ರಂಗ ಮಾಲಿಕೆ -೫೦ ಗಡಿನಾಡಿನ ರಂಗ ದುರ್ದೈವಿ 'ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿ'.
ರಂಗ ಮಾಲಿಕೆ -೫೦
ಗಡಿನಾಡಿನ ರಂಗ ದುರ್ದೈವಿ 'ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿ'.
'ಕೆಲವರಿಗೆ ಮುಟ್ಟಿದ್ದೆಲ್ಲ ಹೊನ್ನು, ಇನ್ನು ಕೆಲವರಿಗೆ ಮುಟ್ಟಿದ್ದೆಲ್ಲ ಮಣ್ಣು' ಇವೆರಡರಲ್ಲಿ ಯಾವುದೇ ಒಂದು ವರವಾದರೂ ವರದಾನ ಪಡೆದವರ ಪಾಲಿಗೆ ಅದು ಮುಳ್ಳೇ ಸರಿ. ಅಂತಹ ನಿದರ್ಶನಗಳಲ್ಲಿ ಒಂದು ಎಂಬಂತೆ ಹಿರಿಯ ರಂಗ ಕಲಾವಿದ ಕೊತ್ತಲಚಿಂತ ವಿರೂಪಾಕ್ಷಿ ರೆಡ್ಡಿಯವರ ಬಣ್ಣದ ಬದುಕಿನುದ್ದಕ್ಕೂ ಹಾಸುಹೊಕ್ಕಾಗಿದ್ದ ಸಂದರ್ಭಗಳು ಅನೇಕವು.
ಇವರು ಕ್ರಿ.ಶ೧೯೫೪ ರಲ್ಲಿ ಸಿರುಗುಪ್ಪ ತಾಲ್ಲೂಕಿನ ಅಗಸಲದಿನ್ನೆಯ ಶೇಷಾರೆಡ್ಡಿ ಮತ್ತು ಮಹಾದೇವಮ್ಮ ಎಂಬುವವರ ಮಗನಾಗಿ ಜನಿಸಿದರು. ಇವರು ಉಳ್ಳವರ ಕುಟುಂಬದಲ್ಲಿ ಜನಿಸಿದ್ದರಿಂದ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆಯಾಗದೇ SSLCವರೆಗೆ ಓದಿದರು. ಆದರೆ ಎಡಬಿಡದೆ ಕಾಡುತ್ತಿದ್ದ ಇವರ ಅಂತರಾಳದ ಅಭಿನಯಾಸಕ್ತಿ ಇವರ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸುವಂತೆ ಪ್ರಚೋದಿಸಿತು.ಆದರೆ ರಂಗಭೂಮಿಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆಯೂ ಮಾಡಿತು ಎಂದರೆ ತಪ್ಪಾಗಲಾರದು.
ಸಿನಿರಂಗದ ದೃವತಾರೆ ಡಾ.ರಾಜಕುಮಾರರ ಅಭಿನಯದ ಮಾಂತ್ರಿಕತೆಯ ಮೋಡಗ ಮರಳಾಗಿ ಇವರು ಸಹ ಅಣ್ಣಾವ್ರ ತರ ಬೆಳೆಯಬೇಕೆಂದು ತಮ್ಮ ೨೦ನೇ ವಯಸ್ಸಿನಲ್ಲಿ ಮನೆಯಲ್ಲಿದ್ದ ಹಣ,ಒಡವೆಯನ್ನು ಕದ್ದು ಸಿನಿಮಾ ನಟನಾಗಬೇಕೆಂಬ ಹೆಬ್ಬಯಕೆಯಿಂದ ಬೆಂಗಳೂರಿಗೆ ಪಲಾಯನ ಮಾಡಿದರು. ಅಲ್ಲದೇ ಕೆಲವು ಧಾರಾವಾಹಿ /ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದರು.ಅಲ್ಲದೇ ಸುದೀರ್ ,ಚರಣರಾಜರ ಆತ್ಮೀಯ ಸಖ್ಯ ಬೆಳೆಯಿತು. ಅಲ್ಲದೇ ಇವರಿಗೆ ಸೊಸೆ ತಂದ ಸೌಭಾಗ್ಯ,ವೀರ ಸಿಂಧೂರ ಲಕ್ಷ್ಮಣ ಸಿನಿಮಾಗಳಿಗೆ ಕರೆ ಬಂದರೂ ಅನ್ಯ ಕಾರಣ ತಿರಸ್ಕರಿಸಿದರು. ಕೈಯಲ್ಲಿದ್ದ ಹಣ, ಒಡವೆಯನ್ನು ಖಾಲಿಮಾಡಿ ಕೈಕಟ್ಟಿಕೊಂಡು ಊಟಕ್ಕಾಗಿ ಪತದಾಡುವ ವೇಳೆಗೆ ಇವರನ್ನು ಹುಡುಕುತ್ತಾ ಬಂದ ಇವರ ತಂದೆ ಮನವೊಲಿಸಿ ಮರಳಿ ಮನೆಗೆ ಕರೆತಂದರು.ಆದರೆ ನಟನೆಯೆಂಬ ಪೆಡಂಭೂತ ಇವರನ್ನು ಮತ್ತೆ ನಟನೆಯ ಭರದಲ್ಲಿ ರಂಗಭೂಮಿಯತ್ತ ಸೆಳೆಯಿತು.ಅಂತೆಯೇ ಸಿರುಗುಪ್ಪ ನಗರಕ್ಕೆ ಬಂದ ಕೆ.ಬಿ.ಆರ್ ಡ್ರಾಮಾ ಕಂಪನಿಯು ಸ್ಥಳೀಯ ಖ್ಯಾತ ರಂಗಕಲಾವಿದ ಡಾ.ಶಿವಕುಮಾರ್ ತಾತರ ಸ್ನೇಹ ಬೆಸೆದು ತಾತರ ರಚನೆ ಮತ್ತು ನಟನೆಯ ನಾಟಕೊಂದರಲ್ಲಿ ರೆಡ್ಡಿಯವರು ಸ್ವತಃ ತಮ್ಮನಾಗಿ ಅದ್ಬುತವಾಗಿ ಅಭಿನಯಿಸಿದ್ದಲ್ಲದೇ ರಂಗಾಭಿನಯಕ್ಕೆ ಪ್ರವೇಶ ಪಡೆದರು.ನಂತರ ಇವರ ರಂಗಗುರು ಡಾ.ಶಿವಕುಮಾರ್ ತಾತರ ಒಡನಾಟದಿಂದಾಗಿ ಮದಿರೆ ಮರಿಸ್ವಾಮಿ, ಸಿರಿಗೇರಿ ನಾಗನಗೌಡರು,ರಮೇಶಗೌಡ ಪಾಟೀಲರು, ವೀಣಾ ಆದೋನಿಯವರ ಪರಿಚಯ ಬೆಳೆಯಲು ಸಹಕಾರಿಯಾಯಿತು.
ಅಲ್ಲದೇ ಚಿಂದೋಡಿ ವೀರಪ್ಪನವರ ಡ್ರಾಮಾ ಕಂಪನಿಯಿಂದ ಟಿಪ್ಪು ಸುಲ್ತಾನ್ ನಾಟಕದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಲು ಬಂದಿದ್ದ ಕರೆಯನ್ನು ಶಿವಕುಮಾರ್ ತಾತರು ಸ್ವತಃ ತಿರಸ್ಕರಿಸಿ, ಶಿಷ್ಯ ವಿರೂಪಾಕ್ಷ ರೆಡ್ಡಿಯವರ ಅಭಿನಯಕ್ಕೆ ಅವಕಾಶ ಮಾಡಿಕೊಡುವಂತೆ ಶಿಫಾರಸ್ಸು ಮಾಡಿದರು.ಅಂತೆಯೇ ಕಂಪನಿಯ ಟಿಪ್ಪು ಸುಲ್ತಾನ್ ನಾಟಕದಲ್ಲಿ ಸುಮಾರಾಗಿ ಅಭಿನಯಿಸಿ ಗುರುಗಳಿಂದ ಛೀಮಾರಿಗೊಳಗಾದರು. ಆದರೆ ಅಲ್ಲಿಗೆ ಬೇಸರಗೊಳ್ಳದ ರೆಡ್ಡಿಯವರು ಮುಂದಿನ ನಾಟಕದಲ್ಲಿ ತಮ್ಮ ಅಭಿನಯದ ಪಕ್ವತೆಗೆ ನೀವೆ ಬೆರಗಾಗುವಿರಿ ಎಂಬ ಸವಾಲಿನ ನುಡಿಗಳನ್ನಾಡಿ ತಮ್ಮೂರತ್ತ ಸಾಗಿದ್ದರು.ಅಂತೆಯೇ ಬದಿನೆಹಾಳಿನಲ್ಲಿ ನಡೆದ ನಾಟಕವೊಂದರಲ್ಲಿ ವಿಲನ್ ಆಗಿ ಅದ್ಭುತ ಪ್ರದರ್ಶನ ತೋರಿ ಗುರುಗಳಿಂದಲೇ ಸನ್ಮಾನ ಬಹುಮಾನ ಪಡೆದರು ಗುರುವಿಗೆ ತಕ್ಕ ಶಿಷ್ಯರು ಎನಿಸಿದರು.
ಅಲ್ಲದೇ ಕಂಪನಿಯಲ್ಲಿದ್ದಾಗ ಸಿನಿತಾರೆ ಶೃತಿಯವರ ತಂದೆ ತಾಯಿಯೊಡನೆ, ಶ್ರೀನಾಥ್, ಜೈ ಜಗದೀಶ್, ಜಿ.ವಿ.ಕೃಷ್, ಜಿ.ವಿ.ಅಯ್ಯರರೊಂದಿಗೆ ಅಭಿನಯಿಸಿದ್ದಾರೆ. ಹಾಗೂ ಶೃತಿಯವರನ್ನು ಸಹ ಎತ್ತಿ ಮುದ್ದಾಡಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಸ್ವತಃ ಶ್ರೀನಾಥ್ ರೇ ಮಾನಸ ಸರೋವರ ಚಿತ್ರೀಕರಣಕ್ಕೆಂದು ಕೆಂಚನಗುಡ್ಡಕ್ಕೆ ಬಂದಾಗ ಪತ್ರಿಕಾ ಮಾಧ್ಯಮದವರಿಗೆ "ವಿರೂಪಾಕ್ಷಿ ರೆಡ್ಡಿ ನನ್ನ ಆತ್ಮೀಯ ಸ್ನೇಹಿತ " ಎಂದು ಪರಿಚಯಿಸಿದ್ದಿದೆ.ಹಾಗೆಯೇ ಕೊನೆಗಾಲದಲ್ಲಿ ಯಾವ ಸ್ನೇಹಿತರು ಕೈಹಿಡಿಲಿಲ್ಲ ಎಂದು ಬೇಸರಿಸಿದ ಉದಾಹರಣೆಗಳೂ ಇವೆ.
ಮುಂದೆ ಮದಿರೆ ಮರಿಸ್ವಾಮಿಯವರ ಕಂಪನಿಯಲ್ಲೂ ಅಭಿನಯಿಸಿ ನಂತರ ತಮ್ಮ ಅಜ್ಜಿಯ ಮಾತಿನಂತೆ ಅನಂತಲಕ್ಷ್ಮೀ ಎಂಬುವವರೊಂದಿಗೆ ಮದುವೆಯಾಗಿ ಅಜ್ಜಿಯ ಊರು ಕೊತ್ತಲಚಿಂತಕ್ಕೆ ಬಂದು ನೆಲೆಸಿದರು.ಆದರೆ ಇಲ್ಲಿಯೂ ಸುಮ್ಮನೇ ಕೂರದ ರೆಡ್ಡಿಯವರು ಮೊದಲ ಬಾರಿಗೆ ತಾವೇ ಪರಿಷ್ಕರಿಸಿ ಬರೆದ 'ಕಾಲು ಜಾರಿದ ಕಾಲೇಜು ಕನ್ಯೆ ಅರ್ಥಾತ್ ರೋಷ ಇಲ್ದೋನಿಗೆ ಮೀಸೆ ಯಾಕ' ಎಂಬ ನಾಟಕವನ್ನು ನಿರ್ದೇಶನ ಮಾಡಿ ಯಶಸ್ವಿಯಾದರು.ಆ ಮೂಲಕ ನಟನೆಯಿಂದ ನಿರ್ದೇಶನ ಮತ್ತು ರಚನೆಯತ್ತ ಮುನ್ನುಡಿ ಬರೆದರು.ಆ ಮೂಲಕ ಕರ್ನಾಟಕಾಂಧ್ರದ ಗಡಿಭಾಗದ ಬೈರಗಾಮದಿನ್ನೆ, ಬದಿನೇಹಾಳ್, ರೌಡೂರು ಭಾಗದಲ್ಲಿ ಕರೆದ ಕಡೆಯಲ್ಲೆಲ್ಲಾ ಹೋಗಿ ನಿರ್ದೇಶನ ಮಾಡಿ ಸೈ ಎನಿಸಿಕೊಂಡರು. ಆ ಮೂಲಕ ಗೌರಿ ಗೆದ್ದಳು, ಆಶಾಲತಾ, ರಕ್ತರಾತ್ರಿ, ಶರಪಂಜರ, ಕಾಲು ಜಾರಿದ ಕಾಲೇಜು ಕನ್ಯೆ ಎಂಬಿತ್ಯಾದಿ ನಾಟಕಗಳಲ್ಲಿ ಭಾಗವಹಿಸಿ ಹೆಸರಾಗಿದ್ದಾರೆ. ಸರಾಗವಾಗಿ ಹಾಡುಗಳನ್ನು ,ಚಿತ್ರಕತೆ ,ರಂಗಕತೆಗಳನ್ನು ಬರೆಯುವ ಕೌಶಲಗಳನ್ನು ಹೊಂದಿದ್ದರು.ಅಲ್ಲದೆ ಇವರ ನಟನೆ ಮತ್ತು ನಿರ್ದೇಶನ ಕೌಶಲ್ಯ ಮಾತ್ರ ಹೇಳತೀರದು.ಎಲ್ಲ ಕಲಾವಿದರನ್ನು ಗೌರವ ಮನೋಭಾವದಿಂದ ಕಾಣುತ್ತಿದ್ದರು. ಸ್ತ್ರೀ ಕಲಾವಿದರನ್ನು ತಮ್ಮ ಸಹೋದರಿಯರೆಂದು ಭಾವಿಸಿ ಕಲಿಸುತ್ತಿದ್ದರೆಂದು ಅವರನ್ನು ಬಲ್ಲ ಮನಸ್ಸುಗಳು ಇಂದಿಗೂ ನೆನೆಯುತ್ತವೆ.
ಇಂತಹ ಅಭಿನೇತ್ರಿಗೆ ತಮ್ಮ ಶಿಷ್ಯರಿಂದ ಹಾಗೂ ಅಭಿಮಾನಿಗಳಿಂದ ಕೆಲ ಸನ್ಮಾನ ಪುರಸ್ಕಾರಗಳು ದೊರೆತ ಉದಾಹರಣೆಗಳನ್ನು ಹೊರತುಪಡಿಸಿದರೆ , ಮತ್ಯಾವ ಸರ್ಕಾರ ಸರ್ಕಾರೇತರ ಸಂಘ ಸಂಸ್ಥೆಗಳಿಂದ ಯಾವ ಗೌರವಾಧರಗಳು ದೊರೆಯದಿರುವುದು ಖೇಧನೀಯ. ಮುಂದೆ ಕುಡಿತದ ದಾಸನಾಗಿ ನಂತರ ಇದ್ದ ಸಂಪತ್ತನ್ನು ಕಳೆದುಕೊಂಡು ನಂತರ ಮಡದಿ -ಮಗಳೊಡನೆ ಬೆಂಗಳೂರಿಗೆ ಹೋಗಿ ಸಿನಿ-ರಂಗಭೂಮಿಯ ಸ್ನೇಹಿತರನ್ನು ಅರಸುತ್ತಾ ಮತ್ತೆ ಸಿನಿರಂಗ ಸೇರಲು ಮುಂದಾದರು. ಆದರೆ ಯಾರ ಆಸರೆ ಸಿಗದೇ ಮತ್ತೆ ಕಾಲು ಜಾರಿದರು.ಆಗ ಮತ್ತದೇ ಕೊರಗಿನಲ್ಲಿ ಕುಡಿತಕ್ಕೆ ಬಲಿಯಾಗಿ ಮಡದಿ ಮತ್ತು ಮಗಳು ತ್ರಿವೇಣಿಯನ್ನು ಅನಾಥರನ್ನಾಗಿಸಿ ೨೦೧೩ರಲ್ಲಿ ಇಹಲೋಕ ತ್ಯಜಿಸಿದರು.
ಜೇಬು ತುಂಬಾ ಹಣವಿದ್ದರೂ , ಮೈತುಂಬಾ ಕೆಲಸವಿದ್ದರೂ ಎಲ್ಲವನ್ನೂ ಧಿಕ್ಕರಿಸಿ ನಟನೆಯ ಹಾದಿ ಹಿಡಿದು ಸಾಗಿದ ಈ ಹಿರಿ ಜೀವ ಕೊನೆಗಾಲದಲ್ಲಿ ಕೊರಗುತ್ತಲೇ ಮೂಲೆಗುಂಪಾದರು.ಹಾಗಾಗಿ ಈ ಮೂಲಕವಾದರೂ ಅಂತಹ ಮಹನೀಯರ ರಂಗಕಾಯಕ ಅರಿವಾಗಲೆಂಬುದೇ ನನ್ನೀ ಲೇಖನದ ಆಶಯ.
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ರಂಗ ಸಂಶೋಧನಾರ್ಥಿ.
Comments
Post a Comment