ರಂಗ ಮಾಲಿಕೆ -೩೯. ಕರ್ನಾಟಕದ ಬಾದಲ್ ಸರ್ಕಾರ್ ಪಿ.ಅಬ್ದುಲ್ ಸಾಬ್

 

ಬಣ್ಣದ ಬದುಕು

ರಂಗ ಮಾಲಿಕೆ - ೩೯


ಕರ್ನಾಟಕದ ಬಾದಲ್ ಸರ್ಕಾರ್ ' ಹೊಸಪೇಟೆ ಪಿ.ಅಬ್ದುಲ್ ಸಾಬ್'.


ಆಡಿದ ಅಂಗಳವನ್ನೇ ನಾಟಕದ ಅಂಗಣವನ್ನಾಗಿಸಿಕೊಂಡು ತನ್ನ ಕೇರಿ,ಕೇರಿಯ ಮಕ್ಕಳ ಏಳ್ಗೆಗೆ ಹಾಗೂ ನಾಡಿನಲ್ಲಿದ್ದ ವರದಕ್ಷಿಣೆ, ಕೋಮುಗಲಭೆ,ಅಸ್ಪೃಶ್ಯತೆ, ಮನುಜ ಶೋಷಣೆ,ಮಾನವ ಕಳ್ಳಸಾಗಣೆಯಂತಹ ಇನ್ನೂ ಅನೇಕ ಸಾಮಾಜಿಕ ಪಿಡುಗುಗಳ ನಿವಾರಣೆಗೆ ಈ ನಾಡಿನಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುವ ಹೆಸರಾದ ಬಳ್ಳಾರಿ ಭಾಗದ ರಂಗಕರ್ಮಿಯೆಂದರೆದರ ಹೊಸಪೇಟೆಯ ಪಿ.ಅಬ್ದುಲ್ ಸಾಬ್.

    ಇವರು ದಿನಾಂಕ 01 ಜೂನ್ 1958 ರಲ್ಲಿ ಹೊಸಪೇಟೆಯಲ್ಲಿ ಪಿ.ನೂರ್ ಸಾಬ್ ಹಾಗೂ ಅಮೀನಾ ಎಂಬ ದಂಪತಿಗಳ ಮಗನಾಗಿ ಜನಿಸಿದರು.ಇವರ ಪ್ರಾಥಮಿಕ ಶಿಕ್ಷಣವನ್ನು ಹೊಸಪೇಟೆಯ ನೆಹರು ಸರ್ಕಾರಿ ಶಾಲೆಯಲ್ಲಿ ಮುಗಿಸಿ ನಂತರದ ಶಿಕ್ಷಣಕ್ಕಾಗಿ ಶಿವಮೊಗ್ಗದ ಸಿಕ್ರೆಟ್ ಹಾರ್ಟ್ ಶಾಲೆಯಿಂದ ಆರಂಭವಾಗಿ ಶಿವಮೊಗ್ಗದ ಡಿ.ವಿ.ಎಸ್ (ದೇಸಿ ವಿದ್ಯಾ ಶಾಲೆ) ಕಾಲೇಜಿನಲ್ಲಿ ಬಿ.ಎ ಪದವಿಯೊಂದಿಗೆ ಕೊನೆಯಾಯಿತು. ಆದರೆ ೧೯೮೧ರಲ್ಲಿ ಅದೇ ಶಿವಮೊಗ್ಗದ ಅಭಿನಯ ಸಂಸ್ಥೆಯ ವತಿಯಿಂದ ಅಶೋಕ ಬಾದರದಿನ್ನಿ ನೇತೃತ್ವದಲ್ಲಿ ನಡೆದ ರಂಗತರಬೇತಿ ಶಿಬಿರದ ' ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕದಿಂದ ಇವರ ರಂಗಯಾತ್ರೆ ಆರಂಭವಾಯಿತು.೧೯೮೩ರಲ್ಲಿ ಶಿವಮೊಗ್ಗದ ಯುಗಾಂತರ ತಂಡದಲ್ಲಿ ತಯಾರಾದ ಡಾ.ಚಂದ್ರಶೇಖರ ಕಂಬಾರರ 'ಜೈಸಿದ ನಾಯಕ' ನಾಟಕದಲ್ಲಿ ಡಂಗುರದವ ಮತ್ತಿತರೆ ಚಿಕ್ಕ ಪಾತ್ರಗಳಲ್ಲಿ ದೊಡ್ಡದಾಗಿ ಗುರುತಿಸಿಕೊಂಡರು.ನಂತರ ೧೯೮೫ ರಲ್ಲಿ ಅಂತರರಾಷ್ಟ್ರೀಯ ಯುವ ವರ್ಷದ ಅಂಗವಾಗಿ ಶಿವಮೊಗ್ಗದ ಯುವಜನ ಸೇವಾ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯಡಿಯಲ್ಲಿ ನಡೆದ ಯುವ ಸಪ್ತಾಹದಲ್ಲಿ ರಾಜೇಂದ್ರ ಜೆನ್ನಿ ನಿರ್ದೇಶನದ  ಓ.ಎಲ್.ನಾಗಭೂಷಣ ಸ್ವಾಮಿಯವರ ದಹನ ಮತ್ತು ಕೆ.ಎಸ್.ನಿಸಾರ್ ಅಹಮದ್ ರ ಕುರಿಗಳು ಸಾರ್ ಕುರಿಗಳು ಬೀದಿ ನಾಟಕಗಳ ಮೂಲಕ ಬೀದಿ ರಂಗಭೂಮಿಯ ಅನೂಹ್ಯ ನಂಟು ಆರಂಭವಾಯಿತು. ಅದೇ ಶಿವಮೊಗ್ಗದ ಚಂದ್ರಗುತ್ತಿ ಜಾತ್ರೆಯಲ್ಲಿ ನಡೆಯುತ್ತಿದ್ದ ಅಮಾನುಷ ಬೆತ್ತಲೆ ಸೇವೆಯನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿ ಮತ್ತು ಬೆತ್ತಲೆ ಸೇವೆ ವಿರೋಧಿ ಸಮಿತಿ ಸಹಯೋಗದೊಂದಿಗೆ ರಾಜೇಂದ್ರ ಜೆನ್ನಿ ನಿರ್ದೇಶನದಲ್ಲಿ ಹರಕೆ ಬೀದಿ ನಾಟಕದ ಮೂಲಕ ಚಂದ್ರಗುತ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಿದರು.

   ಇದರ ನಡುವೆ ತಮ್ಮ ಹುಟ್ಟೂರಿಗೆ ಬಂದು‌ ಪರಂಪರೆಯಿಂದ ಬಂದ ಗಾದಿ ತಯಾರಿಕೆ ಕಾಯಕ ಮಾಡುತ್ತಿದ್ದ ತಂದೆಗೆ ಸಹಾಯಕರಾಗಿದ್ದರು.ಈಗಿರುವಾಗ ಅವಕಾಶವೆಂವಂತೆ ಇಲ್ಲಿನ ಮಾಧ್ಯಮ ಸಂಸ್ಕೃತಿ ಸಂಘಟನೆಯಿಂದ  ಪಿ.ಗಂಗಾಧರ ಸ್ವಾಮಿ ನಿರ್ದೇಶನದಲ್ಲಿ ನಡೆದ ಚೋರ ಚರಣದಾಸ ನಾಟಕದ ಮೂಲಕ ಇಲ್ಲಿಯೂ ಗುರುತಿಸಲ್ಪಟ್ಟರು. ನಂತರ ತಮ್ಮ ಕೊಳಚೆಗೇರಿಯ ಕೂಲಿ ಕಾರ್ಮಿಕರನ್ನು ಸೇರಿಸಿಕೊಂಡು ಪ್ರೇಮ್ ಕುಮಾರ್ ರಚನೆಯ ಮೃತ್ಯು ನಾಟಕವನ್ನು ತಾವೇ ನಿರ್ದೇಶಿಸಿ ಅಭಿನಯಿಸಿದರು.ಇವರ ಇಲ್ಲಿನ ರಂಗಚತುರತೆಗೆ ಇಂಬುವೆಂಬಂತೆ ೧೯೮೮ರಲ್ಲಿ ನಾಟಕ ಅಕಾಡೆಮಿಯಿಂದ ಹೊಸಪೇಟೆಯಲ್ಲಿ‌ ನಡೆದ ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಗುರುತಾದರು.ಭಾರೀ ಕೋಮುಗಲಭೆ ನಡೆಯುತ್ತಿದ್ದ ಹೊಸಪೇಟೆಯಲ್ಲಿ ಕೋಮುಸೌರ್ಹದತೆ ಮೂಡಿಸುವ ಸಲುವಾಗಿ ೧೯೯೧ ರಲ್ಲಿ ಮೊಹರಂ ಹಬ್ಬದ ದಿನದಂದೇ ರಾಜ್ಯ ಮಟ್ಟದ ಮೊಹರಂ ಹಾಡು ಮೇಳ ಸ್ಪರ್ಧೆಯನ್ನು ಏರ್ಪಡಿಸಿದ್ದರು.

 ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ತ್ರೀ ಶಿಕ್ಷಣ ಮಹತ್ವ,ರೋಗ ಜಾಗೃತಿ ಜಾಥಾ,ಪರಿಸರ ಸಂರಕ್ಷಣೆ,ಜೀತ ಪದ್ಧತಿ ನಿರ್ಮೂಲನೆ,ಭ್ರಷ್ಟ ವ್ಯವಸ್ಥೆ,ಅಸ್ಪೃಶ್ಯತೆ ನಿವಾರಣೆ ,ಹಾಗೂ ಸಾಮಾಜಿಕ ಓರೆಕೋರೆಗಳನ್ನು ಸರಿಪರಿಸುವ ಸಲುವಾಗಿ ವಿಸರ್ಜನೆ, ಹುಡುಗಿ ಓದಲೇ ಬೇಕು,ಕಾಲರಾ, ಏಡ್ಸ್,ಪಲ್ಸ್ ಪೋಲಿಯೋ ಜಾಗೃತಿ,ಅಲ್ಲೇ ಇದ್ದೋರು,ಡಾಂಬರು ಬಂದುದು,ನಾವು ಮನುಜರು,ಈ ಜಲ ಈ ನೆಲ,ಅರಿವು,ಜೀತಪದ್ಧತಿ,ಚುನಾವಣೆ,ಭಾವೈಕ್ಯತೆ,ಕೂಡಿ ಬಾಳೋಣ,ಓ ಮತದಾರ ಪ್ರಭುವೆ,ಕೆಂಪು ಹೂ,ಮುಟ್ಟಿಸಿ ಕೊಂಡವನು,ಅಕ್ಕ,ದೌಡ್ ಗಾಂಧಿ ದೌಡ್,ಕತ್ತಲೆ ರಾಜ್ಯ,ಮಹಾಮಂಗ,ಹನುಮ,ಮೂಕನ ಮಕ್ಕಳು ಎಂಬಿತ್ಯಾದಿ ಬೀದಿ ನಾಟಕಗಳನ್ನು ತಾವು ಮತ್ತು ತಮ್ಮ ತಂಡದಿಂದ ಯಶಸ್ವಿಯಾಗಿ ನೂರಾರು ಪ್ರದರ್ಶನ ನೀಡಿದ್ದಾರೆ.

  ಬೀದಿ ನಾಟಕವನ್ನೇ ತಮ್ಮ ಭಾವೈಕ್ಯತೆ ವೇದಿಕೆಯ ಶಕ್ತಿಯನ್ನಾಗಿಸಿಕೊಂಡು ೩೦ಕ್ಕೂ ಹೆಚ್ಚು ಬೀದಿನಾಟಕಗಳ ಸಾವಿರಾರು ಪ್ರದರ್ಶನಗಳನ್ನು ಇಡೀ ನಾಡಿನಾದ್ಯಂತ ಅಲ್ಲದೇ ಮುಂಬೈ,ಕೇರಳ,ಆಂಧ್ರಪ್ರದೇಶ,ದೆಹಲಿ,ತಮಿಳ್ನಾಡು ರಾಜ್ಯಗಳಲ್ಲಿ ನೀಡಿದ್ದಾರೆ. ಅಲ್ಲದೆ ಕೇವಲ ಬೀದಿ ನಾಟಕದ ಪ್ರತಿಭೆಯಿಂದ ಬಿ.ವಿ.ಕಾರಂತ್,ಲಿಂಗದೇವರು ಹಳೆಮನೆ,ಕಿ.ರಂ.ನಾಗರಾಜ,ಪ್ರಸನ್ನ,ದೇವನೂರು ಮಹಾದೇವ, ಸಿ.ಬಸವಲಿಂಗಯ್ಯ,ನಟರಾಜ ಹೊನ್ನವಳ್ಳಿ,ರಾಜೇಂದ್ರ ಜೆನ್ನಿ,ಮಾಲ್ತೇಶ್ ಬಡಿಗೇರ್,ಸಿ.ಜಿ.ಕೆ,ನಾಡೋಜ ದರೋಜಿ ಈರಮ್ಮ,ಜೋಳದರಾಶಿ ದೊಡ್ಡನಗೌಡರು,ಸೆಲ್ವ ,ಮೈಮ್ ರಮೇಶ್ ಇನ್ನು ಮುಂತಾದ ಗಣ್ಯರ ಹಾಗೂ ರಾಜ್ಯ ಮತ್ತು ಕೇಂದ್ರದ ಅನೇಕ ಸಂಘ ಸಂಸ್ಥೆಗಳ ಸಾಂಗತ್ಯ ಹೊಂದಿದ್ದಾರೆ.

ಇದರ ನಡುವೆ ೧೯೯೩ರಲ್ಲಿ ಮುನಿರಾಬಾದ್ ನಲ್ಲಿ ಮೊದಲ ಬಾರಿಗೆ ಪ್ರದರ್ಶಿಸಿದ ಸ್ವರಚನೆ ಮತ್ತು ನಿರ್ದೇಶನದ 'ನಾವು ಮನುಜರು' ಮತ್ತು 'ಅರಿವು' ನಾಟಕಗಳು ನಾಡಿನ ಹಲವು ಭಾಗಗಳಲ್ಲಿ ಪ್ರಸಿದ್ಧಿಯನ್ನು ಗಳಿಸಿದವು.

ಕೇವಲ ಜನಪರ ಉದ್ದೇಶದಿಂದ ಸ್ಥಾಪನೆಯಾದ ಭಾವೈಕ್ಯತೆ ವೇದಿಕೆಯಿಂದ ಇಂದು ಅದೇ ತಂಡ  ೯ ಮಕ್ಕಳಿಗೆ ನೀನಾಸಂ ರಂಗ ಪದವಿ,೪ ಮಕ್ಕಳಿಗೆ ಶಿವಸಂಚಾರದ ರಂಗ ಪದವಿ,ಅಲ್ಲದೇ ೮ ಮಕ್ಕಳಿಗೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವಿದ್ಯಾರ್ಥಿ ವೇತನ ದೊರಕಿಸಿಕೊಡುವಲ್ಲಿ ಇವರ ಸೇವೆ ಆದರಣೀಯವಾದುದ್ದಾಗಿದೆ.

 ಹೀಗೆ ನಿರಂತರ ೩೧ ವರ್ಷಗಳ ಕಾಲ ರಂಗಸೇವೆ ಮಾಡುತ್ತಾ ಬಂದಿರುವ ಅಬ್ದುಲ್ ಸಾಬ್ ರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಬೀದಿ ನಾಟಕ ಸಾರ್ವಭೌಮ,ಕರ್ನಾಟಕದ ಬಾದಲ್ ಸರ್ಕಾರ್, ವಿಶ್ವ ಶಿವಶಂಕರ,ಸಂದೇಶ ಮಾಧ್ಯಮ ಪ್ರಶಸ್ತಿ,ಸಿ.ಜಿ.ಕೆ ಪ್ರಶಸ್ತಿ, ರಂಗತೋರಣ ಪ್ರಶಸ್ತಿ, ರಂಗ

 ಜಂಗಮ ಪ್ರಶಸ್ತಿ ಹೀಗೆ ಹತ್ತು ಹಲವು ಬಿರುದು ಸನ್ಮಾನಗಳು ಇವರ ಮುಡಿ ಸೇರಿವೆ.

  ಇಷ್ಟೆಲ್ಲ ರಂಗಕಾಯಕ ಮತ್ತು ಆಗಾಧ ಪ್ರತಿಭೆಯ ಮೂಲಕ ನಮ್ಮ ನಡುವೆ ಜೀವಿಸುತ್ತಿರುವ ಅಬ್ದುಲ್‌ ಸಾಬ್ ರಿಗೆ ಬೀದಿ ನಾಟಕದ ರೆಪರ್ಟರಿ ಕಟ್ಟುವ ದೊಡ್ಡ ಕನಸಿದೆ.ಈ ಕನಸು ನನಸಾಗಿಸುವತ್ತ ಮಗಳು ರಂಗಭೂಮಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಸಹನಾ ಪಿಂಜಾರ್ ಸಹ ಶ್ರಮಿಸುತ್ತಿದ್ದಾರೆ.ಇವರೊಂದಿಗೆ ಸರ್ಕಾರವು ಕೈ ಜೋಡಿಸುವುತ್ತ ಕಾರ್ಯ ಪ್ರವೃತ್ತರಾಗಲಿ, ಹಾಗೇ ಅಬ್ದುಲ್ ಸಾಬ್ ರಂತಹ ಅನೇಕರು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂಬುದೇ ನನ್ನೀ ಲೇಖನದ ಆಶಯ.


ಲೇಖನ 

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಸಾಹಿತಿ / ರಂಗ ಸಂಶೋಧಕರು

9379857775

manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.