ರಂಗ ಮಾಲಿಕೆ - ೧೮ ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿ.
ಬಣ್ಣದ ಬದುಕು
ರಂಗ ಮಾಲಿಕೆ - ೧೮
ರಂಗ ಮಾಂತ್ರಿಕ ' ಮದಿರೆ ಮರಿಸ್ವಾಮಿ'
ನಟನೆ ಮತ್ತು ಸಂಗೀತ ಒಂದು ನಾಣ್ಯದ ಎರಡು ಮುಖಗಳ ಹಾಗೆ ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.ಎಷ್ಟೋ ಗಾಯಕರು ನಟರಾಗಿದ್ದಾರೆ,ಎಷ್ಟೋ ನಟರು ಗಾಯಕರಾಗಿದ್ದಾರೆ.ಇನ್ನೂ ಕೆಲವರು ನಟನೆ ಮತ್ತು ಗಾಯನದಲ್ಲಿ ಮೇರು ಪ್ರತಿಭಾಶಾಲಿಗಳಾಗಿರುವುದನ್ನು ರಂಗಭೂಮಿಯಲ್ಲಿ ಕಾಣಬಹುದು.ಇನ್ನು ನಮ್ಮ ಬಳ್ಳಾರಿ ರಂಗಭೂಮಿಗೆ ಅನ್ವಯಿಸಿದರೆ ಇಲ್ಲಿ ಅವಳಿ ಕಲಾವಿದರ ದಂಡೆ ಇದೆ.ಅದಕ್ಕೊಂದು ನಿದರ್ಶನವೆಂದರೆ ಸಿರಿಗೇರಿ ನಾಗನಗೌಡರು ಮತ್ತು ಮದಿರೆ ಮರಿಸ್ವಾಮಿ. ಇವರು ಕೇವಲ ಸ್ನೇಹಿತರಷ್ಟೇ ಅಲ್ಲ ಎರಡು ರಾಜ್ಯಗಳ ಬಾಂಧವ್ಯದ ಪ್ರತೀಕವಾಗಿದ್ದರು.ಇವರಿರ್ವರ ಕಲಾ ನೈಪುಣ್ಯತೆ ಇಡೀ ದಕ್ಷಿಣ ಭಾರತದ ಉದ್ದಗಲಕ್ಕೂ ಪಸರಿಸಿತ್ತೆಂದರು ತಪ್ಪಾಗಲಾರದು.ಈ ಇಬ್ಬರು ಕಲಾವಿದರಲ್ಲಿ ನಾವಿಂದು ರಂಗ ಮಾಂತ್ರಿಕ ಮದಿರೆ ಮರಿಸ್ವಾಮಿಯವರ ಕುರಿತಾಗಿ ತಿಳಿಯೋಣ.
ಇವರು ಕ್ರಿ.ಶ.09.11.1940 ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲ್ಲೂಕಿನ ಮದಿರೆ ಗ್ರಾಮದಲ್ಲಿ ವೀರಯ್ಯ ಮತ್ತು ನೀಲಮ್ಮರ ಮಗನಾಗಿ ಜನಿಸಿದರು. ಸಂಗೀತದ ಪ್ರಾಥಮಿಕ ಜ್ಞಾನದ ಅರಿವು ತಂದೆ ವೀರಯ್ಯರ ಮಾರ್ಗದರ್ಶನದಲ್ಲಿ ದೊರೆಯಿತು. ಕಾರಣ ತಂದೆಯು ಸಹ ಬಯಲಾಟದ ಪಿಟೀಲು ವಾದಕರಾಗಿದ್ದರು.
ವೀರಯ್ಯನವರು ತಮ್ಮ ಕಲೆಯ ಬೆಳವಣಿಗೆಯನ್ನು ಮಗನಲ್ಲಿ ಕಾಣಬೇಕೆಂಬ ಹೆಬ್ಬಯಕೆಯಿಂದ ಸದಾ ಮಗನ ಕಲೆಯ ಬಗೆಗಿನ ವಿಶೇಷ ಕಾಳಜಿ ಹೊಂದಿದ್ದರು.ಅದಕ್ಕೆ ಇಂಬು ನೀಡಿದಂತೆ ಒಮ್ಮೆ ಸ್ವಾಮಿಯವರು ತಮ್ಮ ೧೧ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಅಭಿನಯಿಸಿದ ' ಶಶಿರೇಖಾ ಪರಿಣಯ' ಎಂಬ ಬಯಲಾಟದಲ್ಲಿ ' ಮುರುಳಿಗಾನವಿಲೋಲಾ ಮಾಧವ' ಎಂದು ನಾರದನ ಪಾತ್ರದಲ್ಲಿ ಹಾಡುತ್ತಾ ಬಂದು, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಗಳಿಂದ ಪ್ರಶಂಸೆ ಮತ್ತು ಶಿಷ್ಯತ್ವ ಗಳಿಸಿದ್ದರು.
೧೯೫೧ ರಲ್ಲಿ ವೀರೇಶ್ವರ ಪುಣ್ಯಾಶ್ರಮ ಸೇರಿದ ಸ್ವಾಮಿಯವರು ಅಜ್ಜರಿಂದಲೇ ಹಾರ್ಮೋನಿಯಂ ಪ್ರಾಥಮಿಕ ಅಭ್ಯಾಸವನ್ನು ಅತಿ ಚುರುಕಾಗಿ ಕಲಿತು , ಆಶ್ರಮದ ಹಿರಿಯ ವಿದ್ಯಾರ್ಥಿಗಳಾಗಿದ್ದ ದೊಡ್ಡ ಬಸವಾರ್ಯ ಮಲ್ಕಾಪುರ ಹಾಗೂ ಸೋಮನಾಥ ಮರಡೂರರಿಂದ ಹಾರ್ಮೋನಿಯಂ ವಾದನದ ಅನೇಕ ಸುಳಿವುಗಳನ್ನು ತಿಳಿದುಕೊಂಡರು.ಸುಮಾರು ಆರು ವರ್ಷಗಳ ಕಾಲ ಸುಧೀರ್ಘ,ಶಿಸ್ತುಬದ್ಧವಾದ ಅಭ್ಯಾಸ ಮಾಡಿ ನಂತರ ಅಜ್ಜರಿಂದಲೇ ಕೇವಲ ೧೭ನೇ ವಯಸ್ಸಿಗೆ ಶ್ರೀ ಕುಮಾರೇಶ್ವರ ನಾಟಕ ಸಂಘಕ್ಕೆ ಹಾರ್ಮೋನಿಯಂ ಮೇಷ್ಟ್ರಾಗಿ ಆಯ್ಕೆಗೊಂಡಿದ್ದಲ್ಲದೇ ಆಗಿನ ಕಾಲಕ್ಕೆ ೧ ರೂಪಾಯಿಯ ಸಂಭಾವನೆ ಪಡೆದರು. ೩ ವರ್ಷಗಳ ಕಾಲ ಸಂಘಕ್ಕೆ ದುಡಿದು ನಂತರ ನರೆಗಲ್ ರ ನಾಟಕ ಕಂಪನಿ ಇದಾದ ನಂತರ ಸುಳ್ಳದ ದೇಸಾಯಿಯವರ ನಾಟಕ ಕಂಪನಿ ಸೇರಿ ತಮ್ಮ ಸಂಗಮೇಶ್ವರ ಹೊನ್ನಿಗನೂರರಂತಹ ಅನೇಕ ಹಿರಿಯ ಸಹವರ್ತಿಗಳ ಮಾರ್ಗದರ್ಶನದಲ್ಲಿ ರಂಗ ಸಂಗೀತ ತಜ್ಞರಾಗಿ ರೂಪುಗೊಂಡರು.
ದೇಶದ ಕೆಲವು ಶ್ರೇಷ್ಠ ಹಾರ್ಮೋನಿಯಂ ವಾದಕರಲ್ಲಿ ಮರಿಸ್ವಾಮಿಯವರು ಒಬ್ಬರೆಂದರು ಅತಿಶಯೋಕ್ತಿಯಲ್ಲ.ಏಕೆಂದರೆ ಇವರು ಹಾರ್ಮೋನಿಯಂಯನ್ನು ತುಂಬಾ ಸರಾಗವಾಗಿ ತಲೆ,ಎದೆ,ತೊಡೆ ಮೇಲಿಟ್ಟು ಹೀಗೆ ವಿವಿಧ ಭಂಗಿಯಲ್ಲಿ ಹಾಗೂ ಕೇವಲ ಒಂದೇ ಬೆರಳಿನಿಂದ ಹಾರ್ಮೋನಿಯಂ ನುಡಿಸುವ ಪ್ರತಿಭಾವಂತರು.ತಮ್ಮ ಅದ್ಭುತ ವಾದನದ ಮೂಲಕ ಸಹವರ್ತಿಗಳನ್ನು ಉತ್ತೇಜಿಸಿ ರಂಗದ ತುಂಬಾ ರಂಜನೆ ತುಂಬುತ್ತಿದ್ದರು.ಪೇಟಿ ಎಂದ ಕೂಡಲೇ ಮದಿರೆ ಮರಿಸ್ವಾಮಿ ನೆನಪಾಗುವಂತಹ ಪ್ರಸಿದ್ಧಯನ್ನು ಈ ಭಾಗದ ತುಂಬೆಲ್ಲಾ ಗಳಿಸಿದ್ದಾರೆ.ದೃಶ್ಯದಿಂದ ದೃಶ್ಯಗಳ ಅಂತರ ಕುಗ್ಗಿಸಲೋಸುಗ ಹಾರ್ಮೋನಿಯಂ ನುಡಿಸಿದಾಗಲೆಲ್ಲಾ ಅನೇಕ ಪ್ರೇಕ್ಷಕರು ಹಾರ್ಮೋನಿಯಂ ನಾದದಲ್ಲೇ ನಾಟಕವನ್ನು ಕಳೆದುಕೊಂಡು ತಲ್ಲೀನರಾಗುತ್ತಿದ್ದರು.ಕೇವಲ ಹಾರ್ಮೋನಿಯಂ ವಾದಕರಾಗಿದ್ದ ಸ್ವಾಮಿಯವರು ಕ್ರಮೇಣವಾಗಿ ಹಾರ್ಮೋನಿಯಂ ಮೇಷ್ಟಾಗಿ,ಸಂಗೀತ ನಿರ್ದೇಶಕರಾಗಿ,ರಂಗ ನಟರಾಗಿ ಹಾಗೂ ನಾಟಕ ಕಂಪನಿಯ ಮಾಲೀಕರಾಗಿ ,ಹವ್ಯಾಸಿ ನಾಟಕಗಳ ನಿರ್ದೇಶಕ ಕೈ ಹಾಕಿ ಎಲ್ಲ ಹಂತದಲ್ಲೂ ಸೈ ಎನಿಸಿಕೊಂಡರು.
ರಂಗಭೂಮಿಯ ನಾಗಾಲೋಟದಲ್ಲಿದ್ದ ಸ್ವಾಮಿಯವರರಿಗೆ ಸಿರಿಗೇರಿ ನಾಗನಗೌಡರ ಸಾಂಗತ್ಯ ದೊರೆಯುತ್ತದೆ. ಅಲ್ಲಿಂದ ಈ ಜೋಡಿಯ ಪಯಣ ಯಾರು ಮುಟ್ಟಲಾಗದ ಉತ್ತುಂಗದತ್ತ ತಲುಪಿತು.ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಯಲ್ಲೂ ಹಾಗೂ ಕರ್ನೂಲ್, ಮೆಹಬೂಬ್ ನಗರ,ಅನಂತಪುರ, ಗೋವಾ,ಕೇರಳ ,ಮಹಾರಾಷ್ಟ್ರ ಹಾಗೂ ದೆಹಲಿಯಂತಹ ದೊಡ್ಡ ನಗರಗಳಲ್ಲಿ ಇರ್ವರ ಹಾರ್ಮೋನಿಯಂ ಜುಗಲ್ಬಂದಿಯಿಂದ ಮನೆಮಾತಾಗಿದ್ದಾರೆ.ನಂತರ ಇರ್ವರ ನೇತೃತ್ವದಲ್ಲಿ ೧೯೭೬ರಲ್ಲಿ
"ಶ್ರೀ ಮಧುಕೇಶ್ವರ ನಾಟ್ಯ ಕಲಾ ಸಂಘ" ವನ್ನು ಕಟ್ಟಿ ಪೌರಾಣಿಕ ನಾಟಕಗಳಾದ ಚಿತ್ರಾಂಗದ,ರಕ್ತರಾತ್ರಿ,ಭಕ್ತ ಸುಧನ್ವ ಹಾಗೂ ಸಾಮಾಜಿಕ ನಾಟಕಗಳಾದ ಅಣ್ಣ ತಂಗಿ,ಗೌರಿ ಗೆದ್ದಳು,ಹೆಜ್ಜೆ ತಪ್ಪಿದ ಹೆಣ್ಣು,ದಾರಿ ದೀಪ,ತಾಯಿಯಿಲ್ಲದೆ ತಾಯಿಯಾದೆ ಮತ್ತಿತರೆ ನಾಟಕಗಳು ಹೊತ್ತು ಇಡೀ ದಕ್ಷಿಣ ಭಾರತದಾದ್ಯಂತ ಸಂಚಿರಿಸಿ ಹೆಸರಾದರು.ಹಾಗೆ ಇವರೊಂದಿಗೆ ಅದವಾನಿ ಶಂಕ್ರಣ್ಣ,ಬಳ್ಳಾರಿ ಲೋಕಾಭಿರಾಮ,ಸಿಡಿಗಿನ ಮಳೆ ತಿಮ್ಮಪ್ಪ,ಗುಲ್ಬರ್ಗದ ಶಾಂತಲಿಂಗ ದೇಸಾಯಿಯವರು ತಬಲ ಸಾಥಿಯಲ್ಲಿ ಪ್ರಸಿದ್ಧರಾಗಿದ್ದಾರೆ.
ಸ್ವಾಮಿಯವರು ಅದವಾನಿ ಲಕ್ಷ್ಮೀ, ಎಲಿವಾಳ ಸಿದ್ದಯ್ಯ, ಸಿಡಿಗಿನಮೊಳೆ ಚಂದ್ರಯ್ಯ,ಮರಿಯಮ್ಮನಹಳ್ಳಿ ದುರ್ಗಾದಾಸ್, ರಕ್ಕಸಿಗಿ ಶಂಕ್ರಯ್ಯ,ಮೈಸೂರು ಸುಮತಿ,ಸುಭದ್ರಮ್ಮ ಮನ್ಸೂರ್,ರಂಗವೇಣಿ ಹಳೇಬೀಡು, ಪ್ರಮೀಳಾ ಗುಡೂರು,ವನಮಾಲ,ಭವಾನಿ,ಬೀರಳ್ಳಿ ರಾಮಿರೆಡ್ಡಿ ಹೀಗೆ ಹತ್ತು ಹಲವು ಕಲಾವಿದರಿಗೆ ಮಾರ್ಗದರ್ಶಿ ಗುರುವಾಗಿದ್ದಾರೆ.
ಸ್ವಾಮಿಯವರ ಕಲಾ ನೈಪುಣ್ಯತೆಯನ್ನು ಗುರುತಿಸಿ 'ಕಲಾ ಜ್ಯೋತಿ','ಸ್ವರ ಸಾನಿದ್ಯ',' ಹಾರ್ಮೋನಿಯಂ ಮಾಂತ್ರಿಕ','ರಂಗ ಸಂಗೀತ ಬ್ರಹ್ಮ', ಕರ್ನಾಟಕ ಸರ್ಕಾರದಿಂದ ಕರ್ನಾಟಕ ನಾಟಕ ಅಕಾಡೆಮಿ ,'ಗುಬ್ಬಿ ವೀರಣ್ಣ ' ಹಾಗೂ ಅನೇಕ ಸಂಘಟನೆಯ ಸಂಸ್ಥೆಗಳಿಂದ ಬಿರುದು ಸನ್ಮಾನಗಳು ಇವರನ್ನರಸಿ ಬಂದಿವೆ.
ಇಂದಿಗೂ ಆಂಧ್ರದ ಆದೋನಿಯ ಪಕ್ಕದ ಹಳ್ಳಿ ಮದಿರೆಯಲ್ಲಿ ಸದ್ಧಿಲ್ಲದೆ ರಂಗ ಕಾಯಕ ಮಾಡುತ್ತಿರುವ ೮೫ ರ ಹರೆಯ ಮರಿಸ್ವಾಮಿಯವರಿಗೆ, ೬ ಜನ ತಬಲಾಜಿಗಳೊಂದಿಗೆ ಗಂಟೆಗೆ ಒಮ್ಮೆ ವಿರಾಮ ತೆಗೆದುಕೊಂಡು ೨೪ ಗಂಟೆ ಹಾರ್ಮೋನಿಯಂ ನುಡಿಸುವ ಆಗಾಧ ಕನಸನ್ನು ಹೊತ್ತು ಸಾಧಿಸಲು ತವಕಿಸುತ್ತಿದ್ದಾರೆ.ಈ ನಿಟ್ಟಿನಲ್ಲಿ ನಾವು ನೀವು ಅವರೊಡನೆ ಅಣಿಯಾಗಿ ಅವರ ಕನಸನ್ನು ನನಸಾಗಿಸುವತ್ತ ಸಾಗೋಣ ಎಂಬುದು ಈ ಲೇಖನದ ಆಶಯ.
ಲೇಖನ
ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ
ಸಾಹಿತಿ / ಬರಹಗಾರರು
9379857775
manjuamazing7@gmail.com

Comments
Post a Comment