ರಂಗ ಮಾಲಿಕೆ - ೫೪ ಬಹುಮುಖ ವ್ಯಕ್ತಿತ್ವದ ಪ್ರತಿಭಾ ಸಂಪನ್ನ " ನಾಡೋಜ ಬೆಳಗಲ್ ವೀರಣ್ಣನವರು."
ಬಣ್ಣದ ಬದುಕು
ರಂಗ ಮಾಲಿಕೆ - ೫೪
ಬಹುಮುಖ ವ್ಯಕ್ತಿತ್ವದ ಪ್ರತಿಭಾ ಸಂಪನ್ನ " ನಾಡೋಜ ಬೆಳಗಲ್ ವೀರಣ್ಣನವರು."
ಬಳ್ಳಾರಿಯ ರಂಗಭೂಮಿಯಲ್ಲಿ ಅಚ್ಚಳಿಯದ ಹೆಸರುಗಳಲ್ಲಿ ಒಂದು ಜೋಳದ ರಾಶಿ ದೊಡ್ಡನಗೌಡರು. ಇವರ ಶಿಷ್ಯ ವೈ.ಎಂ.ಚಂದ್ರಯ್ಯಸ್ವಾಮಿ ಈ ಇರ್ವರ ಅದಮ್ಯ ಚೇತನ ಶಕ್ತಿಯಲ್ಲಿ ಪಳಗಿ ಈಡೀ ನಾಡಿಗೆ ಬೆಳಗಿ ಹೆಸರಾದ ಪ್ರತಿಭಾ ಸಂಪನ್ನರೆಂದರೆ 86ರ ಇಳಿ ವಯಸ್ಸಿನಲ್ಲೂ ತಮ್ಮ ರಂಗಭೂಮಿಯ ಹರೆಯತನವನ್ನು ಉಳಿಸಿಕೊಂಡಿರುವ ಬಳ್ಳಾರಿಯ ರಂಗ ಸಂಪನ್ನ ಬೆಳಗಲ್ ವೀರಣ್ಣನವರು.
ಬೆಳಗಲ್ಲು ವೀರಣ್ಣನವರು ಪಿಟೀಲುವಾದಕ, ಸ್ತ್ರೀಪಾತ್ರಾಭಿನಯ ದೊಂದಿಗೆ ಬಯಲಾಟಗಳ ಮುಮ್ಮೇಳ ಹಾಡುಗಾರರಾಗಿದ್ದ ಸಣ್ಣ ಹನುಮಂತಪ್ಪನವರ ಮಗನಾಗಿ 1-7-1936ರಂದು ಬಳ್ಳಾರಿ ಸನಿಹದ ಬೆಳಗಲ್ಲು ಗ್ರಾಮದಲ್ಲಿ ಜನಿಸಿದರು, ಎಂಟು ವರ್ಷದ ಬಾಲಕ ನಾಗಿದ್ದಾಗಲೇ ತಂದೆ ವಿಧಿವಶರಾಗಿ ವೀರಣ್ಣ ಅನಾಥರಾದರು. ಎಳೆಯ ವಯಸ್ಸಿನಲ್ಲಿಯೇ ಭಕ್ತ ಪ್ರಹ್ಲಾದ ನಾಟಕದಲ್ಲಿ ಪ್ರಹ್ಲಾದನಾಗಿ ಅಭಿನಯಿಸಿದ ವೀರಣ್ಣನವರು ಮುಂದೆ ಹಲವು ಕಂಪನಿ ನಾಟಕಗಳಲ್ಲದೇ ಹವ್ಯಾಸಿ ಕಲಾವಿದರಾಗಿ ರಂಗಭೂಮಿಯಲ್ಲಿ ಖ್ಯಾತಿ ಪಡೆದರು. ಮೊದಮೊದಲು ಸ್ತ್ರೀಪಾತ್ರದಿಂದ ಜನಪ್ರಿಯರಾದ ವೀರಣ್ಣನವರು ಹಾಸ್ಯ ಪಾತ್ರ, ವ್ಹಿಲನ್ ಪಾತ್ರಗಳಿಂದಲೂ ಮಿಂಚಿದರು. ಇವರಿಗೆ ಹೆಸರು ತಂದುಕೊಟ್ಟದ್ದು ಕಂದಗಲ್ಲುಹನುಮಂತರಾಯರ ರಕ್ತರಾತ್ರಿ ನಾಟಕದ ಶಕುನಿ ಪಾತ್ರ. ಬೆಳಗಲ್ಲು ವೀರಣ್ಣನವರ ಟಿಪ್ಪು ಸುಲ್ತಾನ ನಾಟಕದ ಮೀರ ಸಾಧಿಕ್, ಅಣ್ಣ-ತಂಗಿ ನಾಟಕದ ಬಳೆಗಾರ ಸಾಬಿಯ ಹಾಸ್ಯ ಪಾತ್ರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಇಂದಿಗೂ ವೀರಣ್ಣ ಯಾವುದೇ ಸಮಾರಂಭದಲ್ಲಿ ಅತಿಥಿಯಾಗಿ ವೇದಿಕೆಯಲ್ಲಿ ಅಥವಾ ಪ್ರೇಕ್ಷಕರಾಗಿ ಮುಂಭಾಗದಲ್ಲಿ ಉಪಸ್ಥಿತರಿದ್ದರಾಯ್ತು, ಶಕುನಿ ಪಾತ್ರದ ಸಂಭಾಷಣೆಗಾಗಿ ಅಥವಾ ಅವರ ಕಂಚಿನ ಕಂಠದಲ್ಲಿ ಯಾವುದಾದರೂ ರಂಗಗೀತೆಗಾಗಿ ಜನರೆಲ್ಲರೂ ಒತ್ತಾಯಿಸುವುದುಂಟು. ನಾಟ್ಯಕಲಾ ಪ್ರಪೂರ್ಣ-ಬಳ್ಳಾರಿ ರಾಘವ, ಗಮಕಕಲಾನಿಧಿಯೆಂದು ಹೆಸರಾದ-ಅದ್ವಿತೀಯ ನಾಟ್ಯ ಕಲಾ ತಪಸ್ವಿ-ಜೋಳದರಾಶಿ ದೊಡ್ಡನಗೌಡರ ಪರಂಪರೆಯ ಅಪರೂಪದ ಕುಡಿ ಬೆಳಗಲ್ಲು ವೀರಣ್ಣ ಶಿಡಿಗಿನಮೊಳೆ ಚಂದ್ರಯ್ಯನವರ ಆಪ್ತ ಶಿಷ್ಯರು.
ಬೆಳಗಲ್ಲಿನಲ್ಲಿ ವೀರಅಭಿಮನ್ಯು ಕಾಳಗ ಬಯಲಾಟ. ಅದರಲ್ಲಿ ಒಂದೇ ವಯಸ್ಸಿನ ವೀರಣ್ಣ-ಊರ ಗೌಡರ ಮಗ ಸಿದ್ಧನಗೌಡ-ಇಬ್ಬರನ್ನೂ ಡ್ಯಾನ್ಸ್ ಮಾಡಲು ಅಣಿಗೊಳಿಸಿದರು. ದೂರದಲ್ಲಿರುವ ಬಣ್ಣದ ಮನೆಯಿಂದ ಪುರುಷ ಪಾತ್ರಧಾರಿಗಳನ್ನು ಪಂಜು ಹಿಡಿದು, ಕಹಳೆ ಮೊಳಗಿಸುತ್ತ ಅದ್ದೂರಿ ಮೆರವಣಿಗೆಯಿಂದ ಕುಣಿಯುತ್ತ-ಕೇಕೆ ಹೊಡೆಯುತ್ತ-ಕರೆತಂದು ಅಟ್ಟದ ಮೇಲೆ ಎಗರಿ ಕುಣಿಸಿ-ಕೂಡಿಸಿದಾಗ, ನಾಯಕ-ಖಳನಾಯಕ ಪಾತ್ರಗಳು ಕುಣಿಕುಣಿದು ದಣಿದಾಗ ಬಾಲಕರಿಂದ ಹಾಡು-ನೃತ್ಯ ಮಾಡಿಸುವುದು ಪರಿಪಾಠ. ಅಂಥದೊಂದು ಸಂದರ್ಭ, ಎಂಟುವರ್ಷದ ಕಿಶೋರ ವೀರಣ್ಣ ತನ್ನ ವಾರಿಗೆ ಸಿದ್ಧನಗೌಡನೊಂದಿಗೆ ಹಾಡುತ್ತ ಕುಣಿಯುವುದರೊಂದಿಗೆ ರಂಗಭೂಮಿ ಪ್ರವೇಶಕ್ಕೆ ನಾಂದಿಯಾಯಿತು. ಎಳೆ ವಯಸ್ಸಿನ ವೀರಣ್ಣನವರ ಮಾಧುರ್ಯ-ಲಾಲಿತ್ಯಗಳ ಕಿಶೋರಕಂಠ ರಸಿಕಪ್ರೇಕ್ಷಕರ ಮನಸ್ಸನ್ನು ಮೋಹನ ಮುರಳಿಯಂತೆ ಆಕರ್ಷಿಸಿತು.
ವೀರಣ್ಣನವರದು ಕಂಚಿನಕಂಠ. ಭಜನೆ-ನಾಟಕ-ಬೈಲಾಟದ ಪದಗಳನ್ನು ಕೇಳುಗರು ಮಂತ್ರಮುಗ್ಧರಾಗುವಂತೆ ಹಾಡುತ್ತಿದ್ದರು. ಹಿರೇಹಾಳು ಅಕ್ಕ-ಭಾವನ ಬಳಿಗೆ ಜಾಸ್ತೀ ಹೋಗುತ್ತಿದ್ದ ವೀರಣ್ಣ ಅಲ್ಲಿ ನಾಟಕ ಕಲಿಸುತ್ತಿದ್ದ ದೊಡ್ಡಕಲ್ಲಪ್ಪನವರಿಗೆ ಅಚ್ಚು ಮೆಚ್ಚಿ ನವರಾದರು. ಅವರ ಜೊತೆ ಹಳ್ಳಿ-ಹಳ್ಳಿಗೆ ಹೋಗುತ್ತಿದ್ದರು. ಕೂಡ್ಲಿಗಿ ತಾಲೂಕು ಪೋತಲಕಟ್ಟೆಯಲ್ಲಿ ಮೂರು ತಿಂಗಳು ಕಂದಗಲ್ಲ ಹನುಮಂತರಾಯರ ಚಿತ್ರಾಂಗದ ನಾಟಕ ಕಲಿಸುತ್ತಿದ್ದಾಗ, ಅಲ್ಲಿದ್ದ ವೀರಣ್ಣನವರಿಗೆ ಆ ನಾಟಕದ ಎಲ್ಲ ಹಾಡುಗಳೂ ಕಂಠಸ್ಥ. ಹಿಂದೂಸ್ತಾನಿ ರಾಗದ ಹಾಡುಗಳನ್ನು ಶೃತಿಬದ್ಧವಾಗಿ ಹಾರ್ಮೋನಿಯಂ ನುಡಿಸುತ್ತ ಹಾಡುತ್ತಿದ್ದರು.
ಬೆಳಗಲ್ಲಿನಲ್ಲಿ ಕೃಷ್ಣಗಾರುಡಿ ನಾಟಕ ಕಲಿಸುವುದಕ್ಕೆ ಸಿಡಿಗಿನಮೊಳೆ ವೈ.ಎಂ.ಚಂದ್ರಯ್ಯ ಬಂದಿದ್ದರು. ವೀರಣ್ಣ ತಮ್ಮ ತಂದೆಯಿಂದ ಕಲಾಪ್ರಪೂರ್ಣ ಬಳ್ಳಾರಿ ರಾಘವರು, ಜೊಳದರಾಶಿ ದೊಡ್ಡನಗೌಡರ ಬಗ್ಗೆ ಕೇಳಿದ್ದರು. ಸಿಡಿಗಿನಮೊಳೆ ಚಂದ್ರಯ್ಯ ಜೊಳದರಾಶಿ ದೊಡ್ಡನಗೌಡ್ರ ಶಿಷ್ಯರು. ಊರಲ್ಲಿ ಕೆಲವರಿಗೆ ವೀರಣ್ಣನವರಿಂದ ಕೃಷ್ಣಗಾರುಡಿಯಲ್ಲಿ ಪಾತ್ರ ಮಾಡಿಸುವ ಅಭಿಲಾಷೆ. ಚಂದ್ರಯ್ಯ ಬಹಳ ಕಟ್ಟುನಿಟ್ಟಿನ ಮನುಷ್ಯ. ಒಂದು ಮಧ್ಯಾಹ್ನ ಹನ್ನೆರಡರಿಂದ ಮೂರು ಗಂಟೆ ಬಿಡುವಿನಲ್ಲಿ ಕೆಲ ಹಿರಿಯರು ವೀರಣ್ಣನವರನ್ನು ಅವರ ಬಳಿ ಕರೆದುಕೊಂಡು ಹೋದರು. ಶ್ರೀ ಕೃಷ್ಣಗಾರುಡಿ ನಾಟಕದಲ್ಲಿ ಪಾತ್ರ ಮಾಡಲು ತಿಳಿಸಿದರು. ಆದರೆ ಗದುಗಿಗೆ ಸಂಗೀತ ಕಲಿಯಲು ಹೋಗುವ ಕನಸು ಕಾಣುತ್ತಿದ್ದ ವೀರಣ್ಣ ನಿರಾಕರಿಸಿದರು. “ಆಗ್ಲೋ ಹೋಗ್ವಲ್ಯಾಕ, ಈಗ ಪಾರ್ಟ್ ಮಾಡು. ನಮ್ಮ ನಾಟ್ಕ ಮೊದ್ಲಾದ್ರೆ ಸರಿ. ಇಲ್ಲಂತಂದ್ರ ನೀನು ಗದಿಗಿಗೆ ಹೋಗುವಂತಿ ಅನ್ನೋ ಚಂದ್ರಯ್ಯನವರ ಮಾತನ್ನು ವೀರಣ್ಣ ಕಿವಿಗೆ ಹಾಕಿಕೊಳ್ಳಲಿಲ್ಲ. ಮೂರು-ನಾಲ್ಕು ಸಾರಿ ಹೇಳಿ ಕಳಿಸಿದರೂ ಹೋಗಲಿಲ್ಲ. ನಾಟಕ ಪ್ರದರ್ಶನದ ದಿನ ಬಂದೇಬಿಟ್ಟಿತು. ನಾಟಕ ವೀರಣ್ಣನವರ ಮೇಲೆ ಅತ್ಯದ್ಭುತ ಪರಿಣಾಮ ಬೀರಿಬಿಟ್ಟಿತು. ಎಂಥ ಕೆಲ್ಸಾ ಮಾಡ್ದೆ?. ನಾನೀ ನಾಟಕದಲ್ಲಿ ಪಾತ್ರ ಮಾಡ್ಬೇಕಿತ್ತು ಅನ್ನಿಸಿತು. ವಿಧಿಯ ಕೈವಾಡ!. ಗದುಗಿಗೆ ಸಂಗೀತ ಕಲಿಯಲು ಹೋಗುವ ಕನಸೂ ಭಗ್ನವಾಯ್ತು. ವೀರಣ್ಣ ಪಶ್ಚಾತ್ತಾಪದಿಂದ ನೊಂದು ಪರಿತಪಿಸಿದರು. ಮತ್ತೆ ಅಲೆಮಾರಿಯಾದರು. ಮತ್ತೇ ಎರಡು ತಿಂಗಳಿಗೆ ಕುರುಕ್ಷೇತ್ರ ನಾಟಕ ಕಲಿಸಲು ಚಂದ್ರಯ್ಯ ಬಂದರು. ದೊಡ್ಡಬಸನಗೌಡರು ಗಿರಿಮಲ್ಲಯ್ಯ ಈ ಸಲ ವೀರಣ್ಣನಿಂದ ಪಾತ್ರ ಮಾಡಿಸಲೇಬೇಕೆಂದು ಚಂದ್ರಯ್ಯನವರಲ್ಲಿ ಕರೆದುಕೊಂಡು ಹೋದರು. ಮೊದ-ಮೊದಲು ಚಂದ್ರಯ್ಯ ರೇಗಿದರು. ‘ಕಳಿಸ್ರಿ, ಅವನ್ನ ಹೊರಗೆ ಕಳಿಸ್ರಿ, ನಾನೆಷ್ಟು ಹೇಳಿಕಳ್ಸಿದ್ರೂ ಆವಾಗ ಬರಲಿಲ್ಲ.’ಅಂತ ಸಿಟ್ಟು ಮಾಡಿದರು. ಆಮೇಲೆ ವೀರಣ್ಣ ಅವರ ಅಚ್ಚುಮೆಚ್ಚಿನ ಶಿಷ್ಯನಾಗಿ ಅವರ ರಂಗಭೂಮಿಯಲ್ಲಿ ಖ್ಯಾತಿ ಪಡೆದಿರುವುದು ಇತಿಹಾಸ.
ಕುರುಕ್ಷೇತ್ರದಲ್ಲಿ ಮೊದಲು ವೀರಣ್ಣವರದು ಹಾಸ್ಯ ಸ್ತ್ರೀಪಾತ್ರ. ಜೊತೆ-ಜೊತೆಗೇ ಸಂಗೀತಾಭ್ಯಾಸ. ಆ ಕಾಲಕ್ಕಾಗಲೇ ಸ್ತ್ರೀಪಾತ್ರಕ್ಕೆ ಹೆಣ್ಣುಮಕ್ಕಳನ್ನೇ ಕರೆಸುವ ಪದ್ಧತಿ ಶುರುವಾಗಿತ್ತು. ಅವ್ರೆಲ್ರೂ ಒಳ್ಳೊಳ್ಳೆ ಕಲಾವಿದರು. ಹುಬ್ಬಳ್ಳಿ ಇಂದ್ರಾಬಾಯಿ, ಶಾಂತಾಬಾಯಿ, ಆಲೂರು ಸುಶೀಲಮ್ಮ, ಹೊಸಪೇಟೆ ಲಕ್ಷ್ಮಿ ಇವರೆಲ್ಲರಿಗೂ ವೀರಣ್ಣ ಅಚ್ಚುಮೆಚ್ಚು. ಎರಡು ಪ್ರಯೋಗ ಆಗುವ ಹೊತ್ತಿಗೆ ವೀರಣ್ಣನವರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟ ಚಂದ್ರಯ್ಯನವರೇ ತಮ್ಮ ಜನ್ಮ-ಜನ್ಮಾಂತರದ ಗುರುವೆಂದು ಭಾವಿಸಿದರು. .
ಮುಂದೆ ಜೋಳದರಾಶಿ ದೊಡ್ಡನಗೌಡರ 'ರಾಮೇಶ್ವರ ನಾಟಕ ಕಲಾ ಮಂಡಳಿ' ಸೇರಿ ಜೋಳದರಾಶಿಯಲ್ಲಿ ಗೌಡರು ಬರೆದ ಮಾಯಾಪ್ರಭಾವ ನಾಟಕ. ಗೌಡರು-ವಿಷ್ಣು, ವೀರಣ್ಣ-ಲಕ್ಷ್ಮಿ, ಚಂದ್ರಯ್ಯನವರು-ರಾಜ, ಪಂಪಣ್ಣ, ರುದ್ರಗೌಡ, ಚಂದ್ರಮೌಳಿ ಮುಂತಾದವರು ಪಾತ್ರಧಾರಿಗಳು.ಅಲ್ಲದೆಗೌಡರೇ ರಚಿಸಿದ ತಿರುನೀಲಕಂಠನ ಕತೆಯ-ಶಿವನಾಣೆ-ನಾಟಕದ ಪಾರ್ವತಿ ಪಾತ್ರವನ್ನು ಇವರು ಮಾಡಿದರು. ಜೋಳದರಾಶಿ ದೊಡ್ಡನಗೌಡರ ಜೊತೆ ಪಾತ್ರ ಮಾಡುವಾಗ ವೀರಣ್ಣನವರಿಗೆ ಹದಿನಾರು ವರ್ಷ. ಅವರು ಹೇಳುತ್ತಿದ್ದುದನ್ನೆಲ್ಲ ಚಾಚೂ ತಪ್ಪದೇ ಯಥಾವತ್ ಮಾಡುತ್ತಿದ್ದರು. ಈ ಮೂಲಕ ಗುರುಗಳಿರ್ವರ ತುಂಬು ಪ್ರೀತಿಗೆ ವೀರಣ್ಣನವರು ಕಾರಣವಾದರು.
ಗುಬ್ಬಿ ಕಂಪನಿಗೆ ಹೋಗಬೇಕೆಂಬುದು ವೀರಣ್ಣನವರ ಅಭಿಲಾಷೆ. ಇದನ್ನರಿತ ಜೋಳದರಾಶಿ ದೊಡ್ಡನಗೌಡರು ತಮ್ಮ ಶಿಫಾರಸ್ಸಿನೊಂದಿಗೆ ಗುಬ್ಬಿ ವೀರಣ್ಣನವರ ಶ್ರೀ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಗೆ ಸೇರಿದರು. ಸೈನಿಕನ ಪಾತ್ರದ ಮೂಲಕ ಪ್ರಾರಂಭವಾದ ವೀರಣ್ಣರ ಗುಬ್ಬಿ ಕಂಪನಿಯ ಬಣ್ಣದ ಬದುಕು,ಮುಂದೆ ಪ್ರಭುದ್ದರಾದಂತೆಲ್ಲ ಮಕ್ಮಲ್ ಟೋಪಿ, ದೇವದಾಸಿಯಂತಹ ಆನೇಕ ನಾಟಕಗಳಲ್ಲಿ ಸ್ತ್ರೀ ಪುರುಷ ಪಾತ್ರಗಳಲ್ಲಿ ಅಭಿನಯಿಸಿ ಬಳ್ಳಾರಿಗೆ ಮರಳಿದರು. ವೀರಣ್ಣನವರಿಗೆ ಸದಾ ನಾಟಕಗಳದ್ದೇ ಧ್ಯಾನ. ಅಂತೆಯೇ ಪುನಃ ಚಂದ್ರಯ್ಯನವರ ಸಾರಥ್ಯದಲ್ಲಿ 'ನಾಟಕ ಕಲಾ ಮಿತ್ರ ಮಂಡಳಿ' ತೆರೆದು ಆರಂಭದಲ್ಲಿ ಗರುಡ ಗರ್ವಭಂಗ, ಚೋರ ಬಸವೇಶ್ವರ, ಉತ್ತರ ಭೂಪ, ಕುರುಕ್ಷೇತ್ರ, ಚಿತ್ರಾಂಗದ, ವೀರ ಅಭಿಮನ್ಯು, ಟಿಪ್ಪು ಸುಲ್ತಾನ್ ಮುಂತಾದ ನಾಟಕಗಳಲ್ಲಿ ತಮ್ಮ ಅಗಾಧ ಪ್ರತಿಭೆಯನ್ನು ತೋರಿದ್ದರು.
ವೀರಣ್ಣನವರು ತ್ರಿಪಾಠಿ!!! ಮೂರು ಸಲ ಕೇಳಿದರೆ ಅದು ತಲೆಯಲ್ಲಿ ಅಚ್ಚಳಿಯದೇ ಉಳಿದುಬಿಡುತ್ತಿತ್ತು.ಅಂತೆಯೇ ಚಂದ್ರಯ್ಯನವರು ವೀರಣ್ಣನವರಿಗೆ ಮೀರ್ಸಾಧಿಕ್ ಪಾತ್ರದ ಶುದ್ಧ ಉರ್ದು ಉಚ್ಚಾರಣೆಯ ಕಲಿಕೆಗಾಗಿ ಒಬ್ಬ ಉರ್ದು ಮಾಸ್ತರರ ನೇಮಕ ಮಾಡಿದರು. ಕಾಲುವೆಗುಂಟ ಶತಪಥ ತುಳಿಯುತ್ತ ಉರ್ದು ಪದ ಕಲಿತರು. ಅಭಿನಯ-ನಡಿಗೆ-ಮಾತು ಎಲ್ಲಾ ಹದಿನೈದು ದಿನದಲ್ಲಿ ಕಲಿತರು. ನಾಟಕ ಸಂಪೂರ್ಣ ಯಶಸ್ವಿಯಾಯಿತು. ಮೀರ್ಸಾದಿಕ್ ಪಾತ್ರದ ಅಭಿನಯದಿಂದ ವೀರಣ್ಣನವರಿಗೆ ಭಾರೀ ಹೆಸರು ಬಂತು. ಅಲ್ಲಿಂದ ಬಂದ ಮೇಲೆ ಚಂದ್ರಯ್ಯನವರು ಅಲ್ಲಂ ಕರಿಬಸಪ್ಪ, ವೈ.ಮಹಾಬಲೇಶ್ವರಪ್ಪ, ಪಂಪಣ್ಣ ಹರಗಿನಡೋಣಿ, ಜಾನೆಕುಂಟೆ ಸಣ್ಣಬಸನಗೌಡರ ಸಹಾಯ-ಸಹಕಾರಗಳಿಂದ ಟಿಪ್ಪುಸುಲ್ತಾನ್ ನಾಟಕ ಪ್ರಯೋಗಿಸಿದರು.
ಮುಂದೆ ಚಂದ್ರಯ್ಯನವರ ಕಂಪನಿ ನಷ್ಟಕ್ಕೆ ಸಿಲುಕಿದಾಗ ಚಂದ್ರಯ್ಯನವರಿಗೂ-ವೀರಣ್ಣನವರಿಗೂ ಹೊನ್ನಪ್ಪ ಭಾಗವತರ್-ಎಂಪೈರ್ ಸ್ಟುಡಿಯೊ ಮಾಲೀಕ ಪಿಡ್ಲುಮುನಿಯಪ್ಪನವರು ಪ್ರಾರಂಭಿಸಿದ್ದ ಉಮಾ ಮಹೇಶ್ವರ ನಾಟಕ ಕಂಪನಿ ಆಹ್ವಾನ ಬಂತು. ಇಲ್ಲಿಯೂ ಶ್ರೀ ಕೃಷ್ಣ ಗಾರುಡಿ, ಶ್ರೀ ಕೃಷ್ಣ ಪಾರಿಜಾತ,ರುಕ್ಮಿಣಿ ಸ್ವಯಂವರದಲ್ಲಿ ಮಕರಂದನಾಗಿ, ಅದ್ಭುತ ರಾಮಾಯಣದಲ್ಲಿ ಕುಂಭಕರ್ಣನಾಗಿ ಆಭಿನಯಿಸುವ ಮೂಲಕ ಅಲ್ಲಿಯೂ ತಮ್ಮ ಕಲಾ ವೈಭವವನ್ನು ತೋರ್ಪಡಿಸಿದ್ದರು.
ವೀರಣ್ಣನವರು ಸೂಕ್ಷ್ಮಮತಿಗಳು ಹಾಗೂ ಸಹನಾಶೀಲರು.ಆದರೆ ಆತ್ಮಗೌರವಕ್ಕೆ ಧಕ್ಕೆಯಾಗುವ ಸ್ಥಳದಲ್ಲಿ ಚಣಮಾತ್ರವೂ ನಿಲ್ಲದ ಜಾಯಮಾನ ವೀರಣ್ಣನವರದು. ಅಲ್ಲದೇ ಭಾಗವತರು ಸಹ ಭಾರಿ ಜಬರ್ದಸ್ತಿನ ಮನುಷ್ಯ, ಏನಂದ್ರೂ ಸಹಪಾತ್ರಧಾರಿಗಳು ಎದುರಾಡುವಂತಿಲ್ಲ. ಆದರೆ ಹೀಗೆ ಒಮ್ಮೆ ನಾಟಕದಲ್ಲಿ ಇಲ್ಲದ ಮಾತುಗಳನ್ನಾಡಿ ಗುರು ಶಿಷ್ಯರಿಬ್ಬರೂ ಅವರಿಗೆ ಎದುರು ಮಾತಾನಾಡಿ ಕಂಪನಿ ಬಿಟ್ಟು ಕೊನೆಗೆ ಬಂದರು. ಆದರೆ ಕೆಲ ವರ್ಷಗಳ ಕಾಲ ಹೇಮರೆಡ್ಡಿ ಮಲ್ಲಮ್ಮ, ರಕ್ತರಾತ್ರಿ, ಯೋಗಶಕ್ತಿ, ಕಲಿತ ಕಳ್ಳ, ಗೌಡ್ರ ಗದ್ಲ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಸರಾದರು.ಈಗಿರುವಾಗ ಚಂದ್ರಯ್ಯನವರ ಮರಣ ವೀರಣ್ಣನವರನ್ನು ಅನಾಥರನ್ನಾಗಿಸಿದ್ದು ಮಾತ್ರ ಅಕ್ಷರಶಃ ಸತ್ಯ.
ಅಲ್ಲಿಂದ ಜಾತ್ರೆ-ಉತ್ಸವಗಳಲ್ಲಿ ಕ್ಯಾಂಪ್ ಮಾಡಲಾರಂಭಿಸಿದ ವೀರಣ್ಣನವರು ಹಳ್ಳಿ-ಹಳ್ಳಿಗಳಲ್ಲಿ ನಾಟಕ ಕಲಿಸಲು ಹೋಗುತ್ತಿದ್ದರು. ಅಭಿಮಾನಿ ರಸಿಕರ ಆಹ್ವಾನವನ್ನು ಗೌರವಿಸಿ ಪಾತ್ರ ಮಾಡುತ್ತಿದ್ದರು. ಆಗ ಮತ್ತೆ ಇವರ ಕೈ ಹಿಡಿದಿದ್ದು ಇವರ ಕುಲ ಕಸುಬಾದ ತೊಗಲುಗೊಂಬೆಯಾಟ. ತಮ್ಮ ಮಡದಿ ಮಕ್ಕಳೊಂದಿಗೆ ಸೇರಿ ಗಾಂಧಿ, ಬಸವ,ಬುದ್ಧರಂತಹ ಅನೇಕ ಸುಧಾರಕರ ಜೀವನ ಯಶೋಗಾಥೆಗಳನ್ನು ಜನರ ಬಳಿಗೆ ಕೊಂಡೊಯ್ದುರು. ಇವರ ಅಭಿನಯ ಮತ್ತು ಕಂಚಿನ ಕಂಠಕ್ಕೆ ಮಾರುಹೋಗಿದ್ದ ಕಲಾ ಪ್ರೇಕ್ಷಕರು ಇವರ ತೊಗಲುಗೊಂಬೆಗಳ ಆಟಕ್ಕಕ್ಕೂ ಮಾರುಹೋದರು.ಆ ಮೂಲಕ ರಾಜ್ಯ ಮತ್ತು ರಾಷ್ಟ್ರದಾದ್ಯಂತ ಸಂಚರಿಸಿ ತೋಗಲುಗೊಂಬೆಯಲ್ಲೂ ಗುರುತಿಸಿಕೊಂಡರು.ಅಲ್ಲದೇ ಮುಂದೆ ತಾವೇ ಸ್ವತಃ ಶ್ರೀ ರಾಮಾಂಜಿನೇಯ ತೊಗಲುಗೊಂಬೆ ಟ್ರಸ್ಟ್ ಸ್ಥಾಪಿಸಿ ದೇಶ ವಿದೇಶಗಳಿಗೆ ಗೊಂಬೆಗಳನ್ನು ಹೊತ್ತೊಯ್ದು, ರಾಷ್ಟ್ರ ನಾಯಕರ ಜೀವನಾಧರಿತ ಕಥೆಗಳನ್ನು ಪ್ರದರ್ಶಿಸಿ ನಾಡಿನ ಕಲಾ ಪರಂಪರೆಯನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಿದರು.
ಇವರ ಕಲಾ ನೈಪುಣ್ಯತೆಯನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ನಾಡೋಜ ಪ್ರಶಸ್ತಿ,ನಾಟಕ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಡೆಲ್ಲಿಅಪ್ನಾ ಉತ್ಸವ ಪ್ರಶಸ್ತಿ,ಪಾಟ್ನಾ ಉತ್ಸವ ಪ್ರಶಸ್ತಿ, ಕೇರಳ ಉತ್ಸವ ಪ್ರಶಸ್ತಿ, ಪಾಂಡಿಚೇರಿ ಉತ್ಸವ ಪ್ರಶಸ್ತಿ, ತಿರುಚನಾಪಳ್ಳಿ ಉತ್ಸವ ಪ್ರಶಸ್ತಿ ,ನಾಗ್ಪುರ ರಾಷ್ಟ್ರೀಯ ಕಲಾ ಮಹೋತ್ಸವ ಪ್ರಶಸ್ತಿ ಹೀಗೆ ದೇಶ ವಿದೇಶಗಳ ಪ್ರಮುಖ ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೆ ಸೇರಿ ಗೌರವ ಪಡೆದುಕೊಂಡಿವೆ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
Comments
Post a Comment