ರಂಗ ಮಾಲಿಕೆ -೩೫ ಗಡಿನಾಡಿನ ರಂಗ ಶಿಕಾರಿ ' ಎಂ.ಪಿ.ಪ್ರಕಾಶ್ '
ಬಣ್ಣದ ಬದುಕು
ರಂಗ ಮಾಲಿಕೆ - ೩೫
ಗಡಿನಾಡಿನ ರಂಗ ಶಿಕಾರಿ 'ಎಂ.ಪಿ.ಪ್ರಕಾಶ್'
ಕಲಾಭಿರುಚಿ ಇರೋ ಎಷ್ಟೋ ರಾಜಕಾರಣಿಗಳನ್ನು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ.ಅದರಲ್ಲೂ ಸ್ವತಃ ನಟರಾಗಿ,ನಿರ್ದೇಶಕರಟಗಿ ,ಸಂಘಟಕರಾಗಿ ಜೀವಿತಾವಧಿಯವರೆಗೂ 'ಕಲೆಯೇ ಉಸಿರು' ಎಂದು ಬದುಕಿದ್ದವರ ಪರಿಚಯ ಕಿವಿಗೂ ಆಗಿರುವುದಿಲ್ಲ.ಅಂತಹ ಮಹನೀಯರ ಸಾಲಿನಲ್ಲಿ ನಿಲ್ಲಬಲ್ಲ ಬಳ್ಳಾರಿಯ ಮತ್ತೋರ್ವ ರಂಗ ಸಾಧಕರೆಂದರೆ ಅದು ಎಂ.ಪಿ.ಪ್ರಕಾಶರು.
ಎಂ. ಪಿ. ಪಿ ಎಂದೇ ಕರೆಯಲ್ಪಡುತಿದ್ದ ಇವರೊಬ್ಬ ಉತ್ತಮ ರಾಜಕೀಯಪಟು, ನಾಡು ಕಂಡ ಸಜ್ಜನ ರಾಜಕಾರಣಿ, ಅಜಾತಶತ್ರು. ಹಂಪಿ ಉತ್ಸವದ ರೂವಾರಿಗಳಾದ ಇವರು ಉಪಮುಖ್ಯಮಂತ್ರಿಗಳಾಗಿ, ಗೃಹ, ಕಂದಾಯ, ಕಾನೂನು, ಗ್ರಾಮೀಣಾಭಿವೃಧ್ಧಿ ಸೇರಿ ಇತರ ಖಾತೆಗಳನ್ನು ನಿರ್ವಹಿಸಿದ್ದರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳಲ್ಲಿ ವಿಶೇಷವಾಗಿ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದರು.
ಇವರು ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣಕ್ಕೆ ದುಡಿದ ವಲ್ಲಭಾಪುರದ ಮರಿಸ್ವಾಮಿ ಮಠದ ಪಾಟೀಲರ ಮಗನಾಗಿ ೧೯೪೦ ಜುಲೈ ೧೧ರಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ನಾರಾಯಣ ದೇವರಕರೆ ಎಂಬಲ್ಲಿ ಜನಿಸಿದರು. ಕಲೆ ಮತ್ತು ಸ್ವಾತಂತ್ರ್ಯ ಹೋರಾಟದ ಪರಿಸರದಲ್ಲಿ ಜನಿಸಿದ ಇವರು ತಮ್ಮ ದೊಡ್ಡಪ್ಪ ಆ ಕಾಲಕ್ಕೆ ಪೂನಾದ ಗಂಧರ್ವ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಭ್ಯಾಸ ಮುಗಿಸಿ ಧಾರವಾಡದ ಆಕಾಶವಾಣಿಯಲ್ಲಿ ಬಿ ಕ್ಲಾಸ್ ಆರ್ಟಿಸ್ಟ್ ಆಗಿದ್ದ ಎಂ.ಪಿ.ಕೊಟ್ರಗೌಡರ ಪ್ರಭಾವದಿಂದ ಪ್ರಕಾಶರು 5ನೇ ತರಗತಿಯಲ್ಲಿದ್ದಾಗಲೇ ದೊಡ್ಡಪ್ಪ ಸ್ಥಾಪಿಸಿದ ಕೊಟ್ರಗೌಡ ಮಿತ್ರ ಮಂಡಳಿಯಿಂದ ಗೌಡರ ನಿರ್ದೇಶನದಲ್ಲಿ 'ಜರಾಸಂಧ' ಎಂಬ ನಾಟಕದ ಜರಾಸಂಧನ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಇವರ ಹುಟ್ಟೂರಿನಲ್ಲಿ ಪ್ರಾಥಮಿಕ,ಬಳ್ಳಾರಿ ವಾರ್ಡ್ಲಾ ಕಾಲೇಜಿನಲ್ಲಿ ಪ್ರೌಢಶಿಕ್ಷಣ, ಬೆಂಗಳೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ, ಬಾಂಬೆಯಲ್ಲಿ ಎಂ.ಎ ಎಕನಾಮಿಕ್ಸ್ ಹಾಗೂ ಬೆಂಗಳೂರಿನಲ್ಲಿ ಎಲ್.ಎಲ್.ಬಿ ಓದಿದರು.
ಹೀಗೆ ವಿದ್ಯಾಭ್ಯಾಸದ ಜೊತೆ ಜೊತೆಗೆ ರಂಗಕಲೆ ಆಸಕ್ತಿ ಎಲ್ಲೂ ಮರೆಮಾಚದೆ ಪ್ರಕಾಶಮಾನವಾಗಿ ಹರಿಯ ಬಿಟ್ಟರು. ಜರಾಸಂಧನ ನಂತರ ಪೃಥ್ವಿ ಮಾಧವ ಭೌಮಾಸುರದಲ್ಲಿ ಬಾಲಕನಾಗಿ ಅಭಿನಯಿಸಿದರು. ಬಾಂಬೆಯಲ್ಲಿಯೂ ಸಹ ಕೆಲವೇ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದ ಸ್ಥಳದಲ್ಲಿ ಹೋರಾಟದ ಮೂಲಕ ಕನ್ನಡಕ್ಕೆ ಅವಕಾಶ ಮಾಡಿಕೊಂಡು ತಾಯಿ,ಸಾಕ್ರಟೀಸ್, ಹೃದಯ ದೇಗುಲ ,ಯಕ್ಷಗಾನ ಪ್ರಸಂಗ,ಅಂಗುಲೀ ಮಾಲಾ,ರಾಮಕೃಷ್ಣ ಪರಮಹಂಸ, ಆಮ್ರಪಾಲಿ ನಾಟಕಗಳಲ್ಲಿ ನಟಿಸಿದ್ದರು ಹಾಗೂ ಬಿರ್ಲಾ ಮಾತೋಶ್ರೀ ಸಭಾಂಗಣದಲ್ಲಿ ಮೊದಲ ಬಾರಿಗೆ ಯಕ್ಷಗಾನಕ್ಕೆ ಸ್ಯಾಕ್ಸೋಪೋನ್ ಬಳಸಿ ಕಾರ್ಯಕ್ರಮ ನೀಡಿ ಜನಮನ್ನಣೆ ಗಳಿಸಿದ್ದರು.
ವಕೀಲ ವೃತ್ತಿ ಪ್ರಾಕ್ಟಿಸಿಗೆಂದು ಹಡಗಲಿ ಬಂದು ಈ ಭಾಗದ ರಂಗಭೂಮಿಗೆ ಅಧುನಿಕ ಲೋಕದ ಹೊಸ ಸ್ಪರ್ಶ ಕೊಡಲು ಮುಂದಾದರು.ಅಂತೆಯೇ ಎಲ್ಲ ರಂಗಾಸಕ್ತ ಗೆಳೆಯರನ್ನು ಸೇರಿಸಿ ಮೊದಲು ಅಳಿಯ ದೇವರು ನಾಟಕ ಮಾಡಿಸಿ ಯಶಸ್ವಿಯಾದರು.ಅದರ ಹುರುಪಿನಲ್ಲೇ ಕಲಾ ದರ್ಶಿನಿ ವೇದಿಕೆಯಲ್ಲಿ ಟಿಪ್ಪು ಸುಲ್ತಾನ್ ಎಂಬ ನಾಟಕವನ್ನು ಮೊದಲ ಬಾರಿಗೆ ನಿರ್ದೇಶಿಸಿ ದಿವಾನ ಪೂರ್ಣಯ್ಯನ ಪಾತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.ಇದರ ಬೆನ್ನಲ್ಲೇ ಬಾಳೊಂದು ನಂದನವನ ನಾಟಕವನ್ನು ಪ್ರದರ್ಶನ ನೀಡುವ ಸಲುವಾಗಿ ತಾಲೀಮು ನಡೆಸುವ ಸಂದರ್ಭದಲ್ಲಿ ತಮ್ಮ ತಂಡಕ್ಕೆ ರಂಗ ಭಾರತಿ ಹೆಸರು ನೀಡಿ ಅಧಿಕೃತವಾಗಿ ೧೯೬೪ರಲ್ಲಿ ಹೂವಿನ ಹಡಗಲಿಯಲ್ಲಿ ಸ್ಥಾಪಿಸಿ ಮೊದಲ ಪ್ರದರ್ಶನ ನೀಡಿದರು. ಅಲ್ಲಿಂದ ಕೇವಲ ಕಂಪನಿ ನಾಟಕಗಳಿಂದ ತುಂಬಿದ್ದ ಹಡಗಲಿ ಸಾಂಸ್ಕೃತಿಕ ಲೋಕದಲ್ಲಿ ಆಷಾಡದ ಒಂದು ದಿನ,ಜೋಕುಮಾರ ಸ್ವಾಮಿ, ರಕ್ಷಾ ಬಂಧನ,ಶುದ್ಧ ಸೋಂಬೇರಿ, ಲಾಟರಿ ಬಂತಪ್ಪೋ ಲಾಟರಿ, ರಕ್ತ ದೀಪ, ಅಲೆಗಳಲ್ಲಿ ರಾಜಹಂಸ,ಅಂಗುಲೀ ಮಾಲಾ, ಹಸಿರು ಬಳೆ, ಬ್ಲಾಕ್ ಮಾರ್ಕೇಟ್, ನನ್ನ ತಂಗಿಗೊಂದು ಗಂಡು ಕೊಡಿ,ಹಕ್ಕಿ ಹರುತಿದೆ ನೋಡಿದಿರಾ, ಅದೃಷ್ಟವೋ ಅದೃಷ್ಟ ,ಅಜ್ಜನ ಅವಾಂತರ, ಸಂಗ್ಯಾ ಬಾಳ್ಯಾ, ಯಾಯಾತಿ ಯಂತಹ ಅಸಂಗತ, ಗೀತ,ಏಕಾಂಕ ನಾಟಕಗಳ ಮೂಲಕ ಹೊಸ ಮೆರಗನ್ನು ತಂದರು.
ಇದರ ನಡುವೆ ಪ್ರಸಿದ್ಧ ಬಂಗಾಳಿ ನಾಟಕಕಾರ ಉತ್ಪಲ್ ದತ್ ರು ಬರೆದ. ಜ್ಞಾನ- ವಿಜ್ಞಾನದ ಬೆಳಕು ಮೂಢಾಂಧಕಾರದ ಮೇಲೆ ಪ್ರವೇಶಿಸದಂತೆ ಮಾಡಲು ಸೂರ್ಯನನ್ನೇ ಶಿಕಾರಿ ಮಾಡುವ ಸಮುದ್ರಗುಪ್ತನ ವ್ಯಕ್ತಿತ್ವ ಮತ್ತು ಅವನ ಕಾಲದ ಆಗುಹೋಗುಗಳ ಸ್ಪಷ್ಟ ಚಿತ್ರಣ ನೀಡುವ ಸೂರ್ಯ ಶಿಕಾರಿ ನಾಟಕವನ್ನು ಕನ್ನಡಿಕರೀಸಿದ್ದಲ್ಲದೇ ರಂಗ ಭಾರತಿಯ ಮೂಲಕ ಯಶಸ್ವಿ ಪ್ರದರ್ಶನ ನೀಡಿ ಹಳ್ಳಿ ರಂಗಭೂಮಿ ಎಂದರೆ ಮೂಗು ಮುರಿಯುತ್ತಿದ್ದವರು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದರು.ಇದಲ್ಲದೆ ಕಂಪನಿ ನಾಟಕ ಕಲಾವಿದರಾದ ಕೆ.ನಾಗರತ್ನಮ್ಮ,ಸುಭದ್ರಮ್ಮ ಮನ್ಸೂರಂತಹ ಅನೇಕ ಕಲಾವಿದರನ್ನು ಸೇರಿಸಿಕೊಂಡು ಸಂಗ್ಯಾ ಬಾಳ್ಯಾ ಜಾನಪದ ನಾಟಕವನ್ನು ಕಟ್ಟಿಕೊಂಡು ದೆಹಲಿಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ವೃತ್ತಿ ರಂಗಭೂಮಿಗೆ ಸೀಮಿತರಾಗಿದ್ದ ಕಲಾವಿದರನ್ನು ಹವ್ಯಾಸಿ ರಂಗಭೂಮಿಗೂ ಪರಿಚಯಿಸಿದರು. ಅಲ್ಲದೇ ಅನೇಕ ನಾಟಕೋತ್ಸವ ,ನಾಟಕ ಸ್ಪರ್ಧೆಗಳನ್ನು,ರಂಗ ಶಿಬಿರಗಳನ್ನು ಏರ್ಪಡಿಸಿ ಬಹಳಷ್ಟು ಕಲಾವಿದರ ಉಗಮಕ್ಕೆ ಕಾರಣರಾದರು.
ಕೇವಲ ಸಾಂಸ್ಕೃತಿಕವಾಗಿ ಬೆಳೆಯದೇ ರಾಜಕೀಯ ಲೋಕದಲ್ಲೂ ಸಹ ಆರಂಭದಲ್ಲಿ ಸಮಾಜವಾಧಿ ಪಾರ್ಟಿ ಅಧ್ಯಕ್ಷರಾಗಿ ನಂತರ ಶಾಸಕರಾಗಿ,ಸಂಸದರಾಗಿ,ಸಚಿವರಾಗಿ ಕೊನೆಗೆ ಉಪ ಮುಖ್ಯ ಮಂತ್ರಿಯಾಗಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಎಸಗಿದರು. ಹಂಪಿ ವಿ.ವಿ, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಮುಂದಾಳತ್ವ, ಹಂಪಿ ಉತ್ಸವದ ರೂವಾರಿ,ಹಿಂದುಳಿದ ಸ್ಥಳಗಳಲ್ಲಿ ಶಾಲಾ, ಕಾಲೇಜು ಸ್ಥಾಪನೆ, ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅಷ್ಟೇ ಅಲ್ಲದೇ ಪ್ರೀತಿಯೇ ದೇವರು ಮತ್ತು ಇತರ ಕಥೆಗಳು (ಅನುವಾದಿತ ಕಥಾಸಂಕಲನ), ಸೂರ್ಯ ಶಿಖಾರಿ (ಅನುವಾದಿತ ನಾಟಕ), ಡೊಮಿಂಗೋ ಪಿಯಾಸ್ ಕಂಡ ವಿಜಯನಗರ (ಅನುವಾದ), ಅಲೆಕ್ಸಾಂದಡರ ಜೆ. ಗ್ರೀನ್ ಲಾ ಮತ್ತು ಕಾಲಿನ್ಗ್ಸ್ ಕಂಡ ವಿಜಯನಗರ (ಅನುವಾದ), ಚುನಾವಣಾ ಸುಧಾರಣೆಗಳು (ಅನುವಾದ: ಮೂಲ- ರಾಮಕೃಷ್ಣ ಹೆಗಡೆ), ನನ್ನ ಜೀವನ ಮತ್ತು ರಾಜಕೀಯ (ಎಸ್. ನಿಜಲಿಂಗಪ್ಪ ಅವರ ಆತ್ಮಕಥನ ಅನುವಾದ,ಕಳಿಂಗ ಸೂರ್ಯ,ಥೈಲ್ಯಾಂಡ್ ಪ್ರವಾಸ, ಅಮೇರಿಕಾ ಪ್ರವಾಸ ಎಂಬ ಪ್ರವಾಸ ಕಥನ ಹಾಗೂ ರಂಗಾಯಣದ ಕುಸುಮಬಾಲೆ: ಒಂದು ಅನುಭವ, ಯಾರ ತಲೆದಂಡ?,ಯಾತಕ್ಕೆ ಮಳೆ ಹೋದವೋ.., ಒಂದು ಕೋಟಿ ರುಪಾಯಿ ಹಗರಣ, ಕೊರಳಿಗೆ ಉರುಳಾಡುತ್ತಿರುವ ಡನ್ಕೆಲ್ ಪ್ರಸ್ತಾಪ, ಮೂಲೆಗುಂಪಾದ ರೋಜಗಾರ್ ಎಂಬ ಸಾಂಸ್ಕೃತಿಕ ಹಾಗೂ ರಾಜಕೀಯ ಲೇಖನಗಳನ್ನೂ ಬರೆದು ಸಾಹಿತ್ಯ ಲೋಕದಲ್ಲಿ ಮಿಂಚಿದ್ದಾರೆ.
ಹೀಗೆ ಬಹುಮುಖ ಪ್ರತಿಭೆಯ ಮೂಲಕ ಇಡೀ ನಾಡಿಗೆ ಚಿರಪರಿಚಿತರಾದ ಇವರ ನಾಟಕಗಳಿಗೆ ಬಾಂಬೆಯಲ್ಲಿ ಉಲ್ಲಾಳ್ ಶೀಲ್ಡ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ, ಮುನ್ಷಿ ಅವಾರ್ಡ್, ೧೯೯೮ ರ ಸಾಲಿನ ನಾಟಕ ಅಕಾಡೆಮಿಯ ಫೆಲೋಶಿಪ್ ಗೌರವ ಹಾಗೂ ಅನೇಕ ಸಂಘ ಸಂಸ್ಥೆಗಳ ಸನ್ಮಾನ ಪುರಸ್ಕಾರಗಳು ದೊರಕಿವೆ.
ತಮ್ಮ ಸರಳತೆ ,ಉದಾರ ಮನೋಭಾವ ಮತ್ತು ಸೃಜನಶೀಲ ಪ್ರತಿಭೆಯ ಮೂಲಕ ಇಡೀ ನಾಡಿನ ತುಂಬಾ ಪ್ರಕಾಶಮಾನವಾಗಿ ಬೆಳಗಿದ ಎಂ.ಪಿ.ಪ್ರಕಾಶರು ದೀರ್ಘ ಕಾಲ ಕ್ಯಾನ್ಸರ್ ನಿಂದ ಬಳಲುತ್ತಿದ್ದರು, ಹಾಗು ಕ್ಯಾನ್ಸರ್ ರೋಗದಿಂದ ಮುಕ್ತಿ ಪಡೆದಿದ್ದಾಗಿಯೂ ಸುದ್ಧಿ ಬಂದಿತ್ತು. ಆದರೆ, ಫೆಬ್ರವರಿ ೯ ೨೦೧೧ ಬುಧವಾರ ಬೆಳಗಿನ ಜಾವ ೫ ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ಅಸುನೀಗುವ ಮೂಲಕ ಮಡದಿ ರುದ್ರಾಂಬ, ತಂದೆಯ ಬಣ್ಣದ ಲೋಕವನ್ನು ಇಂದಿಗೂ ಮುನ್ನಡೆಸುತ್ತಿರುವ ಮಕ್ಕಳಾದ ಎಂ.ಪಿ.ರವೀಂದ್ರ, ಸುಮಾ ವಿಜಯಾ ಹಾಗೂ ಅವರ ಅಚ್ಚುಮೆಚ್ಚಿನ ಕಲಾ ಮನಸ್ಸುಗಳನ್ನು ಅನಾಥರನ್ನಾಗಿಸಿದರು.
ಇಂತಹ ಮಹಾನ್ ಚೇತನ ಗಡಿನಾಡಿನ ರಂಗದೀಪವಾದ ಎಂ.ಪಿ.ಪಿಯವರ ರಂಗ ಸಾಧನೆ ನೆನೆಯುವ ಮೂಲಕ ಅವರ ಬದುಕು ಅನೇಕ ಕಲಾ ಮನಸ್ಸುಗಳಿಗೆ ಪ್ರಕಾಶವಾಗಲಿ ಎಂಬುದೇ ನನ್ನೀ ಲೇಖನದ ಅಶಯ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ/ರಂಗ ಸಂಶೋಧಕರು
9379857775
manjuamazing7@gmail.com

Comments
Post a Comment