ರಂಗ ಮಾಲಿಕೆ -೩೩ ದಣಿವರಿಯದ ರಂಗ ಸಂಚಾರಿ "ಗುಡಿಹಳ್ಳಿ ನಾಗರಾಜ್"


 ಬಣ್ಣದ ಬದುಕು

ರಂಗ ಮಾಲಿಕೆ -೩೨


ದಣಿವರಿಯದ ರಂಗ ಸಂಚಾರಿ " ಗುಡಿಹಳ್ಳಿ ನಾಗರಾಜ್"


     ರಂಗಭೂಮಿಗೆ ಪೂರಕವಾಗಿ ಯಾವುದೇ ಕಾರ್ಯ ಕೈಗೊಂಡರು ಅದು ರಂಗ ಕಾಯಕ ಎನಿಸಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ತೆರೆಮರೆ ಹಿಂದೆ ಇದ್ದುಕೊಂಡು ಇಡೀ ನಾಡಿನಾದ್ಯಂತ ಸಂಚರಿಸಿ ಎಲೆಮರೆಯ ಕಾಯಿಯಂತಿದ್ದ ಹಲವಾರು ರಂಗಮಣಿಗಳನ್ನು ಗುರುತಿಸಿ, ಮುಖ್ಯ ವಾಹಿನಿಗೆ ತಂದು ಅವರ ಬಣ್ಣದ ಬದುಕಿಗೆ ಬೆಳಕಾದವರೆಂದರೇ ಬಳ್ಳಾರಿಯ ಹೆಮ್ಮೆಯ ಪುತ್ರ ಗುಡಿಹಳ್ಳಿ ನಾಗರಾಜ್.

    ಇವರು ಬಿಸಿಲುನಾಡು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕರೆಗುಡಿಹಳ್ಳಿಯ ಚಿಕ್ರಪ್ಪ ಮತ್ತು ಗಂಗಮ್ಮ ಎಂಬ ದಂಪತಿಗಳ ಮಗನಾಗಿ ಕ್ರಿ.ಶ.೧೯೫೪ ರಲ್ಲಿ ಜನಿಸಿದರು.

    ಇವರು ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ರಂಗಭೂಮಿಯ ಹಲವು ವಿಚಾರಗಳ ಕುರಿತಾದ ಸಮಗ್ರ ಜ್ಞಾನವನ್ನು ಹೊಂದಿದ್ದರು.ರಂಗಭೂಮಿ ಕುರಿತಾದ ಇವರ ಬರಹಗಳು ರಂಗಭೂಮಿ ಇತಿಹಾಸದಲ್ಲಿ ಹಾಸು ಹೊಕ್ಕಾಗಿವೆ.ಅಲ್ಲದೆ ಮುಂದಿನ ಪೀಳಿಗೆಗೆ ದಾಖಲೆಗಳಾಗಿವೆ.ಅಲ್ಲದೇ ಅನೇಕ ರಂಗತAಡಗಳ ರೂವಾರಿಯಾಗಿ ,ತೆರೆಯ ಹಿಂದಿನ ಶಕ್ತಿಯಾಗಿ ರಂಗಕಾಯಕವನ್ನು ಸದ್ದಿಯಿಲ್ಲದೆ ಮಾಡಿ ಸುದ್ಧಿಯಾಗಿದ್ದಾರೆ.

  ಇವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಹುಟ್ಟೂರಿನಲ್ಲಿ ಮುಗಿಸಿದರು.ನಂತರ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ ಇಂಗ್ಲೀಷ್ ಪದವಿ ಗಳಿಸಿ ಊರಿಗೆ ಹಿಂತಿರುಗಿದರು.ಅಲ್ಲದೆ ೧೯೮೦ರಲ್ಲಿ ಹರಪನಹಳ್ಳಿಯ ಕಾಲೇಜೊಂದರಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧೯೮೩ ರಿಂದ ಪ್ರಜಾವಾಣಿ, ಸುಧಾ,ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹದಲ್ಲಿ ೩೧ ವರ್ಷಗಳ ಕಾಲ ಸಂಪಾದಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು.

  ಈ ಅವಧಿಯಲ್ಲಿಯೇ ರಂಗಾಸಕ್ತ,ನಟ ಮತ್ತು ನಿರ್ದೇಶಕರಾಗಿದ್ದರಿಂದ ಇವರು ಸ್ವತಃ ತಾವೇ ನಾಡಿನಾದ್ಯಂತ ಸಂಚರಿಸಿ ಮೂಲೆ ಗುಂಪಿಗೆ ಸೇರಿದ್ದ  ಅನೇಕ ಮಹನೀಯರ ಜೀವನ ಚರಿತ್ರೆಯನ್ನು ಕುರಿತಾಗಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ.ಅವುಗಳೆಂದರೆ ರಂಗಸಿರಿ (ಡಾ.ಕೆ.ನಾಗರತ್ನಮ್ಮ),ರಂಗ ನಾಟಕ ಪ್ರಯೋಗ ಸಾರ್ಥಕತೆ,ತೆರೆ ಸರಿದಾಗ (ಮಾಲತಿ ಶ್ರೀ ಮೈಸೂರು), ಗಾನ ಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರ್, ಗುಬ್ಬಿ ವೀರಣ್ಣ,ಡಾ.ಲಕ್ಷ್ಮಣದಾಸ್,ಮೇಕಪ್ ಮನ್ ಸುಬ್ಬಣ್ಣ,ರಂಗನೇವರಿಕೆ,ರಂಗ ಸಂದರ್ಶನ,ರಂಗ ದಿಗ್ಗಜರು,ಚಿಂದೋಡಿ ಲೀಲಾ,ಕಲಾ ಗ್ರಾಮ ಮರಿಯಮ್ಮನಹಳ್ಳಿ,ಜನಪರ ರಂಗಭೂಮಿ, ರಂಗಸೆಲೆ ಇನ್ನು ಮುಂತಾದವು.

  ಇವಲ್ಲದೆ ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗ ಮಾಹಿತಿ ಮಾಲಿಕೆ ಹಾಗೂ ರಂಗ ಸಂಪನ್ನರು ಮಾಲಿಕೆಯ ೪೦ ಕೃತಿಗಳು, ಒಡನಾಡಿ ರಾಮಕೃಷ್ಣ ಮರಾಠೆಯವರೊಂದಿಗೆ ಸೇರಿ ವೃತ್ತಿ ರಂಗದ ಮಹತ್ತರ ನಾಟಕಗಳು ,ಶತಮಾನದ ಶಕಪುರುಷ ಏಣಗಿ ಬಾಳಪ್ಪ ಎಂಬ ಪುಸ್ತಕಗಳನ್ನು ನಾಟಕ ಅಕಾಡೆಮಿಯಿಂದ ಪ್ರಕಟಗೊಂಡಿದೆ. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು ಕೃತಿ ಪ್ರಕಟಿಸಿದರು.

  ಇವರು ರಂಗದ ಮೇಲೆ ಕಾಣಿಸಿದ್ದಕ್ಕಿಂತ ತೆರೆಯ ಹಿಂದೆಯ ಬದುಕು ಸೆವೆಸಿದರು.ಯಾವುದೋ ಕೆಲವು ನಾಟಕಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಸಿ,ನಿರ್ದೇಶಿಸಿದ್ದರು. ಆ ಕುರಿತಾದ ಸಿಗುವ ಮಾಹಿತಿಗಳು ಸಹ ಅಸ್ಪಷ್ಟವಾಗಿವೆ. ಆದರೆ ರಂಗಕರ್ಮಿಗಳ ಬದುಕಿನ ವೈಚಿತ್ರ‍್ಯವನ್ನು ಹಾಗೂ ನಾಟಕ ಪ್ರಯೋಗಗಳ ಆಂತರ್ಯದ ಕುರಿತಾಗಿ ಆಳವಾಗಿ ಅಭ್ಯಸಿಸಿ ಅಂದವಾಗಿ ಬರವಣಿಗೆಯ ಮೂಲಕ ಹಚ್ಚೆ ಹೊತ್ತುವಲ್ಲಿ ನಾಗರಾಜರು ನಿಸ್ಸೀಮರೆನಿಸಿದ್ದರು.

  ಕೇವಲ ಬರವಣಿಗೆಯೊಂದೇ ಅಲ್ಲದೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ,ಪ್ರೆಸ್ ಕ್ಲಬ್ ಉಪಾಧ್ಯಕ್ಷರಾಗಿ,ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ,ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಹರಪನಹಳ್ಳಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

 ಬಹುತೇಕ ರಂಗ ಸಂಪನ್ನರ ಕುರಿತಾದ ಮಾಹಿತಿ ಇಡೀ ನಾಡಿನಾದ್ಯಂತ ಹರಡುವಂತೆ ಮಾಡಿದ ಇವರು ತಮ್ಮ ಜೀವನದ ಏಳು ಬೀಳಿನ ಕುರಿತಾದ ಯಾವುದೇ ಮಾಹಿತಿ ಶೇಖರಿಸದೇ ತೆರೆಯ ಹಿಂದೆಯೇ ಸರಿದು ಹೋದರೆಂಬುದೇ ವಿಷಾಧನೀಯ.

 ಇದಲ್ಲದೇ ಪ್ರತಿ ತಿಂಗಳು ರಂಗಭೂಮಿ ಚಟುವಟಿಕೆಗಳ ಕುರಿತಾದ ಹಲವಾರು ಮಾಹಿತಿಯನ್ನು ಇಡೀ ನಾಡಿಗೆ ಹರುವ ಸಲುವಾಗಿ ರಂಗ ನೇಪತ್ಯವೆಂಬ ಮಾಸಿಕ ಪತ್ರಿಕೆಯನ್ನು ಗೆಳೆಯರಾದ ಕಡಕೋಳ ಮಲ್ಲಿಕಾರ್ಜುನ ,ಧನಂಜಯ ಹಾಗೂ ರುದ್ರೇಶ ಮುಂತಾದವರೊಂದಿಗೆ ಸೇರಿಸಿಕೊಂಡು ಆರಂಭಿಸಿದ್ದಲ್ಲದೇ ತಮ್ಮ ಕೊನೆಯ ದಿನಗಳವರೆಗೆ ನಡೆಸಿಕೊಂಡು ಬಂದಿದ್ದಾರೆ.

  ಇಂತಹ ನಿಸ್ವಾರ್ಥ ರಂಗ ಜೀವಿಯ ಸೇವೆಯನ್ನು ಗುರಿತಿಸಿ ಅನೇಕ ಸಂಘ ಸಂಸ್ಥೆಗಳು ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಮುರುಘರಾಜೇಂದ್ರ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 

   ಇಂತಹ ಸರಳ ಸಜ್ಜನಿಕೆಯ,ಮಿತ ನುಡಿಯ ,ಎಲ್ಲರನ್ನೂ ಹೃತ್ಪೂರ್ವಲವಾಗಿ ಅಪ್ಪಕೊಳ್ಳುವ ಮಹಾನ್ ಚೇತನದ ಬದುಕಿನ ಚಿತ್ರಗಳ ಹರುವಿಕೆಯ ಸಣ್ಣ ಪ್ರಯತ್ನವೇ ನನ್ನಿ ಲೇಖನ.

   ಲೀವರ್ ಕ್ಯಾನ್ಸರ್ ನಿಂದ ಬಳಲಿದ ಈ ಅದಮ್ಯ ಚೈತನ್ಯ ೨೬.೦೮.೨೦೨೧ ರಂದು ಮಡದಿ ಗಿರಿಜಾ ಮತ್ತು ಇಬ್ಬರು ಮಕ್ಕಳನ್ನು,ಒಬ್ಬ ತಮ್ಮ ,ನಾಲ್ಕು ಮಂದಿ ತಂಗಿ ಹಾಗೂ ನಾಡಿನ ಅನೇಕ ರಂಗ ಮನಸ್ಸುಗಳ ಗುಡಿನಿಂದ ತೊರೆದು ಹೋದರೆಂಬ ವಿಷಯವೇ ವಿಷಾಧನೀಯವಾಗಿದೆ.


ಲೇಖನ 

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ಸಾಹಿತಿ/ರಂಗ ಸಂಶೋಧಕರು

೯೩೭೯೮೫೭೭೭೫

mಚಿಟಿರಿuಚಿmಚಿziಟಿg೭@gmಚಿiಟ.ಛಿom

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.