ರಂಗ ಮಾಲಿಕೆ -೪೧ ಮಾದರಿಯ ಬಯಲಾಟದ ಮೇಷ್ಟ್ರು "ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ"
ಬಣ್ಣದ ಬದುಕು
ರಂಗ ಮಾಲಿಕೆ - ೪೧
ಮಾದರಿಯ ಬಯಲಾಟದ ಮೇಷ್ಟ್ರು " ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ ".
ಬಯಲಾಟ ಎಂದರೆ ಕೇವಲ ಬಯಲಲ್ಲಿ ಆಡುವ ಗ್ರಾಮೀಣ ಭಾಗದ ಆಟವಲ್ಲ.ಬದಲಾಗಿ ಅದು ಎಲ್ಲ ರಂಗಭೂಮಿಯ ತಾಯಿ ಎಂದರೂ ತಪ್ಪಾಗಲಾರದು.ಇದು ಇಂದು ಜಾಗತೀಕರಣದ ನೆಪದಲ್ಲಿ ಅವಸಾನದ ಅಂಚಿಗೆ ಸರಿಯುತ್ತಿದೆ.ಅಂತೆಯೇ ಬಯಲಾಟ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಕಟ್ಟಿ ಬೆಳೆಸುವ ಮನೋಭಾವದಿಂದ ದುಡಿಯುತ್ತಿರುವ ಕೆಲವರಲ್ಲಿ ಒಬ್ಬರು ಮುದ್ದಟನೂರು ಹೆಚ್.ತಿಪ್ಪೇಸ್ವಾಮಿ.
ಇವರು ೨೦.೦೭.೧೯೭೮ ರಂದು ಹಾರ್ಮೋನಿಯಂ ಕಲಾವಿದ ಹೆಚ್.ಪಂಪಾಪತಿ ಮತ್ತು ರುದ್ರಮ್ಮರ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರಿನಲ್ಲಿ ಜನಿಸಿದರು.ಓದಿದ್ದು ೧೦ನೇ ತರಗತಿಯವರೆಗೆ ಮಾತ್ರ.ನಂತರ ಅಪ್ಪನ ಅಣತಿಯಂತೆ ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ೭ ವರ್ಷಗಳ ಕಾಲ ಹಿಂದೂಸ್ತಾನಿ ಸಂಗೀತದಲ್ಲಿ ಜೂನಿಯರ್,ಸೀನಿಯರ್ ವಿದ್ಯೆಯನ್ನು ಗುರುಗಳಾದ ಇಟಗಿ ವಿರೂಪಾಕ್ಷ ಮತ್ತು ರವೀಂದ್ರ ಹಂದಿಗನೂರರ ಬಳಿ ಕಲಿತರು.ಕೇವಲ ಸಂಗೀತದತ್ತ ಓಲಬೇಕಿದ್ದ ತಿಪ್ಪೇಸ್ವಾಮಿಯವರು ಬಯಲಾಟದ ನಟನೆಯತ್ತಲು ಇವರ ಚಿತ್ತ ಹರಿಯಲು ಪ್ರಮುಖ ಕಾರಣವೇ ಇವರ ರಂಗ ಗುರು ತಂದೆ ಹೆಚ್.ಪಂಪಾಪತಿ.ಅಪ್ಪನ ಕಲೆಯೇ ಅತಿಯಾಗಿ ಅಕರ್ಷಿಸಿದ್ದರಿಂದ ಸಾಂಪ್ರದಾಯಿಕ ವಿದ್ಯೆ ನೈವೇದ್ಯವಾಯಿತು.ಭತ್ತದ ನಾಡಲ್ಲಿ ಸಾಂಸ್ಕೃತಿಕ ಪರಂಪರೆ ಬತ್ತುವ ಮುನ್ನವೇ ಮತ್ತೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಆಶ್ರಮದಿಂದ ಅಜ್ಜರ ಆಶೀರ್ವಾದೊಂದಿಗೆ ಬಂದ ಇವರು ೧೯೯೪ ರಲ್ಲಿ ತಮ್ಮ ೧೯ ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಹಾವಿನಾಳು ಗ್ರಾಮದಲ್ಲಿ ಕಲ್ಲೇಶ್ವರ ಕೃಪಾ ಪೋಷಿತ ಕರ್ನಾಟಕ ನಾಟಕ ಮಂಡಳಿಯ ಭಕ್ತ ಸುದನ್ವ ಬಯಲಾಟಕ್ಕೆ ಹಾರ್ಮೋನಿಯಂ ವಾದಕರಾಗಿ ಜನಮನ್ನಣೆ ಪಡೆದರು.ಅಂದಿನಿಂದ ಆರಂಭವಾದ ರಂಗ ಪಯಣ ಇಂದಿನವರೆಗೂ ಎಲ್ಲಿಯೂ ನಿಲ್ಲದೆ ಸಾಗಿದೆ.ಈ ಹಾದಿಯಲ್ಲಿ ಸುಮಾರು ೨೭೦ಕ್ಕೂ ಅಧಿಕ ಬಯಲಾಟಗಳಿಗೆ ನಟ,ನಿರ್ದೇಶಕ,ಸಂಘಟಕ ಹಾಗೂ ಹಾರ್ಮೋನಿಯಂ ವಾದಕರಾಗಿ ಭಾಗವಹಿಸಿದ್ದಾರೆ.ಇವರಲ್ಲಿನ ಅತೀವ ಶ್ರದ್ಧೆ, ಸರಳ ಜೀವನ ಮತ್ತು ಕಲಾ ಕಾಳಜಿಯೇ ಇವರ
ರಂಗ ಕಾಯಕದ ಜೀವಾಳವಾಗಿದೆ. ಸುಮಾರು ೨೭ ವರ್ಷಗಳ ಇವರ ಸುಧೀರ್ಘ ರಂಗ ಪಯಣದಲ್ಲಿ ಅನೇಕ ಮೈಲಿಗಳನ್ನು ಕಾಣಬಹುದು.ಅಪ್ಪನಿಂದ ಬಯಲಾಟ ನಿರ್ದೇಶನ ಕಲಿತದ್ದಲ್ಲದೇ ಲಿಂಗಸೂಗೂರಿನ ಮುದಗಲ್ ಪಾಪಣ್ಣರಿಂದ ಸಾಮಾಜಿಕ ಹಾಗೂ ಡಣಾಯಕನ ಕೆರೆ ತೋಟಯ್ಯಸ್ವಾಮಿಯವರಿಂದ ಪೌರಾಣಿಕ ನಾಟಕ ನಿರ್ದೇಶನದ ಪಟ್ಟುಗಳನ್ನು ಕಲಿತರು.ಆದರೆ ರಂಗ ಪ್ರಪಂಚದ ಆಳ ಅಗಲದ ಆರಿವು ದೊರೆತದ್ದು ನಾಡೋಜ ಬೆಳಗಲ್ ವೀರಣ್ಣರಿಂದ.ಇವರು ಓದಿದ್ದು ಎಸ್.ಎಸ್.ಎಲ್.ಸಿಯಾದರೂ ರಂಗಭೂಮಿಯಿಂದ ಪಡೆದ ಜ್ಞಾನ ಯಾವ ಪದವಿಗೂ ಸಾಟಿಯಾಗದು.
ಗ್ರಾಮೀಣ ರಂಗಭೂಮಿಯ ಅಪಾರ ಕಾಳಜಿಯಿಂದಾಗಿ ೧೩.೦೬.೨೦೧೭ರಲ್ಲಿ ತಮ್ಮ ಹುಟ್ಟೂರಿನಲ್ಲಿ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಸ್ಥಾಪಿಸಿ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಂಗಳೂರು, ತುಮಕೂರು,ಹಾಸನ ಹಾಗೂ ಹೊರ ರಾಜ್ಯಗಳಾದ ಗುಜರಾತ್,ಮುಂಬೈ, ಕೇರಳ,ಆಂಧ್ರಪ್ರದೇಶ ಹೀಗೆ ನಾನಾ ಕಡೆ ಸಂಚರಿಸಿ ಅಶ್ವಮೇಧ ಯಾಗ,ಅಭಿಮನ್ಯು ಕಾಳಗ,ಸುಂದೋಪ ಸುಂದರ,ರಾಮಾಯಣ, ಷಣ್ಮುಖ ವಿಜಯ,ಗಿರಿಜಾ ಕಲ್ಯಾಣ, ಪಾರ್ಥ ವಿಜಯ,ಪ್ರಮೀಳಾ ದರ್ಬಾರ್,ಮಾರ್ಕಂಡೇಯ ಚರಿತೆ,ಪಾಂಡು ವಿಜಯ,ರತಿ ಕಲ್ಯಾಣ, ಶ್ರೀ ಕೃಷ್ಣ ಲೀಲೆ,ರೇಣುಕಾ ಜಮದಗ್ನಿ, ಮಹಿಷಾಸುರ ಮರ್ದಿನಿ,ಕಿತ್ತೂರು ರಾಣಿ ಚೆನ್ನಮ್ಮ,ಕುಶಲವರ ಕಾಳಗ,ರೇಣುಕಾ ಮಹಾತ್ಮೆ ಇನ್ನೂ ಅನೇಕ ನಾಟಕಗಳಲ್ಲಿ ಕೃಷ್ಣ,ಅರ್ಜುನ,ಧರ್ಮರಾಯ,ಮನ್ಮಥ,ನಾರದ,ಶಿವನ ಪಾತ್ರಗಳಲ್ಲದೇ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.
ಇದಿಷ್ಟೇ ಅಲ್ಲದೆ ಇವರ ರಂಗ ಕಾಳಜಿ ಮತ್ತು ರಂಗ ಚತುರತೆಗೆ ಇಂಬು ನೀಡುವಂತೆ ೨೦೧೭ರಲ್ಲಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಕಟಣಾ ವಿಭಾಗದ ಪರಿಶೀಲನಾ ಸದಸ್ಯರಾಗುವ ಯೋಗ ಮನೆ ಬಾಗಲಿಗೆ ಅರಸಿ ಬಂದಿತು.ಆ ಅವಧಿಯಲ್ಲಿ ಕ.ಸಾ.ಪ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ,ಅಕಾಡೆಮಿಯ ಹಲವಾರು ವಿಚಾರ ಸಂಕೀರ್ಣ, ಉಪನ್ಯಾಸ, ಬಯಲಾಟ ಕಮ್ಮಟ,ಬಯಲಾಟ ಉತ್ಸವ,ರಂಗ ಸಂಭ್ರಮದಂತಹ ಅನೇಕ ವಿಭಿನ್ನ ಕಾರ್ಯಕ್ರಮಗಳಲ್ಲಿ ಡಾ.ಜಿ.ಜಯಶ್ರೀ,ಡಾ.ಜಿ.ಕಪ್ಪಣ್ಣ,ಬೆಳಗಲ್ ವೀರಣ್ಣರಂತಹ ಅನೇಕ ಮಹನೀಯರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಇಲ್ಲಿಯವರೆಗೆ ಇವರು ಮಾಡಿದ ರಂಗಸೇವೆಯನ್ನು ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಹಂಪಿ ಉತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ,ಬಹುರೂಪಿ ನಾಟಕೋತ್ಸವ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ಇವರು ಕೇವಲ ಬಯಲಾಟ ನಟ ,ನಿರ್ದೇಶಕರಲ್ಲದೆ ಸಾಹಿತಿಗಳು ಸಹ ಎನಿಸಿದ್ದಾರೆ.ಇವರ ಕುಂಚದಿಂದ ಬಯಲಾಟ ಕಲಾವಿದ ಏಳುಬೆಂಚಿ ಕೊಟ್ರಪ್ಪನವರ ಜೀವನಾಧರಿತ ಶತಕಸ್ಮೃತಿ ಪುಸ್ತಕ ರಚಿಸಲ್ಪಟ್ಟಿದೆ.
ಕಾಡುಮಲ್ಲಿಗೆಯಾಗಿರುವ ಬಯಲಾಟವನ್ನು ನಾಡ ಮಲ್ಲಿಗೆಯಾಗಿಸುವ ನಿಟ್ಟಿನಲ್ಲಿ ಶ್ರಮ ಪಡುತ್ತಿರುವ ತಿಪ್ಪೇಸ್ವಾಮಿಯವರು ಮುಂದಿನ ಪೀಳಿಗೆಗೆ ಮಾದರಿ ಗುರುವೆನಿಸಿದ್ದಾರೆ.ಇಂತಹ ಮಹನೀಯರ ರಂಗ ಕಾಯಕ ಎಲ್ಲರಿಗೂ ಆದರ್ಶನೀಯವಾದುದ್ದಾಗಿದೆ ಎಂದರೂ ತಪ್ಪಾಗಲಾರದು.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ / ರಂಗ ಸಂಶೋಧಕರು
manjuamazing7@gmail.com
9379857775

Comments
Post a Comment