ರಂಗ ಮಾಲಿಕೆ -೩೬ ಕರ್ನಾಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ"
ರಂಗ ಮಾಲಿಕೆ - ೩೬
ಕರ್ನಾಟಕಾಂಧ್ರ ರಂಗಭೂಮಿಯ ಅಭಿಜಾತ ರಂಗತಾರೆ " ಬಳ್ಳಾರಿ ಲಲಿತಮ್ಮ ".
ಬಹುತೇಕ ಕಲಾವಿದರು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಹೋಗಿ ಹೆಸರಾಗಿ ಅಲ್ಲಿಯೇ ನೆಲೆಯೂರಿ ಆಗಾಗ ಮಾತ್ರ ಹವ್ಯಾಸಿಕ್ಕಾಗಿ ರಂಗಭೂಮಿ ಅರಿಸಿದ್ದನ್ನು ನಾವೂ ನೀವೂ ಕಾಣಬಹುದು.ಆದರೆ ಸಿನಿರಂಗದಲ್ಲಿ ಉತ್ತುಂಗಕ್ಕೆ ಏರಿದ್ದರು.ಸಿನಿ ಕ್ಷೇತ್ರವನ್ನು ಸ್ವ ಇಚ್ಛೆಯಿಂದ ತ್ಯಜಿಸಿ. ರಂಗಭೂಮಿಗೆ ಬಂದು ವೃತ್ತಿರಂಗಭೂಮಿಯನ್ನು ಪುನಶ್ಚೇತನಗೊಳಿಸಿದ ವಿರಾತಿವಿರಳಲ್ಲಿ ಒಬ್ಬರು ನಮ್ಮ ಬಳ್ಳಾರಿ ರಂಗಭೂಮಿಯ ಹೊಳೆವ ರಂಗ ತಾರೆ " ಬಳ್ಳಾರಿ ಲಲಿತಮ್ಮ".
ಇವರು ಕ್ರಿ.ಶ.09.01.1923ರಲ್ಲಿ ತಿಮ್ಮಪ್ಪ ಮತ್ತು ವೀರಮ್ಮ ಎಂಬ ದಂಪತಿಗಳ ಮಗಳಾಗಿ ಅನಂತಪುರ ಜಿಲ್ಲೆಯ ಉರವಕೊಂಡ ಜಿಲ್ಲೆಯ ಅಮಿದ್ಯಾಲ ಎಂಬಲ್ಲಿ ಜನಿಸಿದರು.ಅಪ್ಪ ಪ್ರಸಿದ್ಧ ಪಿಟೀಲು ವಾದಕರು, ಅಮ್ಮ ರಂಗಾಸಕ್ತರು,ಅಕ್ಕ ವೆಂಕಮ್ಮ ಮತ್ತು ತಂಗಿ ರತ್ನಮಾಲಾ ಖ್ಯಾತ ರಂಗನಟಿಯರು ಹಾಗೂ ಸುಶ್ರಾವ್ಯ ಗಾಯಕಿಯರು,ನೃತ್ಯಗಾರರು. ಹಾಗಾಗಿ ಲಲಿತಮ್ಮನವರಿಗೂ ಸಹ ಕಲೆಯು ರಕ್ತಗತವಾಗಿ ಬಂದಿದೆ. ಇವರು ತಮ್ಮ ಹುಟ್ಟೂರಿನಲ್ಲೇ ತೆಲುಗು ಮಾಧ್ಯಮದಲ್ಲಿ ೫ ನೇ ತರಗತಿಯವರೆಗೆ ವಿಧ್ಯಾಭ್ಯಾಸ ಮಾಡಿದರು.ನಂತರ ಅಕ್ಕ ವೆಂಕಮ್ಮನವರು ಶ್ರೀಮಂತರ ಮನೆಯ ಅಂಗಳದಲ್ಲಿ ಮದುವೆ ಸಮಾರಂಭದಲ್ಲಿ ಹಾಡುವುದಕ್ಕೆ ಹೋಗುವಾಗ ಇವರನ್ನು ಕರೆದೊಯ್ದರು. ಈ ಮೂಲಕ ಶಾಸ್ತ್ರೀಯ ಹಾಡುಗಾರಿಕೆ ಮತ್ತು ಭರತನಾಟ್ಯವನ್ನು ಕಲಿತರು.ಇದಲ್ಲದೇ ಅಕ್ಕನೊಂದಿಗೆ ಮೊದ ಮೊದಲು ನಾಟಕಗಳಿಗೆ ಹೋದಾಗ ಆಗೀನ ಪ್ರಸಿಧ್ದ ರಂಗನಟಿಯರಾದ ಬಳ್ಳಾರಿ ಜಾನಕಮ್ಮ,ಬಳ್ಳಾರಿ ಪಾರ್ವತಮ್ಮ, ಸುಭದ್ರಮ್ಮ ಮನ್ಸೂರ್, ಭವಾನಿ,ವನಮಾಲಾ ಹಾಗೂ ಸ್ವತಃ ಅಕ್ಕನ ಅಭಿನಯಕ್ಕೆ ಮಾರುಹೋಗಿ ತಮ್ಮಲ್ಲಿನ ಪ್ರತಿಭೆಯ ಅನಾವರಣಕ್ಕೆ ಕಾಯುತ್ತಿದ್ದರು.
ಮೊದಲಿಗೆ ಅಕ್ಕನೊಂದಿಗೆ ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದರು.ನಂತರ ಇವರ ಮನಸೆಳೆಯುವ ಸೌಂದರ್ಯ ಮತ್ತು ಕಂಠಸಿರಿಯಿಂದ ಮತ್ತು ಅಣ್ಣನ ಸ್ನೇಹಿತನ ಸಹಾಯದಿಂದ ಅಕ್ಕನೊಂದಿಗೆ ಮದ್ರಾಸ್ ಗೆ ಹೋಗಿ ಮೊದಲ ಬಾರಿಗೆ ತೆಲುಗಿನ 'ಜಯಪ್ರದ' ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾದರು. ಅಲ್ಲದೇ ಅಕ್ಕ ವೆಂಕಮ್ಮರಿಗೂ ಚಿಕ್ಕ ಪಾತ್ರ ಸಿಕ್ಕಿತು. ಸುಮಾರು ೯ ತಿಂಗಳು ಕಾಲ ಶೂಟಿಂಗ್ ಮಾಡಿ ೮೦೦ ರೂ ಸಂಭಾವನೆಯೊಂದಿಗೆ ಬಳ್ಳಾರಿಗೆ ಬಂದರು.ಅಲ್ಲಿಂದ ಲಲಿತಮ್ಮರಿಗೆ ಎಲ್ಲಿಲ್ಲದ ಬೇಡಿಕೆ ಬಂತು.ಈಶ್ವರ ರಾವ್ ನಾಯಕರಾಗಿ ಮತ್ತು ಶಂಕರ್ ರಾವ್ ನಿರ್ದೇಶನದ 'ಸುಭದ್ರ ಕಲ್ಯಾಣ'ದಲ್ಲಿ ಸುಭದ್ರೆಯಾಗಿ, ಜೆಮಿನಿಯವರ ಎಸ್.ಎಸ್.ವಾಸನ್ ರ 'ಬಾಲ ನಾಗಮ್ಮ',ಕನ್ನಾಂಬರ ಸುಮತಿ', ನಾಗಕನ್ನಿಕೆ ಚಿತ್ರಗಳಿಗೆ ನಾಯಕಿಯಾಗಿ ಅಭಿನಯಿಸಿ ಪ್ರಸಿಧ್ಧರಾದರು.
ಇದೇ ಸಮಯಕ್ಕೆ ಲಲಿತಮ್ಮರಿಗೆ ಕ್ರಿ.ಶ.೧೯೨೮ರಲ್ಲಿ ಮದ್ರಾಸ್ ನ ಎ.ವಿ.ಎಂ ಸ್ಟೂಡಿಯೋದಲ್ಲಿ ಕಲಾವಿದರಾಗಿದ್ದ ಕಲ್ಚರ್ಡ್ ಕಮೇಡಿಯನ್ ಕೆ.ಹಿರಣ್ಣಯ್ಯರ ಪರಿಚಯವಾಗುತ್ತದೆ. ಇಲ್ಲಿಂದ ಲಲಿತಮ್ಮರ ಬಣ್ಣದ ಬದುಕಿನ ಹೊಸ ಪರ್ವವೇ ಆರಂಭವಾಗಿ ಸಿನಿ ಮತ್ತು ರಂಗಭೂಮಿ ಎರಡರಲ್ಲೂ ಹೆಸರುಳಿಯಲು ಪ್ರಮುಖ ಕಾರಣವಾಯಿತು. ಮೊದಲ ಪರಿಚಯದಲ್ಲಿ ಹಿರಣ್ಣಯ್ಯರಿಂದ ರಂಗಗೀತೆಗಳನ್ನು ಕಲಿತು ಅಭಿನಯದ ಆಳವನ್ನು ಹಾಗೂ ಸಂಘಟನಾ ಜಾಣ್ಮೆಯನ್ನು ಅರಿತರು. ನಂತರ ಹಿರಣ್ಣಯ್ಯರ ಕೋರಿಕೆಯ ಮೇರೆಗೆ ೧೯೪೨ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದ ಕೆ.ಹಿರಣ್ಣಯ ಮಿತ್ರ ಮಂಡಳಿ ನಾಟಕ ಕಂಪನಿಯ 'ನವೀನ ಸಧಾರಮೆ' ನಾಟಕದಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು. ಅಲ್ಲದೇ ಅದ್ಭುತ ಅಭಿನಯದ ಮೂಲಕ ೪೦ ಪ್ರದರ್ಶನಗಳಿಂದ ಎಲ್ಲರ ಮನಸೆಳೆದಿದ್ದಲ್ಲದೇ ಪ್ರಮುಖವಾಗಿ ಕೆ.ಹಿರಣ್ಣಯ್ಯರ ಹೃದಯ ಗೆದ್ದು ಅವರಿಗೂ ಹಾಗೂ ಅವರ ಕಂಪನಿಯ ಒಡತಿಯಾಗಿ ಖಾಯಂ ನಟಿಯಾದರು. ಆಗ ಇವರಿಗೆ ಕೇವಲ ೨೦ ರ ಪ್ರಾಯ.
ಎರಡನೇ ಮಡದಿಯಾಗಿದ್ದ ಲಲಿತಮ್ಮರ ಸಿನಿಕಲೆಯನ್ನು ಮತ್ತೆ ಪುನಶ್ಚೇತನಗೊಳಿಸುವ ಸಲುವಾಗಿ ಹಿರಣ್ಣಯ್ಯರು ೧೯೪೩ರಲ್ಲಿ ಲಲಿತಮ್ಮರೊಂದಿಗೆ ಕೊಯಮತ್ತೂರಿಗೆ ಹೋಗಿ ೧೧ ತಿಂಗಳ ಕಾಲ ಸತತ ಪರಿಶ್ರಮದಿಂದ ಪಿಟೀಲು ವಾದಕ ಚೌಡಯ್ಯರ ಕತೆ ಆಧಾರಿತ 'ವಾಣಿ' ಎಂಬ ಕನ್ನಡ ಚಲನಚಿತ್ರ ಮಾಡಿದರು.ಈ ಮೂಲಕ ಬಾಲನಟರಾಗಿ ಮುಸುರಿ ಕೃಷ್ಣಮೂರ್ತಿ, ಮಾಸ್ಟರ್ ಹಿರಣ್ಣಯ್ಯ,ಜೆಂಬೈ ವೈದ್ಯನಾಥ ಭಾಗವತರ್,ಪಾಲ್ಗಾಟ್ ಮಣಿ ಅಯ್ಯರ್ ಹಾಗೂ ತೆಲುಗು ಸಿನಿರಂಗಕ್ಕೆ ಸೀಮಿತರಾಗಿದ್ದ ಲಲಿತಮ್ಮರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ೨೧ ರ ಪ್ರಾಯದ ಹಿರಣ್ಣಯ್ಯರು ರಚಿಸಿದ ೬ ತಾಸೀನ 'ದೇವದಾಸಿ'(ಕರ್ಮ ಕನ್ನಡಿ, ಆಶಾಪಾಶ) ನಾಟಕದಲ್ಲಿ ನಾಯಕಿಯಾಗಿ ಅಭಿನಯಿಸಿ ಒಟ್ಟು ೪೮೭ ಪ್ರದರ್ಶನಗಳ ಮೂಲಕ ಕಲಾ ದಂಪತಿಗಳ ಜೋಡಿ ನಾಡಿನ ತುಂಬಾ ಹೆಸರಾಯಿತು.
ಹೀಗೆ ಪತಿಯ ಕಂಪನಿಯ ಸುಭದ್ರಾ ಕಲ್ಯಾಣ ನಾಟಕದಲ್ಲಿ ಕೃಷ್ಣ,ರಾಮಾಯಣದಲ್ಲಿ ರಾಮ,ಗುಲೇಬ್ ಕಾವಲಿಯಲ್ಲಿ ವೇಶ್ಯೆ,ಎಚ್ಚಮನಾಯಕದಲ್ಲಿ ಮೋಹಿನಿ,ಬಸವೇಶ್ವರದಲ್ಲಿ ಮಾದಲಾಂಭಿಕೆ, ದೇವದಾಸಿಯಲ್ಲಿ ಮಣಿ ಮಂಜರಿ,ಕಬೀರ್ ಮತ್ತು ಸಂಸಾರ ನೌಕೆಯಲ್ಲಿ ಬೀಬಿ,ಮಕ್ಮಲ್ ಟೋಪುಯಲ್ಲಿ ಪಂಕಜಾಕ್ಷಿ, ಕಾಳಿದಾಸದಲ್ಲಿ ಚೂಡಾಮಣಿ, ಮಂಡೋದರಿಯಲ್ಲಿ ಮಂಡೋದರಿ, ಪಂಗನಾಮ,ಅಕ್ಕ ತಂಗಿ, ಗುಲಾಮಗಂಡ,ತಾಯಿ ಕರುಳು ಮುಂತಾದ ನಾಟಕಗಳಲ್ಲಿ ಅಮೋಘವಾಗಿ ಅಭಿನಯಿಸಿದರು.
ರಂಗಭೂಮಿಯ ಮೇರು ಸ್ಥಿತಿಯಲ್ಲಿದ್ದ ಇವರ ಬಾಳಲ್ಲಿ ಕ್ರಿ.ಶ.೨೧.೦೩.೧೯೫೩ರಂದು ಮಡಿಕೇರಿ ಕ್ಯಾಂಪಿನಲ್ಲಿದ್ದ ಕೆ.ಹಿರಣ್ಣಯ್ಯರ ಸಾವಿನಿಂದ ಬಿರುಗಾಳಿ ಬೀಸಿದಂತಾಯಿತು.ಆದರೂ ಎದೆಗುಂದದೆ ರಂಗ ಕಾಯಕವೇ ಉಸಿರಾಗಿಸಿಕೊಂಡಿದ್ದ ಲಲಿತಮ್ಮನವರು ಸುಮಾರು ವರ್ಷಗಳ ಕಾಲ ಮಿತ್ರ ಮಂಡಳಿಯನ್ನು ಮುನ್ನಡೆಸಿ ನಂತರ ತಮ್ಮ ಸಾಕು ಮಗ ನರಸಿಂಹ ಮೂರ್ತಿ (ಮಾ||ಹಿರಣ್ಣಯ್ಯ) ರಿಗೆ ೨೦.೧೨.೧೯೫೮ರಂದು ಶಾಮಣ್ಣರ ಮಗಳು ಶಾಂತರವರೊಂದಿಗೆ ಮದುವೆ ಮಾಡಿ ಬಳ್ಳಾರಿಗೆ ಹಿಂದಿರುಗಿದರು.ನಂತರ ಎಡಬಿಡದೆ ಕಾಡಿದ ಕಲೆಯ ಉಮೇದು ಮತ್ತೆ ೧೯೬೦ ರಲ್ಲಿ 'ಲಲಿತಾ ಕಲಾ ನಾಟ್ಯ ಮಂಡಳಿ' ಎಂಬ ಕಂಪನಿಯನ್ನು ಸ್ಥಾಪಿಸುವಂತೆ ಮಾಡಿತು.ಅಣ್ಣ ವೆಂಕಪ್ಪರ ನೇತೃತ್ವದಲ್ಲಿ ಮಿತ್ರ ಮಂಡಳಿಯ ಹಳೆಯ ಹಾಗೂ ಈ ಮಂಡಳಿಯ ಹೊಸ ನಾಟಕಗಳು ಪ್ರದರ್ಶನ ಮಾಡುತ್ತಾ ಹಾಸ್ಯನಟ ಉಮೇಶ್ ಮತ್ತು ಮಿನುಗುತಾರೆ ಕಲ್ಪನರಂತಹ ಕಲಾವಿದರನ್ನು ಹುಟ್ಟುಹಾಕಿದ ಬಳ್ಳಾರಿ ಜಿಲ್ಲೆಯ ಅಭಿಜಾತ ಕಲಾವಿದೆ ಬಳ್ಳಾರಿ ಲಲಿತಮ್ಮನವರು.ಸುಮಾರು ಏಳು ವರ್ಷಗಳ ಕಾಲ ಕ್ರಿಯಾಶೀಲವಾಗಿದ್ದ ನಾಟ್ಯ ಮಂಡಳಿ ಅನಿವಾರ್ಯವಾಗಿ ೧೯೬೭ರಲ್ಲಿ ಮುಚ್ಚಲ್ಪಟ್ಟಿತು.
ಇವರ ಆದರಣೀಯ ಕಲಾ ಸೇವೆಯನ್ನು ಗುರುತಿಸಿದ ಸರ್ಕಾರ ಮತ್ತು ಸರ್ಕಾರೇತರ ಕಲಾ ಸಂಘ ಸಂಸ್ಥೆಗಳು ಇವರಿಗೆ ೧೯೭೯ ರಲ್ಲಿ ಜೋಳದರಾಶಿ ದೊಡ್ಡನಗೌಡರರಿಂದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ೧೯೯೦ ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಕ್ರಿ.ಶ.೨೧.೦೫.೨೦೦೩ ರಂದು ಬುಧುವಾರ ಬೆಳಿಗ್ಗೆ ೧೦.೩೦ಕ್ಕೆ ಬಳ್ಳಾರಿಯ ಗೋಲ್ಡ್ ಸ್ಮಿತ್ ಕಾಲೋನಿಯ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿ ಮಗ ಕುಮಾರ ಸ್ವಾಮಿ, ಸೊಸೆ ವೆಂಕಮ್ಮ,ಮಗಳು ಉಷಾರಾಣಿ,ಅಳಿಯ ಪ್ರತಾಪ್ ಹಾಗೂ ಸಹಸ್ರಾರು ಕಲಾಭಿಮಾನಿಗಳನ್ನು ಅನಾಥರನ್ನಾಗಿಸಿದರು.
ಕರ್ನಾಟಕಾಂಧ್ರ ರಂಗಭೂಮಿಯಲ್ಲಿ ಅಭಿಜಾತವಾಗಿ ಹೊಳೆದ ಈ ಮೇರು ರಂಗ ಪ್ರತಿಭೆ ಕನ್ನಡ ರಂಗಭೂಮಿಯಲ್ಲಿ ಮರೀಚಿಕೆಯಾಗಿ ಹೋಗಬಾರದೆಂಬ ದೂರದೃಷ್ಟಿಯೇ ಈ ಲೇಖನವನ್ನು ಬರೆಯುವಂತೆ ಮಾಡಿತು.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ / ರಂಗ ಸಂಶೋಧಕರು
೯೩೭೯೮೫೭೭೭೫
manjuamazing7@gmail.com
Comments
Post a Comment