ಯುಗಾದಿ ನಮ್ಮತನದ ಸಂಕೇತ - ಆರ್.ಪಿ.ಈಶಪ್ಪ

 

ಯುಗಾದಿ ಎಂದರೆ ಕೇವಲ ಹಬ್ಬದ ಆಚರಣೆಯಲ್ಲ..! ನಮ್ಮತನದ ಸಂಕೇತ.


"ಯುಗ ಯುಗಾದಿ ಕಳೆದರು

 ಯುಗಾದಿ ಮರಳಿ ಬರುತ್ತಿದೆ

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.."

ಈ ಹಾಡು ಕೇಳಿದ ಕೂಡಲೇ ಒಂದು ಬೇಂದ್ರೆಯಜ್ಜ ನೆನಪಾಗ್ತಾರೆ ಇನ್ನೊಂದು ಯುಗಾದಿ ಹಬ್ಬ ನೆನಪಾಗುತ್ತೆ. ಇಷ್ಟು ವರ್ಷ ನಾನಂತೂ ಯುಗಾದಿ ಹಬ್ಬದ ಇತಿಹಾಸ ತಿಳಿಯುವಲ್ಲಿ ಅರೆಬೆಂದ ಮಡಕೆಯಾಗಿದ್ದೇ. ಆದರೆ ಈ ನಮ್ಮ ಕನ್ನಡ ನಾಡು ಪತ್ರಿಕೆಗೆ ಲೇಖನ ಬರೆಯುವ ಅವಕಾಶ ದೊರಕಿದ್ದರಿಂದ ಯುಗಾದಿಯ ಇತಿಹಾಸ ಅರಿಯವಂತಾಯಿತು.ನಾನರಿತದ್ದನ್ನು ನಿಮ್ಮ ಮುಂದೆ ಅರಹುವ ಸಣ್ಣ ಪ್ರಯತ್ನವೇ ಈ ಲೇಖನ. 

ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು ಪದವೇ ಸೂಚಿಸುತ್ತದೆ.

ಈ ಹಬ್ಬದ ನಮ್ಮ ಭಾರತೀಯರಿಗೆ ಹೊಸ ವರ್ಷವಾಗಿದೆ.ಆದರೆ ಈ ಸವಿಯನ್ನು ಪರದೇಶಿ ಜನವರಿಯಂದೇ ಪಡೆಯುತ್ತೇವೆ.ಈ ಹೊಸ ಸಂವತ್ಸರಕ್ಕೆ ಆರ್ಥವಿದೆ.ಹೇಗೆಂದರೆ ಎಲ್ಲವೂ ನವನವೀನ. ಹೊಸ ಚಿಗುರು, ಹೊಸ ಹುರುಪು,ಹೊಸ ಹೊಳಪು ಹೀಗೆ ಎಲ್ಲವೂ ಹೊಸತಾಗಿ ಕಾಣುವ ದಿನ.ಆದರೆ ನಾವು ನೀವು ಆಚರಿಸುವ ಹೊಸವರ್ಷ ಕೇವಲ ಮೋಜು ಮಸ್ತಿಯ ಸಂಕೇತ ಎಂದರೂ ತಪ್ಪಾಗಲಿಕ್ಕಿಲ್ಲ.

ನಮ್ಮ ದೇಶಿಯರಲ್ಲಿ ಈ ಹಬ್ಬದ ಕುರಿತಾದ ಅನೇಕ ಮಾಹಿತಿಗಳಿವೆ.ಅವುಗಳನ್ನು ಮೊದಲು ಅರಿಯೋಣ..

 ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ - ಅಂದರೆ ಮೇಷ ರಾಶಿಯ ೦ - ೧೩:೨೦ ಭಾಗ (ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು.ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ.ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.

ಇಷ್ಟೇ ಅಲ್ಲ. ನಮ್ಮ ಭಾರತ ಭಾವೈಕ್ಯತೆ ಪ್ರತೀಕವಾದ ದೇಶವಾಗಿದೆ.ಅಂತೆಯೇ ಇಲ್ಲಿನ ವೇಷ,ಭಾಷೆ,ಧರ್ಮ ಎಲ್ಲವೂ ವೈವಿಧ್ಯಮಯವಾಗಿವೆ.ಅಲ್ಲದೇ ಹಬ್ಬಗಳ ಆಚರಣೆಯೂ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ.ಆ ನಿಟ್ಟಿನಲ್ಲಿ ಈ ಯುಗಾದಿ ನೈಜ ಚಿತ್ರಣ ಇಲ್ಲಿದೆ.

ಈ ಹಬ್ಬವನ್ನು ಹೆಚ್ಚಾಗಿ ಕರ್ನಾಟಕ ,ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಾಡ್ವ - ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ 'ಗುಡಿ' ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು. ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು.ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಖಣಿ ಇಡುವುದು : ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇತ್ತು, ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ವನ್ನು ಇಟ್ಟು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಚಿತ್ರಾನ್ನದೂಟ, ದೇಗುಲಕ್ಕೆ ಹಾಗೂ ಹಿರಿಯರ ಭೇಟಿ, ಪಂಚಾಂಗ ಶ್ರವಣ.ಇಷ್ಟೆಲ್ಲಾ ಆಚಾರಗಳು ಕೇವಲ ತೋರಿಕೆಗಲ್ಲ.ಬದಲಾಗಿ ನಮ್ಮ ನಿಮ್ಮೆಲ್ಲರ ಒಳಿತಿಗಾಗಿ.ಆದರೆ ಇಷ್ಟೆಲ್ಲ ವೈವಿಧ್ಯಪೂರ್ಣವಾದ ಆಚರಣೆ ಪರದೇಶಿ ಹೊಸವರ್ಷದ ಹರುಷದಲ್ಲಿ ಎಳ್ಳಷ್ಟು ಕಾಣ ಸಿಗುವುದಿಲ್ಲ.

 ನಮ್ಮ ದೇಶದಲ್ಲಿ ಹಬ್ಬಗಳನ್ನು ಮಾಡಿರುವುದು ಕೇವಲ ಭಕ್ತಿ ಪರವಶವನ್ನು ಮೆರೆಯುವುದಕ್ಕಲ್ಲ.ಹಳೆಯ ಕಹಿ ನೆನಪುಗಳನ್ನು ಮರೆತು ಸಿಹಿ ತಿನಿಸುಗಳ ಜೊತೆಗೆ ಬಾಂಧವ್ಯದಲಿ ಬೆರೆಯುವುದಕ್ಕೆ. ನಮ್ಮ ದೇಶ ಹಳ್ಳಿಗಳ ಮತ್ತು ಬಹುತೇಕ ಕಾಯಕ ಜೀವಿಗಳ ನಾಡು.ಪ್ರತಿ ನಿತ್ಯ ಕೃಷಿ,ಕೈಗಾರಿಕೆ ಮತ್ತಿತರೆ ಕ್ಷೇತ್ರಗಳ ದುಡಿಮೆಯಲ್ಲಿ ನಿರತರಾಗಿ ದೇಹದ ಆರೋಗ್ಯ ಮರೆತಿದ್ದರು. ಈ ನಿಟ್ಟಿನಲ್ಲಿ ದೇಹದ  ಆಹಾರದಲ್ಲಿ ಸಮತೋಲನ ಕಾಣುವ ಉದ್ದೇಶದಿಂದ ಹಬ್ಬಗಳ ನೆಪದಲ್ಲಾದರೂ ಬಗೆಬಗೆ ಭಕ್ಷ್ಯಗಳನ್ನು ತಿನ್ನಲೆಂದು ಮಾಡಲಾಗಿದೇಯೋ ಎನ್ನಿಸುತ್ತದೆ.ಕೇವಲ ಯುಗಾದಿ ಹಬ್ಬದ ತಿನಿಸುಗಳ ವಿಚಾರಕ್ಕೆ ಬಂದರೆ ಆ ದಿನ ಒಬ್ಬಟ್ಟು ಅಥವಾ ಹೋಳಿಗೆಯ ವಾಸನೆ ಮನೆ ಮನೆಯ ಮೂಲೆಗೆ ಅವರಿಸಿರುತ್ತದೆ.ಇದನ್ನು ತೆಂಗಿನಕಾಯಿ ಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಕಡಲೆ ಅಥವಾ ತೊಗರೀ ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣ ಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು. ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನ ಮಾಡುವುದು. 

ಯುಗಾದಿಯ ಕುರಿತಾದ ಇಷ್ಟೇಲ್ಲ ಸತ್ಯಾಸತ್ಯತೆ ಗೊತ್ತಿದ್ದು ಗೊತ್ತಿಲ್ಲದೆ ಪರದೇಶಿಯರ ಅಂಧಾಚರಣೆಯಲ್ಲಿ ತಲ್ಲೀನರಾಗಿದ್ದೇವೆ.ಬನ್ನಿ ಇನ್ನಾದರೂ ನಾವು ನೀವು  ಹೊಸ ಉಡುಗೆ ತೊಟ್ಟು ,ನಗು ಮೊಗದಿ ,ನವೋಲ್ಲಾಸದಿ Happy Ugadi , Happy New Year ಎನ್ನುವ ಮೂಲಕ ಹೊಸ ವರ್ಷದ ಸಂಭ್ರಮವನ್ನು ಆಚರಿಸಿ ಹೊಸದೊಂದು ಪರ್ವಕ್ಕೆ ನಾಂದಿಯಾಗೋಣ.


ಲೇಖನ 

ಆರ್.ಪಿ.ಈಶಪ್ಪ 

ಕನ್ನಡ ಸ್ನಾತಕೋತ್ತರ ಪದವೀಧರ.

ಬೈರಗಾಮದಿನ್ನೆ.

ಮೊ - 7483797945

Comments

Popular posts from this blog

ರಂಗ ಮಾಲಿಕೆ -೨೪ ಗಡಿಭಾಗದ ಕನ್ನಡದ ರಂಗಕಟ್ಟಾಳು - ಬದಿನೆಹಾಳ್ ಭೀಮಣ್ಣನವರು

ರಂಗ ಮಾಲಿಕೆ -೨೧ ಆಂಧ್ರ ನಾಟಕ ಪಿತಾಮಹ ಧರ್ಮಾವರಂ ರಾಮಕೃಷ್ಣಮಾಚಾರ್ಯರು

ರಂಗ ಮಾಲಿಕೆ -೩೭ ನಡೆದಾಡುತ್ತಿದ್ದ ರಕ್ತರಾತ್ರಿ 'ನಾಡಂಗ ಬಸವರಾಜ'