ರಂಗ ಮಾಲಿಕೆ - ೩೮ ನಾಟಕ ಕಂಪನಿಗಳ ಸುಧಾರಕ " ಬಿ.ವಿ.ಈಶ".
ಬಣ್ಣದ ಬದುಕು
ರಂಗ ಮಾಲಿಕೆ -೩೮
ನಾಟಕ ಕಂಪನಿಗಳ ಸುಧಾರಕ " ಬಿ.ವಿ.ಈಶ".
ಕನ್ನಡ ಸಿನಿ ಜಗತ್ತಿನ ಸಿಪಾಯಿ ,ಖ್ಯಾತ ಖಳನಾಯಕರಾಗಿದ್ದ ಸುಧೀರ್ ನಂತಹ ಅನೇಕ ನಟರು ಸಿನಿ ರಂಗದಲ್ಲಿ ಮಿನುಗುವಂತೆ ಮಾಡಿದ ರಂಗಭೂಮಿಯ ಐಕನ್ ಎಂದರೆ ಅದು ಬಿ.ವಿ.ಈಶ ಕೃತ ನಾಟಕ 'ಗೌಡ್ರ ಗದ್ಲ'.ಈ ನಾಟಕವನ್ನು ಇಡೀ ನಾಡಿನಲ್ಲಿ ನೋಡದ,ಕೇಳದ ಕಲಾರಸಿಕರಿಲ್ಲ.ಅಲ್ಲದೇ ಆಗಿನ ಕಾಲದ ನಾಟಕ ಕಂಪನಿಗಳ ಗಲ್ಲಾ ಪೆಟ್ಟಿಗೆ ತುಂಬಾ ಹಣದ ಕೋಡಿಯನ್ನು ಹರಿಸಿದ ಯಶಸ್ವಿ ಪ್ರಯೋಗ ಇದಾಗಿತ್ತು.ಆದರೆ ಅಷ್ಟು ಮಟ್ಟದ ಪ್ರಸಿದ್ಧತೆ ಗಳಿಸಿದ್ದು ನಾಟಕ ಮಾತ್ರ, ನಾಟಕಕಾರ ಅಲ್ಲ ಎಂಬುದನ್ನು ನೆನದರೆ ಖೇಧಕರ ಎನ್ನಿಸುತ್ತದೆ.ಅಲ್ಲದೇ ಇಡೀ ಕನ್ನಡ ರಂಗಭೂಮಿಗೆ ಸಂಚಲನ ಮೂಡಿಸಿದ ಹಲವರಲ್ಲಿ ಈಶ ಸಹ ಪ್ರಮುಖರೆಂದರೂ ತಪ್ಪಾಗಲಾರದು.
ಈಶರವರು ನೋಡಲು ಥೇಟ್ ಹಳೆ ಸಿನಿಮಾದ ವಜ್ರಮುನಿ ತರ ಕಾಣುವ, ಸುಂದರ ಸ್ನಿಗ್ಧ ಮೊಗದ ಚೆಲುವ, ಸದಾ ಮಂದಹಾಸ ಬೀರುವ ಚೆನ್ನಿಗ ಅಷ್ಟೇ ಬಹುಮುಖ ವ್ಯಕ್ತಿತ್ವ ಅಪರೂಪದ ಹರಿಕಾರ. ಇವರು ಕ್ರಿ.ಶ.1934 ರಲ್ಲಿ ಬಳ್ಳಾರಿ(ವಿಜಯನಗರ) ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಿರ್ನಾಕೊರ್ನಾ ಹಳ್ಳಿಯಲ್ಲಿ ಬಸಪ್ಪ ಊರಾಳ ಎಂಬುವವರ ಮಗನಾಗಿ ಜನಿಸಿದರು.
ಬಳ್ಳಾರಿಗೆ ಬರ ಬಂದರೂ ಬಳ್ಳಾರಿ ಭಾಗದಲ್ಲಿ ನಡೆಯುವ ನಾಟಕಗಳಿಗೆ ಎಂದೂ ಬರವಿಲ್ಲ.ಅಂತೆಯೇ ಈ ಭಾಗದಲ್ಲಿ ನಡೆಯುವ ನಾಟಕಗಳನ್ನು ನೋಡತ್ತಲೇ ರಂಗ ಕಲೆಯನ್ನು ಮೈಗೂಡಿಸಿಕೊಂಡುಕನ್ನಡ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಅನೇಕರನ್ನು ಇಲ್ಲಿ ಕಾಣಬಹುದು. ಅಂತಹ ಮಹನೀಯರಲ್ಲೊಬ್ಬರು ಬಿ.ವಿ.ಈಶ. ಇವರು ಬಾಲ್ಯದಲ್ಲೇ ಅನೇಕ ನಾಟಕಗಳಿಂದ ಪ್ರಭಾವಿತರಾಗಿದ್ದಲ್ಲದೇ ಊರಿಗೆಬಂದಿದ್ದ ಅನೇಕ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದರು.ಈಗಿರುವಾಗ ಒಂದು ದಿನ ತಮ್ಮ ಎಸ್.ಎಸ್.ಎಲ್.ಸಿ ಮಗಿಸಿಕೊಂಡು ತಮ್ಮ ೧೮ನೇ ವಯಸ್ಸಿನಲ್ಲಿ ಊರು ತೊರೆದು ಮೊದಲಿಗೆ ಗುಡಗೇರಿ ನಾಟಕ ಕಂಪನಿ ಸೇರಿದರು.ಕೆಲವು ವರ್ಷ ಅಭಿನಯದ ವರ್ಣಾಕ್ಷರ ಕಲಿತು ನಂತರ ಚಿತ್ತರಗಿ ಕಂಪನಿ,ಪುಟ್ಟರಾಜ ಗವಾಯಿ ಕಂಪನಿ,ರಾಮರಾವ್ ದೇಸಾಯಿ ಕಂಪನಿಗಳಲ್ಲಿ ಅವಿರತ ಸೇವೆ ಸಲ್ಲಿಸಿದರು.
ಈಶರವರು ನಾಟಕಗಳ ರಚನೆಯ ಮೊದಲ ಅಕ್ಷರಗಳನ್ನು ಎಚ್.ಎನ್ ಹೂಗಾರರ ಬಳಿ ನಾಟಕಗಳನ್ನು ದುಂಡಾಗಿ ಎತ್ತಿ ಬರೆಯಲು ಸಹಾಯಕರಾಗಿದ್ದ ಸಮಯದಲ್ಲಿ ಕಲಿತರು.
ನಟನೆಯಲ್ಲಿ ಪರಿಪಕ್ವತೆ ಕಾಣದೆ ನಿರಾಶರಾಗಿ ನಂತರ ತಮ್ಮ ರಂಗಾಸಕ್ತಿಯನ್ನು ನಾಟಕ ರಚನೆಯತ್ತ ಹೊರಳಿಸಿದ್ದಲ್ಲದೇ ಗೌಡ್ರ ಗದ್ಲ,ಗೌರಿ ಗೆದ್ದಳು, ಕಲಿತ ಕಳ್ಳ, ಆಶಾ ಲತಾ, ಕೆಟ್ಟ ಮೇಲೆ ಬುದ್ಧಿ ಬಂತು,ನನ್ನ ತಂಗಿ ಅಂತ್ಹವಳಲ್ಲ, ಈಗ್ಹಂಗಾತು,ಪ್ರೇಮದ ಬೆಲೆಯೆ ಪ್ರಾಣ, ಮಟ್ಕಾ ರಾಜ ಇನ್ನೂ ಅನೇಕ ನಾಟಕಗಳನ್ನು ರಚನೆ ಮಾಡಿ ಆರ್ಥಿಕವಾಗಿ ದುಸ್ಥಿತಿಗೆ ತಲುಪಿ ಮೂಲೆಗುಂಪಾಗುತ್ತಿದ್ದ ಅನೇಕ ನಾಟಕ ಕಂಪನಿಗಳ ಜೀವ ನೀಡಿದರೆಂದರು ತಪ್ಪಾಗಲಾರದು.
ಇದಲ್ಲದೆ ಮುಂದೆ ಸ್ವತಃ ತಾವೇ ೧೯೭೭-೭೮ ರಲ್ಲಿ ' ಅಮರೇಶ್ವರ ನಾಟ್ಯವಕಲಾ ಸಂಘ'ವನ್ನು ಸ್ಥಾಪಿಸಿ ಸುಮಾರು ೭-೮ ವರ್ಷಗಳ ಕಾಲ ನಡೆಸಿದರು.ಅಂದಿನ ದಿನಮಾನದಲ್ಲಿ ಇವರ ನಾಟಕಗಳನ್ನು ಆಡದ ನಟರಿದ್ದಿಲ್ಲ ಹಾಗೂ ನಾಟಕ ಕಂಪನಿಗಳು ಇದ್ದಿಲ್ಲ ಎಂಬುವಷ್ಟರ ಮಟ್ಟಿಗೆ ಇವರ ಖ್ಯಾತಿ ಹಬ್ಬಿತ್ತು.ಇವರ ಗೌಡ್ರ ಗದ್ಲ ನಾಟಕವಂತೂ ಹುಬ್ಬಳ್ಳಿಯ ಕ್ಯಾಂಪವೊಂದರಲ್ಲಿ ೩೬೫ ಪ್ರದರ್ಶನಗಳಾಗಿದ್ದವು.ಅಲ್ಲದೇ ಸ್ವತಃ ತಮ್ಮ ಕಂಪನಿಯಿಂದಲೇ ೩೫೧ ಪ್ರಯೋಗ ಕಂಡಿತ್ತು.ಅಷ್ಟರ ಮಟ್ಟಿಗೆ ಇವರ ನಾಟಕಗಳ ಪ್ರಸಿದ್ದತೆಯು ಹಬ್ಬಿತ್ತು.ಇಂದಿಗೂ ಇವರ ವ್ಯಕ್ತಿತ್ವ ಮತ್ತು ನಾಟಕಗಳ ವೈಶಿಷ್ಟ್ಯವನ್ನು ಕುರಿತಾಗಿ ಗಂಟೆಗಟ್ಟಲೆ ಮಾತಾಡುವ ಅನೇಕರಿದ್ದಾರೆ. ಅವರಲ್ಲಿ ಕೆಲವು ಅನಿಸಿಕೆಗಳು ಎಲ್ಲ ಓದುಗ ಮನಮುಟ್ಟುತ್ತವೆ.
'ಗೌಡ್ರ ಗದ್ಲ' ನೋಡದ ಕಲಾಭಿಮಾನಿಯುಂಟೇ ಈ ನಾಡಲ್ಲಿ? ಗಿನ್ನಿಸ್ ಬುಕ್ಕಿನಲ್ಲಿ ಸೇರಬಹುದಾದಷ್ಟು ಪ್ರದರ್ಶನ ಕಂಡ ಸಾಮಾಜಿಕ ನಾಟಕವೆಂದರೆ ಅದೇ ಇರಬೇಕು! ಆದರೆ ಅದರ ಕರ್ತೃ ಬಿ.ವಿ.ಈಶರವರ ಜೀವನವೇ ಒಂದು ದುರಂತ ನಾಟಕದಂತಾಗಿದ್ದು ವಿಪರ್ಯಾಸ. ಅದ್ಯಾವ ಘಳಿಗೆಯಲ್ಲಿ ಆ ಪ್ರಥಮ ನಾಟಕ ಬರೆಯಲು ಕೂತನೋ ಮಹರಾಯ, ಬೆಳಗಾಗುವುದರಲ್ಲಿ ವೃತ್ತಿ ನಾಟಕ ಕಂಪನಿಗಳು ಆತನನ್ನು ಹುಡುಕಿ ಮುಗಿಬಿದ್ದವು . ಕೇವಲ ನಾಲ್ಕನೇ ತರಗತಿ ಓದಿದ ಈಶ ಇಂಥಾ ಹಲವಾರು ಯಶಸ್ವಿ ನಾಟಕಗಳನ್ನು ಅದು ಹೇಗೆ ಬರೆದನೋ! ಉತ್ತರ ಕರ್ನಾಟಕದ ನೂರಾರು ಗ್ರಾಮೀಣ ಹವ್ಯಾಸಿ ಕಲಾವಿದರು 'ಗೌಡ್ರ ಗದ್ಲ' ನಾಟಕವಾಡಿ ಸ್ಟಾರ್ ಆಗಿಬಿಟ್ಟರು. ಮಡಿವಂತಿಕೆಯ ಊರಹಿರಿಯರು ಸಹ ಅದರ ಆಕರ್ಷಣೆಗೆ ಒಳಗಾಗಿ ಡಬಲ್ ಮೀನಿಂಗು ಮತ್ತು ಕ್ಯಾಬರೆ ಡ್ಯಾನ್ಸುಗಳನ್ನು ಸವಿಯತೊಡಗಿದರು.
ಈ ನಾಟಕವನ್ನು ದೇವದುರ್ಗದಲ್ಲಿ ಪ್ರಥಮಬಾರಿಗೆ ಅಭಿನಯಿಸಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬಾಗಲವಾಡ ಗ್ರಾಮದ ಶ್ರೀಮಂತ ಜಮೀನ್ದಾರ ಸಿ.ಡಿ. ಮಲ್ಲಿಕಾರ್ಜುನ ಗೌಡರು. ಇವರು ಬಳ್ಳಾರಿ ವಡ್ಡರಬಂಡೆಯ ಟೆಂಟ್ ಟಾಕೀಸ್ನಲ್ಲಿ 1980ರ ಅವಧಿಯಲ್ಲಿ ಕ್ಯಾಂಪ್ ಮಾಡಿದಾಗ ನಾನು ಆ ನಾಟಕವನ್ನು ನೋಡಿ, ಅವರ ಅಭಿನಯ ಕಂಡು ಬೆರಗಾಗಿದ್ದೆ. ಆಂಗಿಕಾಭಿನಯ ಮತ್ತು ವಾಚಿಕಾಭಿನಯದಲ್ಲಿ ಅವರ ಡೈಲಾಗ್ ಟೈಮಿಂಗ್ ಸೆನ್ಸ್ ಮತ್ತು ಕರಾರುವಾಕ್ಕು ಮ್ಯೂಸಿಕ್ ಕಾರ್ಡ್ಸ್ ನಮ್ಮಂಥ ಹುಡುಗರಲ್ಲಿ ರೋಮಾಂಚನ ಉಂಟುಮಾಡುತ್ತಿತ್ತು. ಆ ನಾಟಕದಲ್ಲಿ ಕ್ಯಾಬರೆ ಡ್ಯಾನ್ಸ್ ಮಾಡುತ್ತಿದ್ದ ನಟಿಗೆ ಮರುಳಾದ ಜಿಲ್ಲಾಧಿಕಾರಿಯೊಬ್ಬರು ಆಕೆಯನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಮನೆ ಮಾಡಿದರಂತೆ. ಇದೇ ನಾಟಕವನ್ನು ಹುಬ್ಬಳ್ಳಿಯಲ್ಲಿ ಸತತ ಒಂದು ವರ್ಷ ರಾಮರಾವ್ ದೇಸಾಯಿ ಕಂಪನಿ ಪ್ರದರ್ಶಿಸಿದಾಗ ಸಿನಿಮಾ ಥೇಟರಿನವರು ನೊಣ ಹೊಡೆಯುವಂತಾಗಿತ್ತು. ನೂರಾರು ಪ್ರದರ್ಶನಗಳ ಮೂಲಕ ಗಲ್ಲಾಪೆಟ್ಟಿಗೆ ತುಂಬಿತುಳುಕಿತ್ತು. ಈ ನಾಟಕದಲ್ಲಿ ಮಧುರಾ ಪಾತ್ರ ಮಾಡಿದ ಪ್ರೇಮಾ ಗುಳೇದಗುಡ್ಡ, ಗೂಡೂರು ಮಮತಾ, ಜಯಲಕ್ಷ್ಮಿ ಪಾಟೀಲ್, ಜಿತೂರಿ ಜಯಮ್ಮ, ಸುಮತಿಶ್ರೀ ಮುಂತಾದ ನಟಿಯರ ಹೆಸರುಗಳು ಜನಜನಿತವಾದವು... ಆದರೆ ಆ ನಾಟಕ ಬರೆದ ಮೂಲಪುರುಷ ಈಶ ತನ್ನ ಊಟೋಪಚಾರದ ಬಗ್ಗೆ ನಿಗಾ ವಹಿಸದೇ ಆರೋಗ್ಯ ಕಡೆಗಣಿಸಿ ಖ್ಯಾತಿಯೆಂಬ ಭ್ರಮಾಲೋಕದ ಅಮಲಿನಲ್ಲಿ ತೇಲಾಡುತ್ತಾ ಎಲ್ಲೋ ಬಿದ್ದಿರುತ್ತಿದ್ದುದು- ಈ ಮಾಯಾಲೋಕದ ಮಾಯೆಗೆ ಹಿಡಿದ ಕನ್ನಡಿಯಂತಿತ್ತು. ರಂಗಭೂಮಿಯನ್ನು ಶ್ರೀಮಂತಗೊಳಿಸಿದವರು ಬಡತನದಲ್ಲಿ ನರಳಿ ಸತ್ತ ಕಥೆಗಳೆಷ್ಟೋ! ಚೂರು ಚುಟುಕು ಗೀಚಿದವರು ಸಾಹಿತ್ಯ ಸಮ್ಮೇಳನಗಳ ವೇದಿಕೆಯಲ್ಲಿ ಮಿಂಚುತ್ತಾರೆ. ಆದರೆ ಬೌದ್ಧಿಕ ವಲಯದಲ್ಲಿ ರಂಗಭೂಮಿಯ ಅನರ್ಘ್ಯ ರತ್ನಗಳ ಸಾಹಿತ್ಯವನ್ನು ಪರಿಗಣಿಸುವುದೇ ಇಲ್ಲ. ಈ ಅಂಶಗಳು ರಂಗಪ್ರತಿಭೆಗಳಲ್ಲಿ ಡಿಪ್ರೆಷನ್ ಉಂಟುಮಾಡುತ್ತವೆ.
ನಾಲ್ಕನೇ ತರಗತಿ ದಾಟದ ಈಶನ ತಲೆಯಲ್ಲಿ ಅಷ್ಟು ಐಡಿಯಾಗಳು ಹೇಗೆ ಹುಟ್ಟಿದವೋ! ಆ ಪ್ಲಾಟುಗಳು ಆತನನ್ನು ಮಲಗಗೊಡಲಿಲ್ಲ. ಬರೆಯುತ್ತಲೇಹೋದ. ಗೌರಿ ಗೆದ್ದಳು, ಕಲಿತ ಕಳ್ಳ, ಕೆಟ್ಟ ಮೇಲೆ ಬುದ್ಧಿ ಬಂತು, ಆಶಾ ಲತಾ... ಎಲ್ಲವೂ ಸೂಪರ್ ಹಿಟ್ ಪ್ರದರ್ಶನಗಳಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಜಯಭೇರಿ ಬಾರಿಸಿದವು. ಈ ನಾಟಕಗಳ ಹುಚ್ಚಿಗೆ ಹೆಸರಾದವರು ಕೆಲವರು, ಕಳೆದುಕೊಂಡವರು ಕೆಲವರು. ಆ ಕಥಾಹಂದರಗಳೆಲ್ಲ ತಮ್ಮೂರಲ್ಲಿ ನಡೆದವೇನೋ ಎಂಬಷ್ಟು ಅಪ್ಯಾಯಮಾನವಾಗಿ ಅಭಿಮಾನಿಗಳು ಹುಚ್ಚೆದ್ದುಹೋದರು. ಜನರು ಈಶಣ್ಣಾ ಎಂದು ಹಾರ ಹಾಕಿ ಅಪ್ಪಿಕೊಂಡರು. ಆ ಮಲ್ಲಿಗೆ ಹಾರದ ಸುವಾಸನೆಯು ಈಶಣ್ಣನ ಬಾಯಿಂದ ಹೊರಡುತ್ತಿದ್ದ ಘಾಟನ್ನು ಮರೆಮಾಡಿತ್ತು. ಸಮಾಜಕ್ಕೆ ಸುಂದರ ನಾಟಕಗಳನ್ನು ನೀಡಿದ ಈಶಣ್ಣನ ಬದುಕು ಮಾತ್ರ ಸುಂದರವಾಗಲಿಲ್ಲ. ಕೀರ್ತಿಯೆಂಬ ಶನಿ ಹುಟ್ಟಿಸಿದ ಭ್ರಮಾಲೋಕದಲ್ಲಿ ವ್ಯಾಮೋಹಗಳ ಬಲೆಯಲ್ಲಿ ಸಿಲುಕಿ ಹೈರಾಣಾಗಿದ್ದ ಖ್ಯಾತ ಕವಿ ಬಿ.ವಿ.ಈಶ ಹಾಗೇ ಒಂದು ದಿನ ತನ್ನ ಪ್ರೀತಿಯ ಚಿಲುಮೆಯಾಗಿದ್ದ ಅದೇ ಹೊಸಪೇಟೆಯ ರಸ್ತೆಯಲ್ಲಿ ಆಯತಪ್ಪಿ ಬಿದ್ದು ಈ ಲೋಕದಿಂದ ನಿರ್ಗಮಿಸಿದ. ಆತನನ್ನು ಗುರುತು ಹಿಡಿದು ಎಬ್ಬಿಸಿ ಆರೈಕೆ ಮಾಡುವ ಯಾವ ಅಭಿಮಾನಿಯೂ ಅಲ್ಲಿದ್ದಿಲ್ಲ. ಇದ್ದಿದ್ದರೆ ಮತ್ತೆ ಎದ್ದು ಕೂತು ಯಾವ ನಾಟಕ ಬರೆಯುತ್ತಿದ್ದನೋ ಈಶ! ಎಂದು ಬಳ್ಳಾರಿಯ ರಂಗಕಲಾವಿದ ಕೆ.ಜಗದೀಶ್ ಮತ್ತು ಕುಡುದಾರಹಾಳ್ ಶಿವಕುಮಾರ್ ತಾತರವರು ತಮ್ಮ ಮನೋಗತ ವ್ಯಕ್ತ ಪಡಿಸುತ್ತಾರೆ.
ಈಶರವರ ಒಡನಾಡಿ ,ರಂಗ ಮಾಂತ್ರಿಕ, ಅವರ ರಂಗಗುರುಗಳಲೊಬ್ಬರಾದ ಮದಿರೆ ಮರಿಸ್ವಾಮಿಯವರು ಸಹ ' ಈಶ ಅಗಾಧ ಪ್ರತಿಭೆಯ ಆಗಾರ.ಅವರು ಕೇವಲ ೩೫ನೇ ವಯಸ್ಸಿಗೆ ತನ್ನ ವಯೋಮಟ್ಟಕ್ಕಿಂತ ಬಹು ಎತ್ತರಕ್ಕೆ ಬೆಳೆದು ನಿಂತು, ಕುಡಿತದ ದುಶ್ಚಟಕ್ಕೆ ಬಲಿಯಾಗಿ ಹೊಸಪೇಟೆಯ ಬೀದಿಯಲ್ಲಿ ಅನಾಥ ಶವವಾಗಿ ಹತನಾದ ನಿರ್ಭಾಗ್ಯವಂತ. ಮದುವೆಯಿಲ್ಲ,ಸಂಸಾರವಂತೂ ಮೊದಲೇ ಇಲ್ಲ ಇವೆಲ್ಲವನ್ನೂ ತೊರೆದು ರಂಗಕಾಯಕಕ್ಕಾಗಿ ಹಗಲಿರುಳು ಶ್ರಮಿಸಿದ ರಂಗಜೀವಿ ' ಎಂದು ಮನದಲ್ಲೇ ವಿಷಾಧಗೊಂಡರು.
ಲೇಖನ
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ
ಸಾಹಿತಿ / ರಂಗ ಸಂಶೋಧಕರು
manjuamazing7@gmail.com
937985777

Comments
Post a Comment