ರಂಗ ಮಾಲಿಕೆ -೪೮ ರಂಗಭೂಮಿಯ ಸಂಭಾಷಣಾ ಚತುರ ' ಗೆಣಕಿಹಾಳ್ ಎಂ.ತಿಮ್ಮನಗೌಡ'


 

ಬಣ್ಣದ ಬದುಕು
ರಂಗ ಮಾಲಿಕೆ - ೪೮


ರಂಗಭೂಮಿಯ ಸಂಭಾಷಣಾ ಚತುರ ' ಗೆಣಕಿಹಾಳ್ ಎಂ.ತಿಮ್ಮನಗೌಡ


     ಅಪ್ಪಟ ಗ್ರಾಮೀಣ ಸೊಗಡಿನ ಗಂಧ ಗಾಳಿ ಸವಿಯುವ ಮೂಲಕ ಗ್ರಾಮೀಣ ರಂಗಭೂಮಿಗೆ ಕಾಲಿಟ್ಟು ,ಹವ್ಯಾಸಿ ರಂಗಭೂಮಿಯಲ್ಲಿ ಮಿನುಗುತಾರೆಯಾಗಿ ಅರಸದೆಯೇ ಶ್ರೇಷ್ಠಾತಿ ಶ್ರೇಷ್ಠ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮಡಲಿಗೆ ಅರ್ಪಿಸಿಕೊಂಡ ಕೆಲವೇ ಕೆಲವರಲ್ಲೊಬ್ಬರು ಬಳ್ಳಾರಿಯ ಗೆಣಿಕಿಹಾಳ್ ಗ್ರಾಮದ ' ಮೇಲ್ಸೀಮೆ ತಿಮ್ಮನಗೌಡರು'.
    ಇವರು ದಿನಾಂಕ :೦೧.೦೬.೧೯೫೮ರಂದು ಬಳ್ಳಾರಿಯ ಗೆಣಕಿಹಾಳ್ ಗ್ರಾಮದ ಮೇಲ್ಸೀಮೆ ರುದ್ರಗೌಡ ಮತ್ತು ಚನ್ನಮ್ಮ ದಂಪತಿಗಳ ಮಗನಾಗಿ ಜನಿಸಿದರು.ಮೂಲತಃ ಕೃಷಿಕ ಕುಟುಂಬದಲ್ಲಿ ಜನಿಸಿದ್ದರಿಂದ  ಹಾಗೂ ತಾತ ಮೇಲ್ಸೇಮೆ ಪಂಪನಗೌಡ ,ತಂದೆಯೂ ಸಹ ಆ ಭಾಗದ ಪ್ರಖ್ಯಾತ ಬಯಲಾಟ ಕಲಾವಿದರಾಗಿದ್ದರಿಂದ ಕಲೆ ರಕ್ತಗತವಾಗಿ ಬಂದಿತು. ಕೌಟುಂಬಿಕವಾಗಿ ಸಿರಿವಂತರಾಗಿದ್ದರು ಎಂದೂ ಕಲೆಯನ್ನು ಅಲಕ್ಷ್ಯವಾಗಿ ಕಾಣಲಿಲ್ಲ. ಅಂತೆಯೇ  ತಮ್ಮ ತಾತ ಪ್ರತಿ ಸಾರಿ ಬಯಲಾಟದ ತಾಲೀಮು ಮತ್ತು ಪ್ರದರ್ಶನಕ್ಕೆ ಹೋದಾಗಲೆಲ್ಲಾ ಇವರನ್ನು ಕರೆದೊಯ್ಯುತ್ತಿದ್ದರು. ಆ ಮೂಲಕ ವಿದ್ಯಾಭ್ಯಾಸವನ್ನು ೧೦ನೇ ತರಗತಿಯವರೆಗೆ ಸ್ಥಗಿತಗೊಳಿಸಿ ಒಂದೆಡೆ ಮನೆ ಇನ್ನೊಂದೆಡೆ ರಂಗಮನೆಯ ಉಸ್ತುವಾರಿ ನೋಡಿಕೊಳ್ಳುತ್ತಲೇ ನಾಟಕದ ಗೀಳು ಕಾಳ್ಗಿಚ್ಚಿನಂತೆ ಇವರನ್ನು ಅವರಿಸಿಕೊಂಡರು. ಓದುವಾಗ "ಅಪ್ಪನ ಆಸೆಯಂತೆ ಓದಿ ಶ್ರೇಷ್ಠ ಡಾಕ್ಟರ್ ಆಗಬೇಕದವರು ಶ್ರೇಷ್ಠ ಆ್ಯಕ್ಟರ್ ಆಗಿದ್ದೇನೆ " ಎಂದು ಹೆಮ್ಮೆಯಿಂದಲೇ ನುಡಿಯುತ್ತಾರೆ
   ಹೀಗೆ ಒಮ್ಮೆ ಇವರ ತಂದೆಯ ನಾಟಕದ ನಿರ್ದೇಶನದ ನೇತೃತ್ವ ವಹಿಸಿ ಶ್ರೇಷ್ಠ ನಟ ,ರಂಗ ನಿರ್ದೇಶಕ 'ರಂಗಭೂಮಿಯ ಗಜಸಿಂಹ' ಎಲಿವಾಳ ಸಿದ್ದಯ್ಯಸ್ವಾಮಿಯವರು ಇವರ ಮನೆಗೆ ಬಂದು ಸುಮಾರು ದಿನಗಳ ಕಾಲ ನೆಲೆಸಿದರು. ಆ ಮೂಲಕ ಇವರ ಸೇವೆ ಮಾಡುತ್ತಲೇ ಇವರ ಶಿಷ್ಯತ್ವ ಗಳಿಸಿದ್ದಲ್ಲದೇ ರಂಗಭೂಮಿಯ ಅಆಇಈಯನ್ನು ಅವರಿಂದಲೇ ಕಲಿತುಕೊಂಡರು. ಕ್ರಮೇಣ ಅವರ ಹಿಂದೆ ಊರೂರು ಸುತ್ತಾತ್ತ ಅವರ ಅಭಿನಯದ ಮಾದರಿಯನ್ನು ತಮ್ಮದಾಗಿಸಿಕೊಳ್ಳುತ್ತಾ ಬಂದರು.
      ಈಗಿರುವಾಗ ರಂಗ ಗುರುಗಳಾದ ಎಲಿವಾಳ ಸಿದ್ದಯ್ಯಸ್ವಾಮಿ ಮತ್ತು ಗೆಣಕಿಹಾಳ್ ಮರಿಸ್ವಾಮಿಯವರ ನೇತೃತ್ವದಲ್ಲಿ ೧೯೮೬ ರಲ್ಲಿ ತಮ್ಮ ೧೩ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ತಮ್ಮ ಹುಟ್ಟೂರಿನಲ್ಲೇ ' ಭಕ್ತ ಮಾರ್ಕಂಡೇಯ' ನಾಟಕದಲ್ಲಿ 'ಬಾಲ ಮಾರ್ಕಂಡೇಯ' ನಾಗಿ ಅಭಿನಯಿಸುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದಲ್ಲದೆ ಪ್ರಥಮದಲ್ಲೇ ಯಶಸ್ಸು ಪಡೆದು ಮಿಂಚಿದರು.
  ಆ ಯಶಸ್ಸಿನ ಹಿನ್ನಲೆಯಲ್ಲಿ ಹಾಗೂ ಕೌಟುಂಬಿಕವಾಗಿ ಪರಿಪೂರ್ಣ ಪ್ರೋತ್ಸಾಹದೊಂದಿಗೆ ಕೃಷಿಯೊಡನೆ ರಂಗ ಕೃಷಿ ಮಾಡುತ್ತಾ  ಸುಭದ್ರಮ್ಮ ಮನ್ಸೂರ,ರಮೇಶ್ ಗೌಡ ಪಾಟೀಲ್, ಶಂಕರ್ ನಾಯ್ಡು, ಬೆಳಗಲ್ ವೀರಣ್ಣರಂತಹ ಪ್ರಮುಖ ನಟರೊಂದಿಗೆ ಅಭಿನಯಿಸಲು ಮುಂದಾದರು. ಇದಲ್ಲದೇ ಗುರುಗಳ ಸಹಾಯಾರ್ಥವಾಗಿ ತಮ್ಮೂರಿನಲ್ಲಿ ಪ್ರದರ್ಶನಗೊಂಡ 'ಉತ್ತರ ಭೂಪ' ನಾಟಕದಲ್ಲಿ ಅರ್ಜುನನ ಪಾತ್ರ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಲ್ಲದೇ ಅಪ್ಪನ ಒತ್ತಾಯದಂತೆ ರಕ್ತರಾತ್ರಿ ನಾಟಕದಲ್ಲಿ ' ಅಶ್ವತ್ಥಾಮ' ಪಾತ್ರವನ್ನು ಮಾಡುವ ಸಲುವಾಗಿ ಸುಮಾರು ಮೂರು ತಿಂಗಳುಗಳ ಕಾಲ ಎಲಿವಾಳ ಸಿದ್ದಯ್ಯಸ್ವಾಮಿಯವರ ಗರಡಿಯಲ್ಲಿ ತರಬೇತಿ ಪಡೆದು ಅದ್ಭುತವಾಗಿ ಅಭಿನಯಿಸಿ ಜನಮನ್ನಣೆ ಗಳಿಸಿದರು. ಇದಲ್ಲದೇ ಮುಂದೆ ಇದೇ ನಾಟಕದಲ್ಲಿ ಭೀಮನ ಪಾತ್ರವನ್ನು ಸಹ ಅತ್ಯಾದ್ಭುತವಾಗಿ ಅಭಿನಯಿಸಿ ರೌದ್ರ ಪಾತ್ರಗಳಿಗೆ ತಕ್ಕುದಾದ ಶರೀರ ಮತ್ತು ಶಾರೀರ ಹೊಂದಿದ ನಟರೆನಿಸಿದರು.
ಇವರಲ್ಲಿರುವ ಕಲಾಸಕ್ತಿ ಎಷ್ಟೇಂದರೆ ಮೊದ ಮೊದಲು ಇವರ ರಂಗಕಲೆಯ ಬಗೆಗೆ ಅನೇಕ ಜನರ ಊಹಾಪೋಹಗಳು ಸಂಕಷ್ಟಗಳು ಬಂದರೂ ಯಾವುದನ್ನು ಲೆಕ್ಕಿಸದೆ ಅಭಿನಯಿಸುತ್ತಿದ್ದರು. ಒಮ್ಮೆ ಮನೆಯಲ್ಲಿ ಕಳ್ಳತನ ನಡೆದಿದ್ದರು ಅದರ ಚಹರೆಗಳು ಎಲ್ಲಿಯೂ ತೋರದ ರೀತಿಯಲ್ಲಿ ನಾಟಕದಲ್ಲಿ ಅಭಿನಯ ಮಾಡಿದ್ದರು.ಇದಲ್ಲದೇ ಇವರ ಅಭಿನಯ ಕಂಡು ಮೆಚ್ಚಿ ಬಂದ ಮಡದಿ ಶ್ರೀಮತಿ ಗಿರಜಾರಿಂದ ಸಂಪೂರ್ಣ ಸಹಕಾರ ದೊರೆಯಿತು.ಅಲ್ಲದೆ ತಮ್ಮ  ಮದುವೆಯ ಪ್ರಯುಕ್ತ ಆ ದಿನವೂ ಸಹ ಇವರು ಅಭಿನಯಿಸಿದ ಪ್ರಸಂಗವಿದೆ.
  ಗೆಣಕಿಹಾಳಿನ ಸಾಮಾನ್ಯ ಕಲಾವಿದ ರಾಜ್ಯವ್ಯಾಪಿಯಾಗುವಲ್ಲಿ ಮಕ್ಕಳಾದ ಪಂಪನಗೌಡ ಮತ್ತು ಮಂಜುನಾಥರ ಪರಿಶ್ರಮ ಅತಿಮುಖ್ಯವಾಗಿದೆ ‌. ಇವರು ಸರ್ಕಾರಿ ಅಧಿಕಾರಿಗಳಾಗಿ ಹೋದಲೆಲ್ಲಾ ಸ್ವತಃ ತಮ್ಮ ತಂದೆಯ ಕಲಾ ಧೀಮಂತಿಕೆಯನ್ನು ನಾಟಕ ಆಯೋಜನೆಗಳ ಮೂಲಕ ಪ್ರಚುರ ಪಡಿಸಿದ್ದಾರೆ.
   ಕಾಲಕ್ರಮೇಣ ರಕ್ತರಾತ್ರಿ ,ಉತ್ತರ ಭೂಪ, ಕುರುಕ್ಷೇತ್ರ ನಾಟಕಗಳ ಮೂಲಕ ಅಶ್ವತ್ಥಾಮ ಮತ್ತು ಭೀಮನ ಪಾತ್ರಕ್ಕೆ ಸುಮಾರು ೮೦೦ ಕ್ಕೂ ಹೆಚ್ಚು ಬಾರಿ ಬಣ್ಣ ಹಚ್ಚಿದ ಹೆಗ್ಗಳಿಕೆ ಇವರ ಬಣ್ಣದ ಪ್ರಪಂಚದಲ್ಲಿ ಕಾಣಬಹುದು. ಇದಲ್ಲದೇ ೩೩ ವರ್ಷಗಳ ಕಲಾ ಸೇವೆಯಲ್ಲಿ ೯೬೨ ನಾಟಕ ಪ್ರದರ್ಶನಗಳನ್ನು ೧೨೫ಕ್ಕೂ ಹೆಚ್ಚು ನಾಟಕಗಳ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರಮುಖವಾಗಿ ರಕ್ತರಾತ್ರಿ, ಕುರುಕ್ಷೇತ್ರ, ಉತ್ತರ ಭೂಪ,  ಬಾಣಸಿಗ ಭೀಮ, ಚಿತ್ರಾಂಗದ, ಗೌಡ್ರ ಗದ್ಲ, ರತ್ನ ಮಾಂಗಲ್ಯ, ಈಗ ಹೆಂಗ್ಯಾತು,ನನ್ನ ತಂಗಿ ಅಂತವಳಲ್ಲ, ಕೊಡುವ ಕೈ ಪರಮಾತ್ಮನಿಗೆ ಸೈ, ತಾಳಿಯಿಲ್ಲದೆ ತಾಯಿಯಾದೆ, ತಾಯಿಗೆ ತಕ್ಕ ಮಗ, ದಾರಿದೀಪ, ಆದರ್ಶ ಪ್ರೇಮ, ಕಾಲ ಕೆಟ್ಟು ಹೋಯಿತು, ಸರಿಯಿದ್ರ ಸಂಸಾರ,ಗುಣ ನೋಡಿ ಹೆಣ್ಣು ಕೊಡು, ರೈತ ನಿನಗಾರು ಹಿತ ಎಂಬಂತಹ ಅನೇಕ ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
  ಇದಲ್ಲದೇ ಹುಟ್ಟೂರಿನಲ್ಲಿ  'ಎಲಿವಾಳ ಸಿದ್ದಯ್ಯ ಕಲಾ ಬಳಗ' ಎಂಬ ರಂಗ ಸಂಸ್ಥೆ ಸ್ಥಾಪಿಸಿ ತಮ್ಮ ತಂಡದೊಂದಿಗೆ ಸಮಾರಂಭ, ಜಾತ್ರೆಗಳಲ್ಲದೆ ಹಂಪಿ, ಮೈಸೂರು ದಸರಾ, ಕರಾವಳಿ ರಾಷ್ಟ್ರೀಯ,  ಬೆಳಗಾವಿ ಚಿಕ್ಕೋಡಿ ಉತ್ಸವಗಳಲ್ಲಿ ಹಾಗೂ ಇಳಕಲ್ ರಂಗಭೂಮಿ ಕಲಾವಿದರ ಸಮಾವೇಶ, ತಿಂತಿಣಿ ಕಲೋತ್ಸವ ,ಗಾದಿಗನೂರು ಗ್ರಾಮೀಣ ನಾಟಕೋತ್ಸವಗಳಲ್ಲಿ ಭಾಗವಹಿಸಿ ಕಲಾ ರಸಿಕರ ಮನ ಗೆದ್ದಿದ್ದಾರೆ.
   ಅಂತೆಯೇ  ಇವರ ಕಲಾ ಕುಸುರಿಯನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಅಭಿನಯ ಭಾರ್ಗವ, ಕಲಾಸಿರಿ, ರಂಗ ಸಿರಿ,ರಾಘವ ಪ್ರಶಸ್ತಿ, ಅಭಿನಯ ಸಿರಿ ,ಸಂಭಾಷಣಾ ಚತುರ ಹಾಗೂ ಕರ್ನಾಟಕ ಸರ್ಕಾರದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕಾರಗಳು ಇವರ ಕಲಾ ಪ್ರೌಢಿಮೆಗೆ ಮೆರಗು ತಂದಿವೆ.
ಇಂತಹ ಅಗಾಧ ಪ್ರತಿಭೆಯ ಸಂಪನ್ನರು ಈಗ ೬೫ ರ ವಸಂತದಲ್ಲಿದ್ದರೂ ಇವರ ಕಲಾ ಚೈತನ್ಯ ಬತ್ತದಿರುವುದೇ ಇಂದಿನ ಯುವ ಕಲಾವಿದರಿಗೆ ಮಾದರಿ.

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
  
  
 

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.