ರಂಗ ಮಾಲಿಕೆ -೨೯ ಸಿರಿನಾಡಿನ ರಂಗ ಜ್ಯೋತಿಷ್ಯಿ ' ಜೆ.ವಾಸುದೇವಾಚಾರ್ಯರು.'
ಬಣ್ಣದ ಬದುಕು
ರಂಗ ಮಾಲಿಕೆ-೨೯
ಸಿರಿನಾಡಿನ ರಂಗ ಜ್ಯೋತಿಷ್ಯಿ " ಜೆ.ವಾಸುದೇವಾಚಾರ್ಯರು".
ಕಲೆಯೆಂಬುದಕೆ ಕುಲವಿಲ್ಲ. ಕುಲದ ಮದದಲ್ಲಿ ಮೆರೆಯುವ ಮಹಿಮರಿಗೆ ಕಲೆಯ ಮಹಿಮೆ ಅರಿವಾಗದು.ಆದರೆ ಕುಲವ ಕಟ್ಟಿ ಮೂಲೆಗಿಟ್ಟು ರಂಗಕ್ಕೆ ಬಂದು ಉತ್ತಂಗಕ್ಕೇರಿದ ಅನೇಕ ಮಹನೀಯರನ್ನು ಕಾಣಬಹುದು. ಅಂತವರಲ್ಲೊಬ್ಬರು ಸಿರಿನಾಡಿನ ರಂಗ ಜ್ಯೋತಿಷ್ಯಿ ಜೆ.ವಾಸುದೇವಾಚಾರ್ಯರು.
ಇವರು 11.10.1955ರಲ್ಲಿ ಅಶ್ವತಾಚಾರ್ಯ ಮತ್ತು ಶಾರದಮ್ಮ ಎಂಬ ದಂಪತಿಗಳ ಮಗನಾಗಿ ಸಿರುಗುಪ್ಪ ತಾಲ್ಲೂಕಿನ ರಾವಿಹಾಳು ಗ್ರಾಮದಲ್ಲಿ ಜನಿಸಿದರು.
ಮಧ್ಯಮ ವರ್ಗದ ಕುಟುಂಬದಿಂದ ಬಂದ ಇವರು ನಾಟಕ ಎಂದರೆ ತುಶ್ಚವಾಗಿ ಕಾಣುವ ವರ್ಗದಲ್ಲಿ ಜನಿಸಿದರೂ, ತಾತನ ಕಾಲದಿಂದಲೂ ಯಾವುದಾದರೊಂದು ಕಲೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಅಂತೆಯೇ ಇವರ ತಾತ ಬಯಲಾಟ ಕಲಾವಿದರು, ತಂದೆ ಹೆಸರಾದ ಢಕ್ಕೆ ವಾದಕರು ಹಾಗೂ ರಂಗ ಕಲಾವಿದರು ಹಾಗೂ ಇವರ ತಾಯಿಯು ಸಹ ದಾಸ ಸಾಹಿತ್ಯದ ಆರಾಧಕರಾಗಿದ್ದರು.ಈ ಮೂಲಕವೇ ವಾಸುದೇವಾಚಾರ್ಯರ ರಂಗಕಲೆಯ ಮೇಲೆ ಪ್ರಭಾವ ಬೀರಿದೆ.
ಅಪ್ಪನ ಹಿಂದೆ ಪ್ರತಿವಾರ ಗುಡಿಯಲ್ಲಿ ಮಾಡುತ್ತಿದ್ದ ಭಜನೆಗೋಗಿ ಹಾಡಿನ ಲಯಕ್ಕೆ ತಾಳವಾಗುತ್ತಿದ್ದರು. ಅಲ್ಲದೆ 7ನೇ ತರಗತಿ ವಿದ್ಯಾಭ್ಯಾಸಕ್ಕೆಂದು ಹಚ್ಚೊಳ್ಳಿಗೆ ಹೋದಾಗ ಅಲ್ಲಿ ತಮ್ಮ ಶಿಕ್ಷಕರಾಗಿದ್ದ ವೀರೇಶಪ್ಪರ ನಿರ್ದೇಶನದಲ್ಲಿ ಕೆ.ಗುಂಡಣ್ಣರ ಶಂಕವಾದ್ಯ ವಿಚಾರತ್ಮಕ ನಗೆ ನಾಟಕವನ್ನು ಶಾಲೆಯಲ್ಲಿ ಮೊದಲ ಬಾರಿಗೆ ಅಭಿನಯಿಸುವ ಮೂಲಕ ರಂಗಲೋಕಕ್ಕೆ ಕಾಲಿಟ್ಟರು.
ಅಲ್ಲಿಂದ ಶಾಲಾ ಹಂತದಲ್ಲೇ ಏಕಪಾತ್ರಾಭಿನಯ,ಬಯಲಾಟ,ಏಕಾಂಕ ಮಾಡುತ್ತಾ ಸುತ್ತಮುತ್ತಲಿನ ಜನಕ್ಕೆಲ್ಲಾ ಆಕರ್ಷಣೀಯವಾದರು.ನಂತರ ಶಾಲಾ ಗೆಳೆಯರೆಲ್ಲ ಸೇರಿ ಹಚ್ಚೊಳ್ಳಿಯ ವಿರೂಪಾಕ್ಷಪ್ಪ ಥಿಯೇಟರ್ ನಲ್ಲಿ ಹಣದ ಹುಚ್ಚು ನಾಟಕವನ್ನು ಮಾಡಿ ಮತ್ತಷ್ಟು ಹೆಸರಾದರು.ಆದರೆ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಹೇಳಿ ಮಾನ್ವಿ ತಾಲೂಕಿನ ಕುರುಡಿಯ ಕೆ.ದ್ರೌಪದಿ ಎಂಬುವವರೊಂದಿಗೆ ವಿವಾಹವಾಗಿ ಸಂಸಾರದ ನೊಗ ಹೊತ್ತರು.ಒಂದೆಡೆ ಸಂಸಾರ ಇನ್ನೊಂದೆಡೆ ಪರಂಪರೆಯಿಂದ ಬಂದ ಜ್ಯೋತಿಷ್ಯ ಪಠಣ ಮತ್ತೊಂದೆಡೆ ರಂಗಭೂಮಿ ಇವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಇಲ್ಲಿಗೆ ತಟಸ್ಥವಾಗಬೇಕಿದ್ದ ಆಚಾರ್ಯರ ರಂಗಜೀವನ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಶ್ರೀಮಂತವಾಗಿದ್ದ ಶ್ರೀಮತಿಯವರ ಮತ್ತು ಅಭಿನಯಿಸುವಾಗಲೆಲ್ಲಾ ಮುಂದೆ ಕುಳಿತು ತಿದ್ದಿ ಪ್ರೋತ್ಸಾಹ ನೀಡುತ್ತಿದ್ದ ತಂದೆಯಿಂದ ಇವರ ರಂಗಕಾರ್ಯಗಳು ಮತ್ತಷ್ಟು ಚುರುಕುಗೊಂಡವು.ಅಂತೆಯೇ ಈಗಾಗಲೇ ಹಚ್ಚೊಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹಾಸ್ಯಪಾತ್ರಗಳ ಮೂಲಕ ಹಾಸ್ಯನಟರಾಗಿದ್ದ ಆಚಾರ್ಯರು ತಮ್ಮೂರಿನ ಗೆಳೆಯರೆಲ್ಲಾ ಸೇರಿ 1977ರಲ್ಲಿ ಅಗಸಲದಿನ್ನೆ ವಿರೂಪಾಕ್ಷಗೌಡರ ನಿರ್ದೇಶನದಲ್ಲಿ ಅಣ್ಣ ತಂಗಿ ನಾಟಕದಲ್ಲಿ ಗೌರೀಶನ ಪಾತ್ರದಲ್ಲಿ ಮಿಂಚುವ ಮೂಲಕ ರಸಿಕರೆದೆಯಲಿ ರಂಗತಾರೆಯಾದರು.ಅಲ್ಲದೇ ಇದೇ ನಾಟಕವನ್ನು ಹಚ್ಚೊಳ್ಳಿ ,ಬದನೆಹಾಳ್,ರೌಡೂರು,ಉಪ್ಪಾರಹಾಳ್ ಮುಂತಾದ ಕಡೆ ಪ್ರದರ್ಶನ ನೀಡಿದರು. ಇದಾದ ನಂತರ ಪಂಕಜ ಎಂಬ ಮತ್ತೊಂದು ನಾಟಕಕ್ಕೆ ಬಣ್ಣ ಹಚ್ಚಿ ತಾಲೂಕಿನವರೆಗೂ ಪ್ರಸಿದ್ಧರಾದರು.ಆಗ ಬಲಕುಂದಿ, ಬೆಳಗಲ್ ,ಸಿರುಗುಪ್ಪ ಮುಂತಾದ ಕಡೆಗಳಲ್ಲಿ ಅಭಿನಯಿಸುವ ಮೂಲಕ ಹಾಗೂ ಜೊತೆ ಜೊತೆಗೆ ಪರಂಪರೆಯಿಂದ ಬಳುವಳಿಯಾಗಿ ಬಂದಿದ್ದ ತಮ್ಮ ಜ್ಯೋತಿಷ್ಯ ಮತ್ತು ಪೌರೋಹಿತ್ಯದ ಮೂಲಕ ಎಲ್ಲರಿಗೂ ಚಿರಪರಿಚಿತರಾದರು.
ಇದಲ್ಲದೇ ಮುಂದೆ ವರ ನೋಡಿ ಹೆಣ್ಣು ಕೊಡು,ರತ್ನ ಮಾಂಗಲ್ಯ ಎಂಬ ನಾಟಕದಲ್ಲಿ ಅಭಿನಯಿಸುವ ಮೂಲಕ ಮತ್ತಷ್ಟು ಖ್ಯಾತಿ ಪಡೆದರು.ಅಂತೆಯೇ ಸಿರುಗುಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಟಕ ಕಂಪನಿಯವರು ಬಂದರೆ ಇವರನ್ನು ಕರೆಸಿಕೊಂಡು ಕಂಪನಿ ಪರವಾಗಿ ಅಭಿನಯಿಸುವಂತೆ ಕೋರುತ್ತಿದ್ದರು.ಆ ಮೂಲಕ ಕಂಪನಿಗೆ ಕಲೆಕ್ಷನ್ ಮಾಡಿಕೊಡುತ್ತಿದ್ದರು. ಅಷ್ಟರ ಮಟ್ಟಿಗೆ ಇವರ ಪ್ರಸಿದ್ಧತೆಯ ಆಳವಿತ್ತು.
ಮದಿರೆ ಮರಿಸ್ವಾಮಿ,ಹಾಲಾಪುರ ಕೃಷ್ಣಪ್ಪ,ಅಗಸನೂರು ದತ್ತಪ್ಪ,ಅಗಸನೂರ ವೀರಭದ್ರರೆಡ್ಡಿ, ಕುಂಟನಹಾಳ್ ಸಿದ್ಧನಗೌಡರು, ರಾವಿಹಾಳ್ ಸಿದ್ದಪ್ಪ ಮತ್ತಿತರರ ಸಾಂಗತ್ಯ ಬೆಳೆಸಿ ಅವರ ಹಾದಿಯಲ್ಲಿ ಸಾಗಿ ತಮ್ಮೂರಿನಲ್ಲೇ ಮಾಡುತ್ತಿದ್ದ ನಾಟಕ,ಬಯಲಾಟದ ಅಭಿನೇತೃಗಳಿಗೆ ಮಾತುಗಳನ್ನು ಬರೆದು ಕೊಡುತ್ತಾ,ತಿದ್ದುತ್ತಾ ಗುರುವೆನಿಸಿದರು.ಉದಾಹರಣೆಗೆ ವೀರ ಅಭಿಮನ್ಯು ,ಪಾಂಡು ವಿಜಯ ಪ್ರಮುಖವು ಎನಿಸಿವೆ.
ಇದಾದ 2005ರಲ್ಲಿ ಮದಿರೆ ಮರಿಸ್ವಾಮಿ ನಿರ್ದೇಶನದಲ್ಲಿ ರಕ್ತ ರಾತ್ರಿ ನಾಟಕದಲ್ಲಿ ಅಶ್ವತ್ಥಾಮ ಪಾತ್ರವನ್ನು ಮಾಡಿ ಸುತ್ತಮುತ್ತಲಿನ ಜನರಲ್ಲಿ ಅಚ್ಚುಮೆಚ್ಚಿನ ನಟರೆನಿಸಿದರು.
ಇವರ ಕುಟುಂಬದ ರಂಗ ಪಯಣ ಇವರಿಗೆ ಮುಗಿಯದೇ ಈಗ ಇವರ ತಮ್ಮರಾದ ಜೆ.ನರಸಿಂಹಮೂರ್ತಿಯವರ ಮೂಲಕ ಮತ್ತಷ್ಟು ದೂರ ಸಾಗುತ್ತಿದೆ.ಇವರು ಸಹ ಮಿಮಿಕ್ರಿ,ಹಾಸ್ಯ ಹಾಗೂ ನಾಟಕದಿಂದಾಗಿ ಸಿರುಗುಪ್ಪ ನಗರದಲ್ಲಿ ಪ್ರಸಿದ್ಧರಾಗಿ ಸಿರುಗುಪ್ಪ ಬೀಚಿ ಎನಿಸಿದ್ದಾರೆ.ಈ ಮೂಲಕ ಅಣ್ಣನ ಬಾಕಿ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
ಇಷ್ಟೆಲ್ಲಾ ರಂಗ ಕಾಯಕ ಮಾಡಿದ ಇಂತಹ ಅನೇಕ ಮಹನೀಯರಿಗೆ ಕಾಲಕ್ರಮೇಣ ಸರಿಯಾದ ಉತ್ತೇಜನ ಸಿಗದೇ ರಂಗಭೂಮಿಯಿಂದ ದೂರ ಸರಿದಂತೆ ಕಾಣಬಹುದು. ಆದರೆ ನಟನೆಗೆ ತಕ್ಕಂತೆ ಆಗ ಊರುಗಳಲ್ಲಿ ನೀಡುತ್ತಿದ್ದ ಆಣೆ ಬಂಗಾರದ ಉಂಗುರಗಳು, ಶಾಲು ಹಾರಗಳೇ ನಮಗೆಲ್ಲ ಬಿರುದು ,ಪ್ರಶಸ್ತಿಗಳಾಗಿದ್ದವು ಎಂದು ಇಂದಿಗೂ ಹಸನ್ಮುಖದಿಂದಲೇ ನುಡಿಯುವ ಮಹನೀಯರೊಂದು ಸಲಾಂ.
ಲೇಖನ :
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ / ರಂಗ ಸಂಶೋಧಕರು
9379857775
manjuamazing7@gmail.com

Comments
Post a Comment