ರಂಗ ಮಾಲಿಕೆ - ೪೨ ಉಭಯ ರಂಗಭೂಮಿಯ ಧೃವತಾರೆ "ಅದವಾನಿ ಲಕ್ಷ್ಮೀದೇವಿ"
ಬಣ್ಣದ ಬದುಕು
ರಂಗ ಮಾಲಿಕೆ -42
ಉಭಯ ರಂಗಭೂಮಿಯ ಧೃವತಾರೆ "ಅದವಾನಿ ಲಕ್ಷ್ಮೀದೇವಿ"
ರಂಗಭೂಮಿಯ ಹಿನ್ನೆಲೆಯಿಂದ ಕನ್ನಡ ರಂಗಭೂಮಿಗೆ ಬಂದ ಅನೇಕ ಕಲಾವಿದರು ಕನ್ನಡಿಗರನ್ನೂ ನಾಚಿಸುವಷ್ಟು ಅತ್ಯಾಕರ್ಷಕವಾಗಿ ಕನ್ನಡ ನುಡಿಯುವ ಮತ್ತು ಈ ನಾಡಿನ ಬಗ್ಗೆ ಅಪಾರ ಅಭಿಮಾನ ತೋರುವ ಮನಸ್ಸುಗಳನ್ನು ನಾವು ನೀವು ನೋಡಿದ್ದೇವೆ,ನಾಚಿದ್ದೇವೆ.ಅಂತವರ ಸಾಲಿನಲ್ಲಿ ನಿಲ್ಲಬಲ್ಲ ಬಳ್ಳಾರಿ ರಂಗಭೂಮಿ ಇತಿಹಾಸದಲ್ಲಿ ಆ ಬಗೆಯ ಸಂಚಲನ ಮೂಡಿಸಿದ ನಟರಲ್ಲಿ ಓರ್ವರೆಂದರೆ ಅದವಾನಿ ಲಕ್ಷ್ಮೀದೇವಿ.
ಇವರು ಮೂಲತಃ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದವಾನಿಯವರಾಗಿದ್ದರಿಂದ ಇವರನ್ನು 'ಅದವಾನಿ ಲಕ್ಷ್ಮೀದೇವಿ' ಎಂದೇ ಖ್ಯಾತರಾದರು. ಇವರು ತಮ್ಮ ಬಾಲ್ಯದಲ್ಲಿ ನಟನೆಗಿಂತಲೂ ಸಂಗೀತದ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ರಂಗ ಸಂಗೀತದ ಜೀವಾಳವಾಗಿದ್ದ ಸಿಡಿಗಿನಮೊಳ ಚಂದ್ರಯ್ಯನವರಲ್ಲಿ ಸಂಗೀತ ಕಲಿತಿದ್ದರು.ಇದಲ್ಲದೇ ಇವರ ಸಹೋದರಿ ರಂಗನಟಿಯಾಗಿದ್ದರಿಂದ ಅವರ ಹಿಂದೆ ನಾಟಕಗಳಿಗೆ ಹೋಗುತ್ತಿದ್ದರು.ಆಗ ದೃಶ್ಯ ಬದಲಾವಣೆ ಸಂದರ್ಭದಲ್ಲಿ ತಡವಾದರೆ ಜನರ ಕೂಗಾಟ ಗಲಾಟೆಗಳನ್ನು ನಿಯಂತ್ರಿಸುವ ಸಲುವಾಗಿ ಇವರನ್ನು ಮೊದಲ ಬಾರಿಗೆ ಹಾಡಲು ಬಿಟ್ಟರು. ಇವರ ಸುಶ್ರವ್ಯ ಕಂಠಕ್ಕೆ ಮಾರುಹೋದರು.ಅದಲ್ಲದೇ ಅಕ್ಕನ ಹಿಂದೆ ಹೋದ ಕಡೆಯಲೆಲ್ಲ ಹಾಡಲು ಕೇಳುತ್ತಿದ್ದರು.ಹೀಗೆ ಹಾಡುತ್ತಾ ಒಮ್ಮೆ ಗುರು ಚಂದ್ರಯ್ಯನವರ ನೇತೃತ್ವದಲ್ಲಿ ಏಳನೇ ವಯಸ್ಸಿನ ದೇವಿಯವರಿಗೆ 'ಕೃಷ್ಣ ಗಾರುಡಿ' ನಾಟಕದ ಪಾತ್ರಕ್ಕಾಗಿ ಬಣ್ಣ ಹಚ್ಚಿದರು.ಆ ಮೂಲಕ ಜೋಳದ ರಾಶಿ ದೊಡ್ಡನಗೌಡರು, ರುದ್ರಮ್ಮನಂತಹ ಕಲಾವಿದರೊಂದಿಗೆ ಅಭಿನಯಿಸಿ ಹೆಸರಾದರು.
ಕಾಲಕ್ರಮೇಣ ಪ್ರಬುದ್ಧರಾದಂತೆ ಅನೇಕ ಅವಕಾಶಗಳು ಬಾಗಿಲಿಗೆ ಬಂದವು.ಅಂತೆಯೇ ಕುರುಕ್ಷೇತ್ರ, ರಕ್ತರಾತ್ರಿಯಂತಹ ಪ್ರಸಿದ್ದ ನಾಟಕಗಳ ರುಕ್ಮಿಣಿ,ಉತ್ತರೆ ಪಾತ್ರಗಳಿಗೆ ಇವರೇ ಬೇಕು ಎಂದು ಅಭಿಮಾನಿ ಪಟ್ಟು ಹಿಡಿಯುವಂತೆ ಮಾಡಿದ್ದು ಇವರ ಕಲಾ ನೈಪುಣ್ಯತೆಗೊಂದು ಉದಾಹರಣೆ. ಹೀಗೆ ಅನೇಕ ನಾಟಕಗಳ ಪ್ರಸಿದ್ಧತೆಯಿಂದ ಗುಬ್ಬಿ ಕಂಪನಿಯ ಪಾಲಾದರು.ಅಲ್ಲಿಯು ಉತ್ತಮ ಅಭಿನೇತ್ರಿಯಾಗಿ ಮಿಂಚಿದರು.ಅಲ್ಲದೆ ಆಂಧ್ರ ಕರ್ನಾಟಕದ ಗಡಿಭಾಗದ ಕಲಾ ರಸಿಕರಿಗೆ ಲಕ್ಷ್ಮೀದೇವಿ ಬರ್ತಾ ಇದ್ದಾರೆಂದರೆ ಅವತ್ತು ನಾಟಕದ ವ್ಯವಸ್ಥಾಪಕರಿಗೆ ಭರಪೂರದ ಕಲೆಕ್ಷನ್ ಆಗುತ್ತಿತ್ತು.
ಮುಂದೆ ಇವರ ಇದೇ ಪ್ರಸಿದ್ಧಿ ಇವರನ್ನು ಗುಬ್ಬಿ ಕಂಪನಿಯಿಂದ ೧೯೫೬ರಲ್ಲಿ 'ಭಕ್ತ ವಿಜಯ' ಕನ್ನಡ ಸಿನಿಮಾಗೆ ಕರೆತಂದಿತು.ಇಲ್ಲಿ ಡಾ.ರಾಜ್, ಎಂ.ವಿ.ರಾಜಮ್ಮರಂತಹ ಮಹಾನ್ ನಟರ ಜೊತೆ ಅದ್ಭುತವಾಗಿ ಅಭಿನಯಿಸಿ ಹೆಸರಾದರು. ನಂತರ ಇವರ ಚತುರತೆಯ ಅಭಿನಯದ ಮೂಲಕ ಯಾವುದೇ ಪಾತ್ರವಾಗಲಿ,ಸಮಯವಾಗಲಿ ತುಂಬು ಮನದಿಂದಲೇ ಅಸ್ವಾಧಿಸುವ ಗುಣದಿಂದಲೇ ಸಾಲು ಸಾಲು ಚಿತ್ರಗಳು ಇವರನ್ನು ಅರಸಿ ಮನೆ ಬಾಗಿಲಿಗೆ ಬಂದವು.ಅಂತೆಯೇ ‘ಶುಕ್ರದೆಸೆ’ ‘ಮನೆತುಂಬಿದ ಹೆಣ್ಣು’ , ‘ಮಂಗಳಸೂತ್ರ’, ‘ದಶಾವತಾರ’, ‘ಕಲಿತರೂ ಹೆಣ್ಣೆ’, ‘ಶ್ರೀ ರಾಮಾಂಜನೇಯ ಯುದ್ಧ’, ‘ವೀರಸಂಕಲ್ಪ’ ಮುಂತಾದ ಚಿತ್ರಗಳಲ್ಲಿ ರಾಜ್ ಮತ್ತು ಇತರರಿಗೆ ನಾಯಕಿಯಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದರು. ಇದಲ್ಲದೇ ‘ತೇಜಸ್ವಿನಿ’ ‘ಚಂದವಳ್ಳಿಯ ತೋಟ’, ‘ಕರುಣೆಯೇ ಕುಟುಂಬದ ಕಣ್ಣು’ ಇತ್ಯಾದಿ ಚಿತ್ರಗಳಲ್ಲಿ ಉಪ ನಾಯಕಿಯಾಗಿ ನಟಿಸಿದರು.ರಾಜ್ ಅವರೊಂದಿಗೆ ಮೂವತ್ತೊಂದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ತಾಯಿ, ಅತ್ತೆ, ಅತ್ತಿಗೆ ಮುಂತಾದ ವೈವಿದ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ 60-70ರ ದಶಕದ ಜನಪ್ರಿಯ ಕಲಾವಿದೆಯೆನಿಸಿದರು.
ರಂಗಭೂಮಿ ಹಿನ್ನಲೆಯಿಂದ ಬಂದಿದ್ದ ಇವರು ಸಿನಿರಂಗದ ಒತ್ತಡ,ಒತ್ತಾಯಗಳಿಗೆ ಮಣಿಯದೇ ಸಾದಾ ಅಭಿನಯ ಮತ್ತು ಸರಳ ವ್ಯಕ್ತಿತ್ವದ ನಡೆಯ ಮೂಲಕ ಸಿನಿ ರಂಗದ ಎಲ್ಲರ ಮನ ಗೆದ್ದಿದ್ದರು.ಅದವಾನಿಯಂತಹ ಗಡಿನಾಡಿನಿಂದ ಬಂದು ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದು ಸಾಹಸವೇ ಸರಿ.ಇವರ ೧೯೫೬ ರಿಂದ ೨೦೦೩ವರೆಗಿನ ರಂಗ ಪಯಣದಲ್ಲಿ ಒಟ್ಟು150ಕ್ಕೂ ಹೆಚ್ಚು ಕನ್ನಡ ಹಾಗೂ 15ಕ್ಕೂ ಹೆಚ್ಚು ತೆಲಗು, ಎರಡು ತಮಿಳು ಚಲನಚಿತ್ರಚಿತ್ರಗಳಲ್ಲಿ ಅಭಿನಯಿಸಿ ಮೂರು ರಾಜ್ಯದ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ.
ಇವರ ರಂಗ ಸಾಧನೆಯನ್ನು ಗುರುತಿಸಿ ೧೯೭೩-೭೪ರಲ್ಲಿ “ಗಂಧದ ಗುಡಿ” ಚಿತ್ರದಲ್ಲಿನ ಮಮತಾಮಯಿ ತಾಯಿಯ ಪಾತ್ರಕ್ಕೆ ರಾಜ್ಯ ಸರ್ಕಾರದ ಪೋಷಕ ನಟಿ ಪ್ರಶಸ್ತಿ, ೨೦೧೬ರಲ್ಲಿ ಇವರ ಜೀವಮಾನದ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ ಡಾ.ರಾಜಕುಮಾರ್ ಪ್ರಶಸ್ತಿ ಹಾಗೂ ೨೦೧೭ರಲ್ಲಿ ಇವರ ಉಭಯರಂಗ ಸಾಧನೆಯನ್ನು ಗುರುತಿಸಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಎಂ.ವಿ.ರಾಜಮ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.ಇದಲ್ಲದೇ ಅನೇಕ ಕಲಾಭಿಮಾನಿಗಳಿಂದ ರಂಗಭೂಮಿಯ ರಾಣಿ, ಕಲಾದೇವತೆ, ಮಮತಾಮಾಯಿ ಹೀಗೆ ನಾನಾ ಬಿರುದುಗಳು ಪಡೆದಿರುವುದನ್ನು ಕಾಣಬಹುದು.
"ನೂಲಿನಂತೆ ಸೀರೆ ತಾಯಿಯಂತೆ ಮಗಳು" ಎಂಬಂತೆ ಇವರ ಏಕೈಕ ಪುತ್ರಿ ರೂಪಾದೇವಿಯು ಸಹ ತಂದೆ ರಾಮಯ್ಯ ಮತ್ತು ಲಕ್ಷ್ಮೀದೇವಿಯವರ ಮಾತನ್ನು ದಿಕ್ಕರಿಸಿ ಎಷ್ಟೇ ಬೇಡವೆಂದರೂ ಸಿನಿರಂಗದೆಡೆಗೆ ಒರಳಿ ಅನೇಕ ಚಿತ್ರಗಳಲ್ಲಿ ಅಮ್ಮನಂತೆ ಮಗಳು ಸಹ ಪ್ರಸಿಧ್ಧತೆ ಹೊಂದಿದ್ದಾರೆ.
ಇಂತಹ ಅನನ್ಯ ಸರಳ ವ್ಯಕ್ತಿತ್ವ ಮತ್ತು ಅದ್ಭುತ ನಟನೆಯ ಮೂಲಕ ಉಭಯ ರಂಗಭೂಮಿಯಲ್ಲಿ ಹೆಸರು ಪಡೆದ ಅದವಾನಿ ಲಕ್ಷ್ಮೀದೇವಿಯವರು ಬಳ್ಳಾರಿ ರಂಗಭೂಮಿ ಇತಿಹಾಸದಲ್ಲಿ ಮರೀಚಿಕೆಯಾಗಿರುವುದೇ ವಿಷಾಧನೀಯ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ರಂಗ ಸಂಶೋಧನಾರ್ಥಿ
manjuamazing7@gmail.com
9379857775

Comments
Post a Comment