ರಂಗ ಮಾಲಿಕೆ -೪೬ ರಂಗ ಕಾಯಕದ ಸಾಕಾರ ಮೂರ್ತಿ 'ಬಯಲಾಟ ಅಂಬುಜಮ್ಮ'


 ಬಣ್ಣದ ಬದುಕು

ರಂಗ ಮಾಲಿಕೆ -೪೬

ರಂಗ ಕಾಯಕದ ಸಾಕಾರ ಮೂರ್ತಿ 'ಬಯಲಾಟ ಅಂಬುಜಮ್ಮ'

'ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬಂತೆ ಏನು ವಿದ್ಯೆಯಿಲ್ಲದಿದ್ದರೂ ಸುಮಾರು ಪುಟಗಳ ಕಾವ್ಯವನ್ನು ಸರಾಗವಾಗಿ ಓದಿ ಅರ್ಥೈಸುವ ಜಾಣ್ಮೆ  ಈ ನಾಡಿನ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಅದಕ್ಕಾಗಿ ಹಿರಿಯ ಕವಿಗಳು 'ಕುರಿತೋದದೆಯುಂ ಕಾವ್ಯ ಪ್ರಯೋಗ ಪರಣಿತ ಮತಿಗಳ್' ಎಂಬ ವಿಷಯಾಂಶವನ್ನು ಈ ನಾಡಿಗೆ ಸಾರಿದ್ದಾರೆ. ಈ ಚಾಕಚಕ್ಯತೆ  ರಂಗದೊಲವುಳ್ಳ ರಂಗಕರ್ಮಿಗಳಿಗೆ ಬಲು ಸರಳವಾಗಿ ದಕ್ಕುತ್ತದೆ.ಅದಕ್ಕೊಂದು ನಿದರ್ಶನವೆಂಬಂತೆ ಓದಿದ್ದು ಒಂದನೇ ತರಗತಿಯಾದರು ನಿರರ್ಗಳವಾಗಿ ಹಲವು ಕಾವ್ಯಗಳ ಸಂಭಾಷಣೆಯನ್ನು ಹೇಳುವ ರಂಗ ಕಲಾವಿದೆ ಬಳ್ಳಾರಿಯ 'ಬಯಲಾಟ ಅಂಬುಜಮ್ಮ' ಸೋಜಿಗ ಮೂರ್ತಿಯೇ ಸರಿ.
   ಇವರು ಕ್ರಿ.ಶ.೧೯೬೪ ರಲ್ಲಿ ಅವಿಭಜಿತ ಬಳ್ಳಾರಿಯ ಹೊಸಪೇಟೆಯ ಮಲಪನಗುಡಿಯ ಭರಮಪ್ಪ ಮತ್ತು ಹುಲಿಗೆಮ್ಮರ ಮಗಳಾಗಿ ಜನಿಸಿದರು.ಇವರ ಮೂಲನಾಮ ಹನುಮಕ್ಕ ಆಗಿದ್ದರೂ ಮುಂದೆ ತಮ್ಮ ಬಯಲಾಟ ರಂಗ ಕ್ಷೇತ್ರದ ಮೂಲಕ ಬಯಲಾಟ ಅಂಬುಜಮ್ಮ ಆಗಿದ್ದು ಮಾತ್ರ ಶ್ಲಾಘನೀಯ. ಆಗಿನ ಕಾಲದ ಪ್ರಸಿದ್ಧ ರಂಗ ನಟಿ ಮಲಪನ ಗುಡಿ ಅಂಜಿನಮ್ಮ ಇವರ ಅಕ್ಕ ಆಗಿದ್ದರಿಂದ, ಇವರ ಮನೆ ನಿಜಕ್ಕೂ ಒಂದು ರಂಗಮನೆಯಾಗಿದ್ದರಿಂದಲೂ ರಂಗಭೂಮಿಯ ಚಟುವಟಿಕೆಗಳನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸುವ ಮೂಲಕ ತಮ್ಮನ್ನು ತಾವೇ ರಂಗಭೂಮಿಗೆ ಸಮರ್ಪಿಸಿಕೊಂಡರು.
    ಆ ದಿಸೆಯಲ್ಲಿ ಅಂಬುಜಮ್ಮನವರು ತಮ್ಮ ಎಳೆಯ ವಯಸ್ಸಿಗೆ ಅಕ್ಕನ ಅಭಿನಯವನ್ನೇ ಅನುಕರೀಸಿದರೂ ಅವರ ಯಾವ ಪ್ರೋತ್ಸಾಹ ದೊರೆಯಲಿಲ್ಲ. ಅಲ್ಲದೇ ತಂದೆ ಎಳೆಯ ವಯಸ್ಸಿಗೆ ಗಗನಕ್ಕಾರಿ ಮತ್ತು ವರ್ಚಸ್ಸು ಬಂದ್ಕೂಡಲೇ ಅಕ್ಕ ನಗರ ಸೇರಿ ತಾಯಿ ಮತ್ತು ತಂಗಿಯನ್ನು ಅನಾಥವಾಗಿಸಿದರು.ಆಗ  ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಕೇವಲ ೮-೯ ನೇ ವಯಸ್ಸಿನ ಅಂಬುಜಮ್ಮರಿಗೆ ಅನೇಕ ಸಂಕಷ್ಟಗಳು ಎದುರಾದವು.ಆದರೆ ಯಾವುದಕ್ಕೂ ಜಗ್ಗದೇ ಹಗಲು ರಾತ್ರಿ ದುಡಿಯಲು ಮುಂದಾದರೂ ಇದರ ನಡುವೆ ರಂಗದೊಲವು ಇವರನ್ನು ಸದಾ ಎಚ್ಚರಿಸುತ್ತಿತ್ತು. ಆದರೆ ಇವರ ಬಡತನ ಮತ್ತು ಹಸಿವು ಆ ಕಡೆ ಹೆಜ್ಜೆ  ಹಾಕಲು ಬಿಡಲಿಲ್ಲ.
      ಅದೇ ಕಾಲಕ್ಕೆ ಇವರ ಬದುಕಿನ ಬವಣೆಯನ್ನು ಸಮೀಪದಿಂದ ಕಂಡುಂಡ ಅಂಬುಜಮ್ಮರ ರಂಗಕಾಯಕದ ಸಂಜೀವಿನಿ ‌ರಂಗ ಗುರು ದಿಲ್ರೂಬಾ ವಾದಕ ಕುರೇಕುಪ್ಪ ಹೊನ್ನೂರಪ್ಪ ಮತ್ತು ಏಳುಬೆಂಚಿ ಕೊಟ್ರಪ್ಪರಿಂದ ಇವರಿಗೆ ಮಲಪನಗುಡಿಯಲ್ಲಿ ಗಿರಿಜಾ ಕಲ್ಯಾಣ ನಾಟಕದ ಸಚಿ ಪಾತ್ರಕ್ಕೆ ಆಯ್ಕೆ ಮಾಡುತ್ತಾರೆ.ಆದರೆ ಅದೇ ಊರಿನ ಜನರು ಎಳೆ ವಯಸ್ಸಿನ ಹುಡುಗಿ ಎಂದು ನಿರ್ಲಕ್ಷ್ಯ ತೋರಿದರು.ಆದರೆ ಗುರು ಅವರಿಗೆ " ಇವಳು ಸರಿಯಾಗಿ ಅಭಿನಯಿಸದಿದ್ದರೆ ನಾನು ನೀವು ನನಗೆ ನೀಡುವ ೩ ತಿಂಗಳ ರಂಗ ಸಂಭಾವನೆ ತೆಗೆದುಕೊಳ್ಳುವುದಿಲ್ಲ" ಎಂದು ಚಾಲೆಂಜ್ ಹಾಕುತ್ತಾರೆ.ಅಂತೆಯೇ ಅಂಬುಜಮ್ಮರು ಸಹ ಕೊರೆಯುವ ಚಳಿಗೆ ಎದುರದೆ ಹೇಳಿಕೊಟ್ಟ ಎಲ್ಲ ವಿದ್ಯೆಯನ್ನು ಅಚ್ಚುಕಟ್ಟಾಗಿ ಅಭಿನಯದ ಮೂಲಕ ಕಲಾ ರಸಿಕರಿಗೆ ಉಣಬಡಿಸಿ ಎಲ್ಲರ ಮೆಚ್ಚುಗೆ ಪಡೆದರು.
  ಅಂದಿನಿಂದಲೇ ಇವರ ಬದುಕಿನ ಹೊಸ ಪರ್ವ ಆರಂಭವಾದರೂ ಹಗಲಿನಲ್ಲಿ ಕೂಲಿ ಕೆಲಸ ಮಾಡಿ ಸಂಜೆಯಾದ ಕೂಡಲೇ ನಾಟಕದ ಮಾತುಗಳ ಪಾಠಕ್ಕೆ ಅಣಿಯಾಗುತ್ತಿದ್ದರು.ಇದೇ ಮಾಡುತ್ತಲೇ ಸುತ್ತಮುತ್ತಲಿನ ಊರುಗಳಲ್ಲಿ ನಟಿಯ ಪಟ್ಟವನ್ನು ಅಲಂಕರಿಸಿದರು.ಅದಲ್ಲದೇ ಅಕ್ಷರ ಬಲ್ಲವರಿಂದ ಮಾತುಗಳ ಕಲಿಕೆಯಾಗಿ ನಂತರ ಅವರ ಎಡರುತೊಡರುಗಳನ್ನೇ ತಿದ್ದುವ ಮಟ್ಟಿಗೆ ಶ್ರದ್ಧೆಯಿಂದ ಕಲಿಯುತ್ತಿದ್ದರು.ಕಾಲಕ್ರಮೇಣ ಸಹ ಕಲಾವಿದೆಯಾಗಿದ್ದ ಬಳ್ಳಾರಿ ಸುಶೀಲಮ್ಮರ ಸಲಹೆಯಿಂದ ಸಂಗನಕಲ್ಲಿನಲ್ಲಿ ಅದ್ಭುತವಾದ ನಟನೆಯಿಂದ ಮತ್ತಷ್ಟು ಅವಕಾಶಗಳು ಬರಲಾರಂಭಿಸಿ ಆ ಕಾಲಕ್ಕೆ ೫೦ ರೂಪಾಯಿ ಸಂಭಾವನೆಯ ಪಡೆಯುವ ನಟಿಯಾದರು.ಪಾಂಡು ವಿಜಯದ ದ್ರೌಪದಿ, ರತಿ ಕಲ್ಯಾಣದ ದ್ರೌಪದಿ, ಪಾರ್ಥ ವಿಜಯದ ದ್ರೌಪದಿ, ರಾಮಾಯಣದ ಸೀತೆ, ಸುಂದೋಪ ಸುಂದರದ ರಂಭಾ, ದುಶ್ಯಾಸನ ಕಥೆಯ ದ್ರೌಪದಿ ಹೀಗೆ ಸುಮಾರು ೭೦ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸುವುದಲ್ಲದೇ ಉತ್ತರ ಕರ್ನಾಟಕದ ನಟಿಯೊಬ್ಬರು ದಕ್ಷಿಣಾಧಿಯಾಗಿ ಹಾಡುತ್ತಾ ಕುಣಿಯುತ್ತಾ ಎಲ್ಲರನ್ನೂ ಸೆಳೆದದ್ದು ಮಾತ್ರ ಸೋಜಿಗ.
     ಮೈಕಲ್ಲದೆ, ಬೆಳಕಿನ ವಿನ್ಯಾಸವಿಲ್ಲದೆ ಅಭಿನಯಿಸುತ್ತಿದ್ದ ಕಾಲದಲ್ಲಿ ರಂಗಸ್ಥಳಕ್ಕೆ ತೆರಳಲು ಯಾವುದೇ ಸೌಲಭ್ಯವಿಲ್ಲದ ಸಮಯದಲ್ಲಿ ಅಹಾರ್ಯ ಸಾಮಾಗ್ರಿಗಳನ್ನು ಹೊತ್ತು ನಡೆದು ಹೋಗಿ ಅಭಿನಯಿಸಿದ ಅದೆಷ್ಟೋ ಉದಾಹರಣೆಗಳು ಇವರ ರಂಗ ಬದುಕಿನ ಪುಟದಲ್ಲಿವೆ. 
    ಒಮ್ಮೆ ಮಗನ ಮಾತಿಗೆ ಕಟಿಬಿದ್ದು ಸುಮಾರು ೪ ವರ್ಷಗಳ ಕಾಲ ರಂಗಕಾಯಕದಿಂದ ದೂರ ಉಳಿದಿದ್ದರು. ಆದರೆ ಸಿಂಧನೂರಿನ ಕಲಾಭಿಮಾನಿಗಳ ಮನೆಗೆ ಬಂದು ಒತ್ತಾಯ ಮಾಡಿ ಮಗನ ಅಪ್ಪಣೆಯೊಂದಿಗೆ ನಾಟಕಕ್ಕೆ ಹೋದರು.ಆದರೆ ಕೌಟುಂಬಿಕ ಸಮಸ್ಯೆಗಳಿಂದಾಗಿ ಇದ್ದ ಒಬ್ಬ ಮಗನು ಸಹ ತಮ್ಮ ಮೂರು ಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಹತರಾಗುವ ಮೂಲಕ ಅಂದಿನಿಂದ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿಯಾದರು. 
 ಬದುಕಿನ ಇಷ್ಟೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಅಭಿನಯ ಎಂದ ಕೂಡಲೇ ನಗು ನಗುತ್ತಲೇ ರಂಗಕ್ಕೆ ಬಂದು ಶ್ರದ್ಧೆಯಿಂದಲೇ ಅಭಿನಯ ತೋರುವ ಈ ಸಾಕಾರ ಮೂರ್ತಿಗೆ ಇಂದಿಗೂ ಯಾವ ಸಂಘ ಸಂಸ್ಥೆಯಮದಾಗಲಿ, ಸರ್ಕಾರದಿಂದಾಗಲಿ ಸಹಾನುಭೂತಿ ದೊರೆಯದಿರುವುದೇ ಶೋಚನೀಯ.ಇನ್ನಾದರೂ ಇಡೀ ತಮ್ಮ ಬದುಕಿನ್ನೇ ರಂಗಭೂಮಿಗೆ ಸವೆಸಿದ, ಸವೆಸುತ್ತಿರುವ ನಾಡಿನ ಮನಸ್ಸುಗಳಿಗೆ ಮುದ ನೀಡುವ ಕಾರ್ಯಗಳು ನಮ್ಮ ನಿಮ್ಮಂದಾಗಲಿ.ಅವರ ಕಲಾ ಜೀವನ ಎಲ್ಲರಿಗೂ ಮಾದರಿಯಾಗಲಿ ಎಂಬುದೇ ಈ ಲೇಖನದ ಆಶಯ.

ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ರಂಗ ಸಂಶೋಧನಾರ್ಥಿ, (ಬೆಂ.ವಿ.ವಿ.)
9379857775

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.