ರಂಗ ಮಾಲಿಕೆ -೩೧ ಕಾರಂತ ರತ್ನ ' ಮುದ್ದಟನೂರು ಜಿ.ವೀರನಗೌಡ
ಬಣ್ಣದ ಬದುಕು
ರಂಗ ಮಾಲಿಕೆ -೩೧
ಕಾರಂತ ರತ್ನ " ಮುದ್ದಟನೂರು ಜಿ.ವೀರನಗೌಡ"
ಕಲೆಯ ಕಲಿಕೆಗಾಗಿಯೇ ಹುಟ್ಟೂರು ,ಹೆತ್ತವರ ತೊರೆದು ಹೋಗಿ ಕಲಿತು ನಂಬಿದವರ ಕಣ್ಣಲ್ಲಿ ಅರಳಿ ಹೂಗಳ ಸಂಖ್ಯೆ ಅದೇಷ್ಟೋ .ಅಂತಹ ಒಂದು ರಂಗ ಪುಷ್ಪ ನಮ್ಮ ಸಿರಿನಾಡಿನ ಸಿರುಗುಪ್ಪ ಕಾಣಸಿಗುವುದು.ಅವರ ನೈಜ ಬದುಕಿನ ಸಾರವೇ ಈ ಲೇಖನ ಆಶಯ.ಅವರೇ ಮುದ್ದಟನೂರು ಜಿ. ವೀರನಗೌಡ.
ಇವರು ಕ್ರಿ.ಶ.೧೯೫೫ ರಲ್ಲಿ ಶ್ರೀ ಚಂದ್ರೇಗೌಡ ಮತ್ತು ಶ್ರೀಮತಿ ಸೀತಮ್ಮ ಎಂಬ ದಂಪತಿಗಳ ಮಗನಾಗಿ ಬಳ್ಳಾರಿ ಜಿಲ್ಲಾ ಸಿರುಗುಪ್ಪ ತಾಲ್ಲೂಕಿನ ಮುದ್ದಟನೂರು ಗ್ರಾಮದಲ್ಲಿ ಜನಿಸಿದರು.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ಶಿಕ್ಷಣ ಕೇವಲ ೬ನೇ ತರಗತಿಗೆ ಸಿಮೀತವಾಯಿತು.ಅಲ್ಲದೇ ತಾತ ಮತ್ತು ತಂದೆ ಬಯಲಾಟ ಕಲಾವಿದರು ಮತ್ತು ನಿರ್ದೇಶಕರಾಗಿದ್ದರಿಂದ ಬಯಲಾಟ ಕಲೆ ರಕ್ತಗತವಾಗಿ ಬಂದಿತು. ಬಾಲ್ಯದಿಂದಲೂ ನಟನೆ, ಸಂಗೀತದಲ್ಲಿ ಅತೀವ ಹಂಬಲ ಇದ್ದಿದ್ದರಿಂದ ೧೫ ನೇ ವಯಸ್ಸಿಗೆ ಮನೆ ಬಿಟ್ಟು ಹೋಗಿ ಹುಬ್ಬಳ್ಳಿ ಸೇರಿದರು.ಅಲ್ಲದೇ ಅವರಿವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿಯ ಕೊಳಲು ವಾದಕ ಕೃಷ್ಣಮೂರ್ತಿಯವರ ಬಳಿ ಸಂಗೀತಾಭ್ಯಾಸಕ್ಕಾಗಿ ಸೇರಿಕೊಂಡರು.
ಶ್ರದ್ಧೆ,ಭಕ್ತಿ,ಒಲವಿನಿಂದಲೇ ಸಂಗೀತ ಒಲಿಸಿಕೊಂಡು ಹುಟ್ಟೂರಿಗೆ ಬರುತ್ತಾರೆ. ನಂತರ ಮುದ್ದಾಪುರ ನಾಟಕ ಮಾಸ್ತರ್ ಪಂಪಾಪತಿಯವರ ಬಳಿ ಹಾರ್ಮೋನಿಯಂ ಅಭ್ಯಾಸ ಮಾಡಿದರು.
ಹೀಗೆ ಸಂಗೀತ, ಹಾರ್ಮೋನಿಯಂ ಮತ್ತು ನಟನೆ ನಿರ್ದೇಶನಗಳಲ್ಲಿ ತರಬೇತಿ ಪಡೆದು ಪ್ರಥಮಬಾರಿಗೆ 'ಭಕ್ತ ಸುಧನ್ವ ಕಾಳಗ' ಎಂಬ ಬಯಲಾಟವನ್ನು ನಿರ್ದೇಶಿಸಿ ಯಶಸ್ವಿಯಾಗಿ ರಂಗಭೂಮಿ ಸೇವೆಗೆ ಮುಂದಾದರು.
ಹೀಗೆ ಕರ್ನಾಟಕದ ಬಳ್ಳಾರಿ , ಬೆಂಗಳೂರು,ಕೊಪ್ಪಳ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಹಾಗೂ ಆಂಧ್ರಪ್ರದೇಶದ ಕರ್ನೂಲ್, ಅನಂತಪುರ ಜಿಲ್ಲೆಗಳಲ್ಲಿ, ಗುಜರಾತ್,ಮಹಾರಾಷ್ಟ್ರ, ತಮಿಳುನಾಡು ಮುಂತಾದ ನೆರೆ ರಾಜ್ಯಗಳಲ್ಲೂ ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ.
ಇವರು ಸುಮಾರು 800ಕ್ಕೂ ಹೆಚ್ಚು ಪೌರಾಣಿಕ ಐತಿಹಾಸಿಕ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ ಸಂಗೀತ ನೀಡಿ ಜನಮನ್ನಣೆ ಗಳಸಿದ್ದಾರೆ ಅವುಗಳಲ್ಲಿ ಪ್ರಮುಖವು ಎಂದರೆ ಪಾಂಡು ವಿಜಯ, ಅಭಿಮನ್ಯು ಕಾಳಗ ,ಪ್ರಮೀಳಾ ದರ್ಬಾರ್, ಲವಕುಶ ಕಾಳಗ, ರತಿ ಕಲ್ಯಾಣ, ಕನಕಾಂಗಿ ಕಲ್ಯಾಣ ಭೀಮ ಪ್ರತಿಜ್ಞೆ, ಸೌಗಂಧಿಕ ಪುಷ್ಪ, ರಂಭ ಊರ್ವಶಿಯರ ಶಾಪ, ದುರ್ಯೋಧನ ಗರ್ವಭಂಗ, ರಾಮಾಯಣ ,ಬಬಬ್ರುವಾಹನ ಕಾಳಗ ,ಕಾರ್ತಿವೀರಾರ್ಜುನ ಕಾಳಗ , ವೀರ ನಾಗಾರ್ಜುನ ಕಾಳಗ , ಗಿರಿಜಾ ಕಲ್ಯಾಣ, ಹಾಗೂ ಪಾರ್ಥ ವಿಜಯ ಇನ್ನೂ ಮುಂತಾದವುಗಳು.
ಇವರು ಕೇವಲ ನಾಟಕ ನಿರ್ದೇಶಕರಲ್ಲದೆ ಸಂಗೀತಗಾರರು ಕೂಡ.ಅಲ್ಲದೇ ಮದಿರೆ ಮರಿಸ್ವಾಮಿ, ಅನುರಾಧ ಭಟ್,ಮೇಘನಾರೊಂದಿಗೆ ಸೇರಿ ಅನೇಕ ನಾಟಕಗಳಿಗೆ ರಂಗ ಗೀತೆಗಳನ್ನು ಬರೆದು ರಾಗಸಂಯೋಜನೆ ಮತ್ತು ಸಂಗೀತ ಸಂಯೋಜನೆ ಮಾಡಿ ಧ್ವನಿ ಸುರುಳಿ ಹೊರತಂದಿದ್ದಾರೆ. ಕೆಲವು ನಾಟಕಗಳಲ್ಲಿ ತಾವೇ ಗಾಯಕರಾಗಿ ಹಾಡಿದ್ದಾರೆ ಮತ್ತು ಪಾತ್ರಗಳಲ್ಲಿ ಕಲಾವಿದರಾಗಿ ಅಭಿನಯಿಸಿದ್ದಾರೆ.ಹೀಗೆ ನಾಟಕ ಯಶಸ್ವಿಗೆ ಬೇಕಾದ ಎಲ್ಲಾ ರಂಗಗಳಲ್ಲಿ ಕಾರ್ಯನಿರ್ವಹಿಸಿ ಯಶಸ್ವಿ ರಂಗಕರ್ಮಿ ಎನಿಸಿದ್ದಾರೆ. ಇವರು ಸುಮಾರು ಮುನ್ನೂರಕ್ಕೂ ಹೆಚ್ಚು ರಂಗಗೀತೆಗಳಿಗೆ ದನಿಯಾಗಿದ್ದಾರೆ.
ಇದಲ್ಲದೆ ಸಾಹಿತಿಯಾಗಿಯೂ ಗುರುತಿಸಿಕೊಂಡು ಅನೇಕ ಕವನಗಳನ್ನು ವಚನಗಳನ್ನು ಬರೆದಿದ್ದಾರೆ. ಅಲ್ಲದೆ ವಚನ ಬಿಂದು ಎಂಬ ಕವನ ಸಂಕಲನ ಹೊರತರುವ ಹಂತದಲ್ಲಿದ್ದಾರೆ. ಇದ್ದುದರಲ್ಲೇ ಹಸಿದವರಿಗೆ ಹಂಚಿತಿನ್ನುವ ಸರಳ ಸ್ವಭಾವದ ವ್ಯಕ್ತಿ ಎನಿಸಿದ್ದಾರೆ.
ಇವರ ಅಮೂಲ್ಯವಾದ ರಂಗ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಸಿರುಗುಪ್ಪ ಪ್ರಶಸ್ತಿ , ಹಂಪಿ ಉತ್ಸವ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ಹಾಗೂ ಕಾರಂತ ರಂಗಲೋಕ,ಬಿ.ಜಿ.ದಿನ್ನೆ ಇವರ ವತಿಯಿಂದ ಕಾರಂತ ರತ್ನ ಪ್ರಶಸ್ತಿ ಪುರಸ್ಕಾರಗಳನ್ನೂ ನೀಡಿ ಗೌರವಿಸಿದೆ.
ಇವರ ಎಲ್ಲಾ ಸಾಧನೆಗೆ ಪತ್ನಿ ಅಕ್ಕನಾಗಮ್ಮ ಹಾಗೂ ಮಕ್ಕಳಾದ ಜಿ.ಭೀಮನಗೌಡ, ಜಿ.ಪರಿಮಳ, ಜಿ.ಶ್ರೀದೇವಿ ಹೆಗಲಾಗಿ ನಿಂತಿದ್ದಾರೆ.ಅಲ್ಲದೇ ಇಂದಿಗೂ ಬಯಲಾಟ ಎಂದ ಕೂಡಲೇ ಸದಾ ಸಿದ್ದಹಸ್ತರಾಗಿರುವ ಇವರ ಕಲೋತ್ಸಹಕ್ಕಾಗಿ ನಾವು ನೀವು ತಲೆಬಾಗಲೇಬೇಕು.ಇಂತವರ ರಂಗ ಕಾಯಕದ ಪಯಣದ ಒಂದು ಇಣುಕು ನೋಟವೇ ನನ್ನೀ ಲೇಖನ.
ಲೇಖನ
ಆರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆ.
ಸಾಹಿತಿ / ರಂಗ ಸಂಶೋಧಕರು
9379857775
manjuamazing7@gmail.com

Comments
Post a Comment