ರಂಗ ಮಾಲಿಕೆ -೩೦ ರಂಗಭೂಮಿಯ ಮಿನುಗುತಾರೆ ' ವೀಣಾ ಆದೋನಿ'.


 ಬಣ್ಣದ ಬದುಕು

ರಂಗ ಮಾಲಿಕೆ-೩೦

ರಂಗಭೂಮಿಯ ಮಿನುಗು ತಾರೆ ' ವೀಣಾ ಕುಮಾರಿ ಆದೋನಿ'.

ಕನ್ನಡ ನಾಡಿನಲ್ಲಿ ಹುಟ್ಟಿ ಕನ್ನಡ ಮಾತಾನಾಡುವುದಾಗಲಿ ಅಥವಾ ಕನ್ನಡದಲ್ಲಿ ಪ್ರೌಢಿಮೆ ತೋರುವುದೇನು ದೊಡ್ಡಷ್ತಿಕೆ ಎನಿಸುವುದಿಲ್ಲ.ಆದರೆ ಪರಭಾಷಿಯೊರ್ವರು ಕನ್ನಡದಲ್ಲಿ ಮಾತಾಡುವ, ಕನ್ನಡಿಗರನ್ನು ನಾಚಿಸುವಂತೆ ತುಂಬಾ ಮನೋಜ್ಞವಾಗಿ ಅಭಿನಯಿಸುವ ಚಾಕಚಕ್ಯತೆ ಹೊಂದಿರುವ ಕಲಾವಿದರು ನಮ್ಮಲ್ಲಿ ಕೆಲವರಿದ್ದಾರೆ. ಅಂತಹ ವಿರಳಾತಿ ವಿರಳರಲ್ಲೊಬ್ಬರೆಂದರೆ ಬಳ್ಳಾರಿಯ ವೀಣಾ ಕುಮಾರಿ ಆದೋನಿ.
  ಇವರು ೦೨-೦೨-೧೯೬೨ರಂದು ಕರ್ನೂಲು ಜಿಲ್ಲೆಯ ಆಲೂರು ತಾಲ್ಲೂಕಿನ ಉಳೇಬೀಡು ಎಂಬಲ್ಲಿ  ಗೋವಿಂದರೆಡ್ಡಿ ಮತ್ತು ಉಳೇಬೀಡು ರಂಗಮ್ಮ ಎಂಬ ದಂಪತಿಗಳ ಮಗಳಾಗಿ ಜನಿಸಿದರು.
 ಕುಟುಂಬದ ಹಿನ್ನಲೆಯಲ್ಲಿ ಇವರ ತಾತ ನೇಮಕಲ್ ರಂಗಪ್ಪನವರು ಖ್ಯಾತ ಹಾರ್ಮೋನಿಯಂ ವಾದಕರು ಹಾಗೂ ದಕ್ಷಿಣಾದಿ ಸಂಗೀತ ಗಾಯಕರಾಗಿದ್ದರು.ಇದಲ್ಲದೇ ಬೈರವಿ ರಾಗವನ್ನು ಅತ್ಯದ್ಭುತವಾಗಿ ನುಡಿಸುವ ಮೂಲಕ ಹೈದರಾಬಾದ್ ನಲ್ಲಿ ಹಿರಿಯ ನಟಿ ಆದೋನಿ ಲಕ್ಷಮ್ಮಮ್ಮರ ಪತಿ ಆದೋನಿ ರಘುರಾಮಯ್ಯರಿಂದ ' ಬೈರವಿ ರಂಗಪ್ಪ' ಬಿರುದು ಪಡೆದಿದ್ದರು. ಇನ್ನು ತಾಯಿ ಉಳೇಬೀಡು ರಂಗಮ್ಮ ಪ್ರಸಿದ್ಧ ವೃತ್ತಿ ರಂಗಭೂಮಿ ಕಲಾವಿದರು ಕೊಟ್ಟೂರು ಸುಜಾತಮ್ನ,ಸುಭದ್ರಮ್ಮ ಮನ್ಸೂರ್,ಮದಿರೆ ಮರಿಸ್ವಾಮಿ, ಕುಂಟನಹಾಳ್ ಸಿದ್ಧನಗೌಡರಂತಹ ಮೇಧಾವಿ ನಟರೊಡನೆ ರಂಗಸಖ್ಯ ಹೊಂದಿದವರು.ಹಾಗೂ ತಂದೆ ಗೋವಿಂದ ರೆಡ್ಡಿಯವರು ಗೌಡಿಕೆ ಮಾಡುತ್ತಿದ್ದ ಸಾಂಪ್ರದಾಯಸ್ಥ ರೈತರಾಗಿದ್ದರು ಈ ಎಲ್ಲ ಕಾರಣದಿಂದಾಗಿ ವೀಣಮ್ಮನವರಲ್ಲೂ ಕಲೆಯೆಂಬುದು ರಕ್ತಗತವಾಗಿ ಬಂದಿತ್ತೆಂದು ಹೇಳಬಹುದು.
   ಅಮ್ಮನವರು ತಮ್ಮ ಏಳನೇ ವಯಸ್ಸಿನಲ್ಲಿ ತಾಯಿಯೊಂದಿಗೆ ನಾಟಕಕ್ಕೆ ಆದೋನಿಗೆ ಹೋದಾಗ ಆಕಸ್ಮಿಕವಾಗಿ ಮಹಾಂತೇಶ್ ಶಾಸ್ತ್ರಿ ರಚನೆ ಮತ್ತು ಕರೂರ್ ತಿಮ್ಮಪ್ಪರ(ಕೆ.ವಿ.ತಿಮ್ಮಪ್ಪ) ನಿರ್ದೇಶನದ ' ಅಣ್ಣ ತಮ್ಮ' ನಾಟಕದಲ್ಲಿ ಮಮತಾ ಎಂಬ ಪುಟ್ಟ ಪಾತ್ರದ ಮೂಲಕ ಬಾಲನಟಿಯಾಗಿ ಬಣ್ಣ ಹಚ್ಚಿದರು. ನಂತರ ವಿದ್ಯಾಭ್ಯಾಸಕ್ಕಾಗಿ ಆದೋನಿಗೆ ಕುಟುಂಬದೊಂದಿಗೆ ವರ್ಗಾವಣೆಯಾಗಿ ಟಿ.ಜಿ.ಎಲ್ ಶಾಲೆಯಲ್ಲಿ ಎಂಟನೇ ತರಗತಿಯವರೆಗೆ ಓದಿ,ಹಿಂದಿ ವಿಶಾರದ ಮುಗಿಸಿದರು.ಅಲ್ಲದೇ ತಾಯಿಯೊಂದಿಗೆ ಭಕ್ತ ಸುದನ್ವ, ವೀರ ಅಭಿಮನ್ಯ,ರಕ್ತ ರಾತ್ರಿಯಂತಹ ನಾಟಕಗಳಲ್ಲಿ ಮಲ್ಲಿಕಾ,ಚಂದ್ರಿಕಾ,ಅನಂಗಪುಷ್ಪ ಮುಂತಾದ ದಾಸಿ ಮತ್ತು ನೃತ್ಯಗಾರ್ತಿಯಾಗಿ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಆಗ ತಾಯಿಯ ಆಶಯದಂತೆ ಪೂರ್ಣ ಕಲಾವಿದೆ ಎನಿಸುವ ನಿಟ್ಟಿನಲ್ಲಿ ಬಿ.ಬಾಲಯ್ಯರಿಂದ ದಕ್ಷಿಣಾದಿ ಸಂಗೀತ, ಬೆಂಗಳೂರು ವರದಾರಾಜು ಅಯ್ಯಂಗಾರ್ ರಿಂದ ಭರತ ನಾಟ್ಯ ಕಲಿತರು. ಅದಲ್ಲದೇ ಮದಿರೆ ಮರಿಸ್ವಾಮಿ ನಿರ್ದೇಶನದ ವೀರ ಅಭಿಮನ್ಯು ನಾಟಕದಲ್ಲಿ ಉತ್ತರೆಯಾಗಿ ಅಭಿನಯಿಸುವ ಮೂಲಕ ಅದ್ಭುತ ಅಭಿನೇತ್ರಿಯಾಗಿ ಹೊರಹೊಮ್ಮಿದರು.ಅಲ್ಲಿಂದ ನಿರಂತರವಾಗಿ ತಾಯಿಗೆ ಸರಿಸಾಟಿಯೆಂಬಂತೆ ಅಭಿನಯಿಸುತ್ತ ಬಂದರು.ನಂತರ ೧೮ನೇ ವಯಸ್ಸಿಗೆ ದಾಸರ ನಾರಾಯಣ್ ರಾವ್ ನಿರ್ದೇಶನದ 'ತೂರ್ಪು ವೆಳ್ಳೆ ರೈಲು' ಎಂಬ ಸಿನಿಮಾಗೆ ಹಿರೋಯಿನಾಗುವ ಅವಕಾಶ ಬಂದರೂ ಅಪ್ಪನ ಸಾಂಪ್ರದಾಯಿಕತೆಗೆ ಸಿನಿ ಕನಸಿಗೆ ತಿಲಾರ್ಪಣ ಬಿಟ್ಟರು.
    ಈಗಿರುವಾಗ ಓದಿ ಲಾಯರ್ ಆಗಬೇಕಿದ್ದ ವೀಣಮ್ಮನವರು ಅನಿವಾರ್ಯವಾಗಿ ಬಣ್ಣದ ಬದುಕಿಗೆ ಕಾಲಿಟ್ಟು ವೀರ ಅಭಿಮನ್ಯು, ಭಕ್ತ ಸುದನ್ವ,ರಕ್ತರಾತ್ರಿ,ಕುರುಕ್ಷೇತ್ರ, ರಾಮ ರಾವಣರ ಯುದ್ಧ,ಚಿತ್ರಾಂಗದ ,ನರವೀರ ಪಾರ್ಥ,ಅಶ್ವಮೇಧಯಾಗ,ನಾರದ ವಿನೋದ,ಮೋಹಿನಿ ಭಸ್ಮಾಸುರ,ಪ್ರಚಂಡ ರಾವಣ,ರತ್ನ ಸಿಂಹಾಸನ,ಸಿಂಧೂರ ಲಕ್ಷ್ಮಣ,ವೀರ ವೆಂಕಟಪ್ಪ ನಾಯಕ,ಶ್ರೀಕೃಷ್ಣ ದೇವರಾಯ,ಸತ್ಯ ಹರಿಶ್ಚಂದ್ರ, ಜಗಜ್ಯೋತಿ ಬಸವೇಶ್ವರ, ಅಕ್ಕಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ರತ್ನ ಮಾಂಗಲ್ಯ, ಆಶಾಲತಾ,ಅಣ್ಣ ತಂಗಿ,ಬದುಕು ಬಂಗಾರವಾಯ್ತು,ಗೌರಿ ಗೆದ್ದಳು,ಮಂಗಳ ನನ್ನ ಅತ್ತಿಗೆ, ಕೊಡುವ ಕೈ ಭಗವಂತನಿಗೆ ಸೈ ಹೀಗೆ ಕರ್ನಾಟಕಾಂಧ್ರದ ಮೂಲೆ ಮೂಲೆಗಳಲ್ಲಿ ಸಂಚರಿಸಿ ೩೦೦೦ಕ್ಕಿಂತ ಹೆಚ್ಚು ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯ ಮಿನುಗುತಾರೆ ಎನಿಸಿದರು.
   ಹೀಗೇ ಒಮ್ಮೆ ರಾಯಚೂರಿನ ಕೊಟ್ನಕಲ್ಲಲ್ಲಿ ನಾಟಕದಲ್ಲಿ ಅಭಿನಯಿಸುವಾಗಲೇ ಅಪ್ಪನ ಸಾವಿನ ಸುದ್ಧಿ ತಿಳಿದರೂ ಜನ ಸಾಗರ ಸೇರಿದ ನಾಟಕಕ್ಕೆ ಭಂಗವಾಗದಂತೆ ನಟಿಸಿದರು.ಅಲ್ಲದೇ ತಂದೆ ವಿಯೋಗದ ಸುದ್ದಿ ಮಸಲೆಂದೆ ವರುಷದೊಳಗೆ ಅಂದರೆ ೧೯೮೭ರಲ್ಲಿ ರಂಗನಟಿ ಕೊಟ್ಟೂರು ಸರೋಜಮ್ಮರ ಮಗ ಆರ್.ಎರ್ರಿಸ್ವಾಮಿಯವರೊಂದಿಗೆ(ಮುಳುಬಾಗಿಲು ಹಾಸ್ಟೆಲ್ ಸುಪರಿಡೆಂಟ್) ತಮ್ಮ ೨೪ನೇ ವಯಸ್ಸಿನಲ್ಲಿ ವಿವಾಹ ನಿಶ್ಚಯವಾಗಿ ಒಪ್ಪಿಕೊಂಡ ಎಲ್ಲ ನಾಟಕಗಳನ್ನು ಮಾಡಿದರು. ಕೊನೆಯದಾಗಿ ಮಾಧವರಂನ ತುಂಗಭದ್ರಾದಲ್ಲಿ ಮದಿರೆ ಮರಿಸ್ವಾಮಿ ನಿರ್ದೇಶನದ ರಕ್ತ ರಾತ್ರಿ ನಾಟಕ ಮಾಡಿ ಎಲ್ಲ ಕಲಾವಿದರಿಂದ ನೆನಪಿನ ಬುತ್ತಿಯೊಂದಿಗೆ ಬಲವಂತವಾಗಿ ಮದುವೆಯಾಗಿ ಸಾಂಸಾರಿಕ ಲೋಕಕ್ಕೆ ಕಾಲಿಟ್ಟರು. ಈ ಮೂಲಕ  ಸರಾಗವಾಗಿ ಹರಿಯುತ್ತಿದ್ದ ರಂಗ ಬದುಕಿಗೆ ತಿಲಾಂಜಲಿ ಹೇಳಿ ಸಾಂಸಾರಿಕ ಜೀವನದ ನೊಗ ಹೊತ್ತರು.ಅಲ್ಲದೆ ಯಾರೇ ಕಲಾವಿದರನ್ನು ಭೇಟಿಯಾಗಲು ಅತ್ತೆ ಗಂಡನಿಂದ ಅವಕಾಶ ಸಿಗದೆ ಒಲ್ಲದ ಮನಸ್ಸಿನಿಂದಲೇ ರಂಗಭೂಮಿ ನಿರಾಕರಿಸಿದರು.
  ರಂಗಭೂಮಿಯಿಂದ ದೂರ ಸರಿದು ಹೋಗಬೇಕಿದ್ದ ವೀಣಮ್ಮನವರು ೮ ವರ್ಷಗಳ ನಂತರ ಮಕ್ಕಳಾಗದ ಕಾರಣಕ್ಕೆ ಗಂಡನಿಂದ ಯಾವ ವೈಮನಸ್ಸಿಲ್ಲದೇ ತವರು ಮನೆಗೆ ಬಂದು ಪತಿಯ ವಾಕ್ಯದಂತೆ ಬದುಕಲು ಮನಸ್ಸು ಮಾಡಿದರು.ಆದರೆ ತಮ್ಮ ಶ್ರೀನಿವಾಸರಾಯರಿಂದ ಅವರ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಸೇರಿ ಹಲವಾರು ಮಕ್ಕಳಿಗೆ ಭರತನಾಟ್ಯ ಮತ್ತು ಕುಚುಪುಡಿ ಕಲಿಸಿ ಮತ್ತೆ ಮಂತ್ರಾಲಯ, ಹಂಪಿ,ಮೈಸೂರು ಮುಂತಾದ ಅನೇಕ ಜಾತ್ರಾ ಉತ್ಸವಗಳಲ್ಲಿ ಭಾಗವಹಿಸಿದರು.ಈಗಿರುವಾಗ ಮಂತ್ರಾಲಯದ ಪೀಠಾಧಿಪತಿಗಳ ಆಸೆಯಂತೆ ಅರ್ಚಕ ಶ್ರೀನಿವಾಸಚಾರ್ಯರ ನಿರ್ದೇಶನದ ರಕ್ತರಾತ್ರಿ ನಾಟಕಕ್ಕಾಗಿ ಇವರ ನಟನೆಗೆ ಬುಲಾವ್ ಬಂತು. ಅಲ್ಲದೇ ಇಡೀ ಅರ್ಚಕ ಕಲಾ ಮಂಡಲಿಯೇ ಇವರ ಮನೆ ಬಾಗಿಲಿಗೆ ಬಂದು ಒತ್ತಾಯಿಸಿದರು.ಅಂತೆಯೇ ಗಂಡನ ಅಪ್ಪಣೆಯಂತೆ ಆ ಒಂದು ನಾಟಕಕ್ಕೆ ಹೋದರು.ಆದರೆ ಅಲ್ಲಿ ಗುರುಗಳ ಆಶೀರ್ವಚನದ ನುಡಿಯಲ್ಲಿ ಮತ್ತೆ ರಂಗಭೂಮಿಗೆ ಕಾಲಿಡುವಂತೆ ಆಶೀರ್ವಾದವಾಯಿತು.ಅಲ್ಲಿಂದ ದೈವ ಭಕ್ತೆ ನಟಿಯಾಗಿದ್ದ ಇವರಿಗೆ ದೇವರೇ ಅಪ್ಪಣೆ ಕೊಟ್ಟಾಂತಾಗಿ ಪುನಃ ರಂಗಭೂಮಿಯತ್ತ ತಿರುಗಿದರು.ಅಲ್ಲಿಂದ ಆರಂಭವಾದ ರಂಗ ಕಾಯಕ ಇಂದಿಗೂ ಮತ್ತೆಲ್ಲಿಯೂ ನಿಲ್ಲದೇ ದೆಹಲಿ,ಮಹಾರಾಷ್ಟ್ರ,ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಉದ್ದಕ್ಕೂ ಸಂಚರಿಸಿ ತಮ್ಮ ಕಲೆಯನ್ನು ಪಸರಿಸಿದರು.
  ಸರಳ,ಮುಗ್ಧ ಮತ್ತು ಸಚ್ಚಾರಿತ್ರ್ಯದ ವ್ಯಕ್ತಿತ್ವದ ಮೂಲಕ ಎಲಿವಾಳ ಸಿದ್ದಯ್ಯಸ್ವಾಮಿ, ಸುಭದ್ರಮ್ಮ ಮನ್ಸೂರ್, ಬೆಳಗಲ್ ವೀರಣ್ಣ, ಸಿರಿಗೇರಿ ನಾಗನಗೌಡರು, ಕುಡುದರಹಾಳು ಶಿವಕುಮಾರ ತಾತ, ಮರಿಯಮ್ಮನಹಳ್ಳಿಯ ದುರ್ಗದಾಸ್, ರಮೇಶ್ ಗೌಡ ಪಾಟೀಲ್, ಕೂಡ್ಲಿಗಿಯ ಪದ್ಮ, ಇಳಕಲ್ ಉಮಾರಾಣಿ,ಗುಡುದೂರು ಪ್ರಮೀಳಾ ಹಾಗೂ ಇನ್ನೂ ಅನೇಕ ರಂಗ ಗಣ್ಯರ ಒಡನಾಟ ಮತ್ತು ಪ್ರೋತ್ಸಾಹದಿಂದ ವೀಣಮ್ಮರ ರಂಗಕಾಯಕವನ್ನು ಗುರುತಿಸಿದ ಸರ್ಕಾರವ  ಮತ್ತು ಅನೇಕ ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿಗಳನ್ನು ನೀಡಿವೆ.ಅವುಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಮೈಸೂರು ರಂಗಾಯಣ ಪ್ರಶಸ್ತಿ,ಬಳ್ಳಾರಿ ರಾಘವ ಪ್ರಶಸ್ತಿ ಮತ್ತಿತರೆ ಪ್ರಶಸ್ತಿಗಳು ಸಂದಿವೆ.
 ಅನೇಕ ರಂಗ ಪ್ರೇಮಿಗಳ ಮೂಲಕ ಬಳ್ಳಾರಿಯಲ್ಲಿ ನೆಲೆಸಿ ತಮ್ಮ ೬೦ ಹರೆಯದಲ್ಲೂ ಅಭಿನಯಿತ್ತಲೇ ತಮ್ಮ ಉತ್ತರಾಧಿಕಾರಿಯಾಗಿ ತಮ್ಮ ಸೊಸೆಯಂದಿರಾದ ಅಸಿತಾ ಮತ್ತು ಶ್ರೇಯಾರಿಗೂ ರಂಗಪಾಠ ಹೇಳಿಕೊಡುತ್ತಿದ್ದಾರೆ. ಇದಲ್ಲದೇ ಸದಾ ಧನಾತ್ಮಕ ಚಿಂತನೆ ಮತ್ತು ಅಪಾರ ನಂಬಿಕೆಯ ಮೂಲಕ ಯಾವುದೇ ಫಲಾಪೇಕ್ಷೆಯಿಲ್ಲದೇ ಸದಾ ರಂಗ ರಸಿಕರ ಮನತಣಿಸುತ್ತ ಎಲ್ಲರಿಗೂ ರಂಗ ಮಾದರಿಯಾಗಿರುವ ವೀಣಾ ಆದೋನಿಯವರಿಗೆ ಈ ಮೂಲಕ ನನದೊಂದು ಸಲಾಂ.


ಲೇಖಕ: 
ಆರ್.ಪಿ.ಮಂಜುನಾಥ್ ಬಿ.ಜಿ.ದಿನ್ನೆ.
ಸಾಹಿತಿ / ರಂಗ ಸಂಶೋಧಕರು
9379857775
manjuamazing7gmail.com
  

Comments

Popular posts from this blog

ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'