ರಂಗ ಮಾಲಿಕೆ -೪೯ ಗಡಿಭಾಗದ ಅಪ್ಪಟ ದೇಸಿ ರಂಗ ಪ್ರತಿಭೆ ' ಹಚ್ಚೊಳ್ಳಿ ದ್ಯಾವಣ್ಣ'

 

ಬಣ್ಣದ ಬದುಕು

ರಂಗ ಮಾಲಿಕೆ - ೪೯


ಗಡಿಭಾಗದ ಅಪ್ಪಟ ದೇಸಿ ರಂಗ ಪ್ರತಿಭೆ 'ಹಚ್ಚೊಳ್ಳಿಯ ದ್ಯಾವಣ್ಣ'


     ' ಓದು ಒಕ್ಕಾಲು ಬುದ್ಧಿ ಮುಕ್ಕಾಲು ' ಎಂಬ ನಾಣ್ನುಡಿಗೆ ಅನೇಕ ನಿದರ್ಶನಗಳು ರಂಗಭೂಮಿಯಲ್ಲಿ ಕಾಣಬಹುದು.ಅಲ್ಲದೇ ಓದು ಬರಹ ಬರದಿದ್ದರೂ ಕಬ್ಬಿಣದ ಕಡಲೆಯಂತಿರುವ ಹಳಗನ್ನಡ ಸಂಭಾಷಣೆಗಳನ್ನು ಕಲಿಯುವಂತಹ ಚಾಕಚಕ್ಯತೆ ನಮ್ಮ ನಾಡಿನ ಮಣ್ಣಿನಲ್ಲಿ ಅವೃತವಾಗಿದೆ. ನಾ ಕಂಡಂತೆ ಹಚ್ಚೊಳ್ಳಿಯ ದ್ಯಾವಣ್ಣರ ಬಣ್ಣದ ಬದುಕನ್ನು  ನೈಜ ಉದಾಹರಣೆಯಾಗಿ ನೀಡಬಹುದಾಗಿದೆ.

    ಇವರು ಕ್ರಿ.ಶ.೧೯೪೭ ರಲ್ಲಿ ರಂಗಪ್ಪ ಮತ್ತು ಯಂಕಮ್ಮ ದಂಪತಿಗಳ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ಮಾಟೂರು ಗ್ರಾಮದಲ್ಲಿ ಜನಿಸಿದರು.ಇವರು ಮೂಲತಃ ಬಡ ಕುಟುಂಬದಲ್ಲಿ ಜನಿಸಿದ್ದರಿಂದ ಹಾಗೂ ಮನೆಗೆ ಹಿರಿಮಗನಾಗಿದ್ದರಿಂದ ವಿದ್ಯೆ ನೈವೇದ್ಯವಾಯಿತು. ಅಲ್ಲದೇ ಅಪ್ಪ ಹಾಕಿದ ಆಲದಮರಕ್ಕೆ ಮಗನೇ ಆಹಾರವಾದಂತೆ, ಇವರ ತಂದೆ ಉಳ್ಳವರ ಕುರಿಗಳನ್ನು ಕಾಯುತ್ತಾ ಕೂಲಿಗಾರನಾಗಿದ್ದರು. ಅಂತೆಯೇ ಇವರು ಸಹ ತಮ್ಮ ತಂದೆಯ ನಂತರ ೧೩ನೇ ವಯಸ್ಸಿಗೆ ಅದೇ ಮನೆಯ ಕುರಿಗಾಹಿಯಾದರು. ಅಲ್ಲದೆ ಕುರಿ ಕಾಯುತ್ತಾ ಸಹಚರರ ಮೂಲಕ ಹಚ್ಚೊಳ್ಳಿಗೆ ಜೀವನ ನಿರ್ವಹಣೆಗಾಗಿ ಬಂದರು. ಇವರ ಕುಟುಂಬದಲ್ಲಿ ಯಾರಲ್ಲೂ ಕಲೆಯ ಚಹರೆಗಳಿಲ್ಲದಿದ್ದರೂ ಅಪರೂಪಕ್ಕೆ ಇವರಲ್ಲಿ ರಂಗಕಲೆಯ ಅಂಶಗಳು ಗೋಚರಿಸಲಾರಂಭಿಸಿದವು.

   ಕೂರಿ ಕಾಯಲೆಂದು ಹೋದಾಗ ಓರಗೆಯವರೆಲ್ಲರೂ ಸೇರಿ ನಾಟಕ ಮಾಡಲು ನಿರ್ಧಾರ ಮಾಡಿದರು.ಅಂತೆಯೇ ತಮ್ಮಲ್ಲೇ ಹಿರಿಯ ರಂಗಾಸಕ್ತರಾಗಿದ್ದ,ಇವರನ್ನು ಹಚ್ಚೊಳ್ಳಿಗೆ ಕರೆತಂದ ಕೊರಸರ ಹುಲುಗಪ್ಪ ಮೊದಲ ಬಾರಿಗೆ ಡಪ್ಪಿನಕಥೆ ಮಾಡಲು ಮುಂದಾದರು. ಆ ಮೂಲಕ ಕುರುಬರ ಬಸಣ್ಣರ ನಿರ್ದೇಶನದಲ್ಲಿ ಇವರು ತಮ್ಮ ೧೮ ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ' ಬಸವಂತ - ಭಗವಂತ'ದಪ್ಪಿನ ಕತೆಯಲ್ಲಿ ತಾರಾಮತಿ ಎಂಬ ಸ್ತ್ರೀ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಪ್ರಯೋಗದ ತಾಲೀಮಿನಲ್ಲಿಯೇ ಸಂಭಾಷಣೆಯ ಸಮಸ್ಯೆಗಳು ಉಂಟಾದವು. ಅದಕ್ಕಾಗಿ ಶಿಕ್ಷಣದರಿವಿದ್ದ ಇವರ ರಂಗಸ್ನೇಹಿ ಬಸವನಗೌಡ ಇವರಿಗೆ ಪ್ರತಿ ಅಕ್ಷರಕ್ಷರದ ಪರಿಚಯ ಮಾಡಿಕೊಡುತ್ತಾ ಇಡೀ ನಾಟಕದ ಒಟ್ಟು ಚಿತ್ರಣ ಮತ್ತು ಸಂಭಾಷಣೆಯ ಕಂಠಪಾಠವಾಗುತ್ತಿತ್ತು.

  ಇನ್ನು ಆಗಿನ ನಾಟಕದ ತಯಾರಿ ತುಂಬಾ ರೋಚಕ ಎನಿಸಿತ್ತು.ಯಾರೇ ರಂಗಾಸಕ್ತರಾದರೂ ಅವರವರ ಆರ್ಥಿಕ ಪರಿಸ್ಥಿತಿಗನುಗುವಾಗಿ ನಾಟಕ ಪ್ರಯೋಗಕ್ಕೆ ಪಟ್ಟಿ ಕೊಟ್ಟು ತಾಲೀಮಿಗೆ ಮುಂದಾಗಬೇಕು.ಅಲ್ಲದೇ ರಂಗ ನಿರ್ದೇಶಕರ ಊಟ ಮತ್ತು ವಸತಿಗೆ ಪ್ರತಿದಿನ ಒಬ್ಬೊಬ್ಬ ಕಲಾವಿದ ಸ್ವಯಂ ಆಸಕ್ತಿಯಿಂದ ಮನೆಗೆ ಕರೆದೊಯ್ದು ಸತ್ಕರಿಸಬೇಕಿತ್ತು.ಅಂತೆಯೇ ಇವರು ಸಹ ತಮ್ಮ ಬಡತನದ ಆಗು ಹೋಗುಗಳನ್ನು ಲೆಕ್ಕಿಸದೆ ತಾಲೀಮಿಗೆ ಬರಲಾರಂಭಿಸಿದರು. ನಾಟಕದ ನಿಯಮಗಳನ್ನು ಪಾಲಿಸಿದರು‌.ಪ್ರತಿದಿನ ಬೆಳಿಗ್ಗೆ ೪-೫ ಕ್ಕೆ ವಿದ್ಯೆಯುಳ್ಳವರ ಮನೆಗೋಗಿ ಅವರ ಬಳಿ ಅಕ್ಷರಾಭ್ಯಾಸ ಮಾಡಲೆಂದು ಬಂದರೆ .ಇವರ ಕೆಲಸ ಕಾರ್ಯಗಳನ್ನು ಇವರ ಪೋಷಕರು ಮಾಡುತ್ತಾ ರಂಗಕಲೆಗ ಪ್ರೋತ್ಸಾಹ ನೀಡುತ್ತಿದ್ದರು. ಪೋಷಕರು ಯಾವುದೇ ಕಲಾವಿದರಲ್ಲದಿದ್ದರೂ ತುಂಬಾ ಮನದ ಕಲಾ ಪ್ರೋತ್ಸಾಹಕರಾಗಿದ್ದರು. ಒಟ್ಟು ಈ ಒಂದು ನಾಟಕವೇ ೪ ಪ್ರದರ್ಶನ ಮಾಡಲ್ಪಟ್ಟಿತು.

   ನಂತರ ಇವರ ಎರಡನೇ ನಾಟಕ 'ಕಬೀರದಾಸ' ಎಂಬ ಡಪ್ಪಿನಕಥೆಯಲ್ಲಿಯೂ 'ಏಣಾಕ್ಷಿ' ಎಂಬ ಸ್ತ್ರೀ ಪಾತ್ರಕ್ಕೆ ರಂಗಗುರು ಕುರುಬರ ಬಸಣ್ಣರ ನಿರ್ದೇಶನದಲ್ಲಿ ಅದ್ಭುತವಾಗಿ ಅಭಿನಯಿಸಿದರು. ಈ ಡಪ್ಪಿನ ಕಥಾ ನಾಟಕದಲ್ಲಿ ಡಪ್ಪು ಅಂದರೆ ತಮಟೆ (ತಪ್ಪಡಿ)ಯೇ ಪ್ರಮುಖ ವಾದ್ಯವಾಗಿರುತ್ತಿತ್ತು.ಈ ವಾದ್ಯವನ್ನು ನಾಟಕ ನಿರ್ದೇಶಕರೇ ನುಡಿಸುತ್ತಿದ್ದರು. ಇದನ್ನು ಸಹ ೬ ಪ್ರದರ್ಶನ ನೀಡಿದ್ದರು. ಇದಾದ ನಂತರ ರಾವಿಹಾಳ್ ಸಿದ್ದಪ್ಪರ ನೇತೃತ್ವದಲ್ಲಿ 'ಸ್ಟೇಷನ್ ಮಾಸ್ತರ್' ನಾಟಕದಲ್ಲಿ 'ಗಂಗಾಬಾಯಿ'ಯಾಗಿ ೨ ಬಾರಿ ನಟಿಸಿದರು.

     ಸ್ತ್ರೀ ಪಾತ್ರಕ್ಕೆ ಹೇಳಿ ಮಾಡಿಸಿದ ಶರೀರ ಮತ್ತು ಶಾರೀರ ಹೊಂದಿದ್ದ ಇವರು ಬಹುತೇಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನೇ ಅತಿ ಹೆಚ್ಚಾಗಿ ಅಭಿನಯಿಸಿದರು.ಇಲ್ಲಿಯವರೆಗೆ ದಪ್ಪಿನಕಥೆಗೆ ಅಂಟುಬಿದ್ದದ್ದ ಇವರು ಮೊದಲ ಬಾರಿಗೆ  'ಮಯಾಬಜಾರ್ 'ಎಂಬ ಬಯಲಾಟವನ್ನು ಹಚ್ಚೊಳ್ಳಿಯ ದಾಸರ ನರಸಿಂಹಯ್ಯ ನಿರ್ದೇಶನದಲ್ಲಿ ೪ ಬಾರಿ 'ಸುಭದ್ರಾ' ಎಂಬ ಸ್ತ್ರೀ ಪಾತ್ರ ಮಾಡಿದ್ದರು. ನಂತರದ 'ದುಶ್ಯಾಸನ ಕತೆ' ಬಯಲಾಟದಲ್ಲಿಯೂ ಸಹ  'ದ್ರೌಪದಿ' ಸ್ತ್ರೀ ಪಾತ್ರಧಾರಿಯಾಗಿ ೮ ಬಾರಿ ರಾರಾವಿ ತಿಮ್ಮಪ್ಪರ ನಿರ್ದೇಶನದಲ್ಲಿ ಅಮೋಘವಾಗಿ ಪಾತ್ರರಂಜನೆ ನೀಡಿದ್ದರು. ಈ ನಾಟಕದಲ್ಲಿ ಮೊದಲ ಬಾರಿಗೆ ಸ್ತ್ರೀ ಪಾತ್ರಗಳಿಗೆ ಸ್ತ್ರೀಯರನ್ನು ಕರೆತರಲಾಯಿತು. ಆ ಮೂಲಕ  ಇವರ ನಾಟಕಗಳಿಗೆ ಮೊದಲಿಗೆ ಬಂದ ನಟಿಮಣಿಯೆಂದರೆ ಬಳ್ಳಾರಿಯ ಬಯಲಾಟ ಉಷಾರಾಣಿ.

  ಹರೆಯದ ಕೊನೆಯವರೆಗೂ ಸ್ತ್ರೀ ಪಾತ್ರಗಳನ್ನು ಮಾಡಿದ್ದ ದ್ಯಾವಣ್ಣನವರು ಕೊನೆಯದಾಗಿ ರಂಗಸ್ನೇಹಿ ಬಸವನಗೌಡರ  ನೇತೃತ್ವದಲ್ಲಿ ಬೆಳಗಲ್ ವೀರಭದ್ರಯ್ಯಸ್ವಾಮಿಯವರ ನಿರ್ದೇಶನದಲ್ಲಿ ' ಗಿರಿಜಾ ಕಲ್ಯಾಣ' ನಾಟಕದಲ್ಲಿ ಸತತ ೧೨ ಬಾರಿ ಕೃಷ್ಣನಾಗಿ ಅಭಿನಯಿಸುವ ಮೂಲಕ ಪುರುಷ ಪಾತ್ರದಲ್ಲಿಯೂ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. 

    ಪ್ರತಿವರ್ಷ ಬೇಸಿಗೆಯ ಕಾಲದಲ್ಲಿ  ನಾಟಕದ ಸುಗ್ಗಿ ಆರಂಭವಾಗುತ್ತಿತ್ತು.ಆ ಕಾಲದಲ್ಲೇ ಕುರಿಗಳಿಗೆ ಮುಕ್ತವಾಗಿ ಆಹಾರ ಸಿಗುತ್ತಿತ್ತು. ಅಂತೆಯೇ ಅತ್ತ ಕುರಿ ಕಾಯುವ ಸಮಯದಲ್ಲಿ ಸಂಭಾಷಣೆಗಳನ್ನು ಗುನುಗುಟ್ಟುತ್ತಲೇ ಕಲಿಯುತ್ತಿದ್ದರು. ಯಾವ ಸಮಸ್ಯೆಗಳು ಎದುರಾದರೂ  ಹಚ್ಚೊಳ್ಳಿಯಲ್ಲಿ ರಂಗ ಸಂಭ್ರಮ ಮಾತ್ರ ನಿಲ್ಲುತ್ತಿದ್ದಿಲ್ಲ. ರಂಗಭೂಮಿ ಮತ್ತು ಕುಟುಂಬ ಎಂದರೆ ಎಣ್ಣೆ ಸೀಗೆಕಾಯಿಯಂತಿದ್ದರೂ, ಇವರ  ಬಣ್ಣದ ಬದುಕಿನಲ್ಲಿ ಸುಮಾರು ೩೬ ಬಾರಿ ನಾಟಕಗಳಿಗೆ ಬಣ್ಣ ಹಚ್ಚಿದರು, ಪಟ್ಟಿ ಎತ್ತಿ ಪ್ರದರ್ಶನ ಮಾಡಿದರೂ ಇವರ ಕುಟುಂಬದ ಎಲ್ಲರೂ ಮೇಲಾಗಿ ಪತ್ನಿ ಯಮುನಮ್ಮರಿಂದ ಸಂಪೂರ್ಣ ಪ್ರೋತ್ಸಾಹ ದೊರೆತಿದ್ದು ಮಾತ್ರ ವಿಸ್ಮಯವೇ ಸರಿ.

  ಆಗಿನ ಕಾಲದಲ್ಲಿ ರಂಗ ಪರಿಕರಗಳು, ವಸ್ತ್ರ ಪರಿಕರಗಳು,ವೇದಿಕೆ ಮತ್ತಿತರೆ ರಂಗ ಸಂಬಂಧಿ ವಿಚಾರಗಳು ಕೇವಲ  ೨೫ ರೂಪಾಯಿಗಳಿಗೆ ದಕ್ಕುತ್ತಿದ್ದವು.ಆಗಿನ ಕಾಲಕ್ಕೆ ರಂಗ ಪರಿಕರಗಳನ್ನು ಒದಗಿಸುತ್ತಿದ ಪ್ರಮುಖರೆಂದರೆ ಅರಳಿಗನೂರು ವೀರಭದ್ರಗೌಡರು. 

  ಇಂತಹ ರಂಗ ಮಹನೀಯರು ಕರ್ನಾಟಕಾಂಧ್ರದ ಗಡಿ ಭಾಗದಲ್ಲಿದ್ದು ಕನ್ನಡ ರಂಗ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಂತಹ ಅಪ್ಪಟ ದೇಸಿ ರಂಗ ಪ್ರತಿಭೆಯನ್ನು ಗುರುತಿಸಿ ಇವರನ್ನು ಬಳ್ಳಾರಿಯ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ 'ಜಿಲ್ಲಾ ರಾಘವ ಪ್ರಶಸ್ತಿ 'ಮಾತ್ರ ದೊರೆತಿರುವುದು ಮತ್ತು ಇಲ್ಲಿಯವರೆಗೆ ಇವರಿಗೆ ಕಲಾ ಮಾಸಾಶಾನ ದೊರೆಯದಿರುವುದೇ ಇವರ ಬಣ್ಣದ ಬದುಕಲ್ಲಿ ಕಾಣ ಸಿಗುವ ಖೇಧಕರ ವಿಚಾರಗಳಾಗಿವೆ.

   

ಆರ್.ಪಿ‌.ಮಂಜುನಾಥ್. ಬಿ.ಜಿ.ದಿನ್ನೆ

ರಂಗ ಸಂಶೋಧನಾರ್ಥಿ.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.