ರಂಗ ಮಾಲಿಕೆ -೩೪ ಕಲಾ ಕಿನ್ನರ ' ಡಿ.ದುರ್ಗಾದಾಸ್'
ಬಣ್ಣದ ಬದುಕು
ರಂಗ ಮಾಲಿಕೆ -೩೪
ಕಲಾ ಕಿನ್ನರ ಮರಿಯಮ್ಮನಹಳ್ಳಿ 'ಡಿ.ದುರ್ಗಾದಾಸ್' .
ಮರಿಯಮ್ಮನ ಹಳ್ಳಿ ಎಂದರೆ ಅದೊಂದು ಕಲೆಯ ತವರೂರು ಎಂದೇ ಬಹುತೇಕ ಜನರಿಗೆ ಗೊತ್ತಿರುವ ವಿಷಯ.ಆದರೆ ಈ ಊರಿಗೆ ಇಂತಹ ಒಂದು ಅನ್ವರ್ಥಕ ಬರುವಲ್ಲಿ ಪ್ರಮುಖ ಪಾತ್ರಧಾರಿಯೆಂದರೆ ಕಲಾರಾಧಕ "ಡಿ.ದುರ್ಗಾದಾಸ್".ಇಂದಿನ ಅನೇಕ ಕಲಾಸಕ್ತ ಮನಸ್ಸುಗಳಿಗೆ ಅವರ ಹೆಸರು ಕೇವಲ ಮರಿಯಮ್ಮನಹಳ್ಳಿಯ ರಂಗ ಮಂದಿರವೊಂದರ ಹೆಸರೆಂಬುದು ಮಾತ್ರ ಗೊತ್ತಿದೆ.ಆದರೆ ಅವರ ರಂಗ ಬದುಕಿನ ಶ್ರೇಷ್ಠತೆಯ ಅರಿವು ಬಹುತೇಕರಿಗೆ ಇಲ್ಲವಾಗಿದೆ.
ಇವರು ಬಳ್ಳಾರಿಯ ಜಿಲ್ಲೆಯ ಅಂದಿನ ನಾರಾಯಣದೇವರ ಕೆರೆ ಎಂಬ ಪುಟ್ಟ ಗ್ರಾಮದಲ್ಲಿ ದಾದಮ್ಮನವರ ಹುಲುಗೆಪ್ಪ ಮತ್ತು ಹನುಮವ್ವ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೧೯.೦೨.೧೯೧೭ರಲ್ಲಿ ಜನಿಸಿದರು.ದುರ್ಗದಾಸರ ಇಡೀ ಕುಟುಂಬ ವಾಮನರಾವ್ ರ ನಾಟಕ ಕಂಪನಿಯಲ್ಲಿ ದುಡಿಯುತ್ತಿದ್ದರಿಂದ ಇವರಿಗೂ ಸಹ ರಂಗಕಾಯಕದ ಗೀಳು ಮೂಲತಃ ಹುಟ್ಟಿನಿಂದಲೇ ಆರಂಭವಾಯಿತು.ಇವರ ಜನನಕ್ಕೂ ಪೂರ್ವದಲ್ಲೇ ಇವರ ತಂದೆ ತಾಯಿಯವರು ಕಂಪನಿಯ ಶ್ರೇಷ್ಠ ನಟರೆನಿಸಿದ್ದರು.ಇವರ ಹಾದಿಯಲ್ಲೇ ದುರ್ಗಾದಾಸ್ ರ ಅಕ್ಕಂದಿರಾದ ದಾದಮ್ಮನವರ ಅಂಜಿನಮ್ಮ ಹಾಗೂ ಸಂಜೀವಮ್ಮ ಇಬ್ಬರೂ ವಾಮನರಾವ್ ಕಂಪನಿಯ ಶ್ರೇಷ್ಠ ನಟಿ ಎಂದು ಕರೆಸಿಕೊಂಡಿದ್ದರು.ಅಂಜಿನಮ್ಮ ' ಎನಗೇಕೆ ಲಗ್ನದ ಬಂಧಿ , ಮನ ಒಪ್ಪಿದ ವರನೇ ಚೆಂದ' ಎಂದು ವೇದಿಕೆ ಮೇಲೆ ಸುಶ್ರಾವ್ಯವಾಗಿ ಹಾಡುತ್ತಾ ಜನಮನ ಗೆದ್ದು ಹಾಡುನಟಿಯಾಗಿ ಶ್ರೇಷ್ಠರೆನಿಸಿದ್ದರೆ, ಇನ್ನೂ ಅಕ್ಕ ಸಂಜೀವಮ್ಮ ಕೇವಲ ವಾಮನರಾವ್ ಮಾಸ್ತರ ಕಂಪನಿಯ ಶ್ರೇಷ್ಠ ನಟಿಯಷ್ಟೇ ಅಲ್ಲದೇ ಮುಂದೆ ವಿಶ್ವ ಕಲಾದರ್ಶನ ನಾಟಕ ಮಂಡಳಿ ಕಟ್ಟಿ ಸುಮಾರು ವರ್ಷಗಳ ಕಾಲ ರಂಗಸೇವೆ ಗೈದ ಗಟ್ಟಿಗಿತ್ತಿ.ಇಂತಹ ಮಹಾನ್ ನಟರ ಸಹಭಾಗಿತ್ವದಲ್ಲಿ ಬೆಳೆದ ದುರ್ಗಾದಾಸರು ಸಹ ಮುಂದೊಂದು ದಿನ ಕನ್ನಡ ರಂಗಭೂಮಿಯ ಹಲವು ಮಿನುಗುತಾರೆಗಳ ಸಾಲಿನಲ್ಲಿ ಒಬ್ಬರಾಗುತ್ತಾರೆಂದು ಯಾರೂ ಊಹಿಸಿರಲಿಲ್ಲ.
ರೂಪದಲ್ಲಿ ಸ್ಪೂರದ್ರೂಪಿಯಾಗಿದ್ದಲ್ಲದೇ ನಟನೆಯಲ್ಲಿ ಮೇರು ಪರ್ವತ ಎನಿಸಿದ್ದರು.ಕುಟುಂಬದ ಹೇಳಲಾರದ ಬಡತನ ಮತ್ತು ಸಂಸಾರದ ಹೊರೆಯನ್ನು ಹೊರಲೇಬೇಕಾದ ಅನಿವಾರ್ಯತೆಯಿಂದ ಓದಿ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವ ಆಸೆಯನ್ನು ನೀರಿಗೆ ಬಿಟ್ಟು ಕಂಪನಿಗೆ ಸೇರಿದರು.ಅಂತೆಯೇ ಮೊದಲಿಗೆ ಇಡೀ ಕುಟುಂಬ ಗರುಡ ಸದಾಶಿವರಾಯರ ದತ್ತಾತ್ರೇಯ ನಾಟಕ ಮಂಡಳಿಯಲ್ಲಿ ಇರುವಾಗ ದುರ್ಗಾದಾಸರನ್ನು ೭ನೇ ವಯಸ್ಸಿಗೆ 'ಭಕ್ತ ಪ್ರಹ್ಲಾದ' ನಾಟಕದಲ್ಲಿ ಪ್ರಹ್ಲಾದ ಪಾತ್ರದ ಮೂಲಕ ರಂಗಭೂಮಿಗೆ ಕರೆತರಲಾಯಿತು. ಅಲ್ಲಿಂದ ಆರಂಭವಾದ ದುರ್ಗದಾಸರ ರಂಗಪಯಣ ಏಕತಾನತೆಯಿಂದ ಕೂಡಿತ್ತು .ಆದರೆ ಪ್ರಬುದ್ಧಮಾನಕ್ಕೆ ಬಂದಂತೆಲ್ಲಾ ಗರುಡ ಅಭಿನಯ ಚತುರತೆಯಿಂದ ಪ್ರೇರಣೆಗೊಂಡ ದಾಸರು ಸ್ವತಃ ತಮ್ಮ ರಂಗಪಯಣದ ದಿಕ್ಕನೇ ಬದಲಾಯಿಸಿ ಏರುಗತಿಯ ಉತ್ತುಂಗಕ್ಕೇರಿದರು. ಮೊದ ಮೊದಲು ಹರೆಯದಲ್ಲಿ ಸ್ತ್ರೀ ಪಾತ್ರದಲ್ಲಿ ಮಿಂಚಿದ ದಾಸರು ದೈಹಿಕ,ಬೌದ್ಧಿಕವಾಗಿ ಬೆಳದಂತೆಲ್ಲ ಪ್ರೌಢ ಪಾತ್ರಗಳ ಮೂಲಕ ಜನಮನ್ನಣೆ ಪಡೆದು ಮುಂದೆ ದುಸ್ಥಿತಿಯಲ್ಲಿದ್ದ ವಾಮನ್ ರಾವ್ ರ ವಿಶ್ವ ಗುಣಾದರ್ಶ ನಾಟಕ ಮಂಡಳಿಗೆ ಸೇರಿ ಸುಸ್ಥಿತಿಗೆ ತಂದು ಕೀರ್ತಿ ಗಳಿಸಿದರು.ಅಲ್ಲದೇ ಮುಂದೆ ಇದೇ ಕಂಪನಿಯಲ್ಲಿ ಬಹುತೇಕ ಮುಖ್ಯ ಪಾತ್ರಗಳಲ್ಲಿ ಇಡೀ ಕುಟುಂಬ ಸದಸ್ಯರು ಭಾಗವಹಿಸುವ ಮೂಲಕ ಕಂಪನಿಯ ಬೆನ್ನೆಲುಬಾದರು.ಈ ಕುಟುಂಬದ ಜನಪ್ರಿಯ ನಾಟಕವೆಂದರೆ ' ಕೃಷ್ಣಾರ್ಜುನರ ಕಾಳಗ' .ಈ ನಾಟಕದಲ್ಲಿ ಸಹೋದರ ಹನುಮಂತಪ್ಪ ನಾರದ,ಸಹೋದರಿ ಸಂಜೀವಮ್ಮ ಉತ್ತರೆ ಹಾಗೂ ದುರ್ಗದಾಸರು ಅರ್ಜುನನ ಪಾತ್ರದಲ್ಲಿ ನಟಿಸಿ ಇಡೀ ನಾಟಕಕ್ಕೆ ಮೆರಗು ತಂದಿದ್ದರು.
ಆದರೆ ಅನಿವಾರ್ಯ ಕಾರಣದಿಂದ ಮರಳಿ ಗರುಡರ ಕಂಪನಿಗೆ ಸೇರಿ ರಂಗಕಾರ್ಯದಲ್ಲಿ ತಲ್ಲೀನರಾಗಿದ್ದಾಗ ವಾಮನರಾವರ ಸಾವಿನ ಸುದ್ಧಿ ಇಡೀ ಕುಟುಂಬದ ಶಕ್ತಿಯನ್ನು ಕುಂದಿಸಿತು.ಆಗ ದುರ್ಗದಾಸರು ಕುಟುಂಬ ಸದಸ್ಯರ ಒಮ್ಮತದಂತೆ ಸ್ವತಃ ಧಾರವಾಡದಲ್ಲಿ 'ವಿಶ್ವ ಕಲಾದರ್ಶನ ನಾಟಕ ಮಂಡಳಿ' ಯನ್ನು ವಾಮನರಾವರ ನೆನಪಿನಲ್ಲಿ ಕಟ್ಟಿ ಅದರ ಏಳ್ಗೆಗಾಗಿ ಹಗಲಿರುಳು ದುಡಿಯಲು ಇಡೀ ಕುಟುಂಬ ಟೊಂಕಕಟ್ಟಿ ನಿಂತರು.ಅನೇಕ ಪ್ರೇಕ್ಷಕರ, ರಂಗಾಸಕ್ತರ ಒತ್ತಾಸೆಯಂತೆ ದುರ್ಗದಾಸರು ನಾಡಿನ ಮೂಲೆಮೂಲೆಗೂ ಸಂಚರಿಸಿ ಅನೇಕ ನಾಟಕಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡರು.ಅವುಗಳಲ್ಲಿ ಪ್ರಮುಖವೆಂದರೆ ಕಂದಗಲ್ ಹನುಮಂತ ರಾಯರ ' ಬಡತನದ ಭೂತ' ನಾಟಕದಲ್ಲಿ ಇಂದಿರಾ ಚರಣ ಪಾತ್ರ, 'ಚಿತ್ರಾಂಗದ' ನಾಟಕದ ಅರ್ಜುನನ ಪಾತ್ರ ಜನರ ಮನಸ್ಸಿನಲ್ಲಿ ಹಚ್ಚಳಿಯದೆ ಉಳಿದವುಗಳಾಗಿವೆ.
ಇವರ ಕಲಾನೈಪುಣತೆ ಗರುಡ ಸದಾಶಿವರಾಯರ ಕಂಪನಿ,ವಾಮನ ರಾವ್ ರ ಕಂಪನಿ,ಸುಳ್ಯದ ದೇಸಾಯಿ ಕಂಪನಿ, ವಾಣಿವಿಲಾಸ ನಾಟಕ ಕಂಪನಿ,ವಿಶ್ವ ರಂಜಿನಿ ಕಂಪನಿ,ವೆಂಕೋಬರಾಯ ಕಂಪನಿಗಳಲೆಲ್ಲಾ ಹಚ್ಚೆ ಹೊತ್ತಿ ಇಂದಿಗೂ ನೆನೆಪಿನಲ್ಲಿ ಉಳಿಯುವಂತಾಗಿಸಿದ್ದಾರೆ.
ದಾಸರು ಭಕ್ತ ಪ್ರಹ್ಲಾದ ದಲ್ಲಿ ಪ್ರಹ್ಲಾದನಾಗಿ, ಕಾಳಿದಾಸ ನಾಟಕದಲ್ಲಿ ಭೋಜನಾಗಿ, ಶ್ರೀನಿವಾಸ ಕಲ್ಯಾಣ ದಲ್ಲಿ ಗೋಪಾಲನಾಗಿ,ಚಿತ್ರಾಂಗದದಲ್ಲಿ ಅರ್ಜುನನಾಗಿ,ಸತ್ಯ ಹರಿಶ್ಚಂದ್ರ ನಾಟಕದಲ್ಲಿ ಹರಿಶ್ಚಂದ್ರನಾಗಿ, ಬಡತನದ ಭೂತ ನಾಟಕದಲ್ಲಿ ಇಂದಿರಾ ಚರಣನಾಗಿ ಹಾಗೂ ಮತ್ತಿತರೆ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಎಲ್ಲ ಪಾತ್ರಗೂ ಸೈ ಎನಿಸಿದ್ದರು.ಇದಲ್ಲದೇ ಸ್ವತಃ ತಮ್ಮ ಅನುಭವದ ಮೂಸೆಯಿಂದ ಮೂಡಿಬಂದ ಪ್ರಮುಖ ಪ್ರಕಟಿತ ನಾಟಕಗಳೆಂದರೆ ' ಭಾರತಿ' ,'ಮಲತಾಯಿ','ದ್ರುಪದ ಕನ್ಯೆ','ನಿರ್ಮಲ','ಧೀರ ಧನಂಜಯ','ಕಲಿತ ಕನ್ಯೆ' ಆಗಿವೆ.ಇವಲ್ಲದೇ 'ಏಕಲವ್ಯ,ಕಿತ್ತೂರು ರುದ್ರಮ್ಮ,ಭಾಗ್ಯ ದೇವತೆ,ಗೌರಿ, ಜೀವನ ಸಂಗಾತಿ,ಎಚ್ಚಮನಾಯಕ ಎನ್ನುವ ನಾಟಕಗಳನ್ನು ರಚಿಸಿದ್ದಾರೆ ಎಂಬ ಮಾಹಿತಿ ಇದೆ ಹೊರತು ಅವುಗಳು ಇಂದಿಗೂ ಉಪಲಬ್ಧವಾಗಿಲ್ಲ.
ಕೊನೆಯ ದಿನಗಳಲ್ಲಿ ಕಂಪನಿ ಬದುಕಿಗೆ ವಿದಾಯ ಹೇಳಿ ಹುಟ್ಟೂರು ಸೇರಿ ಎಲಿವಾಳ ಸಿದ್ದಯ್ಯಸ್ವಾಮಿ,ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ ಮುಂತಾದವರೊಡನೆ ಸೇರಿಹೇಮರೆಡ್ಡಿ ಮಲ್ಲಮ್ಮ, ಸಂಪೂರ್ಣ ರಾಮಾಯಾಣ( ಕಲಾವಿದರ ಸಹಾಯಾರ್ಥ), ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮುಂತಾದ ನಾಟಕಗಳನ್ನು ಮಾಡಿದರು.ಇವರ ಕಲಾ ನೈಪುಣ್ಯತೆ ಗುರುತಿಸಿದ ಅನೇಕ ಸಂಘ ಸಂಸ್ಥೆಗಳು ಕಲಾ ಕಿನ್ನರ ಎಂಬ ಬಿರುದು ನೀಡಿ ಹಾಗೂ ೧೯೮೧ರಲ್ಲಿ ಕರ್ನಾಟಕ ಸರ್ಕಾರ ' ರಾಜ್ಯೋತ್ಸವ ಪ್ರಶಸ್ತಿ' ನೀಡಿ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಕಲಾಲೋಕದಲ್ಲಿ ರಾಜನಂತೆ ಮೆರೆದ ದಾಸರ ಕುಟುಂಬಕ್ಕೆ ಕೊನೆಯ ಅವಧಿಯಲ್ಲಿ ಒಂದ್ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಎದುರಾಗಿತ್ತು. ಆಗ ಮಂತ್ರಿಯಾಗಿದ್ದ ನಟ ಮತ್ತು ಕಲಾರಾಧಕರಾಗಿದ್ದ ಎಂ.ಪಿ.ಪ್ರಕಾಶರು ಮಾಡಿದ ಕಲಾ ಮಾಶಾಸಾನವೇ ಕುಟುಂಬಕ್ಕೆ ಆಸರೆಯಾಗಿತ್ತೆಂದರೆ ಯಾರೂ ನಂಬರು.
ಕಲೆಯನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡು ಹಗಲಿರುಳು ಕಲೆಗಾಗಿ ಶ್ರಮಿಸಿ, ೨೦೦೩ರಲ್ಲಿ ಕೊಪ್ಪಳದ ಇರಕಲ್ಲಗಡದ ತಮ್ಮ ಮಗಳ ಭಾರತಿ(ಶಿಕ್ಷಕಿ) ಮನೆಯಲ್ಲಿ ತಮ್ಮ ೮೭ ನೇ ವಯಸ್ಸಿನಲ್ಲಿ ಹತರಾದರು.ತಮ್ಮ ಕಲೆಯ ಕಾಯಕಕ್ಕೆ ಹೆಗಲಾಗಿ,ಇದ್ದಿದ್ದ ಜಮೀನನ್ನು ಉತ್ತುಬಿತ್ತಿ ಮನೆಗೆ ಆಹಾರದ ಮೂಲವಾಗಿದ್ದ ಮಡದಿ ಪಾರ್ವತ್ತಮ್ಮ ,ಹಿರಿಮಗ , ಹಿರಿ ಮಗಳು ರಮಾಬಾಯಿ,ಎರಡನೇ ಮಗಳು ಭಾರತಿ ಹಾಗೂ ಕೊನೆಯ ಮಗಳು ಡಿ.ಹನುಮಕ್ಕರನ್ನು ಅನಾಥರನ್ನಾಗಿಸಿದರು. ಇಂತಹ ಮೇರು ಪ್ರತಿಭೆ ಬಳ್ಳಾರಿಗೆ ಸೇರಿದ್ದು ಎಂದು ಅರಿತಾಗ ಎಂತವರಿಗೂ ಸೋಜಿಗ ಎನಿಸದು.ಆದರೆ ಎಷ್ಟೋ ಜನರ ಮನಸ್ಸಿನಿಂದ ಕಣ್ಣಿಗೂ ಕಾಣಲಾರದಷ್ಟು ದೂರಕ್ಕೆ ಸರಿದಿರುವುದನ್ನು ಗಮನಿಸಿದರೆ ವಿಷಾಧನೀಯ ಎಂದು ತೋರುತ್ತದೆ.ಹಾಗಾಗಿ ಎಲೆಮರೆಯ ಕಾಯಿಯಾದ ಈ ಮಹನೀಯರ ಯಶೋಗಾಥೆ ಅರಹುವ ಕಿರು ಪ್ರಯತ್ನವೇ ನನ್ನೀ ಲೇಖನ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ / ರಂಗ ಸಂಶೋಧಕ.
೯೩೭೯೮೫೭೭೭೫
manjuamazing7@gmail.com

Comments
Post a Comment