ರಂಗ ಮಾಲಿಕೆ - ೨೬ ಸಾತ್ವಿಕ ಗುಣದ ರಂಗ ಸಂಪನ್ನರು ' ಕುಂಟನಾಳ್ ಸಿದ್ಧನಗೌಡರು'


 ಬಣ್ಣದ ಬದುಕು

ರಂಗ ಮಾಲಿಕೆ - ೨೬


ಸಾತ್ವಿಕ ಗುಣದ ರಂಗ ಸಂಪನ್ನ "ಕುಂಟನಹಾಳ್ ಸಿದ್ಧನಗೌಡರು."


ಬಳ್ಳಾರಿಯ ಸಮೃದ್ಧ ತಾಲ್ಲೂಕು ಎಂದರೆ ಸಿರುಗುಪ್ಪ.ಇಲ್ಲಿ ಹೇರಳ ನೀರಿನ ಸೆಲೆಯಿದೆ, ಹಳೆ ತಲೆಮಾರಿನ ರಂಗ ಸಂಪನ್ನರಿದ್ದಾರೆ,ಪ್ರಾಚೀನ ಐತಿಹಾಸಿಕ ನಲೆಗಳ,ದೇಗುಲಗಳ ಬಿತ್ತಿಯಿದೆ, ಹಲವು ಪ್ರಥಮಗಳ ಸೃಷ್ಟಿಯಿದೆ.ಇಂತಹ ನಾಡಿಗೆ ಅಂಟಿಕೊಂಡಿರುವ ಕರ್ನಾಟಕಾಂಧ್ರ ಪ್ರದೇಶದ ಅಪ್ಪಟ ಗ್ರಾಮೀಣ ಭಾಗದ ಸಾತ್ವಿಕ ಗುಣದ ರಂಗ ಸಂಪನ್ನರೇ ' ಕುಂಟನಹಾಳ್ ಸಿದ್ಧನಗೌಡರು' ಇವರ ಬಣ್ಣದ ಬದುಕಿನ ನೈಜ ದರ್ಶನವೇ ನನ್ನೀ ಲೇಖನ.

  ಇವರು ಕ್ರಿ.ಶ.೧೯೨೦ರ ಆಸುಪಾಸಿನಲ್ಲಿ ಚನ್ನನಗೌಡ ಮತ್ತು ಗೌರಮ್ಮ ಎಂಬ ದಂಪತಿಗಳ ಮಗನಾಗಿ ಈಗಿನ ಆದೋನಿ ತಾಲ್ಲೂಕಿನ ಕುಂಟನಹಾಳ್ ಗ್ರಾಮದಲ್ಲಿ ಜನಿಸಿದರು. ಇವರು ಮೂಲ ನಕ್ಷತ್ರದಲ್ಲಿ ಜನಿಸಿದ್ದರಿಂದಲೇ ಹುಟ್ಟಿದ ಮರುದಿನವೇ ತಾಯಿಯನ್ನು , ಕೆಲ ವರ್ಷದ ನಂತರ ಇದ್ದ ೭೦೦ ಎಕರೆ ಜಮೀನಿನಲ್ಲಿ ೪೦೦ ಎಕರೆ ಭೂಮಿ ಕಳೆದುಕೊಂಡರು. ಇದರ ವ್ಯಥೆಯಲ್ಲಿ ತಂದೆಯನ್ನು ಸಹ ಕಳೆದುಕೊಂಡರು. ನಂತರ ತಮ್ಮ ಎಳೆಯ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪ ಬಂಡ್ರಾಳ್ ಪಂಪನಗೌಡರ ಮನೆಯಲ್ಲಿಯೇ ಬೆಳೆದು ಅದೇ ಊರಿನಲ್ಲಿ 3 ನೇ ತರಗತಿಯವರೆಗೆ ಓದಿ, ನಂತರ ಡಂಕನಕಲ್ಲು ಗವಾಯಿ ಸಂಗಣ್ಣನವರ ಬಳಿಯಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದರು. ಅಲ್ಲಿ ಸಂಗೀತ,ರಂಗಕಲೆ,ನೃತ್ಯವಿದ್ಯೆ ಕಲಿತು ಊರಿಗೆ ಬಂದರು.ಅದೇ ಸಮಯಕ್ಕೆ ಬಂಡ್ರಾಳಿಗೆ ಕಂಪನಿಯು ಬಂದಿತ್ತು.ಸಕಲ ಕಲಾಸಕ್ತರಾದ ಗೌಡರಿಗೆ ಈ ವಿಚಾರ ಸುದೈವವೇ ಆಗಿತ್ತು.ಅಂತೆಯೇ ನೋಡಲೆಂದು ಕ್ಯಾಂಪಿನ ಬಳಿ ಹೋದಾಗ ಈಗಾಗಲೇ ಈ ಬಾಲ ಗೌಡರ ಜಾಣ್ಮೆಯ ಅರಿವಿದ್ದ ಜನರು ಕಂಪನಿಯ ಮಾಲೀಕರಿಗೆ ಹಾಡೊಂದನ್ನು ಹಾಡಿಸುವ ಮೂಲಕ ಪರಿಚಯಿಸಿದರು. ಅಷ್ಟಕ್ಕೆ ಮಾಲೀಕರು ಆಗ ಬರ ಪೂರಿತ ಹಳ್ಳಿಗಳಿಲ್ಲಿ ಬರ ನಿವಾರಣೆಯ ಪರಿಹಾರಕ್ಕಾಗಿ ಬಂಕದ ನಾಟಕ ಪ್ರದರ್ಶಿಸಲು ತಯಾರಾಗುತ್ತಿದ್ದ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮನ ನಾಟಕದಲ್ಲಿ ಶಿವ ಮತ್ತು ವೇಶ್ಯೆಯ ಪಾತ್ರಕ್ಕೆ ಗೌಡರನ್ನು ಆಯ್ಕೆ ಮಾಡಿಕೊಂಡರು.ಆ ಮೂಲಕ ಬಣ್ಣ ಹಚ್ಚಿದ ಗೌಡರು ತಮ್ಮ  ೧೬ ನೇ ವಯಸ್ಸಿನಲ್ಲಿ ಎಲ್ಲರನ್ನೂ ತೊರೆದು ಕಂಪನಿಯ ಹಿಂದೆ ಹೋದರು.

  ಹೀಗೆ ಒಮ್ಮೆ ಹೇಮರೆಡ್ಡಿ ಮಲ್ಲಮ್ಮ ನಾಟಕವಾಡಲು ಬಳ್ಳಾರಿಯ ಜೋಳದರಾಶಿಗೆ ಹೋದಾಗ ಅಲ್ಲಿನ ಶ್ರೀಮಂತ ವ್ಯಕ್ತಿ ಗಮಕ ಕಲಾನಿಧಿ ದೊಡ್ಡನಗೌಡರ ಸಹಾಯ ಕೋರಲು ಕಂಪನಿಯ ರಂಗ ಗುರುಗಳು ಹೋದರು.ಅಲ್ಲಿ ಇವರ ಕಲಾ ಪ್ರೌಢಿಮೆ ಅರಿವಿರದ ದೊಡ್ಡನಗೌಡರು ತುಂಬಾ ನಿರ್ಲಕ್ಷ್ಯ ಮನೋಭಾವದಿಂದ, ಕನಿಷ್ಟ ಗೌರವವನ್ನು ನೀಡದೇ " ಆಯ್ತು ನಿಮಗೆ ಎಲ್ಲಿ ಇಷ್ಟಾಗುತ್ತೆ ಅಲ್ಲಿ ನಾಟಕ ಮಾಡ್ರೀ.ಅಂಗೆ ಹೋಗುವಾಗ ಬಂದೋಗಿ ಸ್ವಲ್ಪ ರೊಕ್ಕ ಕೋಡ್ತೀನಿ ತಗೊಂಡು ಹೋಗುವಂತ್ರಿ " ಎಂದಿದ್ದರಂತೆ. ಈ ಮಾತಿಗೆ ಬೇಸರಗೊಂಡ ಗುರುಗಳನ್ನು ಕಂಡು ಸಿದ್ಧನಗೌಡರು  ಕೋಪಗೊಂಡು ಸಂಜೆ ನಾಟಕದ ವೇಳೆಗೆಲ್ಲ ಸ್ತುತಿ ಹಾಡೊಂದನ್ನು ಕಟ್ಟಿ ಪರಿಷ್ಕರಿಸಿ, ರಾಗ ಸಂಯೋಜಿಸಿ ನಾಟಕಕ್ಕೂ ಮುನ್ನ ಗುರುಗಳೊಂದಿಗೆ ಹಾಡಲು ಶುರು ಮಾಡಿದರು.ಅಂತೆಯೇ ಆ ಹಾಡಿನ ಮೋಡಿಗೆ ಮರುಳಾಗಿ ಮನೆಯಲ್ಲಿದ್ದ ದೊಡ್ಡನಗೌಡರು ಖುದ್ದಾಗಿ ವೇದಿಕೆಗೆ ಬಂದು ಇಡೀ ತಂಡಕ್ಕೆ ಗೌರವಾರ್ಪಣೆ ಸಲ್ಲಿಸಿದ ಕಥೆ ಸಿದ್ಧನಗೌಡರ ಯಶೋಗಾಥೆಯಲ್ಲಿ ಮರೆಯುವಂತಿಲ್ಲ.

   ಹೀಗೆ ಕಂಪನಿಯಲ್ಲಿ ನಟರಾಗಿ ,ಗಾಯಕರಾಗಿ,ನಿರ್ದೇಶಕರಾಗಿ ಸೇವೆ ಸಲ್ಲಿಸುವಾಗ ಹಠತ್ತಾಗಿ ಮಾಲೀಕರು ತೀರಿಹೋಗಿ ಕುಂಟನಹಾಳ್ ಗೆ ಹಿಂದಿರುಗಿದರು. ನಂತರ ತಮ್ಮ ಒಡನಾಡಿ ದೊಡ್ಡ ಬಸವಾರ್ಯ ಗವಾಯಿಗಳೊಂದಿಗೆ ರಾಯಚೂರಿನ ಅಕ್ಕಪಕ್ಕದ ಪ್ರದೇಶಗಳಿಗೆ ಗಾಯನ,ನಟನ,ನರ್ತನ ಹೇಳಿಕೊಡಲು ಹೋಗುತ್ತಿದ್ದರು. ಸುಮಾರು ವರ್ಷಗಳ ಕಾಲ ಇದೇ ಕಾಯಕದಲ್ಲಿ ನಿರತರಾಗಿದ್ದ ಗೌಡರು ತಮ್ಮ ಚಿಕ್ಕಪ್ಪರ 

ಅಣತಿಯಂತೆ ತಮ್ಮ 30 ರ ಹರೆಯದಲ್ಲಿ ಸಿರುಗುಪ್ಪ ತಾಲ್ಲೂಕಿನ ಬೆಳಗಲ್ ಗ್ರಾಮದ ಶಾಂತಮ್ಮ ಎಂಬುವವರನ್ನು ವಿವಾಹವಾದರು. ಅಲ್ಲಿಂದ ಸಾಂಸಾರಿಕರಾದ ಗೌಡರ ರಂಗ ಪಯಣ ಚುರುಕುಗೊಂಡಿತು.ಕಾರಣ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ನಟನೆಯಿಂದ ಪೂರ್ಣಕಾಲಿಕ ನಿರ್ದೇಶನದತ್ತ ಹೊರಳಿದರು.ನಾಟಕ ಕಲಿಸಲೆಂದು ಹೋದಲ್ಲೆಲ್ಲಾ ಇಷ್ಟೇ ಕೊಡಿ ಎಂದು ಕೇಳದೆ ಕೊಟ್ಟಷ್ಟನ್ನು ತಗೆದುಕೊಂಡು ಬಂದು ಸಂಸಾರದ ನೊಗ ಹೊತ್ತರು.ಅಲ್ಲದೇ ಮೊದ ಮೊದಲು ಏನೂ ಪಡೆಯದೇ ಉಪವಾಸದಿಂದ ಬರಿಗಾಲಲ್ಲಿ ಊರಿಗೆ ಹಿಂದಿರುಗಿದ ಕಥೆಯೂ ಇದೆ ಇವರ ಬಣ್ಣದ ಬದುಕಿನ ಪುಟದೊಳಗೆ.

 ಕಾಲ ಕ್ರಮೇಣ ಗೌಡರು ರಂಗಭೂಮಿಯನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತ ರಂಗಭೂಮಿಯ ರಹಸ್ಯವನ್ನು ಅರಿತರು.ಅಲ್ಲದೇ ಪಾತ್ರಕ್ಕೆ ಅನುಗುಣವಾದ ಭಾವನುಭಾವ,ರಂಗ ಪರಿಕರ, ವಸ್ತ್ರ ವಿನ್ಯಾಸ,ಧ್ವನಿಯ ಏರಿಳಿತ ಮತ್ತಿತರೆ ರಂಗ ಸೂಕ್ಷ್ಮಗಳ ಜಾಣ್ಮೆ ಹೊಂದಿದ್ದರು.

 ಇವರಲ್ಲಿದ್ದ ಅತೀವ ರಂಗಾಭಿಮಾನದಿಂದ ವಿವಾಹದ ತರುವಾಯ ಮೊದಲ ಬಾರಿಗೆ ಹರಿವಾಣದಲ್ಲಿ ರಂಗಸಾನಿ ಎನ್ನುವ ನಾಜೂಕಯ್ಯನ ರೀತಿಯ ದೇವದಾಸಿ ಕಿರು ನಾಟಕ ಮಾಡಿಸಿದ್ದರು. ನಂತರ ಬೀರಹಳ್ಳಿ, ಯಬುಟ,ಬೈರಗಾಮದಿನ್ನೆ, ಅಗಸಲದಿನ್ನೆ,ಹರಿವಾಣ,ನಾಗಲಾಪುರ, ಬದಿನೇಹಾಳ್ ಮುಂತಾದ ಸ್ಥಳಗಳಲ್ಲಿ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿದ್ದರು. ಹಾಗೆ ನಿರ್ದೇಶಿಸಿದ ಪ್ರಮುಖ ನಾಟಕಗಳೆಂದರೆ ಜಗಜ್ಯೋತಿ ಬಸವೇಶ್ವರ, ರಕ್ತ ರಾತ್ರಿ, ಉತ್ತರ ಭೂಪ, ಭಕ್ತ ಸುದನ್ವ, ಕುರುಕ್ಷೇತ್ರ, ಭಾರತಾಶ್ವಮೇಧ, ಸಂಪೂರ್ಣ ರಾಮಾಯಣ, ವೀರ ಅಭಿಮನ್ಯು ಇನ್ನು ಮುಂತಾದ ಪೌರಾಣಿಕ ಹಾಗೂ ಹೆಣ್ಣಿನ ಹಂಬಲ, ಹುಚ್ಚು ಹಿಡಿಸಿದ ಹೆಣ್ಣು, ಹೂವಿನ ಅಂಗಡಿ,ಮನೆ ಮುರುಕರು, ರತ್ನ ಮಾಂಗಲ್ಯ, ಚಲನ ಪ್ರಪಂಚ ಮುಂತಾದ ಸಾಮಾಜಿಕ ನಾಟಕಗಳನ್ನು ಮಾಡಿಸಿ ಸುತ್ತಮುತ್ತಲಿನ ಕರ್ನಾಟಕಾಂಧ್ರದ ಪ್ರದೇಶಗಳಲ್ಲಿ ಹೆಸರುವಾಸಿಯಾಗಿದ್ದರು.

  ಇವರ ಅಗಾಧವಾದ ಪ್ರತಿಭೆ ಮತ್ತು ವ್ಯಕ್ತಿತ್ವದ ಮೂಲಕ ಎಲ್ಲರನ್ನೂ ತಮ್ಮತ್ತ ಸೆಳೆದಿದ್ದರು.ತೀರಾ ಸಾತ್ವಿಕ ಗುಣದ ರಂಗ ಸಂಪನ್ನರಾಗಿದ್ದ ಇವರು ಯಾವುದೇ ನಟರಾಗಲಿ ನಾಟಕ ಮಾಡಬೇಕೆಂಬ ಕೇವಲ ಹಂಬಲದೊಂದಿಗೆ ರಂಗಕ್ಕೆ ಬಂದರೆ  ಒಪ್ಪುತ್ತಿದ್ದಿಲ್ಲ.ಬದಲಿಗೆ ನಟರಾಗ ಬರುವ ರಂಗಾಸಕ್ತರಿಗೆ ಹಾಡಲಾದರೂ ಅಥವಾ ಸಂಗೀತದ ಬಗೆಗಿನ ಕನಿಷ್ಠ ಜ್ಞಾನವಾದರೂ ಇರಲೇ ಬೇಕಾಗಿತ್ತು.ಬೇರೆ ಯಾವ ಆಯ್ಕೆಗಳಿಲ್ಲದೆ ಅನಿವಾರ್ಯವಾಗಿ ಕಲಿತ ನಂತರವೇ ನಾಟಕಕ್ಕೆ ಪ್ರವೇಶ ನೀಡುತ್ತಿದ್ದರು. ಅಲ್ಲದೇ ನಟರ ಅನುಕೂಲಕ್ಕಾಗಿ ತಾವೇ ಸ್ವತಃ ಸ್ವರ ರಾಗ ಸಂಯೋಜನೆ, ಸಂಭಾಷಣೆಗಳನ್ನು ರಚನೆ ಮಾಡುತ್ತಿದ್ದರು. ಅಲ್ಲದೇ ಇವರ ಶಿಸ್ತು ಬದ್ಧ ನಿರ್ದೇಶನ ಶೈಲಿಗೆ ಮತ್ತು ನಟ - ನಟಿಯರೊಡನೆ ಬೆಸೆಯುತ್ತಿದ್ದ ಗುರು ಶಿಷ್ಯತ್ವಕ್ಕೆ ಅದವಾನಿ ಲಕ್ಷ್ಮೀ,ಜೋಳದರಾಶಿ ದೊಡ್ಡನಗೌಡರು, ಮದಿರೆ ಮರಿಸ್ವಾಮಿ, ಆಗಿನ ಪ್ರಸಿದ್ಧ ಹಾಸ್ಯ ನಟಿ ಚಂಪಾವತಿ ಪಟ್ಟಣಶೆಟ್ಟಿ, ಗಿರಟ್ಟಿ  ಸುಲೋಚನಾ,ಉಳೆಬೀಡು ರಂಗವೇಣಿ, ರಾಯಚೂರಿನ ತಾರಾಬಾಯಿ ಬೆರಗಾಗಿ ಸ್ವತಃ ಸ್ನೇಹ ಬಾಂಧವ್ಯ ಹೊಂದಿದ್ದರು.

 ಇದಲ್ಲದೇ ಯಾವುದೇ ನಾಟಕಕ್ಕಾದರೂ ಸರಿ ಪ್ರಭುತ್ವ ಸಹಿತ ಕಲಾವಿದರನ್ನೇ  ತಮ್ಮೊಡನೆ ನಾಟಕ ನಿರ್ದೇಶನಕ್ಕೆ ಕರೆದೊಯ್ಯತ್ತಿದ್ದರು. ಉದಾಹರಣೆಗೆ ಅಗಸನೂರು ದತ್ತಪ್ಪ,ರಾವಿಹಾಳ್ ಕೊಳಲು ವಾದಕ ಸಿದ್ದಪ್ಪ, ಗಿಟಾರ್ ವಾದಕ ಉಪ್ಪಾರಾಳ್ ಯಂಕನಗೌಡ, ಬಳ್ಳಾರಿಯ ಸಾರಂಗಿ ವಾದಕ ಚಂದ ಹುಸೇನ್ ಸಾಬ್, ತಬಲ ವಾದಕ ಲೋಕಾಭಿರಾಮ, ಪೀಟಿಲು ವಾದಕ ಹೊಳಗುಂದಿ ಸಿದ್ದಣ್ಣ, ಎಲೆಕ್ಟ್ರಿಕ್ ಷಾಯಿಬಾಜ್ ವಾದಕ ಈರಣ್ಣ ,ಮದಿರೆ ಮರಿಸ್ವಾಮಿ ಮುಂತಾದ ಶ್ರೇಷ್ಠಾತಿ ಶ್ರೇಷ್ಠರ ಬಳಗವೇ ಇವರೊಂದಿಗೆ ಬೆರೆತಿರುತ್ತಿತ್ತು.

  ಕೌತಳಂನಲ್ಲಿ ವಾಸವಿದ್ದ ಉಡುಪಿಯ ಪುತ್ತೂರ್ಕರ್ ಬರೆದ ಭಕ್ತ ಸುದನ್ವ  ನಾಟಕ ಮತ್ತು ಜಗಜ್ಯೋತಿ ಬಸವೇಶ್ವರ ನಾಟಕಗಳು ಗೌಡರ ತುಂಬಾ ಇಷ್ಟದ ನಾಟಕಗಳಾಗಿದ್ದವು.ಇವುಗಳನ್ನು ತಮ್ಮ ಕುಂಟನಹಾಳ್ ಗ್ರಾಮದಲ್ಲಿ ಅದ್ದೂರಿಯಾಗಿ ಪ್ರದರ್ಶನ ನೀಡಿದ್ದರು. ಅಲ್ಲದೇ ಬೀರಹಳ್ಳಿಯಲ್ಲಿ ಆಗಾಗ ಚಿನ್ನದ ಗೊಂಬೆ,ಭಕ್ತ ಸುದನ್ವ, ಗೌಡ್ರ ಗದ್ಲ, ರಕ್ತ ರಾತ್ರಿ ನಾಟಕಗಳನ್ನು ಅಡಿಸಿ ಆ ಊರಿನ ನಟ ,ಗೌಡರ ಪಟ್ಟ ಶಿಷ್ಯ ದೊಡ್ಡ ರಾಮರೆಡ್ಡಿ ಮತ್ತು ಊರಿನ ಕಲಾ ರಸಿಕರಿಂದ ಆರಾಣೆ ತೂಕದ ಬಂಗಾರದ ಉಂಗುರ ಹಾಗೂ ಎರಡು ಜೋಡಿ ಎತ್ತುಗಳನ್ನು ಗುರು ಕಾಣಿಕೆಯಾಗಿ ಪಡೆದಿದ್ದರು. ಅಂದು ನೀಡಿದ ಜೋಡೆತ್ತುಗಳಿಂಲೇ ಅವರ ಜೋಡಿ ಮಕ್ಕಳು ಸಿದ್ದರಾಮಗೌಡ ಹಾಗೂ ಶಂಕರಗೌಡ ಸೇರಿ ಹಗಲಿರುಳು ದುಡಿದು ಮನೆತನವನ್ನು ಮುನ್ನಲೆಗೆ  ತಂದಿದ್ದು ಸೋಜಿಗವೇ ಸರಿ.  

    ಇದಲ್ಲದೇ ಯಬುಟದಲ್ಲಿ ಚಿತ್ತರಗಿ ಗಂಗಾಧರ ಶಾಸ್ತ್ರಿಯವರ ಬಾಲಚಂದ್ರ, ವೀರ ಅಭಿಮನ್ಯು,  ಎಚ್.ಎಸ್.ಬಾಬುರಾವ್ ರವರ ಚಲನ ಪ್ರಪಂಚ ನಾಟಕವನ್ನು ಮಾಡಿಸುವಾಗ ಒಮ್ಮೆ ಯಬುಟದ ಕಲಾವಿದರು ಇವರನ್ನು ಕಾಣಲೆಂದು ಗೌಡರ ಮನೆಗೆ ಬಂದು ಬಾಯ್ತೆರೆದು ಔತಣಕೂಟಕ್ಕೆ ಅಹವಾಲು ಸಲ್ಲಿಸಿದರು. ದವಸ ಧಾನ್ಯವಿಲ್ಲದ ಮನೆಯಲ್ಲಿ  ಔತಣವಾಗಿ ಕೇವಲ ಚಹ ದೊರೆತಿದ್ದು ಗಮನಿಸಿ ನಟರೆಲ್ಲ ಸೇರಿ ಮರುದಿನ ಬಂಡಿಯ ತುಂಬ ದವಸ ಧಾನ್ಯಗಳನ್ನು ತಂದು ಗೌಡರು ಎಷ್ಟೇ ಬೇಡವೆಂದರು ಗುರುದಕ್ಷಿಣೆಯಾಗಿ ನೀಡಿ ತೆರಳಿದ್ದರು. ಹೀಗೆ ಅನೇಕ ಸ್ಥಳದ ಕಲಾವಿದರು ಗೌರವಾರ್ಥವಾಗಿ ಅನೇಕ ಕೊಡುಗೆ ನೀಡಿದ್ದಾರೆ.ಇವುಗಳೇ ಗೌಡರಿಗೆ ದೊರೆತ ಆ ಕಾಲದ ಬಿರುದು ಸನ್ಮಾನಗಳು ಎಂದರೂ ತಪ್ಪಾಗಲಾರದು.

    ಇದಲ್ಲದೇ ತಮ್ಮ ಇಳಿಯ ವಯಸ್ಸಿನಲ್ಲೂ  ಬಂದ ಬೇಡಿಕೆಯನ್ನು ನಿರಾಕರಿಸಿದೆ ತಮ್ಮ ಒಡನಾಡಿಗಳ ಸಹಾಯದಿಂದ ನಿರ್ದೇಶನ ಮಾಡುತ್ತಿದ್ದರು. ಈಗಿರುವಾಗ ಒಮ್ಮೆ ಮದಿರೆ ಮರಿಸ್ವಾಮಿಯವರು ಸಂಗೀತ ನಿರ್ದೇಶನ ಮಾಡುವಾಗ " ಸವಿಯ ಮಾತಿನ ಗೀತೇಯ ಹಾಡಿ " ಎಂದು ಹಾಡ ತೊಡಗಿದರು.ಆದರೆ ಗೌಡರು ಅರ್ಧಕ್ಕೆ ನಿಲ್ಲಿಸಿ ' ಗೀತೇ ಎಂಬಲ್ಲಿ  ಗೀತೆ ' ಎಂದು ಹಾಡಿದರೆ ಸಮಂಜಸ ಎನಿಸುತ್ತದೆ ಎಂದು ತಿದ್ದಿ ಎಲ್ಲರ ಮನ್ನಣೆಗೆ ಪಾತ್ರರಾಗಿದ್ದರು. ಇದಲ್ಲದೇ ಗೌಡರಿಗಿಂತ ಇಳೀ ವಯಸ್ಸಿನ ತಬಲ ವಾದಕ ಆದೋನಿ ಶಂಕ್ರಪ್ಪನವರು ಸಹ ಇವರ ಉತ್ಸಾಹಕ್ಕೆ ಮಣಿದು ತಬಲ ನುಡಿಸಲೆಂದು,ತಮ್ಮ ಕೈ ತೋಳುಗಳನ್ನು ಎತ್ತಲೋಸುಗವೇ ಇಬ್ಬರೂ ಸಹಾಯಕರನ್ನು ಕರೆತಂದು ಅದ್ಬುತವಾಗಿ ನುಡಿಸಿ ನಾಟಕಕ್ಕೆ ಮೆರಗು ತಂದಿದ್ದರೆಂದರೆ ಗೌಡರ ರಂಗಾಸಕ್ತಿಯ ಶಕ್ತಿ ಎಂತಹದ್ದೆಂದು ಈ ಮೂಲಕ ಅರಿಯಬಹುದು.

 ಅಪರ ರಂಗ ಪ್ರೇಮ, ನಿಸ್ವಾರ್ಥ ಮನೋಭಾವದ ರಂಗ ಸಾಧನೆಗೈದ ಸಿದ್ಧನಗೌಡರು ತಮ್ಮ ಕೊನೆಗಾಲದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಟಿ.ಬಿ ರೋಗದಿಂದ ನರಳಿ ಹತರಾಗಿದ್ದು ನೆನೆದರೆ ರಂಗಶೋತೃಗಳ ಕಣ್ಣುಗಳು ತೆವಗೊಳ್ಳದಿರಲಾರವು.

ಇನ್ನಾದರೂ ಇಂತವರ ಬದುಕಿನ ಕ್ಷಣಗಳೇ ನಮ್ಮ ನಿಮ್ಮ ರಂಗಬಾಳ್ವೆಗೆ ಆದರ್ಶಗಳಾಗಲೆಂಬುದೇ ನನ್ನೀ ಬರಹದ ಆಶಯ.


ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ

ಸಾಹಿತಿ / ರಂಗ ಸಂಶೋಧಕರು

9379857775

manjuamazing7@gmail.com.

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.