ರಂಗ ಮಾಲಿಕೆ -೨೨ ಆಂಧ್ರ ಚಾರಿತ್ರಿಕ ನಾಟಕ ಪಿತಾಮಹ 'ಕೋಲಾಚಲಂ ಶ್ರೀನಿವಾಸ ರಾಯರು.


 

ಬಣ್ಣದ ಬದುಕು

ರಂಗ ಮಾಲಿಕೆ - ೨೨


" ಚಾರಿತ್ರಿಕ ನಾಟಕ ಪಿತಾಮಹ " ಕೋಲಾಚಲಂ ಶ್ರೀನಿವಾಸ ರಾಯರು.


ಬಳ್ಳಾರಿ ರಂಗಭೂಮಿ ಇತಿಹಾಸದ ಪುಟಗಳಲ್ಲಿ ಮರೀಚಿಕೆಯಾಗಿ ಕಣ್ಮರೆಯಾದ ಹಲವು ಮಹನೀಯರ ಹೆಸರುಗಳಲ್ಲಿ ಪ್ರಮುಖ ಹೆಸರೆಂದರೆ ಕೋಲಾಚಲಂ ಶ್ರೀನಿವಾಸ ರಾಯರು. ಮರಾಠಿ ನಾಟಕಗಳ ಪ್ರಭಾವ ಹೇರಳವಿದ್ದ ಬಳ್ಳಾರಿಯಲ್ಲಿ ಕನ್ನಡ ಮತ್ತು ತೆಲುಗಿನ ಕಂಪು ಪಸರಿಸಿದ ಪ್ರಮುಖರಲ್ಲೊರ್ವರಿವರು.

    ಇವರು ಈಗೀನ ವಿಜಯನಗರ (ಬಳ್ಳಾರಿ) ಜಿಲ್ಲೆಯ ಹಂಪಿಯ ಸಮೀಪದ ಕಡ್ಡಿರಾಂಪುರದಲ್ಲಿ 13 ಮಾರ್ಚ್ 1854ರಲ್ಲಿ  ಸೇತುಪತಿ ಶಾಸ್ತ್ರಿ ಮತ್ತು ಅಚ್ಚಮ್ಮ ಎಂಬ ದಂಪತಿಗಳ ಮಗನಾಗಿ ಜನಿಸಿದರು.

    ಇವರ ತಂದೆ ವಿಜಯನಗರ ಸಂಸ್ಥಾನದಲ್ಲಿ ಪಂಡಿತರು ಹಾಗೂ ಅಮಲ್ದಾರರಾಗಿದ್ದರಿಂದಲೇ ಬಳುವಳಿಯಾಗಿ ಇವರಿಗೂ ಹಾಗೂ ಇವರ ಅಣ್ಣಂದಿರಾದ ಕೋಲಾಚಲಂ ವೆಂಕಟರಾಮಪ್ಪ,ಕೋಲಾಚಲಂ ವೆಂಕಟರಾಯರಿಗೂ ಅಪಾರ ಪಾಂಡಿತ್ಯ ಒದಗಿ ಬಂದಿತು.ಅಣ್ಣ ವೆಂಕಟರಾಯರ ಪ್ರೀತ ಹಾರೈಕೆಯಲ್ಲಿ ಬೆಳೆಯುತ್ತಿದ್ದ ರಾಯರನ್ನು ತಾವು ಅನಂತಪುರದಲ್ಲಿ ಸಬ್ ಮ್ಯಾಜಿಸ್ಟ್ರೇಟ್ ನ್ಯಾಯಾಲದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆದೊಯ್ದು ಅಲ್ಲಿಯೇ ಮೆಟ್ರಿಕ್ಯುಲೇಷನ್ ಮುಗಿಸಿದರು. ಅಲ್ಲದೇ ಸ್ವ ಅಧ್ಯಯನದ ಮೂಲಕ ಸಾಹಿತ್ಯ ಪಾಂಡಿತ್ಯವನ್ನು ಸಹ ಗಳಿಸಿದರು.ಅಲ್ಲದೇ ಚಿಕ್ಕ ವಯಸ್ಸಿನಲ್ಲೇ ಕನ್ನಡ, ತೆಲುಗು,ಸಂಸ್ಕೃತ,ಇಂಗ್ಲೀಷ್ ಭಾಷಾಪ್ರಭುತ್ವ ಹೊಂದಿದ್ದರಿಂದ 1876ರಲ್ಲಿ ಎಫ್.ಎ ಪರೀಕ್ಷೆ ಬರೆದು ಉತ್ತೀರ್ಣರಾದರು.ನಂತರ ಕೆಲವು ವರ್ಷಗಳ ಕಾಲ ಅನಂತಪುರ ಜಿಲ್ಲೆಯ ಗುತ್ತಿಯಲ್ಲಿ ರೆವಿನ್ಯೂ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದರು.ಇವರ ಜಾಣ್ಮೆ,ಪ್ರಾಮಾಣಿಕತೆ ಹಾಗೂ ಕಾರ್ಯ ವೈಖರಿಗೆ ತಕ್ಕಂತೆ 1881 ರಲ್ಲಿ  ಅನಂತಪುರ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಕಛೇರಿಯಲ್ಲಿ ಗುಮಾಸ್ತರಾಗಿ ಆಯ್ಕೆಯಾದರು.ಇದರ ನಡುವೆ ರಾಯರು 7 ವರ್ಷಗಳ ಕಾಲ ನಿಷ್ಠೆ,ಶ್ರದ್ಧೆಯ ಕೆಲಸ ಮಾಡಿ 1888ರಲ್ಲಿ ಅನಾರೋಗ್ಯದ ನಿಮಿತ್ತ ಅಣ್ಣನ ಮಾತಿನಂತೆ ಹುದ್ದೆಗೆ ರಾಜೀನಾಮೆ ನೀಡಿ ಬಳ್ಳಾರಿಗೆ ಹಿಂದಿರುಗಿದರು.

   ಬಡ ಪಂಡಿತ ವರ್ಗದಲ್ಲಿ ಜನಿಸಿದ ರಾಯರಿಗೆ ಅಣ್ಣನ ಒಲವಿನಾಸರೆಯಲ್ಲಿ ಎಂದು ಬಡತನದ ಭೇಗೆ ತಾಕಲಿಲ್ಲ.ಆದರೆ ಮದುವೆಯಾದ ನಂತರ ಕುಟುಂಬ ನಿರ್ವಹಣೆಗಾಗಿ ಉದ್ಯೋಗದ ಅನಿವಾರ್ಯತೆ ಅವಶ್ಯಕವಾಗಿತ್ತು.ಆಗಾಗಿಯೇ ಸದಾಧ್ಯಯನದ ಪರಿಶ್ರಮದಿಂದ ವಕೀಲ ವೃತ್ತಿಗೆ ಸಂಬಂಧಿಸಿದ ಸೆಕೆಂಡರಿ ಗ್ರೇಡ್ ಪ್ಲೀಡರಶಿಪ್ ಪರೀಕ್ಷೆಯನ್ನು ಬರೆದು ಉತ್ತಮ ಅಂಕದೊಂಡನೆ ಉತ್ತೀರ್ಣರಾದರು.ಬಳ್ಳಾರಿ ನ್ಯಾಯಾಲಯದಲ್ಲಿ ಖಾಸಗಿ ವಕೀಲರಾಗಿ ಕಾರ್ಯ ನಿರ್ವಹಿಸಲು ಮುಂದಾದರು.

    ಬಳ್ಳಾರಿಯ ಸಾಂಗತ್ಯದಿಂದಾಗಿ ಉತ್ತಮವಂತರ ಸಾಮೀಪ್ಯ ದೊರೆಯಿತು.ಅಲ್ಲಿಗೆ ಸಹವಾಸದಿಂದ ಸನ್ಯಾಸಿಯೂ ಸಂಸಾರಿಯಾದ ಎಂಬಂತೆ ನ್ಯಾಯಾಲಯದಲ್ಲಿ ಧರ್ಮಾವರಂ ರಾಮಕೃಷ್ಣಾಮಾಚಾರ್ಯರ ಸ್ನೇಹ ದೊರೆಯಿತಲ್ಲದೇ ಅವರ ಕಾರ್ಯಾನುಕರಣೆ ಮಾಡಲು ರಾಯರು ಮುಂದಾದರು. ಅದಕ್ಕಾಗಿ ರಾಯರು ಅಂತಸುಪ್ತದಲ್ಲಿ ನಿಶ್ಯಕ್ತಿಯಿಂದ ಅಡಗಿ ಕೂತಿದ್ದ ಸಾಹಿತ್ಯ ಶಕ್ತಿಗೆ ಪುನರ್ಶಕ್ತಿಯನ್ನು ತುಂಬುವ ಆಲೋಚನೆ ಮಾಡಿ ಸಾಹಿತ್ಯ ರಚನೆಗೆ ಮೊದಲ ಅಡಿಯಿಟ್ಟರು. ಅಲ್ಲಿಂದಲೇ ಅವರ ಬಾಳಿನ ಪಯಣ ಅಂದದ ಕವಲುದಾರಿಯಾಗಿ ಮಾರ್ಪಟ್ಟಿತು.

ಇವರು ಸಾಹಿತ್ಯವನ್ನು ಕೇವಲ ವ್ಯವಹಾರಕ್ಕಲ್ಲದೇ ಸಂಸ್ಕೃತಿ ಮತ್ತು ಇತಿಹಾಸದ ಅರಹುವಿಕೆಯ ಮಾಧ್ಯಮವಾಗಿಸಿದರು.ಅಂತೆಯೇ ಐತಿಹಾಸಿಕ, ಸಾಮಾಜಿಕ ಸ್ವಾಸ್ಥ್ಯ ಪರವಾದ ಅತಿಹೆಚ್ಚು ನಾಟಕಗಳನ್ನು ರಚಿಸಿದರು.ಅಲ್ಲದೇ ನಾಟಕದಲ್ಲಿ ಅಶ್ಲೀಲತೆ,ಅನೈತಿಕತೆ,ನಿಂದನೆ,ಧರ್ಮಗ್ರಂಥಗಳ ಅವಹೇಳನ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸುವುದು ಅಸಮಂಜಸ  ಹಾಗೂ ದುರಂತ ನಾಟಕಗಳು  ರಾಯರಿಗೆ ಅಪಥ್ಯವಾಗಿದ್ದವು.

   ರಾಮಕೃಷ್ಣಾಮಾಚಾರ್ಯರ ಸಖ್ಯದಿಂದಾಗಿ ವಾದ - ವಿವಾದ,ಅಭಿನಯ, ನಾಟಕ ಮತ್ತು ನಾಟಕ ಕಂಪನಿ ರಚನೆಯ ಮುಂತಾದ ವಿಷಯಗಳ ಸಮಗ್ರ ಜ್ಞಾನ ದೊರೆಯಿತು.ಮುಂದೆ ನಾಟಕಾಭಿರುಚಿಯನ್ನು ಗುರುತಿಸಿದ ವೆಂಕಟರಾಯರು ತಮ್ಮನ ಒಳಿತಿಗೆಂದೇ ರಾಯರ ಇಚ್ಛೆಯಂತೆ " ಸುಮನೋರಮಾ ಸಭಾ " ಎಂಬ ನಾಟಕ ಕಂಪನಿ ಸ್ಥಾಪಿಸಿ,ಕಲಾವಿದರ ಪ್ರಯೋಗಕ್ಕಾಗಿ ಧರ್ಮಾವರಂ ರಾಮಕೃಷ್ಣ ವಿಲಾಸ ವೇದಿಕೆಯ ಮಾದರಿಯಲ್ಲಿ ' ವಾಣಿ ವಿಲಾಸ ನಾಟಕ ಶಾಲೆ' ಯನ್ನು 1905ರಲ್ಲಿ ನಿರ್ಮಿಸಿ ಅದರ ಉದ್ಘಾಟನೆಗೆ ವೆಂಕಟರಾಯರ ಗೆಳೆಯರಾಗಿದ್ದ ಬಾಲ ಗಂಗಾಧರ ತಿಲಕ್,ನಗರೂರು ನಾರಾಯಣರಾವ್,ಸಿಂದಗಿ ಮರಿಸಿದ್ದಪ್ಪ,ಸಭಾಪತಿ ಮೊದಲಿಯರ್,ಕರಣಂ ರಾಮಚಂದ್ರರಾವ್ ರನ್ನು ಕರೆಯಿಸಿದ್ದರು. ಈ ಶಾಲೆಯೇ ಇಂದಿನ ಬಳ್ಳಾರಿಯ ಪ್ರಭಾತ್ ಟಾಕೀಸ್ ಎಂದು ರಾಯರ ಮರಿ ಮೊಮ್ಮಗ ಕೋಲಾಚಲಂ ಅನಂತ ಪ್ರಕಾಶರು ಅಜ್ಜನ ಬಗ್ಗೆ ಹೆಮ್ಮೆಯಿಂದ ಹೇಳಿದರು.

 ಸಭಾದ ಮೂಲಕ ಮುಂದೆ ಅನೇಕ ನಾಟಕಗಳ ಪ್ರದರ್ಶನ ನಡೆದವು.ಸಭಾದ ಕಲಾವಿದರಿಗಾಗಿಯೇ ಸುನಂದಿನಿ ಪರಿಣಯಮು,ಮದಾಲಸಾ ಪರಿಣಯಮು,ಪಟಾಣ್ ರುಸ್ತುಂ,ರುಕ್ಮಾಂಗದ,ಶ್ರೀರಾಮ ಜನನಮು,ಪಾದುಕ ಪಟ್ಟಾಭಿಷೇಕಮು,ಲಂಕಾ ದಹನಮು,ದ್ರೌಪದಿ ವಸ್ತ್ರಾಪಹರಣಮು,ಕೀಚಕ ವಧಾ,ಬಬ್ರುವಾಹನ,ಹರಿಶ್ಚಂದ್ರ, ಚಂದ್ರಹಾಸ,ಶಿಲಾದಿತ್ಯ,ಪ್ರತಾಪಾಕ್ಬರಿಯಮು,ಕಾಳಿದಾಸು,ಪ್ರಹ್ಲಾದ, ರಾಮರಾಜು ಕಥಾ,ಚಾಂದುಬೀಬಿ,ಕುಶಲವ,ಹಾಸ್ಯ ಮಂಜೂಷ,ಗಿರಿಜಾ ಕಲ್ಯಾಣ, ಸೀತಾ ಕಲ್ಯಾಣ ಇನ್ನೂ ಅನೇಕ ಚಾರಿತ್ರಿಕ ನಾಟಕಗಳನ್ನು ರಚನೆ ಮಾಡಿ ಕರ್ನಾಟಕಾಂಧ್ರದಲ್ಲೆಲ್ಲ ಹೆಸರಾದರು.

  ಇವರು ಬರೆದ ರಾಮರಾಜು ಕಥೆ ನಾಟಕ ತಾಳಿಕೋಟೆ ಯುದ್ಧದಲ್ಲಿ ಕೀರ್ತಿಶೇಷನಾದ ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯನ ಯಶೋಗಾಥೆ ಇದೆ.ಆದರೂ ಇವರು ಒಟ್ಟು  32 ನಾಟಕಗಳು 4 ಪ್ರಹಸನಗಳು ರಚಿಸಿದರು.ಆದರೆ ಹೆಸರಾದ ಹಲವು ನಾಟಕಗಳಲ್ಲಿ ಪಟಾಣ್ ರುಸ್ತುಂ ಹಾಗೂ ಅಚಾರಮ್ಮನ ಕಥೆ ಎಂಬ ಪ್ರಹಸನ ಶ್ರೇಷ್ಠತೆ ಪಡೆದಿವೆ.

   ಕೇವಲ ದೇಶದಲ್ಲಿ ಅಲ್ಲದೇ ಪ್ರಪಂಚದ ಇತರೆ ದೇಶದ ಚಾರಿತ್ರಿಕ ಕಥೆ ಮತ್ತು ಶೈಲಿಗಳನ್ನು ಪರಿಶೋಧಿಸಿ " ಪ್ರಪಂಚ ನಾಟಕ ಚರಿತ್ರಾ" ( The Dramatic History of the World) ಎನ್ನುವ ಬೃಹತ್ ಪರಿಶೋಧನಾ ಗ್ರಂಥ ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.ಈ ಪುಸ್ತಕದ ಮುನ್ನುಡಿಯಲ್ಲಿ ಅಣ್ಣ ವೆಂಕಟರವ್ ಇಲ್ಲದಿದ್ದತೆ ಶ್ರೀನಿವಾಸ ರಾಯರಿಲ್ಲ ಎಂದೇಳಿ ಇಡೀ ಪುಸ್ತಕವನ್ನೇ ಅಣ್ಣನಿಗೆ ಅರ್ಪಣೆ ಮಾಡಿದ್ದಾರೆ.ಇದನ್ನು ಮತ್ತೆ 2011 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪುನರ್ಮುದ್ರಿಸಿದೆ.

ಇವರ ರಂಗಕೃಷಿಯನ್ನು ಮೆಚ್ಚಿ 1917 ರಲ್ಲಿ  ಕಡಪದಲ್ಲಿ ಜರುಗಿದ ಆಂಧ್ರ ಸಾಹಿತ್ಯ ಪರಿಷತ್ ಸಭೆಯ ಅಧ್ಯಕ್ಷತೆ ವಹಿಸುವ ಭಾಗ್ಯ ಒದಗಿಬಂತು.ಇದಲ್ಲದೇ ತೆಲುಗಿನಲ್ಲಿ ಇರದ ಚಾರಿತ್ರಿಕ ನಾಟಕ ರಚನೆಯನ್ನು ಮೊದಲ ಬಾರಿಗೆ ರಾಯರೇ ಬರೆದಿದ್ದರಿಂದ ಇವರನ್ನು 'ಆಂಧ್ರ ಚಾರಿತ್ರಿಕ ನಾಟಕ ಪಿತಾಮಹ' ಎಂಬ ಬಿರುದಿನೊಂದಿಗೆ ಸತ್ಕರಿಸಲಾಗಿದೆ.

 ಮೂಲೆಗುಂಪಿಗೆ ಸೇರುತ್ತಿದ್ದ ಕನ್ನಡ ರಂಗಭೂಮಿಗೆ ಪುನಶ್ಚೇತನ ನೀಡಿ ಬಳ್ಳಾರಿಯ ರಂಗಭೂಮಿ ಚರಿತ್ರೆಯಲ್ಲಿ ಅಚ್ಚಹಳಿಯದೇ ಉಳಿಯಬೇಕಾದ ಧರ್ಮಾವರಂ ರಾಮಕೃಷ್ಣಮಾಚಾರ್ಯರು,ಕೋಲಾಚಲಂ ಶ್ರೀನಿವಾಸ ರಾಯರ ಹೆಸರುಗಳು ಇಂದಿನ ಯಾರ ಮನದಲ್ಲೂ ಕಾಣಸಿಗದಂತಾಗಿವೆ.ಈ ಮೂಲಕವಾದರೂ ಚಾರಿತ್ರಿಕ ಮಹನೀಯರ ಮಾಹಿತಿಯೇ ಮುಂದಿನ ಮತ್ತು ಇಂದಿನ ಪೀಳಿಗೆಗೆ ರಂಗಸ್ಫೂರ್ತಿಯಾಲೆಂಬುದೇ ನನ್ನೀ ಲೇಖನದ ಆಶಯ.


ಲೇಖನ

ಆರ್.ಪಿ.ಮಂಜುನಾಥ್. ಬಿ.ಜಿ‌.ದಿನ್ನೆ

ಸಾಹಿತಿ / ಬರಹಗಾರರು

9379857775

manjuamazing7@gmail.com

Comments

Popular posts from this blog

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೨೭ ಅದಮ್ಯ ಚೇತನದ ರಂಗಮಣಿ 'ಸೋಗಿ ನಾಗರತ್ನಮ್ಮ'.