ರಂಗ ಮಾಲಿಕೆ - ೫೨ ರಂಗಭೂಮಿಗೆ ರಂಗು ತುಂಬಿದ ರತಿದೇವಿ ' ಬಯಲಾಟ ಸುಜಾತಮ್ಮ'.
ಬಣ್ಣದ ಬದುಕು
ರಂಗ ಮಾಲಿಕೆ - ೫೨
ರಂಗಭೂಮಿಗೆ ರಂಗು ತುಂಬಿದ ರತಿದೇವಿ ' ಬಯಲಾಟ ಸುಜಾತಮ್ಮ'.
'ಹಣ್ಣೆಲೆ ಉದುರುವಾಗ ಚಿಗುರೆಲೆ ನೋಡಿ ಅಪಹಾಸ್ಯ ಮಾಡುವುದು ತರವಲ್ಲ' ಒಂದಾನೊಂದು ಕಾಲಘಟ್ಟದ ರಂಗಭೂಮಿಯಲ್ಲಿ ಮಹಾರಾಣಿಯಾಗಿ ಮೆರೆದ ಕಲಾವಿದರು ಇಂದಿಗೂ ವಾಸಿಸಲು ಕನಿಷ್ಠವಾದ ಸ್ವಂತ ಸೂರಿಲ್ಲದೇ , ಒಂದ್ಹೊತ್ತಿಗೂ ಗತಿಯಿಲ್ಲದೇ ಪರದಾಡುತ್ತಿರುವ ಅದೆಷ್ಟೋ ನಟ - ನಟಿಯರು ನಮ್ಮೊಂದಿಗೆ ಬದುಕುತ್ತಿದ್ದಾರೆ. ಅಂತಹ ಮಹನೀಯರಲ್ಲಿ ಒಬ್ಬರೂ ಬಳ್ಳಾರಿಯ ಬಯಲಾಟದ ಸುಜಾತಮ್ಮ.
ಇವರು ಕ್ರಿ.ಶ.೧೯೫೨ರಲ್ಲಿ ಕರ್ನೂಲ್ ಜಿಲ್ಲೆಯ ಆಲೂರು ಮಂಡಲದ ಕುಂದನಗುರ್ತಿ ಎಂಬ ಹಳ್ಳಿಯ ಭೀಮ ದಾಸಪ್ಪ ಮತ್ತು ಶಿವಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರ ತಂದೆ ಶ್ರೇಷ್ಠ ಭಜನಾ ಹಾಡುಗಳಿಗೆ ಹಾರ್ಮೋನಿಯಂ ಕಲಾವಿದರಾಗಿದ್ದರಲ್ಲದೇ ಉಭಯ ಭಾಷಾ ಹಾಡುಗಾರರಾಗಿದ್ದರು.ಹಾಗಾಗಿ ಕರ್ನಾಟಕಾಂಧ್ರದ ಗಡಿ ಭಾಗದ ಅನೇಕ ಹಳ್ಳಿಗಳಲ್ಲಿ ಭಜನಾ ಹಾಡಲು ಮತ್ತು ಆಸಕ್ತರಿಗೆ ಕಲಿಸಲು ಹೋಗುತ್ತಿದ್ದರು. ಅಂತೆಯೇ ತಾವು ಹೋದಕಡೆಯಲೆಲ್ಲ ತಮ್ಮ ಮುದ್ದಿನ ಮಗಳು ಸುಜಾತಮ್ಮರನ್ನು ತಮ್ಮೊಂದಿಗೆ ಕರೆದೊಯ್ಯುತ್ತೊದ್ದರು.ಹೀಗೆ ಕರೆದೊಯ್ದ ಸಂದರ್ಭದಲ್ಲಿ ನರೆದ ಜನರ ಮುಂದೆ ಮಗಳನ್ನು ತಮ್ಮ ಸಂತೋಷಕ್ಕಾಗಿ ಹಾಡಿಸುತ್ತಿದ್ದರು. ಆ ಮೂಲಕ ಸುಜಾತರಮ್ಮರಿಗೆ ಸಂಗೀತದ ಪ್ರಥಮ ಗುರುವಾಗಿ ಪರಿಣಮಿಸಿದರು.
ಹೀಗೆ ತಂದೆಯೊಂದಿಗೆ ವಿಜಯವಾಡ,ಗುಂತಕಲ್ ಮುಂತಾದ ಕಡೆಯಲೆಲ್ಲಾ ಹಾಡುತ್ತಾ,ಚಿಕ್ಕ ಚಿಕ್ಕ ಸಂಭಾಷಣೆಗಳ ಮೂಲಕ ಜನರನ್ನು ಆಕರ್ಷಿಸುತ್ತಾ ಸಾಗಿದರು.ಈಗಿರುವಾಗ ಕರ್ನಾಟಕದ ದಮ್ಮೂರು ವೆಂಕವಾಧೂತರ ಆರಾಧನ ಸಮಾರಂಭದ ಭಜನಾ ಕಾರ್ಯಕ್ರಮಕ್ಕೆ ತಂದೆಯೊಂದಿಗೆ ಬರುತ್ತಾರೆ.ಆಗ ಅದೇ ಸಮಯಕ್ಕೆ ಖ್ಯಾತ ರಂಗ ಮತ್ತು ಸಿನಿಮಾ ನಟರಾಗಿದ್ದ ಸಿಡಿಗಿನಮೊಳೆ ವೈ.ಎಂ.ಚಂದ್ರಯ್ಯಸ್ವಾಮಿಯವರ ನಿರ್ದೇಶನದಲ್ಲಿ ಅದ್ಭುತ ರಾಮಾಯಣ ಮತ್ತು ಗರುಡ ಗರ್ವಭಂಗ ಎಂಬ ನಾಟಕಗಳು ತಯಾರಿ ನಡೆಯುತ್ತಿತ್ತು. ಅಲ್ಲಿ ಇವರ ಗಾನಲಹರಿ ನೆರೆದ ಜನರನ್ನು ರಂಜಿಸಿದ್ದಲ್ಲದೇ ಚಂದ್ರಯ್ಯಸ್ವಾಮಿಯವರನ್ನು ಆಕರ್ಷಿಸುತ್ತದೆ. ಮರುದಿನ ನಾಟಕದ ತಾಲೀಮು ಮನೆಗೆ ಇವರನ್ನು ಕರೆತರಿಸಿ "ಪುಟ್ಟಿ ನಮ್ಮ ನಾಟಕದಲ್ಲೂ ಹೀಗೆ ಹಾಡ್ತಿಯಾ,ಮಾತಾಡ್ತೀಯಾ " ಎಂದು ಕೇಳಿದರಂತೆ.ಆಗ ಕೇವಲ ೮ ವರ್ಷದ ಸುಜಾತಮ್ಮರು ಅಪ್ಪನ ಮುಖವನೊಮ್ಮೆ ನೋಡಿ ಗ್ರೀನ್ ಸಿಗ್ನಲ್ ತೋರಿದ್ದೆ ತಡ ಆ ಎರಡು ನಾಟಕಕ್ಕೆ "ಓಂ ನಮೋ ನಮೋ ನಟರಾಜ ನಮೋ ಹರಜಟಾಜುಟಾಧರ ಶಂಭೋ"ಎಂಬ ಗುರುಗಳ ನಾಂದಿಗೀತೆಯನ್ನು ಹಾಡುವ ಮೂಲಕ ನೆರೆದ ಜನರ ಮನಸೆಳೆಯುತ್ತಾರೆ. ಮುಂದೆ ಕೆಲವು ಕಾಲಗಳ ನಂತರ ಯರಂಗಳಿಗಿಗೆ ಅಭಿಮಾನಿಗಳ ಆಪೇಕ್ಷೆ ಮೇರೆಗೆ ಬಂದು ಕುರೆಕುಪ್ಪ ಪಿಟೀಲು ಹೊನ್ನೂರಪ್ಪರ ನೇತೃತ್ವದಲ್ಲಿ ೧೨ ವರ್ಷದ ಇವರು 'ಗಿರಿಜಾ ಕಲ್ಯಾಣ' ನಾಟಕದಲ್ಲಿ 'ರತಿ' ಪಾತ್ರವನ್ನು ಮಾಡುವ ಮೂಲಕ ರಂಗಭೂಮಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು.
ನಂತರ ' ಆನೆ ನಡೆದದ್ದೇ ಹಾದಿ ಎಂಬಂತೆ ಸುಜಾತಮ್ಮರು ಅಭಿನಯಿಸಿದ್ರೆ ಮಾತ್ರ ನಾಟಕ ಎಂಬಂತಾಯಿತು.ಅಲ್ಲಿಂದ ಆರಂಭವಾದ ಇವರ ರಂಗ ಪರ್ವದಲ್ಲಿ ರಾಮಾಯಣದಲ್ಲಿ ಸೀತೆಯಾಗಿ,ಮಂಡೋದರಿಯಾಗಿ, ರತಿ ಕಲ್ಯಾಣದಲ್ಲಿ ದ್ರೌಪದಿಯಾಗಿ,ಪಾರ್ಥ ವಿಜಯ,ದುಶ್ಯಾಸನ ವಧೆ, ದಕ್ಷ ಬ್ರಾಹ್ಮಣ ಕಥೆ, ಪ್ರಹ್ಲಾದನ ಚರಿತ್ರೆ, ಮೂರುವರೆ ವಜ್ರ ಮುಂತಾದ ಬಯಲಾಟಗಳಲ್ಲಿ ದ್ರೌಪದಿ, ಉತ್ತರೆ, ಪಾರ್ವತಿ,ಸುಭದ್ರೆ,ಸುಶೀಲೆ,ಕನಕಾಂಗಿ, ಶಚಿಯಾಗಿ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕಲಾ ರಸಿಕರ ಮನೆಮಾತಾಗಿದ್ದಾರೆ.ಹೀಗೆ ಕಾಲಕ್ರಮೇಣ ಅಪ್ಪನಿಗಿಂತ ಮಗಳೇ ಅಧಿಕ ಆದಾಯ ಮಾಡುತ್ತಲೇ ಮನೆಯಲ್ಲಿದ್ದ ತಂಗಿ ತಮ್ಮರ ಪೋಷಣೆಗಾಗಿ ರಂಗಭೂಮಿಯನ್ನು ಸ್ವೀಕರಿಸಲೇ ಬೇಕಾಗಿ ಬಂತು.ಹಾಗಾಗಿ ಸುಮಾರು ತಿಂಗಳುಗಳ ಕಾಲ ನಿರ್ದೇಶಕ ಗುರುಗಳ ಮನೆಯಲ್ಲಿ ನೆಲೆಯೂರಿ ಮಾತುಗಳನ್ನು ಕಂಠಪಾಠ ಮಾಡುತ್ತಿದ್ದರು.ಆಗಿನ ಪ್ರತಿದಿನದ ಶ್ರದ್ಧೆಪೂರಿತ ತರಬೇತಿಯಿಂದ ಕಲಿತ ಜ್ಞಾನವೇ ಇಂದಿನವರೆಗೂ ಅಚ್ಚಳಿಯದೆ ಉಳಿದಿದೆ.
ಹೀಗೆ ಒಂದೆಡೆ ರಂಗಭೂಮಿಯಲ್ಲಿ ಮಿನುಗುವ ತಾರೆಯಾಗಿ ಹೊಳೆಯುವ ಸಮಯದಲ್ಲೇ ತಮ್ಮ ೧೯ನೇ ವಯಸ್ಸಿನಲ್ಲಿ ರಂಗಭೂಮಿಯಿಂದ ಬದುಕಿಗೆ ಸಂಗಾತಿಯಾಗಿ ಹನುಮಂತಪ್ಪ ಎಂಬ ತಬಲ ವಾದಕರು ವರದಾನವಾದರು. ಇವರಿಬ್ಬರ ತುಂಬು ಒಲವಿನಿಂದಲೇ ಅತ್ತ ರಂಗಭೂಮಿ ಮತ್ತಿತ್ತ ಕುಟುಂಬದ ಗಾತ್ರವು ಬೆಳೆಯುತ್ತಾ ಸಾಗಿತು.ಎಲ್ಲವೂ ಸರಾಗವಾಗಿ ಸಾಗಬೇಕಾದರೆ ೧೯೯೨ರಲ್ಲಿ ಗೋಸಬಾಳಕ್ಕೆ ಬಯಲಾಟಕ್ಕೆ ತಮ್ಮ ಪತಿಯೊಂದಿಗೆ ಹೋದಾಗ ನಾಟಕ ಮುಗಿಸಿ ನಾಳೆ ಹೊಳಗುಂದಿಯಲ್ಲಿ ಮತ್ತೊಂದು ನಾಟಕ ಮಾಡುವ ಸಲುವಾಗಿ ಆದಿನ ರಾತ್ರಿ ಕರೂರು ತಿಮ್ಮಪ್ಪರ ಮನೆಯಲ್ಲೇ ವಾಸ್ತವ್ಯ ಹುಡಿದರು.ಆದರೆ ಅದೇ ದಿನ ತಮ್ಮ ಮನೆಯಲ್ಲಿ ಅಗ್ನಿ ಅವಘಡದಿಂದಾಗಿ ತಮ್ಮ ಹಿರಿಯ ಪುತ್ರ ಮತ್ತು ಸೊಸೆ ಬೆಂಕಿಗಾಹುತಿ ಹೊಂದುತ್ತಾರೆ,ಇದಾದ ಕೆಲವೇ ವರ್ಷಗಳಲ್ಲಿ ಮತ್ತಿಬ್ಬರು ಮಕ್ಕಳು ಸಹ ಅಕಸ್ಮಿಕವಾಗಿ ಹತರಾಗಿ ಬಯಲಾಟದಿಂದಲೇ ಸಂಸಾರ ನುಚ್ಚುನೂರಾಗಿದ್ದರಿಂದ ಸುಮಾರು ೧೫ ವರ್ಷಗಳ ಬಯಲಾಟದಿಂದ ದೂರ ಉಳಿದು ಮನಸ್ಸು ಕಲ್ಲಾಗಿಸಿಕೊಂಡರು. ಆದರೆ ಕಾಲಕ್ರಮೇಣ ಪತಿವಿಯೋಗವಾದ ಮೇಲೆ ಸಂಸಾರದ ನೊಗ ತುಂಬಾ ಭಾರವಾಯಿತು.ಅಂತೆಯೇ ಬದುಕಿನ ಪರಿಪೂರ್ಣತೆಗಾಗಿ ಪುನಃ ಬಣ್ಣ ಹಚ್ಚಲೇ ಬೇಕಾಯಿತು.ಆದರೆ ತಮ್ಮ ಅಕ್ಷರಶಸ್ತ ಮಕ್ಕಳಿಂದ ತಮ್ಮದೇ ಹೆಸರಿನ ಟ್ರಸ್ಟ್ ಸ್ಥಾಪಿಸಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದ ರಂಗಾಸಕ್ತ ಯುವಕರಿಗೆ,ವಿದ್ಯಾರ್ಥಿಗಳಿಗೆ ಬಯಲಾಟ ತರಬೇತಿ ನೀಡಿ ಆಧುನಿಕ ಯುಗದಲ್ಲೂ ಕಾಲೇಜು ಮಕ್ಕಳಿಂದ ದುಶ್ಯಾಸನ ಕಥೆ ಬಯಲಾಟ ಮಾಡಿಸಿ ಯಶಸ್ವಿಯಾದರು.ಅಲ್ಲದೇ ಗಡಿ ಅಭಿವೃದ್ಧಿ ಪ್ರಾಧಿಕಾರ, ಹಂಪಿ ಉತ್ಸವ , ವಿಶೇಷ ಘಟಕ ಯೋಜನೆಯಡಿಯಲ್ಲಿ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಾಯದೊಂದಿಗೆ ಅನೇಕ ವೈವಿಧ್ಯಮಯ ರಂಗ ಚಟುವಟಿಕೆಗಳನ್ನು ಮಾಡುವ ಮೂಲಕ ಎರಡು ತಲೆಮಾರಿನ ಜನರಿಗೂ ಚಿರಪರಿಚಿತರಾದರು.
ಇವರ ಈ ರಂಗಗಾಯಕವನ್ನು ಗಮನಿಸಿದ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳನ್ನು ನೀಡಿ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಂಡಿತು. ಇವರ ಈ ರಂಗಸೇವೆ ಇಡೀ ನಾಡಿಗೆ ಪರಿಚಯಿಸುವಲ್ಲಿ ಕಿರಿಯ ಮಗ ಲಕ್ಷ್ಮೀ ನಾರಾಯಣರ ಪ್ರಯತ್ನ ಮಹತ್ವಪೂರ್ಣವಾದದ್ದಾಗಿದೆ. ಇಡೀ ಆರಂಭದಿಂದ ಇಂದಿನ ಬದುಕಿನವರೆಗೂ ರಂಗಭೂಮಿಯೇ ಆಧಾರವಾಗಿದ್ದರಿಂದ ಇಂದಿಗೂ ಕಲಾಮಾತೆಯನ್ನು ತಮ್ಮ ಮನೆಯ ಆರಾಧ್ಯ ದೈವದಂತೆ ಆರಾಧಿಸುತ್ತಾ ಬಂದಿದ್ದಾರೆ.ಆದರೆ ರಂಗಮಾತೆಯನ್ನು ಇಷ್ಟೆಲ್ಲಾ ಆರಾಧಿಸುವ ಈ ಹಿರಿಯ ಕಲಾ ಜೀವಿಗೆ ಇಂದಿನವರೆಗೂ ಇರುವುದಕ್ಕೆ ಸೂರೇ ಇಲ್ಲವೆಂಬ ವಿಷಯ ಮಾತ್ರ ಎಂತವರಿಗಾದರೂ ಮನ ಕೊರುಗುವಂತೆ ಮಾಡುತ್ತದೆ.ಈ ಮೂಲಕವಾದರೂ ಮುಖದ ತುಂಬ ಬಣ್ಣವನ್ನು ಹಚ್ಚುವ ಮುಖೇನ ರಂಗಭೂಮಿಯನ್ನು ರಂಗಾಗಿಸುತ್ತಿರುವ ಜೀವಿಗಳಿಗೆ ಬದುಕಿಗೆ ಗುರುತಿಸಿಕೊಳ್ಳುವ ನೆಲೆ ಸಿಗದಿದ್ದರೂ, ಸೂರಾದರೂ ಸಿಗುವಂತಾಗಲಿ ಎಂಬುದೇ ನನ್ನಿ ಲೇಖನದ ಆಶಯ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ರಂಗ ಸಂಶೋಧನಾರ್ಥಿ.
Comments
Post a Comment