ರಂಗ ಮಾಲಿಕೆ -೪೫ ಹಾಸ್ಯ ಕಲಾ ಚತುರೆ 'ಎ.ವರಲಕ್ಷ್ಮಿ'

 



ಬಣ್ಣದ ಬದುಕು
ರಂಗ ಮಾಲಿಕೆ - ೪೫

ಕರ್ನಾಟಕಾಂಧ್ರದ ಹಾಸ್ಯ ಕಲಾ ಚತುರೆ ' ಬಳ್ಳಾರಿಯ ಎ.ವರಲಕ್ಷ್ಮೀ '.

ಬಾಲ್ಯ , ಹರೆಯ, ವೃದಾಪ್ಯ ,ಭಜಾರಿ, ಸೌಮ್ಯ, ಸರಳ ಹೀಗೆ ನಾನಾ ವಿಧಧ ಪಾತ್ರಗಳಿಗೆ ಹೊಂದಿಕೊಳ್ಳುವ ಶರೀರ ಮತ್ತು ಶಾರೀರ ಇರುವ ಅಭಿನೇತೃಗಳು ದೊರೆಯುವುದು ತೀರ ವಿರಳ.ಅಂತಹ ವಿರಳ ಅಭಿನೇತ್ರಿಯಲ್ಲೊಬ್ಬರು ನಮ್ಮ ಬಳ್ಳಾರಿಯ ಎ.ವರಲಕ್ಷ್ಮೀಯವರು.
   ಇವರು ಬಳ್ಳಾರಿ ನಗರದಲ್ಲಿ ಕ್ರಿ.ಶ.೧೯೫೪ ರಲ್ಲಿ ವೆಂಕಟೇಶಪ್ಪ ಮತ್ತು ಹುಲಿಗೆಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.ಇವರ ತಾಯಿ ಬಳ್ಳಾರಿಯ 'ಲಲಿತಕಲಾ  ನಾಟ್ಯ ಕಲಾ ನಾಟ್ಯ ಸಂಘ' ದ ಒಡತಿ ಬಳ್ಳಾರಿ ಲಲಿತಮ್ಮರ ಸಾಕು ಮಗಳಾಗಿದ್ದರು.ಅಲ್ಲದೆ ರಂಗಾಸಕ್ತರಾಗಿದ್ದರಿಂದ ಮಗಳಲ್ಲಿನ ರಂಗಾಸಕ್ತಿಗೆ ಪ್ರೇರಣೆ ನೀಡಿದರು.ಅಂತೆಯೇ ವರಲಕ್ಷ್ಮೀಯವರು ತಮ್ಮ ೫ನೇ ತರಗತಿ ಶಿಕ್ಷಣ ಪೂರೈಸುವ ಮೊದಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಲಲಿತಮ್ಮರ ಕಂಪನಿಯಲ್ಲಿ 'ಮಕ್ಮಲ್ ಟೋಪಿ' ನಾಟಕದ ಭಿಕ್ಷುಕಿ ಪಾತ್ರದ ಮೂಲಕ ಗುರುತಿಸಿಕೊಂಡರು.ಅಲ್ಲದೆ ಇದೇ ಕಂಪನಿಯ ಟಿಪ್ಪು ಸುಲ್ತಾನ್ ನಾಟಕದಲ್ಲಿ ಮಗನಾಗಿ, ಬ್ರೋಕರ್ ಭೀಷ್ಮಚಾರಿಯಲ್ಲಿ ಕುಮಾರಿ (ಮುದುಕಿ),ಲವಕುಶದಲ್ಲಿ ಲವನ,ಸಿದ್ಧಲಿಂಗೇಶ್ವರ ನಾಟಕದಲ್ಲಿ ಬಾಲಕನ ಪಾತ್ರದಲ್ಲಿ ಮಿಂಚುವ ಮೂಲಕ ಹಾಗೂ ತಮ್ಮ ಅಭೂತಪೂರ್ವ ನಟನೆ ಮತ್ತು ಲಲಿತಮ್ಮರ ಒಡನಾಟದಿಂದ  ಮೊದಲಿಗೆ ಮಾಂಡ್ರೆ ಕಂಪನಿಯಲ್ಲಿ ಕೆಲಕಾಲ ನಟನೆ ಮಾಡಿ ತದನಂತರ  ಬೆಳಗಾವಿಯ ಏಣಗಿ ಬಾಳಪ್ಪರ ಬೆಳಗಾವಿಯ ಶ್ರೀ  ಕಲಾವೈಭವ ನಾಟಕ ಕಂಪನಿಗೆ ಆಯ್ಕೆಯಾಗಿ 'ಮಾವ ಬಂದ್ನಪ್ಪೋ ಮಾವ' ನಾಟಕದಲ್ಲಿ ನಾಯಕಿಯಾಗಿ,ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದಲ್ಲಿ ವೀರಮ್ಮನಾಗಿ ನಂತರ ಓಂಕಾರೇಶ್ವರ ನಾಟ್ಯ ಕಲಾ ಸಂಘದ ಖಾದಿ ಸೀರೆ ನಾಟಕದಲ್ಲಿ ಬಾಲಕಿ ಹಾಗೂ ಶರಣ ಬಸವೇಶ್ವರದಲ್ಲಿ ಬಾಲ ಪಾತ್ರಗಳನ್ನು ಮಾಡಿ ಹೆಸರಾದರು.
  ಇವರ ಕುಶಲಾತ್ಮಕ ಕಲಾ ಚತುರತೆಯನ್ನು ಗಮನಿಸಿದ ಗುಬ್ಬಿ ಕಂಪನಿಯ ಮಾಲೀಕರು ಖುದ್ದಾಗಿ ಪೋನಾಯಿಸಿ ತಮ್ಮ ಕಂಪನಿಯ ನಾಟಕದಲ್ಲಿ ಅಭಿನಯಿಸಲು ಕೋರಿದರು.ಮೊದಲೇ ಗುಬ್ಬಿ ಕಂಪನಿ ಅದೊಂದು ಕಲೆಯ ಆಗರ ಅಭಿನೇತ್ರಿಗಳ ನಟನಾ ಸಾಮರ್ಥ್ಯದ ಬೆಳವಣಿಗೆಗೆ ಪೂರಕವಾದ ಸ್ಥಳ.ಹಾಗಾಗಿ ಬಾಗಿಲಿಗೆ ಬಂದ ಭಾಗ್ಯವನ್ನು ಯಾರು ತಾನೇ ಬೇಡವೆಂದಾರು.ಇವರು ಸಹ ಲಲಿತಮ್ಮರ ಮಾರ್ಗದರ್ಶನದ ಮೇರೆಗೆ ತೆರಳಿ ಕಡಿಮೆ ಸಮಯದಲ್ಲಿ ಕಂಪನಿಯ ಬಹುತೇಕ ನಾಟಕದಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದರು.ಇವರ ಪ್ರಸಿದ್ಧಿಗೆ ಪ್ರಮುಖವಾಗಿ ಇವರ ಅಭಿನಯಕ್ಕೆ ಸಾಣೆ ಹಿಡಿದ ರಂಗಗುರು ಅಚ್ಯುತ್ ರಾವ್ ರನ್ನು ಇಂದಿಗೂ ಹೃನ್ಮನದಲ್ಲಿ ಸ್ಮರಿಸಿಕೊಳ್ಳುತ್ತಾರೆ.ಇಲ್ಲಿ ಅನೇಕ ವರ್ಷಗಳ ಕಾಲ ಕಲಾ ಸೇವೆ ಮಾಡಿ ನಂತರ ಚಿಂದೋಡಿ ಲೀಲಾರ ಕೆ.ಬಿ.ಆರ್ ಡ್ರಾಮಾ ಕಂಪನಿಗೆ ಸೇರಿದರು.ಅಲ್ಲಿಯೂ ೨ ವರ್ಷ ಅಭಿನಯದ ಔತಣ ಉಣಬಡಿಸಿ ನಂತರ ಅಷ್ಟೋತ್ತಿಗೆ ನಟನೆಯಲ್ಲಿ ಪಳಗಿ ಹುಟ್ಟೂರಿನತ್ತ ಮನ ಸೆಳೆಯುತ್ತಿತ್ತು.ಅಂತೆಯೇ ಬಳ್ಳಾರಿಗೆ ಬಂದರು.
  ಇಲ್ಲಿನ ಅನೇಕ ಅಮೆಚೂರ್ ನಾಟಕ ಮಂಡಳಿಗಳಲ್ಲಿ ಭಾಗವಹಿಸಿ ರಕ್ತರಾತ್ರಿಯಲ್ಲಿ ಬಾನುಮತಿ,ಉತ್ತರೆ,ಮದಹಂಸಿ, ಕುರುಕ್ಷೇತ್ರದಲ್ಲಿ ದ್ರೌಪದಿ, ರುಕ್ಮಿಣಿ, ಭಕ್ತ ಸುದನ್ವದಲ್ಲಿ ಪ್ರಭಾವತಿ, ವೀರ ಅಭಿಮನ್ಯು ದಲ್ಲಿ ಉತ್ತರೆ,ಸೌದಾಮಿನಿ, ರತ್ನಮಾಂಗಲ್ಯದಲ್ಲಿ ಮಾಳಿ, ಅಣ್ಣ ತಂಗಿಯಲ್ಲಿ ಗೌರಿ, ಬಸ್ ಕಂಡೆಕ್ಟರ್ ನಲ್ಲಿ ಚೆನ್ನಿ, ಆದರ್ಶ ಪ್ರೇಮದಲ್ಲಿ ನಾಗಿ, ತಾಳಿಯ ತಕರಾರು ನಾಟಕದಲ್ಲಿ ತಾಯಮ್ಮ, ಹೇಮರೆಡ್ಡಿ ಮಲ್ಲಮ್ಮ ದಲ್ಲಿ ನಾಗಮ್ಮ ,ಮಹಾದೇವಿ, ಚಿತ್ತರಂಜಿನಿ, ಆಶಾಲತಾದಲ್ಲಿ ಲತಾ, ಟಿಪ್ಪು ಸುಲ್ತಾನ್ ದಲ್ಲಿ ಜಯಂತಿ, ನಮ್ಮೊಳಗೊಬ್ಬ ನಾಜೂಕಯ್ಯದಲ್ಲಿ ಮಾಲತಿ, ಕೂಸಿಮಗದಾಸದಲ್ಲಿ ಹರಳಮ್ಮ, ಹುಡುಗಿ ಹಿಂಗ್ಯಾಕಾತುದಲ್ಲಿ ಶಕುಂತಲ ಹೀಗೆ ಅನೇಕ ಸಾಮಾಜಿಕ, ವೃತ್ತಿಪರ, ಹವ್ಯಾಸಿ ರಂಗಭೂಮಿಯ ಹಾಸ್ಯ, ರೌದ್ರ ನಾನಾ ಬಗೆಯ ನಾಟಕಗಳಲ್ಲಿ ಅಭಿನಯಿಸಿ ತಮ್ಮ ಕಲಾರಂಜನೆಯನ್ನು ಕಲಾ ರಸಿಕರಿಗೆ ಉಣಬಡಿಸಿದ್ದಾರೆ.
  ಇದಲ್ಲದೇ ಬಾಲ ನಾಗಮ್ಮದಲ್ಲಿ ಲಚ್ಚಿ, ರಂಜನಿ, ಸಾರಂಗದರದಲ್ಲಿ ಮಹಾರಾಣಿ, ಪೊಲರಂಗಡು,ಪಲ್ಲಕ್ಕಿ, ಇದೇಮಿಟಿ ಎಂಬ ನಾನಾ ತೆಲುಗು ನಾಟಕಗಳಲ್ಲಿ ಕಥಾ ನಾಯಕಿಯಾಗಿ ದ್ವಿಭಾಷಾ ಕಲಾ ಚತುರೆ ಎಂದು ಹೆಸರಾಗಿದ್ದಾರೆ.ಆದರೆ ಚಿಕ್ಕನಕೊಪ್ಪ ಶರಣರ ಬಳಗದ ಹೇಮರೆಡ್ಡಿ ಮಲ್ಲಮ್ಮ ನಾಟಕದ ನೂರಾರು ಪ್ರಯೋಗಗಳು ಇವರಿಗೆ ಆತ್ಮತೃಪ್ತಿ ನೀಡಿದ ಹಲವು ನಾಟಕಗಳಲ್ಲಿ ಅಗ್ರ ಸ್ಥಾನದ್ದಾಗಿದೆ ಎಂದು ಇಂದಿಗೂ ಸ್ಮರಿಸುತ್ತಾರೆ.
   ಇವರ ಸರಳ ನಟನೆ, ಕಂಚಿನ ಕಂಠ ಮತ್ತು ಅಪರೂಪದ ವ್ಯಕ್ತಿತ್ವದ ಮೂಲಕ ಇಂದಿಗೂ ಕಲಾ ರಸಿರಕರೆದೆಯಲ್ಲಿ ಮನೆ ಮಾಡಿದ ಇವರ ಕಲಾ ನೈಪುಣ್ಯತೆಯನ್ನು ಮೆಚ್ಚಿದ ಹಲವು ಸಂಘ ಸಂಸ್ಥೆಗಳು ಇವರಿಗೆ  ಮೈಸೂರು ದಸರಾ ಪ್ರಶಸ್ತಿ, ದುರ್ಗಾಂಬ ಕಲಾ ಸಂಘದಿಂದ 'ಹಾಸ್ಯ ಕಲಾ ಚತುರೆ' ಬಿರುದು, ಕನ್ನಡ ಸಂಸ್ಕೃತಿ ಇಲಾಖೆಯಿಂದ ಅತ್ಯುತ್ತಮ ನಟಿ ಪ್ರಶಸ್ತಿ, ೨೦೦೨ರಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ, ೨೦೧೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೧೮ರಲ್ಲಿ ಶ್ರೀ ಚನ್ನವೀರ ಶರಣರ ಬಳಗದಿಂದ ಶರಣಶ್ರೀ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ೩ ವರ್ಷ ರಂಗಕಾಯಕ ಮಾಡಿದ್ದಾರೆ.
  ಇವರ ಕಲೆಗೆ ಪ್ರಮುಖವಾಗಿ ಪ್ರೋತ್ಸಾಹ ನೀಡಿ ಇಂದಿಗೂ ಹುರಿದುಂಬಿಸಿದ ಪತಿ ಎ.ಬಸವರಾಜ್ ಪಾಟೀಲ್ ಹಾಗೂ ಮಕ್ಕಳನ್ನು ನೆನೆಯುತ್ತಾರೆ.ಇದರ ನಡುವೆ ನಾವು ನೀವು ಇಂತಹ ಕರ್ನಾಟಕಾಂಧ್ರದ ಕಲಾ ಚತುರೆಯ ಕಲಾ ಪ್ರೇಮದ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯೊಣ ಎನ್ನುತ್ತಾ ನನ್ನಿ ಲೇಖನಕ್ಕೆ ವಿರಾಮ ಹೇಳುತ್ತೇನೆ.

ಲೇಖನ 
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ರಂಗ ಸಂಶೋಧನಾರ್ಥಿ, (ಬೆಂ.ವಿ.ವಿ)
9379857775

  

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.