ರಂಗ ಮಾಲಿಕೆ -೨೫ ಕಲಿಯುಗದ ಭೀಮ ಹಂಚಿನಮನಿ ರಮೇಶರವರು


 ಬಣ್ಣದ ಬದುಕು
ರಂಗಮಾಲಿಕೆ -೨೫
 
ಕಲಿಯುಗದ ಭೀಮ ಹಗರಿಬೊಮ್ಮನಹಳ್ಳಿಯ ಹಂಚಿನಮನಿ ರಮೇಶರವರು

  ಅದೇನೋ ಕಂದಗಲ್ ಬಳ್ಳಾರಿಯ ಕಲಾರಸಿಕರಿಗೆಂದೇ ರಕ್ತರಾತ್ರಿ ನಾಟಕವನ್ನು ಬರೆದರೆನೋ.ಏಕೆಂದರೆ ಜಿಲ್ಲೆಯ ಯಾವುದೇ ಕಲಾವಿದರಾದರೂ ಸರಿ, ಅವರು ಒಮ್ಮೆಯಾದರೂ ರಕ್ತರಾತ್ರಿಯ ಶರಧಿಯನ್ನು ತಾಕದಿರಲಾರರು.ಅಲ್ಲದೇ ಅದರಲ್ಲಿ ಈಜಿ ಮೈ ಪುಳಕಗೊಂಡ ಪ್ರತಿಯೊರ್ವರು ಪ್ರಸಿದ್ಧತೆಯನ್ನು ಹೊಂದದಿರಲಾರರು ಎಂದರು ಅತಿಶಯೋಕ್ತಿ ಎನಿಸಲಾರದು.ಅಂತೆಯೇ ಇದೇ ನಾಟಕದ ಮೂಲಕ ಕಲಿಯುಗದ ಭೀಮ ಎಂಬ ಖ್ಯಾತಿ ಗಳಿಸಿದ ಅಪ್ಪಟ ಗ್ರಾಮೀಣ ಪ್ರತಿಭೆಯೆಂದರೇ ಅದು ಹಗರಿಬೊಮ್ಮನಹಳ್ಳಿಯ ನಾಟಕ ಅಕಾಡೆಮಿ ಪುರಸ್ಕೃತ ಹಂಚಿನಮನಿ ರಮೇಶರವರು.
  ಇವರು ಕ್ರಿ.ಶ.01.06.1968 ರಂದು    ಹಂಚಿನಮನಿ ಯಲ್ಲಪ್ಪ ಮತ್ತು ಹಂಚಿನಮನಿ ಹನುಮಮ್ಮರ ಮಗನಾಗಿ ಹಗರಿಬೊಮ್ಮನಹಳ್ಳಿಯ ಭೋವಿ ಕಾಲೋನಿಯಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲಿ ಹಾಗೂ ಮಾಧ್ಯಮಿಕ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕ್ರಮವಾಗಿ ಮೋರಗೇರಿ ಮತ್ತು ಇಟಗಿಯಲ್ಲಿ ಮುಗಿಸಿದರು.
 ಮೂಲತಃ ಕಲಾವಿದರ ಕುಟುಂಬದಲ್ಲಿ ಜನಿಸಿದ್ದರಿಂದ ತಮ್ಮ 13ನೇ ವಯಸ್ಸಿನಲ್ಲಿ  ತಮ್ಮ ಅಣ್ಣಂದಿರು,ಸ್ನೇಹಿತರೊಡನೆ ಸೇರಿ ಕ್ರಿ.ಶ.1980-81ರಲ್ಲಿ ತಮ್ಮೂರಿನಲ್ಲಿ  ನಡೆದ ಸುಗಂಧ ಪುಷ್ಪಹರಣ ಎನ್ನುವ ಬಯಲಾಟದಲ್ಲಿ ರುಕ್ಮಿಣಿ ಹಾಗೂ ಬ್ರಹ್ಮನ ಪಾತ್ರದಲ್ಲಿ ಮಿಂಚುವ ಮೂಲಕ ರಂಗಭೂಮಿಗೆ ಪಾದಾರ್ಪಣೆ ಮಾಡಿದರು.ಅಲ್ಲದೇ ಪ್ರೌಢಶಿಕ್ಷಣ ಓದುವಾಗಲೂ ತಮ್ಮ ಗುರುಗಳಾದ ಬಾಲಾ ಸುಂದರರಾವ್ ರ ನಿರ್ದೇಶನದಲ್ಲಿ ಮೋರಗೇರಿಯಲ್ಲಿ ಕಿಲಾಡಿ ಕಿಟ್ಟು ಏಕಾಂಕನಾಟಕದಲ್ಲಿ ಅಭಿನಯಿಸಿದರು. ಈ ಎರಡು ಸಂದರ್ಭಗಳೇ ರಮೇಶರ ರಂಗಹಾದಿಗೆ ತಳಹದಿಯಾದವು.
 ಅದಲ್ಲದೇ ತಮ್ಮ ತಾತ,ತಂದೆಯಿಂದಲೇ ರಂಗಾಸಕ್ತಿ ಮೂಡಿದ ಕಾರಣ ಅದು ಜನ್ಮತಃ ಬಳುವಳಿಯಾಯಿತು.ಇವರು ಸಹ ಅದನ್ನು ಬಾಲ್ಯದಿಂದಲೇ ಆರಾಧಿಸುತ್ತಲೇ ಬಂದಿದ್ದರೆಂದು ಇವರ ನೆರೆಹೊರೆಯವರ ಮೂಲಕ ತಿಳಿಯಬಹುದಾಗಿದೆ.ಅಂತೆಯೇ ಬಾಲ್ಯದಿಂದಲೇ ನಾಟಕದ ಚಾಳಿ ಓದುವ ಗೀಳಿಗಿಂತ ಅತಿಯಾಗಿ ಪದವಿಯವರೆಗೆ ಮಾತ್ರ ಓದಲಾಯಿತು.ನಂತರ ಏನಿದ್ದರೂ ರಂಗಭೂಮಿಯೇ ಎಲ್ಲವಾಯಿತು.
  ಹಂಚಿನಮನಿ ರಮೇಶರವರು ಎಂದರೆ ಸಾಕು ಹಗರಿ ಬೊಮ್ಮನಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಸರುವಾಸಿಯಾದ ರಂಗಕರ್ಮಿ ಎಂತಲೇ ಗುರುತಿಸುವರು.ಬಾಲ್ಯದಿಂದಲೇ ಆರಂಭವಾದ ಬಣ್ಣದ ಬದುಕಿನಲ್ಲಿ ರಕ್ತರಾತ್ರಿ,ಸುಗಂಧ ಪುಷ್ಪಹರಣ,ನಾರದ ಗರ್ವಭಂಗ,ನಾರದ ವಿನೋಧ,ಪಾಂಡು ವಿಜಯ,ಜಗಜ್ಯೋತಿ ಬಸವೇಶ್ವರ ಇತ್ಯಾದಿ ಪೌರಾಣಿಕ,ಐತಿಹಾಸಿಕ ಹಾಗೂ ಕೈಲಾಗದ ಗಂಡ ಕೈಲಾಸ ಕಂಡ, ರೈತನ ಬಾಳು ಕಣ್ಣೀರಿನ ಗೋಳು, ಊರಿಗೆ ಕಾಲಿಟ್ಟ ಹುಲಿ, ಅತ್ತಿಗೆಗೆ ಬಂದ ಅಗ್ನಿಪರೀಕ್ಷೆ, ಧರ್ಮ ಯುಗದಲ್ಲಿ ಕರ್ಮದ ಕಟುಕರು, ಸೇಡಿಗಾಗಿ ಸಿಡಿದೆದ್ದ ಶಿವನಾಗ, ಮನ ಮೆಚ್ಚಿದ ಮೈಲಾರಿ, ತವರುಮನೆ ಕುಂಕುಮ, ರೌಡಿ ರಂಗದಲ್ಲಿ ರಣಧೀರರು ಎನ್ನುವ ಸಾಮಾಜಿಕ ನಾಟಕಗಳನ್ನು ಪ್ರತಿವರುಷ ಜಾತ್ರೆ ಉತ್ಸವಗಳಲ್ಲಿ ಸುಮಾರು 500 ಕ್ಕೂ ಬಾರಿ ಪ್ರದರ್ಶನ ನೀಡಿದ್ದಾರೆ.
   ಇದಲ್ಲದೇ ತಮ್ಮೂರಿನ ರಂಗಗೆಳೆಯರ ಬಳಗವೆಲ್ಲಾ ಒಂದೆಡೆ ಸೇರಿ ಕ್ರಿ.ಶ.2008-2009 ರಲ್ಲಿ ಶ್ರೀ ಕಂದಗಲ್ ಹನುಮಂತರಾಯ ಕಲಾಸಂಘ ಹಗರಿಬೊಮ್ಮನಹಳ್ಳಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಂಸ್ಥೆಯ ಮೂಲಕ ಪ್ರತಿವರ್ಷ ಒಂದೊಂದು ಸಾಮಾಜಿಕ ಐತಿಹಾಸಿಕ ಪೌರಾಣಿಕ ನಾಟಕಗಳನ್ನು ನಿರ್ದೇಶಿಸುತ್ತ ನಾಟಕವನ್ನು ಹೊತ್ತು ಬೆಂಗಳೂರು, ಬಳ್ಳಾರಿ,ಕೊಪ್ಪಳ,ರಾಯಚೂರು, ಗಂಗಾವತಿ ,ಹಂಪಿ, ಆನೆಗೊಂದಿ, ಮೈಸೂರು,ಚಿತ್ರದುರ್ಗ ಮುಂತಾದ ಪ್ರದೇಶಗಳಿಗೆ ಸಾಗಿ ಪ್ರಸಿದ್ಧ ಜಾತ್ರೆ- ಉತ್ಸವಗಳಲ್ಲಿ ರಕ್ತರಾತ್ರಿಯಲ್ಲಿ ಭೀಮನಾಗಿ,ಬಸವೇಶ್ವರ ನಾಟಕದಲ್ಲಿ ಕೋಡಿ ಮಂಚಣ್ಣನಾಗಿ, ಧರ್ಮಯುಗದಲ್ಲಿ ಕರಮದ ಕಟುಕರು ನಾಟಕದಲ್ಲಿ ಬೈರನಾಗಿ,ಅತ್ತಿಗೆಗೆ ಅಗ್ನಿ ಪರೀಕ್ಷೆ ನಾಟಕದಲ್ಲಿ ರಾವ್ ಬಹದ್ದೂರ್ ಪಾತ್ರಗಳನ್ನು ನಿರ್ವಹಿಸಿ ತಮ್ಮ ರಂಗ ಚಮತ್ಕಾರವನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ.ಆದರೆ ಇವರಿಗೆ ಅತಿಹೆಚ್ಚಿನ ಪ್ರಸಿದ್ಧಿಯನ್ನು ತಂದುಕೊಟ್ಟ ನಾಟಕವೆಂದರೆ ಅದು ಕರ್ನಾಟಕದ ಷೇಕ್ಸ್ ಪಿಯರ್ ಶ್ರೀ ಕಂದಗಲ್ ಹನುಮಂತರಾಯರ ರಕ್ತರಾತ್ರಿಯ ಭೀಮನ ಪಾತ್ರವೆಂದರೆ ತಪ್ಪಾಗಲಾರದು.
    ಕ್ರಿ.ಶ.1980 ರಿಂದ ಆರಂಭವಾದ ರಂಗ ಪಯಣ ಇಲ್ಲಿಯವರೆಗೆ ಎಲ್ಲಿಯೂ ನಿಲ್ಲದೇ ಸಾಗಿ ಬಂದಿದ್ದರಿಂದ ಇವರ ಕಲಾ ಪ್ರತಿಭೆಯನ್ನು ಮೆಚ್ಚಿ ಶ್ರೀ ಪುಟ್ಟರಾಜ ಕಲಾ ಬಳಗ ಗೊಲ್ಲರಹಳ್ಳಿ ಇವರ ವತಿಯಿಂದ ಪುಟ್ಟರಾಜ ಶ್ರೀ ಕಲಾ ಪ್ರಶಸ್ತಿ ಹಾಗೂ ಗಾನಯೋಗಿ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿ ಕಲಾ ಟ್ರಸ್ಟ್ ಸೂಲದಹಳ್ಳಿ ಇವರಿಂದ ಕಲಿಯುಗದ ಭೀಮ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ವತಿಯಿಂದ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬಳ್ಳಾರಿ,ಬೆಂಗಳೂರು , ನೇಹಾ ಕಲಾ ಸಂಘ,ಛಾಯಾ ಭಾನು ಕಲಾ ಸಂಘ ಬೆಂಗಳೂರು, ಶ್ರೀ ಎಲಿವಾಳ ಸಿದ್ದಯ್ಯಸ್ವಾಮಿ ಸ್ವಾಮಿ ಕಲಾ ಬಳಗ ಗೆಣಕಿಹಾಳ್ ಇನ್ನು ಮುಂತಾದ ಸಂಘ-ಸಂಸ್ಥೆಗಳಿಂದ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
  ಇಂತಹ ಅನೇಕ ಗ್ರಾಮೀಣ ಪ್ರತಿಭೆಗಳು ಕಂಡರೂ ಕಾಣದ ರೀತಿಯಲ್ಲಿ ನಮ್ಮ ನಿಮ್ಮೊಡನೆ ಮೂಲೆಗುಂಪಾಗಿದ್ದಾರೆ.ಈ ಮೂಲಕವಾದರೂ ಮುಖ್ಯ ವಾಹಿನಿಗೆ ಬರಲೆಂಬುದೇ ನನ್ನೀ ಲೇಖನದ ಆಶಯ.

ಲೇಖನ 
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ ಮತ್ತು ರಂಗ ಸಂಶೋಧಕರು
manjuamazing7@gmail.com
9379857775

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.