ರಂಗ ಮಾಲಿಕೆ-೩೨ ಕಲಾ ರತ್ನ ವಿ.ರಾಮಚಂದ್ರ
ಬಣ್ಣದ ಬದುಕು
ರಂಗ ಮಾಲಿಕೆ -೩೨
ಕಲಾ ರತ್ನ ' ವಿ.ರಾಮಚಂದ್ರ'
ವೃತ್ತಿಗೆ ಮತ್ತು ವಿದ್ಯೆಗೆ ವ್ಯತಿರಿಕ್ತವಾಗಿ ರಂಗಭೂಮಿಯಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ.ಅವರಿಗೆ ಅದು ಸಾಧನೆಯೇ ಸರಿ.ಅಂತಹ ಅನೇಕರಲ್ಲೊಬ್ಬರು ನಮ್ಮ ಬಳ್ಳಾರಿಯ ವಿ.ರಾಮಚಂದ್ರ. ಇವರು ವೃತ್ತಿಯಲ್ಲಿ ಉದ್ದಿಮೆದಾರರಾಗಿದ್ದರು, ರಂಗಭೂಮಿಯನ್ನು ಅತೀವವಾಗಿ ಮೆಚ್ಚಿ ಹುಚ್ಚ ಹಚ್ಚಿಸಿಕೊಂಡವರು.ಇಂತಹ ಮಹನೀಯರ ರಂಗ ಸಾಧನೆಯನ್ನು ಅರುಹುವ ಚಿಕ್ಕ ಪ್ರಯತ್ನವೇ ನನ್ನೀ ಲೇಖನ.
ಇವರು ೦೧.೦೮.೧೯೬೪ ರಲ್ಲಿ ಹೊನ್ನೂರಪ್ಪ ಮತ್ತು ಲಕ್ಷ್ಮಮ್ಮ ಎಂಬ ದಂಪತಿಗಳ ಮಗನಾಗಿ ಬಳ್ಳಾರಿಯ ಕಾಕರ್ಲತೋಟದಲ್ಲಿ ಜನಿಸಿದರು.
ತಂದೆ ಜಿಲ್ಲಾ ಖಜಾನೆಯಲ್ಲಿ ಜವಾನರಾಗಿದ್ದರು.ಅಲ್ಲದೇ ಕಲಾಸಕ್ತರಾಗಿದ್ದರು. ಇವರು ತಮ್ಮ ೧೦ನೇ ವಯಸ್ಸಿನಲ್ಲಿ ಆ ಓಣಿಯ ಬಯಲಾಟ ಕಲಾವಿದರಿಗೆ ಮಾತುಗಳನ್ನು ಓದಲು ಹೇಳಿಕೊಡುತ್ತಿದ್ದರು. ಆ ಮೂಲಕ ತಮಗೂ ಅರಿವಾಗದ ರೀತಿಯಲ್ಲಿ ಕಲೆಯು ಇವರನ್ನು ಅರ್ವಿಭವಿಸಿತು.ಅದಲ್ಲದೇ ಓಣಿಯ ಓರಗೆಯವರೊಡನೆ ಸೇರಿ ಗಣೇಶ ಹಬ್ಬದ ಪ್ರಯುಕ್ತ ಪ್ರತಿನಿತ್ಯ ಕಾರ್ಯಕ್ರಮ ಆಯೋಜನೆಯ ಉಸ್ತುವಾರಿ ವಹಿಸಿಕೊಂಡರು.ನಂತರ ಪಿ.ಯು.ಸಿ ಓದುವಾಗ ಮುನ್ಸಿಪಲ್ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮದಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಿನುಗುತಾರೆ ಎನಿಸಿದರು.ಇದಾದ ನಂತರ ರಾಘವ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ನಾಟಕಗಳ ವೀಕ್ಷಣೆಯ ಪ್ರೇರಣೆಯೇ ರಂಗಭೂಮಿಗೆ ಧುಮುಕುವಂತೆ ಮಾಡಿತು.
ಇವರ ೧೪ ನೇ ವಯಸ್ಸಿನಲ್ಲಿ ಮಾಡಿದ ಎಂ.ಡಿ.ಮುಜಿವರರ ರಚನೆ ಮತ್ತು ನಿರ್ದೇಶನದ ತರ್ಲೆ ಬಸ್ಯ ಎಂಬ ಹಾಸ್ಯ ನಾಟಕದ ಮೂಲಕ ಪರಿಪಕ್ವ ನಟನೆಯ ಅರಿವಾಯಿತು.ಅಲ್ಲದೆ ರಾಘವ ಕಲಾ ಮಂದಿರದ ಸದಸ್ಯತ್ವವೂ ಸಿಕ್ಕು ಅನೇಕ ರಂಗಕರ್ಮಿಗಳ ಸಖ್ಯ ದೊರೆತ ಕ್ರಮೇಣ ಹಿರಿಯ ನಟರೊಡನೆ ನಟಿಸುವ ಅವಕಾಶ ದೊರೆಯಿತು.
ಆಕಸ್ಮಿಕವಾಗಿ ಕಲಾ ಮಂದಿರದಲ್ಲಿ ಚಿತ್ರದುರ್ಗದ ಕುಮಾರಸ್ವಾಮಿ ನಾಟಕ ಮಂಡಳಿ ಅಯೋಜಿಸಿದ್ದ ಮುಠ್ಠಾಳ ಮಾವ ನಾಟಕದಲ್ಲಿ ಪಂಡಿತನ ಪಾತ್ರ ನಿರ್ವಹಿಸಿ ಜನಮನ್ನಣೆ ಗಳಿಸಿದ್ದರು. ಇದಾದ ನಂತರ ಹಂಪಿ ಉತ್ಸವ ,ಕಲಾ ಪ್ರತಿಭೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಬಿ.ಕಾಂ ಮತ್ತು ಎಲ್.ಎಲ್.ಬಿ ಓದುವ ಸಂದರ್ಭದಲ್ಲೇ ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆ, ಬಳ್ಳಾರಿ ದಲ್ಲಾಳಿ ವರ್ತಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಬಳ್ಳಾರಿ ಕಾಟನ್ ಮಿಲ್ಸ್ ಅಸೋಶಿಯೇಶನ್, ಕನ್ನಡ ಸಂಸ್ಕೃತಿ ಇಲಾಖೆ ಇನ್ನಿತರೆ ಸಂಘ-ಸಂಸ್ಥೆಗಳ ಒಡನಾಟದಿಂದ ಅಳಿಯ ಮನೆಯ ತೊಳಿಯ, ಬಳೆಗಾರ ದೃತರಾಷ್ಟ್ರ ಕೋಗಿಲೆ ರಕ್ತರಾತ್ರಿ ಯಾರಿಗೆ ಬೇಕು ನಿನ್ನ ಕವಿತೆ, ಬಾಡಿದ ಹೂವು, ದ್ರೌಪತಿ ವಸ್ತ್ರಾಪರಣ, ಮೋಹಿನಿ ಭಸ್ಮಾಸುರ, ಎಚ್ಚಮನಾಯಕ, ಸಾವಿತ್ರಿ ಸವಾಲ್, ಗೌಡ್ರ ಗದ್ಲ, ಕಾರುಲೋ ಶಿಕಾರಿ,ಅಮ್ಮಾ,ವೀರ ಅಭಿಮನ್ಯು ಎಂಬಿತ್ಯಾದಿ ಪೌರಾಣಿಕ ,ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ರಂಗ ಗರಿಮೆ ಹೊಂದಿದ್ದಾರೆ.
ಅಲ್ಲದೇ ಈ ಮೂಲಕ ಬೆಳಗಲ್ ವೀರಣ್ಣ ಸುಭದ್ರಮ್ಮ ಮನ್ಸೂರ್ ವೀಣಾ ಆದೋನಿ ಶಂಕರ್ ನಾಯ್ಡು, ರಮೇಶ್ ಗೌಡ ಪಾಟೀಲ್ ಅಣ್ಣಾಜಿ ಕೃಷ್ಣಾರೆಡ್ಡಿ ಪುರುಷೋತ್ತಮ ಹಂದ್ಯಾಳ್ ಮತ್ತಿತರರ ಒಡನಾಟದಿಂದ ಅನೇಕ ರಂಗ ತರಬೇತಿ ಹೊಂದಿದರು.
ಇದಲ್ಲದೇ ಕರ್ನಾಟಕ ಯುವ ಶಕ್ತಿ ಎಂಬ ಸಂಸ್ಥೆಯನ್ನು ಕಟ್ಟಿ ಅನೇಕ ವರ್ಷಗಳಿಂದ ಬಡಜನರಿಗೆ ಸಹಾಯ ರಂಗ ಕೈಂಕರ್ಯ ಹಾಗೂ ನೊಂದ ಮನಸ್ಸುಗಳಿಗೆ ನೆರವಿನ ಆಸರೆಯನ್ನು ನೀಡುತ್ತಾ ಬಂದಿದ್ದಾರೆ. ಹಾಗೂ ಯಾರಿಗೆ ಬೇಕು ನಿನ್ನ ಕವಿತೆ ಭಾರಿ ರಾವಣಾಯಣ ಎಂಬ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ.
ಇವರ ರಂಗ ಮತ್ತು ಸಮಾಜಮುಖಿ ಕಾರ್ಯ ಸಾಧನೆಯನ್ನು ಗುರುತಿಸಿದ ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ "ಜಿಲ್ಲಾ ರಾಘವ ಪ್ರಶಸ್ತಿ - 2021," ತುಂಗ ಗಂಗಾ ಸಂಸ್ಥೆಯ ವತಿಯಿಂದ 'ಕಲಾರತ್ನ' ಎಂಬ ಪ್ರಶಸ್ತಿಯನ್ನು ಹಾಗೂ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದಾರೆ.
ರಂಗಭೂಮಿಯನ್ನು ಮೆಚ್ಚಿಕೊಂಡು ಬರುವ ಪ್ರತಿಯೊಬ್ಬರಿಗೂ ಅತೀವ ಪ್ರೀತಿ ಮಮತೆಯಿಂದಲೇ ಮಾತಾನಾಡಿಸುವ ಮತ್ತು ಸಹಕರಿಸುವ ಸರಳ ವ್ಯಕ್ತಿತ್ವದ ಸಾಕಾರ ಮೂರ್ತಿಯೆನಿಸಿದ್ದಾರೆ.ಇವರ ರಂಗ ಶಿಖರ ಇನ್ನು ಎತ್ತರಕ್ಕೆ ಬೆಳೆಯಲೆಂದು ನಾವು ನೀವು ಆಶಿಸುವ .
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ / ರಂಗ ಸಂಶೋಧಕರು
manjuamazing7@gmail.com
9379857775.

Comments
Post a Comment