ರಂಗ ಮಾಲಿಕೆ - ೨೦ ಗಮಕ ಕಲಾನಿಧಿ ' ಡಾ.ಜೋಳದರಾಶಿ ದೊಡ್ಡನಗೌಡರು '
ಬಣ್ಣದ ಬದುಕು
ರಂಗ ಮಾಲಿಕೆ - ೨೦
ಗಮಕ ಕಲಾನಿಧಿ 'ಡಾ.ಜೋಳದರಾಶಿ ದೊಡ್ಡನಗೌಡರು'.
ಜೋಳದರಾಶಿ ದೊಡ್ಡನಗೌಡರು ನವೋದಯ ಕಾಲದ ಮಹತ್ವದ ಲೇಖಕರಲ್ಲಿ ಒಬ್ಬರು. ಕನ್ನಡ ಕಟ್ಟಿದ ಧೀಮಂತರಲ್ಲಿ ಒಬ್ಬರು. ಕನ್ನಡ-ತೆಲುಗು ಉಭಯ ಭಾಷೆಗಳಲ್ಲೂ ಪರಿಣತಿ ಹೊಂದಿ ಕೃತಿ ರಚನೆ ಮಾಡಿದವರು. ನಾಟಕ ಕೃತಿ ರಚನೆ, ಅಭಿನಯ, ನಿರ್ದೇಶನ ಮಾಡಿದ್ದೂ ಅಲ್ಲದೆ, ನಾಟಕ ಕಂಪೆನಿ ಕಟ್ಟಿ ರಾಜ್ಯದಾದ್ಯಂತ ಸಂಚರಿಸಿದವರು. ಸಾಹಿತ್ಯ, ಸಂಗೀತ, ಗಮಕ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಇವರ ಸೇವೆ ಅನನ್ಯ. ಇವರ ಪ್ರತಿಭೆಯ - ಸೇವೆಯ ವಿವರಗಳನ್ನು ಈ ಲೇಖನದಲ್ಲಿ ಚಿತ್ರಿಸಲಾಗಿದೆ.
ಬಳ್ಳಾರಿ ಸೀಮೆಯ ಸಾಂಪ್ರದಾಯಕ ಹಳ್ಳಿಯಾದ ಜೋಳದರಾಶಿಯು, ಕರ್ನಾಟಕ-ಆಂಧ್ರ ಗಡಿಯ ಕೊನೆಯ ಊರು. ಈ ಊರಿನಲ್ಲಿ ಜೋಳದರಾಶಿ ದೊಡ್ಡನಗೌಡರು ಜುಲೈ 27, 1910ರಂದು ಜನಿಸಿದರು. ತಂದೆ ಪಂಪನಗೌಡರು ಮತ್ತು ತಾಯಿ ರುದ್ರಮ್ಮನವರು.400 ಎಕರೆ ಭೂಮಿಯನ್ನು ಹೊಂದಿದ್ದ ತಂದೆಯವರು ಊರಿನ ಗೌಡಿಕೆ ಮಾಡುತ್ತಿದ್ದರು.ಅಲ್ಲದೇ ಕಲಾಸಕ್ತಿ ತಂದೆಯಿಂದಲೇ ಗೌಡರಿಗೆ ಬಳುವಳಿಯಾಗಿತ್ತು.
ಅಲ್ಲದೇ ಅವರ ರಂಗಹೆಜ್ಜೆಯ ಕುರಿತಾಗಿ ಅನುಭವವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ವರ್ಣಿಸಿದ್ದಾರೆ: "ನನ್ನ ವಯಸ್ಸು 6-7 ಇರಬಹುದು. ನಾಟಕ ‘ಕನಕತಾರ’. ಆ ನಾಟಕದ ಕಥೆಯೇನೊ ತಿಳಿಯದು. ಆದರಲ್ಲಿ ಋಷ್ಯಾಶ್ರಮ. ಅಲ್ಲಿ ಒಬ್ಬ ಋಷಿ. ಆ ಋಷಿಯ ಶಿಷ್ಯರಲ್ಲಿ ನಾನೊಬ್ಬ ಬಾಲಶಿಷ್ಯ. ಪದವನ್ನೇನೊ ಕಲಿತು ಹಾಡುತ್ತಿದ್ದೆ. ಆದರೆ ಆ ಪದದಲ್ಲಿಯ ‘ಪರಮ ಗುರುವರ’ ಎಂದು ಹೇಳುವುದಕ್ಕೆ ಬದಲಾಗಿ ‘ಪಲಮ ಗುಲುವಲ’ ಎಂದು ಹೇಳುತ್ತಿದ್ದೆ. ‘ರ’ಕಾರವನ್ನು ನುಡಿಯದೇ ಇದ್ದ ನಾಲಿಗೆ ಎಷ್ಟು ಸಾರಿ ಹೇಳಿಕೊಟ್ಟರೂ ‘ಲ’ಕಾರವನ್ನೇ ನುಡಿಯುತ್ತಿತ್ತು. ಇದರಿಂದ, ನನ್ನ ಓರಿಗೆಯ ಹುಡುಗರೆಲ್ಲಾ ನನ್ನ ಹೆಸರಿಗೆ ಬದಲಾಗಿ ‘ಏ ಗುಲುವಲಾ ಬಾರೋ’ ಎಂದು ಹಾಸ್ಯ ಮಾಡುತ್ತಿದ್ದರು. ಮೊದಲನೆಯ ಈ ‘ಗುಲು’ ಸ್ತೋತ್ರ ನಾಟಕವಾಡಿಸಲೇ ಇಲ್ಲ. ಊರಿಗೆ ಪ್ಲೇಗು ಬಂದು, ಊರವರನ್ನಲ್ಲದೆ ಈ ನಾಟಕದವರಲ್ಲಿ ಕೆಲವರನ್ನು ನುಂಗಿ ನೀರು ಕುಡಿದಿದ್ದರಿಂದ ಆ ನಾಟಕ, ಆ ನನ್ನ ‘ಗುಲುಸ್ತೋತ್ರ’, ಅಲ್ಲಿಗೇ ನಿಂತುಹೋಯಿತು".ಆದರೆ ಇವರು ಮೊದಲಿಗೆ ಬಣ್ಣ ಹಚ್ಚಿದ್ದು ಮಾತ್ರ ಬಯಲಾಟವೊಂದರಲ್ಲಿ ಕುಣಿಯುವ ನಟಿಯಾಗಿ.ಆಗ ಇವರಿಗೆ 8-10 ವರ್ಷವಿರಬಹುದು. ನಂತರ 'ಲವ-ಕುಶ' ನಾಟಕದ ಮೂಲಕವೇ ನಾಟಕಕ್ಕೆ ಬಣ್ಣ ಹಚ್ಚಿದರು.
ಗೌಡರ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಶಾಲೆಯ ಅವಕಾಶ ಎಷ್ಟಿತ್ತೋ ಅವರ ವಿದ್ಯಾಭ್ಯಾಸವೂ ಅಷ್ಟಕ್ಕೇ ಮೊಟಕುಗೊಂಡಿತು. ಆಗ ಉಸುಕಿನಲ್ಲಿ ಬರೆದು, ಕಂಠಪಾಠ ಮಾಡಿ ಗುರುಗಳಿಗೆ ಒಪ್ಪಿಸುವ ಪರಿಪಾಠವಿತ್ತಾರೂ ಚಿನ್ನದ ಚಮಚ ಬಾಯಿಲ್ಲಿಟ್ಟುಕೊಂಡ ಬೆಳೆದ ಗೌಡರ ಪೋಷಕರಿಗೆ ಪರಸ್ಥಳಕ್ಕೋಗಿ ಓದಿಸುವ ಅಗತ್ಯ ತೋರಲಿಲ್ಲ.ಆದರೂ ಗೌಡರಿಗೆ ಜ್ಞಾನ ಚಿಲುಮೆ ಬತ್ತಲಿಲ್ಲ.ಅಂತೇಯೆ ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆ ಮುಂತಾದ ಕಾವ್ಯಗಳ ಅಭ್ಯಾಸ ಮತ್ತು ಬಯಲಾಟದಲ್ಲಿ ವೇಷಕಟ್ಟುವುದು ಅವರಿಗೆ ಅನುವಂಶಿಕವಾಗಿ ಬಂದ ಗುಣವಾಗಿತ್ತು. ಅಲ್ಲದೆ ಗೌಡರ ತಾತಂದಿರಾದ ದೊಡ್ಡ ಹೊನ್ನೆಗೌಡರು ದಕ್ಷಬ್ರಹ್ಮ,ಕೀಚಕ ಮುಂತಾದ ಗಂಡು ವೇಷ ಹಾಗೂ ಸಣ್ಣ ಹೊನ್ನೆಗೌಡರು ಪಾರ್ವತಿ, ದ್ರೌಪದಿಯಂತಹ ಸ್ತ್ರೀ ಪಾತ್ರದಲ್ಲಿ ನಟನೆ ಮಾಡುತ್ತಿದ್ದರು. ಆದರೆ ಗೌಡರ ಜನನದ ತರುವಾಯ ದೊಡ್ಡ ತಾತ ತೀರಿ ಸಣ್ಣ ತಾತರ ಪ್ರೀತಿಯಲ್ಲಿ ಬೆಳೆದರು. ಈ ನಿಟ್ಟಿನಲ್ಲಿ ಗೌಡರಲ್ಲಿ ಸಹ ಕಲೆಯ ಚಹರೆಗೆ ತಾತರೇ ಮೂಲ ಕಾರಣರೆನ್ನವಹುದು.
ಅಷ್ಟೈಶ್ವರ್ಯದಿಂದ ಕೂಡಿದ ಕುಟುಂಬ ಗೌಡರ ಕಾಲಕ್ಕೆ ಇದ್ದ ನಾನೂರು ಎಕರೆ ಭೂಮಿ ಇಂದಿರಾಗಾಂಧಿಯವರ ಉಳುವವನಿಗೇ ಭೂಮಿ ಕಾಯಿದೆಯಲ್ಲಿ ಇವರ ಕೈತಪ್ಪಿ ಹೋಗಿ ಕೇವಲ ೫೦ ಎಕರೆಗಳ ಭೂಮಾಲೀಕತ್ವವುಳ್ಳವರಾಗಿದ್ದರು. ಹೀಗಿದ್ದರೂ ಅವರು ಭೂಮಾಲೀಕತ್ವದ ಯಜಮಾನಿಕೆ ನಡೆಸಿದ್ದೇ ಇಲ್ಲ. ಅವರು ನಟನೆ, ಕಾವ್ಯ ವಾಚನ, ಸಾಹಿತ್ಯ ಇವುಗಳನ್ನು ತಮ್ಮೊಡನೆ ಹೊತ್ತು ನಾಡಿನಲ್ಲೆಲ್ಲಾ ಅಲೆದದ್ದೇ ಹೆಚ್ಚು.
ನಾಟಕ,ಗಮಕದಲ್ಲೇ ಸದಾ ಮುಳುಗಿರುತ್ತಿದ್ದ ಗೌಡರಿಗೆ ಮೊದಲಿಗೆ ಇದ್ದೂರ ಚಿಲುಕರಾಯ ಹನುಮಂತ ರ ಮಗಳು ಭೀಮಕ್ಕರೊಂದಿಗೆ ಒಲ್ಲದ ಮದುವೆಯಾದರು. ಆದರೆ ಸುಮಾರು ವರ್ಷಗಳ ನಂತರ ಪರಸ್ತ್ರೀ (ನಟಿ ಲಕ್ಷ್ಮೀ) ಯೊಂದಿಗಿನ ಒಡನಾಟದಿಂದ ಚಿಂತೆಗೀಡಾಗಿ ಪತ್ನಿ ಭೀಮಕ್ಕ ಹಾಸಿಗೀಡಿದು ಹತರಾದರು.ಆದರೂ ಕಲೆಯನ್ನು ಬಿಡದ ಗೌಡರು ಊರೂರು ಅಲೆದರು.ಆಗ ತಂದೆ ಪಂಪನಗೌಡರು ತಿಮ್ಮಾಪುರದ ಮರಿಬಸವನಗೌಡರ ಹಿರಿಮಗಳು ಹನುಮಕ್ಕರೊಂದಿಗೆ ದಿನಾಂಕ : 21.02.1935 ರಂದು ಗೌಡರಿಗೆ ಎರಡನೇ ಮದುವೆ ಮಾಡಿದರು. ಗೌಡರು ಸಂತಸದಿಂದನೋ ಬಾಳಿದರು.ಆದರೆ ಸಂತಾನವಿರಲಿಲ್ಲ.
ಗೌಡರು ಊರಿನ ಕಲಾಸಕ್ತರನೆಲ್ಲ ಒಂದೆಡೆ ಸೇರಿಸಿ ಗರುಡ ಗರ್ವ ಭಂಗ ಎಂಬ ನಾಟಕವನ್ನು ಮಾಡಲು ನಿರ್ಧರಿಸಿದರು. ಆದರೆ ನಾಟಕ ಮಾಡಲು ತಯಾರಿ ನೆಡೆಯುತ್ತಿರುವಾಗಲೇ ತಾತ ಸಣ್ಣ ಹೊನ್ನೆ ಗೌಡ್ರು ಹತರಾದರು.ಕಾಲಸರಿದು ಮತ್ತೆ ನಾಟಕವನ್ನು ಮಾಡಲು ಮುಂದಾದಾಗ ತಂದೆ ಅನಾರೋಗ್ಯಕ್ಕಿಡಾದರು.ಆದರೆ ಕೆಲ ದಿನಗಳ ನಂತರ ಊರಜನ ಬೇಡವೆಂದರು ಹಟಕ್ಕೆ ಬಿದ್ದು ನಾಟಕವನ್ನು ಮಾಡಿಯೇ ಬಿಟ್ಟರು.ಅದರಲ್ಲಿ ಕೃಷ್ಣನಾಗಿ ಗೌಡರು ಮಿಂಚಿದರು.ಅಲ್ಲದೇ ಈ ನಾಟಕ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಸರಾಯಿತು.ಇದೇ ಉತ್ಸಾಹದಲ್ಲಿ ಸುಮ್ಮನಿರದ ಗೌಡರು ' ಸರ್ವಜನ ಮನೋರಂಜನ ಕರ್ನಾಟಕ ನಾಟಕ ಸಭಾ ' ಎಂದು ತಮ್ಮ ಕಲಾ ತಂಡಕ್ಕೆ ಹೆಸರಿಟ್ಟು ಜಲಂಧರ,ಶಾಪ ವಿಮೋಚನೆ,ಚವತಿ ಚಂದ್ರ ಮುಂತಾದ ನಾಟಕಗಳನ್ನು ಹೊತ್ತು ರಾಯಚೂರು, ಆದವನಿ,ಬಳ್ಳಾರಿ, ಕೊಪ್ಪಳ, ಉರವಕೊಂಡ ಮುಂತಾದ ಕಡೆ ಸಂಚರಿಸಿ ಹೆಸರಾದರು. ಇದಲ್ಲದೇ ಉರವಕೊಂಡ ಕರಿಬಸವೇಶ್ವರ ಜಾತ್ರೆಯಲ್ಲಿ ತಂಡಕ್ಕೆ ' ಶ್ರೀ ಗವಿಮಠ ಚನ್ನಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ' ಪುನರ್ನಾಮ ಮಾಡಿದರು.ಆದರೆ ತಿರುಗಾಟಕ್ಕೆ ಹೋಗಿ ಈಗಾಗಲೇ ನಾಟಕ ಮಾಡಿದ ಊರಲ್ಲಿ ಸಹಾಯಾರ್ಥ ನಾಟಕ ಮಾಡಲೋಗಿ ಸರಿಯಾದ ಪ್ರೋತ್ಸಾಹ ದೊರೆಯದೆ ಹುಂಬುತನಕ್ಕೆ ಬಿದ್ದು ಊರಿಂದೂರಿಗೆ ತಿರುಗುತ್ತಾ ಕೊನೆಗೆ ಹೊಟ್ಟೆಗೆ ಗತಿಯಿಲ್ಲದೆ ಒಂಟಿಗೈಲಿ ಊರು ಸೇರಿದ ಪ್ರಸಂಗದಿಂದಾಗಿ ಬೇಸತ್ತ ಅನೇಕ ಪ್ರಸಂಗಗಳಿವೆ.
ಈಗಿರುವಾಗ ಒಮ್ಮೆ ಇದೇ ಗರ್ವಭಂಗ ನಾಟಕದಲ್ಲಿ ನಟಿ ಲಕ್ಷ್ಮೀ ಸತ್ಯಭಾಮೆಯಾಗಿ, ಗೌಡರು ಕೃಷ್ಣನಾಗಿ ಅಭಿನಯಿಸಿದಾಗ ಸತ್ಯಭಾಮೆ ಕೃಷ್ಣನ ಎದೆಗೊದೆಯುವ ಸನ್ನಿವೇಶವನ್ನು ನೋಡಿದ ಗೌಡರ ಅಜ್ಜಿ ಕೋಪಗೊಂಡು ಮರುದಿನ ಔತಣಕ್ಕೆ ಬಂದ ನಟಿಗೆ ' ನಮ್ಮನೆ ಅನ್ನ ತಿಂದು ನಮ್ಮ ಹುಡುಗನಿಗೆ ಒದಿತಿಯೇನು' ಎಂದು ಹೊಡೆಯಲು ಹೋದಾಗ ಗೌಡರೇ ತಡೆದಿದ್ದರು.ಇಂತಹ ಅನೇಕ ಪ್ರಸಂಗವನ್ನು ಗೌಡರು ತಮ್ಮ ಆತ್ಮ ಚರಿತ್ರೆ ನಂದೇ ನಾನೋದಿದೆ ಪುಸ್ತಕದಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ಕನ್ನಡ ರಂಗಭೂಮಿಯಲ್ಲಿ ಹೆಸರು ಪಡೆದ ಬಳ್ಳಾರಿ ರಂಗಭೂಮಿ ಶಿಖರ ರಾಘವರು ಹೀಗೆ ಒಮ್ಮೆ ಗೌಡರ ಅಭಿನಯ ನೋಡಿ ,ಅವರ ಪ್ರತಿಭೆಗೆ ಮಾರುಹೋಗಿ ಅವರನ್ನು " Ballari Art Lovers league " ಗೆ ಸೇರಿಸಿಕೊಂಡರು. ಅಲ್ಲಿಂದ ಇರ್ವರು ಜೋಡಿಯಾಗಿ ನಾಟಕಗಳನ್ನು ಮಾಡಿದರು. ಈ ಜೋಡಿಯ ಮೊದಲ ನಾಟಕವೇ ' ಮಾರ್ಕಾಂಡೇಯ . ಗೌಡರಿಗೆ ಎತ್ತರದ ಧ್ವನಿಯಲ್ಲಿ ಸುಶ್ರವ್ಯವಾಗಿ ಹಾಡುವ ಕಲೆ ಗೊತ್ತಿದ್ದರಿಂದ ಇದರಲ್ಲಿ ನಾರದನ ಪಾತ್ರಕ್ಕೆ ಆಯ್ಕೆಯಾಗಿ ಅದ್ಭುತ ಪ್ರದರ್ಶನ ತೋರಿದ್ದರು. ನಂತರ ರಾಮದಾಸ ಮತ್ತು ಕನಕದಾಸ ನಾಟಕಗಳಲ್ಲಿ ಅಮೋಘವಾಗಿ ಅಭಿನಯಿಸಿ ಪ್ರೇಕ್ಷಕರಿಂದಲ್ಲದೇ ಗುರು ರಾಘವರಿಂದಲೂ ಮೆಚ್ಚುಗೆ ಪಡೆದಿದ್ದರು. ಆದರೆ 1946 ರ ಆಗಸ್ಟ್ ನಲ್ಲಿ ರಾಘವರ ಮರಣದಿಂದಾಗಿ ಗೌಡರು ತುಂಬಲಾರದ ನಷ್ಟ ಅನುಭವಿಸಿದರು.
ಕಾಲಕಳೆದಂತೆ ಗೌಡರು ತುಕರಾಮ್,ಕನಕದಾಸ,ಕ್ರಾಂತಿಪುರುಷ ಬಸವಣ್ಣ,ಮಾಯಾ ಪ್ರಭಾವ,ಶಿವನಾಣೆ,ಜಾಗೃತಿ, ನೋಡೋರ ನಾಟಕ,ಅಭಯ,ಬಗೆಹರಿಯದ ಪ್ರಶ್ನೆ,ಸಾಯಾದವನ ಸಮಾಧಿ ಮುಂತಾದ ನಾಟಕಗಳನ್ನು ಸ್ವತಃ ಬರೆದು ಅಭಿನಯಿಸಿ,ನಿರ್ದೇಶನ ಮಾಡಿ ಜನಮನ್ನಣೆ ಪಡೆದಿದ್ದರು.
ಸಿನಿಮಾ ರಂಗದ ವೇಗವನ್ನು ಕಂಡು ಅದಕ್ಕೆ ಎದುರಾಗಿ ಮತ್ತು ಜೊತೆಯಾಗಿ ಸ್ಪರ್ಧಿಸಲೋಗಿ ಕೈಸುಟ್ಟಕೊಂಡಿದ್ದರು.ಆದರೆ ಗಮಕದಲ್ಲಿ, ಸಾಹಿತ್ಯದಲ್ಲಿ ಶರವೇಗದಲ್ಲಿ ಮುನ್ನುಗ್ಗಿ ನಡೆದರು.
ಇವರ ಅನನ್ಯ ಸೇವೆಯನ್ನು ಕಂಡ ಸರ್ಕಾರ,ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿವೆ.
ಅವುಗಳಲ್ಲಿ ಕೆಲವು :
1. ಬಳ್ಳಾರಿ ವೀರಶೈವ ಕಾಲೇಜಿನಿಂದ ' ಗಮಕ ಕಲಾ ಪ್ರವೀಣ ' ಬಿರುದು.
2.ಧಾರವಾಡ ಮುರುಘಾ ಮಠದಿಂದ ' ಗಮಕ ಕಲಾನಿಧಿ ' ಬಿರುದು.
3.ಗದುಗಿನ ತೋಂಟದಾರ್ಯ ಮಠದಿಂದ ' ಗಮಕ ಗಂಧರ್ವ ' ಬಿರುದು.
4.ಆಂಧ್ರ ಕಳಾ ಪರಿಷತ್ತಿನಿಂದ ' ವಿಜಯಪತ್ರ ' ಗಳಿಕೆ.
5.ಕರ್ನಾಟಕ ಸಂಗೀತ ನಾಟಕ ಅಕಾಡೆಮಿಯಿಂದ ' ರಾಜ್ಯ ಪ್ರಶಸ್ತಿ '.
6.1989ರಲ್ಲಿ ' ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ '.
7.ಗುಲ್ಬರ್ಗ ವಿ.ವಿಯಿಂದ ' ಗೌರವ ಡಾಕ್ಟರೇಟ್'.
ಇದಲ್ಲದೇ ಬಳ್ಳಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ರಂಗ ಕಲಾವಿದರನ್ನು ಒಗ್ಗೂಡಿಸಿ 02.09.1948 ರಂದು " ಬಳ್ಳಾರಿ ಜಿಲ್ಲಾ ಕನ್ನಡ ನಾಟಕ ಪರಿಷತ್ತು " ಸ್ಥಾಪಿಸಿ, ಜೋಳದರಾಶಿ,ಬಳ್ಳಾರಿ ಮತ್ತು ಆಂಧ್ರದ ಕಣೇಕಲ್ಲಿನಲ್ಲಿ ಕ್ರಮವಾಗಿ ಮೂರು ರಂಗ ಸಮ್ಮೇಳನ ಮಾಡಿದರು. ಅಲ್ಲದೇ ಮೂರು ಸಮ್ಮೇಳನಕ್ಕೆ ಗರುಡ ಸದಾಶಿವರಾಯರು,ಆರ್.ನಾಗೇಂದ್ರರಾಯರು ಮತ್ತು ಅ.ನ.ಕೃಷ್ಣರಾಯರು ಕ್ರಮವಾಗಿ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೇ ' ಗೌಡರೇ! ನನ್ನ ನಂತರ ನೀವೆ ' ಎಂದು ಭಾವೋದ್ವೇಗದಿಂದ ಅಪ್ಪಿಕೊಂಡು ಇಹಲೋಕ ತ್ಯಜಿಸಿದ ರಾಘವರ ನೆನಪಲ್ಲಿ ರಂಗ ಮಂದಿರ ಕಟ್ಟಬೇಕೆಂದು ಹೋರಾಟ ಮಾಡಿ 13.12.1949 ರಂದು ಅಂದಿನ ಕಂದಾಯ ಮಂತ್ರಿ ಸೀತಾರಾಮರೆಡ್ಡಿಯವರಿಂದ ಶಂಕುಸ್ಥಾಪನೆಯಾಯಿತು.ಆದರೆ ಅನೇಕ ಅಡೆತಡೆಗಳನ್ನು ಮೆಟ್ಟಿನಿಂತು 16.02.1964 ರಂದು ಲೋಕಾರ್ಪಣೆಗೊಂಡ ಕತೆ ನಿಜಕ್ಕೂ ಶ್ಲಾಘನೀಯ.ನಂತರ ಇದ್ದೂರಲ್ಲೇ ಸ್ವಂತ ಖರ್ಚಿನಲ್ಲಿ ಗೌಡರು 12.12.1953 ರಂದು ' ಶ್ರೀ ರಾಮೇಶ ಕಲಾ ಮಂದಿರ ಸ್ಥಾಪಿಸಿ ವೈ.ಮಹಾಬಲೇಶ್ವರಪ್ಪ ಮತ್ತು ವೈ.ನಾಗೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಉದ್ಘಾಟಿಸಿದರು.
ಕೇವಲ ಹಣ,ಅಂತಸ್ತು ಮತ್ತು ಪರರ ಸಹಕಾರದಿಂದ ಬೆಳೆದು ನಿಲ್ಲುವ ಮನುಜರ ನಡುವೆ ಅಷ್ಟೈಶ್ವರ್ಯವಿದ್ದರು ಕೇವಲ ಸ್ವಜ್ಞಾನದಿಂದ ಕನ್ನಡ ರಂಗಭೂಮಿ ಇತಿಹಾಸದಲ್ಲಿ ಬೆಳೆದು, ಅಗಣಿತ ತಾರೆಯಾಗಿ ಬೆಳಗಿದ ಗೌಡರು ಇಡೀ ರಂಗಕುಲಕ್ಕೆ ಮಾದರಿಯಾಗಿ ದಿನಾಂಕ 10.05.1994 ರಲ್ಲಿ ನಾಟಕದಾಟ ಮುಗಿಸಿ ಪರಲೋಕ ಪಯಣ ಬೆಳೆಸಿದರು.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಾಹಿತಿ/ಬರಹಗಾರರು
9379857775
manjuamazing7@gmail.com

Comments
Post a Comment