ರಂಗ ಮಾಲಿಕೆ -೪೪ ಬಳ್ಳಾರಿ ಬಯಲಾಟದ ರಂಗ ನಾಯಕಿ 'ಕಪ್ಪಗಲ್ ಪದ್ಮಮ್ಮ'


 ಬಣ್ಣದ ಬದುಕು

ರಂಗ ಮಾಲಿಕೆ -೪೪


 ಬಳ್ಳಾರಿ ಬಯಲಾಟದ ರಂಗನಾಯಕಿ 'ಕಪ್ಪಗಲ್ ಪದ್ಮಮ್ಮ'


ಜಾತಿ ಕೆಲವರನ್ನು ಮೇಲಾಗಿಸಿದರೆ,ಇನ್ನೂ ಕೆಲವರನ್ನು ಕೀಳಾಗಿಸುತ್ತದೆ.ಆದರೆ ಜಾತಿಯಿಂದ ಪ್ರಾದೇಶಿಕವಾಗಿ ಕೀಳಾಗಿದ್ದರೂ ರಂಗಕಲೆಯ ಮೂಲಕ ತುಳಿದವರ ನಡುವಲ್ಲಿ ಎದ್ದು ನಿಂತು ಅರಳಿ ಇಡೀ ನಾಡಿಗೆ ರಂಗ ಸುವಾಸನೆ ಬೀರಿದ ಕೆಲವರಲ್ಲಿ ಕೆಲವರು ' ಕಪ್ಪಗಲ್ ಪದ್ಮಮ್ಮ'.ಕೇವಲ ತಮ್ಮ ನಟನೆಯಿಂದಲೇ ನಾಡಿನ ಶ್ರೇಷ್ಠ ಪ್ರಶಸ್ತಿಯಲ್ಲೊಂದಾದ 'ನಾಡೋಜ' ಪ್ರಶಸ್ತಿಯನ್ನೂ ಪಡೆದು ಇಡೀ ನಾಡಿಗೆ ಮಾದರಿ ಎನಿಸಿದ್ದಾರೆ. 

   ಇವರು ಕ್ರಿ.ಶ.೧೯೪೧ರಲ್ಲಿ ಆಗಿನ ಕಾಲದ ಶ್ರೇಷ್ಠ ಬಯಲಾಟ ರಂಗನಟಿಯರಲ್ಲೊಬ್ಬರಾಗಿದ್ದ ಗಂಗಮ್ಮರ ಮಗಳಾಗಿ ಜನಿಸಿದರು. ವರ್ಷದ ಎಲ್ಲ ದಿನಗಳು ಬಯಲಾಟಕ್ಕೋಗಿ ಕೇವಲ ಮೊಹರಂ ದಿನದಂದು ಮನೆಗೆ ಬಂದು ಮಕ್ಕಳಿಗೆ ಪ್ರೀತಿ ಹಂಚುತ್ತಿದ್ದ ಗಂಗಮ್ಮರ ಕಲಾರಾಧನೆಯೇ ಮಗಳು ಪದ್ಮಮ್ಮರಲ್ಲಿ ರಂಗಾಸಕ್ತಿ ಮೂಡಲು ಪ್ರಮುಖ ಕಾರಣ.ಇದಲ್ಲದೇ ಇವರು ತಮ್ಮ ವಿದ್ಯಾಭ್ಯಾಸವನ್ನು ೪ ನೇ ತರಗತಿಯವರೆಗೆ ಹುಟ್ಟೂರಿನಲ್ಲಿ ಮುಗಿಸಿ.ನಂತರ ತಮ್ಮ ತಾಯಿಯ ಮತ್ತು ಅಜ್ಜಿ  ಉಳ್ಳಮ್ಮರ ಅಭಿನಯ ಚತುರತೆಯನ್ನು ನೋಡುತ್ತಲೇ ಅವಿರ್ಭವಿಸಿಕೊಂಡರು.ಅಂತೆಯೇ ಸಂಸಾರದ ಹೊರೆಯನ್ನು ತೂಗಿಸಲೆಂದು ಹಾಗೂ ರಂಗ ಗುರು ಕಪ್ಪಗಲ್ ಯರ್ರಿಬಸಪ್ಪ ಮತ್ತು ಪರಮೇಶ್ವರಪ್ಪ ಪ್ರೋತ್ಸಾಹದಿಂದಾಗಿ 'ಶಶಿರೇಖಾ ಭರಣ' ಎಂಬ ಬಯಲಾಟದಲ್ಲಿ ೧೬ನೇ ವಯಸ್ಸಿಗೆ ಬಣ್ಣ ಹಚ್ಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅಲ್ಲಿಂದ ಸುಮಾರು ೪೫ ವರ್ಷಗಳವರೆಗೆ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ.

   ಸರಳ ವ್ಯಕ್ತಿತ್ವ ಮತ್ತು ಕಾರರುವಕ್ಕಾದ ಅಭಿನಯದ ಸೂಕ್ಷತೆಯಿಂದಲೇ ಬಹುಬೇಗನೆ ಕಲಾ ರಸಿಕರ ಅರಸಿಯಾದರು.೧೬ ರ ಪ್ರಾಯದಿಂದ ಮುಪ್ಪಿನವರೆಗೂ ಕರ್ನಾಟಕದ ಬಳ್ಳಾರಿ, ಕೂಡ್ಲಿಗಿ, ಹೊಸಪೇಟೆ ,ರಾಯಚೂರು ಮತ್ತು ಆಂಧ್ರಪ್ರದೇಶದ ಗಡಿಭಾಗದ ಗೂಳ್ಯಂ, ಚಿಂತಕುಂಟ,ಬಾಪೂರ,ಹಾವಳಗಿ,ಪಾಲ್ತೂರು ಹೀಗೆ ನೂರಾರು ಹಳ್ಳಿ ಹಳ್ಳಿಗೂ ಸಂಚರಿಸಿ ಸುಮಾರು ೩೦೦೦ ಕ್ಕೂ ಹೆಚ್ಚು ಬಯಲಾಟಗಳಲ್ಲಿ ಅಭಿನಯಿಸಿ 'ಬಯಲಾಟದ ರಂಗನಾಯಕಿ' ಎನಿಸಿದ್ದಾರೆ. 

    ಅಲ್ಲದೆ ಕೇವಲ ೩೦ ಸಂಭಾವನೆಯ ಮೂಲಕ ಆರಂಭವಾದ ಬಣ್ಣದ ಬದುಕು ಕೊನೆಗಾಲಕ್ಕೆ ೧೫೦೦/೨೦೦೦ ರೂಪಾಯಿಗೆ ತಲುಪಿತ್ತು.ಹಚ್ಚಹಸಿರಾಗಿದ್ದ ಕಲಾರಸಿಕರೆದಯಲ್ಲಿ ಅರಳಿದ್ದ ಕಲಾ ಪಾರಿಜಾತೆ ಪದ್ಮಮ್ಮನವರು ಹರೆ ಕಳೆಯುವ ಮುನ್ನವೇ ಅಭಿನಯಕ್ಕೆ ಸ್ವಯಂ ನಿವೃತ್ತಿ ಹೇಳಿ ರಸಿಕರಿಗೆ ರಸಭಂಗವನ್ನುಂಟು ಮಾಡಿದ್ದರು.ಆದರೆ ತಮ್ಮ ಇಳಿಗಾಲದವರೆಗೂ ಯಾರೇ ಕರೆದರೂ ಹೋದಲ್ಲೆಲ್ಲ ಮಾತಾನಾಡಿದೇ ಕೇವಲ ತಮ್ಮ ಸುಶ್ರಾವ್ಯ ಕಂಠದ ಮೂಲಕ ರಂಗಗೀತೆ ಹಾಡುತ್ತಿದ್ದರು.ಹೀಗೆ ಸುಮಾರು ಸಾವಿರಕ್ಕೂ ಹೆಚ್ಚು ರಂಗಗೀತೆಗಳು ಹಾಗೂ ನಿರರ್ಗಳವಾಗಿ ಹೇಳುವ ಸಾವಿರಾರು ಹಳಗನ್ನಡದ ಸಂಭಾಷಣೆಗಳು ಯಾವಾಗಲೂ ಅವರ ಸ್ಮೃತಿಪಟಲದಲ್ಲಿ ಮೇಳೈಸಿದ್ದವು.

   ಅಂದಿನ ಸೀಮೆ ಎಣ್ಣೆ ದೀಪದ ಬೆಳಕಲ್ಲಿ  ಬಣ್ಣ ಹಚ್ಚಿ, ಬಿಜಿಲಿ (ಪೆಟ್ರೋಮ್ಯಾಕ್ಸ್) ಬೆಳಕಿಲ್ಲಿ ನಟನೆ ಮಾಡಲಾರಂಭಿಸಿದ ಪದ್ಮಮ್ಮನವರು ಪಾಂಡು ವಿಜಯದ ದ್ರೌಪದಿ,ಗಿರಿಜಾ ಕಲ್ಯಾಣದ ರತಿ, ರಾಮಾಯಣದ ಸೀತೆ,ಅಭಿಮನ್ಯು ಕಾಳಗದ ಸುಭದ್ರಾ,ಕರ್ಣಾರ್ಜುನರ ಕಾಳಗದ ಕುಂತಿ,ಸುಂದೋಪ ಸುಂದರದ ರಂಭಾ ಹೀಗೆ ಸಾವಿರಾರು ಪ್ರದರ್ಶನಗಳಲ್ಲಿ ನೂರಾರು ಪಾತ್ರಗಳನ್ನು ಮಾಡಿ ಮನೋಜ್ಞ ಅಭಿನೇತ್ರಿ ಎನಿಸಿದ್ದಲ್ಲದೇ, ಕೇವಲ ರಂಗಕಲೆಯೊಂದರಿಂದಲೇ ೧೧ ಜನ ಗಂಡು ಹಾಗೂ ಒಬ್ಬ ಹೆಣ್ಣು ಮಗುವನ್ನು ಸಾಕಿ ಸಾಕ್ಷಾರರನ್ನಾಗಿಸಿದ ದಿಟ್ಟ ಮಹಿಳೆಯೂ ಸಹ ಎನಿಸಿದ್ದಾರೆ.

   ಇವರ ಕಲಾನೈಪುಣ್ಯತೆಯನ್ನು ಗುರುತಿಸಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಹಾಗೂ ಬೆಳಗಾವಿ ರುದ್ರಾಕ್ಷಿ ಮಠದಿಂದ ಸನ್ಮಾನ, ೨೦೦೨ ರಲ್ಲಿ ಜ್ಞಾನ ವಿಜ್ಞಾನ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ೨೦೦೪ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೨೦೦೨ರಲ್ಲಿ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ,೨೦೦೮-೦೯ರಲ್ಲಿ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ,  ಹಂಪಿ ವಿವಿಯಿಂದ ನೀಡಲಾಗುವ ಪ್ರತಿಷ್ಠಿತ 'ನಾಡೋಜ' ಪ್ರಶಸ್ತಿ ಹೀಗೆ ರಾಜ್ಯದ ಹತ್ತಾರು ಸಂಸ್ಥೆಗಳಿಂದ ಹಲವಾರು ಗೌರವ ಪುರಸ್ಕಾರಗಳು ಅವರ ಮಡಿಲು ಸೇರಿ ಶ್ರೇಷ್ಠತೆಯನ್ನು ಗಳಿಸಿವೆ.

  ಇಂತಹ ಮೇರು ಪ್ರತಿಭಾ ಸಂಪನ್ನರು ತಮ್ಮ ರಂಗಕಾಯಕದ ಮೂಲಕ ಸಂಪಾದಿಸಿದ್ದ ಕಲಾರಸಿಕರನ್ನು ತೊರೆದು ೨೯ ನವೆಂಬರ್ ೨೦೨೧ರಂದು ಬಾರದ ಲೋಕಕ್ಕೆ ಮರಳಿ ಬಳ್ಳಾರಿಯ ಬಯಲಾಟ ಪರಂಪರೆಯನ್ನು ಬಡವಾಗಿಸಿದರು.ಪದ್ಮಮ್ಮರ ಸರಳ ವ್ಯಕ್ತಿತ್ವದ ರಂಗ ಕಾಯಕ ಮುಂದಿನ ಪೀಳಿಗೆಯ ಎಲ್ಲರಿಗೂ ಮಾದರಿಯಾಗಿರಲಿ ಎಂಬುದೇ ನನ್ನೀ ಲೇಖನದ ಆಶಯ.


ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ರಂಗ ಸಂಶೋಧನಾರ್ಥಿ,

manjuamazing7@gmail.com

9379857775.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.