿ ಮಾದರಿ ಎನಿಸಿದ್ದಾರೆ.

  ಬಾಲ್ಯದಿಂದಲೂ  ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದ ಹಳ್ಳಿಯಲ್ಲಿನ ವಾತಾವರಣದ ರಸಪಾಕ ಸವಿಯುತ್ತಲೇ ತಮ್ಮೊಳಗೊಬ್ಬ ಅಭಿನೇತೃವನ್ನು ಅವಿರ್ಭವಿಸಿಕೊಂಡರು.ಅಂತೆಯೇ ಶಾಲಾ ಹಂತದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅದರ ನೈಜರೂಪ  ಅನಾವರಣಗೊಂಡು, ಅಲ್ಲಿ ದೊರೆತ ಧನಾತ್ಮಕ ಪ್ರೇರಣೆಗಳ ಮೂಲಕ ಮುಂದೆ ತಮ್ಮ ೧೨ ನೇ ವಯಸ್ಸಿನಲ್ಲಿ ಬಾದನಹಟ್ಟಿ ಶಿವನಗೌಡರ ನೇತೃತ್ವದಲ್ಲಿ 'ರಾಮಾಯಣ' ಬಯಲಾಟದ ಬಾಲಾಕೃಷ್ಣನ ಪಾತ್ರಕ್ಕೆ ಬಣ್ಣ ಹಚ್ಚಿದರು. ಆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು ಮುಂದೆ ಬಳ್ಳಾರಿ ರಂಗಭೂಮಿ ಇತಿಹಾಸದ ಪುಟಗಳಲ್ಲಿ ಒಬ್ಬ ಹಾಸ್ಯರತ್ನ ಎನಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬೆಳೆಯುವ ಹಂತದಲ್ಲಿ ಎದುರಾದ ಮಾನ ಅಪಮಾನಗಳನ್ನು ಬದಿಗೊತ್ತಿ  ಅಜಾನುಬಾಹುವಾಗಿ ಬೆಳೆಯ ತೊಡಗಿದ್ದಾರೆ.

   ಇಂದಿಗೂ ತಮ್ಮ ನಟನೆಗೆ  ಯಾವ ಸಂಭಾವನೆ ಪಡೆಯದೆ ಅಭಿನಯಿಸುವ ಸರಳ ವ್ಯಕ್ತಿತ್ವವನ್ನು ಉಳಿಸಿಕೊಂಡು ಬಂದಿದ್ದಾರೆ.

ಪ್ರತಿ ವರ್ಷ ಕುರುಗೋಡು ದೊಡ್ಡ ಬಸವೇಶ್ವರ ಜಾತ್ರೆ ಪ್ರಯುಕ್ತ ಗೆಣಿಕಿಹಾಳಿನಲ್ಲಿ ನಾಟಕದ ಆಯೋಜನೆಯಾದಾಗ ಪಾರ್ವತೀಶರು ೧೯೯೬ರಲ್ಲಿ ಶಾಸನವಾಸಪುರದ ರಂಗ ನಿರ್ದೇಶಕ ಹೆಚ್. ಎರ್ರೆಪ್ಪಗೌಡರ ನೇತೃತ್ವದ ಮತ್ತು ನಿರ್ದೇಶನದ 'ಆಶಾಲತಾ' ಎಂಬ ನಾಟಕದಲ್ಲಿ ವಾಸು ಎಂಬ ಪುಟ್ಟ ಹಾಸ್ಯ ಪಾತ್ರದ ಮೂಲಕ ಮೊದಲ ಬಾರಿಗೆ ಪೂರ್ಣಪ್ರಮಾಣವಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅಲ್ಲಿಂದ ಆರಂಭಗೊಂಡ ಇವರ  ಬಣ್ಣದ ಬದುಕು ತುಂಬಾ ಏರುಪೇರಗಳ ಮೂಲಕ ಒಂದು ನಿಗದಿತ ದಡಸೇರುವಲ್ಲಿ ಯಶಸ್ವಿಯಾಗಿದ್ದು ಮಾತ್ರ ಸೋಜಿಗವೇ ಸರಿ.

   ಮೊದ ಮೊದಲು ಪುಟ್ಟ ಪುಟ್ಟ ಪಾತ್ರದ ಮೂಲಕ ಗುರುತಿಸಿಕೊಂಡ ಇವರು ಕ್ರಮೇಣ ಬಳ್ಳಾರಿಯ ಹಿರಿಯ ರಂಗಕರ್ಮಿಗಳಾದ ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ, ರಮೇಶ್ ಗೌಡ ಪಾಟೀಲ್ ಶಿವಶಂಕರ್ ನಾಯ್ಡು ಮುಖ್ಯವಾಗಿ ತಮ್ಮದೇ ಊರಿನ ಹಿರಿಯ ಕಲಾವಿದರಾದ ಗೆಣಕಿಹಾಳ್ ತಿಮ್ಮನಗೌಡರ ಸಹಕಾರದೊಂದಿಗೆ ಪ್ರಥಮ ಬಾರಿಗೆ 'ರಕ್ತರಾತ್ರಿ' ನಾಟಕದ ಶಂಖದತ್ತ ನಾಟಕಕ್ಕೆ ಬಣ್ಣ ಹಚ್ಚಿದ್ದಲ್ಲದೇ, 'ಕರ್ನಾಟಕಾಂಧ್ರ ನಟಶೇಖರ' ಶಿವಶಂಕರ್ ನಾಯ್ಡುರವರಿಂದ ಮೆಚ್ಚುಗೆ ಪಡೆದು ಅವರ ಆತ್ಮೀಯತೆಗೆ ಅಣಿಯಾದರು. ಆ ಮೂಲಕ ಅವರ  ರಂಗಾನುಭವಗಳ ಶಿಕ್ಷಣ ಪಡೆದು ಇಂದಿಗೂ ತಮ್ಮ ನಟನೆಗೆ  ಯಾವುದೇ ಸಂಭಾವನೆ ಪಡೆಯದೇ ಅಭಿನಯಿಸುವ ಆದರ್ಶವನ್ನು ಬೆಳೆಸಿ,ಉಳಿಸಿಕೊಂಡು ಬಂದಿದ್ದಾರೆ.  ಇದಲ್ಲದೇ ನಾಯ್ಡುರವರೊಂದಿಗೆ ಇದೇ ರಕ್ತರಾತ್ರಿ ಮತ್ತು ಶಂಕರ್ ನಾಯ್ಡುರ ರಚನೆ ನಿರ್ದೇಶನದ ದನ ಕಾಯೋರ ದೊಡ್ಡಾಟ,ನೀನು ನಕ್ಕರೆ ಹಾಲು ಸಕ್ಕರೆ ನಾಟಕಗಳ ಸುಮಾರು ೯೦೦ಕ್ಕೂ ಹೆಚ್ಚು ಪ್ರಯೋಗಗಳಲ್ಲಿ ಅಮೋಘವಾಗಿ ಅಭಿನಯಿಸುವ ಮೂಲಕ ರಾಜ್ಯದ ಕಲಾರಸಿಕರಿಂದ 'ಭಲೇ ಹಾಸ್ಯ ಜೋಡಿ' ಎಂಬ ಪ್ರಶಂಸೆ ಗಳಿಸಿದ್ದಾರೆ.

    ಕಾಲಕ್ರಮೇಣ ಜಾತ್ರೆ ಪ್ರಯುಕ್ತ ಊರಲ್ಲಿ ನಡೆಯುವ ನಾಟಕಗಳ ಉಸ್ತುವಾರಿ, ನಿರ್ದೇಶನ, ಮುಖ್ಯ ನಟನೆಯ ಜವಾಬ್ದಾರಿ ವಹಿಸಿಕೊಂಡರು. ಅಲ್ಲದೇ ಗಣೇಶ ಕಲಾ ಬಳಗ ಎಂಬ ತಂಡ ಕಟ್ಟಿ ಕಲಿತ ಕಳ್ಳ, ನರ್ತಕಿ ನಾಯಕಿ, ಕೊಡುವ ಕೈ ಪರಮಾತ್ಮನಿಗೆ ಸೈ, ದನ ಕಾಯೋರ  ದೊಡ್ಡಾಟ, ನೀನು ನಕ್ಕರೆ ಹಾಲು ಸಕ್ಕರೆ, ಶಿವಶರಣೆ ಆಯ್ದಕ್ಕಿ ಲಕ್ಕಮ್ಮ, ಗೌಡ್ರ ಗದ್ಲ ಇನ್ನು ಮುಂತಾದ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮ ಆಂಗೀಕ ಹಾವಭಾವದ ಮೂಲಕ 'ಹಾಸ್ಯ ರತ್ನ ಜೂನಿಯರ್ ನರಸಿಂಹರಾಜು' ಎಂದೇ ಗುರುತಿಸಿ ಕೊಂಡಿದ್ದಾರೆ. ಇದುವರೆಗೂ ೧೦೦೦ಕ್ಕೂ ಹೆಚ್ಚು ಪ್ರಯೋಗಗಳಲ್ಲಿ ಶಿವನಾಗಿ, ಪೂಜಾರಿಯಾಗಿ, ಸೈನಿಕನಾಗಿ, ಮೂರ್ಖರಾಜನಾಗಿ,ಮುದುಕನಾಗಿ, ಆಳಾಗಿ ಹೀಗೆ ಹತ್ತು ಹಲವು ವಿಭಿನ್ನ ಪಾತ್ರಗಳಲ್ಲಿ ಹಂಪಿ ಉತ್ಸವ, ಮುಧೋಳ ಉತ್ಸವ,ದಸರಾ ಉತ್ಸವ, ಕಿತ್ತೂರು ಉತ್ಸವ,ಗಡಿನಾಡ ಉತ್ಸವದಂತಹ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅಭಿನಯಿಸುವ ಮೂಲಕ ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡಿದ್ದಾರೆ.

  ಇಡೀ ನಾಡಿನಾದ್ಯಂತ ಹಾಸ್ಯ ಚತುರ ಏನಿಸಿದ ಇವರು ಒಮ್ಮೆ ಮಾತ್ರ ನಿರ್ದೇಶನದ ಅತೀವ ಎದೆಗಾರಿಕೆಯಿಂದಾಗಿ ತಮ್ಮೂರಿನಲ್ಲಿ 'ಹಳ್ಳಿಗೊತ್ತಿದ ಕೊಳ್ಳಿ' ನಾಟಕದ ಗಂಭೀರ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದರು. ಆದರೆ ಅವರ ಗಂಭೀರ ಅಭಿನಯವೂ ಸಹ ನೆರೆದ ಪ್ರೇಕ್ಷಕರಿಗೆ ಹಾಸ್ಯರಸ ಉಣಬಡಿಸಿ ಮುಖ ಅನುಭವಿಸಿದರು.ಅಂದಿನಿಂದ ತಮ್ಮ ನಟನಾ ಪರಧಿ ದಾಟಿಹೋಗುವ ಪ್ರಯತ್ನಕ್ಕೆ ಮುಂದಾಗಲಿಲ್ಲ.ಹಾಸ್ಯ ನಟನೆಯ ಮೂಲಕ ಎಂತಹ ಪ್ರೇಕ್ಷಕರನ್ನಾದರೂ ನಗಿಸಬಲ್ಲ ಅಭಿನಯದ ಸೂಕ್ಷ ಎಳೆಗಳನ್ನು ಬಲ್ಲವರಾಗಿದ್ದಾರೆ.

  ಇಂತಹ ನಟನಾಮಣಿಯ ಕಲಾಚಾತುರ್ಯವನ್ನು ಗಮನಿಸಿದ ರಂಗಜಂಗಮ ಡಿ.ಕಗ್ಗಲ್ ರಿಂದ 'ಹಾಸ್ಯರತ್ನ', ಕೊಪ್ಪಳದ ಕಲಾ ರಸಿಕರಿಂದ 'ಹಾಸ್ಯ ಕಿರೀಟಿ,ಹಾಸ್ಯ ಚತುರ, ಹಾಸ್ಯ ಚಕ್ರವರ್ತಿ' ಎಂಬ ಬಿರುದುಗಳನ್ನು ಮತ್ತು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.ಇದಲ್ಲದೇ ಇತ್ತೀಚೆಗೆ 'ವೀರರಾಣಿ ಬೆಳವಾಡಿ ಮಲ್ಲಮ್ಮ' ಮತ್ತು 'ಪವಾಡ ಪುರುಷ ಅಲ್ಲಿಪುರದ ಮಹಾದೇವ ತಾತ' ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನೆಯ ಗಟ್ಟಿತನವನ್ನು ಹೆಚ್ಚಿಸಿಕೊಂಡಿದ್ದಾರೆ.ರಾತ್ರೋರಾತ್ರಿ ಶ್ರೀಮಂತರಾಗ ಬಯಸುವ ಜನರ ನಡುವೆ  ಕಲಾಲೋಕದಲ್ಲಿ ಉತ್ತಮ ಆದರ್ಶವನ್ನು ಪಾಲಿಸುತ್ತಾ ಮದಿರುವ ಇಂತಹ ಅದಮ್ಯ ಚೇತನರ ಬಣ್ಣದ ಬದುಕು ಹಸನಾಗಿರಲಿ ಎಂದು ನಾವೂ ನೀವೂ ಹಾರೈಸುವ.


ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

  


Comments

  1. ಧನ್ಯವಾದಗಳು ನಿಮ್ಮ ಕಲಾ ಪ್ರೌಢಿಮೆ ಹೀಗೆ ಮುಂದುವರಿಯಲಿ 🌸🌺👍🤝🙏

    ReplyDelete

Post a Comment

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.