ಶಿಲಾಯುಗದ ಇತಿಹಾಸ ಹೊತ್ತ ಬೈರಗಾಮದಿನ್ನೆ - ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.

 ಶಿಲಾಯುಗದ ಇತಿಹಾಸ ಹೊತ್ತ ಬೈರಗಾಮದಿನ್ನೆ


   ಕರ್ನಾಟಕ ಶಾಸನಗಳ ತವರೂರು ಇಲ್ಲಿ ಅಸಂಖ್ಯಾತ ಶಾಸನಗಳು ಪತ್ತೆಯಾಗಿವೆ, ಆಗುತ್ತಲೇ ಇವೆ.ಇನ್ನೂ ಅದೆಷ್ಟೋ ಶಾಸನಗಳು ದನಗಳನ್ನು ಕಟ್ಟಲು,ಮನೆಗಳ ಗೋಡೆಗಳಿಗೆ ಕಲ್ಲುಗಳಾಗಿ,ಪೂಜೆಗೆ ದೇವರ ವಿಗ್ರಹಗಳಾಗಿ,ಹರಟೆ ಮಲ್ಲರ ಕಟ್ಟೆಯಾಗಿ,ಹೊಲಗದ್ದೆಗಳ ಮೇರೆಕಲ್ಲುಗಳಾಗಿ ಮತ್ತು ಮಕ್ಕಳ ಆಟಿಕೆಗಳಾಗಿ ಇನ್ನೂ ಅನೇಕ ಹೇಯಸ್ಥಿತಿಯಲ್ಲಿ ಇಂದಿಗೂ ಮರಗುತ್ತಲೇ ಇವೆ. ಅಲ್ಲದೇ ಇವುಗಳಿಗೆ ಇಟ್ಟ ಹೆಸರಿಗಿಂತ ಪಡೆದ ಹೆಸರುಗಳಿಂದಲೇ ಇಂದಿಗೂ ಎಲೆ ಮರೆಯಾಗಿ ಉಳಿದುಕೊಂಡಿವೆ.ಉದಾಹರಣೆಗೆ ಪೋತಪ್ಪನ ಕಲ್ಲು ,ಹಡೆದವರ ಕಲ್ಲು,ಮಡಿದವರ ಕಲ್ಲು ,ದೇವರ ಕಲ್ಲು, ನಿಲುಗಲ್ಲು ಹೀಗೆ ನಾನಾ ನಾಮಗಳಿಂದ ನಾಮಕರಣಗೊಂಡಿವೆ.

   ಈ ಶಾಸನಗಳಲ್ಲಿ ದಾನ ಶಾಸನ, ಪ್ರಶಸ್ತಿ ಶಾಸನ, ವೀರಗಲ್ಲು, ಮಾಸ್ತಿಕಲ್ಲು, ನಿಷಿಧಿ ಕಲ್ಲು, ಯೂಪ ಶಾಸನ, ಕೂಟ ಶಾಸನ ಎಂಬಿತ್ಯಾದಿ ಪ್ರಕಾರಗಳಿವೆ. ಆದರೆ ನಾನಿಂದು ನಿಮ್ಮೊಂದಿಗೆ ಪ್ರಸ್ತಾಪಿಸ ಬಯಸುವ ವಿಷಯ ನಮ್ಮೂರಿನ ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳು.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಿಂದ ೨೫ ಕಿ.ಮೀ ದೂರದಲ್ಲಿ ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಪಕ್ಕ ಕನ್ನಡದ ಗಡಿನಾಡು ಬೈರಗಾಮದಿನ್ನೆ.ಇದು ಕೆಲವು ಐತಿಹ್ಯಗಳನ್ನು ಹೊತ್ತು ನಿಂತು, ಬಹುತೇಕರ ನಿರ್ಲಕ್ಷ್ಯಕ್ಕೊಳಗಾದ ಕುಗ್ರಾಮವಾಗಿದೆ.ಅಂತೆಯೇ ಮಕ್ಕಳಿಗೆ ಆಟವಾಡಲು ಬಳಕೆಯಾಗುತ್ತಿದ್ದ ಇಲ್ಲಿನ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳು ಬೆಳಕಿಗೆ ಬರಲು ಇಷ್ಟು ವರ್ಷ ಬೇಕಾಯಿತು.

 ನನಗೆ ನೆನಪಿದೆ ನಾವು ಬಾಲ್ಯದಲ್ಲಿ ಆ ಕಲ್ಲುಗಳ ಮೇಲೆ ಕಾಲಿಟ್ಟು ಏರಿಳಿದಿದ್ದು, ತಿನ್ನಲು ಕೊಟ್ಟ ಅಂಗನವಾಡಿ ಹಿಟ್ಟಿನ ಹುಂಡಿಯನ್ನು ಆ ವಿಗ್ರಹದ ಮೂಗಿಗೆ ಗೊಣ್ಣೆಯಂತೆ ಅಂಟಿಸಿ ವಿರೂಪಗೊಳಿಸಿದ್ದು, ಆಗ ಹಿರಿಯರಿಂದ 'ಹೇ! ಅದು ಪೋತಪ್ಪ ದೇವ್ರು ಹಾಗೆಲ್ಲ ಕಾಲಿಡಬಾರ್ದು ಕಣ್ಣೋಗ್ತಾವೆ' ಎಂದು ಬುದ್ಧಿವಾದ ಹೇಳಿಸಿಕೊಂಡಿದ್ದ ನೆನಪುಗಳು ಮತ್ತು ಯಾರಾದರೂ ಹಡೆದರೆ ನಾವಾಡುತ್ತಿದ್ದ ಕಲ್ಲಿನ ಪಕ್ಕವೇ ಇದ್ದ ಸಣ್ಣ ಕಲ್ಲುಗಳನ್ನು ಬೋರಲಾಕಿ ಹರಕೆ ಹೋರುತ್ತಿದ್ದ ಎಲ್ಲ ನೆನಪುಗಳು ಇನ್ನೂ ಹಸಿಹಸಿಯಾಗಿವೆ.ಆದರೆ ಇಂದು ನನಗೆ ಅವುಗಳಿಗೆ ನಾವು ಕಾಲಿಟ್ಟ ಕಲ್ಲೇ ವೀರಗಲ್ಲು ಹಾಗೂ ಬೋರಲಾಕುತ್ತಿದ್ದ ಕಲ್ಲುಗಳೇ ಮಾಸ್ತಿಕಲ್ಲು ಎಂದು ತಿಳಿದಾಗ ನಮ್ಮೂರಿನ ಇತಿಹಾಸ ಸಾರುವ ಶಾಸನಗಳ ಬಗೆಗೆ ಗೌರವ ಮನೋಭಾವ ಬರುತ್ತಿದೆ.ಅಲ್ಲದೇ ಇವುಗಳ ಬಗೆಗೆ ಸರ್ಕಾರಗಳು ತೋರುತ್ತಿರುವ ನಿರ್ಲಕ್ಷ್ಯತೆಗೆ ಮನಸ್ಸು ಖೇಧವೆನಿಸುತ್ತಿದೆ.

ಸ್ವಾಮಿನಿಷ್ಠೆಗಾಗಿ, ಊರೊಳಿತಿಗಾಗಿ, ದುಷ್ಟಶಿಕ್ಷೆಗಾಗಿ, ಶತ್ರುಗಳೊಡನೆ ಅಥವಾ ಕ್ರೂರಪ್ರಾಣಿಗಳೊಡನೆ ಪರಾಕ್ರಮದಿಂದ ಹೋರಾಡಿ ವೀರಮರಣಹೊಂದಿದ ಕಲಿಗಳ ಸ್ಮಾರಕಗಳನ್ನು ವೀರಗಲ್ಲುಗಳೆನ್ನುತ್ತಾರೆ.

“ಜಿತೇನ ಲಭ್ಯತೇ ಲಕ್ಷೀ: ಮೃತೇ ನಾಪಿ ಸುರಾಂಗನಾ|

ಕ್ಷಣ ವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ||"

ಯುದ್ಧದಲ್ಲಿ ಹೋರಾಡಿ ಮಡಿದರೆ ಸ್ವರ್ಗ, ಸುರಾಂಗನೆಯರು ಕೈಹಿಡಿದು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ, ವಿಜಯಿಗಳಾದೆ ಮನ್ನಣೆಯೊಂದಿಗೆ ಲಕ್ಷ್ಮೀ ಲಭಿಸುತ್ತಾಳೆ. ಕ್ಷಣಮಾತ್ರದಲ್ಲಿ ಅಳಿಯುವ ದೇಹಕ್ಕಾಗಿ ಚಿಂತಿಸ ಬೇಕಿಲ್ಲ. ಎಂಬುದು ವೀರಯುಗದ ಬಲವಾದ ನಂಬಿಕೆಯಾಗಿತ್ತು. ಸಾಮಾನ್ಯವಾಗಿ ವೀರಗಲ್ಲುಗಳು ಹೋರಾಟದಲ್ಲಿ ಮಡಿದ ಯೋಧನನ್ನು ಅಪ್ಸರೆಯರು ಬಂದು ವಿಮಾನದಲ್ಲಿ ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಶಿಲ್ಪದಿಂದ ಅಲಂಕೃತವಾಗಿರುತ್ತವೆ. ಕೆಳಗೆ ಶಾಸನದ ವಿವರಗಳನ್ನು ಕೊರೆದಿರುವುದು ಬಹುತೇಕ ವೀರಗಲ್ಲುಗಳಲ್ಲಿ ಕಂಡು ಬರುತ್ತವೆ. ವೀರಗಲ್ಲುಗಳಲ್ಲಿ ‘ಶಾಸನಸಹಿತ ವೀರಗಲ್ಲು’ ‘ಶಾಸನ ರಹಿತ ವೀರಗಲ್ಲು’ಗಳಿವೆ.

   ಅಂತೆಯೇ ನಮ್ಮೂರಿನ ವೀರಗಲ್ಲು ೫.೫ ಅಡಿ ಉದ್ದ ಮತ್ತು ೪.೫ ಅಡಿ ಅಗಲ ಹೊಂದಿದ್ದಲ್ಲದೇ ಶಾಸನ ರಹಿತವಾಗಿದೆ.ಅಲ್ಲದೇ ಕುದುರೆಯ ಮೇಲೆ ಕತ್ತಿ ಹಿಡಿದು ಯುದ್ಧಕ್ಕೆ ಹೋಗುವ ಯೋಧ ಮತ್ತು ಆತನ ಪಕ್ಕದಲ್ಲೇ ಎಡಭಾಗಕ್ಕೆ ಕೆಳಗೆ ಯುದ್ಧಕ್ಕೆ ಹರಸಿ ಕಳುಹಿಸುವ ಮಹಿಳೆಯರ ಚಿಕ್ಕ ಉಬ್ಬು ಶಿಲ್ಪಗಳಿವೆ.

   ಇನ್ನೂ ಮಾಸ್ತಿಕಲ್ಲುಗಳು ಹೆಸರೇ ಸೂಚಿಸುವಂತೆ ಮಾಸ್ತಿ ಅಂದರೆ ಮಹಾಸತಿಯರು ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಯೋಧರ ನೆನಪಲ್ಲೇ ಆರಾಧ್ಯ ದೈವಕ್ಕೆ ಪೂಜೆ ಸಲ್ಲಿಸಿ ಸಾಮೂಹಿಕವಾಗಿ ಸಹಗಮನಕ್ಕೆ (ಚಿತೆಗೆ) ಹೋಗಿ ಪ್ರಾಣ ತ್ಯಾಗ ಮಾಡುತ್ತಿದ್ದ ಮಹಿಳೆಯರ ನೆನಪಿಗೆ ಕೆತ್ತಿಸಿದವುಗಳಾಗಿವೆ.

   ಇವುಗಳನ್ನು ನಮ್ಮೂರಿನ ಅಗಸೆಯ ಎಡಭಾಗದಲ್ಲಿ ಮಾರೆಮ್ಮ ದೇವಾಲಯದ ಎಡಭಾಗದಲ್ಲಿ ಪೋತಪ್ಪ ಎಂಬ ಹೆಸರಿನಿಂದ ಇಂದಿಗೂ ನಾಯಕ ಜನಾಂಗದಿಂದ ಪೂಜೆಗೊಳ್ಳುವ ವಿಗ್ರಹವೇ ವೀರಗಲ್ಲು. ಅಲ್ಲದೇ ಇದೇ ವಿಗ್ರಹದ ಕಟ್ಟೆಯ ಎಡ ಕೆಳಭಾಗದಲ್ಲಿ ಕಾಣುವ ಚಿಕ್ಕಗಾತ್ರದ ಹಾಗೂ ಹಿಂದೆ ಯಾರಾದರೂ ಗರ್ಭೀಣಿಯಿದ್ದರೆ ಅವರಿಗೆ ಹೆರಿಗೆ ಸುಸೂತ್ರವಾಗಿ ಆಗಲೆಂದು ಅಲ್ಲಿಯವರೆಗೂ ಬೋರಲು ಹಾಕಿ ಹೆರಿಗೆ ನಂತರ ಯಥಾವತ್ತಾಗಿರಿಸುತ್ತಿದ್ದ ಎರಡು ಕಲ್ಲುಗಳೇ (೧ ಅಡಿ ಅಗಲ , ೩.೫ ಅಡಿ ಉದ್ದ ಹಾಗೂ ೨ ಅಡಿ ಉದ್ದ, ೨.೫ ಅಡಿ ಅಗಲ ) ಮಾಸ್ತಿ ಕಲ್ಲುಗಳು. ಇವುಗಳಲ್ಲಿ ಒಂದರಲ್ಲಿ ಮೇಲೆ ೩-೪ ಮಹಿಳೆಯರು ಶಿವನಿಗೆ ಪೂಜೆ ಸಲ್ಲಿಸುತ್ತಿರುವ ಹಾಗೂ ಕೆಳಗೆ ೫-೬ ಹೆಂಗಸರ ಉಬ್ಬು ಶಿಲ್ಪಗಳಿವೆ.

   ಇವು ವಿಜಯನಗರ ಸಾಮ್ರಾಜ್ಯದ ಶಾಸನಗಳಾಗಿವೆ ಎಂದು ೧೫೫೪ರ ವಿಜಯನಗರ ಸಾಮ್ರಾಜ್ಯದ ತುಳುವ ಮನೆತನದ ಸದಾಶಿವರಾಯನ ಕಾಲದಲ್ಲಿ ಕೆತ್ತಲ್ಪಟ್ಟ ಹಾಗೂ ಸಮೀಪದ ರಾವಿಹಾಳ್ ಗ್ರಾಮದ ಶ್ರೀ ಚನ್ನಕೇಶವ ದೇವಾಲಯದಲ್ಲಿ ಸಿಕ್ಕ 'ರಾವಿಯಹಾಳ್ (ಮಲ್ಲಿನಾಥಪುರ) ಶಾಸನ'ದಿಂದ ಅಂದಾಜಿಸಬಹುದಾಗಿದೆ.

 ಇದಲ್ಲದೇ ಈ ಊರಿನಲ್ಲಿ ಈಶ್ವರ ದೇವಾಲಯದ ಜೀರ್ಣೋದ್ಧಾರ ನಡೆಯುವಾಗ ಅಲ್ಲಿನ ಪುಡಿ ಮಣ್ಣು ಮತ್ತು ಕಲ್ಲುಗಳನ್ನು ಒಂದೆಡೆ ತಂದು ಸುರಿದಿದ್ದರು.ಅಲ್ಲಿ ನನಗೆ ಶಿಲಾಯುಗದ ಕೈಕೊಡಲಿ (೩) ಮತ್ತು ಪ್ರಾಣಿಗಳ ಬೇಟೆಗೆಂದು ತಯಾರಿಸಿದ ಕಲ್ಗುಂಡಗಳು (೪ ಹಾಗೂ ಒಂದು ಚಿಕ್ಕ ವಿಗ್ರಹದ ರುಂಡ ದೊರೆಯಿತು. ಹಾಗೂ ನಮ್ಮದೇ ಹೊಲದ ಮೇರೆಯಲ್ಲಿ ಧನಸ್ಸು ಹಿಡಿದ ಗೆರೆಯ ಚಿತ್ರ ಮತ್ತು ಚಿತ್ರದ ಬೆನ್ನ ಹಿಂದೆ ಶಂಕುವಿನ ಚಿತ್ರ ಹೊಂದಿದ ಬಂಡೆಗಲ್ಲು ಕಾಣಸಿಕ್ಕಿದೆ. 



ಪ್ರಾದೇಶಿಕ ಪ್ರಾಚೀನತೆ, ಮತ್ತು ರಾಜರ ಇತಿಹಾಸ ಸಾರುವ ಈ ಕಲ್ಲುಗಳ ಮೇಲೆ ಇಲ್ಲಿನ ಜನರ ಎಣ್ಣೆ ಸುರಿದು ಸುಣ್ಣ,ವಿಭೂತಿ, ಕುಂಕುಮ,ಭಂಡಾರ ಹಚ್ಚಿ ವಿರೂಪ ಗೊಳಿಸುತ್ತಿದ್ದಾರೆ.ಅದಕ್ಕಾಗಿ ಇನ್ನಾದರೂ ಇಂತಹ ಶಿಲಾಶಾಸನಗಳನ್ನು ಸಂರಕ್ಷಿಸಿ, ಸೂಕ್ತವಾಗಿ ದಾಖಲಿಸುವ ಮೂಲಕ ಎಲ್ಲರಲ್ಲೂ ಸ್ಥಳೀಯ ಇತಿಹಾಸದ ಕುರಿತಾದ ಅರಿವು ಮೂಡಿಸುವುದು ಅಗತ್ಯವಿದೆ.


ಆಕರಗಳು

೧.ರಾವಿಯಹಾಳು ಗ್ರಾಮದ ಚನ್ನಕೇಶವ ಶಿಲ್ಪ - ಡಾ.ಕೆ.ಮಹೇಶ್.

೨.ಶಾಸನಗಳು - ಪದ್ಮ ಶ್ರೀಧರ್ ಬ್ಲಾಗ್



ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ಸಾಹಿತಿ/ರಂಗ ಸಂಶೋಧಕರು

manjuamazing7@gmail.com

9379857775


Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.