ರಂಗ ಮಾಲಿಕೆ - ೪೦ ಬಯಲಾಟದ ಕಲಾ ರಾಣಿ ' ಎಳ್ಳಾರ್ತಿ ಚಾಮುಂಡಿ'


 ಬಣ್ಣದ ಬದುಕು 

ರಂಗ ಮಾಲಿಕೆ -೪೦


ಬಯಲಾಟದ  ಕಲಾ ರಾಣಿ 'ಯಳ್ಳಾರ್ತಿ ಚಾಮುಂಡಿ'


ಸಿರುಗುಪ್ಪ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಬಯಲಾಟದ ಚಾಮುಂಡಿ ಎಂದರೆ ಸಾಕು.ಅವರ ಬಗೆಗಿನ ಮಾತುಗಳನ್ನು ಅಕ್ಷರಶಃ ಹಿಡಿದಿಡಲು ಅಸಾಧ್ಯ.ಅವರ ಅಭಿನಯ ಚತುರತೆ,ನೃತ್ಯ ತಲ್ಲೀನತೆ ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ.ಇಂತಹ ಅಭೂತಪೂರ್ವ ಅಭಿನಯದ ಅಭಿನೇತ್ರಿ ನಮ್ಮೊಡನೆ ಇದ್ದಾರೆಂದರೆ ನಮ್ಮ ಬಳ್ಳಾರಿಯ ಹೆಮ್ಮೆ ಎನ್ನಬಹುದಾಗಿದೆ.

ಇವರು ೧೯೭೨ ರಲ್ಲಿ ಸಿರುಗುಪ್ಪ ತಾಲ್ಲೂಕಿನ ಉಪ್ಪಾರ ಹೊಸಳ್ಳಿಯ ಕಂಪನಿಯ ರಂಗ ಕಲಾವಿದರಾಗಿದ್ದ ವೀರಭದ್ರಯ್ಯ ಸ್ವಾಮಿ ಮತ್ತು ಬಸಮ್ಮರ ಮಗಳಾಗಿ ಮೈಸೂರು ಕ್ಯಾಂಪೊಂದರಲ್ಲಿ ಜನಿಸಿದರು. ಸಾಂಪ್ರದಾಯಿಕ ಶಿಕ್ಷಣ ಪಡೆಯಬೇಕಾದ ಬಾಲ್ಯದಲ್ಲೇ ಅಪ್ಪನ ಬಲವಂತಕ್ಕೆ ಮಣಿದು ನಾಟಕ ನೋಡಲು ಮತ್ತು ಉದ್ದೇಶಪೂರ್ವಕವಾಗಿ ನಾಟಕದ ಕಲೆಯನ್ನು ಅನುಕರೀಸುವ ಸಲುವಾಗಿ ಅಪ್ಪನ ಕಂಪನಿಯ ನಾಟಕಗಳಿಗೆ ಹೋಗುವ ಮೂಲಕ ರಂಗ ಶಿಕ್ಷಣ ಪಡೆದರು.ಹಾಗೆ ಹೋದಲೆಲ್ಲಾ ಕ್ರಮೇಣವಾಗಿ ಏಳೆಂಟನೇ ವಯಸ್ಸಿಗೆ ಚಿಕ್ಕ ಗೌನು ಹಾಕಿಕೊಂಡು ನೃತ್ಯ ಮಾಡಲು ಶುರು ಮಾಡಿದರು.ಅದಲ್ಲದೇ ೨೦೦/೩೦೦₹ ಮುಯ್ಯಿ ಪಟ್ಟಿ ಪಡೆಯಲು ಮುಂದಾದರು.ಅಂತೆಯೇ ಇತ್ತ ತಂದೆಗೆ, ತಮ್ಮ ಹೆಗಲಿಗೆ ಮಗಳು ಹೆಗಲಾದ ಖುಷಿಯಲ್ಲಿ ಸಂಭ್ರಮಿಸಿ ಹರಯಕ್ಕೆ ಬಂದಕೂಡಲೇ ಮಗಳಿಗೆ ನೃತ್ಯದಿಂದ ಅಭಿನಯಕ್ಕೆ ಬಡ್ತಿ ನೀಡಿದರು.ಅಲ್ಲದೆ ಅಷ್ಟೋತ್ತಿಗಾಗಲೇ ಇವರು ತಂದೆಯಿಂದಲೇ ಓದು ಬರಹ ಕಲಿತಿದ್ದರು.

  ನಂತರ  ಅಭಿನಯಕ್ಕಾಗಿ ಕಂಪನಿಯಿಂದ ಕಂಪನಿಗೆ ಅಲೆಯುತ್ತಿರುವಾಗ ಒಮ್ಮೆ ಸ್ವಾಮಿಯವರು ತಮ್ಮ  ಕುಟುಂಬ ಸಮೇತವಾಗಿ ದಾವಣಗೆರೆ ಚಿಂದೋಡಿ ಲೀಲಾ ಡ್ರಾಮಾ ಕಂಪನಿಯೊಂದಕ್ಕೆ ಬಂದು ನೆಲೆಸಿದ್ದರು. ಒಂದು ಇದ್ದಕ್ಕಿದ್ದಂತೆ ಸ್ವಾಮಿಯವರನ್ನು ನಿರ್ದೇಶನಕ್ಕೆ ಆಹ್ವಾನಿಸಿ ಬಳ್ಳಾರಿ ಪಕ್ಕದ ಗಡಿನಾಡಿನ ಎಳ್ಳಾರ್ತಿಗೆ ಹೆಂಡತಿ ನಾಟಕ ಕಲಿಸಲೆಂದು ಬಂದರು.ಸುಮಾರು ಕಾಲ ಕಲಿಸಿದ ಉತ್ತಮ ನಾಟಕದ ಸಲುವಾಗಿ ಶಿಷ್ಯರಿಂದ ವಾಸಿಸಲು ಮನೆ ಮತ್ತು ಕಾಳು ಕಡಿ,ಬದುಕಲು ಪ್ರೋತ್ಸಾಹ ದೊರೆತು ಎಳ್ಳಾರ್ತಿಯೇ ವಾಸಸ್ಥಳ ದೊರೆತಾಗಾಯಿತು.ಅಲ್ಲದೇ ಆಗ ಮಗಳನ್ನು ಕರೆಯಿಸಿ ಮೊದಲ ಬಾರಿಗೆ "ಮಗಳಾಗಿ ಬಂದಳು ಸೊಸೆಯಾಗಿ ನಿಂತಳು" ಎಂಬ ನಾಟಕದ ನಾಯಕಿಯಾಗಿ ಅಭಿನಯಿಸಲೇಳಿದರು.ಅಂತೆಯೇ ಅಭಿನಯಿಸಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಸರಾದರು.ಅಲ್ಲಿಂದಲೇ ಅಭಿನಯದ ಅವಕಾಶಗಳು ಹೆಚ್ಚುತ್ತಾ ಹೋದಂತೆ ಇತ್ತ ತಂದೆ ಕುಡಿತ, ಇಸ್ಪೀಟ್,ಜೂಜಿನಂತಹ ದುಶ್ಚಟಗಳಿಗೆ ಬಲಿಯಾಗಿ ನಾಟಕ ಕಂಪನಿಗಳಿಗೆ ವಿಧಾಯ ಹೇಳಿದರು.ಅಲ್ಲದೇ ತನ್ನ ದುಶ್ಚಟಗಳ ಪೋಷಣೆಗೆ ಮಗಳ ಸಂಭಾವನೆಯನ್ನು ಆಶ್ರಯಿಸಿದರು.

 ಇದರ ನಡುವೆ ಚಾಮುಂಡಿಯವರು ತಂದೆ ಮತ್ತು ಕುಟುಂಬದ ನಿರ್ವಹಣೆಗಾಗಿ ಏಕ ಪಾತ್ರಕ್ಕಿಂತ ಬಹು ಪಾತ್ರಗಳ ಮೊರೆಹೋದರು.ಕಾರಣವಿಷ್ಟೇ ಬಹುಪಾತ್ರಗಳ ಸಂಭಾವನೆ ಹೆಚ್ಚಿರುತ್ತದೆ.ಸುಮಾರು ಹಳ್ಳಿ ಹಳ್ಳಿಗೂ ತಿರುಗಿ ಗೌರಿ ಗೆದ್ದಳು,ಅಶಾಲತಾ,ಸುಂದೋಪ ಸುಂದರ , ಪಾಂಡು ವಿಜಯ,ಕೆಟ್ಟ ಮೇಲೆ ಬುದ್ಧಿ ಬಂತು,ಅಭಿಮನ್ಯು ಕಾಳಗ, ಕಿರಾತಾರ್ಜುನೀಯರ ಕಾಳಗ,ಪಾರ್ಥ ವಿಜಯ ಹೀಗೆ ಹತ್ತಾರು ನಾಟಕಗಳಲ್ಲಿ ಅಭಿನಯಿಸಿ ಹೆಸರಾಗಿ ಬಹುತೇಕರಿಗೆ ಚಾಮುಂಡಿ ಇದ್ದರೆ ನಾಟಕ,ಇಲ್ಲದಿದ್ದರೆ ನಾಟಕ ಕ್ಯಾನ್ಸಲ್ ಎಂಬಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದ್ದರು.ಇದರ ನಡುವೆ ಹರೆಯಕ್ಕೆ ಬಂದಿದ್ದ ಚಾಮುಂಡಿಯವರಿಗೆ ಕಂಕಣ ಭಾಗ್ಯ ಕೂಡಿ ಬಂದು ಬಳ್ಳಾರಿಯ ರಾಜೇಂದ್ರ ಕುಮಾರರೊಡನೆ ವಿವಾಹವಾದರು.ಆದರೆ ಅಲ್ಲಿಂದಲೇ ಬದುಕಿನ ನೌಕೆ ಶನಿಯ ಆಟಕ್ಕೆ ಗುರಿಯಾಗಿ ದಿಕ್ಕು ತಪ್ಪಿತು.ಯಾಕೆಂದರೆ ಮದುವೆಯಾದಳು,ಇನ್ನು ನಾಟಕಕ್ಕೆ ಬರುವುದಿಲ್ಲ,ಗಂಡ ಕಳುಹಿಸುವುದಿಲ್ಲ ಎಂಬ  ಭಾವದಲ್ಲಿ ಯಾರು ನಾಟಕಕ್ಕೆ ಕರೆಯಲಿಲ್ಲ,ಅಲ್ಲದೇ ದುಶ್ಚಟಗಳ ದಾಸಮಾಗಿದ್ದ ತಂದೆ ಊರಲೆಲ್ಲಾ ಕಂಡಕಂಡವರಲ್ಲಿ ಹಣ ಪಡೆದು ತೀರಿಸಲಾಗದೇ ಹಗಲೆಲ್ಲಾ ಬಳ್ಳಾರಿಗೆ ಬಂದು ಹಳೆ ಬಸ್ಟ್ಯಾಂಡಲ್ಲಿ ಅಲ್ಪ ಸ್ವಲ್ಪ ಕುಡಿದು ಅನೇಕ ರಾತ್ರಿಗಳು ಕಳೆದು,ಕೊನೆಗೆ ಅವರಿವರ ಸಹಾಯದಿಂದ ಮನೆ ಸೇರುತ್ತಿದ್ದರು.ಇವೆಲ್ಲದರ ನಡುವೆ ಗರ್ಭೀಣಿಯಾದ ಚಾಮುಂಡಿಯವರಿಗೆ ತಿನ್ನಲು ಏನೂ ಇಲ್ಲದಾಗಿ 'ವಿಭೂತಿ ತಿಂದರೆ ಹೊಟ್ಟೆ ಹಸಿಯುವುದಿಲ್ಲ' ಎಂಬ ಅಪರಿಚಿತರ ಮೌಢ್ಯ ಮಾತಿನಂತೆ ಬದುಕಲು ಕಲಿತಿದ್ದರು.ಕೊನೆಗೆ ಇವರಿಗೆ ಮಕ್ಕಳಾಗಿ ಮೊಮ್ಮಕ್ಕಳೊಡನೆ ಕಾಲ ಕಳೆಯುವ ಅರೆಗಳಿಗೆಯಲಿ ಚಾಮುಂಡಿಯವರ ತಂದೆ ಕುಡಿತದಿಂದಾಗಿ ವಿಧಿವಶವಾಗಿ ಇವರನ್ನು ಒಂಟಿಯಾಗಿಸಿದರು.

  ಆ ಸಮಯಕ್ಕೆ ಸಂಜೀವಿನಿಯಂತೆ ಕಲಾವಿದೆ ವೀಣಾ ಆದೋನಿಯವರ ಸಹಾಯದಿಂದ ಬಳ್ಳಾರಿಗೆ ಬಂದು ಹೊಸದೊಂದು ರಂಗ ಕಾಯಕಕ್ಕೆ ಕಾಲಿಟ್ಟರು.ಪುನಃ ಕಲಿತ ಕಳ್ಳ,ಹಸಿರು ಬಳೆ,ಸರ್ಪ ಸಾಮ್ರಾಜ್ಯ, ರೈತ ನಗಲಿಲ್ಲ ಸರ್ಕಾರ ಉಳಿಯಲಿಲ್ಲ, ರಕ್ತರಾತ್ರಿ,ಕುರುಕ್ಷೇತ್ರ, ಶಶಿರೇಖಾ,ಹರಿಕಾಯ,ರಕ್ತ ತರ್ಪಣ,ಸಿಂಧೂರ ಲಕ್ಷ್ಮಣ,ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಾನಯೋಗಿ ಪಂಚಾಕ್ಷರಿ ಗವಾಯಿ ಹೀಗೆ ಅನೇಕ ಹವ್ಯಾಸಿ, ವೃತ್ತಿ, ಸಾಮಾಜಿಕ,ಐತಿಹಾಸಿಕ ಎಂಬ ತಾರತಮ್ಯವಿಲ್ಲದೆ ಎಲ್ಲ ನಾಟಕಗಳಲ್ಲಿ ನಾಯಕಿ,ಹಾಸ್ಯ,ಖಳನಾಯಕಿಯಾಗಿ ಅಭಿನಯಿಸಿ ಎಲ್ಲ ಬಗೆಯ ಕಲಾ ರಸಿಕರ ರಾಣಿಯೆನಿಸಿದರು.

  ಅಲ್ಲದೇ ಬಿ.ಆರ್.ಅರಶಿಣಗುಡಿ ಕಂಪನಿ,ಚಿಂದೋಡಿ ಲೀಲಾ ಕಂಪನಿ,ಕಡಪಟ್ಟಿ ಪ್ರಕಾಶ್,ಹೊಳೆ ಹುಚ್ಚೇಶ್ವರ ನಾಟಕ ಸಂಘ ಕಮತಗಿ ಹೀಗೆ ಅನೇಕ ಕಂಪನಿಗಳಲ್ಲಿ ಸುಂದರ್ ಕೃಷ್ ಅರಸ್, ಶ್ರೀನಾಥ್,ಅಶ್ವಥ್, ಸುಂದರ್ ರಾಜ್, ಪ್ರಮೀಳಾ ಜೋಷಯ್ ನಂತಹ ದೊಡ್ಡ ದೊಡ್ಡ ನಟ ನಟಿಯರೊಡನೆ ಅಭಿನಯಿಸಿ ತಮ್ಮ ಕಲಾ ಪ್ರೌಢಿಮೆ ಹೆಚ್ಚಿಸಿಕೊಂಡಿದ್ದಾರೆ. ಇವರು ಇಲ್ಲಿಯವರೆಗೆ ಕರ್ಣಾರ್ಜುನರ ಕಾಳಗದಲ್ಲಿ  ಕುಂತಿ,ಅಭಿಮನ್ಯು ಕಾಳಗದಲ್ಲಿ ಉತ್ತರೆ, ಸುಭದ್ರೆ,ಪಾಂಡು ವಿಜಯದಲ್ಲಿ ಸುಧೀಷ್ಣ,ರಾಮಾಯಣದಲ್ಲಿ ಮಂಡೋದರಿ,ಪ್ರಮೀಳಾ ದರ್ಬಾರ್ದಲ್ಲಿ ಪ್ರಮೀಳೆ,ಕುಮುದ್ವತಿಯಾಗಿ ನೂರಾಕ್ಕೂ ಹೆಚ್ಚು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ಆದರೆ  ಬಸರಕೋಡದ ಗಾಳಿ ಮಲ್ಲಯ್ಯ ವಿರಚಿತ ರೇಣುಕಾದೇವಿ ಅರ್ಥಾತ್ ಕಾರ್ತಿ ವೀರರಾರ್ಜುನ ಕಾಳಗದಲ್ಲಿ ರೇಣುಕಾ ದೇವಿಯಾಗಿ ಅಭಿನಯಿಸಿದ್ದು ಮಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಇವರಿಗೆ ವೀರೇಶ ಕುಮಾರ್ ,ಗಾಯಿತ್ರಿ ದೇವಿ, ವಿಜಯಲಕ್ಷ್ಮಿ ಎಂಬ ಮೂರು ಮಕ್ಕಳು ಮತ್ತು ಪತಿಯೊಂದಿಗೆ ಬಳ್ಳಾರಿಯ ಗುಗ್ಗರಹಟ್ಟಿಯಲ್ಲಿ ನೆಲೆಸಿದ್ದಾರೆ.ಚಾಮುಂಡಿಗೆ ವಯಸ್ಸಾಯಿತು ಅವರೇಕೆ ಈ ನಾಟಕಕ್ಕೆ ಎಂದು ನಿಂದಿಸುವ ಸಹ ಕಲಾವಿದರ ನಡುವೆಯೇ ನಮಗೆ ಚಾಮುಂಡಿ ಇದ್ದರೆ ಮಾತ್ರ ನಾಟಕ ಮಾಡೋದು ಎಂದು ಹೇಳಿ ಇಂದಿಗೂ ಯಾರೇ ಕರೆದರೂ ಇಲ್ಲ ಎಂಬಂತೆ ಹೋಗಿ ಅಭಿನಯಿಸಿ ನಿಂದಿಸಿದವರ ಮಧ್ಯೆಯೇ ಎದ್ದು ನಿಲ್ಲುವ ಆತ್ಮ ವಿಶ್ವಾಸ ಇಂದಿಗೂ ಉಳಿಸಿಕೊಂಡಿದ್ದಾರೆ.

  ಅಲ್ಲದೇ ಅಪ್ಪನಿಂದ ಬಲವಂತವಾಗಿ ಕಲಿತ ರಂಗಕಲೆಯೇ ಇಂದು ಬದುಕಿಗೆ ಆಹಾರವಾಗಿದೆ.ಇದನ್ನು ಬದುಕಿನ ಉದ್ದಕ್ಕೂ ಅಭಿಮಾನಿಗಳೇ ನನ್ನ ಆರಾಧ್ಯ ದೈವ ಎನ್ನುತ್ತಲೇ ಕಣ್ಣ ಎಸಳಿನೊಂದಿಗೆ ನೆನೆಯುತ್ತಾರೆ.ಇವರ ರಂಗಸೇವೆಯನ್ನು ಗುರುತಿಸಿದ ಕೆಲ ಸಂಘ ಸಂಸ್ಥೆಗಳು ಸನ್ಮಾನಿಸಿವೆ.ಆದರೆ ಗದುಗಿನ ಪುಟ್ಟರಾಜರಿಂದ ಅಭಿನಯಕ್ಕಾಗಿ ಪಡೆದ ಅತ್ಯುತ್ತಮ ನಟಿ ಪ್ರಶಸ್ತಿ ನನಗೆ ದೊಡ್ಡದು ಎನ್ನುವ ಸರಳತೆ ಇವರಲ್ಲಿ ಮನೆ ಮಾಡಿದೆ.ಇಂತವರ ಸರಳ ಕಲಾ ಕಾಯಕ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬುದೇ ನನ್ನೀ ಲೇಖನದ ಆಶಯ.


ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಸಾಹಿತಿ / ರಂಗ ಸಂಶೋಧಕರು

manjuamazing7@gmail.com

9379857775.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.