ರಂಗ ಮಾಲಿಕೆ - ೪೭ ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'

 


 ಬಣ್ಣದ ಬದುಕು

ರಂಗ ಮಾಲಿಕೆ - ೪೭


ಕರ್ನಾಟಕಾಂಧ್ರದ ಅಭಿನಯ ಚತುರೆ 'ಉಳೇಬೀಡು ರಂಗಮ್ಮ'.


ಒಂದು ಕಾಡಿನ ಕಲ್ಲನ್ನು ಶಿಲ್ಪವಾಗಿಸಿದ ನಂತರ ಅದರ ರೂವಾರಿ ಕಣ್ಮರೆಯಾಗುತ್ತಾನೆ ಅಥವಾ ಶಿಲ್ಪದ ಮೆರಗಿನಲ್ಲಿ ಮರೆಯಾಗುತ್ತಾನೆ. ಅಂತೆಯೇ ಬಳ್ಳಾರಿ ರಂಗಭೂಮಿಯಲ್ಲಿ ಪ್ರಸ್ತುತ ದೃವತಾರೆಯಾಗಿ ಹೊಳೆಯುತ್ತಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಆದೋನಿ ವೀಣಾರ ರಂಗಕಲೆಯ ಹಿಂದಿನ ಶಿಲ್ಪಿಯೇ ಅವರ ತಾಯಿ ಉಳೇಬೀಡು ರಂಗಮ್ಮ.

    ಉಳೇಬೀಡು ರಂಗಮ್ಮನವರು ಆದೋನಿಯ ನೇಮಕಲ್ ಲ್ಲಿ ನೇಮಕಲ್ ರಂಗಯ್ಯ ಮತ್ತು ಶೇಷಮ್ಮರ ಮಗಳಾಗಿ ಕ್ರಿ.ಶ.೧೯೩೬ರಲ್ಲಿ ಜನಿಸಿದರು.ಇವರ ತಂದೆ ಬೈರವಿ ರಾಗವನ್ನು ಗಂಟೆಗಟ್ಟಲೆ ಹಾರ್ಮೋನಿಯಂ ಮೂಲಕ ನುಡಿಸಿ 'ಭೈರವಿ ರಂಗಪ್ಪ' ಎಂದು ಪ್ರಸಿದ್ಧರಾಗಿದ್ದರು. ಅಲ್ಲದೆ ಇವರ ಅಕ್ಕ ಮಂಗಮ್ಮ ಸಹ ಪ್ರಸಿದ್ಧ ರಂಗನಟಿಯಾಗಿದ್ದರು. ಕಲೆ ರಕ್ಇತಗತವಾಗಿದ್ದರಿಂದ ಇವರು ಸಹ ತಮ್ಮ ೫ನೇ ವಯಸ್ಸಿಗೆ ತಂದೆಯ ನೇತೃತ್ವದಲ್ಲಿ 'ಲವಕುಶ' ಎಂಬ ನಾಟಕಕ್ಕೆ ಬಣ್ಣ ಹಚ್ಚಿದರು. ಇದರ ಯಶಸ್ಸಿನ ಬೆನ್ನಲ್ಲೇ ನಟಿ ಅದವಾನಿ ಲಕ್ಷಮ್ಮಮ್ಮರ ಪತಿ, ಖ್ಯಾತ ನಟ ೨೫ ಪ್ರಾಯದವರಾಗಿದ್ದ ರಘುರಾಮಯ್ಯರೊಂದಿಗೆ ಕೇವಲ ೧೦ ವಯಸ್ಸಿನ ರಂಗಮ್ಮ ರುಕ್ಮಿಣಿಯಾಗಿ ಗರುಡ ಗರ್ವವಂಗ ನಾಟಕದಲ್ಲಿ ಅಮೋಘವಾಗಿ ಅಭಿನಯ ನೀಡಿದ್ದರು.ಇದಕ್ಕಾಗಿ ರಘುರಾಮಯ್ಯನವರು ಸಿನಿಮಾಗೆ ಕರೆದೊಯ್ಯವುದಾಗಿ ರಂಗಯ್ಯರಲ್ಲಿ ವಿನಂತಿಸಿದ್ದರು.ಆದರೆ  ಮಗಳನ್ನು ಕೇವಲ ರಂಗನಟಿಯಾಗಿಸಬೇಕಿದ್ದ ತಂದೆಗೆ ಸಿನಿರಂಗ ಅಪಥ್ಯವೆನಿಸಿ ಮನವಿಯನ್ನು ಕುಲಾಸೆಗೊಳಿಸಿದ್ದರು.

 ರಂಗಮ್ಮರು ಅಭಿನಯದಲ್ಲಿ ಎಷ್ಟು ಚೂಟಿಯಾಗಿದ್ದರೋ ಅಷ್ಟೇ ತುಂಟತನ ಅವರ ವ್ಯಕ್ತಿತ್ವದಲ್ಲಿ ಮನೆ ಮಾಡಿತ್ತು. ಒಮ್ಮೆ ಜಲಾಂಧರ ನಾಟಕದಲ್ಲಿ ಮೂಗಿಲ್ಲದ ಊರಿನ ಗೌಡನ ಬಳಿಯಲ್ಲಿ ನಟಿಸಬೇಕಾದರೆ ಆತನ  ವಕ್ರನುಡಿಗಳನ್ನು ಕೇಳಿ ತಾಲೀಮುಗಳಲ್ಲಿ ನಗುತ್ತಿದ್ದರಂತೆ.ಅಲ್ಲದೇ  ಅಪ್ಪ ಎಷ್ಟೇ ಬೈದರೂ ತುಂಟತನ ಬಿಡದೇ ಅಂದು ಹಿಂದಿರುಗುವ ಕೊನೆಯಲ್ಲಿ ಗೌಡರನ್ನೇ ಅನುಕರಿಸಿ ಎಲ್ಲರಲ್ಲೂ ನಗೆಯ ಹೂ ಅರಳಿಸಿದ್ದರಂತೆ.

    ಇವರು ಅಭಿನಯದ  ಸಂಗೀತದ ಬಹುತೇಕ ಪಟ್ಟುಗಳನ್ನು ಅಪ್ಪನಿಂದಲೇ ಕಲಿಯುವ ಮೂಲಕ ಅಪ್ಪನನ್ನೇ ರಂಗಗುರುವಾಗಿಸಿಕೊಂಡರು.ಅಲ್ಲದೇ ಪ್ರಾಯಕ್ಕೆ ಬರುವ ಮುನ್ನವೇ ಒಂದೆಡೆ ಮುನ್ನೆಲೆಗೆ  ಬಂದು ಖ್ಯಾತಿ ಗಳಿಸಿದರೆ ಇನ್ನೊಂದೆಡೆ ಅಪ್ಪನನ್ನು ಕಳೆದುಕೊಂಡು ಅನಾಥರೆನಿಸಿದರು.ಆ ಸಮಯಕ್ಕೆ ಅಪ್ಪನ ಒಡನಾಡಿಯಾಗಿದ್ದ ತಬಲಾಜಿ ಶಂಕ್ರಣ್ಣ ಮತ್ತು  ವೀರಾಪುರ ಗಂಗಣ್ಣರ ಮೂಲಕ ಬಡತನದ ಬೇಗೆಯಿಂದ ಪಾರಾಗುವ ಸಲುವಾಗಿ ಕಂಪನಿಯತ್ತ ಚಿತ್ತ ಹರಿಸಿ ಬಾಲ್ಯದಲ್ಲೇ ಕಲೆಯನ್ನು ವೃತ್ತಿಯಾಗಿಸಿಕೊಂಡು ಬೆಳವಣಿಕೆ ಸಂಗಪ್ಪರ ನಾಟಕ ಮಂಡಳಿ ಸೇರಿದರು.ಸುಮಾರು ೪ ವರ್ಷಗಳ ಕಾಲ ನಿರಂತರ ರಂಗ ಕಾಯಕದಲ್ಲಿ ನಿರತರಾದರು. ಇದರ ನಡುವಲ್ಲೇ ಆದೋನಿಯ ಅಂಗಸ್ಕಲ್ ನ ಗೋವಿಂದರೆಡ್ಡಿಯವರೊಂದಿಗೆ ಬಾಳನ್ನು ಹಂಚಿಕೊಂಡು ಪ್ರಸಿದ್ಧ ರಂಗತಾರೆ ವೀಣಾ ಆದೋನಿಯವರಿಗೆ ಜನ್ಮ ನೀಡಿದರು. ಆದರೆ ಕೌಟುಂಬಿಕ ಜವಾಬ್ದಾರಿ ಹೊತ್ತ ರಂಗಮ್ಮರಿಗೆ ಕಲೆಯ ವರದಾನವಾಗಿದ್ದರಿಂದ  ಮತ್ತೆ ಕಂಪನಿಗೆ ಸೇರಬೇಕಾಗಿದ್ದರಿಂದ ಪಟ್ಟದಕಲ್ಲು ಬಸಯ್ಯರ ನಾಟಕ ಕಂಪನಿಗೆ ಸೇರಿದರು.

    ಇವರ ಅಭಿನಯ ಚತುರತೆಯಿಂದಾಗಿ ಕಂಪನಿಯ ಬಹುಬೇಡಿಕೆಯ ನಟಿಯಾಗಿದ್ದರು‌.ಕರುಣ ಮತ್ತು ಉಲ್ಲಾಸದ ಪಾತ್ರಗಳಿಗೆ ಹೇಳಿ ಮಾಡಿಸಿದ ಶಾರೀರ ಮತ್ತು ಶರೀರ ಹೊಂದಿದ್ದ  ರಂಗಮ್ಮರನ್ನು ಅಷ್ಟು ಸುಲಭವಾಗಿ ಬಿಟ್ಟುಕಳಿಸದ ಕಂಪನಿಯ ಮಾಲೀಕರು ಇವರಿಗೆ ಹಿಂದಿರುವಂತೆ ಗಂಡ ಬರೆದ ಪತ್ರಗಳನ್ನು ನೀಡದೆ ತಡೆಹಿಡಿದಿದ್ದರು.ಆದರೆ ಒಮ್ಮೆ  ಖುದ್ದಾಗಿ ಗಂಡನೇ ಮಗಳ ಅನಾರೋಗ್ಯದಿಂದ ಕಂಪನಿಗೆ ಭೇಟಿ ನೀಡಿದಾಗ ಸತ್ಯ ತಿಳಿದು ಕಂಪನಿ ಕಾಯಕಕ್ಕೆ ತಿಲಾಂಜಲಿ ಇಟ್ಟು ಬಳ್ಳಾರಿ ಭಾಗದ ಹಳ್ಳಿ ಹಳ್ಳಿಗೂ ತಿರುಗುತ್ತಲೇ ಖ್ಯಾತಿ ಗಳಿಸುವ ಹವ್ಯಾಸಿ ನಾಟಕಗಳತ್ತ ಒಲವು ಹರಿಸಿದರು.

    ಅಂತೆಯೇ ಕರ್ನಾಟಕಾಂಧ್ರದ ಎರಡು ಗಡಿಭಾಗದ ಊರುಗಳಲ್ಲಿ ಈಗಾಗಲೇ ಪ್ರಸಿದ್ಧರಾಗಿದ್ದ ಅದವಾನಿ ಲಕ್ಷ್ಮಮ್ಮ, ಆಲೂರು ಸುಶೀಲಮ್ಮ, ವೃಷೇಂದ್ರಮಣಿಯಂತಹ ನಟಿಯರೊಂದಿಗೆ ಅಭಿನಯಿಸಿ ಬಹು ಬೇಡಿಕೆಯ ನಟಿಯ ಪಟ್ಟ ಪಡೆದಿದ್ದರು.

   ಇವರು ಬಳ್ಳಾರಿ ಭಾಗದ ಪ್ರಸಿದ್ಧ ನಾಟಕಗಳಾದ ರತ್ನ ಮಾಂಗಲ್ಯ, ಮಲ ಮಗಳು, ತಾಯಿ ಕರಳು,ಹೆಣ್ಣಿನ ಜೀವನ , ಅಣ್ಣ ತಂಗಿ ಇನ್ನೂ ಮುಂತಾದ ಸಾಮಾಜಿಕ ಹಾಗೂ ರಕ್ತರಾತ್ರಿ, ಕುರುಕ್ಷೇತ್ರ, ವೀರ ಅಭಿಮನ್ಯು ,ಬಾಲ ನಾಗಮ್ಮ ಮುಂತಾದ ಪೌರಾಣಿಕ ನಾಟಕಗಳ ಸಾವಿರಾರು ಪ್ರದರ್ಶನಗಳಲ್ಲಿ  ಅಭಿನಯಿಸಿ ಹೆಸರಾಗಿದ್ದಾರೆ. ಅಲ್ಲದೇ ಮುಖ್ಯವಾಗಿ ಶೃಂಗಾರ, ವೀರ, ದುಃಖ, ವಿರಹ ರಸಗಳಿಂದಾವೃತ್ತವಾದ ರಕ್ತರಾತ್ರಿಯ ಉತ್ತರೆ ಮತ್ತು ದ್ರೌಪದಿ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುವ ಚಾಕಚಕ್ಯತೆ ಹೊಂದಿದ್ದರು. ಇವರ ಆಡಂಬರವಿಲ್ಲದ ಅಭಿನಯ ಮತ್ತು ಹಾಡುಗಾರಿಕೆ ಇಂದಿಗೂ ಅನೇಕರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವುದೇ ಅವರ ಅಭಿನಯಕ್ಕೆ ಹಿಡಿದ ಕನ್ನಡಯಾಗಿದೆ.

   ಕಾಲಕ್ರಮೇಣ ತಮ್ಮ ರಂಗಭೂಮಿಯ ಉತ್ತಾರಧಿಕಾರಿಯಾಗಿದ್ದ ಮಗಳು ಆದೋನಿ ವೀಣಾರನ್ನು ಸಹ ೭ನೇ ವಯಸ್ಸಿಗೆ ರಂಗಕ್ಕೆ ತಂದು ಮುಂದೆ ತಾಯಿ ಮಗಳ ನಟನಾ ಜುಗಲ್ಬಂದಿ ಯೊಂದಿಗೆ ಮಗಳಲ್ಲಿ ಅಗಾಧವಾದ ನಟನಾ ಪ್ರತಿಭೆಯನ್ನು ತುಂಬಿದರು.

  ಇವರ ರಂಗ ಕಾಯಕವನ್ನು ಗುರುತಿಸಿ ಕರ್ನಾಟಕ ಸರ್ಕಾರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಾಘವ ಮೆಮೋರಿಯಲ್ ಅಸೋಸಿಯೇಷನ್ ರಾಘವ ಪ್ರಶಸ್ತಿ, ಆಂಧ್ರದ ಅನೇಕ ರಂಗತಂಡಗಳು ಅಭಿನಯ ಚತುರೆ, ಕಳಾಶ್ರೀ, ಅಭಿನಯ ಶಾರದೆ, ಅಭಿನೇತ್ರಿ ಎಂಬಿತ್ಯಾದಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

     ನಟನೆಯ ಸರಳ ಮತ್ತು ಸೂಕ್ಷ್ಮ ಗಾರಿಕೆಯನ್ನು ಅರಿತಿದ್ದ ಉಳೇಬೀಡು ರಂಗಮ್ಮನವರು ಕ್ರಿ.ಶ.೨೦೧೧ರಲ್ಲಿ ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದರು. ಇಂತಹ ಅಗಾಧ ಪ್ರತಿಭೆಯ ಪ್ರತಿಮ ಮೂರ್ತಿಯ ಕಲಾ ವ್ಯಕ್ತಿತ್ವ ಕರ್ನಾಟಕಾಂಧ್ರದ ಎಲ್ಲ ಕಲಾ ರಸಿಕರಿಗೂ ಮಾದರಿಯಾಗಲಿ ಎಂಬುದೇ ನನ್ನೀ ಲೇಖನದ ಆಶಯ.


ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ರಂಗ ಸಂಶೋದನಾರ್ಥಿ (ಬೆಂ.ವಿವಿ)manjuamazing7@gmail.com

9379857775

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.