ರಂಗ ಮಾಲಿಕೆ -೫೧ ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿಗಳು'.
ರಂಗ ಮಾಲಿಕೆ -೫೧
ರಕ್ತರಾತ್ರಿಯ ಅಂಬಾಸಿಡರ್ 'ರಾರಾವಿ ಚಿದಾನಂದ ಗವಾಯಿ'.
ರಂಗಭೂಮಿ ಎನ್ನುವುದು ಕೇವಲ ಒಂದೇ ರಂಗಿನ ಲೋಕವಲ್ಲ, ಬದಲಾಗಿ ಇದೊಂದು ರಂಗ ರಂಗಿನ ಹೂಗಳ ಉದ್ಯಾನವನ. ಹಾಗಾಗಿ ಇಲ್ಲಿನ ಬಣ್ಣ ಬಣ್ಣದ ಹಕ್ಕಿಗಳು ಚಿಲಿಪಿಲಿ ನಿನಾದದ ಮೂಲಕ ಸಹಸ್ರಾರು ಕಲಾ ರಸಿಕರ ಮನಗೆದ್ದ ಸಹಸ್ರಾರು ಕಥಾನಕಗಳನ್ನು ನಾವು ಕಾಣಬಹುದು. ಅಂತಹ ಮನರಂಜನಾ ಕಥಾನಕಗಳ ನಾಯಕ-ನಾಯಕಿಯರಲ್ಲಿ ಒಬ್ಬರಾದ ರಂಗ ಸಾಮಂತರೆಂದರೆ ರಾರಾವಿಯ ಚಿದಾನಂದ ಗವಾಯಿಗಳು.
ಇವರು ಕ್ರಿ.ಶ.೧೯೭೬ರಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿಯ ಗೋವಿಂದಪ್ಪ ಮತ್ತು ಅಯ್ಯಮ್ಮರ ಮಗನಾಗಿ ಜನಿಸಿದರು. ಬಾಲ್ಯದಲ್ಲಿ ತಮ್ಮ ತಾತ ಚಿದಾನಂದಪ್ಪರು ರಂಗ ಕಲಾವಿದರಾಗಿದ್ದರಿಂದ ಕಲೆಯೆಂಬುದು ಇವರಲ್ಲಿ ರಕ್ತಗತವಾಗಿ ಬಂದಿತ್ತು. ಅದಕ್ಕೆ ಇಂಬು ನೀಡುವಂತೆ ರಾರಾವಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೫ ನೇ ತರಗತಿ ಓದುವಾಗ ಶಿಕ್ಷಕರಾದ ಮಾಯಪ್ಪ ಮತ್ತು ಜಂಬಣ್ಣರಿಂದ ಭಾರತವೀರ ಎಂಬ ನಾಟಕದಲ್ಲಿ ಪುರು ಪಾತ್ರಕ್ಕೆ ಬಣ್ಣ ಹಚ್ಚಿದರು.ಅಲ್ಲಿ ತೋರಿದ ರಂಗಾಸಕ್ತಿಯಿಂದ ಮುಂದೆ ಜಂಬ ಕೊಚ್ಚಿದ ಉತ್ತರ ಕುಮಾರ, ಏಕಲವ್ಯ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.
ಏಳನೇ ತರಗತಿಯಲ್ಲಿ ಓದುವಾಗ ಊರಲ್ಲಿ ಕ್ಯಾಂಪ್ ಮಾಡಿದ್ದ ನಾಟಕ ಕಂಪನಿ ವಿನಾಃಕರಣ ಆ ದಿನ ರಜೆ ಮಾಡಿದ್ದರು. ಆಗ ಅದೇ ಸಮಯವನ್ನು ಬಳಸಿಕೊಂಡ ಶಾಲಾ ಮುಖ್ಯೋಪಾಧ್ಯಾಯ ವೀರಭದ್ರಯ್ಯ ಸ್ವಾಮಿ ಊರಿನ ರಂಗ ಸಾಹಿತಿಯಾಗಿದ್ದ ಶಾಂತಮೂರ್ತಿ ಶಾಲೆಯ ವಾರ್ಷಿಕೋತ್ಸವಕ್ಕೆಂದು ರಚಿಸಿ /ನಿರ್ದೇಶಿಸಿದ್ದ ಹರಿಜನ ಬಾಲೆ ಅರ್ಥಾತ್ ಸಮಾಜ ಕಲ್ಯಾಣ ಎಂಬ ನಾಟಕವನ್ನು ಪ್ರದರ್ಶಿಸಿದರು.ಅದೇ ನಾಟಕದ ಖಳನಾಯಕನ ಪಾತ್ರದ ಮೂಲಕ ಇಡೀ ಊರ ಜನರ ಮನಸೂರೆಗೊಂಡು. ಅದೇ ಹುಮ್ಮಸ್ಸಿನಲ್ಲಿ ಮತ್ತದೇ ನಾಟಕವನ್ನು ಸಿರುಗುಪ್ಪದ ನೇತಾಜಿ ವ್ಯಾಯಾಮ ಶಾಲೆಯಲ್ಲಿ ಪ್ರದರ್ಶಿಸಿ ಎಲ್ಲರ ಮಚ್ಚುಗೆಯನ್ನು ಪಡೆಯುವುದಲ್ಲದೇ ಶಾಲೆಯಲ್ಲಿ ಮಹಾಭಾರತವನ್ನು ಸಿನಿಮೀಯಾ ರೀತಿಯಲ್ಲಿ ಬೋಧಿಸುತ್ತಿದ್ದ ವೀರಭದ್ರಯ್ಯರ ವಿಶೇಷ ಪ್ರೀತಿಗೆ ಪಾತ್ರರಾದರು.
ಕೌಟುಂಬಿಕವಾಗಿ ತಂದೆ ಟೈಲರ್ ಆಗಿದ್ದರೂ, ಜೈಮಿನಿ ಭಾರತ , ಸೋಮೇಶ್ವರ ಶತಕವನ್ನು ಓದಬಲ್ಲ ನಿಸ್ಸೀಮರಾಗಿದ್ದರು. ಅಪ್ಪನ ಮನೆಪಾಠದೊಂದಿಗೆ ಅದ್ಭುತವಾಗಿ ಹಾಡಬಲ್ಲ ,ನಟಿಸ ಬಲ್ಲ,ಓದಬಲ್ಲವರಾಗಿದ್ದ ಚಿದಾನಂದರಿಗೆ ಸಿರುಗುಪ್ಪದಲ್ಲಿ ಹೈಸ್ಕೂಲ್ ಸೇರಲೋದಾಗ ಅಚಾನಕಕ್ಕಾಗಿ ಸಂಗೀತ ಗುರು ದೊಡ್ಡ ಬಸವಾರ್ಯ ಗವಾಯಿಗಳ ಭೇಟಿಯಾಗುತ್ತದೆ.ಅಲ್ಲದೆ ತಂದೆಯ ಕೋರಿಕೆಯೊಂದಿಗೆ ಗುರುಗಳ ವರದೊಂದಿಗೆ ವಿದ್ಯಾಭ್ಯಾಸದ ಜೊತೆಗೆ ಪ್ರತಿನಿತ್ಯ ಬೆಳಿಗ್ಗೆ ೬-೮ ಸಂಗೀತ ಹಾಗೂ ಸಂಜೆ ೬-೮ರವರೆಗೆ ಸತತ ಮೂರು ವರ್ಷಗಳ ಕಾಲ ಸಂಗೀತ ಜ್ಞಾನ ಪಡೆಯುತ್ತಾರೆ. ರಜಾ ಕಾಲದಲ್ಲಿ ಮನೆಯಲ್ಲಿ ಪ್ರತಿನಿತ್ಯ ಸಂಗೀತಾಭ್ಯಾಸ ಮಾಡುತ್ತಿದ್ದ ಚಿದಾನಂದರು ಊರಿನ ಯಲ್ಲಮ್ಮ ಜಾತ್ರಾ ಪ್ರಯುಕ್ತ ನಾಟಕ ಕಲಿಸಲು ಬಂದಿದ್ದ ಮಂಡಲಗೇರಿ ದೇವೇಂದ್ರಪ್ಪರ ಮನಸೆಳೆದರು.ಅಲ್ಲದೆ ಅವರ ಒತ್ತಾಸೆಯಿಂದ ರಂಗ ಸಂಗೀತದ ಜ್ಞಾನ ಪಡೆದು 'ಗರತಿ ಹೆಣ್ಣಿಗೆ ಗರ್ವದ ಗಂಡ ' ಎಂಬ ಮೊದಲ ನಾಟಕಕ್ಕೆ ಹಾರ್ಮೋನಿಯಂ ಬಾರಿಸುತ್ತ ಹಾಡುವ ಮೂಲಕ ಗುರುಗಳ ಮನಗೆದ್ದರು. ಈ ಯಶಸ್ಸಿನ ಮೂಲಕ ತಮ್ಮ ೨೧ನೇ ವಯಸ್ಸಿಗೆ ಬಾಗೇವಾಡಿಯಲ್ಲಿ ವಯಸ್ಕರಿಗೆ 'ಮಾಂಗಲ್ಯ ಹೊತ್ತ ವಿಧವೆ' ಎಂಬ ನಾಟಕವನ್ನು ಸ್ವತಂತ್ರವಾಗಿ ನಿರ್ದೇಶನ ಮಾಡಿದರು.ಪುನಃ ಇದರ ಬೆನ್ನಲ್ಲೇ ದೊಡ್ಡ ಬಸವಾರ್ಯರ ಸಾಂಗತ್ಯದಿಂದ ಮೊದಲ ಬಾರಿಗೆ ಬೀರಹಳ್ಳಿಯಲ್ಲಿ ದೇವಿ ಪುರಾಣ ಪ್ರವಚನ ಮಾಡುವುದರ ಮೂಲಕ ಈ ಕಲೆಯನ್ನು ಸಹ ಕರಗತ ಮಾಡಿಕೊಂಡರು. ಇದಾದ ನಂತರ ಗುರುವಿಚ್ಛೆಯಂತೆ ಸಿಂಧನೂರಿನ ಅಲಬನೂರಿನಲ್ಲಿ 'ನರ ನಾಗರ' ಎಂಬ ಸಾಮಾಜಿಕ ನಾಟಕವನ್ನು ನಿರ್ದೇಶನ ಮಾಡಿದ್ದಲ್ಲದೇ ಬಂದ ೧೦೦೦ ರೂಪಾಯಿ ಸಂಭಾವನೆಯಿಂದ ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಪದವಿಗಾಗಿ ಸೇರಿ ಸಂಗೀತದಲ್ಲಿ ವಿದ್ವತ್ ಹಾಗೂ ಬಿ.ಮ್ಯೂಸಿಕ್ ಪದವಿಯನ್ನು ಪಡೆದರು. ಇದರ ಜೊತೆಗೆ ಅಲ್ಲಿನ ಶ್ರೀ ವೀರೇಶ್ವರ ಪುಣ್ಯಾಶ್ರಮ ನಾಟಕ ಮಂಡಳಿಯಲ್ಲಿ ಪುಟ್ಟರಾಜ ಗವಾಯಿಗಳ ಅಜ್ಞೆಯಂತೆ 'ಸತಿ ಸುಕನ್ಯೆ, ರತ್ನಹಾರ, ಶ್ರೀಕೃಷ್ಣ ಗಾರುಡಿ' ಎಂಬ ನಾಟಕಗಳನ್ನು ನಿರ್ದೇಶನ ಮಾಡಿ ಅದ್ಭುತ ಯಶಸ್ಸನೊಂದಿಗೆ ಊರಿಗೆ ಮರಳಿ ೨೬ ನೇ ವಯಸ್ಸಿಗೆ ಸಿರುಗುಪ್ಪದ ಶಾರದಾ ಎಂಬುವವರೊಂದಿಗೆ ವಿವಾಹವಾದರು.
ಈಗಿರುವಾಗ ಸಂಗೀತ ಮತ್ತು ನಟನೆಯ ಅರಿವಿದ್ದಿದ್ದರಿಂದ ಶಾಂತಮೂರ್ತಿಯವರ ಆಶಯದಂತೆ ಅಗಸನೂರು ವೀರಭದ್ರಗೌಡರು ನಿರ್ದೇಶನದಲ್ಲಿ ಮತ್ತೆ 'ರಕ್ತರಾತ್ರಿ' ನಾಟಕದ ಕೃಷ್ಣನ ಪಾತ್ರಕ್ಕೆ ಬಣ್ಣ ಹಚ್ಚಿ ನರೆದಿದ್ದ ಸುತ್ತಮುತ್ತಲಿನ ಸಾವಿರಾರು ಪ್ರೇಕ್ಷಕರಿಂದ ಕೇಕೆ ಚಪ್ಪಾಳೆಯ ಪ್ರಶಂಸೆ ಗಿಟ್ಟಿಸಿಕೊಂಡರು.ಇಲ್ಲಿಂದ ಪ್ರಾರಂಭವಾದ ರಂಗ ಜೀವನದ ಹೊಸ ಪರ್ವ ತುಂಬಾ ಅಮೋಘವಾದದ್ದು. ನಂತರ ಗಂಗಾವತಿ ವಂದನಾ , ಸುಭದ್ರಮ್ಮ ಮನ್ಸೂರ್, ಹಂದ್ಯಾಳ ಪುರುಷೋತ್ತಮ, ಶಿವಶಂಕರ್ ನಾಯ್ಡು, ಗೆಣಕಿಹಾಳ್ ತಿಮ್ಮನಗೌಡ,ಗಾದಿಗನೂರು ಹಾಲಪ್ಪ ಮುಂತಾದವರ ಮೂಲಕ ರಕ್ತರಾತ್ರಿಯಲ್ಲಿ ಕೃಷ್ಣ,ಶಕುನಿ, ಹೇಮರೆಡ್ಡಿ ಮಲ್ಲಮ್ಮದಲ್ಲಿ ಶಿವ, ಹೇಮಣ್ಣ , ನಾರದಾ ವಿನೋದದಲ್ಲಿ ನಾರದ, ಪುರಂದರ ದಾಸರು, ಭಕ್ತ ಕನಕದಾಸರು, ವಿಜಯದಾಸರು,ಜಗಜ್ಯೋತಿ ಬಸವೇಶ್ವರ, ಹನುಮಂತಾವಧೂತರು, ಕುರುಕ್ಷೇತ್ರ, ಶ್ರೀ ಪುಟ್ಟರಾಜ ಗವಾಯಿ, ಕೊಪ್ಪಳದ ಶಿಶುನಾಳ ಷರೀಫ ಘಡವಡಿಕೆ ಲಕ್ಷ್ಮಪ್ಪಯ್ಯ ಮುಂತಾದ ನಾಟಕಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಮಿಂಚುತ್ತಾ ಬೆಂಗಳೂರು, ಉಡುಪಿ,ಗುಲ್ಬರ್ಗ, ಯಾದಗಿರಿ,ಕಣೇಕಲ್, ಕೊಪ್ಪಳ ,ಮೈಸೂರು ಇನ್ನು ಅನೇಕ ಕಡೆಗಳಲ್ಲಿ ಸಂಚರಿಸಿ ಕಲಾ ರಸಿಕರಿಗೆ ರಂಗರಸವನ್ನು ಉಣಬಡಿಸಿದರು. ಹೀಗೆ ಸತತ ೮ ವರ್ಷಗಳ ಕಾಲ ರಂಗಸೇವೆ ಮಾಡಿದ ಚಿದಾನಂದರಿಗೆ ೨೦೧೦ರಲ್ಲಿ ರಾಯಚೂರಿನ ಗಾಣದಾಳ ಪಂಚಮುಖಿ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾಗಿ ಆಯ್ಕೆಯಾದರು. ಈ ಮೂಲಕ ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಬಿತ್ತುತ್ತ ಸಾಗಿದ್ದಾರೆ.ಅಲ್ಲದೇ ರಜಾವಧಿ ಸಿಕ್ಕಾಗಲೆಲ್ಲಾ ರಂಗ ಚಟುವಟಿಕೆಗಳಲ್ಲಿ ಉತ್ಸುಕರಾಗಿರುವ ಚಿದಾನಂದರು ಸುಮಾರು ೫೬೫ ರಕ್ತರಾತ್ರಿ, ೨೦೦ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮತ್ತಿತರೆ ನಾಟಕ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸುವ ಮೂಲಕ ಸುಮಾರು ೮೦೦ ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದಾರೆ. ಇಂತಹ ಮಹನೀಯರ ಪ್ರತಿಭೆಗೆ ಮನ್ನಣೆಯಂಬಂತೆ ಹಗರಿಬೊಮ್ಮನಹಳ್ಳಿ ಕಲಾಭಿಮಾನಿಗಳಿಂದ 'ನಾಟಕ ಕಲಾ ರತ್ನ', ಕಂಪ್ಲಿ ಸಂಗೀತಾಸಕ್ತರಿಂದ 'ಸಂಗೀತ ನಾಟಕ ಭೂಷಣ', ಗುಳೇದಗುಡ್ಡದ ಕಲಾ ಪ್ರೇಮಿಗಳಿಂದ 'ಕಲಿಯುಗದ ಕೃಷ್ಣ',ಬಳ್ಳಾರಿಯ ಡಿ.ಆರ್.ಕೆ ರಂಗಸಿರಿಯಿಂದ 'ರಂಗಸಿರಿ ಪ್ರಶಸ್ತಿ', ಸಿರುಗುಪ್ಪದ ಜನಜಾಗೃತಿ ವೇದಿಕೆಯಿಂದ 'ಅಭಿನಯ ಶ್ರೀ ಪ್ರಶಸ್ತಿ',ಕುಡುದರಹಾಳ್ ತಾಯಮ್ಮ ದೇವಿ ಪುಣ್ಯಾಶ್ರಮದಿಂದ 'ಶ್ರೀ ಯಲಿವಾಳ ಸಿದ್ದಯ್ಯಸ್ವಾಮಿ ರಂಗ ಪ್ರಶಸ್ತಿ', ರಾಯಚೂರಿನ ರೋಟರಿ ಕ್ಲಬನಿಂದ 'ಉತ್ತಮ ಶಿಕ್ಷಕ ಮತ್ತು ಆದರ್ಶ ಕಲಾಜ್ಯೋತಿ ಪ್ರಶಸ್ತಿ' ಹೀಗೆ ಇನ್ನು ಅನೇಕ ಪ್ರಶಸ್ತಿ- ಪುರಸ್ಕಾರ ಪಡೆದಿದ್ದರು, ಯಾವ ಆಹಂ ಇಲ್ಲದೆ ಎಲ್ಲರನ್ನೂ ಗೌರವಾದರದಿಂದ ಕಾಣುವ ಇಂತಹ ಸರಳ ಸಜ್ಜನಿಕೆಯ ಚಿದಾನಂದ ಗವಾಯಿಗಳು ಇಂದಿನ ಉದಯೋನ್ಮುಖ ಕಲಾವಿದರಿಗೆ ಮಾದರಿಯಾಗಿದ್ದಾರೆ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ರಂಗ ಸಂಶೋಧನಾರ್ಥಿ.
Very nice sir... Congratulations
ReplyDelete