ರಂಗ ಮಾಲಿಕೆ - 23 ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'
ಬಣ್ಣದ ಬದುಕು
ರಂಗ ಮಾಲಿಕೆ-23
ಸಂಡೂರಿನ ರಂಗ ಮಯೂರಿ ' ರೇಣುಕಾ ಬಾವಳ್ಳಿ'.
ಕಣ್ಮುಂದೆ ಕಾಣುವ ಕಲೆ ನಿಜವಿರಬಹುದು ಆದರೆ ಅದರ ಹಿಂದಣ ಬದುಕು ಕಣ್ಣಗೆ ಕಂಡಷ್ಟು ಸತ್ಯವಲ್ಲ.ಒಂದು ನಾಟಕ ರಂಗಕ್ಕೆ ಬರುವ ವೇಳೆಗೆ ಪ್ರಸವ ವೇದನೆ ಅನುಭವಿಸಿರುವುದಂತು ಅಕ್ಷರಶಃ ಸತ್ಯ.ಅದರಲ್ಲೂ ನಮ್ಮ ಬಳ್ಳಾರಿ ಭಾಗದಲ್ಲಿ ರಂಗ ತೊಡಕಾಗಿ ಕಾಣಸಿಗುವ ಮೊದಲ ಸಮಸ್ಯೆ ಎಂದರೆ ಸ್ತ್ರೀ ಪಾತ್ರಧಾರಿಗಳು.ಆದರೆ ಈ ಭಾಗದಲ್ಲಿ 1930-40 ರ ನಂತರ ಆ ಸಮಸ್ಯೆ ನಿವಾರಣೆಯಾಯಿತು.ಅದಕ್ಕೆ ನಿದರ್ಶನವೆಂಬಂತಿದೆ ಅಭಿನೇತ್ರಿ ರೇಣುಕಾ ಬಾವಳ್ಳಿಯವರ ಈ ಲೇಖನ.
ಇವರು 01.06.1974 ರಲ್ಲಿ ಸಂಡೂರು ತಾಲ್ಲೂಕಿನ ಬಾವಳ್ಳಿ (ಸುಶೀಲಾ ನಗರ)ಯಲ್ಲಿ ದಾಸರ ನರಸಿಂಹಪ್ಪ ಮತ್ತು ದಾಸರ ಸಿದ್ದಮ್ಮ ಎಂಬ ಬಡ ದಂಪತಿಗಳ ಮಗಳಾಗಿ ಜನಿಸಿದರು.ಬಾಲ್ಯದಿಂದಲೇ ಕಷ್ಟ ಅನುಭವಿಸಿದ ಇವರು ತಮ್ಮ ತಾಯಿಗೆ ಇದ್ದ ಒಂದು ಸೀರೆಯನ್ನು ಹರಿದು ಎರಡಾಗಿಸಿ ಪ್ರತಿನಿತ್ಯ ಬಳಕೆಗೆ ಮಾಡಿಕೊಂಡಿದ್ದನ್ನು ಕಂಡುಂಡವರು.ಈ ಎಲ್ಲ ಬಡತನದ ಬೇಗೆಯನ್ನು ಕಣ್ಣಾರೆ ಕಂಡ ಇವರಿಗೆ ಈ ಕೂಪದಿಂದ ಆಚೆ ಬರುವುದಕ್ಕೆ ತವಕಿಸುತ್ತಿದ್ದರು.ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರ ಕೈ ಹಿಡಿದಿದ್ದು ರಂಗಭೂಮಿ ಮಾತ್ರ.
ಬಡತನದ ದೆಸೆಯಲ್ಲಿ ತಂದೆ ತಾಯಿ ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ಸುತ್ತಮುತ್ತಲಿನ ಪ್ರದೇಶಗಳಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದರು.ಇದರಿಂದಾಗಿ ಓದಿನ ಹಾದಿಯನ್ನು ಕಾಣದ ಬಾವಳ್ಳಿಯವರೆಗೆ ಓರಗೆಯಾವರೊಂದಿಗಿನ ಆಟವೇ ಎಲ್ಲವಾಗಿತ್ತು.
ಗ್ರಾಮೀಣ ಭಾಗದ ಬಹುತೇಕ ಮಕ್ಕಳಿಗೆ ಆಟದೊಡನೆ ನೃತ್ಯ, ನಾಟಕದ ಗೀಳು ತಾನಾಗಿಯೇ ಸಿದ್ಧಿಸಿರುತ್ತದೆ. ಅಂತೆಯೇ ತಮ್ಮ 8ನೇ ವಯಸ್ಸಿನಲ್ಲಿ ಗೆಳೆಯರೊಂದಿಗೆ ಬೀದಿಯಲ್ಲಿ ಕೇಳುತ್ತಿದ್ದ ಬ್ಯಾಂಡ್ ಸೌಂಡಿಗೆ ಕುಣಿಯುತ್ತಿದ್ದ ಇವರನ್ನು ಕಂಡ ಜನರೆಲ್ಲ ' ದಾಸರ ನರಸಿಂಹಪ್ಪನ ಮಗಳು ಎಟ್ ಚೆಂದ ಕುಣಿತಾಳ' ಅಂತಾ ಮಾತನಾಡಲು ಶುರುವಾಯಿತು. ಅಲ್ಲದೇ ತಮ್ಮ ಹಿರಿಯಣ್ಣ ಕೃಷ್ಣ ದಾಸರ ಅಭಿನಯಿಸುತ್ತಿದ್ದ ' ಪುಡಾರಿ ನಂಜಪ್ಪ' ನಾಟಕದ ನಾಂದಿಗೀತೆಗೆ ಬಾವಳ್ಳಿಯವರ ನೃತ್ಯವೇ ಅಂದಿನ ನಾಟಕಕ್ಕೂ ಮತ್ತವರ ಬಣ್ಣದ ಬದುಕಿಗೂ ನಾಂದಿಯಾಯಿತು.
ನೃತ್ಯದೊಂದಿಗೆ ಆರಂಭವಾದ ಕಲಾ ಜೀವನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇವರ ಹೆಸರನ್ನು ಗುಸುಗುಸು ಮಾತನಾಡುವಂತಾಯಿತು. ಈಗಿರುವಾಗ ಊರು ಗೌಡರೆಲ್ಲಾ ಬಾವಳ್ಳಿಯವರಿಗೆ ಓದಿಸಲು ಅವರ ತಂದೆಯನ್ನು ಒತ್ತಾಯಿಸಿದರು.ಜನರ ಮಾತಿಗೆ ಓಗೊಟ್ಟು ಓದಿಸಿದರೂ ಕಲೆಯ ಮುಂದೆ ವಿದ್ಯೆ ನೈವೇದ್ಯವಾಯಿತು.ಆದರೂ ರಂಗಭೂಮಿಗೆ ಬೇಕಾದ ಎಲ್ಲ ವಿದ್ಯೆಗಳು ತಾನಾಗಿಯೇ ಕರಗತವಾಗುತ್ತಲೇ ಬಂದವು.
ಮಗಳ ಕಲೆಯನ್ನು ಕಂಡ ನರಸಿಂಹಪ್ಪನವರಿಗೆ ಮಗಳ ಕಲೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನಾಟಕ ನಡೆಯುವ ಸ್ಥಳಗಳಿಗೆ ಹೋಗಿ ಮಗಳ ಕಲಾ ಪ್ರದರ್ಶನಕ್ಕೆ ಅವಕಾಶ ಕೇಳಿ ಪಡೆದು,ನಂತರ ಮನೆಯಲ್ಲಿದ್ದ ಜೋಳವನ್ನು ಮಾರಿ ಬಂದ ಹಣದಲ್ಲಿ ಬಸ್ ಚಾರ್ಜ್ ಇಟ್ಕೊಂಡು ಮತ್ತು ಗಾರೆ ಕೆಲಸದಲ್ಲಿ ಕೂಡಿಟ್ಟ ಹಣದಲ್ಲಿ ತಾಯಿ ಕೈ ಹೊಲಿಗೆಯಲ್ಲಿ ಹೊಲಿದ ಟಿಕಳಿಯ ಬಟ್ಟೆಗಳನ್ನು ಧರಿಸಿ ಅಭಿನಯಿಸಲು ಬಾವಳ್ಳಿಯವರು ತಂದೆಯಷ್ಟೇ ಅತ್ಯುತ್ಸಾಹ ತೋರುತ್ತಿದ್ದರು. ಇವರ ರಂಗಕಾಯಕ ಪ್ರಾರಂಭವಾಗಿದ್ದು ನಾಗಲಾಪುರ ಒಪ್ಪತೇಪ್ಪರ ನಿರ್ದೇಶನದಲ್ಲಿ ' ಸತಿ ಸಂಸಾರದ ಜ್ಯೋತಿ' ನಾಟಕದಲ್ಲಿ ಊರಿನ ಪ್ರಮುಖರಾದ ಡಿ.ಕೆ.ನಾಗನಗೌಡರ ಮಗಳ ಪಾತ್ರದಲ್ಲಿ ಮೊದಲ ಬಾರಿಗೆ ಅಭಿನೇತ್ರಿಯಾದರು.ಈ ಮೂಲಕ ರಂಗಲೋಕಕ್ಕೆ ಪಾದಾರ್ಪಣೆ ಮಾಡಿದರು.ನೃತ್ಯ ಮತ್ತು ನಾಟಕದ ಮೂಲಕ ನಂಜುಡಿ ಕಲ್ಯಾಣ,ಗಜಪತಿ ಗರ್ವಭಂಗ ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಕಲಾ ರಸಿಕರ ಮನಗೆದ್ದ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಅನುಕರಣೆಯಿಂದಲೇ ಬಾವಳ್ಳಿಯವರು 'ಜೂ.ಮಾಲಾಶ್ರೀ ' ಎಂದೇ ಹೆಸರಾದರು.ಮುಂದೊಂದು ದಿನ ಕಾಲ್ ಶೀಟ್ ಗೆ ಕಾಯ್ದು ಡೇಟ್ ಪಡೆಯುವಷ್ಟು ಬಾವಳ್ಳಿಯವರು ಪ್ರಸಿದ್ಧ ನಟಿಯಾಗುವ ಮುನ್ಸೂಚನೆ ಯಾರಿಗೂ ತಿಳಿದಿರಲಿಲ್ಲ.
ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆ ಬಾಳ ನೌಕೆ ಬಯಲು ಸೇರುವ ಮುನ್ನವೇ ದಾಂಪತ್ಯ ವಿರಸದಿಂದ ಬಿರುಗಾಳಿಗೆ ಸಿಲುಕಿ ದೂಳಿಪಟವಾಗಿದ್ದು ಮಾತ್ರ ವಿಷಾದನೀಯ.ಆದರೂ ಯಾವುದಕ್ಕೂ ಅಂಜದೇ,ಯಾರಿಗೂ ಹೊರೆಯಾಗದೆ ರಂಗಭೂಮಿಯ ಒಡನಾಟದಿಂದ ಇಬ್ಬರು ಮಕ್ಕಳನ್ನು ಸ್ಥಳೀಯ ಪ್ರತಿಷ್ಠಿತ ಶಾಲಾ ಕಾಲೇಜುಗಳಲ್ಲಿ ಓದಿಸಿ ಉನ್ನತಮಟ್ಟಕ್ಕೆ ತಂದಿದ್ದು ಮಾತ್ರ ಸಾಹಸವೇ ಸರಿ.
ಇಬ್ಬರು ಮಕ್ಕಳನ್ನು ಹೊತ್ತು ಏಳುತ್ತಾ ಬೀಳುತ್ತಾ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಂಚರಿಸಿ ರತ್ನ ಮಾಂಗಲ್ಯ, ರಕ್ತರಾತ್ರಿ,ವೀರ ಅಭಿಮನ್ಯು, ಅಕ್ಷಯಾಂಬರ, ಹೇಮರೆಡ್ಡಿ ಮಲ್ಲಮ್ಮ,ಕುರುಕ್ಷೇತ್ರ,ಶಿವನಾಣೆ,ನಾ ಸಾಕಿದ ಗಿಣಿ,ಶ್ರೀಕೃಷ್ಣದೇವರಾಯ ಮುಂತಾದ ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಹಾಸ್ಯ ನಾಟಕಗಳಲ್ಲಿ ಸುಭದ್ರಮ್ಮ ಮನ್ಸೂರ್,ಪ್ರೇಮಾ ಬಾದಾಮಿ,ಕೆ.ಜಗದೀಶ್,ಹೊಸಪೇಟೆ ಮಂಗಳ,ಮಧುರ,ಮರಿಯಮ್ಮನಳ್ಳಿ ನಾಗರತ್ನಮ್ಮ ಮುಂತಾದವರ ಒಡನಾಟದಲ್ಲಿ ಓರೆಕೋರೆಗಳನ್ನು ತಿದ್ದಿಕೊಳ್ಳತ್ತಾ ಕಲೆಯ ಮುಕ್ತ ಪ್ರದರ್ಶನ ನೀಡುತ್ತಿದ್ದರು.
ಯಾವುದೇ ನಿಖರ ಸಂಭಾವನೆಯ ಅಪೇಕ್ಷವಿಲ್ಲದೇ ಮನದುಂಬಿ ಸುಮಾರು 35 ವರ್ಷಗಳ ಕಾಲ ಮನದೊಳಗೆ ಅಳುತ್ತಲೇ ಕಲಾ ರಸಿಕರಲ್ಲಿ ಹಾಸ್ಯ ರಸಧಾರೆಯನ್ನೆರೆದ ಶ್ರೇಷ್ಠ ಅಭಿನೇತ್ರಿಯಾಗಿದ್ದಾರೆ.
ಇವರ ಕಲಾ ಸೇವೆಯನ್ನು ಗುರುತಿಸಿ ನಾಡಿನ ಅನೇಕ ಸಂಘ ಸಂಸ್ಥೆಗಳು ಹುಲಿಗಿ ಅಭಿನವ ತಂಡದಿಂದ ಹಾಗೂ ಉಜೈನಿ ಪೀಠದಿಂದ ಸರ್ವ ಶ್ರೇಷ್ಠ ನಟಿ ಪ್ರಶಸ್ತಿಗಳು, ಸನ್ಮಾನಗಳು ನೀಡಿ ಸತ್ಕರಿಸಿವೆ.ವೈಭವೋಪೇತವಾದ ರಂಗದಲ್ಲಿ ಮೆರೆದ ಕಲಾವಿದರ ಪರದೆ ಹಿಂದಣ ಬದುಕಿನ ನೈಜ ಚಿತ್ರಣ ಬಹುತೇಕರಿಗೆ ಪರಿಚಯವಿರುವುದಿಲ್ಲ. ನೂರು ಸಂಕಷ್ಟಗಳಿದ್ದರೂ ತುಂಬು ಮನದಿ ನಮ್ಮ ಮನಸ್ಸಂತೋಷ ಪಡಿಸುವ ಇಂತಹ ಹಲವು ಮಹನೀಯರ ಬದುಕಿನ ಪ್ರತಿಬಿಂಬವೇ ನನ್ನೀ ಸರಣಿ ಲೇಖನದ ಆಶಯ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ರಂಗ ಸಂಶೋಧಕ
9379857775
manjuamazing7@gmail.com

Comments
Post a Comment